ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.)ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಾಧನೆಯೆಂದರೆ ಈಶ್ವರಪ್ರಾಪ್ತಿಗಾಗಿ ನಿರಂತರ ಮಾಡುವ ಪ್ರಯತ್ನ ! ಸಾಧನೆಯೆಂದರೆ ಈಶ್ವರನೊಂದಿಗೆ ಜೋಡಿಸಲ್ಪಡುವ ನಿರಂತರ ಪ್ರಕ್ರಿಯೆ ! ಅನೇಕ ಬಾರಿ ಗಮನಕ್ಕೆ ಬರುವ ವಿಷಯವೆಂದರೆ, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧನೆಯಲ್ಲಿ ಮೇಲಿಂದ ಮೇಲೆ ಬರುವ ಅಡೆತಡೆಗಳಿಂದಾಗಿ ಸಾಧಕರು ಒಂದೇ ಹಂತದಲ್ಲಿ ಸಿಲುಕಿರುತ್ತಾರೆ. ಭಗವಂತನು ನಮಗೆ ಮುಂದೆ ಹೋಗುವ ಮಾರ್ಗವನ್ನು ಆಗಾಗ ತೋರಿಸುತ್ತಿದ್ದರೂ ‘ಸಾಧನೆಯಲ್ಲಿ ಮುಂದೆ ಹೋಗಲು ನಿರ್ದಿಷ್ಟವಾಗಿ ಯಾವ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ ?’, ಎಂದು ಹೊಳೆಯುವುದಿಲ್ಲ. ಆ ಸಮಯದಲ್ಲಿ ಸಾಧಕರು ‘ಸಾಧನೆಯಲ್ಲಿ ಮುಂದೆ ಹೋಗಲು ಬಯಸಿದರೂ ನಾವು ಒಂದೇ ಹಂತದಲ್ಲಿ ಏಕೆ ಸಿಲುಕಿಕೊಂಡಿದ್ದೇವೆ ?’, ಎಂಬ ಬಗ್ಗೆ ಚಿಂತನೆ ಮಾಡಿ ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ‘ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಯಾವ ಅಡಚಣೆಗಳು ಇರಬಹುದು ? ಮತ್ತು ಆ ಅಡಚಣೆಗಳನ್ನು ದೂರ ಮಾಡಲು ಏನು ಮಾಡಬೇಕು ?’, ಈ ಬಗೆಗಿನ ಮಾರ್ಗದರ್ಶನವನ್ನು ಪ್ರತಿ ಗುರುವಾರ ನಡೆಯುವ ಭಕ್ತಿಸತ್ಸಂಗದ ಅಂತರ್ಗತ ‘ವಿಶೇಷ ಭಕ್ತಿಸತ್ಸಂಗ ಶೃಂಖಲೆಯ’ ಮೂಲಕ ಮಾಡಲಾಗುತ್ತಿದೆ. ‘ಈ ಹೊಸ ಭಕ್ತಿಸತ್ಸಂಗ ಶೃಂಖಲೆಯಿಂದ ಸಾಧಕರಿಗೆ ಮತ್ತು ವಾಚಕರಿಗೆ ಹೆಚ್ಚೆಚ್ಚು  ಲಾಭ ಆಗಬೇಕೆಂದು ಅದರಲ್ಲಿನ ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

ಈ ಲೇಖನದಲ್ಲಿ ನಾವು ಕೇಳಿ ಕೃತಿ ಮಾಡುವ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಮಾರ್ಗದರ್ಶನವನ್ನು ನೋಡಿದ್ದೇವೆ. ಇಂದಿನ ಅಂತಿಮ ಭಾಗದಲ್ಲಿ ‘ವಿಚಾರಿಸಿಕೊಳ್ಳುವ ವೃತ್ತಿ’ ಎಂಬ ಗುಣವನ್ನು ಅಂತರಂಗದಲ್ಲಿ ಬಿತ್ತಲು ಕೃತಿಯ ಸ್ತರದಲ್ಲಿ ಮಾಡಬೇಕಾದ ಪ್ರಯತ್ನಗಳ ಕುರಿತಾದ ಅಂಶಗಳನ್ನು ಇಲ್ಲಿ ನೀಡಲಾಗಿದೆ. (ಲೇಖನ ೯)

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸದ್ಯ ಕಾಲಾನುಸಾರ ಸಾಕ್ಷಾತ್ ಭಗವಂತನ ಇಚ್ಛೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರ ಕೃಪೆಯಿಂದ ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಮೂಲಕ ಸಾಧಕರಿಗೆ ಮಾರ್ಗದರ್ಶನ ಸಿಗುತ್ತಿದೆ. ಈ ಮಾರ್ಗದರ್ಶನ ಸಾಧಕರಿಗಾಗಿ ಅತ್ಯಂತ ಅಮೂಲ್ಯ ಮತ್ತು ಮಹತ್ವಪೂರ್ಣವಾಗಿದೆ. ‘ಭಕ್ತಿಸತ್ಸಂಗದ ಈ ವಿಷಯದಿಂದಾಗಿ ಎಲ್ಲೆಡೆಯ ಸಾಧಕರ ಶುದ್ಧಿಯಾಗಬೇಕು, ಹಾಗೆಯೇ ಅವರ ಅಂತಃಕರಣದಲ್ಲಿನ ಸ್ವಭಾವದೋಷಗಳ ಮಾಲಿನ್ಯ ನಾಶವಾಗಿ ಅವರು ಶುದ್ಧ ಮತ್ತು ಪವಿತ್ರರಾಗಬೇಕು’, ಎಂಬುದಕ್ಕಾಗಿ ಇದು ಭಕ್ತಿಯಜ್ಞವೇ ಆಗಿದೆ. ಸಾಧಕರು ಈ ಲೇಖನವನ್ನು ತಮ್ಮ ಬಳಿ ಸಂಗ್ರಹದಲ್ಲಿಟ್ಟುಕೊಳ್ಳಬೇಕು, ಹಾಗೆಯೇ ಈ ಅಂಶಗಳಿಗನುಸಾರ ತಳಮಳದಿಂದ ಪ್ರಯತ್ನಿಸಿ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅದರಿಂದ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬೇಕು !’

೧೪. ‘ವಿಚಾರಿಸಿಕೊಳ್ಳುವ ವೃತ್ತಿ’ಯ ಗುಣವನ್ನು ಅಂತರಂಗದಲ್ಲಿ ಬಿತ್ತಲು ಕೃತಿಯ ಸ್ತರದಲ್ಲಿ ಮಾಡಬೇಕಾದ ಪ್ರಯತ್ನಗಳು !

‘ವಿಚಾರಿಸದೇ ಮಾಡುವ’ ಸ್ವಭಾವದೋಷವು ತೀವ್ರವಾಗಿದ್ದರೆ, ಶ್ರೀ ಗುರುಗಳು ಶೀಘ್ರ ಬದಲಾವಣೆಗಾಗಿ ನೀಡಿದ ವ್ಯಷ್ಟಿ ಪ್ರಯತ್ನದ ಸುಂದರ ಮಾಧ್ಯಮದ ಮೂಲಕ ಅದನ್ನು ಜಯಿಸಬೇಕು.

ಅ. ವಿಚಾರಿಸದಿರುವ ಬಗ್ಗೆ ತನ್ನಿಂದಾಗುವ ತಪ್ಪುಗಳನ್ನು ಪ್ರತಿ ದಿನ ನಿರೀಕ್ಷಿಸಬೇಕು. ಮನಸ್ಸಿನ ವಿಮರ್ಶೆ ಮಾಡುವಾಗ ‘ದಿನವಿಡೀ ಎಷ್ಟು ಕೃತಿಗಳನ್ನು ಕೇಳಿ ಮಾಡಿದೆವು ? ಎಷ್ಟು ಕೇಳದೆ ಮಾಡಿದೆವು ?’, ಎಂಬುದರ ವರದಿಯನ್ನು ತೆಗೆದುಕೊಳ್ಳಬೇಕು.

ಆ. ವಿಚಾರಿಸದ ಕಾರಣ ಆದ ತಪ್ಪುಗಳನ್ನು ನಿಮ್ಮ ಸ್ವಭಾವದೋಷ ನಿರ್ಮೂಲನಾ ತಖ್ತೆಯಲ್ಲಿ (Table) ಬರೆಯಬೇಕು. ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ವಾಸಿಸುವ ಸಾಧಕರು ಈ ಕುರಿತಾದ ತಪ್ಪುಗಳನ್ನು ಫಲಕದ ಮೇಲೆಯೂ ಬರೆಯಬೇಕು.

