ರಾಯಚೂರಿನ ಶ್ರೀ ಕ್ಷೇತ್ರ ಕುರವಪುರ (ಕುರುಗಡ್ಡಿ): ಒಂದು ಪ್ರಾಚೀನ ದತ್ತಕ್ಷೇತ್ರ!

ಶ್ರೀಪಾದ ಶ್ರೀವಲ್ಲಭ, ದತ್ತ ಕ್ಷೇತ್ರ ಕುರವಪುರ

೧. ಶ್ರೀಪಾದ ಶ್ರೀವಲ್ಲಭರ ಜನ್ಮ

ದತ್ತ ಭಕ್ತರ ವೇದವೆಂದು ತಿಳಿಯಲಾಗುವ ‘ಗುರುಚರಿತ್ರೆ’ ಗ್ರಂಥದ ೫ ರಿಂದ ೧೦ ಅಧ್ಯಾಯಗಳು ಮೊದಲ ದತ್ತಾವತಾರದ ಕುರಿತಾಗಿವೆ. ಭಗವಾನ ದತ್ತಾತ್ರೇಯರು ಸುಮತಿ ಮತ್ತು ಅಪಲರಾಜರಿಗೆ ನೀಡಿದ ವಚನದಂತೆ ಅವರ ಗರ್ಭದಲ್ಲಿ ಜನಿಸಿದ ಅವತಾರವೇ ಶ್ರೀಪಾದ ವಲ್ಲಭರು. ತಮ್ಮ ೧೬ ನೇ ವಯಸ್ಸಿನಲ್ಲಿ ತಾಯಿ-ತಂದೆಯವರ ಅನುಮತಿ ಪಡೆದು, ಶ್ರೀಪಾದ ಶ್ರೀವಲ್ಲಭರು ಮೊದಲು ಗೋಕರ್ಣ ಮಹಾಬಳೇಶ್ವರಕ್ಕೆ ಹೋದರು ಮತ್ತು ಅಲ್ಲಿಂದ ಶ್ರೀಶೈಲ ಪರ್ವತಕ್ಕೆ ಹೋಗಿ ಅಲ್ಲಿ ಅವರು ಸ್ವಲ್ಪ ಸಮಯ ವಾಸ್ತವ್ಯ ಮಾಡಿದರು. ನಂತರ ಸುತ್ತಾಡುತ್ತಾ ಅವರು ಕುರುವಪುರಕ್ಕೆ ಬಂದರು. ಅಲ್ಲಿ ೨೨ ವರ್ಷಗಳ ಕಾಲ ತಪಶ್ಚರ್ಯ ಮಾಡಿ, ಅಲ್ಲಿಯೇ ಅವರು ಅಂತರ್ಧಾನರಾದರು.

