ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಾಧನೆಯೆಂದರೆ ಈಶ್ವರಪ್ರಾಪ್ತಿಗಾಗಿ ನಿರಂತರ ಮಾಡುವ ಪ್ರಯತ್ನ ! ಸಾಧನೆಯೆಂದರೆ ಈಶ್ವರನೊಂದಿಗೆ ಜೋಡಿಸಲ್ಪಡುವ ನಿರಂತರ ಪ್ರಕ್ರಿಯೆ ! ಅನೇಕ ಬಾರಿ ಗಮನಕ್ಕೆ ಬರುವ ವಿಷಯವೆಂದರೆ, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧನೆಯಲ್ಲಿ ಮೇಲಿಂದ ಮೇಲೆ ಬರುವ ಅಡೆತಡೆಗಳಿಂದಾಗಿ ಸಾಧಕರು ಒಂದೇ ಹಂತದಲ್ಲಿ ಸಿಲುಕಿರುತ್ತಾರೆ. ಮುಂದೆ ಹೋಗುವ ಮಾರ್ಗವನ್ನು ಭಗವಂತನು ನಮಗೆ ಆಗಾಗ ತೋರಿಸುತ್ತಿದ್ದರೂ ಅದು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ‘ಸಾಧನೆಯಲ್ಲಿ ಮುಂದೆ ಹೋಗಲು ನಿರ್ದಿಷ್ಟವಾಗಿ ಯಾವ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ ?’, ಎಂದು ಹೊಳೆಯುವುದಿಲ್ಲ. ಆ ಸಮಯದಲ್ಲಿ ಸಾಧಕರು ‘ಸಾಧನೆಯಲ್ಲಿ ಮುಂದೆ ಹೋಗಲು ಬಯಸಿದರೂ ನಾವು ಒಂದೇ ಹಂತದಲ್ಲಿ ಏಕೆ ಸಿಲುಕಿಕೊಂಡಿದ್ದೇವೆ ?’, ಎಂಬ ಬಗ್ಗೆ ಚಿಂತನೆ ಮಾಡಿ ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ‘ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಯಾವ ಅಡಚಣೆಗಳು ಇರಬಹುದು ? ಮತ್ತು ಆ ಅಡಚಣೆಗಳನ್ನು ದೂರ ಮಾಡಲು ಏನು ಮಾಡಬೇಕು ?’, ಈ ಬಗೆಗಿನ ಮಾರ್ಗದರ್ಶನವನ್ನು ಪ್ರತಿ ಗುರುವಾರ ನಡೆಯುವ ಭಕ್ತಿಸತ್ಸಂಗದ ಅಂತರ್ಗತ ‘ವಿಶೇಷ ಭಕ್ತಿಸತ್ಸಂಗ ಶೃಂಖಲೆಯ’ ಮೂಲಕ ಮಾಡಲಾಗುತ್ತಿದೆ. ‘ಈ ಹೊಸ ಭಕ್ತಿಸತ್ಸಂಗ ಶೃಂಖಲೆಯಿಂದ ಸಾಧಕರಿಗೆ ಮತ್ತು ವಾಚಕರಿಗೆ ಹೆಚ್ಚೆಚ್ಚು  ಲಾಭ ಆಗಬೇಕೆಂದು ಅದರಲ್ಲಿನ ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ೨೭/೧೭  ನೆ ಸಂಚಿಕೆಯಲ್ಲಿ ‘ವಿಚಾರಿಸಿ ಕೃತಿ ಮಾಡುವುದರ ಲಾಭವೇನು ಎಂಬುದನ್ನು ತಿಳಿದುಕೊಂಡೆವು. ಈ ವಾರ ನಾವು ವಿಚಾರಿಸುವ ವೃತ್ತಿಯ ಸರ್ವೋತ್ತಮ ಆದರ್ಶವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ’ಯವರಲ್ಲಿ ವಿಚಾರಿಸುವ ವೃತ್ತಿ ಹೇಗಿತ್ತು ?’ ಎಂಬುದನ್ನು ತಿಳಿದುಕೊಳ್ಳಲಿದ್ದೇವೆ. (ಲೇಖನ ೭)


