ಶಕ್ತಿಶಾಲಿ ಮತ್ತು ಸಮೃದ್ಧ ರಾಷ್ಟ್ರವನ್ನು ದುರ್ಬಲಗೊಳಿಸಿದ ಮೆಕಾಲೆಯ ಭಾರತವಿರೋಧಿ ಶಿಕ್ಷಣವ್ಯವಸ್ಥೆ !

ಕಮ್ಯುನಿಸ್ಟರು (ಸಾಮ್ಯವಾದಿಗಳು) ಮತ್ತು ಮಾಕ್ಪ್ಸ್ಪ್ರ್ವಾದಿಗಳು ಭಾರತೀಯ ವಂಶ, ಸಂಸ್ಕೃತಿ, ಭಾರತದ ಮಹಾನತೆ ಮತ್ತು ಸನಾತನ ಧರ್ಮವನ್ನು ಕಳಂಕಿಸಲು ಸುಳ್ಳು ಇತಿಹಾಸವನ್ನು ಸೃಷ್ಟಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಸುಳ್ಳು ಸಲಹೆಗಳಲ್ಲಿ ಒಂದು, ‘ಮೆಕಾಲೆಯ ಶಿಕ್ಷಣ ಪದ್ಧತಿಯು ಭಾರತದ ಪ್ರಗತಿಯನ್ನು ಮಾಡಿತು’ ಎಂಬುದಾಗಿದೆ. ಮೆಕಾಲೆ ಮತ್ತು ಇತರ ಬ್ರಿಟಿಷ್‌ ಅಧಿಕಾರಿಗಳ ಪತ್ರಗಳು ಮತ್ತು ಮೂಲಗಳಿಂದ ಭಾರತವನ್ನು ನಾಶಪಡಿಸುವ ಹಾಗೂ ಈ ಮಹಾನ್‌ ರಾಷ್ಟ್ರವನ್ನು ಶೋಷಣೆ ಮಾಡುವ ಅವರ ಉದ್ದೇಶವು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೂ ಸಾಮ್ಯವಾದಿ ಇತಿಹಾಸಕಾರರು ಅವರನ್ನು ಹೊಗಳುತ್ತಾರೆ. ಹಾಗಾದರೆ ನಡೆಯಿರಿ ವಾಸ್ತವ ಏನೆಂದು ತಿಳಿದುಕೊಳ್ಳೋಣ.

೧. ಯಾವುದೇ ರಾಷ್ಟ್ರವು ಹೇಗೆ ದುರ್ಬಲವಾಗುತ್ತದೆ ?

ಯಾವಾಗ ಯಾವುದೇ ರಾಷ್ಟ್ರದ ನಾಗರಿಕರು ತಮ್ಮ ಮೂಲದ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ ಅಥವಾ ತಮ್ಮ ಬಗ್ಗೆ ಅಥವಾ ತಮ್ಮ ಪೂರ್ವಜರ ಬಗ್ಗೆ ನಾಚಿಕೆ ಆಗುತ್ತದೆಯೋ, ಆಗ ಇಂತಹ ಮನಃಸ್ಥಿತಿಯಿಂದ ಸಮಾಜ ಮತ್ತು ದೇಶಕ್ಕೆ ಹಾನಿಯಾಗುತ್ತದೆ. ನಿಜಕ್ಕೂ, ರಾಷ್ಟ್ರದ ನಿಜವಾದ ಅವನತಿಯು  ಇಲ್ಲಿಂದಲೇ ಪ್ರಾರಂಭವಾಗುವುದು. ತನ್ನನ್ನು ತಾನು ಮರೆತು ಇತರ ರಾಷ್ಟ್ರಗಳನ್ನು ಅನುಸರಿಸಲು ಪ್ರಯತ್ನಿಸುವ ರಾಷ್ಟ್ರವು ತನ್ನನ್ನು ತಾನು ಉಳಿಸಿಕೊಳ್ಳಲು ಸಾಧ್ಯವಿಲ್ಲ; ಬದಲಾಗಿ, ಅದು ತನ್ನ ವಿನಾಶದತ್ತ ಸಾಗುತ್ತಿರುತ್ತದೆ. ಭಾರತ ದೇಶವು ಬ್ರಿಟಿಷ್‌ ಕಾಲದಿಂದಲೂ ಪ್ರತಿಕ್ರಿಯಾತ್ಮಕ (ಹಿನ್ನೆಡೆಗೆ ಕಾರಣವಾಗುವ) ಪ್ರವೃತ್ತಿಯನ್ನು ಅನುಭವಿಸುತ್ತಿದೆ.