೨. ಕುರವಪುರ ಕ್ಷೇತ್ರದ ಕುರಿತು…

ಸ್ವಾತಂತ್ರ್ಯಕ್ಕೆ ಮೊದಲು ಕುರವಪುರ ಕ್ಷೇತ್ರವು ನಿಜಾಮರ ರಾಜ್ಯದಲ್ಲಿತ್ತು. ಪ್ರಸ್ತುತ ಅದು ರಾಯಚೂರು ಜಿಲ್ಲೆಯಲ್ಲಿ ಬರುತ್ತದೆ. ಕುರುಗಡ್ಡಿ ಎಂಬ ಸಣ್ಣ ಗ್ರಾಮದ ಬಳಿ ಕೃಷ್ಣಾ ನದಿಯು ನೈಸರ್ಗಿಕವಾಗಿ ಎರಡು ಭಾಗವಾಗುತ್ತದೆ ಮತ್ತು ಮುಂದೆ ಅವು ಒಂದುಗೂಡಿವೆ. ಕೃಷ್ಣಾ ನದಿಯು ಎರಡು ಭಾಗಗಳಾಗಿ ವಿಭಜನೆಯಾಗಿರುವ ಪ್ರದೇಶಕ್ಕೆ ‘ಕುರುಗಡ್ಡಿ ದ್ವೀಪ’ ಎಂದು ಕರೆಯುತ್ತಾರೆ ಮತ್ತು ಇದೇ ಶ್ರೀಪಾದ ಶ್ರೀವಲ್ಲಭರ ಸ್ಥಾನವಾಗಿದೆ! ಇದೇ ದ್ವೀಪದಲ್ಲಿ ಕಲ್ಲಿನ ಗುಹೆಯಲ್ಲಿ ಶ್ರೀಪಾದ ಶ್ರೀವಲ್ಲಭರು ತಪಸ್ಸು ಮಾಡುತ್ತಿದ್ದರು ಮತ್ತು ಈ ಗುಹೆಯ ಎದುರಿಗಿರುವ ದೊಡ್ಡ ಔದುಂಬರ ವೃಕ್ಷದ ಕೆಳಗೆ ಅನುಷ್ಠಾನ ಮಾಡುತ್ತಿದ್ದರು. ಅವರು ದ್ವೀಪದಲ್ಲಿನ ೩-೪ ಮನೆಗಳಲ್ಲಿ ಮಧುಕರಿ (ಭಿಕ್ಷೆ) ಬೇಡಿ ಜೀವನವನ್ನು ಸಾಗಿಸುತ್ತಿದ್ದರು. ಅವರು ಬೆಳಗ್ಗೆ ಎದ್ದು ನದಿಯಲ್ಲಿ ಸ್ನಾನ ಮಾಡಿ ಸೂರ್ಯನಮಸ್ಕಾರ ಹಾಕುತ್ತಿದ್ದರು. ಅವರು ಯಾವ ಕಲ್ಲಿನ ಮೇಲೆ ನಿಂತು ಸೂರ್ಯನಮಸ್ಕಾರ ಹಾಕುತ್ತಿದ್ದರೋ, ಆ ಸಮಯದಲ್ಲಿ ಅವರ ನೆರಳು ಕಲ್ಲಿನ ಮೇಲೆ ಬಿದ್ದಿದ್ದು ಇನ್ನೂ ಸ್ಪಷ್ಟವಾಗಿ ಕಾಣುತ್ತದೆ. ಅವರ ಹೆಜ್ಜೆ ಗುರುತುಗಳು ಸಹ ಆ ಕಲ್ಲಿನ ಮೇಲೆ ಕಾಣುತ್ತವೆ. ಈ ಪ್ರದೇಶವು ಬಹಳ ರಮಣೀಯವಾಗಿದೆ. ಪಾದುಕೆಗಳು, ದೇವಸ್ಥಾನ, ಸುತ್ತಮುತ್ತಲಿನ ಕಾಡು ಇವೆಲ್ಲವೂ ಮನಸ್ಸನ್ನು ಪ್ರಸನ್ನಗೊಳಿಸುವುದರ ಜೊತೆಗೆ ಅಂತರ್ಮುಖರನ್ನಾಗಿಸುತ್ತದೆ. ಕುರವಪುರ ಕ್ಷೇತ್ರವು ಎಷ್ಟೋ ವರ್ಷಗಳ ಕಾಲ ಅಜ್ಞಾತವಾಗಿತ್ತು, ಆದರೆ ಶ್ರೀಗುರುಗಳನ್ನು ಹುಡುಕುತ್ತಾ ಬಂದ ಪರಮಹಂಸ ಪರಿವ್ರಾಜಕಾಚಾರ್ಯ (ಪ.ಪ.) ವಾಸುದೇವಾನಂದ ಸರಸ್ವತಿ ಟೆಂಬೆಸ್ವಾಮಿ ಮಹಾರಾಜರು ಈ ಸ್ಥಳವನ್ನು ಕಂಡುಹಿಡಿದರು. ಈ ದ್ವೀಪವು ಕೃಷ್ಣಾನದಿಯ ಪ್ರವಾಹದಿಂದ ಸುತ್ತುವರಿಯಲ್ಪಟ್ಟಿದೆ. ಮಳೆಗಾಲದಲ್ಲಿ ಕೃಷ್ಣಾನದಿಯ ಪ್ರವಾಹ ಮತ್ತು ಬೇಸಿಗೆಯಲ್ಲಿ ಅಸಹನೀಯ ಬಿಸಿಲಿನಿಂದಾಗಿ ಇಲ್ಲಿಗೆ ಹೋಗುವುದು ಕಷ್ಟಕರವಾಗಿರುತ್ತದೆ. ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ ೩ ತಿಂಗಳು ಮಾತ್ರ ಪ್ರವಾಸವು ಸುಖಕರವಾಗಿರುತ್ತವೆ.

