ದೇಶದ ರಾಜಕಾರಣದಲ್ಲಿ ರಾಷ್ಟ್ರಹಿತದೃಷ್ಟಿಯಿಂದ ಬದಲಾವಣೆಯನ್ನು ತಂದ ಭಾರತದ ಆಧುನಿಕ ಚಾಣಕ್ಯ ಅಜಿತ ಡೋವಾಲ್ !

ಡಾ.ಎಸ್‌. ಜಯಶಂಕರ ಅವರೊಂದಿಗೆ ಚರ್ಚಿಸುವಾಗ ಅಜಿತ ಡೋವಾಲ

ಆಧುನಿಕ ಭಾರತದ ನಿರ್ಮಾಣದಲ್ಲಿ ಕೆಲವು ಕ್ಷೇತ್ರಗಳು ಪ್ರತಿಭಾವಂತ ವ್ಯಕ್ತಿಯ ಕಾರ್ಯದಕ್ಷತೆಯಿಂದಲೇ ಪ್ರಸಿದ್ಧವಾಗುತ್ತವೆ ಅಥವಾ ಗುರುತಿಸಲ್ಪಡುತ್ತವೆ. ಸಂಬಂಧಪಟ್ಟ ವ್ಯಕ್ತಿಯು ಆ ಕ್ಷೇತ್ರದೊಂದಿಗೆ ಎಷ್ಟೊಂದು ಏಕರೂಪನಾಗಿರುತ್ತಾನೆ ಎಂದರೆ, ಆ ವ್ಯಕ್ತಿಯು ಆ ಕ್ಷೇತ್ರದಲ್ಲಿ ಇರುವುದರಿಂದಲೇ ಆ ಕ್ಷೇತ್ರದ ಬಗ್ಗೆ ನಿಶ್ಚಿಂತತೆ ಇರುತ್ತದೆ, ಅದುವೇ ಆ ಕ್ಷೇತ್ರದ ವೈಭವವಾಗಿರುತ್ತದೆ. ಭಾರತದ ಇಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ (ಎನ್.ಎಸ್.ಎ.- ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ) ಅಜಿತ ಡೋವಾಲ್ ಅವರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಕೇವಲ ಒಂದು ಹುದ್ದೆಯನ್ನು ಅಲಂಕರಿಸುವುದು ಮತ್ತು ರಾಷ್ಟ್ರಪ್ರೇಮದಿಂದ ಆ ಹುದ್ದೆಯಲ್ಲಿ ಉಳಿದು ಹುದ್ದೆಯ ಘನತೆಯನ್ನು ಹೆಚ್ಚಿಸುವುದು.ಇವೆರಡರಲ್ಲಿ ವ್ಯತ್ಯಾಸವಿದೆ. ಭಾರತದ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಅನೇಕ ಕಾರ್ಯಾಚರಣೆಗಳನ್ನು ಯಶಸ್ವಿಗೊಳಿಸಿರುವ ಅಜಿತ ಡೋವಾಲ್ ಅವರು ಆಧುನಿಕ ಚಾಣಕ್ಯ ಎಂದು ಖ್ಯಾತರಾಗಿದ್ದಾರೆ ಮತ್ತು ಪಾಶ್ಚಿಮಾತ್ಯರ ಮಾತುಗಳಲ್ಲಿ ಅವರು ಭಾರತದ ‘ಜೇಮ್ಸ್ ಬಾಂಡ್’ ಆಗಿದ್ದಾರೆ. (‘ಜೇಮ್ಸ್ ಬಾಂಡ್’ ಇವನು ಇಂಗ್ಲೆಂಡಿನ ಪ್ರಸಿದ್ಧ ಕಾಲ್ಪನಿಕ ಗೂಢಚಾರ ಆಗಿದ್ದಾನೆ). ಈ ಲೇಖನದಲ್ಲಿ ನೀಡಲಾದ ಅಂಶಗಳನ್ನು ಕೇವಲ ಜನಜಾಗೃತಿ ಮತ್ತು ಮಾಹಿತಿ ನೀಡುವ ಉದ್ದೇಶದಿಂದ ಇಲ್ಲಿ ಕೊಡಲಾಗಿದೆ. ಯಾವುದೇ ಗೌಪ್ಯತೆಯನ್ನು ಉಲ್ಲಂಘಿಸುವ ಉದ್ದೇಶವಿಲ್ಲ. ಇಲ್ಲಿಯವರೆಗೆ ಪ್ರಕಟಿಸಲಾಗಿರುವ ಲೇಖನಗಳಲ್ಲಿ ನಾವು ‘ಜನನ ಮತ್ತು ಹಿನ್ನೆಲೆ, ಅಜಿತ ಡೊವಾಲ ಅವರ ಪಾಕಿಸ್ತಾನದಲ್ಲಿ ವಾಸ್ತವ್ಯ ಕಂದಹಾರ ವಿಮಾನ ಅಪಹರಣದ ಪ್ರಕರಣದಲ್ಲಿ ಅವರ ಪಾತ್ರ ಮತ್ತು ದಾವೂದನನ್ನು ಕೊಲ್ಲುವ ಪ್ರಯತ್ನ ಪೊಲೀಸರಿಂದ ವಿಫಲ’ ಈ ವಿಷಯಗಳನ್ನು ಓದಿದ್ದೀರಿ. ಇಂದು ಈ ಲೇಖನದ ಅಂತಿಮ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.                     (ಭಾಗ ೩)

