‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !

೧. ಅಮೃತಮಂಥನದ ಸಮಯದಲ್ಲಿ ಕ್ಷೀರಸಾಗರದಲ್ಲಿ ಔಷಧಿಯ ವನಸ್ಪತಿಗಳು, ಬೀಜ ಇತ್ಯಾದಿಗಳನ್ನು ಅರ್ಪಿಸುವುದು

ಕ್ಷಿಪ್ತ್ವಾ ಕ್ಷೀರೋದಧೌ ಸರ್ವಾ ವೀರುತ್ತೃಣಲತೌಷಧೀಃ |

– ಶ್ರೀಮದ್ಭಾಗವತ, ಸ್ಕಂಧ ೮,

ಅಧ್ಯಾಯ ೬, ಶ್ಲೋಕ ೨೨

ಅರ್ಥ : ಕ್ಷೀರಸಾಗರದಲ್ಲಿ ಎಲ್ಲ ರೀತಿಯ ಹುಲ್ಲು, ಬಳ್ಳಿ, ಔಷಧಿ ವನಸ್ಪತಿಗಳನ್ನು ಹಾಕಿ

 

ಆಧಾಯ ದ್ರುತಮಥ ವಾಸುಕಿಂ ವರತ್ರಾಂ ಪಾಥೋಧೌ ವಿನಿಹಿತ – ಸರ್ವಬೀಜಜಾಲೆ ||

ಶ್ರೀನಾರಾಯಣೀಯಮ್, ದಶಕ ೨೭, ಶ್ಲೋಕ ೫

ಅರ್ಥ : ನಂತರ ತಕ್ಷಣವೇ ವಾಸುಕಿಯನ್ನು ಹಗ್ಗವನ್ನಾಗಿ ಮಾಡಿ, ಸಮುದ್ರದಲ್ಲಿ ಎಲ್ಲ ರೀತಿಯ ಬೀಜಗಳನ್ನು ಅರ್ಪಿಸಲಾಯಿತು.

ಅಮೃತವನ್ನು ಪಡೆಯಲು ಮಾಡಿದ ಅಮೃತಮಂಥನದ ಸಮಯದಲ್ಲಿ, ಅಂದರೆ ಮಂಥನವನ್ನು ಆರಂಭಿಸುವ ಮೊದಲು ಕ್ಷೀರಸಾಗರದಲ್ಲಿ ಅನೇಕ ವನಸ್ಪತಿಗಳು, ಬಳ್ಳಿಗಳು, ಔಷಧೀಯ ವನಸ್ಪತಿಗಳು, ಔಷಧಿಯ ಹುಲ್ಲು ಮತ್ತು ಬೀಜಗಳನ್ನು ಅರ್ಪಿಸಲಾಗಿತ್ತು.

 

(ಪೂ.) ಸೌ. ಉಮಾ ರವಿಚಂದ್ರನ್

೧ ಅ. ಗುರುದೇವರು ಮೋಕ್ಷಪ್ರಾಪ್ತಿಗಾಗಿ ಸಾಧಕರ ಮನಸ್ಸಿನಲ್ಲಿ ನಾಮಜಪ, ಸತ್ಸಂಗ ಇತ್ಯಾದಿ ಬೀಜಗಳನ್ನು ಬಿತ್ತುವುದು : ಅದೇ ರೀತಿ ಮೋಕ್ಷವೆಂಬ ಅಮೃತ ಪಡೆಯಲು ಮನಸ್ಸಿನ ಮಂಥನ ಆರಂಭಿಸುವ ಮೊದಲು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಾಧಕರಿಗೆ ನಾಮಜಪ, ಸತ್ಸಂಗ ಮತ್ತು ಸತ್ಸೇವೆಗಳಂತಹ ಸಾತ್ತ್ವಿಕ ಅಂಶಗಳನ್ನು ಮನಸ್ಸಿನಲ್ಲಿ ಬಿತ್ತಲು ನೀಡಿದ್ದಾರೆ.

೨. ಅಹಂಕಾರದ ಕಾರಣ ೩೩ ಕೋಟಿ ದೇವತೆಗಳು ಮತ್ತು ೬೬ ಕೋಟಿ ಅಸುರರು ಎತ್ತಲು ಸಾಧ್ಯವಾಗದ ಮಂದಾರ ಪರ್ವತವನ್ನು ಶ್ರೀವಿಷ್ಣುವು ಎತ್ತಿ ಗರುಡನ ಮೇಲಿಡುವುದು

ದೂರಭಾರೋದ್ವಹಶ್ರಾಂತಾಃ ಶಕ್ರವೈರೂಚನಾದಯಃ |

ಅಪಾರಯಂತರಸ್ತಂ ವೋಢುಂ ವಿವಶಾ ವಿಜಹುಃ ಪಥಿ ||

– ಶ್ರೀಮದ್ಭಾಗವತ, ಸ್ಕಂಧ ೮, ಅಧ್ಯಾಯ ೬, ಶ್ಲೋಕ ೩೪

ಅರ್ಥ : ಆದರೆ ಆ ಮಂದಾರ ಪರ್ವತವು ಅತ್ಯಂತ ಭಾರವಾಗಿತ್ತು ಮತ್ತು ಅದನ್ನು ಬಹಳ ದೂರದ ವರೆಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಇದರಿಂದಾಗಿ ಇಂದ್ರ, ಬಲಿ ಮುಂತಾದವರೆಲ್ಲರೂ ದಣಿದರು. ಅದನ್ನು ಮುಂದೆ ಕೊಂಡೊಯ್ಯಲು ಅವರಿಗೆ ಸಾಧ್ಯವಾಗಲಿಲ್ಲ.

ಗಿರಿಂ ಚಾರೋಪ್ಯ ಗರುಡೇ ಹಸ್ತೇನೈಕೇನ ಲೀಲಯಾ |

ಆರುಹ್ಯ ಪ್ರಯಯಾವಬ್ಧಿಂ ಸುರಾಸುರಗಣೈರ್ವೃತಃ ||

– ಶ್ರೀಮದ್ಭಾಗವತ, ಸ್ಕಂಧ ೮, ಅಧ್ಯಾಯ ೬, ಶ್ಲೋಕ ೩೮

ಅರ್ಥ : ನಂತರ (ವಿಷ್ಣುವು) ಒಂದು ಕೈಯಿಂದ ಆ ಪರ್ವತವನ್ನು ಎತ್ತಿ ಗರುಡನ ಮೇಲೆ ಇಟ್ಟನು ಮತ್ತು ತಾನೂ ಅದರ ಮೇಲೆ ಕುಳಿತು ದೇವರು ಹಾಗೂ ಅಸುರರೊಂದಿಗೆ ಸಮುದ್ರದತ್ತ ಹೊರಟನು.

ಮಂಥನ ಮಾಡಲು ಮಂದಾರ ಪರ್ವತವನ್ನು ಕಡಗೋಲಾಗಿ ಕ್ಷೀರಸಾಗರದಲ್ಲಿ ಇರಿಸಲು ೩೩ ಕೋಟಿ ದೇವತೆಗಳು ಮತ್ತು ೬೬ ಕೋಟಿ ಅಸುರರು ಅದನ್ನು ಎತ್ತಿದರು. ಆಗ ‘ಇಷ್ಟು ದೊಡ್ಡ ಪರ್ವತವನ್ನು ನಾವು ಎತ್ತಬಲ್ಲೆವು, ಎಂಬ ಅವರ ಅಹಂಕಾರದ ಕಾರಣದಿಂದ ಅದು ಕೈತಪ್ಪಿ ಕೆಳಗೆ ಬಿದ್ದಿತು. ಭಗವಾನ್ ಶ್ರೀವಿಷ್ಣು ತಕ್ಷಣವೇ ಆ ಪರ್ವತವನ್ನು ಒಂದು ಕೈಯಿಂದ ಸುಲಭವಾಗಿ ಎತ್ತಿ ತನ್ನ ವಾಹನವಾದ ಗರುಡನ ಮೇಲೆ ಇಟ್ಟನು. ಗರುಡನು ಆ ಪರ್ವತವನ್ನು ಕ್ಷೀರಸಾಗರದಲ್ಲಿ ಇಟ್ಟನು.

೨ ಅ. ಗುರುದೇವರು ಸಾಧಕರ ಮನಸ್ಸಿನ ಮಂಥನವಾಗಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಪರ್ವತವನ್ನು ಅವರ ಮನಸ್ಸಿನಲ್ಲಿ ಇಡುವುದು : ಅದೇ ರೀತಿ ನಮ್ಮ ಮನಸ್ಸಿನ ಮಂಥನವನ್ನು ಮಾಡಿ ವ್ಯಕ್ತಿತ್ವದಲ್ಲಿನ ಸ್ವಭಾವದೋಷಗಳನ್ನು ಹೊರಹಾಕಲು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಆಶೀರ್ವಾದವನ್ನು ಕೊಟ್ಟಿದ್ದಾರೆ. ಮನಸ್ಸಿನ ಮಂಥನವಾಗಲು ಅವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಪರ್ವತವನ್ನು ಎತ್ತಿ ಅದನ್ನು ಸಾಧಕರ ಮನಸ್ಸಿನಲ್ಲಿ ಇಟ್ಟಿದ್ದಾರೆ.

