ವೆನೆಜುವೆಲಾದ ಮೇಲೆ ಅಮೆರಿಕದ ದಬ್ಬಾಳಿಕೆ !

ಡೊನಾಲ್ಡ ಟ್ರಂಪ್‌ ಮತ್ತು ಅಮೆರಿಕವು ವಶಕ್ಕೆ ತೆಗೆದುಕೊಂಡ ನಿಕೊಲಸ್‌ ಮಾಡುರೊ

ವೆನೆಜುವೆಲಾ ಲ್ಯಾಟಿನ್‌ ಅಮೆರಿಕದ ಒಂದು ದೇಶ. ಅಮೆರಿಕವು ಇತ್ತೀಚೆಗೆ ಈ ದೇಶದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಆರಂಭದಲ್ಲಿ ಅಮೆರಿಕವು ಈ ದಾಳಿಯನ್ನು ನಿರಾಕರಿಸಿತ್ತು; ಆದರೆ ನಂತರದ ಬೆಳವಣಿಗೆಗಳಿಂದಾಗಿ ಅಮೆರಿಕವೇ ಈ ದಾಳಿಗಳನ್ನು ನಡೆಸಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಇನ್ನು ಮುಂದೆ ಮತ್ತಷ್ಟು ತೀವ್ರವಾದ ದಾಳಿಗಳನ್ನು ನಡೆಸುವ ಸೂಚನೆ ನೀಡಿದ್ದಾರೆ. ವೆನೆಜುವೆಲಾದ ಪ್ರಸ್ತುತ ಅಧ್ಯಕ್ಷ ನಿಕೋಲಸ್‌ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ತನ್ನ ವಶಕ್ಕೆ ಪಡೆದಿದೆ. ಅವರ ಮುಂದಿನ ಭವಿಷ್ಯವೇನು ? ಇದರೊಂದಿಗೆ ‘ಅಮೆರಿಕವನ್ನು ವಿರೋಧಿಸುವ ದಕ್ಷಿಣ ಅಮೆರಿಕದ ಇತರ ದೇಶಗಳ ಹಣೆಬರಹವೂ ಹೀಗೆಯೇ ಇರಲಿದೆಯೇ ?’, ಎಂಬುದು ಈಗಿನ ಪ್ರಮುಖ ಪ್ರಶ್ನೆಯಾಗಿದೆ. ಒಟ್ಟಾರೆಯಾಗಿ ದಕ್ಷಿಣ ಅಮೆರಿಕ ಖಂಡದಲ್ಲಿ ವಾತಾವರಣವು ಉದ್ವಿಗ್ನಗೊಂಡಿದೆ. ವೆನೆಜುವೆಲಾ ಮತ್ತು ಅಮೆರಿಕ ನಡುವೆ ದಶಕಗಳಿಂದ ರಾಜಕೀಯ ಸಂಬಂಧಗಳು ಹದಗೆಟ್ಟಿವೆ. ಈ ಬಾರಿ ಆ ಸಂಘರ್ಷ ಮತ್ತಷ್ಟು ಸ್ಫೋಟಗೊಂಡಿದೆ.

