ಅದು ೬೦ ವರ್ಷಗಳ ಹಿಂದಿನ, ನವೆಂಬರ್ ೧೯೬೫ ರ ದಿನವಾಗಿತ್ತು. ಎರಡು ‘ಸ್ಟಾರ್’ (ನಕ್ಷತ್ರ ಹೊಂದಿರುವ ಚಿಹ್ನೆ) ಇರುವ ಜನರಲ್ (ಮೇಜರ್ ಜನರಲ್) ಅಮರಿಕ್ ಸಿಂಗ್ ಅವರು ಕೋಪಗೊಂಡಿದ್ದರು ಮತ್ತು ಕಾಳಜಿಯಲ್ಲಿಯೂ ಇದ್ದರು; ಏಕೆಂದರೆ ‘ಚುಯಿ ನಾರ್’ ಬೆಟ್ಟ ಇನ್ನೂ ಪಾಕಿಸ್ತಾನಿ ಸೇನೆಯ ವಶದಲ್ಲಿತ್ತು. ಗಾಯದ ಮೇಲೆ ಉಪ್ಪು ಸವರಿದಂತೆ, ಆ ಬೆಟ್ಟದ ಮೇಲಿನ ಆಕ್ರಮಣವನ್ನು ಅಧಿಕಾರಿ ಮತ್ತು ಅವರ ತುಕಡಿಯ ಸೈನಿಕರು ಮುನ್ನಡೆಸುತ್ತಿದ್ದರು. ದುರದೃಷ್ಟವಶಾತ್ ಶತ್ರುಗಳ ‘ಮಷಿನಗನ್‌ಗಳ’ ದಾಳಿಗೆ ನಮ್ಮ ಸೈನಿಕರು ಬಲಿಯಾಗುತ್ತಿದ್ದರು ಮತ್ತು ಆ ಹುತಾತ್ಮರ ಅಂತ್ಯಸಂಸ್ಕಾರವು ಇನ್ನೂ ನೆರವೇರಬೇಕಿತ್ತು.

೧. ‘ಚುಯಿ ನಾರ್’ ಬೆಟ್ಟವನ್ನುವಶಪಡಿಸಿಕೊಂಡ ಪಾಕಿಸ್ತಾನಿ ಸೇನೆ
ಮೇಜರ್ ಜನರಲ್ ಅಮರಿಕ್ ಸಿಂಗ್‌ರವರ ಪ್ರಮುಖರಾದ ಜನರಲ್ ಹರಬಕ್ಷ್ ಸಿಂಗ್ ಅವರು ಭಾರತೀಯ ಸೇನೆಯ ಪಶ್ಚಿಮ ಕಮಾಂಡ್‌ನ ‘ಆರ್ಮಿ ಕಮಾಂಡರ್’ ಆಗಿದ್ದರು. ಜನರಲ್ ಹರಬಕ್ಷ್ ಸಿಂಗ್ ಅವರು ಅವರಿಗೆ, ‘ಅಮರಿಕ್, ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಮುಂದಿರುವ ಬೆಟ್ಟವನ್ನು ಗೆಲ್ಲಲೇಬೇಕು !’ ಎಂದರು. ಅದು ೧೯೬೫ ರ ಭಾರತ-ಪಾಕಿಸ್ತಾನ ಯುದ್ಧವಾಗಿತ್ತು. ಆ ಯುದ್ಧಕ್ಕೆ ಪ್ರಸ್ತುತ ವರ್ಷ ೨೦೨೫ ಕ್ಕೆ ೬೦ ವರ್ಷಗಳು (ವಜ್ರ ಮಹೋತ್ಸವ) ತುಂಬಿದೆ. ಮೇಜರ್ ಜನರಲ್ ಅಮರಿಕ್ ಸಿಂಗ್ ಇವರು ‘ಕ್ರಮಾಂಕ ೨೫ ಇನ್‌ಫೆಂಟ್ರಿ ಡಿವಿಜನ್‌ನ’ ‘ಜನರಲ್ ಆಫೀಸರ್ ಕಮಾಂಡಿಂಗ್’ ಆಗಿದ್ದರು. ಹಾಗೆ ನೋಡಿದರೆ, ಯುದ್ಧವು ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿಯೇ ಮುಕ್ತಾಯಗೊಂಡಿತ್ತು; ಆದರೆ ಜಮ್ಮು-ಕಾಶ್ಮೀರದ ರಾಜೌರಿ ಸೆಕ್ಟರ್‌ನಲ್ಲಿರುವ ನಿಯಂತ್ರಣ ರೇಖೆಯ ಬಳಿ ‘ಚುಯಿ ನಾರ್’ ಹೆಸರಿನ ಬೆಟ್ಟದ ಮೇಲೆ ಅಥವಾ ಅದರ ಸುತ್ತಮುತ್ತ ಭಾರತೀಯ ಸೈನ್ಯ ಇಲ್ಲವೆಂದು ತಿಳಿದ ಮೇಲೆ, ಪಾಕಿಸ್ತಾನಿ ಸೇನೆಯು ಅದನ್ನು ಗುಪ್ತವಾಗಿ ವಶಪಡಿಸಿಕೊಂಡಿತ್ತು. ರಾಜೌರಿ ಸೆಕ್ಟರ್‌ನಲ್ಲಿನ ಮೆಂಡಾರ್-ಬಾಲ್ನೋಯಿ ರಸ್ತೆಯು ‘ಚುಯಿ ನಾರ್’ ಬೆಟ್ಟದ ಕೆಳಗಿನಿಂದ ಹಾದು ಹೋಗುತ್ತಿತ್ತು. ‘ಚುಯಿ ನಾರ್’ ಬೆಟ್ಟದಿಂದ ತೋಪುಗಳ ದಾಳಿ ನಡೆದರೆ, ಮೆಂಡಾರ್-ಬಾಲ್ನೋಯಿ ರಸ್ತೆಯ ಮೇಲಿನಿಂದ ಹಗಲಿನಲ್ಲೂ ಸಹ ಸಂಚಾರ ಮಾಡುವುದು ಅಸಾಧ್ಯವಾಗಿತ್ತು.

೨. ‘ಚುಯಿ ನಾರ್’ ಬೆಟ್ಟವನ್ನು ವಶಕ್ಕೆ ಪಡೆಯಲು ಭಾರತದ ‘ಕ್ರಮಾಂಕ ೫ ಸಿಕ್ಖ್ ಲೈಟ್ ಇನ್‌ಫೆಂಟ್ರಿ ಬಟಾಲಿಯನ್’ ನ ಸಿದ್ಧತೆ
‘ಚುಯಿ ನಾರ್’ ಬೆಟ್ಟವನ್ನು ಪಾಕಿಸ್ತಾನಿ ಸೈನ್ಯದಿಂದ ಮರಳಿ ಪಡೆಯಲು ‘ಕ್ರಮಾಂಕ ೫ ಸಿಕ್ಖ್ ಲೈಟ್ ಇನ್‌ಫೆಂಟ್ರಿ ಬಟಾಲಿಯನ್’ ಆಕ್ರಮಣ ಮಾಡಲು ನಿರ್ಧರಿಸಿತು. ಆಕ್ರಮಣಕ್ಕೆ ಮುನ್ನ ಬಟಾಲಿಯನ್‌ಅನ್ನು ಭೇಟಿಯಾಗಲು ಮೇಜರ್ ಜನರಲ್ ಅಮರಿಕ್ ಸಿಂಗ್ ಹೋದರು. ಆ ಬಟಾಲಿಯನ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಸಂತ ಸಿಂಗ್ ಅವರು ಮೇಜರ್ ಜನರಲ್ ಅಮರಿಕ್ ಸಿಂಗ್ ಅವರನ್ನು ಸ್ವಾಗತಿಸಿದರು. ಬಟಾಲಿಯನ್‌ನ ಸೈನಿಕರ ಮುಂದೆ ಜನರಲ್ ಅಮರಿಕ್ ಸಿಂಗ್ ಅವರು ಹುರಿದುಂಬಿಸುವ ಭಾಷಣ ಮಾಡಿದರು.
ಭಾಷಣದ ನಂತರ ಒಬ್ಬ ಧೈರ್ಯಶಾಲಿ; ಆದರೆ ಗಡಿಬಿಡಿ ಮಾಡುವ ಜೂನಿಯರ್ ಕಮಿಷನ್ಡ್ ಅಧಿಕಾರಿಯೊಬ್ಬರು ಜನರಲ್ ಅಮರಿಕ್ ಸಿಂಗ್ ಅವರಿಗೆ ಪಂಜಾಬಿ ಭಾಷೆಯಲ್ಲಿ ಭರವಸೆ ನೀಡಲು ಪ್ರಯತ್ನಿಸಿದರು, ‘ತುಸಿ ಪರವಾ ನಾ ಕರೋ ಸಾಬ್. ಸವೇರ ತಕ್ ಅಸ್ಸಿ ಕಬ್ಜಾ ಕರ್ ಲೇನಾ ಹೈ, ತೇ ದುಶ್ಮನ್‌ನೂ ಭಗಾ ದೇನಾ ಹೈ’ (ಸಾಬ್, ನೀವು ಖಂಡಿತ ಚಿಂತೆ ಮಾಡಬೇಡಿ. ಬೆಳಗಿನ ಜಾವದ ವೇಳೆಗೆ ನಾವು ಬೆಟ್ಟವನ್ನು ಗೆದ್ದು ಶತ್ರುವನ್ನು ಓಡಿಸಿ ಬಿಡುತ್ತೇವೆ ನೋಡಿ !). ಜನರಲ್ ಸಾಹೇಬರು ಅವರಿಗೆ ಉತ್ತರ ನೀಡಿದರು, ‘ದುಶ್ಮನ್ ಕೋಯಿ ಮಿಠಾಯಿ ಲೇ ಕೆ ನಹಿ ಬೈಠಾ ಹೈ ವಹಾಂ, ಜೋ ಆಪ್ ಕೋ ಲಡ್ಡು ದೇಗಾ ?’ (ಶತ್ರುವೇನು ಅಲ್ಲಿ ನಿಮಗಾಗಿ ಮಿಠಾಯಿ ಹಿಡಿದುಕೊಂಡು ಕುಳಿತಿಲ್ಲ, ತಲುಪಿದ ಕೂಡಲೇ ನಿಮಗೆ ಲಡ್ಡು ಕೊಡುವುದಕ್ಕೆ) ಕರ್ನಲ್ ಸಂತ ಸಿಂಗ್ ಅವರು ಜೂನಿಯರ್ ಕಮಿಷನ್ಡ್ ಅಧಿಕಾರಿಗೆ ಸುಮ್ಮನಿರುವಂತೆ ಸನ್ನೆ ಮಾಡಿದರು ಮತ್ತು ಆ ಸಂಭಾಷಣೆ ಅಲ್ಲಿಗೆ ನಿಂತಿತು.
೩. ‘ಸಿಕ್ಖ್ ಲೈಟ್ ಇನ್‌ಫೆಂಟ್ರಿ’ಯ ಸಿದ್ಧತೆ ಮತ್ತು ಪಾಕ್ ಸೈನಿಕರ ಮೇಲೆ ಆಕ್ರಮಣ
ಇದಕ್ಕೂ ಹಿಂದಿನ ಆಕ್ರಮಣಗಳನ್ನು ಹಿಮ್ಮೆಟ್ಟಿಸಿದ ನಂತರ ಪಾಕಿಸ್ತಾನಿ ಸೈನ್ಯವು ‘ಚುಯಿ ನಾರ್’ ಬೆಟ್ಟದ ಮೇಲೆ ಹೆಚ್ಚಿನ ಸೈನಿಕರು ಮತ್ತು ಯುದ್ಧಸಾಮಗ್ರಿಗಳನ್ನು ತಂದಿದ್ದರು, ಅದರ ಜೊತೆಗೆ ಬೆಟ್ಟದ ಸುತ್ತಲೂ ಸುರಂಗ ಬಾಂಬ್‌ಗಳನ್ನು (ಭೂಮಿಯಡಿ) ಹುಗಿದು ರಕ್ಷಣಾ ವ್ಯವಸ್ಥೆಯನ್ನು ಕಠಿಣಗೊಳಿಸಿತ್ತು. ಇದರಿಂದ ದಟ್ಟ ಕಾಡಾಗಿರುವ ‘ಚುಯಿ ನಾರ್’ ಬೆಟ್ಟವನ್ನು ಆಕ್ರಮಿಸಿ ಗೆಲ್ಲುವುದು ಬಹುತೇಕ ಅಸಾಧ್ಯವಾಗಿತ್ತು. ಭಾರತೀಯ ಸೈನ್ಯವು ಮತ್ತೆ ಆಕ್ರಮಣ ಮಾಡುತ್ತದೆ ಎಂದು ಪಾಕಿಸ್ತಾನಿ ಸೈನ್ಯಕ್ಕೆ ತಿಳಿದಿತ್ತು. ಭಾರತೀಯ ಸೈನ್ಯ ಯಾವಾಗ ಆಕ್ರಮಣ ಮಾಡುವುದು ಮತ್ತು ಅವರು ಅವರ ಮಷಿನ್‌ಗನ್‌ಗಳಿಂದ ಯಾವಾಗ ದಾಳಿ ಮಾಡುವರು ಎಂದು ಅವರು (ಪಾಕಿಸ್ಥಾನಿ ಸೈನ್ಯ) ಕಾಯುತ್ತಿದ್ದರು.
೨ ನವೆಂಬರ್ ೧೯೬೫ ರಂದು, ‘ಕ್ರಮಾಂಕ ೫ ಸಿಕ್ಖ್ ಲೈಟ್ ಇನ್‌ಫೆಂಟ್ರಿ’ ಬಟಾಲಿಯನ್‌ನ ೫೦೦ ಸೈನಿಕರು ಆಕ್ರಮಣಕ್ಕಾಗಿ ಭರ್ಜರಿ ಸಿದ್ಧತೆ ಮಾಡಿದರು. ಸೂರ್ಯಾಸ್ತವಾಗಿ ಕತ್ತಲಾದ ಕೂಡಲೇ ಸೈನಿಕರು ‘ಪೋರ್ಟೆಬಲ್ ವಾಟರ್ ಬಾಟಲ್ಸ್’ಗಳಲ್ಲಿ (ಸುಲಭವಾಗಿ ಒಯ್ಯಬಹುದಾದ ನೀರಿನ ಬಾಟಲಿಗಳು) ಕುಡಿಯುವ ನೀರನ್ನು ತುಂಬಿಕೊಂಡರು, ಬಂದೂಕಿನ ಗುಂಡುಗಳನ್ನು ಅವುಗಳ ಮ್ಯಾಗಜಿನ್‌ಗಳಲ್ಲಿ ತುಂಬಿ ಬಂದೂಕುಗಳಿಗೆ ಏರಿಸಿದರು, ಬಂದೂಕುಗಳ ಮೇಲೆ ಸಂಗಿನಿಗಳನ್ನು (ಚೂರಿಗಳನ್ನು) ಸೇರಿಸಿದರು. ರಾತ್ರಿಯ ಕತ್ತಲೆಯಲ್ಲಿ ದಟ್ಟವಾದ ಕಾಡಿನ ಮೂಲಕ ಶತ್ರುಗಳಿಗೆ ಸುಳಿವೂ ಸಿಗದಂತೆ ೫೦೦ ಸಿಕ್ಖ್ ಸೈನಿಕರು ೨ ಗಂಟೆಗಳ ಕಾಲ ಮಾರ್ಗಕ್ರಮಣ ಮಾಡಿ ‘ಚುಯಿ ನಾರ್’ ಬೆಟ್ಟದ ಸಮೀಪ ತಲುಪಿದರು. ವಾಸ್ತವದಲ್ಲಿ, ಶತ್ರು ಹತ್ತಿರದಲ್ಲಿರುವಾಗ ಯಾವುದೇ ಶಬ್ದ ಮಾಡುವುದು ನಿಯಮಗಳ ವಿರುದ್ಧವಾಗಿರುತ್ತದೆ. ಅತ್ಯಂತ ಕರಾಳವಾದ ಮಧ್ಯರಾತ್ರಿಯಲ್ಲಿ, ಬಿಗುಲ್ ನ ಶಬ್ದದಿಂದ ‘ಚುಯಿ ನಾರ್’ ಬೆಟ್ಟ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ನಡುಗಿತು.
ಪಾಕಿಸ್ತಾನಿ ಸೈನಿಕರು ದಿಗ್ಭ್ರಮೆಗೊಂಡು ತಮ್ಮ ಮಷಿನ್ ಗನ್‌ಗಳ ಮೂಲಕ ಗುಂಡುಗಳನ್ನು ಹಾರಿಸಲು ಆರಂಭಿಸಿದರು. ಸತತವಾಗಿ ಹಾರಿಸಿದ ಮಷಿನ್‌ಗನ್‌ಗಳ ಗುಂಡುಗಳಿಂದಾಗಿ ರಾತ್ರಿಯಾದರೂ ಹಗಲಿನಂತೆ ಬೆಳಕಿನ ಅನುಭವವಾಯಿತು. ಸೈನಿಕರ ನೆರಳುಗಳು ದಟ್ಟವಾದ ಕಾಡಿನಲ್ಲಿ ಸುತ್ತಾಡುತ್ತಿದ್ದವು. ತೋಪುಗಳ ಗುಂಡುಗಳು ಬೆಂಕಿಯನ್ನು ಕಾರುತ್ತಿದ್ದವು. ತೋಪುಗುಂಡುಗಳ ಬಿಸಿಯಾದ ‘ಶಾರ್ಪ್‌ನೆಲ್ಸ್’ಗಳು ಸೈನಿಕರ ದೇಹವನ್ನು ಭೇದಿಸುತ್ತಿದ್ದವು. ಮಷಿನ್ ಗನ್‌ಗಳಿಂದ ಗುಂಡುಗಳ ನಿರಂತರ ದಾಳಿ ನಡೆಯುತ್ತಿತ್ತು. ಕ್ಷಣಕಾಲ ಆಕ್ರಮಣದ ವೇಗವು