‘ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸದ್ಯ ಕಾಲಾನುಸಾರ ಸಾಕ್ಷಾತ್ ಭಗವಂತನ ಇಚ್ಛೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರ ಕೃಪೆಯಿಂದ ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಮೂಲಕ ಸಾಧಕರಿಗೆ ಮಾರ್ಗದರ್ಶನ ಸಿಗುತ್ತಿದೆ. ಈ ಮಾರ್ಗದರ್ಶನ ಸಾಧಕರಿಗಾಗಿ ಅತ್ಯಂತ ಅಮೂಲ್ಯ ಮತ್ತು ಮಹತ್ವಪೂರ್ಣವಾಗಿದೆ. ‘ಭಕ್ತಿಸತ್ಸಂಗದ ಈ ವಿಷಯದಿಂದಾಗಿ ಎಲ್ಲೆಡೆಯ ಸಾಧಕರ ಶುದ್ಧಿಯಾಗಬೇಕು, ಹಾಗೆಯೇ ಅವರ ಅಂತಃಕರಣದಲ್ಲಿನ ಸ್ವಭಾವದೋಷಗಳ ಮಾಲಿನ್ಯ ನಾಶವಾಗಿ ಅವರು ಶುದ್ಧ ಮತ್ತು ಪವಿತ್ರರಾಗಬೇಕು’, ಎಂಬುದಕ್ಕಾಗಿ ಇದು ಭಕ್ತಿಯಜ್ಞವೇ ಆಗಿದೆ. ಸಾಧಕರು ಈ ಲೇಖನವನ್ನು ತಮ್ಮ ಬಳಿ ಸಂಗ್ರಹದಲ್ಲಿಟ್ಟುಕೊಳ್ಳಬೇಕು, ಹಾಗೆಯೇ ಈ ಅಂಶಗಳಿಗನುಸಾರ ತಳಮಳದಿಂದ ಪ್ರಯತ್ನಿಸಿ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅzರಿಂದ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬೇಕು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೧೧. ವಿಚಾರಿಸುವ ವೃತ್ತಿಯ ಆದರ್ಶವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘ವಿಚಾರಿಸುವ ವೃತ್ತಿ’ ಈ ಗುಣ ಈಗಿನ ಕಾಲದಲ್ಲಿ ಯಾರಿಂದ ಕಲಿಯಬೇಕು, ಅಂದರೆ ಅದು ನಮ್ಮ ಗುರುದೇವರಿಂದ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ). ಗುರುದೇವರು ‘ವಿಚಾರಿಸುವ ವೃತ್ತಿ’ ಈ ಗುಣದ ಶಿಖರವನ್ನೇ ಮುಟ್ಟಿದ್ದಾರೆ. ಅವರ ಈ ವಿಚಾರಿಸುವ ವೃತ್ತಿ ಕೇವಲ ಆಧ್ಯಾತ್ಮಿಕ ಕ್ಷೇತ್ರ ಮಾತ್ರವಲ್ಲ, ಅವರ ಜೀವನದ ಪ್ರತಿಯೊಂದು ಅಂಶದಲ್ಲಿ ಕಂಡು ಬರುತ್ತದೆ. ಅವರ ಈ ವೃತ್ತಿಯಿಂದ ಅವರು ಅಧ್ಯಾತ್ಮದ ಅನೇಕ ತೊಡಕುಗಳ ಪರಿಕಲ್ಪನೆಗಳನ್ನು ಬಹಳ ಸುಲಭಗೊಳಿಸಿದ್ದಾರೆ. ಆದ್ದರಿಂದ ನಾವೆಲ್ಲ ಸಾಧಕರು ಇಂದು ಆನಂದದಿಂದ ಅತ್ಯಂತ ಕಠಿಣವಾದ ಅಧ್ಯಾತ್ಮವನ್ನು ಜೀವಿಸಲು ಸಾಧ್ಯವಾಗುತ್ತಿದೆ.

