ಕುಟುಂಬ ವ್ಯವಸ್ಥೆಯ ಹೃದಯ ಅಡುಗೆಮನೆ !

ಕುಟುಂಬವ್ಯವಸ್ಥೆಯ ಹೃದಯ ಅಡುಗೆಮನೆ ! (ಎ.ಐ. ನಿರ್ಮಿಸಿದ ಚಿತ್ರ)

೧೯೭೦ ರ ದಶಕದ ಮೊದಲು ಅಮೆರಿಕದಲ್ಲಿಯೂ ಮನೆಮನೆಗಳಲ್ಲಿ ಮೂರು ತಲೆಮಾರುಗಳು ಒಟ್ಟಿಗೆ ಇರುತ್ತಿದ್ದವು. ಕುಟುಂಬದ ಸದಸ್ಯರು ಪ್ರತಿದಿನ ರಾತ್ರಿ ಊಟದ ಮೇಜಿನಲ್ಲಿ ಕುಳಿತು ಮನೆಯಲ್ಲಿ ತಯಾರಿಸಿದ ಊಟವನ್ನು ಮಾಡುತ್ತಿದ್ದರು. ಈ ಊಟವು ಕುಟುಂಬದ ನಿಯಮಗಳು, ಸಂಪ್ರದಾಯ ಮತ್ತು ಮೌಲ್ಯಗಳನ್ನು ರಕ್ಷಿಸುತ್ತಿತ್ತು; ಆದರೆ ೧೯೯೦ ರ ದಶಕದ ನಂತರ ಚಿತ್ರಣ ಬದಲಾಯಿತು. ಫಾಸ್ಟ್ ಫುಡ್, ಟೇಕ್-ಅವೇ ರೆಸ್ಟೋರೆಂಟ್ ಸಂಸ್ಕೃತಿಯ ಪ್ರಸಾರವಾಯಿತು. ಪೋಷಕರು ಹಣದ ಹಿಂದೆ ಓಡಿದರು; ಮಕ್ಕಳು ಪಿಜ್ಜಾ, ಬರ್ಗರ್ ಸ್ವೀಕರಿಸಿದರು. ೧೯೭೧ ರಲ್ಲಿ, ಅಮೆರಿಕದ ಶೇ. ೭೧ ರಷ್ಟು ಕುಟುಂಬಗಳು ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿದ್ದವು; ಈಗ ಅವು ಕೇವಲ ಶೇ. ೨೦ ರಷ್ಟಿವೆ. ಉಳಿದ ವಾಸ್ತವವು ಭಯಾನಕವಾಗಿದೆ: ವೃದ್ಧಾಶ್ರಮಗಳಿಗೆ ಹೋಗಿರುವ ಅಜ್ಜ-ಅಜ್ಜಿಯರು, ಏಕಾಂಗಿಯಾಗಿ ವಾಸಿಸುವ ಯುವಕರು, ಮುರಿದುಬಿದ್ದ ವೈವಾಹಿಕ ಸಂಬಂಧಗಳು ಮತ್ತು ಮಾನಸಿಕ ಒತ್ತಡದಿಂದ ಹೋರಾಡುತ್ತಿರುವ ಮಕ್ಕಳು, ಇದೇ ಆ ವಾಸ್ತವವಾಗಿದೆ.

ಭಾರತದಲ್ಲಿಯೂ ಈಗ ಇದೇ ಪರಿಸ್ಥಿತಿ ಕಂಡು ಬರುತ್ತಿದೆ. ಮಹಾನಗರಗಳಲ್ಲಿ ‘ಕ್ಲೌಡ್ ಕಿಚನ್’ನಿಂದ ತರಿಸಿದ ಆಹಾರ, ಕಡಿಮೆಯಾಗುತ್ತಿರುವ ಕೌಟುಂಬಿಕ ಊಟ, ಹೆಚ್ಚುತ್ತಿರುವ ಏಕಾಂಗಿತನ ಮತ್ತು ಭವಿಷ್ಯದಲ್ಲಿ ಆರೋಗ್ಯಸಂಕಟದ ಛಾಯೆ – ಇವು ಅಪಾಯದ ಕರೆಗಂಟೆಯಾಗಿವೆ. ಇಂದು ನಾವು ನಮ್ಮ ಅಡುಗೆಮನೆ ಯನ್ನು ಉಳಿಸದಿದ್ದರೆ, ಕುಟುಂಬ ವ್ಯವಸ್ಥೆಯು ಕುಸಿಯುತ್ತದೆ ಮತ್ತು ಸಮಾಜದ ಬೇರುಗಳು ಕಿತ್ತುಹೋಗುತ್ತವೆ; ಏಕೆಂದರೆ ಅಡುಗೆಮನೆಯು ಕುಟುಂಬವನ್ನು ಒಟ್ಟಿಗೆ ಜೋಡಿಸಿಡುವ ಮುಖ್ಯ ಸ್ಥಳವಾಗಿದೆ. ‘ಫಾಸ್ಟ್ ಫುಡ್’ ವಿಕೃತಿಯಿಂದಾಗಿ ಬೊಜ್ಜು, ಮಧುಮೇಹ, ಹೃದ್ರೋಗ ಇವುಗಳಂತಹ ಕಾಯಿಲೆಗಳಿಂದ ಅಮೆರಿಕನ್ ಸಮಾಜವು ತತ್ತರಿಸಿದೆ, ಅಂದರೆ ಕುಟುಂಬಗಳು ಒಡೆದವು ಮತ್ತು ಆರೋಗ್ಯವೂ ನಾಶವಾಯಿತು.

