
‘ಭವಿಷ್ಯದ ಯುದ್ಧಗಳಲ್ಲಿ ಮಾನವ ಸಂಪರ್ಕವು ಕಡಿಮೆ ಇರುವುದು’, ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಹೇಳಿಕೆ ನೀಡಿದ್ದರು. ಅದರ ಅನುಭವ ಭಾರತಕ್ಕೆ ‘ಆಪರೇಶನ್ ಸಿಂದೂರ್’ದಿಂದ ಬಂದಿದೆ. ಭಾರತದ ಈ ಕಾರ್ಯಾಚರಣೆಯ ನಂತರ, ಪಾಕಿಸ್ತಾನ ಮತ್ತು ಪಾಶ್ಚಿಮಾತ್ಯ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯ ಮಹಾಪೂರವನ್ನು ಸೃಷ್ಟಿಸಿದವು. ಅಂತಾರಾಷ್ಟ್ರಿಯ ಮಟ್ಟದಲ್ಲಿ ಅನೇಕ ಲೇಖನಗಳನ್ನು ಬರೆಯಲಾಯಿತು; ಭಾರತದ ಕೆಲವು ಜನರು ಅವರಿಗೇ ಸಹಕರಿಸುತ್ತಿದ್ದರು. ಇದರಿಂದಾಗಿ ಈ ಮಾಹಿತಿ ಯುದ್ಧದಲ್ಲಿ ಭಾರತವು ಸ್ವಲ್ಪಮಟ್ಟಿಗೆ ಹಿಂದುಳಿದಿದೆ ಎಂಬ ಚಿತ್ರಣವಿದೆ. ಆದುದರಿಂದ ಈ ಯುದ್ಧವನ್ನು ಹೇಗೆ ಹೋರಾಡಲಾಯಿತು ಮತ್ತು ಅಗತ್ಯವಾದ ಕ್ರಮಗಳ ವಿಮರ್ಶೆಯನ್ನು ಈ ಲೇಖನದಲ್ಲಿ ನೀಡಲಾಗಿದೆ. ೩೦ ಅಕ್ಟೋಬರ್ ೨೦೨೫ ರಂದು ಪ್ರಕಟವಾದ ಸಂಯುಕ್ತ ರಾಷ್ಟ್ರದ ಒಂದು ವರದಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ಆಕ್ರಮಣದ ಸಂಬಂಧವನ್ನು ಮ್ಯಾನ್ಮಾರ್‌ನಲ್ಲಿನ ನಿರಾಶ್ರಿತರ ಶಿಬಿರಗಳೊಂದಿಗೆ ಜೋಡಿಸಿತ್ತು. ಈ ತಪ್ಪು ಹೇಳಿಕೆಯು ಜಾಗತಿಕ ಸಂಸ್ಥೆಯ ಪೂರ್ವಗ್ರಹ ಪೀಡಿತ ದೃಷ್ಟಿಕೋನದ ವಾಸ್ತವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಭಾರತವು ಈ ವರದಿಯನ್ನು ಸಂಕುಚಿತ ಮತ್ತು ಅಸತ್ಯಾಧಾರಿತ (ಮಿಥ್ಯೆಗಳಿಂದ ಕೂಡಿದೆ) ಎಂದು ತಿರಸ್ಕರಿಸಿತು. ಸದ್ಯ ಚೀನಾ ಇಂತಹ ಸಂಸ್ಥೆಗಳನ್ನು ಮತ್ತು ಅಂತಾರಾಷ್ಟ್ರಿಯ ಮಾಧ್ಯಮಗಳನ್ನು ಬಳಸಿ ಪಾಕಿಸ್ತಾನಕ್ಕೆ ಮಾಹಿತಿ ಯುದ್ಧ ಗೆಲ್ಲಲು ಸಹಾಯ ಮಾಡುತ್ತಿದೆ. ಹಾಗಾದರೆ ಇದಕ್ಕೆ ಪ್ರತ್ಯುತ್ತರ ನೀಡಲು ನಾವು ನಿರ್ದಿಷ್ಟವಾಗಿ ಏನು ಮಾಡಬೇಕು ?

೧. ‘ಆಪರೇಶನ್ ಸಿಂದೂರ್’ ಬಗ್ಗೆ ಭಾರತವಿರೋಧಿ ಪ್ರಚಾರ
ಯುದ್ಧ ಅಥವಾ ಗಡಿ ಕಾರ್ಯಾಚರಣೆಯು ಕೇವಲ ಸೈನ್ಯದ ಸಾಮರ್ಥ್ಯವನ್ನು ಅವಲಂಬಿಸಿರದೇ ಜನರ ಬೆಂಬಲ ಮತ್ತು ರಾಷ್ಟ್ರಭಾವನೆಯಿಂದ ಪ್ರಭಾವಿತರಾದ ಕ್ರಿಯಾಶೀಲ ಜನರೇ ನಿಜವಾದ ಶಕ್ತಿಯಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಒಗ್ಗಟ್ಟನ್ನು ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ. ೧೪೦ ಕೋಟಿ ಭಾರತೀಯರು ಒಕ್ಕೊರಳಲ್ಲಿ ಭಾರತೀಯ ಸೈನ್ಯದ ಬೆಂಬಲಕ್ಕೆ ನಿಂತಿದ್ದರೂ, ಕೆಲವು ವಿರೋಧಿಗಳು ಪಹಲ್ಗಾಮ್ ಭಯೋತ್ಪಾದಕ ಆಕ್ರಮಣವನ್ನು ಕೂಡ ಪ್ರಶ್ನಿಸಿದರು. ‘ಭಯೋತ್ಪಾದಕರು ಧರ್ಮವನ್ನು ಕೇಳಿ ಗುಂಡು ಹಾರಿಸಲೇ ಇಲ್ಲ’ ಎಂಬ ನಿಲುವನ್ನು ಕೂಡ ಕೆಲವರು ತೆಗೆದುಕೊಂಡರು. ಭಾರತದ ಶತ್ರುಗಳು ಕೇವಲ ಗಡಿಯಾಚೆಗೆ ಮಾತ್ರವಲ್ಲ, ದೇಶದ ಒಳಗೂ ಹೊಂಚುಹಾಕಿ ಕುಳಿತಿದ್ದಾರೆ. ಗಡಿಯಾಚೆ ಮತ್ತು ದೇಶದ ಒಳಗೂ ಅಂತರ್ಯುದ್ಧ ಸಾರುತ್ತಿರುವ ಇಂತಹ ಜನರ ಮೇಲೆ ಈಗ ಕಠಿಣ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ.
ಭಾರತದಲ್ಲಾಗುತ್ತಿರುವ ದೇಶವಿರೋಧಿ ಪ್ರಚಾರವನ್ನು ಪಾಕಿಸ್ತಾನ ಮತ್ತು ಚೀನಾ ಮಾಹಿತಿ ಯುದ್ಧದಲ್ಲಿ ವಿಜಯ ಸಾಧಿಸಲು ಸಂಪೂರ್ಣವಾಗಿ ಬಳಸಿಕೊಂಡಿತು. ಪಾಕಿಸ್ತಾನ ಸೇನೆಯ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಒಂದು ವೀಡಿಯೊ ತುಣುಕನ್ನು ತೋರಿಸಿದರು. ಅದರಲ್ಲಿ ಭಾರತೀಯ ಪತ್ರಕರ್ತ ಕರಣ ಥಾಪಾ ಅವರು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ ಅವರ ಸಂದರ್ಶನವನ್ನು ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಶನದಲ್ಲಿ ಸತ್ಯಪಾಲ ಮಲಿಕ ಅವರು, ‘ಪುಲ್ವಾಮಾದಲ್ಲಿ ‘ಸಿ.ಆರ್.ಪಿ.ಎಫ್.’ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ಸೈನಿಕರನ್ನು ಪಾಕಿಸ್ತಾನಿ ಭಯೋತ್ಪಾದಕರು ಅಲ್ಲ, ಬದಲಿಗೆ ಭಾರತವೇ ಕೊಂದಿದೆ ಮತ್ತು ಪಾಕ್ ಮೇಲೆ ಸುಳ್ಳು ಆರೋಪಗಳನ್ನು ಮಾಡಿದೆ,’ ಎಂದಿದ್ದರು. ಪುಲ್ವಾಮಾ ಆಕ್ರಮಣದ ಸಮಯದಲ್ಲಿ ಮಲಿಕ್ ಅವರು ಕಾಶ್ಮೀರದ ರಾಜ್ಯಪಾಲರಾಗಿದ್ದರಿಂದ ಅವರ ಹೇಳಿಕೆಗೆ ಮಹತ್ವವಿದೆ.
ಪಾಕಿಸ್ತಾನವು ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ೧೦೦ ಕ್ಕೂ ಹೆಚ್ಚು ಭಾರತೀಯರ ವೀಡಿಯೊ ತುಣುಕುಗಳನ್ನು ತೋರಿಸಿದೆ. ಅದರಲ್ಲಿ ಕೆಲವು ಭಾರತೀಯರು ದೇಶವಿರೋಧಿ ಭಾಷೆಯನ್ನು ಬಳಸುತ್ತಿದ್ದರು ಮತ್ತು ಪಾಕಿಸ್ತಾನದ ವಾದವನ್ನು ಮಂಡಿಸುತ್ತಿದ್ದರು. ಈ ಭಾರತೀಯರು ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಪಾಕಿಸ್ತಾನದ ವಕ್ತಾರರಾಗಿ, ‘ಭಾರತವು ನೀಡಿದ ಮಾಹಿತಿ ತಪ್ಪಾಗಿದೆ ಮತ್ತು ಪಾಕಿಸ್ತಾನದ ವಾದವು ಸತ್ಯವಾಗಿದೆ’ ಎಂದು ಪ್ರಮಾಣೀಕರಿಸುತ್ತಿದ್ದರು.
೨. ಮಾಹಿತಿ ಯುದ್ಧದಲ್ಲಿ ಪಾಕಿಸ್ತಾನ ಜಯ ಸಾಧಿಸಿದೆಯೇ ?
ಈ ಯುದ್ಧದಲ್ಲಿ ಪಾಕಿಸ್ತಾನವು ದೊಡ್ಡ ಮಾನಸಿಕ ವಿಜಯವನ್ನು ಸಾಧಿಸಿದೆಯೇ ? ಪಾಕಿಸ್ತಾನವು ಜಗತ್ತಿನ ಗಮನವನ್ನು ಭಯೋತ್ಪಾದನೆ-ಭಯೋತ್ಪಾದಕ ಆಕ್ರಮಣಗಳಿಂದ ಬೇರೆಡೆಗೆ ಸೆಳೆಯಿತು ಮತ್ತು ‘ಭಾರತವು ತನ್ನ ನಾಗರಿಕರನ್ನು ಕಾಶ್ಮೀರದಲ್ಲಿ ರಕ್ಷಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನವು ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೈನಿಕ ಹಾನಿಯನ್ನುಂಟು ಮಾಡಿದೆ; ಯುದ್ಧದಲ್ಲಿ ಭಾರತ ಸೋತಿದೆ’ ಎಂಬ ‘ಮಿಥ್ಯ ಕಥಾನಕ’(ನರೇಟಿವ್) ವನ್ನು ಹರಡಲು ಪ್ರಯತ್ನಿಸಿತು. ಇದರ ಪರಿಣಾಮದಿಂದ ಪಾಶ್ಚಾತ್ಯ ಮಾಧ್ಯಮಗಳು ಬರೆದ ಲೇಖನಗಳು ಅಥವಾ ಸಂಪಾದಕೀಯಗಳು ಹೆಚ್ಚಾಗಿ ಭಾರತದ ವಿರುದ್ಧ ಮತ್ತು ಪಾಕಿಸ್ತಾನದ ಪರವಾಗಿದ್ದವು. ನಿಜವಾಗಿ, ಪ್ರಜಾಪ್ರಭುತ್ವ ರಾಷ್ಟ್ರ ಎಂಬ ನೆಲೆಯಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳು ಭಾರತವನ್ನು ಬೆಂಬಲಿಸಬೇಕಿತ್ತು; ಆದರೆ ಪಾಕಿಸ್ತಾನದ ಸೈನ್ಯದ ಹಿಡಿತದಲ್ಲಿರುವ ಮಾಧ್ಯಮಗಳು ‘ಪಾಕ್ ಹೇಳುವುದೇ ಸರಿಯಾಗಿದೆ’ ಎಂದವು. ಪಾಶ್ಚಿಮಾತ್ಯ ಮಾಧ್ಯಮಗಳು ಇಂತಹ ಅಭಿಪ್ರಾಯಗಳನ್ನು ರೂಪಿಸಲು ಭಾರತೀಯರು ಮಾಡಿದ ದೇಶವಿರೋಧಿ ಹೇಳಿಕೆ ಗಳನ್ನೇ ಪೂರ್ಣವಾಗಿ ಬಳಸಿಕೊಂಡರು. ಸಂಕ್ಷಿಪ್ತವಾಗಿ, ಮಾಹಿತಿ ಯುದ್ಧದಲ್ಲಿ ಅಥವಾ ಮಾನಸಿಕ ಯುದ್ಧದಲ್ಲಿ ಭಾರತವು ಬಹಳಷ್ಟು ಹಿಂದುಳಿದಿದೆ ಎಂಬ ಚಿತ್ರಣವಿದೆ. ಪಾಕಿಸ್ತಾನಕ್ಕೆ ಈ ಮಾನಸಿಕ ಯುದ್ಧವನ್ನು ಗೆಲ್ಲಲು ಸಹಾಯ ಮಾಡಿದವರ ಮೇಲೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಭಾರತೀಯ ಜನತೆಯು ನಿರ್ಧರಿಸಬೇಕು.
೩. ಭಾರತವಿರೋಧಿ ಪಾಶ್ಚಾತ್ಯ ಮಾಧ್ಯಮಗಳ ಪಾತ್ರ ಮತ್ತು ಕಾರಣಗಳ ವಿಶ್ಲೇಷಣೆ
ಪಾಶ್ಚಿಮಾತ್ಯ ಮಾಧ್ಯಮಗಳ ಭಾರತದ ಬಗೆಗಿನ ನಿಲುವು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚು ನಕಾರಾತ್ಮಕವಾಗುತ್ತಿರುವುದು ಕಂಡುಬರುತ್ತದೆ. ಈ ಪ್ರವೃತ್ತಿಯ ಹಿಂದೆ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯ ಮತ್ತು ಸ್ವಾಭಿಮಾನಗಳೇ ಕಾರಣವಾಗಿವೆ.
ನಾಗರಿಕರೆಂದು ಸ್ವಂತ ಜವಾಬ್ದಾರಿ: ಮಾಹಿತಿ ಯೋಧರಾಗಿರಿ !
ಇಂತಹ ಯುದ್ಧದಲ್ಲಿ ದೇಶಭಕ್ತ ನಾಗರಿಕರು ಅತ್ಯಂತ ಮಹತ್ವದ ಪಾತ್ರ ವಹಿಸಬಹುದು. ವಿದೇಶಿ ಸಾಮಾಜಿಕ ಮಾಧ್ಯಮಗಳು, ವಾರ್ತಾಪತ್ರಿಕೆಗಳು ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಯಾವಾಗ ಭಾರತದ ವಿರುದ್ಧ ಏನಾದರೂ ಹೇಳಲಾಗುತ್ತದೆ ಅಥವಾ ಬರೆಯಲಾಗುತ್ತದೆ, ಆಗಲೇ ಅದಕ್ಕೆ ಆಯಾ ಮಾಧ್ಯಮಗಳಲ್ಲಿ ತಕ್ಷಣವೇ ಪ್ರತ್ಯುತ್ತರ ನೀಡುವುದು ಅವಶ್ಯಕವಾಗಿದೆ. ಉದಾಹರಣೆಗೆ, ‘ನ್ಯೂಯಾರ್ಕ್ ಟೈಮ್ಸ್’ ಒಂದು ಭಾರತವಿರೋಧಿ ಲೇಖನವನ್ನು ಬರೆದರೆ, ಅವರಿಗೆ ಇ-ಮೇಲ್ ಕಳುಹಿಸಿ ಆ ಲೇಖನದಲ್ಲಿ ಮಾಡಿದ ಮಾಹಿತಿಯನ್ನು ಖಂಡಿಸಬೇಕು. ಅವರು ಬರೆದ ಲೇಖನಗಳು ಸಂಪೂರ್ಣವಾಗಿ ತಪ್ಪಾಗಿವೆ ಎಂದು ‘ನ್ಯೂಯಾರ್ಕ್ ಟೈಮ್ಸ್’ಗೆ ತೋರಿಸಬೇಕು. ಅಂತಾರಾಷ್ಟ್ರೀಯ ಮಾಧ್ಯಮಗಳ ವ್ಯಾಪ್ತಿ ಅಗಾಧವಾಗಿದೆ. ಹಾಗಾಗಿ, ಪ್ರತಿಯೊಬ್ಬ ಸುಶಿಕ್ಷಿತ ಭಾರತೀಯನು ‘ಮಾಹಿತಿ ಯೋಧ’ನಾಗಿ ಇಂತಹ ದೇಶವಿರೋಧಿ ಬರವಣಿಗೆಗಳ ಮೇಲೆ ನಿಗಾ ಇಟ್ಟು ಅವುಗಳಿಗೆ ಪ್ರತ್ಯುತ್ತರ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಈ ಜವಾಬ್ದಾರಿಯನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವಾ ? ನಾವು ಮುಂದಿನ ಪ್ರತಿ ದಿನವನ್ನೂ ನಮ್ಮ ತಂತ್ರಜ್ಞಾನ ಮತ್ತು ಯುದ್ಧ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲು ಬಳಸಬೇಕು.
೩ ಅ. ಅಶ್ವೇತವರ್ಣೀಯ ಭಾರತದ ಪ್ರಗತಿ ಸಹಿಸಲಾಗದಿರುವುದು : ಭಾರತದ ಕ್ಷಿಪ್ರ ಪ್ರಗತಿ, ಹೆಚ್ಚುತ್ತಿರುವ ಆರ್ಥಿಕತೆ ಮತ್ತು ಜಾಗತಿಕ ವೇದಿಕೆಯಲ್ಲಿ ಏರುತ್ತಿರುವ ಪ್ರತಿಷ್ಠೆ ಅನೇಕ ಪಾಶ್ಚಾತ್ಯ ಮಾಧ್ಯಮಗಳಿಗೆ ಇಷ್ಟವಾಗುತ್ತಿಲ್ಲ. ಶತಮಾನಗಳಿಂದ ಜಗತ್ತಿನ ಮೇಲೆ ತಮ್ಮದೇ ಪ್ರಾಬಲ್ಯ ಕಾಯ್ದುಕೊಂಡಿದ್ದ ಶ್ವೇತವರ್ಣೀಯ ರಾಷ್ಟ್ರಗಳಿಗೆ ‘ಅಶ್ವೇತ’ ದೇಶದ ಸ್ವತಂತ್ರ ಮಾರ್ಗದ ಪ್ರಗತಿ ಮತ್ತು ಪ್ರಭಾವವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ, ಭಾರತವನ್ನು ನಿಕೃಷ್ಠವೆಂದು ತೋರಿಸಲು, ಅದರ ನೀತಿಗಳ ಬಗ್ಗೆ ಸಂದೇಹಗಳನ್ನು ಸೃಷ್ಟಿಸಲು ನಕಾರಾತ್ಮಕ ಕಥಾನಕವನ್ನು ಸಿದ್ಧಪಡಿಸಲಾಗುತ್ತದೆ.
೩ ಆ. ಚೀನಾದ ಹೂಡಿಕೆ ಮತ್ತು ಮಾಹಿತಿ ಯುದ್ಧ : ಅನೇಕ ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ (ವಾರ್ತಾಪತ್ರಿಕೆಗಳು, ಟಿವಿ ನೆಟ್ವರ್ಕಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ) ಚೀನಾದ ಹೂಡಿಕೆ ಅಂದಾಜು ಶೇ. ೩೦ ರಿಂದ ೩೫ ರಷ್ಟಿದೆ. ಹಾಗಾಗಿ, ಅವು ಚೀನಾವಿರೋಧಿ ವಿಷಯವನ್ನು ಪ್ರಕಟಿಸುವುದಿಲ್ಲ. ಚೀನಾವು ಮಾಹಿತಿ ಯುದ್ಧದ ಭಾಗವಾಗಿ ಈ ಮಾಧ್ಯಮಗಳನ್ನು ಭಾರತದ ವಿರುದ್ಧ ಬಳಸಿದೆ. ಭಾರತದ ಅಂತಾರಾಷ್ಟ್ರೀಯ ಚಿತ್ರಣವನ್ನು ಹಾಳು ಮಾಡುವುದು, ಪಾಕಿಸ್ತಾನದ ಪರವಾಗಿ ಕಥಾನಕವನ್ನು ಸೃಷ್ಟಿಸುವುದು ಮತ್ತು ಭಾರತೀಯ ಸರಕಾರದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ತರುವುದು, ಇದೇ ಉದ್ದೇಶ ಇದರ ಹಿಂದೆ ಸ್ಪಷ್ಟವಾಗಿ ಗೋಚರಿಸುತ್ತದೆ.
೩ ಇ. ಮತಪೆಟ್ಟಿಗೆಯ ರಾಜಕಾರಣ ಮತ್ತು ಭಾರತವಿರೋಧಿ ಕಥಾನಕ : ಪಾಶ್ಚಿಮಾತ್ಯ ದೇಶಗಳಲ್ಲಿ, ವಿಶೇಷವಾಗಿ ಅಮೆರಿಕಾ ಮತ್ತು ಬ್ರಿಟನ್ನಿನಲ್ಲಿ, ಕೆಲವು ರಾಜಕೀಯ ಗುಂಪುಗಳಿಗೆ ಉಗ್ರವಾದಿ ಅಥವಾ ವಿಭಜನಾಶೀಲ ಮತದಾರರ ಬೆಂಬಲ ಬೇಕಾಗಿರುತ್ತದೆ. ಈ ಗುಂಪುಗಳನ್ನು ಆಕರ್ಷಿಸಲು ಭಾರತ ವಿರೋಧಿ ಲೇಖನಗಳು, ಕಾರ್ಯಕ್ರಮಗಳು ಮತ್ತು ಚರ್ಚೆಗಳನ್ನು ಬಳಸಲಾಗುತ್ತದೆ. ಇದರ ಹಿಂದೆ ಭಾರತದೊಂದಿಗಿನ ವೈಚಾರಿಕ ಭಿನ್ನಾಭಿಪ್ರಾಯಕ್ಕಿಂತ ಸ್ವಾರ್ಥಿ ಮತಪೆಟ್ಟಿಗೆಯ ರಾಜಕಾರಣ ಅಡಗಿದೆ.
ಇಂದಿನ ಭಾರತವು ಆತ್ಮವಿಶ್ವಾಸದಿಂದ ಜಾಗತಿಕ ವೇದಿಕೆಯಲ್ಲಿ ನಿಂತಿದೆ. ಪಾಶ್ಚಿಮಾತ್ಯ ಮಾಧ್ಯಮಗಳ ನಕಾರಾತ್ಮಕ ಪ್ರಚಾರದಿಂದ ಭಾರತದ ಪಯಣ ನಿಲ್ಲುವುದಿಲ್ಲ. ಭಾರತದ ಪ್ರಗತಿಯನ್ನು ತಡೆಯುವ ಪ್ರಯತ್ನಗಳು ಎಷ್ಟೇ ನಡೆದರೂ, ನವಭಾರತವು ತನ್ನ ಮಾರ್ಗವನ್ನು ತಾನೇ ನಿರ್ಧರಿಸುತ್ತದೆ.
– ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಪುಣೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು