ಹಿರಿಯರು ಕೂಡ ತಮ್ಮ ಶೇ.50 ರಷ್ಟು ಸಮಯವನ್ನು ‘ಟಿವಿ’, ‘ಸ್ಮಾರ್ಟ್‌ಫೋನ್’, ‘ಗೇಮಿಂಗ್ ಡಿವೈಸ್‌’ಗಳ ಮೇಲೆ ಕಳೆಯುತ್ತಿದ್ದಾರೆ!

  • 65 ವರ್ಷಕ್ಕಿಂತ ಮೇಲ್ಪಟ್ಟ ಶೇ.100 ರಷ್ಟು ಹಿರಿಯರ ಬಳಿ ‘ಸ್ಮಾರ್ಟ್‌ಫೋನ್’ ಇದೆ

  • ‘ಡಿಜಿಟಲ್’ ಸಾಧನಗಳು ವೃದ್ಧರ ಅನೇಕ ರೋಗಗಳಿಗೆ ಕಾರಣವಾಗುತ್ತಿವೆ!

(ಗೇಮಿಂಗ್ ಡಿವೈಸ್ – ಆಟಗಳನ್ನು ಆಡುವ ಸಾಧನ)

ಲಂಡನ್ / ನ್ಯೂಯಾರ್ಕ್ – ಇತ್ತೀಚೆಗೆ ಬ್ರಿಟನ್‌ನ ‘ನ್ಯಾಷನಲ್ ಗೇಮಿಂಗ್ ಡಿಸಾರ್ಡರ್ ಸೆಂಟರ್’ನಲ್ಲಿ 72 ವರ್ಷದ ಒಬ್ಬ ವೃದ್ಧ ಮಹಿಳೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಆ ವೃದ್ಧ ಮಹಿಳೆಗೆ ಮೊಬೈಲ್‌ನಲ್ಲಿ ‘ಗೇಮ್’ ಆಡುವ ಚಟವಿತ್ತು. ಇಲ್ಲಿಯವರೆಗೆ 67 ವೃದ್ಧರಿಗೆ ಚಿಕಿತ್ಸೆ ನೀಡಲಾಗಿದೆ. ಇಲ್ಲಿಯವರೆಗೆ ಕೇವಲ ಹದಿಹರೆಯದವರು ಮಾತ್ರ ‘ಸ್ಕ್ರೀನ್’ ಚಟದಿಂದ ಮುಕ್ತರಾಗಲು ಬರುತ್ತಿದ್ದರು. ಈಗ ವೃದ್ಧರೂ ಬರಲು ಪ್ರಾರಂಭಿಸಿದ್ದಾರೆ. ಈಗ ಹದಿಹರೆಯದವರಿಗಿಂತ ವೃದ್ಧರ ಬಗ್ಗೆ ಹೆಚ್ಚು ಚಿಂತೆಯಾಗಿದೆ.

1. ‘ಗ್ಲೋಬಲ್ ವೆಬ್ ಇಂಡೆಕ್ಸ್’ (ಜಿಡಬ್ಲ್ಯುಐ) ವರದಿಯ ಪ್ರಕಾರ, ಈಗ ವೃದ್ಧರೂ ‘ಸ್ಕ್ರೀನ್ ಅಡಿಕ್ಟ್’ (ಮೊಬೈಲ್, ಕಂಪ್ಯೂಟರ್ ಅಥವಾ ಅಂತಹ ಉಪಕರಣಗಳನ್ನು ನಿರಂತರವಾಗಿ ಬಳಸುವ ಚಟ) ಆಗುತ್ತಿದ್ದಾರೆ. ಅವರು ತಮ್ಮ ಶೇ.50 ರಷ್ಟು ಸಮಯವನ್ನು ‘ಟಿವಿ’, ‘ಸ್ಮಾರ್ಟ್‌ಫೋನ್’, ‘ಟ್ಯಾಬ್’ ಮತ್ತು ‘ಗೇಮಿಂಗ್ ಡಿವೈಸ್‌’ಗಳ ಮೇಲೆ ಕಳೆಯುತ್ತಿದ್ದಾರೆ.