ಇಂದು ಭಾರತೀಯ ಸಮಾಜವು ಒಂದು ದೊಡ್ಡ ತಿರುವಿನಲ್ಲಿ ನಿಂತುಕೊಂಡಿದೆ. ಹೊರಗಿನಿಂದ ಬಂದ ‘ಫಾಸ್ಟ್ ಫುಡ್’ ವಿಕೃತಿಯು ನಮ್ಮ ಮನೆಮನೆಗಳಲ್ಲಿನ ಒಲೆಗಳನ್ನು (ಅಡುಗೆ ಮಾಡುವ ಸಂಸ್ಕೃತಿಯನ್ನು) ಆರಿಸಿಬಿಟ್ಟಿದೆ. ಇದರ ಪರಿಣಾಮ ಅಮೆರಿಕಕ್ಕಿಂತಲೂ ಭೀಕರವಾಗಬಹುದು; ಏಕೆಂದರೆ ನಮ್ಮ ನಿಜವಾದ ಶಕ್ತಿಯೇ ಅವಿಭಕ್ತ ಕುಟುಂಬವ್ಯವಸ್ಥೆ ಮತ್ತು ಮನೆಯಲ್ಲಿ ತಯಾರಿಸಿದ ಊಟದ ಸಂಸ್ಕೃತಿಯಾಗಿದೆ. ‘ಒಟ್ಟಿಗೆ ಊಟ ಮಾಡುವುದು’ ನಿಂತು ಹೋದಾಗ, ಸಂವಾದ ಕಡಿಮೆಯಾಗುತ್ತದೆ; ಸಂವಾದ ತಪ್ಪಿಹೋದಾಗ, ಸಂಬಂಧಗಳು ಸಡಿಲವಾಗುತ್ತವೆ. ಕೊನೆಗೆ ಮನೆ ಕೇವಲ ವಾಸಸ್ಥಳ ವಾಗಿ ಉಳಿದುಬಿಡುತ್ತದೆ. ಅಮೆರಿಕದಲ್ಲಿ ಫಾಸ್ಟ್ ಫುಡ್ ಸಂಸ್ಥೆಗಳು ಕೋಟಿಗಟ್ಟಲೆ ಡಾಲರ‍್ಸ್‌ಗಳ ವಹಿವಾಟು ನಡೆಸಿದವು. ಔಷಧ ಉದ್ಯಮವು ಬೊಜ್ಜು, ಮಧುಮೇಹ, ಹೃದ್ರೋಗಗಳಿಂದಾಗಿ ಅಗಾಧ ಲಾಭ ಗಳಿಸಿತು; ಆದರೆ ಸಾಮಾನ್ಯ ಕುಟುಂಬಗಳ ಮನೆಯ ಆರ್ಥಿಕತೆ ಕುಸಿಯಿತು. ಭಾರತದ ನಿಜವಾದ ಶಕ್ತಿ ಎಂದರೆ ನಮ್ಮ ಅವಿಭಕ್ತ ಕುಟುಂಬಗಳು ಮತ್ತು ಮನೆಯಲ್ಲಿ ತಯಾರಿಸಿದ ಆಹಾರ ಸಂಸ್ಕೃತಿ. ಇದನ್ನು ನಾಶಮಾಡಿದರೆ ನಾವೂ ಅಮೇರಿಕದಂತಾಗುತ್ತೇವೆ, ಕೇವಲ ವ್ಯಾಪಾರಿ ಸಂಸ್ಥೆಗಳ ಲಾಭದಲ್ಲಿ ಸಿಕ್ಕಿಬಿದ್ದು; ಆದರೆ ಕುಟುಂಬ ಮತ್ತು ಸಂಸ್ಕೃತಿಯನ್ನು ಕಳೆದುಕೊಂಡವರಾಗುತ್ತೇವೆ !

ಭಾರತವು, ಅಮೆರಿಕದ ಅನುಭವವನ್ನು ಗಮನಕ್ಕೆ ತೆಗೆದುಕೊಳ್ಳದಿದ್ದರೆ, ನಾಳೆ ನಮ್ಮ ಮನೆಯಲ್ಲಿಯೂ ವೃದ್ಧಾಶ್ರಮ, ಮುರಿದುಬಿದ್ದ ವೈವಾಹಿಕ ಸಂಬಂಧಗಳು, ಏಕಾಂಗಿತನದಿಂದ ನೊಂದ ಯುವಕರು ಇದೇ ದೃಶ್ಯವು ಗೋಚರಿಸುತ್ತದೆ. ಕುಟುಂಬ ವ್ಯವಸ್ಥೆಯೇ ಭಾರತದ ನಿಜವಾದ ಶಕ್ತಿಯಾಗಿದೆ. ಅಡುಗೆಮನೆಯೇ ಅದರ ಹೃದಯವಾಗಿದೆ. ಆದ್ದರಿಂದ, ಮನೆಯಲ್ಲಿ ಅಡುಗೆ ಮಾಡುವುದು, ಒಟ್ಟಿಗೆ ಊಟ ಮಾಡುವುದು ಮತ್ತು ಕೌಟುಂಬಿಕ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಆದ್ಯತೆಯಾಗಿದೆ ಎಂದು ಪುನರುಚ್ಚರಿಸುವ ಸಮಯ ಬಂದಿದೆ.

– ಸೌ. ಅಪರ್ಣಾ ಜಗತಾಪ, ಪುಣೆ