ಇ. ವಿಚಾರಿಸದಿರುವ ಸ್ವಭಾವದೋಷವು ತೀವ್ರವಾಗಿದ್ದರೆ, ನಿಮ್ಮ ವರದಿಸೇವಕರೊಂದಿಗೆ ಮಾತನಾಡಿ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳಬೇಕು. ನೀವು ತಯಾರಿಸಿದ ಸ್ವಯಂಸೂಚನೆಗಳನ್ನು, ವರದಿಸೇವಕರಿಂದ ಪರಿಶೀಲಿಸಿಕೊಳ್ಳಬೇಕು.

ಈ. ವಿಚಾರಿಸದ ಕಾರಣ ಆಗುವ ತಪ್ಪುಗಳು ಮತ್ತು ಆ ಬಗ್ಗೆ ಮನಸ್ಸಿನ ಪ್ರಕ್ರಿಯೆಯ ಕುರಿತು ಚಿಂತನೆ ನಡೆಸಿ ಅದನ್ನು ನಿಮ್ಮ ವ್ಯಷ್ಟಿ ಸಾಧನೆಯ ವರದಿಯಲ್ಲಿ ಮಂಡಿಸಬೇಕು ಹಾಗೂ ವರದಿ ಸೇವಕರಿಂದ ಮಾರ್ಗದರ್ಶನ ಪಡೆಯಬೇಕು.

ಉ. ಕೇಳುವ ವಿಷಯದಲ್ಲಿ ಪ್ರತಿದಿನ ಸ್ವತಃ ಅಧ್ಯಯನವಾಗಲು ಚಿಂತನ ತಖ್ತೆಯಲ್ಲಿ ಈ ಅಂಶವನ್ನು ಸೇರಿಸಬೇಕು. ‘ದಿನವಿಡೀ ಎಷ್ಟು ಕೃತಿಗಳನ್ನು ವಿಚಾರಿಸಿ ಮತ್ತು ಎಷ್ಟು ಕೃತಿಗಳನ್ನು ಕೇಳದೆ ಮಾಡಿದೆವು ?’, ಎಂದು ಸಂಖ್ಯಾತ್ಮಕವಾಗಿ ಪ್ರತಿದಿನ ಬರೆಯುವುದರಿಂದ ವಿಚಾರಿಸಿ ಕೃತಿ ಮಾಡುವ ಅರಿವು ಆಗುತ್ತದೆ.

ಈ ರೀತಿಯಾಗಿ ಕೃತಿಯ ಸ್ತರದ ಪ್ರಯತ್ನಗಳ ಮೂಲಕ ತನ್ನ ಅಂತರಂಗದಲ್ಲಿ ವಿಚಾರಿಸುವ ವೃತ್ತಿಯನ್ನು ಆಳವಾಗಿ ಬೇರೂರಿಸಲು ಭಗವಂತನಿಗೆ ಶರಣಾಗಿ ಕಳಕಳಿಯಿಂದ ಪ್ರಯತ್ನಿಸಬೇಕು. ‘ಈ ಪ್ರಯತ್ನಗಳ ಮೂಲಕ ಶ್ರೀ ಗುರುಗಳೇ ನನ್ನ ಈ ಸ್ವಭಾವದೋಷವನ್ನು ಕಡಿಮೆ ಮಾಡಲಿದ್ದಾರೆ’, ಎಂಬ ಸಂಪೂರ್ಣ ಶ್ರದ್ಧೆಯನ್ನು ಇಟ್ಟುಕೊಳ್ಳಬೇಕು.

ಪ್ರಶ್ನೆ: ಆಪತ್ಕಾಲೀನ ಪರಿಸ್ಥಿತಿಯಲ್ಲಿ ಯಾರೊಂದಿಗೆ ಸಂಪರ್ಕ ಆಗದಿರುವಾಗ / ವಿಚಾರಿಸಿಕೊಳ್ಳಲು ಯಾರೂ ಲಭ್ಯವಿಲ್ಲದಿದ್ದಾಗ ಹೇಗೆ ‘ವಿಚಾರಿಸಿಕೊಳ್ಳುವುದು’ ?