೧೦. ಐಸಿಸ್‌ನ  ವಶದಲ್ಲಿದ್ದ ೪೬ ಜನ ಭಾರತೀಯ ದಾದಿಯರನ್ನು (ನರ್ಸ) ಸುರಕ್ಷಿತವಾಗಿ ಕರೆ ತಂದ ಸಾಹಸ

೨೦೧೪ ರಲ್ಲಿ ‘ಐಸಿಸ್’ನ ಭಯೋತ್ಪಾದಕ ಸಂಘಟನೆಯು ಇರಾಕ್‌ನ ಮೊಸುಲ್ ನಗರವನ್ನು ವಶಪಡಿಸಿಕೊಂಡಿತ್ತು. ಟಿಕ್ರಿತ್‌ನ ಒಂದು ಆಸ್ಪತ್ರೆ ಯಲ್ಲಿದ್ದ ಕೇರಳದ ೪೬ ಭಾರತೀಯ ದಾದಿಯರು ಭಯೋತ್ಪಾದಕರ ಕೈಗೆ ಸಿಲುಕಿದ್ದರು. ಅವರ ಜೀವಕ್ಕೆ ಅಪಾಯವಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡ ನಂತರ (೩೦ ಮೇ ೨೦೧೪) ಅಜಿತ ಡೋವಾಲ ಅವರಿಗೆ ಎದುರಾದ ಮೊದಲ ದೊಡ್ಡ ಮತ್ತು ಅತ್ಯಂತ ಸೂಕ್ಷ್ಮ ಸವಾಲು ಇದಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಲು ಮತ್ತು ಉನ್ನತಮಟ್ಟದ ಸಂಪರ್ಕವನ್ನು ಸಾಧಿಸಲು ಡೋವಾಲ ಅವರು ೨೫ ಜೂನ್ ೨೦೧೪ ರಂದು ಒಂದು ವಿಶೇಷ ರಹಸ್ಯ ಕಾರ್ಯಾಚರಣೆಗನುಸಾರ  ಇರಾಕ್‌ಗೆ ಪ್ರಯಾಣ ಬೆಳೆಸಿದರು. ಅವರು ಇರಾಕ್ ಸರಕಾರ, ಅಂತಾರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ಮತ್ತು ಪ್ರಾದೇಶಿಕ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ತೆರೆಮರೆಯಲ್ಲಿ ಅನೇಕ ಮಹತ್ವದ ಮಾತುಕತೆ ನಡೆಸಿದರು. ಅದರ ಬಗ್ಗೆ ಇಂದಿಗೂ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಅವರ ಅವಿರತ ಪ್ರಯತ್ನದ ಫಲವಾಗಿ ೫ ಜುಲೈ ೨೦೧೪ ರಂದು ಐಸಿಸ್‌ನ ಭಯೋತ್ಪಾದಕರು ದಾದಿಯರನ್ನು ಇರಾಕ್‌ನ ಎರ್ಬಿಲ ನಗರದ ಕುರ್ದಿಶ ಅಧಿಕಾರಿಗಳ ವಶಕ್ಕೆ ಒಪ್ಪಿಸಿದರು. ಭಾರತ ಸರಕಾರ ವಿಶೇಷ ವ್ಯವಸ್ಥೆ ಮಾಡಿದ್ದ ಏರ್ ಇಂಡಿಯಾದ ವಿಮಾನದ ಮೂಲಕ ಎಲ್ಲ ದಾದಿಯರನ್ನು ಸುರಕ್ಷಿತವಾಗಿ ಭಾರತಕ್ಕೆ ಅವರ ಸ್ವಂತ ಊರಾದ ಕೊಚ್ಚಿಗೆ ಕರೆ ತರಲಾಯಿತು. ಅಜಿತ ಡೋವಾಲ ಅವರ ಧೈರ್ಯದ ಮತ್ತು ಗುಪ್ತ ಕಾರ್ಯಾಚರಣೆಯಿಂದ ೪೬ ನಿರಪರಾಧಿ ಭಾರತೀಯರ ಪ್ರಾಣ ಉಳಿಯಿತು ಮತ್ತು ಇದನ್ನು ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರೆಂದು ವೃತ್ತಿಜೀವನದ ಒಂದು ದೊಡ್ಡ ಪರಾಕ್ರಮ ಎಂದು ಪರಿಗಣಿಸಲಾಗಿದೆ.

ಅಜಿತ್ ಡೋವಾಲ್ ಅವರಿಗೆ ಸಂದ ಪ್ರಶಸ್ತಿಗಳು !

ಸೈನ್ಯವು ಖಲಿಸ್ತಾನಿ ಉಗ್ರರ ವಿರುದ್ಧ ಸುವರ್ಣ ಮಂದಿರದ ಬಳಿ ನಡೆಸಿದ ‘ಆಪರೇಷನ್ ಬ್ಲ್ಯಾಕ್ ಥಂಡರ್’ ಕಾರ್ಯಾಚರಣೆಯು ಅಜಿತ್ ಡೋವಾಲರು ಸಂಗ್ರಹಿಸಿದ ಅತ್ಯಂತ ರಹಸ್ಯ ಮಾಹಿತಿಯಿಂದಾಗಿ ಯಶಸ್ವಿಯಾಯಿತು. ಇದರಿಂದಾಗಿ ಉಗ್ರರನ್ನು ಹೊರದಬ್ಬಲು ಮತ್ತು ಅವರು ಶರಣಾಗುವಂತೆ ಮಾಡಲು ಸಾಧ್ಯವಾಯಿತು. ಈ ಪರಾಕ್ರಮಕ್ಕಾಗಿ ಅವರಿಗೆ ‘ಕೀರ್ತಿ ಚಕ್ರ’ ಪ್ರಶಸ್ತಿ ಲಭಿಸಿತು. ೧೯೮೮ ರಲ್ಲಿ, ಶಾಂತಿಯ ಸಮಯದಲ್ಲಿ ಶೌರ್ಯ, ಧೈರ್ಯ ಮತ್ತು ಆತ್ಮತ್ಯಾಗವನ್ನು ಪ್ರದರ್ಶಿಸಿದ್ದಕ್ಕಾಗಿ, ಸೈನ್ಯದ ಹೊರತಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಇವರಿಗೆ ವಿಶಿಷ್ಟ ಸೇವೆಗಾಗಿ ‘ಪೊಲೀಸ್ ಪದಕ’ ಮತ್ತು ‘ರಾಷ್ಟ್ರಪತಿ ಪೊಲೀಸ್ ಪದಕ’ ಗೌರವಗಳೂ ಸಂದಿವೆ.

– ಶ್ರೀ. ಯಜ್ಞೇಶ ಸಾವಂತ

 

೧೧. ಪಾಕಿಸ್ತಾನದ ಮೇಲೆ ಮೊದಲ ‘ಸರ್ಜಿಕಲ್ ಸ್ಟ್ರೈಕ್’ (ಸೀಮಿತ ಸೈನಿಕ ಕಾರ್ಯಾಚರಣೆ) !

ಊರಿ (ಜಮ್ಮು-ಕಾಶ್ಮೀರ) ಇಲ್ಲಿನ ಭಾರತೀಯ ಸೈನ್ಯದ ಶಿಬಿರದ ಮೇಲೆ ಭಯೋತ್ಪಾದಕರು ಭೀಕರ ದಾಳಿ ನಡೆಸಿದರು. ಈ ದಾಳಿಯಲ್ಲಿ ೧೯ ಭಾರತೀಯ ಸೈನಿಕರು ಹುತಾತ್ಮರಾದರು. ಈ ದಾಳಿಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಬಂದ ಭಯೋತ್ಪಾದಕರು ನಡೆಸಿದ್ದರು. ಇದರಿಂದಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತದ ಮೇಲೆ ತೀವ್ರ ಒತ್ತಡವಿತ್ತು. ಅಜಿತ ಡೊವಾಲ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಈ ದಾಳಿಗೆ ಪ್ರಬಲ ಪ್ರತ್ಯುತ್ತರ ನೀಡುವ ನೀತಿಯನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರು ‘ಧೈರ್ಯಶಾಲಿ ರಕ್ಷಣಾತ್ಮಕ ನೀತಿ’ಯ ಬದಲಿಗೆ ‘ರಕ್ಷಣಾತ್ಮಕ ಆಕ್ರಮಣ’ದ ನೀತಿಯನ್ನು ಅಳವಡಿಸಿಕೊಂಡರು. ‘ಭಾರತಕ್ಕೆ ಅಪಾಯ ತಂದೊಡ್ಡುವ ಭಯೋತ್ಪಾದಕ ನೆಲೆಗಳ ಮೇಲೆ ನೇರ ದಾಳಿ ನಡೆಸಿ ಅವರನ್ನು ಅವರ ಸರಹದ್ದಿನಲ್ಲಿಯೇ ನಾಶಪಡಿಸುವುದು’, ಎನ್ನುವುದು ಅವರ ಯೋಜನೆಯಾಗಿತ್ತು. ಅವರು ಸೈನ್ಯದ ಮುಖ್ಯಸ್ಥರು ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಈ ಸಂಪೂರ್ಣ ಕಾರ್ಯಾಚರಣೆಯ ರೂಪುರೇ?ಯನ್ನು ಸಿದ್ಧ ಪಡಿಸಿದರು. ಇದರಲ್ಲಿ ಭಯೋತ್ಪಾದಕ ನೆಲೆಗಳ ನಿಖರ ಮಾಹಿತಿ ಸಂಗ್ರಹಿಸುವುದು ಮತ್ತು ಕಾರ್ಯಾಚರಣೆಯ ಗೌಪ್ಯತೆಯನ್ನು ಕಾಪಾಡುವುದರ ಮೇಲೆ ಗಮನ ಹರಿಸಲಾಯಿತು. ಅವರು ಈ ಅತ್ಯಂತ ಅಪಾಯಕಾರಿ ಸೈನಿಕ ಕಾರ್ಯಾಚರಣೆಗೆ ಅಗತ್ಯವಿರುವ ರಾಜಕೀಯ ಬೆಂಬಲ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಭವನೀಯ ಪರಿಣಾಮಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಂಡರು. ಸೆಪ್ಟೆಂಬರ್ ೨೦೧೬ ರಲ್ಲಿ ಮಧ್ಯರಾತ್ರಿಯಲ್ಲಿ ಭಾರತೀಯ ಸೈನ್ಯದ ’ಪ್ಯಾರಾ ಸ್ಪೆಶಲ್ ಫೋರ್ಸಸ್’ ಕಮಾಂಡೋಗಳ ತುಕಡಿಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿದವು. ಭಾರತೀಯ ಕಮಾಂಡೋಗಳು ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರನ್ನು ಹತ್ಯೆಗೈದರು. ಈ ಕಾರ್ಯಾಚರಣೆಯ ಮೂಲಕ ಭಾರತವು ಭಯೋತ್ಪಾದನೆಯ ವಿರುದ್ಧ ಕೇವಲ ರಕ್ಷಣಾತ್ಮಕವಾಗಿರದೇ ‘ಇಚ್ಛಿತ ಸ್ಥಳ’ಕ್ಕೆ ಹೋಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಪಡಿಸಿತು. ’ಸರ್ಜಿಕಲ್ ಸ್ಟ್ರೈಕ್’ ಇದು ಹಲವು ವರ್ಷಗಳ ನಂತರ ಭಾರತವು ಪಾಕಿಸ್ತಾನದ ಭೂಭಾಗಕ್ಕೆ ಹೋಗಿ ಮಾಡಿದ ಮೊದಲ ನೇರ ಸೈನಿಕ ದಾಳಿಯಾಗಿತ್ತು, ಇದು ಡೋವಾಲರ ‘ಹೊಸ ಭದ್ರತಾ ನೀತಿ’ಯ ಆರಂಭವಾಯಿತು. ಡೊವಾಲ ಅವರ ಈ ಕಾರ್ಯತಂತ್ರದ ನಿರ್ಧಾರದಿಂದ ಭಾರತದ ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಲ್ಲಿ ಒಂದು ಮಹತ್ವದ ಬದಲಾವಣೆಯಾಯಿತು.

ಅಜಿತ ಡೋವಾಲ

೧೨. ಬಾಲಾಕೋಟ ‘ಏರ್ ಸ್ಟ್ರೈಕ್’ (ವೈಮಾನಿಕ ದಾಳಿಯ ಮೂಲಕ ನಡೆಸಿದ ತಾತ್ಕಾಲಿಕ ಸೈನಿಕ ಕಾರ್ಯಾಚರಣೆ)

ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಬಾಲಾಕೋಟನಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಲಾದ ವೈಮಾನಿಕ ದಾಳಿಯ ನಿರ್ಧಾರದಲ್ಲಿ ಡೋವಾಲರ ಪಾತ್ರವು ಬಹಳ ಮಹತ್ವದ್ದಾಗಿತ್ತು.

೧೩. ಮ್ಯಾನ್ಮಾರ್‌ನಲ್ಲಿ ‘ಕ್ರಾಸ್ ಬಾರ್ಡರ್ ಆಪರೇಷನ್’ (ದೇಶದ ಗಡಿ ದಾಟಿ ನಡೆಸಿದ ಕಾರ್ಯಾಚರಣೆ) !

೪ ಜೂನ್ ೨೦೧೫ ರಂದು ಮಣಿಪುರದ ಚಂದೇಲ ಜಿಲ್ಲೆಯಲ್ಲಿ ’ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್’ ಮತ್ತು ಇತರ ಭಯೋತ್ಪಾದಕ ಗುಂಪುಗಳು ಭಾರತೀಯ ಸೈನ್ಯದ ಒಂದು ಬೆಂಗಾವಲು ಪಡೆಯ ಮೇಲೆ ಹೊಂಚುದಾಳಿ ನಡೆಸಿದವು. ಈ ದಾಳಿಯಲ್ಲಿ ಭಾರತೀಯ ಸೈನ್ಯದ ೧೮ ಸೈನಿಕರು ಹುತಾತ್ಮರಾದರು, ಇದಕ್ಕೂ ಮೊದಲು ಕೆಲವು ಸೈನಿಕರು ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದರು. ಈ ದಾಳಿಯನ್ನು ನಡೆಸಿದ ನಂತರ ಭಯೋತ್ಪಾದಕರು ಗಡಿ ದಾಟಿ ಮ್ಯಾನ್ಮಾರ್ ವ್ಯಾಪ್ತಿಯಲ್ಲಿದ್ದ ತಮ್ಮ ನೆಲೆಗಳಿಗೆ ಪಲಾಯನ ಮಾಡಿದ್ದರು. ಆಗ ಅಜಿತ ಡೋವಾಲ್ ಅವರು ತಕ್ಷಣದ ಮತ್ತು ಆಕ್ರಮಣಕಾರಿ ಪ್ರತ್ಯುತ್ತರದ ತಂತ್ರವನ್ನು ರೂಪಿಸಿದರು. ಅವರು ಮತ್ತೊಮ್ಮೆ ‘ರಕ್ಷಣಾತ್ಮಕ ಆಕ್ರಮಣ’ದ ತತ್ತ್ವ್ವವನ್ನು ಬಳಸಿ ನೇರವಾಗಿ ಮ್ಯಾನ್ಮಾರ್ ಗಡಿಯಾಚೆ ಹೋಗಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸುವ ಪ್ರಸ್ತಾವನೆಯನ್ನು ನೀಡಿದರು.

ಶ್ರೀ. ಯಜ್ಞೇಶ ಸಾವಂತ

ಬೇರೊಂದು ದೇಶದ ವ್ಯಾಪ್ತಿಯಲ್ಲಿ ಸೈನ್ಯ ಕಾರ್ಯಾಚರಣೆ ಮಾಡುವುದು ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ಸಂಕೀರ್ಣವಾಗಿರುತ್ತದೆ. ಆದ್ದರಿಂದ ಡೊವಾಲ್ ಅವರು ಮ್ಯಾನ್ಮಾರ್ ಸರಕಾರ ಮತ್ತು ಸೈನ್ಯದೊಂದಿಗೆ ಉನ್ನತ ಮಟ್ಟದ ಸಮನ್ವಯ ಸಾಧಿಸಿದರು ಮತ್ತು ಈ ಕಾರ್ಯಾಚರಣೆಗಾಗಿ ’ಅಗತ್ಯವಿದ್ದಂತೆ ಮುಂದುವರಿಸಲು’ ಎಂಬ ಪೂರ್ವಾನುಮತಿ ಅಥವಾ ಕನಿಷ್ಟ ‘ಮೌನ ಸಮ್ಮತಿ’ಯನ್ನು ಪಡೆದರು. ೯ ಜೂನ್ ೨೦೧೫ ರಂದು ಭಾರತೀಯ ಸೈನ್ಯದ ವಿಶೇಷ ಪಡೆ ಮುಖ್ಯವಾಗಿ ‘ಪ್ಯಾರಾಶೂಟ್ ರೆಜಿಮೆಂಟ್’ ಕಮಾಂಡೋಗಳು ಮ್ಯಾನ್ಮಾರ್ ವ್ಯಾಪ್ತಿಯಲ್ಲಿದ್ದ ಎರಡು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದರು. ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಗುಂಪುಗಳಿಗೆ ದೊಡ್ಡ ಹಾನಿಯಾಯಿತು ಮತ್ತು ೧೦೦ ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು. ಭಾರತೀಯ ಕಮಾಂಡೋಗಳು ತಮ್ಮ ಮಿಷನ್‌ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಯಾವುದೇ ಪ್ರಾಣಹಾನಿಯಿಲ್ಲದೆ ದೇಶದ ಗಡಿಯೊಳಗೆ ಮರಳಿದರು. ಮ್ಯಾನ್ಮಾರ್‌ನ ಈ ಕಾರ್ಯಾಚರಣೆಯು ಭಾರತದ ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಒಂದು ಮಹತ್ವದ ಘಟನೆಯಾಯಿತು.

೧೪. ಡೋಕ್ಲಾಮ್ ಮತ್ತು ಗಲ್ವಾನ್ ಸಂಘರ್ಷದಲ್ಲಿ ಮಹತ್ವದ ಪಾತ್ರ

ವರ್ಷ ೨೦೧೭ ರಲ್ಲಿ ಭಾರತ ಮತ್ತು ಚೀನಾ ಇವರ ಡೋಕ್ಲಾಮ್ ಭೂಭಾಗದ ವಿಷಯವಾಗಿ ದೊಡ್ಡ ಮಟ್ಟದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಇಲ್ಲಿ ಚೀನಾ ಅಕ್ರಮವಾಗಿ ರಸ್ತೆಯನ್ನು ನಿರ್ಮಿಸುತ್ತಿತ್ತು, ಇದನ್ನು ಭಾರತ ವಿರೋಧಿಸಿತ್ತು. ಗಡಿ ಸಂಘರ್ಷದಲ್ಲಿ ಅವರು ಮುತ್ಸದ್ದಿತನ ಮತ್ತು ಮಾತುಕತೆಗಳ ಮೂಲಕ ಈ ಉದ್ವಿಗ್ನತೆಯನ್ನು ಶಮನಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಚೀನಾದೊಂದಿಗಿನ ಗಡಿ ಸಮಸ್ಯೆಯನ್ನು ಬಗೆಹರಿಸಲು ಅವರು ಭಾರತದ ವಿಶೇಷ ಪ್ರತಿನಿಧಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ (ಜೂನ್ ೨೦೨೦) ಭಾರತ ಮತ್ತು ಚೀನಾ ಸೈನ್ಯದ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯಿತು, ಇದರಲ್ಲಿ ಎರಡೂ ಕಡೆಯವರು ಸೈನಿಕರನ್ನು ಕಳೆದುಕೊಂಡರು. ಈ ಸಂಘರ್ಷವು ‘ವಾಸ್ತವಿಕ ನಿಯಂತ್ರಣ ರೇಖೆ’ಯಲ್ಲಿ ನಡೆಯಿತು, ಅಲ್ಲಿ ಚೀನೀ ಸೈನ್ಯವು ಏಕಪಕ್ಷೀಯವಾಗಿ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿತು ಮತ್ತು ನಂತರ ಬಿದಿರು, ಕಲ್ಲು ತೂರಾಟ ಮತ್ತು ಕೈಕೈ ಮಿಲಾಯಿಸುವಿಕೆಯ ಮೂಲಕ ಭೀಕರ ಹೋರಾಟ ನಡೆಯಿತು, ಇದರಲ್ಲಿ ಭಾರತೀಯ ಸೈನಿಕರು ಶೌರ್ಯ ಪ್ರದರ್ಶಿಸಿ ಚೀನಿ ಸೈನ್ಯಕ್ಕೆ ಪ್ರತ್ಯುತ್ತರ ನೀಡಿದರು. ಇದಕ್ಕೂ ಮೊದಲೇ ಉದ್ವಿಗ್ನತೆಯಿಂದಾಗಿ ಚೀನಾ ತನ್ನ ೬೦ ಸಾವಿರಕ್ಕೂ ಹೆಚ್ಚು ಸೈನಿಕರನ್ನು ಗಲ್ವಾನ್ ಬಳಿ ನಿಯೋಜಿಸಿತ್ತು. ಪರಿಣಾಮವಾಗಿ ಭಾರತವೂ ೫೦ ಸಾವಿರಕ್ಕೂ ಹೆಚ್ಚು ಸೈನಿಕರನ್ನು ಚೀನಾ ಗಡಿಯ ಬಳಿ ನಿಯೋಜಿಸಿತು. ಭಾರತ ಮತ್ತು ಚೀನಾ ನಡುವೆ ಯಾವಾಗ ಬೇಕಾದರೂ ಯುದ್ಧವಾಗಬಹುದು ಎನ್ನುವ ಸ್ಥಿತಿಯಿತ್ತು. ಈ ಬಾರಿಯೂ ಅಜಿತ ಡೊವಾಲ ಅವರು ಸ್ವತಃ ಚೀನಾಕ್ಕೆ ಹೋಗಿ ಮಾತುಕತೆ ನಡೆಸಿದ್ದರು. ನಂತರ ಈ ಉದ್ವಿಗ್ನತೆ ಕಡಿಮೆಯಾಯಿತು ಮತ್ತು ಕೆಲವು ತಿಂಗಳುಗಳ ನಂತರ ಎರಡೂ ದೇಶಗಳು ಸೈನ್ಯವನ್ನು ಹಿಂಪಡೆದವು.

೧೫. ಜಮ್ಮು-ಕಾಶ್ಮೀರದಲ್ಲಿ ೩೭೦ ನೇ ವಿಧಿ ರದ್ದತಿಯ ನಂತರ ಉದ್ವಿಗ್ನತೆ ಶಮನಗೊಳಿಸಲು ಪ್ರಯತ್ನ

ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರವು ಜಮ್ಮು-ಕಾಶ್ಮೀರದಲ್ಲಿನ ೩೭೦ ನೇ ವಿಧಿ (ವಿಶೇಷ ರಾಜ್ಯದ ಸ್ಥಾನಮಾನ ನೀಡುವ ವಿಧಿ) ಮತ್ತು ‘೫ ಎ’ (ಸ್ವಾಯತ್ತತೆ ನೀಡುವ ವಿಧಿ) ಈ ಎರಡೂ ವಿಧಿಗಳನ್ನು ರದ್ದುಗೊಳಿಸಿತು. ಆ ವಿಧಿಗಳನ್ನು ರದ್ದುಗೊಳಿಸಿದ್ದರಿಂದ ಕಾಶ್ಮೀರದಲ್ಲಿ ಆಕ್ರೋಶ ಭುಗಿಲೇಳಬಹುದು ಎಂದು ಹೇಳಲಾಗುತ್ತಿತ್ತು; ಆದರೆ ಹಾಗೇನೂ ಸಂಭವಿಸಲಿಲ್ಲ. ಸೈನ್ಯವು ಕಾಶ್ಮೀರದ ಪರಿಸ್ಥಿತಿಯನ್ನು ಪೂರ್ಣ ನಿಯಂತ್ರಣದಲ್ಲಿ ಇಟ್ಟಿತ್ತು. ಈ ಸಮಯದಲ್ಲಿ ಎಲ್ಲಾ ವಾಹಿನಿಗಳಲ್ಲಿ ಒಂದು ಮಹತ್ವದ ದೃಶ್ಯವನ್ನು ತೋರಿಸಲಾಗುತ್ತಿತ್ತು, ಅದೇನೆಂದರೆ ಅಜಿತ ಡೊವಾಲ ಅವರು ಸ್ವತಃ ಕಾಶ್ಮೀರದ ಗಲ್ಲಿಗಲ್ಲಿಗಳಲ್ಲಿ ಮತ್ತು ವೃತ್ತಗಳಲ್ಲಿ ಸಂಚರಿಸಿ ಜನರಿಗೆ ಶಾಂತವಾಗಿರಲು ಮನವಿ ಮಾಡುತ್ತಿದ್ದರು.

೧೬. ಭಾರತದ ಹೆಮ್ಮೆ ಅಜಿತ ಡೊವಾಲ !

ಅಜಿತ ಡೊವಾಲ ಅವರ ಒಟ್ಟಾರೆ ಸಾಧನೆ, ಅವರು ಮಾಡಿದ ಸಾಹಸಗಳು, ಅವರ ವ್ಯಕ್ತಿತ್ವದ ದರ್ಪ ಮತ್ತು ಭಯವು ಭಾರತದ ಶತ್ರು ದೇಶಗಳಲ್ಲಿದೆ. ಒಬ್ಬ ವ್ಯಕ್ತಿಯು ತನ್ನ ಬುದ್ಧಿವಂತಿಕೆ, ಗುಣ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ವಿಶೇಷ ಪ್ರಚಾರವಿಲ್ಲದೆ ದೇಶಕ್ಕಾಗಿ ಎಷ್ಟು ದೊಡ್ಡ ಕೆಲಸ ಮಾಡಬಹುದು ಎಂಬುದಕ್ಕೆ ಅಜಿತ ಡೊವಾಲ ಅವರೇ ಉದಾಹರಣೆ. ಇಂತಹ ವ್ಯಕ್ತಿತ್ವಗಳು ದೇಶಕ್ಕಿರುವುದು ಭಾರತದ ಹೆಮ್ಮೆಯ ವಿಷಯವಾಗಿದೆ

– ಶ್ರೀ. ಯಜ್ಞೇಶ ಸಾವಂತ, ಸಹಸಂಪಾದಕರು, ದೈನಿಕ ’ಸನಾತನ ಪ್ರಭಾತ’, ಪನವೇಲ್. (೧೦.೧೨.೨೦೨೫)