೩. ಮಂದಾರ ಪರ್ವತವನ್ನು ಧರಿಸಲು ಶ್ರೀವಿಷ್ಣುವು ಮಹಾಕಾಯ ಕೂರ್ಮ ಅವತಾರವನ್ನು ತಾಳುವುದು

ಮಥ್ಯಮಾನೇರ್ಣವೆ ಸೋದ್ರಿಃ ಅನಾಧಾರೋ ಹ್ಯಪೋವಿಶತ್ |

ಧ್ರಿಯಮಾಣೋಪಿ ಬಲಿಭಿಃ ಗೌರವಾತ್ ಪಾಂಡುನಂದನ ||

– ಶ್ರೀಮದ್ಭಾಗವತ, ಸ್ಕಂಧ ೮ ಅಧ್ಯಾಯ ೭ ಶ್ಲೋಕ ೬,

ಅರ್ಥ : ಪರೀಕ್ಷಿತನೇ, ಸಮುದ್ರಮಂಥನವು ಪ್ರಾರಂಭ ವಾದಾಗ, ಬಲಿಷ್ಠರಾದ ದೇವತೆಗಳು ಮತ್ತು ಅಸುರರು ಅದನ್ನು ಹಿಡಿದಿಟ್ಟುಕೊಂಡಿದ್ದರೂ ಕೆಳಗೆ ಆಧಾರ ಇಲ್ಲದ ಕಾರಣ ಮಂದರಾಚಲ ಪರ್ವತವು ಸಮುದ್ರದಲ್ಲಿ ಮುಳುಗತೊಡಗಿತು.

ಕೃತ್ವಾ ವಪುಃ ಕಚ್ಛಪಮಧ್ಬುತಂ ಮಹತ್ ಪ್ರವಿಶ್ಯ ತೋಯಂ ಗಿರಿಮುಜ್ಜಹಾರ |

– ಶ್ರೀಮದ್ಭಾಗವತ, ಸ್ಕಂಧ ೮, ಅಧ್ಯಾಯ ೭, ಶ್ಲೋಕ ೮

ಅರ್ಥ : (ಭಗವಂತನು) ಒಂದು ದೊಡ್ಡ ಅದ್ಭುತವಾದ ಕೂರ್ಮ (ಆಮೆ) ರೂಪವನ್ನು ಧರಿಸಿ ಸಮುದ್ರದ ನೀರನ್ನು ಪ್ರವೇಶಿಸಿ ಮಂದರಾಚಲ ಪರ್ವತವನ್ನು ಮೇಲೆತ್ತಿದನು.

ದೇವತೆಗಳು ಮತ್ತು ಅಸುರರು ಸಮುದ್ರಮಂಥನ ಪ್ರಾರಂಭಿಸಿದಾಗ, ಮಂದಾರ ಪರ್ವತಕ್ಕೆ ಕೆಳಗೆ ಆಧಾರ ಇಲ್ಲದ ಕಾರಣ ಅದು ತನ್ನದೇ ಆದ ಭಾರದಿಂದ ಮುಳುಗಲು ಪ್ರಾರಂಭಿಸಿತು. ಇದನ್ನು ಕಂಡು ಕರುಣಾಮಯಿಯಾದ ಭಗವಾನ್ ವಿಷ್ಣುವು ಒಂದು ಲಕ್ಷಯೋಜನ (೧ ಯೋಜನ ಎಂದರೆ ೧೨ ರಿಂದ ೧೪ ಕಿಲೋಮೀಟರ್) ಉದ್ದದ ಬೃಹತ್ ಕೂರ್ಮಾವತಾರವನ್ನು ತಾಳಿ, ವಜ್ರದಂತೆ ಕಠಿಣವಾದ ತನ್ನ ಬೆನ್ನಿನ ಚಿಪ್ಪಿನ ಮೇಲೆ ಮಂದಾರ ಪರ್ವತದ ಭಾರವನ್ನು ಹೊತ್ತನು.

೩ ಅ.  ಗುರುದೇವರು ವ್ಯಕ್ತಿತ್ತ್ವದಲ್ಲಿನ ಸ್ವಭಾವದೋಷಗಳ ಭಾರದಿಂದ ನಿರಾಶ ಮತ್ತು ಹತಾಶರಾದ ಸಾಧಕರಿಗೆ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ಕಲಿಸುವುದು : ಅದರಂತೆ ಯಾವಾಗ ನಾವು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆಯೋ, ಆಗ ತಮ್ಮ ವ್ಯಕ್ತಿತ್ವದಲ್ಲಿನ ಸ್ವಭಾವದೋಷಗಳ ಭಾರದಿಂದ ಸಾಧಕರಿಗೆ ನಿರಾಶೆ ಬರುತ್ತದೆ ಮತ್ತು ಅವರು ಹತಾಶರಾಗುತ್ತಾರೆ. ಇಂತಹ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮಗೆ ಸಕಾರಾತ್ಮಕ ವಿಚಾರವನ್ನು ಮಾಡಿ ಅದರಿಂದ ಹೊರಬರಲು ಹಾಗೂ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಮೂಲಕ ಮನಸ್ಸಿನ ಮಂಥನವನ್ನು ಮುಂದುವರಿಸಲು ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ಕಲಿಸಿದ್ದಾರೆ.

– (ಪೂ.) ಸೌ. ಉಮಾ ರವಿಚಂದ್ರನ್ (ಸನಾತನದ ೭೦ ನೇ ಸಮಷ್ಟಿ ಸಂತರು), ಚೆನ್ನೈ, ತಮಿಳುನಾಡು. (೧.೨.೨೦೨೪)