ಉತ್ತರ : ಆಪತ್ಕಾಲೀನ ಪರಿಸ್ಥಿತಿಯಲ್ಲಿ ಯಾರೊಂದಿಗೆ ಸಂಪರ್ಕ ಮಡಲು ಆಗದಿರುವಾಗ / ವಿಚಾರಿಸಿಕೊಳ್ಳಲು ಯಾರೂ ಲಭ್ಯವಿಲ್ಲದಂತಹ ಸಮಯದಲ್ಲಿ ದೇವರಲ್ಲಿ ಶರಣಾಗತ ಭಾವದಿಂದ ಪ್ರಾರ್ಥಿಸಬೇಕು. ’ಸಾಧಕನಲ್ಲಿರುವ ಶ್ರದ್ಧೆ ಮತ್ತು ಶರಣಾಗತಿಯ ಕಾರಣದಿಂದ, ಅಂತಹ ಸಮಯದಲ್ಲಿ ದೇವರೇ ಯಾರಾದರೊಬ್ಬರ ಮಾಧ್ಯಮದಿಂದ ಸಾಧಕನಿಗೆ ಸಹಾಯ ಮಾಡುತ್ತಾರೆ ಅಥವಾ ಅಂತರಂಗದಿಂದಲೇ ಯೋಗ್ಯವಾದ ವಿಚಾರವನ್ನು ಸೂಚಿಸುತ್ತಾರೆ.’ ಹಾಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿ ಅವರ ವಿಚಾರವನ್ನು ಗ್ರಹಿಸಲು ಪ್ರಯತ್ನಿಸಬೇಕು. ಆದರೆ ಯಾವಾಗ ಜವಾಬ್ದಾರ ಸಾಧಕರ ಅಥವಾ ವರದಿ ಸೇವಕರ ಸಂಪರ್ಕವಾಗುತ್ತದೆಯೋ, ಆಗ ಅವರೊಂದಿಗೆ ಮಾತನಾಡಿ ಸಂದೇಹ ನಿವಾರಣೆ ಮಾಡಿಕೊಳ್ಳಬೇಕು.

೧೫. ವಿಚಾರಿಸಿಕೊಂಡು ಕೃತಿ ಮಾಡಲು ಭಾವದ ಸ್ತರದಲ್ಲಿ ಮಾಡಬೇಕಾದ ಪ್ರಯತ್ನಗಳು !

ವಿಚಾರಿಸಿಕೊಳ್ಳುವುದೆಂದರೆ ‘ನನಗೆ ಏನೂ ಬರುವುದಿಲ್ಲ, ದೇವರೇ ನೀನೇ ಹೇಳು’, ಎಂಬ ಭಾವವಾಗಿದೆ. ವಿಚಾರಿಸಿ ಕೊಳ್ಳುವ ವೃತ್ತಿ ಇದ್ದಾಗ, ದೇವರ ಮುಂದೆ ನಮ್ಮ ಅಸಹಾಯಕತೆ ವ್ಯಕ್ತವಾಗಿ ನಾವು ‘ನನಗೆ ತಿಳಿಯುತ್ತದೆ’, ಎಂಬ ಅಹಂಕಾರವನ್ನು ಬಿಟ್ಟು ಈಶ್ವರೀ ತತ್ತ್ವಕ್ಕೆ ಶರಣಾಗಿರುತ್ತೇವೆ. ಇದರಿಂದಾಗಿ ಈಶ್ವರೀ ಕೃಪೆಯ ಹರಿವು (ಧಾರೆ) ಆರಂಭವಾಗುತ್ತದೆ.

ಅ. ವೈಯಕ್ತಿಕ ಸ್ತರದ ಕೃತಿಗಳನ್ನು (ಉದಾ. ಸ್ನಾನ) ಮಾಡುವಾಗ ಸ್ಥೂಲವಾಗಿ ಯಾರಲ್ಲಿಯೂ ವಿಚಾರಿಸುವ ಅವಶ್ಯಕತೆ ಇರುವುದಿಲ್ಲ; ಆದರೆ ಈ ಕೃತಿಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಅದನ್ನು ಸ್ವಂತ ಮನಸ್ಸಿನಿಂದ ಮಾಡದೆ ಭಗವಂತನಲ್ಲಿ ವಿಚಾರಿಸಿ ಮಾಡಬೇಕು.