೧೧ ಅ. ಗುರುಪ್ರಾಪ್ತಿಗಾಗಿ ೨೫ ಕ್ಕಿಂತ ಅಧಿಕ ಸಂತರ ಹತ್ತಿರ ಹೋಗಿ ಅಧ್ಯಾತ್ಮಶಾಸ್ತ್ರದ ಅಧ್ಯಯನ ಮಾಡುವುದು : ಗುರುದೇವರಿಗಿದ್ದ ‘ವಿಚಾರಿಸುವ ವೃತ್ತಿ’ (ಪ್ರಶ್ನಿಸುವ ಸ್ವಭಾವ) ಎಂಬುದು ಕೇವಲ ಅವರ ಬೌದ್ಧಿಕ ಕುತೂಹಲವಾಗಿರಲಿಲ್ಲ, ಬದಲಾಗಿ ಪ್ರತಿಯೊಂದು ಘಟನೆಯ ಹಿಂದಿನ ಸೂಕ್ಷ್ಮ ಕಾರಣಗಳನ್ನು ಮತ್ತು ಮೂಲ ಸತ್ಯವನ್ನು ಹುಡುಕುವ ತಳಮಳವಾಗಿತ್ತು. ಆಧುನಿಕ ವಿಜ್ಞಾನದ ಮಿತಿಗಳು ಅರಿವಿಗೆ ಬಂದ ನಂತರ ಪ.ಪೂ. ಗುರುದೇವರು ಜಿಜ್ಞಾಸೆಯಿಂದ ಅಧ್ಯಾತ್ಮದ ಅಭ್ಯಾಸವನ್ನು ಆರಂಭಿಸಿದರು. ವರ್ಷ ೧೯೮೩ ರಿಂದ ೧೯೮೭ ರ ವರೆಗಿನ ಈ ೫ ವರ್ಷಗಳ ಅವಧಿಯಲ್ಲಿ ಗುರುದೇವರು ೨೫ ಕ್ಕೂ ಹೆಚ್ಚು ಸಂತರ ಬಳಿ ಹೋಗಿ ಅಧ್ಯಾತ್ಮಶಾಸ್ತ್ರದ ಅಭ್ಯಾಸ ಮಾಡಿದರು.

೧೧ ಆ. ಪ.ಪೂ. ಭಕ್ತರಾಜ ಮಹಾರಾಜರ ರೂಪದಲ್ಲಿ ಗುರುಪ್ರಾಪ್ತಿಯಾದ ಮೇಲೆ ಸಾಧನೆಯ ಬಗ್ಗೆ ಪ್ರಶ್ನೆಗಳನ್ನು ವಿಚಾರಿಸಿ ಅಧ್ಯಾತ್ಮದ ಜ್ಞಾನವನ್ನು ಪಡೆಯುವುದು : ಪ.ಪೂ. ಗುರುದೇವರಲ್ಲಿದ್ದ ಜಿಜ್ಞಾಸೆ ಮತ್ತು ವಿಚಾರಿಸುವ ವೃತ್ತಿಯಿಂದಾಗಿ ವಿವಿಧ ಸಂತರ ರೂಪದಲ್ಲಿದ್ದ ಗುರುತತ್ತ್ವವು ಅವರನ್ನು ಗುರುಗಳ ವರೆಗೆ ತಲುಪಿಸಿತು ಮತ್ತು ಪ.ಪೂ. ಗುರುದೇವರಿಗೆ ಮಧ್ಯಪ್ರದೇಶದ ಇಂದೋರನ ಸಂತರಾದ ಪ.ಪೂ. ಭಕ್ತರಾಜ ಮಹಾರಾಜರು ‘ಗುರು’ಗಳಾಗಿ ಲಭಿಸಿದರು. ಪ.ಪೂ. ಗುರುದೇವರು ಪ.ಪೂ. ಭಕ್ತರಾಜ ಮಹಾರಾಜರಿಗೂ (ಪ.ಪೂ. ಬಾಬಾ) ಸಾಧನೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿ ಅವರಿಂದ ಅಧ್ಯಾತ್ಮದ ಜ್ಞಾನವನ್ನು ಪಡೆದರು. ಗುರುದೇವರು ಇಂದೋರಗೆ ಪ.ಪೂ. ಬಾಬಾರವರ ಬಳಿ ಹೋಗುವಾಗ ಕೆಲವು ಆಧ್ಯಾತ್ಮಿಕ ಪ್ರಶ್ನೆಗಳ ಪಟ್ಟಿಯನ್ನು ತಮ್ಮೊಂದಿಗೆ ಒಯ್ಯುತ್ತಿದ್ದರು. ಅವರು ಪ.ಪೂ. ಬಾಬಾರವರ ಮುಂದೆ ನೋಟ್‌ಬುಕ್ ಮತ್ತು ಪೆನ್ನು ಹಿಡಿದು ಕುಳಿತುಕೊಳ್ಳುತ್ತಿದ್ದರು ಮತ್ತು ಅತ್ಯಂತ ಕುತೂಹಲದಿಂದ ಸಾಧನೆ ಹಾಗೂ ಅಧ್ಯಾತ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಪ್ರಶ್ನೋತ್ತರಗಳು ಗಂಟೆಗಟ್ಟಲೆ ನಡೆಯುತ್ತಿದ್ದವು.