2. ‘ಹಾರ್ವರ್ಡ್ ಮೆಡಿಕಲ್ ಸ್ಕೂಲ್’ ಗೆ ಸಂಬಂಧಿಸಿದ ‘ಮ್ಯಾಕ್ಲೀನ್ ಹಾಸ್ಪಿಟಲ್’ನ ‘ಟೆಕ್ ಅಂಡ್ ಏಜಿಂಗ್ ಲ್ಯಾಬ್’ನ ಮುಖ್ಯಸ್ಥರಾದ ಇಪ್ಸಿತ್ ವಾಹಿಯಾ ಅವರು ಹೇಳುತ್ತಾರೆ, ‘ವೃದ್ಧರೂ ಹದಿಹರೆಯದವರಂತೆ ಮೊಬೈಲ್‌ನಲ್ಲಿ ಬದುಕುತ್ತಿದ್ದಾರೆ. ಈ ಬದಲಾವಣೆ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ, ಬದಲಾಗಿ ಇದು ಅವರ ನಿದ್ರೆ, ದೈಹಿಕ ಚಲನೆ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

3. ಡಾ. ವಾಹಿಯಾ ಅವರು, ‘ವೃದ್ಧರಲ್ಲಿ ‘ಸ್ಕ್ರೀನ್ ಟೈಮ್’ ನಿದ್ರೆಯ ಸಮಸ್ಯೆ, ಆನ್‌ಲೈನ್ ವಂಚನೆಯ ಭಯ ಮುಂತಾದ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಕೆಲವರಲ್ಲಿ ನಕಾರಾತ್ಮಕ ಸುದ್ದಿಗಳನ್ನು ಓದುವುದರಿಂದ ಆತಂಕ ಹೆಚ್ಚಾಗಿತ್ತು. ವೃದ್ಧರಲ್ಲಿ ಸ್ಕ್ರೀನ್ ಟೈಮ್‌ ಗೆ ಸಂಬಂಧಿಸಿದ ಸಮಸ್ಯೆಗಳು ಹಲವು ಬಾರಿ ಗುಪ್ತವಾಗಿರುತ್ತವೆ; ಏಕೆಂದರೆ ಅವರು ಮೊಬೈಲ್ ಚಟದ ಬಗ್ಗೆ ದೂರು ನೀಡುವುದಿಲ್ಲ.”

4. ವೃದ್ಧರಿಗೆ ‘ಗೇಮಿಂಗ್’ ಸಮಯ ಕಳೆಯುವ ಸಾಧನವಾಗಿದೆ. ಹಾಡುಗಳು ಮತ್ತು ವೀಡಿಯೋಗಳಿಂದ ಅವರ ಹಳೆಯ ನೆನಪುಗಳು ತಾಜಾ ಆಗುತ್ತವೆ. ಡಾ. ವಾಹಿಯಾ ಅವರು ಹದಿಹರೆಯದವರ ಹೋಲಿಕೆಯಲ್ಲಿ ವೃದ್ಧರ ಸಾಮಾಜಿಕ ಸಂಬಂಧಗಳು ಮೊದಲೇ ಬಲವಾಗಿರುತ್ತವೆ ಎಂದು ಹೇಳಿದ್ದಾರೆ. ಆದ್ದರಿಂದ, ‘ಸ್ಮಾರ್ಟ್‌ಫೋನ್’ ಅವರ ಸಂಬಂಧಗಳಿಗೆ ಅಡ್ಡಿಯಾಗುವುದಿಲ್ಲ, ಬದಲಾಗಿ ಸಂಬಂಧಗಳನ್ನು ಬಲಪಡಿಸುತ್ತದೆ. ಖಿನ್ನತೆಯಿಂದ ಬಳಲುತ್ತಿದ್ದ 85 ವರ್ಷದ ಒಬ್ಬ ಮಹಿಳೆಗೆ ಡಾ. ವಾಹಿಯಾ ಅವರು ‘ವರ್ಚುವಲ್ ರಿಯಾಲಿಟಿ’ (ಆಭಾಸಿ ವಾಸ್ತವವನ್ನು ತೋರಿಸುವ ತಂತ್ರಜ್ಞಾನದ ಮೂಲಕ) ಮೂಲಕ ಅವರ ಬಾಲ್ಯದ ಮನೆ, ಶಾಲೆಗೆ ಭೇಟಿ ನೀಡುವಂತೆ ಮಾಡಿದರು. ಇದರಿಂದ ಅವರ ಹಳೆಯ ನೆನಪುಗಳು ತಾಜಾ ಆಗಿ, ಅವರ ಹಲವು ವರ್ಷಗಳ ಒತ್ತಡ ದೂರವಾಯಿತು, ಅಂದರೆ ತಂತ್ರಜ್ಞಾನ ಅವರಿಗೆ ಸಹಾಯವನ್ನೂ ಮಾಡುತ್ತದೆ.

10 ವರ್ಷಗಳಲ್ಲಿ ವೃದ್ಧರ ‘ಡಿಜಿಟಲ್’ ಉಪಕರಣಗಳ ಬಳಕೆಯಲ್ಲಿ ಶೇ.60 ರಷ್ಟು ಹೆಚ್ಚಳ

ಕಳೆದ ದಶಕದಲ್ಲಿ ವೃದ್ಧರಲ್ಲಿ ‘ಡಿಜಿಟಲ್’ ಉಪಕರಣಗಳ ಬಳಕೆ ವೇಗವಾಗಿ ಹೆಚ್ಚಾಗಿದೆ. 10 ವರ್ಷಗಳ ಹಿಂದೆ ಅಮೇರಿಕಾದಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಕೇವಲ ಶೇ.20 ರಷ್ಟು ಜನರ ಬಳಿ ‘ಸ್ಮಾರ್ಟ್‌ಫೋನ್’ ಇತ್ತು. ಈ ಸಂಖ್ಯೆ ಈಗ ಶೇ.80 ರಷ್ಟು ಆಗಿದೆ. ‘ಜಿಡಬ್ಲ್ಯುಐ’ ಅಧ್ಯಯನದ ಪ್ರಕಾರ, 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಈಗ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಗಿಂತ ಹೆಚ್ಚು ಪ್ರಮಾಣದಲ್ಲಿ ‘ಟ್ಯಾಬ್ಲೆಟ್’, ‘ಸ್ಮಾರ್ಟ್ ಟಿವಿ’, ‘ಇ-ರೀಡರ್’ ಮತ್ತು ಕಂಪ್ಯೂಟರ್ ಬಳಸುತ್ತಾರೆ. ತಂತ್ರಜ್ಞಾನ ಕಂಪನಿಗಳೂ ಇದನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ತಯಾರಿಸುತ್ತಿವೆ. ‘ಸ್ಮಾರ್ಟ್‌ವಾಚ್’, ಅಂದರೆ ಹೊಸ ತಂತ್ರಜ್ಞಾನದಿಂದ ಕೂಡಿದ ಕೈಗಡಿಯಾರಗಳಲ್ಲಿ ‘ಇಸಿಜಿ’ ಮತ್ತು ತುರ್ತು ದೂರವಾಣಿ ಕರೆ ಮಾಡುವ ಸೌಲಭ್ಯವನ್ನೂ ಒದಗಿಸಲಾಗಿದೆ. ಪರಿಣಾಮವಾಗಿ ಶೇ.17 ರಷ್ಟು ವೃದ್ಧರು ‘ಸ್ಮಾರ್ಟ್‌ವಾಚ್’ ಬಳಸುತ್ತಿದ್ದಾರೆ.

