ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ನಾಸಾ’ದಲ್ಲಿನ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ತಮ್ಮ ೨೭ ವರ್ಷಗಳ ಸೇವೆಯ ನಂತರ ಅಧಿಕೃತವಾಗಿ ನಿವೃತ್ತರಾಗಿದ್ದಾರೆ. ಅವರು ನಿವೃತ್ತರಾಗಿದ್ದರೂ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಭವಿಷ್ಯದ ಅನೇಕ ಅಭಿಯಾನಗಳ ಯೋಜನೆಯನ್ನು ಮೊದಲೇ ರೂಪಿಸಿಟ್ಟಿದ್ದಾರೆ. ಇದರ ಪರಿಣಾಮ ಭವಿಷ್ಯದಲ್ಲಿ ನಮಗೆ ನೋಡಲು ಸಿಗಲಿದೆ !

ಚಂದ್ರನ ಮೇಲೆ ಹೋಗುವ ‘ಆರ್ಟೆಮಿಸ್’ ಯೋಜನೆ ಮತ್ತು ಮಂಗಳಗ್ರಹದ ಯೋಜನೆಗಳು ಶೀಘ್ರದಲ್ಲೇ ಸುನೀತಾ ಅವರಿಂದಾಗಿ ಕಾರ್ಯರೂಪಕ್ಕೆ ಬರಲಿವೆ. ಆದ್ದರಿಂದ ಇದು ನಿವೃತ್ತಿಯಲ್ಲ, ಬದಲಾಗಿ ಬಾಹ್ಯಾಕಾಶ ಸಂಶೋಧನೆಯ ಪುನರಾರಂಭವಾಗಲಿದೆ. ಛಲ, ವಿಜ್ಞಾನನಿಷ್ಠೆ, ಶಿಸ್ತು ಮತ್ತು ಧೈರ್ಯದ ಸಂಗಮವಾಗಿರುವ ಸುನೀತಾ ವಿಲಿಯಮ್ಸ್ ಅವರು ‘ನಾಸಾ’ ಮತ್ತು ‘ಇಸ್ರೋ’ ಎರಡಕ್ಕೂ ಸ್ಫೂರ್ತಿಯಾಗಿದ್ದಾರೆ. ‘ಇಸ್ರೋ’ ಮುಖ್ಯಸ್ಥ ಶ್ರೀಧರ ಸೋಮನಾಥ ಅವರು ಸಹ ಸುನೀತಾ ಅವರ ಕಾರ್ಯದಕ್ಷತೆಯ ಬಗ್ಗೆ ಅಭಿಮಾನವಿದೆ ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದರು. ಮುಂಬರುವ ಗಗನಯಾತ್ರಿಗಳು ಸುನೀತಾ ಅವರ ಕಾರ್ಯ ಮತ್ತು ಜೀವನದ ಬಗ್ಗೆ ಅಧ್ಯಯನ ಮಾಡಬೇಕು, ಆಗಲೇ ಅವರ ಈ ತೇಜಸ್ವಿ ಅಧ್ಯಾಯದ ಸ್ಮರಣೆ ನಿರಂತರವಾಗಿ ಉಳಿಯಲು ಸಾಧ್ಯ.

ಸುನೀತಾ ಅವರ ಜೀವನದಲ್ಲಿ ಪರಿಶ್ರಮ, ಸಾತತ್ಯ ಮತ್ತು ಕೌಶಲ್ಯ ಎಂಬ ತ್ರಿಸೂತ್ರಗಳು ಕಂಡುಬರುತ್ತವೆ. ಅಮೆರಿಕದ ನೌಕಾಪಡೆಯಲ್ಲಿ ವೈಮಾನಿಕರಾಗಿ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. ತದನಂತರ ‘ನಾಸಾ’ದ ಗಗನಯಾತ್ರಿಗಳ ತಂಡದಲ್ಲಿ ಅವರು ಪ್ರವೇಶ ಪಡೆದರು. ಈ ಪ್ರಯಾಣವು ರೋಮಾಂಚನಕಾರಿಯಾಗಿದೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ತಮ್ಮದೇ ಆದ ವಿಭಿನ್ನ ಗುರುತನ್ನು ನಿರ್ಮಿಸಿಕೊಂಡರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ೩ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರೈಸಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದಿದ್ದಾರೆ. ಅವರು ಒಟ್ಟು ೬೦೮ ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಬೇಕಾಯಿತು. ಇದರಿಂದಾಗಿ ಮಹಿಳೆಯೊಬ್ಬರು ಸುದೀರ್ಘ ಕಾಲ ಬಾಹ್ಯಾಕಾಶದಲ್ಲಿ ನೆಲೆಸಿದ ದಾಖಲೆ ಅವರ ಹೆಸರಿನಲ್ಲೇ ದಾಖಲಾಯಿತು. ಅವರು ಒಟ್ಟು ೯ ಬಾರಿ ಬಾಹ್ಯಾಕಾಶದಲ್ಲಿ ‘ಸ್ಪೇಸ್‌ವಾಕ್’ (ಬಾಹ್ಯಾಕಾಶ ನೌಕೆಯಿಂದ ಹೊರಬಂದು ಗಗನಯಾತ್ರಿ ಮಾಡುವ ದೈಹಿಕ ಚಟುವಟಿಕೆ) ಮಾಡಿದ್ದಾರೆ. ಆ ಅವಧಿಯನ್ನು ೬೨ ಗಂಟೆ ೬ ನಿಮಿಷ ಎಂದು ಗಣಿಸಲಾಗಿದೆ. ಶೂನ್ಯ-ಗುರುತ್ವಾಕರ್ಷಣೆಯಲ್ಲಿ ಸಸ್ಯಗಳ ಬೆಳವಣಿಗೆಗೆ ಸಂಬಂಧಿಸಿದ ವೈಜ್ಞಾನಿಕ ಪ್ರಯೋಗಗಳನ್ನು ಮಾಡುವುದು, ಯಂತ್ರಗಳನ್ನು ದುರಸ್ತಿ ಮಾಡುವುದು ಮತ್ತು ಭೂಮಿಯ ಮೇಲಿನ ವಿಜ್ಞಾನಿಗಳೊಂದಿಗೆ ಸಮನ್ವಯ ಸಾಧಿಸುವುದು ಈ ಕೆಲಸಗಳನ್ನು ಅವರು ಅತ್ಯಂತ ಕೌಶಲ್ಯದಿಂದ ನಿಭಾಯಿಸಿದರು. ಅವರ ಈ ಅಪ್ರತಿಮ ಸಾಧನೆಯ ಬಗ್ಗೆ ನಾಸಾದ ಹೊಸ ಆಡಳಿತಾಧಿಕಾರಿ ಜೆರೆಡ್ ಐಸಾಕ್‌ಮನ್ ಅವರು ‘ಬಾಹ್ಯಾಕಾಶ ಹಾರಾಟ ಕ್ಷೇತ್ರದ ಹರಿಕಾರ’ ಎಂಬ ಶಬ್ದಗಳಿಂದ ಗೌರವಿಸಿದ್ದಾರೆ. ಅವರು ‘ನಾಸಾ’ಗೆ ಸಂಬಂಧಪಟ್ಟವರಾಗಿದ್ದರೂ, ಭಾರತೀಯ ಮೂಲದವರಾಗಿರುವುದರಿಂದ ಅವರ ಹೆಸರನ್ನು ಕೇಳಿದ ಕೂಡಲೇ ಪ್ರತಿಯೊಬ್ಬ ಭಾರತೀಯನ ಎದೆಯು ಹೆಮ್ಮೆಯಿಂದ ಉಬ್ಬುತ್ತದೆ.
ಬಾಹ್ಯಾಕಾಶವನ್ನೇ ಮುಷ್ಠಿಯಲ್ಲಿಟ್ಟುಕೊಂಡರು !