೧೧ ಇ. ಅಧ್ಯಾತ್ಮದ ಕುರಿತಾದ ಗ್ರಂಥಗಳ ಪರಿಪೂರ್ಣತೆಗಾಗಿ ಗುರುಗಳ ಮಾರ್ಗದರ್ಶನ ಪಡೆಯುವುದು :

೧೧ ಇ ೧. ಗ್ರಂಥ ಪರಿಪೂರ್ಣವಾಗಲು ಅಪ್ರಕಟಿತ ಗ್ರಂಥದ ಬರವಣಿಗೆಯನ್ನು ಗುರುಗಳಿಗೆ ತೋರಿಸುವುದು : ಪ.ಪೂ. ಬಾಬಾರವರ ಬಳಿ ಭಂಡಾರಕ್ಕೆ (ಅನ್ನಸಂತರ್ಪಣೆ) ಹೋಗುವಾಗ ಯಾವುದಾದರೂ ಹೊಸ ಗ್ರಂಥ ಪ್ರಕಟಣೆಯ ಹಂತದಲ್ಲಿದ್ದರೆ, ಪ.ಪೂ. ಗುರುದೇವರು ಆ ಬರವಣಿಗೆಯನ್ನು ಪ.ಪೂ. ಬಾಬಾ ಅವರಿಗೆ ತೋರಿಸಲು ತಮ್ಮೊಂದಿಗೆ ಒಯ್ಯುತ್ತಿದ್ದರು. ‘ಆ ಗ್ರಂಥವು ಪರಿಪೂರ್ಣವಾಗಲು ಆ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದು’ ಪ.ಪೂ. ಗುರುದೇವರ ಉದ್ದೇಶವಾಗಿತ್ತು.

೧೧ ಇ ೨. ತಮಗೆ ಬಂದ ಅನುಭೂತಿಗಳ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳುವುದು : ಪ.ಪೂ. ಬಾಬಾರವರ ಬಳಿ ಹೋದಾಗ ಪ.ಪೂ. ಗುರುದೇವರು ತಮಗೆ ಬಂದ ಅನುಭೂತಿಗಳನ್ನು ಬಾಬಾ ಅವರಿಗೆ ಹೇಳುತ್ತಿದ್ದರು. ಈ ಅನುಭೂತಿಗಳನ್ನು ಹೇಳುವ ಹಿಂದೆ ಅವರ ಮನಸ್ಸಿನಲ್ಲಿ ಎಲ್ಲೂ ತಮ್ಮ ಶ್ರೇಷ್ಠತೆಯ ಭಾವವಿರುತ್ತಿರಲಿಲ್ಲ, ಬದಲಾಗಿ ‘ಆ ಅನುಭೂತಿಗಳು ಏಕೆ ಬಂದವು ? ಅದರ ಹಿಂದಿನ ಕಾರಣವೇನು ?’ ಎಂದು ಕಲಿಯಲು ಅವುಗಳ ವಿಶ್ಲೇಷಣೆಯನ್ನು ಪ.ಪೂ. ಬಾಬಾರವರಿಗೆ ಕೇಳುತ್ತಿದ್ದರು.

೧೧ ಈ. ಸಪ್ತರ್ಷಿ ಜೀವನಾಡಿಪಟ್ಟಿ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಅವರಿಗೆ ಪ್ರಶ್ನೆಗಳನ್ನು ಕೇಳಿ ನಾಡಿಪಟ್ಟಿಯ ಉಲ್ಲೇಖಗಳಿಂದ ಅವುಗಳ ಉತ್ತರಗಳನ್ನು ತಿಳಿದುಕೊಳ್ಳುವುದು: ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ನಾಡಿಪಟ್ಟಿಗಳಲ್ಲಿ ಸನಾತನ ಸಂಸ್ಥೆ, ಗುರುದೇವರು, ಹಿಂದೂ ರಾಷ್ಟ್ರ ಮುಂತಾದವುಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಗುರುದೇವರು ಕಾಲ ಕಾಲಕ್ಕೆ ಹಿಂದೂ ರಾಷ್ಟ್ರ ಹಾಗೂ ಆಪತ್ಕಾಲದ ಬಗ್ಗೆ ಪ್ರಶ್ನೆಗಳನ್ನು ಸಪ್ತರ್ಷಿ ಜೀವನಾಡಿ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಅವರಲ್ಲಿ ವಿಚಾರಿಸುತ್ತಾರೆ. ನಂತರ ಪೂ. ಡಾ. ಓಂ ಉಲಗನಾಥನ್ ಅವರು ನಾಡಿವಾಚನ ಮಾಡಿ, ಗುರುದೇವರು ಕೇಳಿದ ಪ್ರಶ್ನೆಗಳ ಉತ್ತರಗಳ ಬಗ್ಗೆ ನಾಡಿಪಟ್ಟಿಯಲ್ಲಿರುವ ಉಲ್ಲೇಖಗಳನ್ನು ಓದಿ ಹೇಳುತ್ತಾರೆ. ವಾಸ್ತವದಲ್ಲಿ ‘ಗುರುದೇವರು ಸ್ವತಃ ವಿಷ್ಣುಸ್ವರೂಪರಾಗಿದ್ದಾರೆ’ ಎಂದು ಸಪ್ತರ್ಷಿಗಳು ನಾಡಿಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಗುರುದೇವರು ಸ್ವತಃ ತ್ರಿಕಾಲಜ್ಞಾನಿಗಳಾಗಿದ್ದಾರೆ. ಅವರಿಗೆ ಎಲ್ಲವೂ ತಿಳಿದಿದೆ, ಆದರೂ ಅವರು ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳಿ ಸಂದೇಹ ನಿವಾರಣೆ ಮಾಡಿಕೊಳ್ಳುತ್ತಾರೆ.

