ವಾಸ್ತುಪುರುಷನ ಜನ್ಮ ಕಥೆ !

‘ವಾಸ್ತುಶಾಸ್ತ್ರ’ದ ಮಾಹಿತಿಯನ್ನು ನೀಡುವ ಲೇಖನಮಾಲೆ : ಭಾಗ ೩


‘ಮತ್ಸ್ಯಪುರಾಣ’ದಲ್ಲಿ ೨೫೨ ನೇ ಅಧ್ಯಾಯದಲ್ಲಿ ವಾಸ್ತುಪುರುಷನ ಜನ್ಮ ಕಥೆಯನ್ನು ನೀಡಲಾಗಿದೆ. ಈ ಕಥೆಯ ಮೂಲಕ ವಾಸ್ತುವಿನಲ್ಲಿ ಉಂಟಾದ ವಿವಿಧ ಪದವಿಗಳು, ವಾಸ್ತುವಿನಲ್ಲಿ ವಾಸ್ತುಪುರುಷನ ಸ್ಥಾನ ಮತ್ತು ಅವನ ಅವಯವ ಇವುಗಳ ಬಗ್ಗೆ ಇರುವ ವಾಸ್ತುಶಾಸ್ತ್ರದ ನಿಯಮಗಳು ಸ್ಪಷ್ಟವಾಗುತ್ತವೆ. ಇದಕ್ಕಾಗಿ ನಾವು ಈ ಕಥೆಯನ್ನು ತಿಳಿದುಕೊಳ್ಳೋಣ.

೧. ‘ವಾಸ್ತುಶಾಂತಿ ಯಜ್ಞ’ವು ಹೀಗೆ ಆರಂಭವಾಯಿತು !

೧ ಅ. ಕರಾಳಮುಖ ಪುರುಷನ ಹಸಿವು ಶಮನವಾಗದ ಕಾರಣ ಅವನು ತಪಸ್ಸು ಮಾಡಿ ಭಗವಂತನಿಂದ ವರವನ್ನು ಪಡೆಯುವುದು : ಅಂಧಕಾಸುರ ಎಂಬ ಹೆಸರಿನ ರಾಕ್ಷಸನಿದ್ದನು. ಆ ರಾಕ್ಷಸನೊಂದಿಗೆ ಭೀಕರ ಯುದ್ಧ ಮಾಡಿ ಭಗವಾನ ಶಿವನು ಅವನನ್ನು ಸಂಹರಿಸಿದನು. ಈ ಯುದ್ಧದ ಶ್ರಮದಿಂದಾಗಿ ಶಿವನ ಹಣೆಯಿಂದ ಒಂದು ಧರ್ಮಬಿಂದು (ಬೆವರಿನ ಹನಿ) ಭೂಮಿಯ ಮೇಲೆ ಬಿತ್ತು. ಆ ಬೆವರಿನ ಹನಿಯಿಂದ ಕರಾಳಮುಖನೆಂಬ ಹೆಸರಿನ ಓರ್ವ ಅದ್ಭುತ ಪುರುಷನ ಜನ್ಮವಾಯಿತು. ಹುಟ್ಟಿನಿಂದಲೇ ಅವನು ಅತ್ಯಂತ ಕ್ಷುಧಾಕ್ರಾಂತ (ಹಸಿವಿನಿಂದ ಕಂಗೆಟ್ಟಿದ್ದ)ನಾಗಿದ್ದರಿಂದ, ಅವನು ಸತ್ತ ಅಂಧಕಾಸುರನನ್ನು ತಿಂದನು, ಆದರೂ ಅವನ ಹಸಿವು ಶಮನವಾಗಲಿಲ್ಲ. ಕೊನೆಗೆ ಅವನು ಶಿವಶಂಕರನನ್ನು ಪ್ರಾರ್ಥಿಸಿದನು. ಕಠಿಣ ತಪಸ್ಸು ಮಾಡಿ ಅವನು ಭಗವಂತನಲ್ಲಿ, ”ನನ್ನ ಹಸಿವನ್ನು ನೀಗಿಸಲು ಸಪ್ತಲೋಕ, ಸಪ್ತಪಾತಾಳ ಹಾಗೂ ಸಂಪೂರ್ಣ ಬ್ರಹ್ಮಾಂಡವನ್ನೇ ಭಕ್ಷಣೆ ಮಾಡಲು ನನಗೆ ಅನುಮತಿ ನೀಡು ಮತ್ತು ನನ್ನ ಹಸಿವು ತಣಿಯಲಿ’’, ಎಂದು ವರ ಬೇಡತೊಡಗಿದನು.

೧ ಆ. ದೇವ-ದಾನವರು ಒತ್ತಿ ಹಿಡಿದಿದ್ದರಿಂದ ವಾಸ್ತುಪುರುಷನು ದೇವರು ಮುಂತಾದವರಿಗೆ ಪ್ರಾರ್ಥನೆಯನ್ನು ಮಾಡುವುದು ಮತ್ತು ನಂತರ ಬ್ರಹ್ಮಾದಿ ದೇವತೆಗಳು ಅವನಿಗೆ ಮಾರ್ಗದರ್ಶನ ಮಾಡುವುದು : ಮಹಾದೇವನು ಅವನ ತಪಸ್ಸಿಗೆ ಪ್ರಸನ್ನನಾಗಿ ‘ತಥಾಸ್ತು’ ಎಂದನು ಮತ್ತು ಇಡೀ ಜಗತ್ತಿನಲ್ಲಿ ಹಾಹಾಕಾರ ಉಂಟಾಯಿತು. ದೇವ-ದಾನವರಿಗೆ ತಮ್ಮ ಮುಂದಿನ ಭವಿಷ್ಯದ ಅರಿವಾಗಿ ಎಲ್ಲರೂ ಭಯಭೀತರಾದರು. ಎಲ್ಲರೂ ಒಗ್ಗೂಡಲು ನಿರ್ಧರಿಸಿದರು ಮತ್ತು ಮಹಾದೇವನಿಂದ ವರವನ್ನು ಪಡೆದಿದ್ದ ಆ ಪುರುಷನನ್ನು ಸಂಪೂರ್ಣ ಶಕ್ತಿಯೊಂದಿಗೆ ಕೆಳಮುಖವಾಗಿ ಮಲಗಿಸಿದರು. ಅವನ ತಲೆಯನ್ನು ಈಶಾನ್ಯಕ್ಕೆ ಮತ್ತು ಕಾಲುಗಳನ್ನು ನೈಋತ್ಯಕ್ಕೆ ಬರುವಂತೆ ಒತ್ತಿ ಹಿಡಿದರು. ಕೆಲವು ದೇವ-ದಾನವರು ಅವನ ವಿವಿಧ ಅವಯವಗಳ ಮೇಲೆ ಕುಳಿತುಕೊಂಡರು. ದೇವ-ದಾನವರು ಎಲ್ಲಿ ವಾಸ್ತುಪುರುಷನನ್ನು ಒತ್ತಿ ಹಿಡಿದಿದ್ದರೋ, ಆ ಸ್ಥಳದಲ್ಲಿಯೇ ಅವನು ವಾಸಿಸತೊಡಗಿದನು ಮತ್ತು ಅವನು ‘ವಾಸ್ತುಪುರುಷ’ನೆಂದು ಗುರುತಿಸಲ್ಪಟ್ಟನು. ಆ ಸ್ಥಿತಿಯಲ್ಲಿ ಅವನು ದೇವತೆ ಮುಂತಾದವರಲ್ಲಿ ಪ್ರಾರ್ಥನೆಯನ್ನು ಮಾಡಿದನು,

ಅವಷ್ಟಬ್ಧೇನ ತೇನಾಪಿ ವಿಜ್ಞಪ್ತಾಃ ಸರ್ವದೇವತಾಃ |

ಪ್ರಸೀದಧ್ವಂ ಸುರಾಃ ಸರ್ವೇ ಯುಷ್ಮಾಭಿರ್ನಿಶ್ಚಲೀಕೃತಃ ||

ಸ್ಥಾಸ್ಯಾಮಹಂ ಕಿಮಾಕಾರೋ ಹ್ಯವಷ್ಟಬ್ಧೋ ಹ್ಯಧೋಮುಖಃ |

ತತೋ ಬ್ರಹ್ಮಾದಿಭಿಃ ಪ್ರೋಕ್ತಂ ವಾಸ್ತುಮಧ್ಯೇ ತು ಯೋ ಬಲಿಃ ||

ಆಹಾರೋ ವೈಶ್ವದೇವಾಂತೇ ನೂನಮಸ್ಯ ಭವಿಷ್ಯತಿ |

ವಾಸ್ತೂಪಶಮನೋ ಯಜ್ಞಸ್ತವಾಹಾರೋ ಭವಿಷ್ಯತಿ ||

ಯಜ್ಞೋತ್ಸವಾದೌ ಚ ಬಲಿಸ್ತವಾಹಾರೋ ಭವಿಷ್ಯತಿ |

ವಾಸ್ತುಪೂಜಾಮಕೂರ್ವಾಣಸ್ತವಾಹಾರೋ ಭವಿಷ್ಯತಿ ||

ಅಜ್ಞಾನಾತ್‌ ತು ಕೃತೋ ಯಜ್ಞಸ್ತವಾಹಾರೋ ಭವಿಷ್ಯತಿ ಏವಮುಕ್ತಸ್ತತೋ ಹ್ಯಷ್ಟಃ ಸ ವಾಸ್ತೂರಭವತ್‌ ತದಾ |

ವಾಸ್ತುಯಜ್ಞಃ ಸ್ಮೃತಸ್ತಸ್ಮಾತ್‌ ತತಃ ಪ್ರಭೃತಿ ಶಾಂತಯೇ ||

– ಮತ್ಸ್ಯಪುರಾಣ, ಅಧ್ಯಾಯ ೨೫೨, ಶ್ಲೋಕ ೧೫ ರಿಂದ ೧೯

ಅರ್ಥ : ‘ಹೇ ದೇವತೆಗಳೇ, ಪ್ರಸನ್ನರಾಗಿ ! ನೀವು ನನ್ನನ್ನು ಒತ್ತಿ ಹಿಡಿದಿರುವುದರಿಂದ ನಾನು ನಿಶ್ಚಲನಾಗಿದ್ದೇನೆ. ಕೆಳಮುಖ ವಾಗಿರುವ ಈ ಸ್ಥಿತಿಯಲ್ಲಿ ನಾನೆಷ್ಟು ಕಾಲವಿರಲು ಸಾಧ್ಯ ? ದಯವಿಟ್ಟು ಕರುಣಿಸಿ.’ ಅವನ ಈ ನಿವೇದನೆಯ ನಂತರ, ಬ್ರಹ್ಮಾದಿ ದೇವತೆಗಳು ಅವನಿಗೆ, ‘ವಾಸ್ತುವಿನ ಸಂದರ್ಭದಲ್ಲಿ, ಹಾಗೆಯೇ ವೈಶ್ವದೇವರ ಕೊನೆಯಲ್ಲಿ ಯಾವ ಬಲಿಯನ್ನು ನೀಡಲಾಗುತ್ತದೆಯೋ, ಅದು ಖಂಡಿತವಾಗಿಯೂ ನಿನ್ನ ಆಹಾರ ಆಗುತ್ತದೆ. ವಾಸ್ತುಶಾಂತಿಗಾಗಿ ನಡೆಯುವ ಯಜ್ಞವು ಸಹ ನಿನಗೆ ಆಹಾರದ ರೂಪದಲ್ಲಿ ಪ್ರಾಪ್ತವಾಗುತ್ತದೆ. ಯಜ್ಞೋತ್ಸವದಲ್ಲಿ ನೀಡಲಾಗುವ ಬಲಿಯೂ ನಿನಗೆ ಪ್ರಾಪ್ತವಾಗುತ್ತದೆ. ಯಾರು ವಾಸ್ತುಪೂಜೆಯನ್ನು ಮಾಡುವುದಿಲ್ಲವೋ, ಅವರು ಸಹ ನಿನಗೆ ಆಹಾರ ರೂಪದಲ್ಲಿ ದೊರೆಯುತ್ತಾರೆ. ಅಜ್ಞಾನದಿಂದ ಮಾಡಿದ ಯಜ್ಞವೂ ನಿನಗೆ ಪ್ರಾಪ್ತವಾಗುತ್ತದೆ’, ಎಂದು ಹೇಳಿದರು. ಇದನ್ನು ಕೇಳಿದ ನಂತರ ವಾಸ್ತುಪುರುಷನು ಸಂತೋಷಪಟ್ಟನು, ಅಂದಿನಿಂದ ‘ವಾಸ್ತುಶಾಂತಿ ಯಜ್ಞ’ವು ಪ್ರಾರಂಭವಾಯಿತು.

೨. ವಾಸ್ತುಶಾಂತಿಯನ್ನು ಮಾಡುವುದರ ಮಹತ್ವ !

ಮೇಲಿನ ಶ್ಲೋಕದಲ್ಲಿ ‘ಯಾರು ವಾಸ್ತುಪೂಜೆಯನ್ನು ಮಾಡುವುದಿಲ್ಲವೋ, ಅವರು ಸಹ ನಿನ್ನ ಆಹಾರವಾಗುತ್ತಾರೆ’ ಎಂದು ಬ್ರಹ್ಮಾದಿ ದೇವತೆಗಳು ವಾಸ್ತುಪುರುಷನಿಗೆ ಹೇಳಿದ್ದಾರೆ. ಇದರಿಂದ ವಾಸ್ತುಶಾಂತಿ ಮಾಡುವುದರ ಮಹತ್ವವು ತಿಳಿಯುತ್ತದೆ. ವಾಸ್ತುಶಾಂತಿಯನ್ನು ಮಾಡದೇ ವ್ಯಕ್ತಿಯು ವಾಸ್ತುವಿನಲ್ಲಿ ವಾಸಿಸಿದರೆ, ನಿಶ್ಚಿತವಾಗಿಯೂ ಅವನು ವಾಸ್ತುಪುರುಷನ ಆಹಾರವಾಗುತ್ತಾನೆ, ಅಂದರೆ ಯಾವುದೇ ಶುಭ ಕಾರ್ಯದ ಫಲವು ಅವನಿಗೆ ದೊರೆಯುವುದಿಲ್ಲ, ಹಾಗೆಯೇ ವಾಸ್ತುಪುರುಷನ ಅವಕೃಪೆಯಿಂದ ಕಷ್ಟಗಳನ್ನು ಭೋಗಿಸಬೇಕಾಗುತ್ತದೆ.

೩. ವಾಸ್ತುನಿರ್ಮಿತಿ ಮತ್ತು ವಾಸ್ತುಪುರುಷ !

ಈ ಕಥೆಯ ಗರ್ಭಿತಾರ್ಥವೇನೆಂದರೆ, ಶ್ರಮವಹಿಸಿ ಬೆವರು ಸುರಿಸದೆ ವಾಸ್ತುವಿನ ನಿರ್ಮಾಣ ಸುಲಭವಾಗಿ ಸಾಧ್ಯವಿಲ್ಲ. ವಾಸ್ತುನಿರ್ಮಾಣಕ್ಕಾಗಿ ದೇವಶಕ್ತಿ (ಬುದ್ಧಿಜೀವಿಗಳಾಗಿ ಕೆಲಸ ಮಾಡುವವರು, ಉದಾಹರಣೆಗೆ ಇಂಜಿನೀಯರ್‌ಗಳು, ವಾಸ್ತು ಶಿಲ್ಪಿಗಳು ಇತ್ಯಾದಿ) ಮತ್ತು ದೈತ್ಯ ಪ್ರವೃತ್ತಿ (ಶಾರೀರಿಕ ಶ್ರಮದ ಕೆಲಸಗಳನ್ನು ಮಾಡುವವರು) ಈ ಎರಡೂ ಶಕ್ತಿಗಳ ಅವಶ್ಯಕತೆ ಇರುತ್ತದೆ. ಇಬ್ಬರ ಸಹಾಯವಿಲ್ಲದೇ ವಾಸ್ತುನಿರ್ಮಾಣ ಸಾಧ್ಯವಿಲ್ಲ. ಇವೆರಡೂ ಶಕ್ತಿಗಳ ಒಗ್ಗೂಡುವಿಕೆಯ ಪ್ರತೀಕವೇ ವಾಸ್ತುಪುರುಷ !

೪. ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರ

ವಾಸ್ತುಶಾಸ್ತ್ರವು ಜ್ಯೋತಿಷ್ಯಶಾಸ್ತ್ರದ ಒಂದು ಭಾಗವಾಗಿದೆ. ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದ ನಡುವಿನ ಸಂಬಂಧವನ್ನು ಮುಂದಿನ ಉದಾಹರಣೆಯಿಂದ ತಿಳಿದುಕೊಳ್ಳೋಣ. ಸಂಚಾರವಾಣಿ (ಮೊಬೈಲ್‌)ಯಲ್ಲಿ ನಮಗೆ ಎದುರಿನ ವ್ಯಕ್ತಿಯ ಧ್ವನಿ ಸರಿಯಾಗಿ ಕೇಳಿಸದಿದ್ದರೆ, ಅದರ ಹಿಂದೆ ೨ ಕಾರಣಗಳಿರಬಹುದು: ಒಂದೆಂದರೆ, ‘ರೇಂಜ್‌’ನ ಸಮಸ್ಯೆ (ಧ್ವನಿ ತರಂಗಗಳು ತಲುಪಲು ಮಿತಿ) ಇರುತ್ತದೆ ಅಥವಾ ಮೊಬೈಲ್‌ನ ಧ್ವನಿವರ್ಧಕವು ಕೆಟ್ಟು ಹೋಗಿರುತ್ತದೆ. ಆದ್ದರಿಂದ, ನಾವು ಅದನ್ನು ತಜ್ಞರ ಬಳಿಗೆ ತೆಗೆದುಕೊಂಡು ಹೋಗಿ ದುರುಸ್ತಿ ಮಾಡಿಸು ತ್ತೇವೆ; ಆದರೆ ‘ರೇಂಜ್‌’ನ ಸಮಸ್ಯೆಯೇ ಇದ್ದರೆ, ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ನಮ್ಮ ಮೂಲ ಜಾತಕವು ಗೋಪುರದ (ಟವರ್‌ನ) ‘ರೇಂಜ್‌’ನಂತಿದೆ. ಅದರಲ್ಲಿ ನಾವು ಬದಲಾವಣೆ ಮಾಡಲು ಸಾಧ್ಯವಿಲ್ಲ; ಆದರೆ ವಾಸ್ತುವು ಸಂಚಾರವಾಣಿ (ಮೊಬೈಲ್) ಉಪಕರಣದಂತಿರುತ್ತದೆ, ನಾವು ಅದನ್ನು ದುರುಸ್ತಿ ಮಾಡಿಸಿ ಅಥವಾ ಪ್ರಸಂಗ ಬಂದರೆ ನಾವು ಅದನ್ನು ಬದಲಾಯಿಸಬಹುದು.

೫. ವಾಸ್ತು ಲಾಭದಾಯಕವಾಗಲು ಗಮನದಲ್ಲಿಡಬೇಕಾದ ಅಂಶಗಳು !

ಜಾತಕ ಅಂದರೆ ನಮ್ಮ ಜನ್ಮದ ಸಮಯದಲ್ಲಿ ಆಕಾಶದಲ್ಲಿ ಗ್ರಹಗಳ ಸ್ಥಾನದ ನಕ್ಷೆಯಾಗಿದೆ. ಅದರಲ್ಲಿ ನಮಗೆ ಬದಲಾವಣೆ ಮಾಡಲು ಬರುವುದಿಲ್ಲ. ಅದು ಜೀವನದ ಕೊನೆಯವರೆಗೂ ಹಾಗೆಯೇ ಇರುತ್ತದೆ; ಆದರೆ ವಾಸ್ತುವಿನಲ್ಲಿ ನಾವು ಅನುಕೂಲಕರ ಬದಲಾವಣೆಗಳನ್ನು ಮಾಡಿ ಅದನ್ನು ಲಾಭದಾಯಕವಾಗಿಸಬಹುದು. ಇದರರ್ಥ, ಯಾವುದಾದರೊಂದು ವಾಸ್ತುವನ್ನು ಶುಭವಾಗಿಸಿಕೊಂಡರೆ, ಅದರಲ್ಲಿ ವಾಸಿಸುವ ಎಲ್ಲರಿಗೂ ಶೇ. ೧೦೦ ರಷ್ಟು ಉತ್ತಮ ಫಲಿತಾಂಶಗಳು ಸಿಗುತ್ತವೆ ಎಂದಲ್ಲ; ಆದರೆ ಅದರ ಲಾಭವು ನಮಗೆ ಮುಂದಿನ ವಿಧಾನಗಳಲ್ಲಿ ದೊರೆಯಬಹುದು.

ಅ. ಜಾತಕದಲ್ಲಿನ ಸಮಯ ಮತ್ತು ವಾಸ್ತು ಇವೆರಡೂ ಅನುಕೂಲಕರವಾಗಿದ್ದರೆ, ಅವುಗಳ ಸಂಯೋಜಿತ ಪರಿಣಾಮವು ಖಂಡಿತವಾಗಿಯೂ ಶುಭ ಫಲಪ್ರದವಾಗಿರುತ್ತದೆ.

ಆ. ಒಂದು ವೇಳೆ ಜಾತಕದ ಪ್ರಸ್ತುತ ಸಮಯವು ಕೆಟ್ಟದ್ದಾಗಿದ್ದರೆ ಮತ್ತು ವಾಸ್ತುವೂ ದೋಷಯುಕ್ತವಾಗಿದ್ದರೆ, ಆಗ ದೊರೆಯುವ ಕೆಟ್ಟ ಫಲಿತಾಂಶಗಳ ತೀವ್ರತೆಯು ಹೆಚ್ಚಾಗಿರುವುದು ಕಂಡು ಬರುತ್ತದೆ.

ಇ. ಒಂದು ವೇಳೆ ಜಾತಕದ ಸಮಯವು ಉತ್ತಮವಾಗಿದೆ; ಆದರೆ ವಾಸ್ತುವು ದೋಷದಿಂದ ಕೂಡಿದ್ದರೆ, ಜಾತಕದಿಂದ ದೊರಕುವ ಉತ್ತಮ ಫಲಿತಾಂಶಗಳು ನಾವು ಆ ವಾಸ್ತುವಿನಲ್ಲಿ ಇರುವವರೆಗೂ ನಮಗೆ ನಿರೀಕ್ಷಿಸಿದಂತೆ ಸಿಗುವುದಿಲ್ಲ.

ಈ. ತದ್ವಿರುದ್ಧ, ಒಂದು ವೇಳೆ ಸಮಯವು ಕೆಟ್ಟದಾಗಿದ್ದರೆ, ಆದರೆ ವಾಸ್ತು ದೋಷರಹಿತವಾಗಿದ್ದರೆ, ಆ ಸಮಯದಲ್ಲಿ ತೊಂದರೆಗಳನ್ನು ಎದುರಿಸಲು ನಮಗೆ ಸ್ವಲ್ಪ ಮಟ್ಟಿಗಾದರೂ ಬಲವು ಪ್ರಾಪ್ತವಾಗುತ್ತದೆ. ಸಂಘರ್ಷ ಮಾಡಲು ಬಲ ಸಿಗುತ್ತದೆ. ಇದರಿಂದಾಗಿ ವಾಸ್ತುವನ್ನು ದೋಷರಹಿತ ಮಾಡುವುದು ಮತ್ತು ಏನಾದರೂ ದೋಷಗಳಿದ್ದರೆ ಅವುಗಳನ್ನು ನಿವಾರಿಸುವುದು, ಇದು ಖಂಡಿತವಾಗಿಯೂ ನಮ್ಮ ಕೈಯಲ್ಲಿರುತ್ತದೆ.

(ಲೇಖನಕ್ಕಾಗಿ ಬಳಸಲಾದ ಆಧಾರ ಗ್ರಂಥಗಳು : ವಿಶ್ವಕರ್ಮಪ್ರಕಾಶ, ಮತ್ಸ್ಯಪುರಾಣ)

– ಶ್ರೀ. ಶ್ರೇಯಸ ಪಿಸೋಳಕರ, ವಾಸ್ತು ವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ; ಫೋಂಡಾ, ಗೋವಾ.