ಕಡಿಮೆಯಾಗುತ್ತಿದೆ ಎಂದು ಅನಿಸಿತು. ‘ಚುಯಿ ನಾರ್’ ಬೆಟ್ಟದ ಶತ್ರುಗಳ ಹಿಂಭಾಗದ ಏರಿಕೆಯು ಬಹಳ ಕಠಿಣದಾಗಿತ್ತು. ಭಾರತೀಯ ಸೇನೆಯು ಹಿಂಭಾಗದಿಂದ ಏರುವುದಿಲ್ಲ ಎಂದು ಪಾಕಿಸ್ತಾನಿ ಸೈನ್ಯವು ಭಾವಿಸಿತ್ತು; ಆದರೆ ಆಶ್ಚರ್ಯವೇನೆಂದರೆ, ಅದೇ ಸಿಕ್ಖ್ ಲೈಟ್ ಇನ್‌ಫೆಂಟ್ರಿಯ ಪ್ರಮುಖ ಕೌಶಲ್ಯವಾಗಿತ್ತು. ೨೦೦ ಸಿಕ್ಖ್ ಸೈನಿಕರು ‘ಚುಯಿ ನಾರ್’ ಬೆಟ್ಟದ ಹಿಂಭಾಗದಿಂದ ಏರಿ ಶತ್ರುಗಳ ಮೇಲೆ ಅನಿರೀಕ್ಷಿತ ಆಕ್ರಮಣ ಮಾಡಿದರು. ಹಿಂದಿನಿಂದ ಕೇಳಿ ಬಂದ ‘ಬೋಲೇ ಸೋ ನಿಹಾಲ್, ಸತ್ ಶ್ರೀ ಅಕಾಲ್’ ಎಂಬ ಜಯಘೋಷವನ್ನು ಕೇಳಿ ಶತ್ರು ಸೈನಿಕರು ಬೆಚ್ಚಿಬಿದ್ದರು.
ತೋಪುಗಳು ಮತ್ತು ಮಷಿನ್ ಗನ್‌ಗಳ ಮುಖಗಳನ್ನು ಹಿಂದಕ್ಕೆ ತಿರುಗಿಸಿ ಆಕ್ರಮಣ ಮಾಡುವಷ್ಟರಲ್ಲಿ ೨೦೦ ಸಿಕ್ಖ್ ಸೈನಿಕರು ಶತ್ರುಗಳ ಬಹಳಷ್ಟು ಸೈನಿಕರನ್ನು ಕೊಂದು ಹಾಕಿದ್ದರು.
೪. …ಕೊನೆಗೂ ‘ಚುಯಿ ನಾರ್’ಬೆಟ್ಟ ಭಾರತೀಯ ಸೇನೆಯ ವಶಕ್ಕೆ !
ಮುಂದಿನ ೮ ಗಂಟೆಗಳ ಕಾಲ ತೀವ್ರ ಕದನ ನಡೆಯಿತು. ಮಷಿನ್ ಗನ್‌ಗಳು, ಬಂದೂಕುಗಳು, ತೋಪುಗಳು, ‘ಹ್ಯಾಂಡ್ ಗ್ರೆನೇಡ್‌ಗಳ’ ನಿರಂತರ ದಾಳಿ, ಸೈನಿಕರ ಆರ್ಭಟ, ಗಾಯಾಳುಗಳ ಆಕ್ರಂದನ ಇವುಗಳಿಂದ ವಾತಾವರಣವು ತುಂಬಿಹೋಗಿತ್ತು. ಕೈ ಕೈ ಮಿಲಾಯಿಸಿದ ಯುದ್ಧದಲ್ಲಿ ಸಂಗಿನಗಳನ್ನು (ಚೂರಿಗಳನ್ನು)ಹೆಚ್ಚಾಗಿ ಬಳಸಲಾಯಿತು. ಮುಂಜಾನೆ ಆಗುವುದರೊಳಗೆ ‘ಚುಯಿ ನಾರ್’ ಬೆಟ್ಟವು ಭಾರತೀಯ ಸೇನೆಯ ವಶವಾಯಿತು. ಯಶಸ್ವಿ ಆಕ್ರಮಣದ ನಾಯಕರಾದ, ಬಟಾಲಿಯನ್ ಕಮಾಂಡರ್, ಲೆಫ್ಟಿನೆಂಟ್ ಕರ್ನಲ್ ಸಂತ ಸಿಂಗ್ ಅವರು ‘ಚುಯಿ ನಾರ್’ ಬೆಟ್ಟದ ಮೇಲೆ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. ಕಾರ್ಯಾಚರಣೆ ಯಶಸ್ವಿಯಾದ ಸಂದೇಶವನ್ನು ಮುಖ್ಯಕಛೇರಿಗೆ ಕಳುಹಿಸಲಾಯಿತು.
‘ಕ್ರಮಾಂಕ ೫ ಸಿಕ್ಖ್ ಲೈಟ್ ಇನ್‌ಫೆಂಟ್ರಿ’ ಬಟಾಲಿಯನ್‌ಗೆ ಶಾಬಾಶ್ ಹೇಳಲು ಮೇಜರ್ ಜನರಲ್ ಅಮರಿಕ್ ಸಿಂಗ್ ಮಧ್ಯಾಹ್ನದ ವೇಳೆಗೆ ‘ಚುಯಿ ನಾರ್’ ಬೆಟ್ಟಕ್ಕೆ ಬಂದು ತಲುಪಿದರು. ಧೈರ್ಯಶಾಲಿ; ಆದರೆ ಅವಸರ ಮಾಡುವ ಜೂನಿಯರ್ ಕಮಿಷನ್ಡ್ ಅಧಿಕಾರಿ ಅವರ ಸ್ವಾಗತಕ್ಕಾಗಿ ಮುಂದೆ ಬಂದರು. ಅವರ ಕೈಯಲ್ಲಿ ೨ ಚೀಲಗಳಿದ್ದವು. ಅವರು ಆ ಎರಡೂ ಚೀಲಗಳನ್ನು ಜನರಲ್ ಸಾಹೇಬರ ಮುಂದೆ ಖಾಲಿ ಮಾಡಿದರು. ಅವುಗಳಲ್ಲಿ ಪಾಕಿಸ್ತಾನಿ ಸೈನಿಕರ ೨ ಡಜನ್ ‘ಹ್ಯಾಂಡ್ ಗ್ರೆನೇಡ್‌ಗಳು’ ಮತ್ತು ಡಜನ್ ಶಸ್ತ್ರಾಸ್ತ್ರಗಳು ಹೊರಬಿದ್ದವು. ಜೂನಿಯರ್ ಕಮಿಷನ್ಡ್ ಅಧಿಕಾರಿ ಜನರಲ್ ಸಾಹೇಬರಿಗೆ, ‘ಮೈಂ ಭಲಾ ಲಭಯಾ ಸಾಬ್. ಕೋಯಿ ಲಡ್ಡು ನಯಿ ಲಭೇ. ಪರ್ ತ್ವಾಡೆ ವಾಸ್ತೆ ಏ ಲಡ್ಡು ಲಾಯಾ ಹಾ’ (ಸಾಬ್, ನಾನು ಬಹಳಷ್ಟು ಹುಡುಕಿದೆ; ಆದರೆ ನನಗೆ ಎಲ್ಲಿಯೂ ಲಡ್ಡು ಸಿಗಲಿಲ್ಲ; ಹಾಗಾಗಿ ನಾನು ಈ ಲಡ್ಡುಗಳನ್ನು ನಿಮಗಾಗಿ ತಂದಿದ್ದೇನೆ) ಎಂದು ಹೇಳಿದರು. ಜನರಲ್ ಸಾಹೇಬರು ದೊಡ್ಡದಾಗಿ ನಕ್ಕು ಜೂನಿಯರ್ ಕಮಿಷನ್ಡ್ ಅಧಿಕಾರಿಯನ್ನು ಅಪ್ಪಿಕೊಂಡರು.
೫. ‘ಕ್ರಮಾಂಕ ೫ ಸಿಕ್ಖ್ ಲೈಟ್ ಇನ್‌ಫಂಟ್ರಿ’ ಬಟಾಲಿಯನ್ ಮತ್ತು ಸೇನಾಧಿಕಾರಿಗಳಿಗೆ ದೊರೆತ ಗೌರವ
‘ಕ್ರಮಾಂಕ ೫ ಸಿಕ್ಖ್ ಲೈಟ್ ಇನ್‌ಫೆಂಟ್ರಿ’ ಬಟಾಲಿಯನ್ ಮತ್ತು ‘ಆಪರೇಷನ್ ಹಿಲ್’ನ ‘ಬ್ಯಾಟಲ್ ಆನರ್’ (ಬಟಾಲಿಯನ್ನಿನ ಚಿಹ್ನೆಯ ಮೇಲೆ ಆ ಯುದ್ಧದ ‘ತಮಗಾ’ (ಗೌರವ ಚಿಹ್ನೆ) ಅಳವಡಿಸುವ ಗೌರವವನ್ನು ನೀಡಲಾಗುತ್ತದೆ) ನೀಡಲಾಯಿತು ಮತ್ತು ಬಟಾಲಿಯನ್ ಕಮಾಂಡರ್, ಲೆಫ್ಟಿನೆಂಟ್ ಕರ್ನಲ್ ಸಂತಸಿಂಗ್ ಅವರನ್ನು ‘ಮಹಾವೀರ ಚಕ್ರ’ (ಭಾರತದಲ್ಲಿ ಎರಡನೇ ಅತ್ಯುನ್ನತ ಶೌರ್ಯ ಪದಕ) ನೀಡಿ ಸನ್ಮಾನಿಸಲಾಯಿತು. ‘ಚುಯಿ ನಾರ್’ ಬೆಟ್ಟದ ಆ ತೀವ್ರ ಹೋರಾಟದಲ್ಲಿ ದುರದೃಷ್ಟವಶಾತ್ ೩೮ ಜನ ಸೈನಿಕರು ಹುತಾತ್ಮರಾಗಿದ್ದರು ಮತ್ತು ೧೦೦ ಸೈನಿಕರು ಗಾಯಗೊಂಡಿದ್ದರು. – ವಿಂಗ್ ಕಮಾಂಡರ್ ವಿನಾಯಕ ಪುರುಷೋತ್ತಮ ದಾವರೆ (ನಿವೃತ್ತ)
ಮುಂದೆ ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಕರ್ನಲ್ ಸಂತ ಸಿಂಗ್ ಅವರಿಗೆ ಅವರ ಶೌರ್ಯಕ್ಕಾಗಿ ಮತ್ತೆ ‘ಮಹಾವೀರ ಚಕ್ರ’ ನೀಡಿ ಸನ್ಮಾನಿಸಲಾಯಿತು. ಮುಂದೆ ವರ್ಷಗಳು ವೇಗವಾಗಿ ಸಾಗಿದವು. ಭಾರತದ ವಿವಿಧ ಗಡಿಗಳಲ್ಲಿ ಕಾರ್ಯನಿರ್ವಹಿಸಿದ ನಂತರ ೨೩ ವರ್ಷಗಳ ನಂತರ ‘ಕ್ರಮಾಂಕ ೫ ಸಿಕ್ಖ್ ಲೈಟ್ ಇನ್‌ಫೆಂಟ್ರಿ’ ಬಟಾಲಿಯನ್ ೧೯೬೫ ರ ನಂತರ ಪುನಃ ಜಮ್ಮು-ಕಾಶ್ಮೀರದ ರಾಜೌರಿ ಸೆಕ್ಟರ್‌ನಲ್ಲಿ ನಿಯೋಜಿಸಲ್ಪಟ್ಟಿತ್ತು.
೬. ವಯೋವೃದ್ಧರಾದ ಬ್ರಿಗೇಡಿಯರ್ ಸಂತ ಸಿಂಗ್ (ನಿವೃತ್ತ) ಅವರು ಹುತಾತ್ಮ ಸೈನಿಕರ ಸನ್ಮಾನಕ್ಕಾಗಿ ‘ಚುಯಿ ನಾರ್’ ಬೆಟ್ಟವನ್ನು ಏರುವುದು !

ವರ್ಷ ೧೯೯೦ ರಲ್ಲಿ ‘ಕ್ರಮಾಂಕ ೫ ಸಿಕ್ಖ್ ಲೈಟ್ ಇನ್‌ಫೆಂಟ್ರಿ’ ಬಟಾಲಿಯನ್ ೧೯೬೫ ರ ಭಾರತ-ಪಾಕಿಸ್ತಾನ ಯುದ್ಧದ ಮತ್ತು ಅವರ ‘ಆಪರೇಷನ್ ಹಿಲ್ ಬ್ಯಾಟಲ್ ಆನರ್’ನ (ಯುದ್ಧದ ವಿಜಯೋತ್ಸವ ಕಾರ್ಯಕ್ರಮ) ರಜತ ಮಹೋತ್ಸವವನ್ನು ಆಚರಿಸುತ್ತಿತ್ತು. ರಜತ ಮಹೋತ್ಸವದ ನಿಮಿತ್ತ ಬಟಾಲಿಯನ್‌ನ ೩೮ ಹುತಾತ್ಮ ಸೈನಿಕರ ಬಲಿದಾನವನ್ನು ವಿಶೇಷವಾಗಿ ಗೌರವಿಸಲು ವಯೋವೃದ್ಧರಾದ ಬ್ರಿಗೇಡಿಯರ್ ಸಂತ ಸಿಂಗ್ (ನಿವೃತ್ತ) ಅವರನ್ನು ಆಹ್ವಾನಿಸಿ ಕರೆಸಲಾಗಿತ್ತು. ‘ಕ್ರಮಾಂಕ ೫ ಸಿಕ್ಖ್ ಲೈಟ್ ಇನ್‌ಫೆಂಟ್ರಿ’ ಬಟಾಲಿಯನ್ನಿನ ಸೈನಿಕರು ಸಮಾರಂಭಕ್ಕಾಗಿ ‘ಚುಯಿ ನಾರ್’ ಬೆಟ್ಟದ ಕಡೆಗೆ ಸಾಗಿದರು. ಇನ್ನೂ ಬೆಟ್ಟದ ಮೇಲೆ ವಾಹನ ಹೋಗಲು ರಸ್ತೆ ಇರಲಿಲ್ಲ, ಕೇವಲ ಕಾಲುದಾರಿಯಿಂದಲೇ ಹೋಗಬೇಕಾಗಿತ್ತು. ವಯೋವೃದ್ಧ ಬ್ರಿಗೇಡಿಯರ್ ಸಂತ ಸಿಂಗ್ (ನಿವೃತ್ತ) ಅವರಿಗಾಗಿ ಒಂದು ಬಲಿಷ್ಠ ಕುದುರೆಯನ್ನು ತರಲಾಯಿತು. ಹೊಸ ಬಟಾಲಿಯನ್ ಕಮಾಂಡರ್‌ಗಳು ಬ್ರಿಗೇಡಿಯರ್ ಸಂತ ಸಿಂಗ್ (ನಿವೃತ್ತ) ಅವರಿಗೆ ಕುದುರೆಯನ್ನು ಏರುವಂತೆ ವಿನಂತಿಸಿದರು. ಕಣ್ಣುಗಳಲ್ಲಿ ಹೊಳಪಿದ್ದ ಬ್ರಿಗೇಡಿಯರ್ ಸಂತ ಸಿಂಗ್ (ನಿವೃತ್ತ) ಅವರು ನಕ್ಕರು. ಅವರು, ‘ಆಪರೇಷನ್ ಹಿಲ್ ಪೇ ತೋ ಸಂತ ಸಿಂಗ್ ಅಪ್ನೆ ಪೈರೋಂ ಸೆ ಹಿ ಚಲ್ ಕೆ ಜಾಯೇಗಾ’ (‘ಚುಯಿ ನಾರ್’ ಬೆಟ್ಟದ ಮೇಲೆ ಸಂತ ಸಿಂಗ್ ಸ್ವತಃ ನಡೆದುಕೊಂಡು ಹೋಗುವರು!) ಎಂದು ಉತ್ತರಿಸಿದರು. ಮುಂದಿನ ಅರ್ಧ ಗಂಟೆಯಲ್ಲಿ ‘ಆಪರೇಷನ್ ಹಿಲ್’ನ ‘ಚುಯಿ ನಾರ್’ ಬೆಟ್ಟದ ಮೇಲೆ ಗಟ್ಟಿಗರಾದ ವಯೋವೃದ್ಧ ಬ್ರಿಗೇಡಿಯರ್ ಸಂತ ಸಿಂಗ್ (ನಿವೃತ್ತ) ಅವರು ದಣಿವರಿಯದೆ ಹತ್ತಿ ಹೋದರು. ಬ್ರಿಗೇಡಿಯರ್ ಸಂತ ಸಿಂಗ್ (ನಿವೃತ್ತ) ಅವರು ೨೦೧೫ ರಲ್ಲಿ ತಮ್ಮ ೯೪ ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
– ವಿಂಗ್ ಕಮಾಂಡರ್ ವಿನಾಯಕ ಪುರುಷೋತ್ತಮ ದಾವರೆ (ನಿವೃತ್ತ), ಪುಣೆ. (೫.೧೧.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಜನರಲ್ ಸುಬ್ರಮಣಿ ಅವರು ದೇಶದ ನೂತನ ಸಿ.ಡಿ.ಎಸ್.