ಪ್ರತಿದಿನ 3 ಗಂಟೆಗಳ ಬಳಕೆ

ನಿವೃತ್ತಿಯ ನಂತರ ವೃದ್ಧರಿಗೆ ಸಮಯದ ಕೊರತೆ ಇರುವುದಿಲ್ಲ. ಹಿಂದೆ ಈ ಸಮಯ ಪೂಜೆ ಮತ್ತು ಟಿವಿ ನೋಡುವುದರಲ್ಲಿ ಕಳೆಯುತ್ತಿತ್ತು. ಈಗ ‘ಸ್ಮಾರ್ಟ್‌ಫೋನ್’, ‘ಟ್ಯಾಬ್ಲೆಟ್’, ಕಂಪ್ಯೂಟರ್ ಬಳಸುವ ಸಮಯ ಹೆಚ್ಚಾಗಿದೆ. ಬ್ರಿಟನ್‌ನಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಪ್ರತಿದಿನ ಸರಾಸರಿ 3 ಗಂಟೆಗಳ ಕಾಲ ‘ಆನ್‌ಲೈನ್’ನಲ್ಲಿ ಕಳೆಯುತ್ತಾರೆ. ಈ ಸಮಯ 18 ರಿಂದ 24 ವರ್ಷ ವಯಸ್ಸಿನ ಯುವಕರ ಹೋಲಿಕೆಯಲ್ಲಿ ಅರ್ಧದಷ್ಟಿದೆ; ಆದರೆ ‘ಟಿವಿ’, ‘ಸ್ಮಾರ್ಟ್‌ಫೋನ್’ ಉಪಕರಣಗಳು ಎರಡನ್ನೂ ಒಟ್ಟಿಗೆ ನೋಡಿದಾಗ, ಒಟ್ಟು ‘ಸ್ಕ್ರೀನ್ ಟೈಮ್’ ಯುವಕರಿಗಿಂತ ಹೆಚ್ಚಾಗುತ್ತದೆ. 10 ವರ್ಷಗಳಲ್ಲಿ 50 ರಿಂದ 60 ವರ್ಷ ವಯೋಮಾನದವರಲ್ಲಿ ಸಾಮಾಜಿಕ ಮಾಧ್ಯಮ, ಮೀಡಿಯಾ, ‘ಗೇಮಿಂಗ್’, ‘ಆಡಿಯೋ ಸ್ಟ್ರೀಮಿಂಗ್’ (ಮಾಹಿತಿ ಕೇಳುವುದು) ಸಮಯ ಹೆಚ್ಚಾಗಿದೆ.

ಅಪಾಯವೂ ಹೆಚ್ಚಾಗಿದೆ!

ದಕ್ಷಿಣ ಕೊರಿಯಾದಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ, 60 ರಿಂದ 69 ವರ್ಷ ವಯಸ್ಸಿನ ಶೇ.15 ಜನರಿಗೆ ‘ಸ್ಮಾರ್ಟ್‌ಫೋನ್’ ಚಟವಿದೆ. ಅನೇಕ ಜನರು ಮೊಬೈಲ್ ಬಳಕೆ ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ; ಆದರೆ ವಿಫಲರಾಗುತ್ತಾರೆ. ಜಪಾನ್‌ ನಲ್ಲಿನ ಸಂಶೋಧನೆಯಲ್ಲಿ ‘ಸ್ಕ್ರೀನ್ ಟೈಮ್’ ಹೆಚ್ಚುವುದರಿಂದ ವೃದ್ಧರ ದೈಹಿಕ ಚಲನೆ ಕಡಿಮೆಯಾಗುತ್ತದೆ ಎಂದು ಕಂಡುಬಂದಿದೆ. ಚೀನಾದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ‘ಸ್ಕ್ರೀನ್ ಟೈಮ್’ ಕಳಪೆ ನಿದ್ರೆಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ವೃದ್ಧರಿಗೆ ‘ಸ್ಕ್ರೀನ್ ಟೈಮ್’ನ ಅಪಾಯಗಳು ಹದಿಹರೆಯದವರಿಗಿಂತ ಭಿನ್ನವಾಗಿವೆ. ವೃದ್ಧರ ಸಾಧನಗಳು ಹಲವು ಬಾರಿ ಬ್ಯಾಂಕ್ ಖಾತೆಗಳೊಂದಿಗೆ ಸಂಪರ್ಕ ಹೊಂದಿರುತ್ತವೆ. ವಂಚಕರು ಇದರ ಮೂಲಕ ಅವರನ್ನು ವಂಚಿಸಬಹುದು.

ವೃದ್ಧರ ‘ಸ್ಕ್ರೀನ್ ಟೈಮ್’ ಮೇಲೆ ನಿಗಾ ಇಡಲು ಯಾರೂ ಇಲ್ಲ!

ಹದಿಹರೆಯದವರ ‘ಸ್ಕ್ರೀನ್ ಟೈಮ್’ ಮೇಲೆ ಕಡಿವಾಣ ಹಾಕಲು ಶಾಲೆ ಮತ್ತು ಪೋಷಕರು ಗಮನ ಹರಿಸುತ್ತಾರೆ; ಆದರೆ ವೃದ್ಧರ ಮೇಲೆ ಹೀಗೆ ಗಮನ ಹರಿಸುವವರು ಯಾರೂ ಇರುವುದಿಲ್ಲ. ಅವರು ಸ್ವತಃ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಲವು ಬಾರಿ ಅವರಿಗೆ ಸಹಾಯದ ಅವಶ್ಯಕತೆ ಇದೆ ಎನ್ನುವುದು ಅವರಿಗೂ ತಿಳಿದಿರುವುದಿಲ್ಲ. ‘ಗೇಮಿಂಗ್ ಕ್ಲಿನಿಕ್’ ನಡೆಸುವ ಹೆನ್ರಿಯೆಟ್ಟಾ ಬೋಡೆನ್-ಜೋನ್ಸ್ ಅವರು, ‘ಹಲವು ಬಾರಿ ವೃದ್ಧರ ಹತ್ತಿರ ಯಾರೂ ಇರುವುದಿಲ್ಲ ಅಥವಾ ಯಾರಾದರೂ ಇದ್ದರೂ ಸಹ, ಅವರು ವೃದ್ಧರು ಕಂಪ್ಯೂಟರ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ನೋಡಲು ಸಾಧ್ಯವಾಗುವುದಿಲ್ಲ, ಎಂದು ಹೇಳಿದ್ದಾರೆ.

‘ಡಿಜಿಟಲ್’ ಉಪಕರಣಗಳಿಂದ ಕೆಲವರಿಗೆ ಲಾಭ

ಧಾರ್ಮಿಕ ಸೇವೆ, ಆನ್‌ಲೈನ್ ಯೋಗ ತರಗತಿ, ‘ಬುಕ್ ಕ್ಲಬ್’ (ಪುಸ್ತಕಗಳನ್ನು ಓದುವವರ ಗುಂಪು) ಮುಂತಾದವು ವೃದ್ಧರಿಗೆ ಬಹಳ ಉಪಯುಕ್ತವಾಗಿವೆ. ಮನೆಯಿಂದ ಹೊರಗೆ ಹೋಗಲು ಸಾಧ್ಯವಿಲ್ಲದವರಿಗೆ ಇದು ಉಪಯುಕ್ತವಾಗಿದೆ, ಜೊತೆಗೆ ವೃದ್ಧರಿಗೆ ಕುಟುಂಬ ಸದಸ್ಯರ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ.

ಸಂಪಾದಕೀಯ ನಿಲುವು

  • ತಂತ್ರಜ್ಞಾನದಿಂದ ಮನುಷ್ಯನಿಗೆ ಲಾಭವಾಗುವುದಕ್ಕಿಂತ, ಹಾನಿಯೇ ಹೆಚ್ಚಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ!
  • ಹಿಂದೆ ವಯಸ್ಸಾದವರು ವಾನಪ್ರಸ್ಥಾಶ್ರಮ ಸ್ವೀಕರಿಸಿ ದೇವರನ್ನು ಹೆಚ್ಚು ಸ್ಮರಿಸುತ್ತಿದ್ದರು. ಆ ಸಂಪ್ರದಾಯ ಮುಂದುವರಿಯದ ಕಾರಣ, ಈಗಿನ ವೃದ್ಧರ ಹೆಚ್ಚಿನ ಸಮಯ ಅನಗತ್ಯ ಕೆಲಸಗಳಲ್ಲಿ ವ್ಯರ್ಥವಾಗುತ್ತಿದೆ. ಇದರಿಂದ ಅವರ ಮನಸ್ಸಿನ ಮೇಲಿನ ಸಂಸ್ಕಾರಗಳು ನಾಶವಾಗದೆ ಹಾಗೆಯೇ ಉಳಿದು, ಅವರು ಮತ್ತೆ ಮತ್ತೆ ಹುಟ್ಟು-ಸಾವುಗಳ ಚಕ್ರದಲ್ಲಿ ಸಿಲುಕುತ್ತಿದ್ದಾರೆ. ಆದ್ದರಿಂದ, ಈಗ ಚಿಕ್ಕಂದಿನಿಂದಲೇ ಎಲ್ಲರಿಗೂ ಸಾಧನೆಯನ್ನು ಕಲಿಸುವುದು ಅವಶ್ಯಕವಾಗಿದೆ!