ಶ್ರೀಪಾದ ಶ್ರೀವಲ್ಲಭರ ಪಾದುಕೆಗಳು

೩. ‘ಆಶ್ವಯುಜ ಕೃಷ್ಣ ದ್ವಾದಶಿ’ ಈ ತಿಥಿಯು ಶ್ರೀಪಾದ ಶ್ರೀವಲ್ಲಭರ ನಿಜಾನಂದಗಮನದ ದಿನವಾಗಿದೆ. ಈ ದಿನ ಕುರವಪುರದಲ್ಲಿ ದೊಡ್ಡ ಉತ್ಸವ ಇರುತ್ತದೆ.

೪. ಶ್ರೀಪಾದ ಮಂದಿರ

ಶ್ರೀಪಾದ ಶ್ರೀವಲ್ಲಭ ಮಂದಿರ, ಕುರವಪುರ

ಶ್ರೀಗಳ ದೇವಸ್ಥಾನವು ವಿಶಾಲವಾಗಿದೆ. ದೇವಸ್ಥಾನದ ಭವ್ಯ ದ್ವಾರದ ಎರಡೂ ಬದಿಗಳಲ್ಲಿ ಎರಡು ಕಲ್ಲಿನ ಕಟ್ಟೆಗಳಿವೆ. ಅದರ ಪಕ್ಕದಲ್ಲಿ ಕಲ್ಲಿನ ಗೋಡೆಗಳಿವೆ. ಮುಖ್ಯ ದ್ವಾರದ ಮೇಲೆ ಕಮಾನು ಇದೆ. ಅಲ್ಲಿ ತಲೆಬಾಗಿ, ವಿನಯದಿಂದ ಕೈ ಮುಟ್ಟಿ ಒಳಗೆ ಹೋದಾಗ ಕಾವಲುಗಾರರು ಕುಳಿತುಕೊಳ್ಳಲು ಎರಡು ಬದಿಗಳಲ್ಲಿ ಎರಡು ಕಟ್ಟೆಗಳಿವೆ. ಭವ್ಯವಾದ ಅಶ್ವತ್ಥ (ಅರಳಿ), ಬೇವಿನ ಮರಗಳಿದ್ದು, ಅವುಗಳಿಗೆ ಕಲ್ಲಿನ ಕಟ್ಟೆಯನ್ನು ಕಟ್ಟಲಾಗಿದೆ. ಕಟ್ಟೆಯ ಉತ್ತರ ಭಾಗದ ಎರಡೂ ಮೂಲೆಗಳಲ್ಲಿ ಕೆತ್ತಿದ ಕಲ್ಲಿನ ವೃಂದಾವನಗಳಿವೆ. ಈ ಕಟ್ಟೆಯ ಮೇಲೆ ದಕ್ಷಿಣಾಭಿಮುಖವಾಗಿ ಎರಡು ದೇವಸ್ಥಾನಗಳಿವೆ. ಅವುಗಳಲ್ಲಿ ಒಂದು ದೇವಸ್ಥಾನದಲ್ಲಿ ಕಪ್ಪು ಸಾಲಿಗ್ರಾಮದ ಶಿಲೆಯಿಂದ ತಯಾರಿಸಿದ ರೇಖಾತ್ಮಕ ದಕ್ಷಿಣಾಭಿಮುಖಿ ಆಂಜನೇಯನ ಮೂರ್ತಿ ಮತ್ತು ಇನ್ನೊಂದು ದೇವಸ್ಥಾನದಲ್ಲಿ ಕೇಶವಮೂರ್ತಿ ಮತ್ತು ಶಿವಲಿಂಗ ಹಾಗೂ ಪಾದುಕೆಗಳಿವೆ. ಈ ಕಟ್ಟೆಯ ಎದುರೇ ಮುಖ್ಯ ಪೂಜಾ ಸ್ಥಳವಿದ್ದು, ಅಲ್ಲಿಯೇ ಶ್ರೀಪಾದ ಶ್ರೀವಲ್ಲಭರು ಜಪ-ತಪ-ಅನುಷ್ಠಾನಗಳನ್ನು ಮಾಡುತ್ತಿದ್ದರು. ಇದನ್ನೇ ‘ನಿರ್ಗುಣ ಪೀಠ ಪಾರ್’ ಎಂದು ಕರೆಯುತ್ತಾರೆ. ಮಹಾರಾಜರು ಸ್ವತಃ ಆ ಸ್ಥಳದಲ್ಲಿ ಅದೃಶ್ಯರಾಗಿರುವುದರಿಂದ ಬೇರೆ ರೂಪದಲ್ಲಿ ಪಾದುಕೆಗಳಿಲ್ಲ.