‘ಮೆಕಾಲೆಈಸಮ್‌’ ಇದು ಒಂದು ಉದ್ದೇಶಪೂರ್ವಕವಾಗಿ ಮಾಡಿದ ಕಾರ್ಯಕ್ರಮ ಮತ್ತು ವಿಚಾರವಾಗಿದೆ, ಇದರ ಮೂಲಕ ಒಂದು ವಿಜಯಶಕ್ತಿಯ (ಭಾರತದ) ಸಂಸ್ಕೃತಿ ಮತ್ತು ಜ್ಞಾನವನ್ನು ಕಡೆಗಣಿಸಿ, ವಿದೇಶಿ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಶಿಕ್ಷಣ ವ್ಯವಸ್ಥೆಗೆ ಬದಲಿಸಲಾಯಿತು. ಭಾರತೀಯರ ಮುಂದಿನ ಪೀಳಿಗೆಯು ಸದಾ ಮೆಕಾಲೆಯ ಮಕ್ಕಳಾಗಿಯೇ ಇರಬೇಕು ಎಂಬುದನ್ನು ಖಚಿತಪಡಿಸಲು, ಮೆಕಾಲೆಯ ನೀತಿಯು ಸಾಮಾನ್ಯ ಜನರು ಮತ್ತು ಗಣ್ಯ ವರ್ಗಗಳ ದೃಷ್ಟಿಕೋನವನ್ನು ಅಧ್ಯಯನ ಮಾಡಿತು. ಈ ಆಶ್ಚರ್ಯಕರ ರೀತಿಯಲ್ಲಿ ವಿಶಾಲ ಮತ್ತು ಸಂಕೀರ್ಣ ದೇಶದಲ್ಲಿ ಇತರ ವಸಾಹತುಶಾಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಮೂರ್ಖತನವಾಗುತ್ತದೆ ಎಂದು ತಿಳಿದ, ಮೆಕಾಲೆ ಮತ್ತು ಅವರ ಸಹೋದ್ಯೋಗಿಗಳು ನುರಿತ ವೃತ್ತಿಪರ ಕೌಶಲ್ಯಗಳನ್ನು ಹೊಂದಿದ ವ್ಯಾಪಾರಿಗಳಾಗಿದ್ದರು. ಅದರ ಬದಲಾಗಿ, ಈ ವಿಶಾಲ ದೇಶದ ಆಡಳಿತವನ್ನು ನಡೆಸಲು ಕೆಳಗಿನ ಆಡಳಿತಾತ್ಮಕ ಅಂಶಗಳನ್ನು ನಿರ್ವಹಿಸಲು ಗುಮಾಸ್ತರು ಮತ್ತು ಇತರ ಕೆಳಮಟ್ಟದ ಮಾನವ ಸಂಪನ್ಮೂಲಗಳಾಗಿ ತರಬೇತಿ ನೀಡಲು ಭಾರತೀಯರನ್ನು ಸಿದ್ಧಪಡಿಸಿದರು. ಅವರು ನಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಗೆ ದೊಡ್ಡ ಹಾನಿ ಮಾಡಿದರು. ದುರದೃಷ್ಟವಶಾತ್‌, ನಾವಿಂದು ಭಾರತೀಯ ಸಂಗೀತ, ಇತಿಹಾಸ, ಶಾಸ್ತ್ರೀಯ ಸಾಹಿತ್ಯ, ವಿಜ್ಞಾನ ಮತ್ತು ಸಾಮಾನ್ಯವಾಗಿ ಸಮಾಜದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದೇವೆ.

ಮೆಕಾಲೆಯ ಪ್ರಕಾರ, ಶಿಕ್ಷಣದ ಗುರಿ ‘ರಕ್ತ ಮತ್ತು ಬಣ್ಣ?ದಲ್ಲಿ ಭಾರತೀಯರಾಗಿದ್ದರೂ, ತಿಳುವಳಿಕೆ, ಕಲ್ಪನೆ ಮತ್ತು ನೈತಿಕತೆಯಲ್ಲಿ ‘ಆಂಗ್ಲ’ರಾಗಿರುವ ಜನರ ವರ್ಗವನ್ನು ಸೃಷ್ಟಿಸುವುದು ಎಂಬುದಾಗಿತ್ತು. ಈ ಹೇಳಿಕೆಯು ಕೇವಲ ಜನಾಂಗೀಯ ಶ್ರೇಷ್ಠತೆಯ ವಾಸನೆಯನ್ನು ಮಾತ್ರವಲ್ಲದೆ, ಭಾರತೀಯ ಸಮಾಜವನ್ನು ವಸಾಹತುಶಾಹಿಗಳ ಪ್ರತಿಮೆಯಲ್ಲಿ ರೂಪಿಸುವ ಮತ್ತು ಶ್ರೀಮಂತ ಸ್ಥಳೀಯ ಬೌದ್ಧಿಕ ಸಂಪ್ರದಾಯವನ್ನು ದುರ್ಬಲಗೊಳಿಸುವ ಒಂದು ಭಯಾನಕ ಉದ್ದೇಶವನ್ನೂ ತೋರಿಸುತ್ತದೆ. ಪರಿಣಾಮವಾಗಿ, ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗಳನ್ನು ಕೀಳಾಗಿ ಕಾಣಲಾಯಿತು, ಇದರಿಂದ ಸಾಂಸ್ಕೃತಿಕ ಬಿರುಕು ಸೃಷ್ಟಿಯಾಯಿತು.

೨. ಭಾರತೀಯ ಶಿಕ್ಷಣವ್ಯವಸ್ಥೆಯನ್ನು ನಾಶಮಾಡಿದ್ದರಿಂದ ಆಗಿರುವ ವಿಪರೀತ ಪರಿಣಾಮ

೧೮೩೦ ರ ದಶಕದಲ್ಲಿ ಭಾರತಕ್ಕೆ ಭೇಟಿ ನೀಡಿದ ಸ್ಕಾಟಿಷ್‌ ಮಿಷನರಿ ವಿಲಿಯಂ ಆಡಮ್‌ ಅವರನ್ನು ಭಾರತೀಯ ಶಿಕ್ಷಣದ ಅಭಿವೃದ್ಧಿಯ ಕುರಿತು ವರದಿ ನೀಡಲು ಈಷ್ಟ ಇಂಡಿಯಾ ಕಂಪನಿ ಆಹ್ವಾನಿಸಿದಾಗ, ಅವರ ಅಭಿಪ್ರಾಯವು ಬಹಳ ಸಕಾರಾತ್ಮಕವಾಗಿತ್ತು. ಪಾಠಶಾಲೆಗಳಲ್ಲಿ ಸಂಪನ್ಮೂಲಗಳು ಕಡಿಮೆ ಇದ್ದವು ಎಂದು ಅವರು ಒಪ್ಪಿಕೊಂಡರು; ಆದರೆ ಅವರು ಹೀಗೆಂದು ಸಹ ಗಮನಿಸಿದರು, ‘ಅವು ಆ ಕಾಲದ ಅಗತ್ಯಗಳನ್ನು ಪೂರೈಸುತ್ತಿದ್ದವು, ಶಿಕ್ಷಕರು ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ಶಿಕ್ಷಣವನ್ನು ಆಯ್ಕೆ ಮಾಡುತ್ತಿದ್ದರು.’

ಬಹುಶಃ ನಮ್ಮಲ್ಲಿ ಅನೇಕರಿಗೆ ಇದು ತಿಳಿದಿಲ್ಲ: ಬ್ರಿಟಿಷರು ಬರುವ ಮೊದಲು ಭಾರತವು ಅತ್ಯಂತ ಶ್ರೀಮಂತ ದೇಶವಾಗಿತ್ತು. ಜಾಗತಿಕ ರಫ್ತಿನಲ್ಲಿ ಬ್ರಿಟನ್ನಿನ ಪಾಲು ಕೇವಲ ಶೇ. ೯  ರಷ್ಟಿದ್ದರೆ, ಭಾರತದ ಪಾಲು  ಶೇ. ೧೯ ಮತ್ತು ಜಿಡಿಪಿಯ (ಗ್ರಾಸ್‌ ಡೊಮೆಸ್ಟಿಕ್‌ ಪ್ರಾಡಕ್ಟ – ಒಟ್ಟು ದೇಶೀಯ ಉತ್ಪನ್ನ) ಪಾಲು ಸುಮಾರು  ಶೇ. ೩೨ ರಷ್ಟಿತ್ತು. ಇಂದು ನಮ್ಮ ಕೊಡುಗೆ ಕೇವಲ ಶೇ. ೨.೭ ರಷ್ಟಿದೆ. ಭಾರತದ ಬಹುಪಾಲು ಅಂತಾರಾಷ್ಟ್ರೀಯ ಪ್ರವಾಸಿಗರು ಭಾರತದ ಅಪಾರ ಸಂಪತ್ತಿನಿಂದ ಆಕರ್ಷಿತರಾಗಿದ್ದರು. ಅರ್ನೆಸ್ಟ ವುಡ್‌ ಅವರ ‘ಎ ಫಾರಿನರ್‌ ಡಿಫೆಂಡ್ಸ್ ಮದರ್‌ ಇಂಡಿಯಾ’ ಪುಸ್ತಕದ ಪ್ರಕಾರ, ೧೮ ನೇ ಶತಮಾನದ ಮಧ್ಯದಲ್ಲಿ ‘ಅವಳ (ಭಾರತದ) ಮಳೆಯ ಹನಿಗಳು ದೂರದ ಭೂಮಿಯನ್ನು ಪೋಷಿಸುತ್ತಿದ್ದವು.’ ೧೮ ನೇ ಶತಮಾನದ ವರೆಗೆ ಯಾವುದೇ ಪ್ರವಾಸಿಗರಿಗೂ ಭಾರತವು ಬಡ ದೇಶವಾಗಿ ಎಂದು ಕಂಡುಬಂದಿರಲಿಲ್ಲ, ಆದರೂ ಪಾಶ್ಚಿಮಾತ್ಯ ವ್ಯಾಪಾರಿಗಳು ಮತ್ತು ಸಂಶೋಧಕರು ಬಹುತೇಕ ಅಕ್ಷಯ ಸಂಪತ್ತನ್ನು ಹುಡುಕಲು ದೇಶದ ಗಡಿಗಳ ಮೇಲೆ ತುಂಬಾ ಜನರು ಸೇರುತ್ತಿದ್ದರು. ಭಾರತದಲ್ಲಿ ಊರುಗಳಲ್ಲಿನ  ಶೇ.  ೩೫ ರಿಂದ ೫೦ ರಷ್ಟು ಆಸ್ತಿಯು ಕಂದಾಯಮುಕ್ತವಾಗಿತ್ತು. ಈ ಸಂಪತ್ತನ್ನು ಶಾಲೆಗಳನ್ನು ನಡೆಸುವುದು, ದೇವಸ್ಥಾನಗಳು, ಸಮಾರಂಭಗಳು, ಔಷಧಿಗಳ ಉತ್ಪಾದನೆ, ಯಾತ್ರಿಕರಿಗೆ ಆಹಾರ ನೀಡುವುದು ಮತ್ತು ಸುಧಾರಿತ ನೀರಾವರಿ ಮುಂತಾದ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಬ್ರಿಟಿಷರು ತಮ್ಮ ದುರಾಸೆಯಿಂದ ಕಂದಾಯಮುಕ್ತ ಭೂಮಿಯನ್ನು ಶೇ. ೫ ರಷ್ಟು ಕಡಿಮೆ ಮಾಡಿದರು. ಇದರಿಂದ ಜನರು ಸ್ವ-ಪ್ರೇರಣೆಯಿಂದ ಮುಂದಾಗುತ್ತಿದ್ದ ಸ್ವಯಂಕಾರ್ಯಗಳಿಗೆ ಧಕ್ಕೆಯಾಯಿತು. ಅದಾಗ್ಯೂ, ಆಡಳಿತಗಾರರಿಗೆ ತಮ್ಮ ವಿಜಯದ ನಂತರವೂ ಇಡೀ ಸಮಾಜವು ತನ್ನ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವುದನ್ನು ಕಂಡು ನಿರಾಶೆಯಾಯಿತು. ದೇಶವು ತನ್ನ ಸಂಪ್ರದಾಯಗಳ ಬಗ್ಗೆ ಜಾಗೃತವಾಗಿರುವ ವರೆಗೆ ಮತ್ತು ಹೆಮ್ಮೆ ಪಡುವ ವರೆಗೆ, ಅವರ ‘ಬಿಳಿ ಮನುಷ್ಯನ ಹೊರೆ ಹಿಂದಿನಷ್ಟೇ ಭಾರ ಮತ್ತು ಒತ್ತಡವಾಗಿ’ ಉಳಿಯುತ್ತದೆ ಎಂಬುದನ್ನು ಅವರು ಕಂಡುಕೊಂಡರು !

೩. ಭಾರತದ ಸುಸ್ಥಾಪಿತ ಶಿಕ್ಷಣವ್ಯವಸ್ಥೆ

ಆ ಸಮಯದಲ್ಲಿ ಭಾರತವು ಒಂದು ಸುಸ್ಥಾಪಿತ ಶಿಕ್ಷಣವ್ಯವಸ್ಥೆಯನ್ನು ಹೊಂದಿತ್ತು. ಇತ್ತೀಚಿನ ದಿನಗಳಲ್ಲಿ, ‘ಕೆಳ ಜಾತಿಗಳಲ್ಲಿ ಶಿಕ್ಷಣದ ಕೊರತೆಯಿತ್ತು ಮತ್ತು ಬ್ರಾಹ್ಮಣರು ಮಾತ್ರ ಸಂಸ್ಕೃತದಲ್ಲಿ ಶಿಕ್ಷಣವನ್ನು ನೀಡುತ್ತಿದ್ದರು’ ಎಂದು ನಂಬಲು ನಮ್ಮಲ್ಲಿ ಹೆಚ್ಚಿನವರಿಗೆ ಒತ್ತಾಯಿಸಲಾಯಿತು. ಬ್ರಿಟಿಷರು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ನಾಶಪಡಿಸಿದರು, ದೇಶದ ಪ್ರತಿಯೊಬ್ಬ ವಿದ್ಯಾವಂತ ವ್ಯಕ್ತಿಯನ್ನು ಅನಕ್ಷರಸ್ಥನನ್ನಾಗಿ ಹೇಗೆ ಮಾಡಿದರು ಎಂಬುದರ ವಿವರವಾದ ವಿವರ ಇಲ್ಲಿದೆ.

೧೯೩೧ ರಲ್ಲಿ ದುಂಡುಮೇಜಿನ ಪರಿಷತ್ತಿನಲ್ಲಿ  ಮೊಹನದಾಸ ಗಾಂಧಿ ಅವರು ಹೀಗೆ ಹೇಳಿದರು, ‘ಬ್ರಿಟಿಷರೇ, ನೀವು ಶಿಕ್ಷಣದ ಸುಂದರವಾದ ಮರವನ್ನು ಕಡಿದು ಹಾಕಿದ್ದೀರಿ. ಅದಕ್ಕಾಗಿಯೇ ಇಂದು ಭಾರತವು ಒಂದು ಶತಮಾನದ ಹಿಂದಿನಕ್ಕಿಂತಲೂ ಬಹಳ ಕಡಿಮೆ ಸಾಕ್ಷರವಾಗಿದೆ.’  ಸಂಸತ್‌ ಸದಸ್ಯರಾದ ಫಿಲಿಪ್‌ ಹಾಟಾಂಗ್‌ ತಕ್ಷಣವೇ ಎದ್ದು ನಿಂತು, ‘ಗಾಂಧೀಜಿ, ನಾವು ಭಾರತದ ಜನರಿಗೆ ಶಿಕ್ಷಣ ನೀಡಿದ್ದೇವೆ. ಆದ್ದರಿಂದ ನೀವು ನಿಮ್ಮ ಹೇಳಿಕೆಯನ್ನು ಹಿಂಪಡೆಯಬೇಕು, ಕ್ಷಮೆ ಕೇಳಬೇಕು ಅಥವಾ ಪುರಾವೆ ನೀಡಬೇಕು’ ಎಂದರು. ಗಾಂಧಿಯವರು ಅದನ್ನು ಸಾಬೀತುಪಡಿಸುವುದಾಗಿ ಭರವಸೆ ನೀಡಿದರು. ಆದಾಗ್ಯೂ, ಸಮಯದ ಕೊರತೆಯಿಂದಾಗಿ ಚರ್ಚೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಗಾಂಧೀಜಿಯವರ ಶಿಷ್ಯರಾದ ಶ್ರೀ. ಧರ್ಮಪಾಲ ಅವರು ನಂತರ ಬ್ರಿಟಿಷ್‌ ಮ್ಯೂಸಿಯಂಗೆ ಭೇಟಿ ನೀಡಿ ದಾಖಲೆಗಳು ಮತ್ತು ವರದಿಗಳನ್ನು ಪರಿಶೀಲಿಸಿದರು. ಅವರು ‘ದಿ ಬ್ಯೂಟಿಫುಲ್‌ ಟ್ರೀ’ ಎಂಬ ಪುಸ್ತಕವನ್ನು ಬರೆದರು, ಅದರಲ್ಲಿ ಈ ವಿಷಯವನ್ನು ವಿವರವಾಗಿ ಚರ್ಚಿಸಲಾಗಿದೆ. ೧೮೨೦ ರ ಹೊತ್ತಿಗೆ ಬ್ರಿಟಿಷರು ಸುಮಾರು ೨೦ ವರ್ಷಗಳಿಂದ ತಮ್ಮ ಶಿಕ್ಷಣ ವ್ಯವಸ್ಥೆಗೆ ಹಣಕಾಸು ಕಡಿಮೆ ಮಾಡುತ್ತಿದ್ದರೂ, ಭಾರತೀಯರು ತಮ್ಮ ಸ್ವಂತ ಕೆಲಸವನ್ನು ಮುಂದುವರಿಸಿದರು. ಆದ್ದರಿಂದ, ಬ್ರಿಟಿಷರು ಈ ವ್ಯವಸ್ಥೆಯ ಸಂಕೀರ್ಣತೆಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಲು ನಿರ್ಧರಿಸಿದರು. ಪರಿಣಾಮವಾಗಿ, ೧೮೨೨ ರಲ್ಲಿ ಬ್ರಿಟಿಷ್‌ ಜಿಲ್ಲಾಧಿಕಾರಿಗಳಿಗೆ ಒಂದು ಸಮೀಕ್ಷೆಯನ್ನು ನಡೆಸುವ ಕೆಲಸವನ್ನು ನೀಡಲಾಯಿತು. ಸಮೀಕ್ಷೆಯ ಪ್ರಕಾರ, ಬಂಗಾಳ ಪ್ರೆಸಿಡೆನ್ಸಿಯಲ್ಲಿ ೧ ಲಕ್ಷ ಗ್ರಾಮೀಣ ಶಾಲೆಗಳಿದ್ದವು.

ಮದ್ರಾಸ್‌ನಲ್ಲಿ ಪ್ರತಿ ಊರಿನಲ್ಲಿ ಒಂದು ಶಾಲೆ ಇತ್ತು ಮತ್ತು ಸುಮಾರು ೧೦೦ ಜನಸಂಖ್ಯೆ ಇರುವ ಮುಂಬಯಿಯ ಪ್ರತಿ ಊರಲ್ಲಿ ಒಂದು ಶಾಲೆ ಇತ್ತು. ಈ ಶಾಲೆಗಳಲ್ಲಿ ವಿವಿಧ ಜಾತಿಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ಶೇ. ೭ ರಿಂದ  ಶೇ. ೪೮ ರಷ್ಟು ಶಿಕ್ಷಕರು ಬ್ರಾಹ್ಮಣರಾಗಿದ್ದರೆ, ಪ್ರತಿ ಜಿಲ್ಲೆಯ ಉಳಿದ ಶಿಕ್ಷಕರು ಇತರ ಜಾತಿಗಳಿಗೆ ಸೇರಿದವರಾಗಿದ್ದರು. ಇದಲ್ಲದೆ, ಪ್ರತಿ ಮಗುವಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುತ್ತಿತ್ತು. ಪ್ರಸ್ತುತದ ಪ್ರಾಥಮಿಕ ಶಿಕ್ಷಣಕ್ಕೆ ಸಮನಾದ ಶಿಕ್ಷಣವು ೪ ರಿಂದ ೫ ವರ್ಷಗಳ ಕಾಲ ನಡೆಯುತ್ತಿತ್ತು.

೪. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಬೆಲ್‌ ಎಂಬ ಕ್ರೈಸ್ತ ಮಿಷನರಿಯು ಇಂಗ್ಲೆಂಡ್‌ಗೆ ಕೊಂಡೊಯ್ದನು

ದೇಶದ ಪ್ರಗತಿಗಾಗಿ ಕೆಲವು ಆಯ್ದ ಜನರಿಗೆ ಉನ್ನತ ಶಿಕ್ಷಣ ಮಾತ್ರವಲ್ಲ, ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವೂ ಅಗತ್ಯ ಎಂದು ನಮಗೆಲ್ಲ ತಿಳಿದಿದೆ. ಬ್ರಿಟಿಷ್‌ ಆಡಳಿತವು ಭಾರತೀಯ ಶಿಕ್ಷಕರ ಬದ್ಧತೆ ಮತ್ತು ಕೌಶಲ್ಯವನ್ನು ಮೆಚ್ಚಿತು. ವಿದ್ಯಾರ್ಥಿಗಳು ಶಾಲೆಯನ್ನು ತೊರೆದ ನಂತರ ಅವರು ಸ್ಪರ್ಧಿಸುವ, ತಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಅದರ ನಿಜವಾದ ತಿಳುವಳಿಕೆಯನ್ನು ಪಡೆಯುವ ಸಾಮಥ್ಯರ್ವನ್ನು ಬೆಳೆಸಿಕೊಂಡಿದ್ದರು. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಮದ್ರಾಸ್‌ನಲ್ಲಿರುವ ಬೆಲ್‌ ಎಂಬ ಕ್ರೈಸ್ತ ಮಿಷನರಿಯು ಇಂಗ್ಲೆಂಡ್‌ಗೆ ಕೊಂಡೊಯ್ದರು. ಅವರು ಇಂಗ್ಲೆಂಡ್‌ನ ಸಾಮಾನ್ಯ ಜನರಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದರು, ಅಲ್ಲಿಯವರೆಗೆ ಕೇವಲ ಗಣ್ಯ ವರ್ಗದ ಮಕ್ಕಳು ಮಾತ್ರ ಶಿಕ್ಷಣವನ್ನು ಪಡೆಯುತ್ತಿದ್ದರು. ಈ ಮೂಲಕ, ‘ಬ್ರಿಟಿಷರು ಭಾರತದಿಂದ ಸಾಮೂಹಿಕ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಂಡರು’ ಎಂದು ನಾವು ತೀರ್ಮಾನಿಸಬಹುದು.

೫. ಗುರುಕುಲಗಳಲ್ಲಿ ಮಹಿಳೆಯರಿಗೆ ಆಡಳಿತಾತ್ಮಕ ಶಿಕ್ಷಣದೊಂದಿಗೆ ಯುದ್ಧಕಲೆಯಲ್ಲಿ ನಿಪುಣರನ್ನಾಗಿ ಮಾಡುವುದು

ಇದರಲ್ಲಿ ಕೆಲವು ಗುರುಕುಲಗಳು ಕ್ರಮೇಣ ಅಭಿವೃದ್ಧಿ ಹೊಂದಿ ನಾವಿಂದು ಅವುಗಳನ್ನು ವಿಶ್ವವಿದ್ಯಾಲಯಗಳು ಎಂದು ಕರೆಯುತ್ತಿದ್ದೇವೆ. ಇದರ ಕಾರಣಗಳು ಅವುಗಳ ವ್ಯಾಪಕ ಜನಪ್ರಿಯತೆಯಿಂದ ಹಿಡಿದು ಪ್ರಸಿದ್ಧ ಸ್ಥಳಗಳಲ್ಲಿ ವಿದ್ಯಾರ್ಥಿಗಳು ಗುಂಪುಗೂಡುವುದರ ವರೆಗೆ ಇರಬಹುದು, ಇದರಿಂದ ವಿಶ್ವವಿದ್ಯಾಲಯಗಳು ಸ್ಥಾಪನೆಯಾದವು. ಅವು ಸುಧಾರಿತ ಶಿಕ್ಷಣದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ವೈದಿಕ ಸಂಸ್ಕೃತಿ, ವಿಶೇಷವಾಗಿ ಆರಂಭಿಕ ವೈದಿಕ ಸಮಾಜವು ಅತ್ಯಂತ ಉದಾರ ಮತ್ತು ಸಮಾನತೆಯುಳ್ಳದ್ದಾಗಿತ್ತು. ಋಷಿಗಳು ಗುರುಕುಲಗಳಲ್ಲಿ ಜ್ಞಾನವನ್ನು ನೀಡುತ್ತಿದ್ದರು ಮತ್ತು ಗಂಡು-ಹೆಣ್ಣು ಇಬ್ಬರಿಗೂ ಅಲ್ಲಿ ಶಿಕ್ಷಣ ಸಿಗುತ್ತಿತ್ತು. ಶಿಕ್ಷಣದ ಶೈಕ್ಷಣಿಕ ವಿಷಯ ಮತ್ತು ಆಶಯವನ್ನು ವಿದ್ಯಾರ್ಥಿಯ ವರ್ಣಕ್ಕನುಗುಣವಾಗಿ ನಿರ್ಧರಿಸಲಾಗುತ್ತಿತ್ತು. ಐತಿಹಾಸಿಕ ಪುರಾವೆಗಳು ಅಪಾಲಾ ಮತ್ತು ಲೋಪಮುದ್ರಾ ಅವರಂತಹ ಋಷಿಪತ್ನಿಯರು ವೈದಿಕ ಸ್ತೋತ್ರಗಳನ್ನು ರಚಿಸಿದ್ದಾರೆ ಎಂಬುದನ್ನು ತೋರಿಸುತ್ತವೆ. ತಮ್ಮ ಇಡೀ ಜೀವನವನ್ನು ಅಧ್ಯಯನ ಮಾಡಿದ ಮಹಿಳೆಯರನ್ನು ‘ಬ್ರಹ್ಮವಾದಿನಿ’ ಎಂದು ಗುರುತಿಸಲಾಗುತ್ತಿತ್ತು. ನಂತರದ ವೈದಿಕ ಯುಗದಲ್ಲಿ ಗಾರ್ಗಿ ಮತ್ತು ಮೈತ್ರೇಯಿ ಅವರಂತಹ ಹೆಚ್ಚು ವಿದ್ವಾಂಸ ಮಹಿಳೆಯರು ಇದ್ದರು. ಹೌದು, ವೈದಿಕ ಕಾಲದಲ್ಲಿ ಮಹಿಳೆಯರು ಗುರುಕುಲಗಳಿಗೆ ಹೋಗುತ್ತಿದ್ದರು ಮತ್ತು ಕೆಲವರು ಮನೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಉದಾಹರಣೆಗೆ, ರಾಜ ದಶರಥನ ಪತ್ನಿ ಕೈಕೇಯಿ ಮತ್ತು ಅರ್ಜುನನ ಪತ್ನಿ ಚಿತ್ರಾಂಗದಾ ಯುದ್ಧಕಲೆಯಲ್ಲಿ ತರಬೇತಿ ಪಡೆದು ನುರಿತ ಯೋಧೆಯರಾಗಿದ್ದರು. ಕೈಕೇಯಿಯು ರಥ ಚಲಾಯಿಸಲೂ ಸಹ ಕಲಿತಿದ್ದಳು. ಸತ್ಯಭಾಮಾ ಯುದ್ಧದಲ್ಲಿ ತರಬೇತಿ ಪಡೆಯುತ್ತಿದ್ದಳು ಮತ್ತು ನರಕಾಸುರನ ವಿರುದ್ಧದ ಯುದ್ಧದಲ್ಲಿ ಕೃಷ್ಣನ ಜೊತೆಗಿರುತ್ತಾಳೆ. ದ್ರೌಪದಿ ರಾಜ್ಯದ ಖಜಾನೆ ಮತ್ತು ಆರ್ಥಿಕ ನಿರ್ವಹಣೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಳು. ವನ ಪರ್ವದಲ್ಲಿ, ಆಕೆಯು ಮದುವೆಯ ಮೊದಲು ದ್ರುಪದನ ಅರಮನೆಯಲ್ಲಿ ಶಿಕ್ಷಣವನ್ನು ಪಡೆದಿದ್ದಳು ಎಂದು ವಿವರಿಸಲಾಗಿದೆ. ಖಜುರಾಹೋ ದೇವಾಲಯದಂತಹ ಪ್ರಾಚೀನ ದೇವಾಲಯಗಳ ಗೋಡೆಗಳನ್ನು ನೋಡಿ, ಅಲ್ಲಿ ಗುರುಕುಲಗಳ ದೃಶ್ಯಗಳಿವೆ, ಅಲ್ಲಿ ಒಬ್ಬ ಋಷಿಯು ಮಕ್ಕಳಿಗೆ ಪಾಠ ಮಾಡುತ್ತಿದ್ದು, ಗಂಡು ಮತ್ತು ಹೆಣ್ಣು ಮಕ್ಕಳು ಪಾಟಿ ಚೀಲಗಳು ಮತ್ತು ಪಾಟಿಗಳನ್ನು ಹಿಡಿದು ಅವರ ಮಧ್ಯದಲ್ಲಿ ಕುಳಿತು ಬರೆಯುತ್ತಿದ್ದಾರೆ.

೬. ಶಿಕ್ಷಣವ್ಯವಸ್ಥೆಯನ್ನು ಮೆಕಾಲೆಯ ವೈಶಿಷ್ಟ್ಯಗಳಿಂದ ಮುಕ್ತಗೊಳಿಸಬೇಕು !

ಒಂದು ರಾಷ್ಟ್ರವಾಗಿ ನಾವು ನಿಜವಾಗಿಯೂ ದುರ್ಬಲರಾಗಬಾರದು ಎಂದು ಬಯಸಿದರೆ, ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮೆಕಾಲೆಯ ವೈಶಿಷ್ಟ್ಯಗಳಿಂದ ಮುಕ್ತಗೊಳಿಸಬೇಕು ಮತ್ತು ಒಟ್ಟಿಗೆ ಕಟ್ಟಿರುವ ಸಂಸ್ಕೃತಿಪೂರಕವಾದ ಶುದ್ಧ ಜ್ಞಾನವನ್ನು ಪಡೆಯಬೇಕು. ಅದರ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ಯುವ ಪೀಳಿಗೆಯ ಮುಂದೆ ಪ್ರಸ್ತುತಪಡಿಸಬೇಕು, ಇದರಿಂದ ಅವರು ಅದನ್ನು ಅಳವಡಿಸಿಕೊಂಡರೆ, ಅವರು ಕಾಲಾನಂತರದಲ್ಲಿ ಬಲಗೊಳ್ಳುತ್ತಾ, ಉದಾತ್ತವಾಗುತ್ತಾ ಮತ್ತು ಭವ್ಯವಾಗುತ್ತಾ ಹೋಗುವ ಜ್ಞಾನದಿಂದ ಪ್ರಗತಿ ಹೊಂದುತ್ತಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೀಘ್ರದಲ್ಲೇ ಸರಿಯಾದ ರೀತಿಯಲ್ಲಿ ಜಾರಿಗೆ ತರಬೇಕು. – ಪಂಕಜ ಜಗನ್ನಾಥ ಜೈಸ್ವಾಲ್‌

(ಆಧಾರ: ‘ಹಿಂದುಸ್ಥಾನ ಸಮಾಚಾರ’ ಜಾಲತಾಣ)