೧೧ ಉ. ಔಷಧಗಳ ಬಗ್ಗೆ ಆಧುನಿಕ ವೈದ್ಯರ ಬಳಿ ಕೇಳುವುದು : ಪ.ಪೂ. ಗುರುದೇವರು ಸ್ವತಃ ಆಧುನಿಕ ವೈದ್ಯರಾಗಿದ್ದಾರೆ (ಒ.ಆ. ಊಥಿಠಿಟಿoಣheಡಿಚಿಠಿisಣ), ಆದರೂ ಅವರ ಶಾರೀರಿಕ ತೊಂದರೆಗಳಿಗಾಗಿ ಇತರ ವೈದ್ಯರು ನೀಡುವ ಔಷಧಿಗಳನ್ನು ‘ಯಾವಾಗ ಮತ್ತು ಹೇಗೆ ತೆಗೆದುಕೊಳ್ಳಬೇಕು ?’ ಎಂಬುದನ್ನು ಸಂಬಂಧ ಪಟ್ಟವರಲ್ಲಿ ವಿಚಾರಿಸುತ್ತಾರೆ. ಒಮ್ಮೆ ‘ವೈದ್ಯರು ನೀಡಿದ ಒಂದು ಮಾತ್ರೆಯನ್ನು ಯಾವಾಗ ತೆಗೆದುಕೊಳ್ಳಬೇಕು ?’ ಎಂಬ ಬಗ್ಗೆ ಪ.ಪೂ. ಗುರುದೇವರಿಗೆ ನಿಖರವಾದ ಮಾಹಿತಿ ಇರಲಿಲ್ಲ. ಆಗ ಅವರು ಆ ವೈದ್ಯರಲ್ಲಿ ಆ ಬಗ್ಗೆ ವಿಚಾರಿಸಿ ಖಚಿತಪಡಿಸಿಕೊಂಡರು.

ಗುರುದೇವರ ಈ ‘ವಿಚಾರಿಸುವ ವೃತ್ತಿ’ ಅವರ ಅಲೌಕಿಕ ಜ್ಞಾನ ಮತ್ತು ದೂರದೃಷ್ಟಿಯ ಮೂಲವಾಗಿದೆ ಅವರ ಈ ಜಿಜ್ಞಾಸೆಯು ಕೇವಲ ಮಾಹಿತಿ ಸಂಗ್ರಹಕ್ಕಾಗಿ ಅಲ್ಲ, ಬದಲಾಗಿ ‘ಜ್ಞಾನವನ್ನು ಮಾನವಕುಲದ ಆಧ್ಯಾತ್ಮಿಕ ಉನ್ನತಿಗಾಗಿ ಹೇಗೆ ಉಪಯೋಗಿಸಬಹುದು ?’ ಎಂಬುದನ್ನು ಕಂಡುಹಿಡಿಯಬೇಕು ಎಂಬುದಾಗಿದೆ. ಗುರುಗಳಲ್ಲಿರುವ ಈ ವಿಚಾರಿಸುವ ವೃತ್ತಿಯು ಎಲ್ಲರಿಗೂ ಅತ್ಯಂತ ಪ್ರೇರಣಾದಾಯಕವಾಗಿದೆ.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೧.೮.೨೦೨೫)