೫. ಪುರಾತನ ವಟವೃಕ್ಷ (ಆಲದ ಮರ)

ಇದು ಶ್ರೀಪಾದ ವಲ್ಲಭರ ಅನುಷ್ಠಾನದ ಸ್ಥಳವಾಗಿದೆ. ಈ ವೃಕ್ಷವು ಸುಮಾರು ೯೦೦ ವರ್ಷಗಳಷ್ಟು ಹಳೆಯದು. ಇದರ ಪೊಟರೆಯಲ್ಲಿ ಒಂದು ದೊಡ್ಡ ಸರ್ಪವಿದೆ. ಇದೇ ಸ್ಥಳದಲ್ಲಿ ಸೊಲ್ಲಾಪುರದ ಭಕ್ತರು ಶ್ರೀಪಾದ ವಲ್ಲಭರ ಮೂರ್ತಿ ಮತ್ತು ಪಾದುಕೆಗಳನ್ನು ಸ್ಥಾಪಿಸಿದ್ದಾರೆ.

೬. ಪ.ಪ. ಟೆಂಬೆಸ್ವಾಮಿ ಗುಹೆ

ಪ.ಪ.ವಾಸುದೇವಾನಂದ ಸರಸ್ವತಿ(ಟೇಂಬೆ ಸ್ವಾಮಿ)

ಪ.ಪ.ವಾಸುದೇವಾನಂದ ಸರಸ್ವತಿ(ಟೇಂಬೆ ಸ್ವಾಮಿ ಗುಹೆ)

ಈ ಗುಹೆಯು ನಿಸರ್ಗನಿರ್ಮಿತವಾಗಿದ್ದು, ಪ್ರಾಚೀನವಾದುದಾಗಿದೆ. ಈ ಸ್ಥಳದಲ್ಲಿ ಪ.ಪ. ವಾಸುದೇವಾನಂದ ಸರಸ್ವತಿ ಟೆಂಬೆಸ್ವಾಮಿಗಳು ೧೯೧೦ ರಲ್ಲಿ ಚಾತುರ್ಥಾಶ್ರಮದ ಚಾತುರ್ಮಾಸವನ್ನು ಪೂರ್ಣಗೊಳಿಸಿದರು. ಈಗ ಈ ಸ್ಥಳದಲ್ಲಿ ಕಾಮಗಾರಿ ನಡೆಸಿ ಶಿವಮಂದಿರವನ್ನು ಕಟ್ಟಲಾಗಿದೆ. ಈ ಸ್ಥಳದಲ್ಲಿ ಪ.ಪ. ಟೆಂಬೆಸ್ವಾಮಿ ಮಹಾರಾಜರು ಪ್ರತಿಯೊಂದು ಸಂಕಟಕ್ಕೆ ರಾಮಬಾಣ ಉಪಾಯವಾಗಿರುವ ‘ಘೋರಕಷ್ಟೋಧರಣ ಸ್ತೋತ್ರ’ವನ್ನು ರಚಿಸಿದರು. ಪ.ಪ. ವಾಸುದೇವಾನಂದ ಸರಸ್ವತಿ (ಟೆಂಬೆಸ್ವಾಮಿ) ಇವರಿಗೆ ಇದೇ ಸ್ಥಳದಲ್ಲಿ ‘ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ’ ಎಂಬ ೧೮ ಅಕ್ಷರಗಳ ಮಂತ್ರದ ಸಾಕ್ಷಾತ್ಕಾರವಾಯಿತು. ಮಹಾರಾಜರು ಇಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದರು. ತೆವಳುತ್ತಾ ತೆವಳುತ್ತಾ ಒಳಗೆ ಹೋಗುವಷ್ಟು ಸಣ್ಣ ದಾರಿಯಿದೆ. ಈ ಗುಹೆಯು ಒಳಗೆ ಕೇವಲ ಒಬ್ಬ ವ್ಯಕ್ತಿಯು ಕುಳಿತುಕೊಳ್ಳುವಷ್ಟು ಎತ್ತರ ಮತ್ತು ಜಾಗವಿದೆ. ಹೆಚ್ಚಿನ ಜನಸಂದಣಿ ಮತ್ತು ಮಾನವ ಸ್ಪರ್ಶಕ್ಕೆ ಸಿಗದ ಕುರವಪುರದ ವಾತಾವರಣದಲ್ಲಿ ಒಂದು ಪಾವಿತ್ರ್ಯ ಮತ್ತು ಚೈತನ್ಯ ತುಂಬಿದೆ. ಅದು ಅಲ್ಲಿ ಅನುಭವಕ್ಕೆ ಬರುತ್ತದೆ. ಇದೇ ಸ್ಥಳದಲ್ಲಿ ಶ್ರೀ ಪಾಚಲೆಗಾಂವಕರ್‌ ಮಹಾರಾಜರಿಗೆ ಶ್ರೀಪಾದ ವಲ್ಲಭರ ಸಾಕ್ಷಾತ್ಕಾರವಾಯಿತು. (ಆಧಾರ: ‘ದತ್ತಮಹಾರಾಜ’ ಜಾಲತಾಣ)

ಶ್ರೀಕ್ಷೇತ್ರ ಕುರವಪುರವು ಒಂದು ಪ್ರಾಚೀನ ದತ್ತಕ್ಷೇತ್ರವಾಗಿದೆ. ಶ್ರೀಪಾದ ಶ್ರೀವಲ್ಲಭರು ದತ್ತಾತ್ರೇಯರ ಮೊದಲ ಅವತಾರವೆಂದು ನಂಬಲಾಗಿದೆ. ಅವರು ಆಂಧ್ರಪ್ರದೇಶದ ಪೀಠಾಪುರದಲ್ಲಿ ಜನಿಸಿದರು. ತಮ್ಮ ೧೬ ನೇ ವಯಸ್ಸಿನಲ್ಲಿ ಅವರು ಪೀಠಾಪುರದಿಂದ ಹೊರಟು, ಭಾರತದಾದ್ಯಂತ ಸಂಚರಿಸಿ ಕುರವಪುರಕ್ಕೆ ಬಂದರು. ಇದು ಅವರ ಕರ್ಮಭೂಮಿಯಾಗಿತ್ತು. ‘ಕುರವಪುರ’ವು ಅವರ ಅಕ್ಷಯ ನಿವಾಸಸ್ಥಾನವಾಗಿದೆ. ‘ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ’ ಎಂಬ ಮಂತ್ರವನ್ನು ಉಚ್ಚರಿಸಿದ ತಕ್ಷಣವೇ ಕಣ್ಣುಗಳೆದುರು ಬರುವುದೇ ‘ಶ್ರೀ ಕ್ಷೇತ್ರ ಕುರವಪುರ’! ಇದು ಈ ಮಂತ್ರ ಉಗಮವಾದಂತಹ ಪ್ರಾಚೀನ ಸ್ಥಳವಾಗಿದೆ. ಇದನ್ನು ತಪೋಭೂಮಿ ಎಂದು ಪರಿಗಣಿಸಲಾಗಿದೆ.