ಅಮೆರಿಕದ ಆರ್ಥಿಕ ನಿರ್ಬಂಧಗಳು

ವೆನೆಜುವೆಲಾ ದೇಶವನ್ನು ಪರಿಗಣಿಸಿದರೆ, ಅಲ್ಲಿ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪವಿದೆ. ೧೯೯೦ ರ ದಶಕದ ವರೆಗೆ ಅಮೆರಿಕನ್‌ ಕಂಪನಿಗಳು ಅಲ್ಲಿ ತೈಲ ತೆಗೆಯುವ ಕೆಲಸ ಮಾಡುತ್ತಿದ್ದವು; ಆದರೆ ೧೯೯೯ ರಲ್ಲಿ ಹ್ಯೂಗೋ ಚಾವೆಜ್‌ ಅಧಿಕಾರಕ್ಕೆ ಬಂದ ನಂತರ ಅವರು ಈ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿದರು. ‘ವೆನೆಜುವೆಲಾದ ತೈಲ ವೆನೆಜುವೆಲಾದ ಜನರಿಗಾಗಿ’, ಎಂಬ ನಿಲುವನ್ನು ಅವರು ತಳೆದರು, ಇದರಿಂದಾಗಿ ಅಮೆರಿಕನ್‌ ತೈಲ ಕಂಪನಿಗಳಿಗೆ ದೊಡ್ಡ ಆರ್ಥಿಕ ನಷ್ಟವಾಯಿತು ಮತ್ತು ಸಂಘರ್ಷಕ್ಕೆ ನಾಂದಿಯಾಯಿತು. ವೆನೆಜುವೆಲಾವು ದಕ್ಷಿಣ ಅಮೆರಿಕದಲ್ಲಿ ಅಮೆರಿಕದ ಪ್ರಭಾವವನ್ನು ವಿರೋಧಿಸಿತು ಮತ್ತು ರಷ್ಯಾ, ಚೀನಾ ಹಾಗೂ ಇರಾನ್‌ನಂತಹ ಅಮೆರಿಕದ ಶತ್ರು ರಾಷ್ಟ್ರಗಳೊಂದಿಗೆ ನಿಕಟ ಸಂಬಂಧ ಬೆಳೆಸಿತು. ನಿಕೋಲಸ್‌ ಮಡುರೊ ಅವರ ಸರ್ಕಾರ ಮತ್ತು ಅಲ್ಲಿನ ಮಿಲಿಟರಿ ಅಧಿಕಾರಿಗಳು (ಅವರನ್ನು ‘ಕಾರ್ಟೆಲ್‌ ಆಫ್‌ ದಿ ಸನ್ಸ್’ ಎಂದು ಕರೆಯಲಾಗುತ್ತದೆ) ಅಮೆರಿಕಕ್ಕೆ ಕೋಕೇನ್‌ ಮತ್ತು ಇತರ ಮಾದಕದ್ರವ್ಯಗಳ ಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಮೆರಿಕ ಆರೋಪಿಸಿದೆ. ಇದೇ ಆರೋಪದ ಮೇಲೆ ಅಮೆರಿಕ ಮಡುರೊ ಅವರ ಮೇಲೆ ಕೋಟ್ಯಂತರ ರೂಪಾಯಿ ಬಹುಮಾನ ಘೋಷಿಸಿತ್ತು. ಅಮೆರಿಕದ ಪ್ರಕಾರ ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಅಂತ್ಯಗೊಂಡಿದೆ ಮತ್ತು ಮಡುರೊ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ೨೦೧೮ ಮತ್ತು ೨೦೨೪ ರ ಚುನಾವಣೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಾದಿಸುತ್ತಾ ಅಮೆರಿಕವು ಮಡುರೊ ಅವರನ್ನು ಅಧ್ಯಕ್ಷರೆಂದು ಒಪ್ಪಿಕೊಳ್ಳಲು ನಿರಾಕರಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕ ತನ್ನ ದೇಶದಲ್ಲಿ ‘ಆಡಳಿತ ಬದಲಾವಣೆ’ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಡುರೊ ಪ್ರತಿಪಾದಿಸುತ್ತಿದ್ದಾರೆ. ಅಮೆರಿಕವು ವೆನೆಜುವೆಲಾದ ಮೇಲೆ ಇದುವರೆಗಿನ ಅತ್ಯಂತ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ವೆನೆಜುವೆಲಾ ಆರ್ಥಿಕತೆಯ ಬೆನ್ನೆಲುಬಾಗಿರುವ ‘ಪಿ.ಡಿ.ವಿಎಸ್‌.ಎ.’ ಎಂಬ ಸರ್ಕಾರಿ ತೈಲ ಕಂಪನಿಯ ಮೇಲೆ ನಿರ್ಬಂಧ ಹೇರಿದ್ದರಿಂದ ಅವರ ಆದಾಯವು ಗಣನೀಯವಾಗಿ ಕುಸಿದಿದೆ. ಅಮೆರಿಕವು ವೆನೆಜುವೆಲಾವನ್ನು ಅಂತಾರಾಷ್ಟ್ರೀಯ ಬ್ಯಾಂಕಿಂಗ್‌ ವ್ಯವಸ್ಥೆಯಿಂದ ಬೇರ್ಪಡಿಸಲು ಪ್ರಯತ್ನಿಸಿತು, ಇದರಿಂದಾಗಿ ಅದಕ್ಕೆ ವಿದೇಶಿ ವ್ಯಾಪಾರ ಮಾಡುವುದು ಕಷ್ಟವಾಯಿತು.