ಆ. ನಮ್ಮ ಸಾಧನೆ, ಸೇವೆ ಮತ್ತು ದಿನಚರಿಯಲ್ಲಿನ ಪ್ರತಿಯೊಂದು ಕೃತಿಯ ಮೊದಲು ದೇವರನ್ನು ಮನಸ್ಸಿನಲ್ಲಿಯೇ ನೆನೆಯುತ್ತಾ ವಿಚಾರಿಸಿಕೊಳ್ಳಬೇಕು, ‘ಭಗವಂತಾ, ನನಗೆ ಏನೂ ತಿಳಿಯದು. ನೀನೇ ಮಾರ್ಗದರ್ಶಕನಾಗಿರುವೆ. ನನ್ನ ಈ ಹೆಜ್ಜೆಯು ಯೋಗ್ಯ ವಿದೆಯಲ್ಲ ಎಂಬುದನ್ನು ನೀನೇ ನನಗೆ ತಿಳಿಸು’

ಇ. ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ಹೇ ಗುರುದೇವ, ನಿಮ್ಮ ಅನುಮತಿ ಮತ್ತು ಕೃಪಾಶೀರ್ವಾದದಿಂದಲೇ ಈ ಕೃತಿ ಫಲಪ್ರದವಾಗಲಿ’ ಎಂದು ಪ್ರಾರ್ಥಿಸಬೇಕು.

ಈ. ‘ಪ್ರತಿಯೊಂದು ಕೃತಿಯನ್ನು ವಿಚಾರಿಸಿಯೇ ಮಾಡುತ್ತೇನೆ ಹಾಗೂ ಸ್ವಂತ ಮನಸ್ಸಿನಂತೆ ಮಾಡುವುದಿಲ್ಲ’ ಎಂದು ನಿಶ್ಚಯಿಸಬೇಕು. ಇದರಿಂದ ನಮ್ಮಲ್ಲಿ ವಿಚಾರಿಸಿಕೊಳ್ಳುವ ವೃತ್ತಿ ಜಾಗೃತವಾಗಿರುತ್ತದೆ ಮತ್ತು ದೇವರೊಂದಿಗಿನ ಅನುಸಂಧಾನವೂ ಉಳಿಯುತ್ತದೆ.

ಪ್ರಶ್ನೆ: ‘ಆತ್ಮನಿವೇದನೆಯ ಮೂಲಕ ಸೂಕ್ಷ್ಮದಲ್ಲಿ ಅನುಸಂಧಾನ ಸಾಧಿಸುವುದು’ ಮತ್ತು ‘ಸ್ಥೂಲದಲ್ಲಿ ಪ್ರತ್ಯಕ್ಷವಾಗಿ ವಿಚಾರಿಸುವುದು’, ಇವುಗಳಲ್ಲಿ ಯಾವುದು ಹೆಚ್ಚು ಯೋಗ್ಯ ?

ಉತ್ತರ : ಈಗಿನ ಈ ಕಲಿಯುಗದಲ್ಲಿ, ರಜ-ತಮಾತ್ಮಕ ವಾತಾವರಣದಲ್ಲಿ ದೇವರ ವಿಚಾರಗಳನ್ನು ಗ್ರಹಿಸುವಷ್ಟು ಸಾಧನೆ ಮತ್ತು ಕ್ಷಮತೆ ನಮ್ಮಲ್ಲಿ ಇರುವುದಿಲ್ಲ. ಕೆಲವೊಮ್ಮೆ ಅನಿಷ್ಟ ಶಕ್ತಿಗಳೂ ನಮ್ಮ ಮನಸ್ಸಿನಲ್ಲಿ ಅಯೋಗ್ಯ ವಿಚಾರಗಳನ್ನು ಹಾಕಿ ನಮ್ಮನ್ನು ದಾರಿ ತಪ್ಪಿಸಬಹುದು. ಆದ್ದರಿಂದ ‘ನಿಖರವಾದ ಯೋಗ್ಯ ಉತ್ತರ ಯಾವುದು ?’, ಎಂಬ ಬಗ್ಗೆ ಗೊಂದಲ ಉಂಟಾಗಬಹುದು. ಆದ್ದರಿಂದ ‘ಮನಸ್ಸಿನ ವಿಚಾರಗಳು ಹಾಗೂ ಸಂದೇಹಗಳನ್ನು ಸ್ಥೂಲದಲ್ಲಿ ಜವಾಬ್ದಾರ ಸಾಧಕರು ಅಥವಾ ವರದಿ ಸೇವಕರಿಗೆ ತಿಳಿಸಿ ಅವರಿಂದ ಸಂದೇಹ ನಿವಾರಿಸಿಕೊಳ್ಳುವುದು’ ಹೆಚ್ಚು ಯೋಗ್ಯವಾಗಿದೆ. ಆಗ ನಮ್ಮ ಮನಸ್ಸಿನ ಸಂದೇಹಗಳು ನಿಜವಾದ ಅರ್ಥದಲ್ಲಿ ನಿವಾರಣೆಯಾಗಿ ಯೋಗ್ಯ ದಿಶೆ ದೊರೆಯುತ್ತದೆ.

ವಾಸ್ತವವಾಗಿ ನೋಡಿದರೆ ‘ವಿಚಾರಿಸಿಕೊಳ್ಳುವುದು’ ಎಂಬ ಈ ಅಂಶದ ವ್ಯಾಪ್ತಿಯು ಬಹಳ ದೊಡ್ಡದಿದೆ. ಅದರ ಅಡಿಯಲ್ಲಿ ಅನೇಕ ಮಗ್ಗಲುಗಳು ಪರಿಸ್ಥಿತಿ ಅಥವಾ ಪ್ರಸಂಗಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ. ‘ಭಕ್ತಿಸತ್ಸಂಗದಿಂದ ವಿಚಾರಿಸಿಕೊಂಡು ಕೃತಿ ಮಾಡಲು ದೊರೆತ ದಿಶೆ ಎಂದರೆ ಭಗವಂತನು ತೋರಿಸುತ್ತಿರುವ ಮುಂದಿನ ದಾರಿಯಾಗಿದೆ’ ಎಂಬ ಭಾವದಿಂದ ಅದರಂತೆ ತಳಮಳದಿಂದ ಕೃತಿ ಮಾಡಬೇಕು.

ಕೃತಜ್ಞತೆ

‘ಗುರುದೇವರ ಕೃಪೆಯಿಂದ ಮತ್ತು ಅವರ ಸಂಕಲ್ಪಶಕ್ತಿಯಿಂದಾಗಿ ಪ್ರತಿಯೊಬ್ಬ ಸಾಧಕನ ಅಂತರಂಗದಲ್ಲಿ ‘ವಿಚಾರಿಸಿಕೊಳ್ಳುವ ವೃತ್ತಿ’ ನಿರ್ಮಾಣವಾಗಲು ಕೃತಿ, ಮನಸ್ಸು ಮತ್ತು ಭಾವ ಈ ಸ್ತರಗಳಲ್ಲಿ ಪ್ರಯತ್ನಗಳನ್ನು ಮಾಡಲು ಹಾಗೂ ಈ ಒಂದು ದೈವೀ ಗುಣದಿಂದ ಅನೇಕ ಸ್ವಭಾವದೋಷಗಳು ಮತ್ತು ಅಹಂಕಾರದ ಮಗ್ಗಲುಗಳ ಬೇರು-ಬುಡಗಳು ನಾಶವಾಗಲು ಈ ದಿವ್ಯ ದಿಶಾದರ್ಶನವು ಪ್ರಾಪ್ತವಾಗಿದೆ, ಇದಕ್ಕಾಗಿ ಗುರುದೇವರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಈ ಹಿಂದಿನ (ಲೇಖನ ೮) ಓದಲು ಇಲ್ಲಿ ಲಿಂಕಮೇಲೆ ಕ್ಲಿಕ್‌ ಮಾಡಿ – https://sanatanprabhat.org/kannada/169538.html