ವರ್ಷ ೨೦೨೪ ರಲ್ಲಿ ಸುನೀತಾ ಅವರನ್ನು ಬೋಯಿಂಗ್ ಕ್ಯಾಪ್ಸುಲ್ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಹಾರಾಟ ನಡೆಸಿದ ಮೊದಲ ಗಗನಯಾತ್ರಿ ಇವರಾಗಿದ್ದರು. ಆ ಕಾರ್ಯವು ಕೇವಲ ಒಂದು ವಾರದ ಅವಧಿಯದ್ದಾಗಿತ್ತು; ಆದರೆ ಸ್ಟಾರ್‌ಲೈನರ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಬಾಹ್ಯಾಕಾಶದಲ್ಲಿ ೯ ತಿಂಗಳಿಗಿಂತ ಹೆಚ್ಚು ಕಾಲ ಇರಬೇಕಾಯಿತು; ಆದರೂ ಧೃತಿಗೆಡದೆ ಅವರು ಆ ಪರಿಸ್ಥಿತಿಯನ್ನು ಸ್ವೀಕರಿಸಿದರು. ನೌಕೆಯಲ್ಲಿ ಅನೇಕ ಬಾರಿ ತಾಂತ್ರಿಕ ದೋಷಗಳು ಉಂಟಾಗುತ್ತಿದ್ದವು. ಅವರ ಬಳಿ ಕೇವಲ ೨೭ ದಿನಗಳಿಗೆ ಸಾಕಾಗುವಷ್ಟು ಇಂಧನ ಇತ್ತು. ‘ನಾವು ಮತ್ತೆ ಸುರಕ್ಷಿತವಾಗಿ ತಲುಪುತ್ತೇವೆಯೇ ?’ ಎಂಬ ಖಾತ್ರಿ ಇರಲಿಲ್ಲ. ದಿನದಿಂದ ದಿನಕ್ಕೆ ಅನಿಶ್ಚಿತತೆ ಹೆಚ್ಚಾಗುತ್ತಲೇ ಇತ್ತು. ಅಂತಹ ಸ್ಥಿತಿಯಲ್ಲಿ ಅವರು ಹೆದರಲಿಲ್ಲ ಅಥವಾ ನಿರಾಶರಾಗಲಿಲ್ಲ. ಆಶಾವಾದಿಯಾಗಿರುವ ಸುನೀತಾ ಅವರ ಸ್ಥಿರತೆ ಮತ್ತು ಸಂಯಮದ ವೃತ್ತಿಯು ಪ್ರತಿಯೊಬ್ಬರಿಗೂ ಕಲಿಯುವಂತಹದ್ದಾಗಿದೆ. ಭೂಮಿಯ ಮೇಲೆ ಕಾಲಿಟ್ಟಾಗಲೂ ಅವರ ಮುಖದಲ್ಲಿ ನಗು ಇತ್ತು, ಇದು ಎಷ್ಟು ದೊಡ್ಡ ವಿಷಯ ! ಸಣ್ಣದೊಂದು ಅಹಿತಕರ ಘಟನೆ ನಡೆದರೆ, ಮನಸ್ಸಿಗೆ ವಿರುದ್ಧವಾಗಿ ಏನಾದರೂ ಆದರೆ ಮುಖ ಸೊಟ್ಟಗೆ ಮಾಡಿಕೊಂಡು ಕುಳಿತುಕೊಳ್ಳುವ ಇಂದಿನ ಯುವ ಪೀಳಿಗೆ ಸುನೀತಾ ಅವರ ನಗುವಿನಿಂದ ಬೋಧನೆ ಪಡೆಯುತ್ತಾರೆಯೇ ? ತಾಜಾ, ರುಚಿಕರ ಆಹಾರ ಸಿಗದಿದ್ದರೆ ಅನಗತ್ಯವಾಗಿ ಕಿರಿಕಿರಿ ಮಾಡುವವರು, ತಮ್ಮ ನಿರೀಕ್ಷೆಗಳು ಈಡೇರದಿದ್ದರೆ ತಕ್ಷಣ ಅಸ್ವಸ್ಥರಾಗುವವರು, ಸಣ್ಣ ಸಣ್ಣ ವಿಷಯಗಳಿಂದ ನೊಂದುಕೊಳ್ಳುವವರು ಸುನೀತಾ ಅವರ ಉದಾಹರಣೆಯಿಂದ ಪಾಠ ಕಲಿಯಬೇಕು ! ಸುನೀತಾ ಅವರು ಇಡೀ ಬಾಹ್ಯಾಕಾಶವನ್ನೇ ಅಳೆದಿದ್ದಾರೆ. ಜೀವನವಿಡೀ ಕೇವಲ ದೂರು ಹೇಳುವವರು ತಮ್ಮ ಮನಸ್ಸಿನ ಬಾಹ್ಯಾಕಾಶವನ್ನು ಶೋಧಿಸಿ ಅದಕ್ಕೆ ಸ್ಥಿರತೆ ತರಲು ಪ್ರಯತ್ನಿಸಬೇಕು.

ನಿಜಕ್ಕೂ ಬಾಹ್ಯಾಕಾಶದ ಕಾರ್ಯಾಚರಣೆಗಳನ್ನು ಯಶಸ್ವಿ ಗೊಳಿಸುವುದು ಅಷ್ಟು ಸರಳ ಅಥವಾ ಸುಲಭವಲ್ಲ. ಅದರ ಹಿಂದೆ ಪ್ರತಿಯೊಬ್ಬರ ಕಷ್ಟವಿರುತ್ತದೆ. ಸಾಮಾನ್ಯರಿಗೆ ಬಾಹ್ಯಾಕಾಶ ಯಾನ ಎಂದರೆ ಒಂದು ರೋಮಾಂಚಕ ಅನುಭವ ಅನಿಸುತ್ತದೆ; ಆದರೆ ಅದು ಅಷ್ಟೇ ಅಪಾಯಕಾರಿಯೂ ಆಗಿದೆ. ಅದಕ್ಕಾಗಿ ಕಟ್ಟುನಿಟ್ಟಾದ ಯೋಜನೆ ಮತ್ತು ತಯಾರಿ ನಡೆಸಬೇಕಾಗುತ್ತದೆ. ಭೂಮಿಯಿಂದ ಸಾವಿರಾರು ಕಿಲೋಮೀಟರ್ ದೂರ ಇರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗಿರುವಾಗ ತನ್ನನ್ನು ತಾನು ಸಿದ್ಧವಾಗಿರಿಸಿಕೊಳ್ಳುವುದು ಎಂದರೆ ಕೌಶಲ್ಯವನ್ನು ಪಣಕ್ಕಿಡಬೇಕಾಗುತ್ತದೆ. ಬಾಹ್ಯಾಕಾಶದ ಪ್ರತಿಯೊಂದು ಪರೀಕ್ಷೆಯಲ್ಲೂ ಸುನೀತಾ ಯಶಸ್ವಿಯಾದರು. ಕರ್ತವ್ಯಕ್ಕೆ ಪ್ರಾಮಾಣಿಕರಾಗಿರುವುದರಿಂದಲೇ ಅವರಿಗೆ ಅಲ್ಲಿನ ಎಲ್ಲಾ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಯಿತು.
ಇದೆಲ್ಲವನ್ನೂ ಅವರು ಸ್ವಂತ ಬಲದಿಂದ ಹೇಗೆ ಸಾಧಿಸಿದರು ? ಇದರ ಆದರ್ಶ ಪಾಠವನ್ನು ಸುನೀತಾ ಅವರ ಉದಾಹರಣೆಯಿಂದ ಎಲ್ಲರೂ ಪಡೆಯಬಹುದು. ಅವರು ಬಾಹ್ಯಾಕಾಶದಲ್ಲಿ ಮಾಡಿದ ಹೋರಾಟದಿಂದಾಗಿ ಅವರು ಭಾವಿ ಗಗನಯಾತ್ರಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಭಾರತದ ಯುವ ಪೀಳಿಗೆಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಪ್ರೇರಣೆ ಸಿಕ್ಕಿದೆ. ಬಾಹ್ಯಾಕಾಶ ಸಂಶೋಧನೆಯು ಪುರುಷ ಪ್ರಧಾನ ಕ್ಷೇತ್ರ ಎಂದು ನಂಬಲಾಗಿತ್ತು; ಆದರೆ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ಈ ತಪ್ಪು ಕಲ್ಪನೆಯನ್ನು ದೃಢವಾಗಿ ತೊಡೆದುಹಾಕಿದರು. ದೈಹಿಕ ಸಾಮರ್ಥ್ಯ, ಮಾನಸಿಕ ಶಕ್ತಿ ಮತ್ತು ತಾಂತ್ರಿಕ ಕೌಶಲ್ಯದಲ್ಲಿ ಮೇಲುಗೈ ಸಾಧಿಸಿ ಮಹಿಳಾ ಗಗನಯಾತ್ರಿಗಳೂ ಅಷ್ಟೇ ಸಮರ್ಥರು ಮತ್ತು ಕುಶಾಗ್ರರು ಎಂದು ಅವರು ಸಾಬೀತುಪಡಿಸಿದರು. ಸುನೀತಾ ವಿಲಿಯಮ್ಸ್ ಅವರು ೨೭ ವರ್ಷಗಳ ಅವಧಿಯಲ್ಲಿ ಏನು ಸಾಧಿಸಿದ್ದಾರೋ, ಅದು ನಿಜಕ್ಕೂ ಗಗನಯಾತ್ರಿಗಳಿಗೆ ಒಂದು ಕನಸಿನಂತೆಯೇ ಇರುತ್ತದೆ; ಆದರೆ ಸುನೀತಾ ಅವರ ಛಲದಿಂದ ಅವರು ಅದನ್ನು ನನಸಾಗಿಸಿ ತೋರಿಸಿದ್ದಾರೆ.