ಅಮೆರಿಕಕ್ಕೆ ಬೇಕಿದೆ ತೈಲ ನಿಕ್ಷೇಪಗಳು !

ಒಟ್ಟಾರೆಯಾಗಿ ವೆನೆಜುವೆಲಾದ ಅಸ್ಥಿರ ರಾಜಕೀಯ ಸ್ಥಿತಿ, ಅಮೆರಿಕ ವಿಧಿಸಿದ ಭಾರಿ ನಿರ್ಬಂಧಗಳು, ನೈಸರ್ಗಿಕ ಸಂಪನ್ಮೂಲಗಳ ಸರಿಯಾದ ಬಳಕೆಯಾಗದಿರುವುದು ಮತ್ತು ಭ್ರಷ್ಟಾಚಾರದ ಕಾರಣದಿಂದ ವಿಶ್ವದ ದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದ್ದರೂ ಅಲ್ಲಿನ ಬಹುತೇಕ ಜನರು ಬಡವರಾಗಿದ್ದಾರೆ. ಅವರಿಗೆ ಎರಡು ಹೊತ್ತಿನ ಊಟಕ್ಕೂ ಸಂಕಷ್ಟ ಎದುರಾಗಿದೆ. ‘ವೆನೆಜುವೆಲಾದ ರಾಷ್ಟ್ರದ ಮುಖ್ಯಸ್ಥರು ಮಾದಕ ದ್ರವ್ಯಗಳ ದಲ್ಲಾಳಿಗಳಾಗಿದ್ದಾರೆ, ಅವರು ಅಮೆರಿಕದ ಜನರನ್ನು ಮಾದಕದ್ರವ್ಯದ ವ್ಯಸನಿ ಮಾಡುತ್ತಿದ್ದಾರೆ’, ಎಂಬುದು ಅಮೆರಿಕದ ಆರೋಪ. ಈ ಕಾರಣವು ಸತ್ಯವೋ ಅಥವಾ ಉದ್ದೇಶಪೂರ್ವಕವಾಗಿ ಮಾಡಿದ ಆರೋಪವೋ ಎಂದು ಹೇಳಲು ಸಾಧ್ಯವಿಲ್ಲ; ಆದರೆ ಅಮೆರಿಕಕ್ಕೆ ವೆನೆಜುವೆಲಾದ ಭಾರಿ ತೈಲ ನಿಕ್ಷೇಪಗಳು ಬೇಕು ಎಂಬುದು ಮಾತ್ರ ನೂರಕ್ಕೆ ನೂರು ಸತ್ಯ. ಅಮೆರಿಕಕ್ಕೆ ತನ್ನನ್ನು ವಿರೋಧಿಸುವ ಯಾರೂ ವೆನೆಜುವೆಲಾ ಸರಕಾರದಲ್ಲಿ ಇರುವುದು ಬೇಕಿಲ್ಲ; ಏಕೆಂದರೆ ಆಗ ಅವರಿಗೆ ಅನಿಯಂತ್ರಿತವಾಗಿ ತೈಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅತ್ತ ಅಮೆರಿಕ ಬಂಡವಾಳಶಾಹಿ ಸಿದ್ಧಾಂತ ಹೊಂದಿದ್ದರೆ, ನಿಕೋಲಸ್‌ ಮಡುರೊ ಸಾಮ್ಯವಾದಿ ಸಿದ್ಧಾಂತದವರು ! ಹಾಗಾಗಿ ಈ ಎರಡು ವಿಭಿನ್ನ ಸಿದ್ಧಾಂತಗಳ ನಡುವೆ ಸಂಘರ್ಷ ಇದ್ದೇ ಇರುತ್ತದೆ. ೨೦೦೨ ರಲ್ಲಿ ಅಂದಿನ ಅಧ್ಯಕ್ಷ ಹ್ಯೂಗೋ ಚಾವೆಜ್‌ ವಿರುದ್ಧ ಸೇನಾ ದಂಗೆ ನಡೆದಿತ್ತು. ಇದರಲ್ಲಿ ಅಮೆರಿಕದ ಪ್ರತ್ಯಕ್ಷ ಅಥವಾ ಪರೋಕ್ಷ ಪಾತ್ರವಿದೆ ಎಂದು ಸತತವಾಗಿ ಆರೋಪಿಸಲಾಗುತ್ತದೆ. ಚಾವೆಜ್‌ ಅವರು ಕೆಲವೇ ಗಂಟೆಗಳಲ್ಲಿ ಮತ್ತೆ ಅಧಿಕಾರಕ್ಕೆ ಬಂದರೂ, ಈ ಘಟನೆಯು ಉಭಯ ದೇಶಗಳ ಸಂಬಂಧವನ್ನು ಶಾಶ್ವತವಾಗಿ ಹಾಳು ಮಾಡಿತು. ೨೦೧೯ ರಲ್ಲಿ ಅಮೆರಿಕ ಮಡುರೊ ಅವರ ಅಧ್ಯಕ್ಷ ಸ್ಥಾನವನ್ನು ಅಮಾನ್ಯಗೊಳಿಸಿ ವಿರೋಧ ಪಕ್ಷದ ನಾಯಕ ಜುವಾನ್‌ ಗುವಾಡೊ ಅವರನ್ನು ಹಂಗಾಮಿ ಅಧ್ಯಕ್ಷರೆಂದು ಮಾನ್ಯ ಮಾಡಿತ್ತು. ಮೇ ೨೦೨೦ ರಲ್ಲಿ ಕೆಲವು ಅಮೆರಿಕನ್‌ ಮಾಜಿ ಸೈನಿಕರು ಮಡುರೊ ಅವರನ್ನು ಸೆರೆಹಿಡಿಯಲು ಅಥವಾ ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದ್ದರು. ಈ ಕಾರ್ಯಾಚರಣೆ ವಿಫಲವಾಯಿತು. ಇದರಿಂದ ಅಮೆರಿಕವು ಮಡುರೊ ಅವರ ಹಿಂದೆ ಎಷ್ಟು ಕೈತೊಳೆದು ಬಿದ್ದಿದೆ ಎಂಬುದು ಅರ್ಥವಾಗುತ್ತದೆ.

 ಅಮೆರಿಕದ ಏಕಸ್ವಾಮ್ಯ

ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಸಂಬಂಧ ಎಷ್ಟು ಉದ್ವಿಗ್ನವಾಗಿದೆ ಎಂಬುದು ಮೇಲಿನ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ. ಅಮೆರಿಕಕ್ಕೆ ಏನಾದರೂ ಬೇಕಿದ್ದರೆ ಅದನ್ನು ಪಡೆಯಲು ಅದು ಯಾವುದೇ ಹಂತಕ್ಕೂ ಹೋಗಬಲ್ಲದು. ಅಮೆರಿಕದ ದೃಷ್ಟಿಯಲ್ಲಿ ಯಾರು ಕೆಳಗಿಳಿಯುತ್ತಾರೋ ಅಥವಾ ಯಾರು ಅಮೆರಿಕವನ್ನು ವಿರೋಧಿಸಲು ಪ್ರಯತ್ನಿಸುತ್ತಾರೋ ಅವರನ್ನು ಅಮೆರಿಕ ಶತ್ರುಗಳಂತೆ ನಡೆಸಿಕೊಳ್ಳುತ್ತದೆ. ಆ ದೇಶ ಅಥವಾ ರಾಷ್ಟ್ರದ ಮುಖ್ಯಸ್ಥರನ್ನು ಬೀದಿಗೆ ತರುವವರೆಗೂ ಅದು ಸುಮ್ಮನಿರುವುದಿಲ್ಲ. ಅಷ್ಟೇ ಅಲ್ಲದೆ, ಅಮೆರಿಕವು ಸೇನಾ ದೃಷ್ಟಿಯಿಂದ ದುರ್ಬಲವಾಗಿರುವ ದೇಶಗಳನ್ನೇ ಗುರಿಯಾಗಿಸುತ್ತದೆ. ಆ ದೇಶಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ತನ್ನ ಇಚ್ಛೆಯಂತೆ ನಡೆಸುವ ಜನರನ್ನು ಅಲ್ಲಿ ಅಧಿಕಾರಕ್ಕೆ ತರುವುದು ಅಮೆರಿಕದ ಪ್ರಯತ್ನವಾಗಿರುತ್ತದೆ. ‘ಅಮೆರಿಕದ ದಬ್ಬಾಳಿಕೆಗೆ ಮಣಿಯುವುದಿಲ್ಲ’ ಎಂದು ಯಾವುದೇ ದೇಶ ನಿರ್ಧರಿಸಿದರೂ, ಅಮೆರಿಕದ ಮುಂದೆ ಆ ದೇಶ ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗುವುದಿಲ್ಲ. ಅಮೆರಿಕ ತನ್ನೆಲ್ಲ ಶಕ್ತಿಯನ್ನು ಬಳಸಿ ಆ ದೇಶ ಅಥವಾ ವ್ಯಕ್ತಿಯನ್ನು ಎಷ್ಟು ಏಕಾಂಗಿಯನ್ನಾಗಿ ಮಾಡುತ್ತದೆ ಎಂದರೆ, ಇತರ ಯಾವುದೇ ದೇಶವೂ ಅವರಿಗೆ ಸಹಾಯ ಮಾಡಲು ಮುಂದೆ ಬರುವುದಿಲ್ಲ. ವೆನೆಜುವೆಲಾ ಚೀನಾ, ರಷ್ಯಾದಂತಹ ಪ್ರಬಲ ರಾಷ್ಟ್ರಗಳ ಬೆಂಬಲ ಪಡೆದಿದ್ದರೂ, ಅಮೆರಿಕ ತನ್ನ ಉದ್ದೇಶ ಸಾಧನೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ. ಸದ್ದಾಂ ಹುಸೇನ್‌ ಅವರ ಆಡಳಿತವನ್ನು ಉರುಳಿಸುವುದು, ಅವರನ್ನು ಹಿಡಿಯುವುದು ಮತ್ತು ಗಲ್ಲಿಗೇರಿಸುವ ಹಿಂದೆ ಅಮೆರಿಕವೇ ಇತ್ತು. ‘ವಿಶ್ವದಲ್ಲಿ ನಾವು ನಿರ್ಧರಿಸಿದಂತೆಯೇ ನಡೆಯಬೇಕು’ ಎಂಬುದು ಅಮೆರಿಕದ ಹಠ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗೆ ಬೆಂಬಲ ನೀಡಿ, ನಂತರ ಲಾಡೆನ್‌ ಜೊತೆ ಭಿನ್ನಾಭಿಪ್ರಾಯ ಬಂದಾಗ ಅವನನ್ನೇ ಹತ್ಯೆ ಮಾಡಿತು ಮತ್ತು ಅಫ್ಘಾನಿಸ್ತಾನವನ್ನು ಅಸ್ಥಿರಗೊಳಿಸಿತು. ಅಮೆರಿಕವು ಭಾರತದ ಮೇಲೆ ಆಮದು ಸುಂಕಗಳನ್ನು ವಿಧಿಸುವಂತಹ ಕ್ರಮಗಳೂ ಅಮೆರಿಕದ ದಬ್ಬಾಳಿಕೆಯನ್ನು ತೋರಿಸುತ್ತವೆ. ಆದ್ದರಿಂದ, ಪ್ರತಿಯೊಂದು ವಿಷಯದಲ್ಲೂ ಸ್ವಾರ್ಥ ಸಾಧಿಸುವ ಅಮೆರಿಕದಿಂದ ಭಾರತವು ಎಚ್ಚರದಿಂದ ಇರುವುದೇ ಹಿತಕರ.