ಸುನೀತಾ ಅವರ ಮಾರ್ಗದರ್ಶಕ ಪರಂಪರೆ !
ಬಾಹ್ಯಾಕಾಶ ವಿಜ್ಞಾನದಷ್ಟೇ ಭಾರತೀಯ ಸಂಸ್ಕೃತಿಯೊಂದಿಗೆ ಅವರಿಗೆ ಇರುವ ಸಂಬಂಧವೂ ಸ್ಫೂರ್ತಿದಾಯಕವಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಅವರು ‘ಭಗವದ್ಗೀತೆ’, ಉಪನಿಷತ್ತುಗಳು ಮತ್ತು ‘ಓಂ’ ಚಿಹ್ನೆಯನ್ನು ಜೊತೆಗೆ ಕೊಂಡೊಯ್ದಿದ್ದರು. “ಭಾರತ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ?” ಎಂಬ ಪ್ರಶ್ನೆಯನ್ನು ಪತ್ರಕರ್ತರು ಕೇಳಿದಾಗ ಸುನೀತಾ ಅವರು, “ಭಾರತವು ಒಂದು ಮಹಾನ್ ದೇಶ. ಅದು ದೀಪಗಳ ಜಾಲ ಹರಡಿದಂತೆ ಕಾಣುತ್ತದೆ. ಭಾರತದ ನಗರಗಳು ಮತ್ತು ಸಮುದ್ರಗಳು ಅದ್ಭುತವಾಗಿವೆ” ಎಂದಿದ್ದರು. ಬಾಹ್ಯಾಕಾಶದ ಅನಂತ ಶೂನ್ಯವನ್ನು ತಲುಪಿರುವ ಸುನೀತಾ ಅವರ ನಾಡಿಬಡಿತ ಭಾರತೀಯ ಸಂಸ್ಕೃತಿಯೊಂದಿಗೆ ಜೋಡಿಸಲ್ಪಟ್ಟಿದೆ ಎಂಬುದು ಇದರಿಂದ ತಿಳಿದುಬರುತ್ತದೆ. ‘ಸರಿಯಾದ ಅವಕಾಶ, ಪರಿಶ್ರಮ ಮತ್ತು ಜಿಗುಟುತನ ಇದ್ದರೆ ಯಾರೂ ಬೇಕಾದರೂ ಆಕಾಶವನ್ನು ಮುಟ್ಟಬಹುದು’, ಎಂಬ ಸಂದೇಶ ಸುನೀತಾ ಅವರ ವ್ಯಕ್ತಿತ್ವದಿಂದ ಎದ್ದು ಕಾಣುತ್ತದೆ. ಅವರ ನಿವೃತ್ತಿಯು ಗಗನಯಾತ್ರಿಗಳಿಗೆ ಭಾವನಾತ್ಮಕವಾಗಿದ್ದರೂ ಸಹ, ಅವರು ನಿರ್ಮಿಸಿದ ಪರಂಪರೆಯು ಮುಂದಿನ ಪೀಳಿಗೆಗೆ ಖಂಡಿತವಾಗಿಯೂ ಮಾರ್ಗದರ್ಶಿಯಾಗಲಿದೆ. ಇಂದು ಅನೇಕ ಯುವಕ-ಯುವತಿಯರು ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಇದರ ಹಿಂದೆ ಸುನೀತಾ ವಿಲಿಯಮ್ಸ್ ಅವರಂತಹವರ ಮಹತ್ವದ ಪಾತ್ರವಿದೆ. ಅಂತಹ ಈ ಸುನೀತಾ ವಿಲಿಯಮ್ಸ್ ರೂಪದ ಬಾಹ್ಯಾಕಾಶ ಯೋಧನಿಗೆ ಎಲ್ಲಾ ಭಾರತೀಯರ ಗೌರವಪೂರ್ವಕ ವಂದನೆಗಳು !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !