ಅವಿಭಕ್ತ ಕುಟುಂಬ ವ್ಯವಸ್ಥೆಯ ಕುಸಿತಕ್ಕೆ ಜಾತ್ಯತೀತ ಶಿಕ್ಷಣ ವ್ಯವಸ್ಥೆಯೇ ಕಾರಣ !

ನ್ಯಾಯವಾದಿ ಯೋಗೇಶ ಜಲತಾರೆ

ಕಳೆದ ವರ್ಷ ನಾನು ಪುಣೆಗೆ ಓರ್ವ ಸಂಬಂಧಿಕರನ್ನು ಭೇಟಿಯಾಗಲು ಹೋಗಿದ್ದೆನು. ಆಗ ಅವರ ಸೊಸೈಟಿಯಿಂದ ಹೊರಗೆ ಬರುವಾಗ ಒಂದು ಮನೆಯ ‘ಸೇಫ್ಟಿ ಡೋರ್ (ಸಂರಕ್ಷಣಾ ಬಾಗಿಲು)ಕ್ಕೆ ಹೊರಗಿನಿಂದ ಬೀಗ ಹಾಕಿರುವುದು ಕಾಣಿಸಿತು; ಅದರ ಒಳಗೆ ಒಬ್ಬ ವಯಸ್ಸಾದ ಮಹಿಳೆಯು ಕುರ್ಚಿಯಲ್ಲಿ ಕುಳಿತು ಹೊರಗೆ ನೋಡುತ್ತಿದ್ದಳು. ಕುತೂಹಲವೆಂದು ಸಂಬಂಧಿಕರಲ್ಲಿ ವಿಚಾರಿಸಿದಾಗ, ಆ ಮಹಿಳೆಯ ಮಗ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನು ತಾಯಿಯನ್ನು ನೋಡಿಕೊಳ್ಳಲು ಒಬ್ಬ ಕೆಲಸದವಳನ್ನು ನೇಮಿಸಿದ್ದಾನೆ. ಆ ತಾಯಿಗೆ ಸ್ಮೃತಿಭ್ರಂಶವಾಗಿದೆ. ಅವಳಿಗೆ ತನ್ನ ಸ್ವಂತದ್ದೂ ಏನೂ ಮಾಡಲು ಆಗುವುದಿಲ್ಲ. ಆದ್ದರಿಂದ ಕೆಲಸದವಳು ಬಂದು ಅವಳಿಗೆ ಆವಶ್ಯಕವಿದ್ದುದ್ದನ್ನು ಮಾಡಿ ನಂತರ ಹೋಗುವಾಗ ಹೊರಗಿನಿಂದ ಬೀಗ ಹಾಕಿ ಹೋಗುತ್ತಾಳೆ. ಒಳಗಡೆ ಏನಾದರೂ ಅಡಚಣೆಯಾದರೆ ಹೋಗುವ-ಬರುವ ಯಾರಿಗಾದರೂ ತಿಳಿಯಬೇಕೆಂದು ಮುಖ್ಯ ಬಾಗಿಲನ್ನು ಹಾಕದೇ ‘ಸೇಫ್ಟಿ ಡೊರ್ಗೆ ಬೀಗ ಹಾಕಿ ಹಾಕಿ ಹೋಗುತ್ತಾಳೆ ಎಂದು ಗೊತ್ತಾಯಿತು. ಆ ಅಜ್ಜಿಯವರ ವೃದ್ಧಾಪ್ಯದ ಆ ಸ್ಥಿತಿಯನ್ನು ನೋಡಿ ನನ್ನ ಮನಸ್ಸಿಗೆ ನೋವಾಯಿತು.

ಮನೆಗೆ ಬಂದ ನಂತರ ಮರುದಿನ ಇನ್ನೊಂದು ಆಘಾತಕಾರಿ ಅನುಭವ ಬಂದಿತು. ಮುಂಬಯಿಯಲ್ಲಿರುವ ಒಬ್ಬ ಸಂಬಂಧಿಕ ಮಹಿಳೆಯ ದೂರವಾಣಿ ಕರೆ ಬಂದಿತು. ಅವಳ ಪತಿ ವಿದೇಶದಲ್ಲಿ ನೌಕರಿ ಮಾಡುತ್ತಾರೆ, ಆ ಮಹಿಳೆ ಮುಂಬಯಿಯಲ್ಲಿ ವಾಸಿಸುತ್ತಾಳೆ. ಅವಳ ಮಾವ ಪುಣೆಯ ಒಂದು ದೂರದ ಪ್ರದೇಶದಲ್ಲಿ ಇರುತ್ತಾರೆ. ಅಲ್ಲಿ ಅವರು ಮುಪ್ಪಿನಿಂದಾಗಿ ಮರಣ ಹೊಂದಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ? ಎಂದು ಅವರೆದುರು ಉಂಟಾದ ಪ್ರಶ್ನೆಯನ್ನು ಅವರು ನನಗೆ ಕೇಳಿದರು; ಏಕೆಂದರೆ, ಸದ್ಯ ನಗರಗಳಲ್ಲಿ ನೆರೆಹೊರೆಯವರು ಇಂತಹ ಸಂದರ್ಭಗಳಲ್ಲಿ ಬಹಳ ಸಹಾಯ ಮಾಡುವುದಿಲ್ಲ. ಆಗ ಹೆಚ್ಚು ವಿಚಾರಣೆ ಮಾಡಿದಾಗ, ಯಾರಿಗಾದರೂ ಅಂತ್ಯಸಂಸ್ಕಾರ ಮಾಡಲು ಅಡಚಣೆ ಇದ್ದರೆ ಅದಕ್ಕಾಗಿ ಕೆಲವು ಸಂಸ್ಥೆಗಳು ವ್ಯವಸಾಯವೆಂದು ಅಂತ್ಯಸಂಸ್ಕಾರದ ಎಲ್ಲ ಕೃತಿಗಳನ್ನು ಮಾಡುತ್ತವೆ ಎಂದು ತಿಳಿಯಿತು. ನಾವು ಅರ್ಜಿಯನ್ನು ತುಂಬಿದರೆ, ಅದಕ್ಕನುಸಾರ ಪ್ಯಾಕೇಜ್ ಇರುತ್ತದೆ, ಉದಾ. ಅಂತ್ಯಯಾತ್ರೆಗೆ ಎಷ್ಟು ಜನರು ಬೇಕು ? ವಿಧಿಯನ್ನು ಹೇಗೆ ಮಾಡಬೇಕು ? ಪುರೋಹಿತರ ಸಹಾಯದಿಂದ ವೈದಿಕ ಪದ್ಧತಿಯಲ್ಲಿಯೋ ಅಥವಾ ವಿದ್ಯುತ್‌ದಾಹಿನಿ ಮೂಲಕವೋ ? ಅಸ್ಥಿಯನ್ನು ಮನೆಗೆ ತಲುಪಿಸಬೇಕಿದ್ದರೆ ಅದರ ಬೇರೆ ಮೌಲ್ಯ ಇತ್ಯಾದಿ. ಇದನ್ನು ನೋಡಿದಾಗ ಸ್ವಲ್ಪ ಸಮಯ ನನ್ನ ಮನಸ್ಸು ಮಂಕಾಯಿತು. ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು.

ಮೊದಲು ಬಹುಶಃ ಪುಣೆ ಒಂದು ನಗರವಾದುದರಿಂದ ಈ ಸ್ಥಿತಿ ಇರಬಹುದು, ಹಳ್ಳಿಗಳಲ್ಲಿ ಜನರು ಒಟ್ಟುಗೂಡಿ ಇರುವುದರಿಂದ ಅವರು ಪರಸ್ಪರರನ್ನು ನೋಡಿಕೊಳ್ಳಬಹುದು ಎಂದು ಅನಿಸಿತು. ಆದರೆ ಅಲ್ಲಿಯೂ ನನಗೆ ನಿರಾಶೆಯಾಯಿತು. ಒಂದು ಚಿಕ್ಕ ಊರಿನ ಓರ್ವ ಸಾಧಕನ ಕುಟುಂಬದವರನ್ನು ವಿಚಾರಿಸಿದಾಗ ಅವನು, “ಸದ್ಯ ಎಲ್ಲ ಜನರು ಕೆಲಸ, ಉದ್ಯೋಗದ ನಿಮಿತ್ತ ಮುಂಬಯಿಗೆ ಹೋಗಿದ್ದಾರೆ. ಆದ್ದರಿಂದ ಹಳ್ಳಿಯಲ್ಲಿ ಚಿಕ್ಕ ಮಕ್ಕಳು ಮತ್ತು ಯುವಕರ ಸಂಖ್ಯೆ ಕಡಿಮೆ ಇದೆ, ಎಂದರು. ಆಗ, ಅವಿಭಕ್ತ ಕುಟುಂಬ ವ್ಯವಸ್ಥೆಯ ಪ್ರಮಾಣ ಬಹಳ ಕಡಿಮೆ ಇದೆ ಮತ್ತು ವಿಭಕ್ತ ಕುಟುಂಬವ್ಯವಸ್ಥೆಯು ವಿಕಸಿತಗೊಂಡಿದೆ. ಜನರ ಜೀವನದ ಕಡೆಗೆ ನೋಡುವ ಒಟ್ಟಾರೆ ದೃಷ್ಟಿಕೋನ ಹೊಟ್ಟೆಪಾಡಿಗಾಗಿ ಇರುವುದರಿಂದ ಈ ಸಮಸ್ಯೆ ಇಂದು ಕಾಣಿಸುತ್ತಿದೆ, ಎಂದು ಗಮನಕ್ಕೆ ಬಂದಿತು.

೧. ಅವಿಭಕ್ತ ಕುಟುಂಬವ್ಯವಸ್ಥೆ ಕುಸಿತಕ್ಕೆ ಕಾರಣಗಳು

ಇಂದು ಗ್ರಾಮೀಣ ಪ್ರದೇಶದ ಜನರು ನಗರಗಳಿಗೆ ಉದ್ಯೋಗ ಮತ್ತು ಒಳ್ಳೆಯ ಜೀವನೋಪಾಯಕ್ಕಾಗಿ ವಲಸೆ ಹೋಗುತ್ತಿದ್ದಾರೆ; ಆದರೆ ನಗರಗಳಲ್ಲಿ ಜಾಗ ಕಡಿಮೆ ಮತ್ತು ವಸತಿಯ ಖರ್ಚು ದುಬಾರಿಯಾಗಿರುವುದರಿಂದ, ಅವಿಭಕ್ತ ಕುಟುಂಬಗಳು ವಾಸಿಸುವುದು ಕಷ್ಟವಾಗುತ್ತದೆ. ಕೆಲವರು ವೈಯಕ್ತಿಕ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಅವಿಭಕ್ತ ಕುಟುಂಬಗಳಲ್ಲಿ ಇದನ್ನು ಪಡೆಯುವುದು ಕಷ್ಟವೆಂದು ಅವರು ಭಾವಿಸುತ್ತಾರೆ. ಕೆಲವು ಕುಟುಂಬಗಳು ಆಸ್ತಿಯ ಪಾಲುಗಳಿಂದಾಗಿ ವಿಭಕ್ತರಾಗಿದ್ದಾರೆ. ಕೆಲವು ಕುಟುಂಬಗಳಲ್ಲಿ ಹಳೆಯ ಪೀಳಿಗೆಯ ಜನರು ಸಂಪ್ರದಾಯಗಳಿಗೆ ಹೆಚ್ಚು ಮಹತ್ವ ನೀಡಿದರೆ, ಹೊಸ ಪೀಳಿಗೆಗೆ ಆಧುನಿಕ ವಿಚಾರಗಳಿಂದಾಗಿ ಬದಲಾವಣೆ ಬೇಕಿರುತ್ತದೆ. ಇದು ಭಿನ್ನಾಭಿಪ್ರಾಯಗಳಿಗೆ ಕಾರಣವಾಗುತ್ತದೆ. ವಿಭಕ್ತ ಕುಟುಂಬವ್ಯವಸ್ಥೆಗೆ ಬೇರೆ ಬೇರೆ ಕಾರಣಗಳಿದ್ದರೂ ಮುಖ್ಯವಾಗಿ ಇಂದಿನ ಪೀಳಿಗೆಗೆ ಜೀವನವನ್ನು ಏಕೆ ನಡೆಸಬೇಕು ? ಎಂಬುದರ ಕಡೆಗೆ ನೋಡುವ ಯೋಗ್ಯ ದೃಷ್ಟಿಕೋನ ಕಲಿಸದ ಕಾರಣ ಈ ಸಮಸ್ಯೆ ಹೆಚ್ಚಾಗಿದೆ.

೨. ಜೀವನದ ಕಡೆಗೆ ನೋಡುವ ಅಯೋಗ್ಯ ದೃಷ್ಟಿಕೋನ

ಇಂದು ಜೀವನದಲ್ಲಿ ಶಿಕ್ಷಣ ಮತ್ತು ‘ಕರಿಯರ್ಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. ಸದ್ಯದ ಯುವ ಪೀಳಿಗೆಯ ಮೇಲೆ ಜಾಗತಿಕೀಕರಣದಿಂದಾಗಿ ಪಾಶ್ಚಾತ್ಯ ವಿಕೃತಿಯ ಪ್ರಭಾವವಿರುತ್ತದೆ. ಯುವ ಪೀಳಿಗೆಗೆ ತಮ್ಮ ಇಚ್ಛೆಗನುಸಾರ ನಿರ್ಣಯ ತೆಗೆದುಕೊಳ್ಳುವುದಿರುತ್ತದೆ. ಒಟ್ಟಿಗಿದ್ದರೆ ಪ್ರತಿಯೊಂದು ವಿಷಯಕ್ಕಾಗಿ ದೊಡ್ಡವರ ಸಲಹೆ ಅಥವಾ ಅನುಮತಿ ಪಡೆಯಬೇಕಾಗುತ್ತದೆ, ಎಂದು ಅನಿಸುತ್ತಿರುತ್ತದೆ. ಕುಟುಂಬದಲ್ಲಿ ಪರಸ್ಪರರೊಂದಿಗೆ ಹೊಂದಾಣಿಕೆ ಇಲ್ಲದ ಕಾರಣ ಭಿನ್ನಾಭಿಪ್ರಾಯ ಮತ್ತು ವಾದವಿವಾದಗಳಾಗುತ್ತವೆ. ಅದಕ್ಕಿಂತಲೂ ಬೇರೆಯಾಗಿದ್ದು ಇದರಿಂದ ದೂರ ಇರಬೇಕು ಎಂದೂ ಕೆಲವರಿಗೆ ಅನಿಸುತ್ತದೆ.

೩. ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಆರ್ಥಿಕ ದೃಷ್ಟಿಯಲ್ಲಿ ಸ್ವತಂತ್ರರಾಗಲೂ ಒತ್ತು ನೀಡುವಿಕೆ !

ವ್ಯಕ್ತಿಗೆ, ವಿಶೇಷವಾಗಿ ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಗೌರವ ಬೇಕಾಗಿರುತ್ತದೆ. ಆದ್ದರಿಂದ ಅವರಿಗೆ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ಯ ಬೇಕಿರುತ್ತದೆ. ಸಾಧ್ವಿ ಋತುಂಭರಾ ಇವರು ಈ ಬಗ್ಗೆ ಒಂದು ಪ್ರವಚನದಲ್ಲಿ ಚೆನ್ನಾಗಿ ಹೇಳಿದ್ದಾರೆ. ಅವರು, “ಸದ್ಯದ ಮಹಿಳೆಯರು ಪುರುಷರಿಗೆ ಸಮಾನರಾಗಿ ಕೆಲಸ ಅಥವಾ ಉದ್ಯೋಗ ಮಾಡುತ್ತಾರೆ. ಆದ್ದರಿಂದ ಅವರಲ್ಲಿಯೂ ಪುರುಷರ ಅಹಂಕಾರ ನಿರ್ಮಾಣವಾಗಿದೆ. ಜಗತ್ತು ಮಹಿಳೆಯರ ಸಮರ್ಪಣೆಯಿಂದ ನಡೆಯುತ್ತದೆ, ಅಹಂಕಾರದಿಂದ ಅಲ್ಲ, ಎಂದು ಹೇಳಿದ್ದರು.

ಜೀವನವನ್ನು ಧರ್ಮದ ದೃಷ್ಟಿಯಿಂದ ನೋಡಬೇಕು

ಇಂದು ಎಲ್ಲರೂ ಜೀವನವನ್ನು ಹಣ ಗಳಿಸುವುದು ಮತ್ತು ಮೋಜು ಮಾಡುವುದು, ತಮ್ಮ ಉತ್ತಮ ‘ಕರಿಯರ್ ಮಾಡಿಕೊಂಡು ಕಾರು, ಬಂಗಲೆ ಇತ್ಯಾದಿ ಸುಖ ಸೌಕರ್ಯಗಳನ್ನು ಪಡೆಯುವುದು ಅಥವಾ ವಿದೇಶಕ್ಕೆ ಹೋಗಿ ನೆಲೆಸುವುದು, ಈ ದೃಷ್ಟಿಕೋನದಿಂದ ನೋಡುತ್ತಾರೆ ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಚಿಕ್ಕಂದಿನಿಂದ ಪಾಲಕರೂ ಮಕ್ಕಳಿಗೆ ಇದೇ ಧ್ಯೇಯ ಗಳನ್ನು ನೀಡಿ, ಅದೇ ರೀತಿಯ ಶಿಕ್ಷಣವನ್ನು ನೀಡುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಅವರ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಹೊಟ್ಟೆಪಾಡಿಗಾಗಿ ಶಿಕ್ಷಣ ನೀಡುವುದರಿಂದ ಸ್ವಾಭಾವಿಕವಾಗಿ ಮಕ್ಕಳು ಆತ್ಮಕೇಂದ್ರಿತ ಮತ್ತು ಸಂಕುಚಿತರಾಗುತ್ತಾರೆ. ಅವರ ಮನಸ್ಸಿನಲ್ಲಿ ತಮ್ಮ ತಾಯಿ-ತಂದೆ ಅಥವಾ ಹಿರಿಯರ ಬಗ್ಗೆ ಪ್ರೀತಿ, ಗೌರವ, ಕೃತಜ್ಞತೆಯ ಭಾವನೆ ಇತ್ಯಾದಿ ಹೆಚ್ಚಾಗುವುದಿಲ್ಲ.

ಧರ್ಮಶಾಸ್ತ್ರದ ಪ್ರಕಾರ, ಜೀವನವನ್ನು ಜೀವಿಸುವ ಮುಖ್ಯ ಎರಡು ಉದ್ದೇಶಗಳಿವೆ, ಒಂದು ನಮ್ಮ ಪ್ರಾರಬ್ಧವನ್ನು ಭೋಗಿಸಿ ತೀರಿಸುವುದು ಮತ್ತು ಇನ್ನೊಂದು ನಮ್ಮ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳುವುದು. ಇದಕ್ಕಾಗಿ ಕೆಲವರು ನಿವೃತ್ತಿಮಾರ್ಗದಿಂದ ಅಂದರೆ ಎಲ್ಲವನ್ನೂ ತೊರೆದು ಸಂತರ ಆಶ್ರಮದಲ್ಲಿ ಅಥವಾ ಮಠಕ್ಕೆ ಹೋಗಿ ಸಾಧನೆಯನ್ನು ಮಾಡುತ್ತಾರೆ, ಮತ್ತು ಕೆಲವರು ಪ್ರವೃತ್ತಿಮಾರ್ಗದಿಂದ, ಅಂದರೆ ಸಂಸಾರದಲ್ಲಿದ್ದು ಪ್ರಾಪಂಚಿಕ ಕರ್ತವ್ಯಕರ್ಮಗಳನ್ನು ನಿಭಾಯಿಸುತ್ತಾ ಮುಂದುವರೆಯುತ್ತಾರೆ. ಧರ್ಮ ಹೇಳುವುದೇನೆಂದರೆ, ಜೀವನದಲ್ಲಿ ನಮ್ಮೊಂದಿಗೆ ಇರುವ ಸಂಬಂಧಿಕರೆಲ್ಲರೂ ಪೂರ್ವಜನ್ಮದ ಋಣಾನುಬಂಧಗಳನ್ನು ತೀರಿಸಲು ಬಂದಿರುತ್ತಾರೆ. ಈ ಲೆಕ್ಕಾಚಾರಗಳನ್ನು ತೀರಿಸುವಾಗಲೇ ಮನುಷ್ಯನು ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ೪ ಪುರುಷಾರ್ಥಗಳನ್ನು ಸಾಧಿಸಬೇಕು. ಇದರಿಂದ ಜೀವನ ಆನಂದಮಯವಾಗುತ್ತದೆ. ಇಲ್ಲವಾದರೆ ಹೊಟ್ಟೆಪಾಡಿಗಾಗಿ ಬದುಕುವ ಜೀವನವು ಕ್ಷಣಿಕ ಸುಖವನ್ನು ಮಾತ್ರ ನೀಡುತ್ತದೆ. ಈ ಎಲ್ಲ ವಿಷಯಗಳು ಪ್ರವೃತ್ತಿಮಾರ್ಗದಲ್ಲಿ ಸಾಗುತ್ತಿರುವ ವ್ಯಕ್ತಿಗೆ ಅವಿಭಕ್ತ ಕುಟುಂಬದಲ್ಲಿದ್ದಾಗ ಸುಲಭವಾಗಿ ಸಾಧ್ಯವಾಗುತ್ತದೆ, ವಿಭಕ್ತ ಕುಟುಂಬದಲ್ಲಿದ್ದಾಗ ಅಲ್ಲ. ಆದ್ದರಿಂದ ವೈಯಕ್ತಿಕ ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ, ಎಂಬುದನ್ನು ನಾವು ಗಮನದಲ್ಲಿಟ್ಟುಕೊಂಡು ಒಟ್ಟುಗೂಡಿ ಸಾಧನಾ ಮಯ ಜೀವನವನ್ನು ನಡೆಸಬೇಕು.

– ಶ್ರೀ. ಯೋಗೇಶ ಜಲತಾರೆ

೪. ವಿಭಕ್ತ ಕುಟುಂಬಪದ್ಧತಿಯ ಅನಾನುಕೂಲತೆಗಳು ಮತ್ತು ದುಷ್ಪರಿಣಾಮಗಳು

ಇಂದು ಪತಿ-ಪತ್ನಿಯರು ತಮ್ಮ ತಂದೆ-ತಾಯಿಯಿಂದ ಬೇರೆ ವಾಸಿಸುತ್ತಿರುವುದರಿಂದ ಅವರಿಗೆ ದುಃಖವಾಗುತ್ತದೆ; ಜೊತೆಗೆ ಅವರ ಮನಸ್ಸಿನಲ್ಲಿ ತಮ್ಮ ಮಗನ ಬಗ್ಗೆ ಚಿಂತೆಯೂ ಇರುತ್ತದೆ. ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಪರಸ್ಪರರಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ. ಇದರಿಂದ ಮನಸ್ಸಿಗೆ ಒತ್ತಡವಾಗುತ್ತದೆ ! ಜೀವನದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ? ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಲು ಮನೆಯಲ್ಲಿ ಹಿರಿಯರು ಇಲ್ಲದ ಕಾರಣ ಸಲಹೆಗಾರರ ಸಹಾಯ ಪಡೆಯಬೇಕಾಗುತ್ತದೆ. ಮಕ್ಕಳಿಗೆ ಸಂತತಿಯಾದರೆ ಚಿಕ್ಕ ವಯಸ್ಸಿನಿಂದಲೇ ಅವರನ್ನು ನೋಡಿಕೊಳ್ಳಲು ಮನೆಯಲ್ಲಿ ನಿರಂತರವಾಗಿ ಯಾರೂ ಇರುವುದಿಲ್ಲ. ಆದ್ದರಿಂದ ಆ ಮಗುವನ್ನು ಶಿಶುಪಾಲನಾಕೇಂದ್ರಗಳಲ್ಲಿ ಇಡಬೇಕಾಗುತ್ತದೆ. ಅಜ್ಜ-ಅಜ್ಜಿಯರನ್ನು ಹೊರತುಪಡಿಸಿ, ಅವರ ಕೆಲಸ ಮತ್ತು ವೃತ್ತಿಗಳಿಂದಾಗಿ, ಪೋಷಕರು ಸಹ ಚಿಕ್ಕ ಮಗುವಿಗೆ ಬೆಂಬಲ ನೀಡುವುದಿಲ್ಲ. ಅದ್ದರಿಂದ ಮಗುವಿನ ಮೇಲೆ ಸರಿಯಾದ ಸಂಸ್ಕಾರವಾಗುವುದಿಲ್ಲ. ಅಜ್ಜ-ಅಜ್ಜಿಯರಿಗೆ ತಮ್ಮ ಮೊಮ್ಮಕ್ಕಳನ್ನು ಮುದ್ದಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಮೊಮ್ಮಕ್ಕಳೊಂದಿಗೆ ಆಟವಾಡಿದುದರ ಸಂತೋಷವೂ ಸಿಗುವುದಿಲ್ಲ. ನಂತರ ಈ ಮಕ್ಕಳು ಒಂಟಿಯಾಗಿ ಮೊಬೈಲ್ ಫೋನ್, ವಿಡಿಯೋ ಗೇಮ್ಸ್ ಮುಂತಾದವುಗಳಿಗೆ ಬಲಿಯಾಗುತ್ತಾರೆ. ಚೆನ್ನಾಗಿ ಬೆಳೆದ ಮಕ್ಕಳು ಹಠಮಾರಿ, ಅಳುಬುರುಕ ಅಥವಾ ಮೇಲಿಂದ ಮೇಲೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಅವರನ್ನು ನೋಡಿಕೊಳ್ಳಲು ಪತಿ-ಪತ್ನಿಗೆ ಸವಾಲಾಗುತ್ತದೆ. ಆದ್ದರಿಂದ ಸ್ವಾಭಾವಿಕವಾಗಿ ಪರಸ್ಪರರಿಂದ ಅಪೇಕ್ಷೆ ಪಡುವುದರಿಂದ ಪತಿ-ಪತ್ನಿಯಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತದೆ.

ಒಂದೆಡೆ ಚಿಕ್ಕ ಮಕ್ಕಳ ಅಥವಾ ಪತಿ-ಪತ್ನಿಯರ ಕಷ್ಟಗಳು ಮತ್ತು ಇನ್ನೊಂದೆಡೆ ವಯಸ್ಸಾದ ಪೋಷಕರ ತೊಳಲಾಟ ! ಆದ್ದರಿಂದ ಯಾರೂ ಜೀವನದಲ್ಲಿ ತಾವು ಬಯಸಿದ ಸುಖವನ್ನು ಪಡೆಯುವುದಿಲ್ಲ. ಒಟ್ಟಾರೆ ಮಕ್ಕಳು ತಾಯಿ-ತಂದೆಯರಿಂದ ಬೇರೆಯಾಗಿರುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುದನ್ನೂ ಯಾರೂ ಹೇಳಬಹುದು. ಈ ಸಮಸ್ಯೆಗೆ ಪರಿಹಾರ ಹುಡುಕಲು ಪ್ರತಿಯೊಬ್ಬರು ತಮ್ಮ ಜೀವನದ ಉದ್ದೇಶವೇನು ? ತಾವು ಏಕೆ ಜನ್ಮಕ್ಕೆ ಬಂದಿದ್ದೇವೆ ? ಇವೆಲ್ಲವನ್ನು ಧಾರ್ಮಿಕ ದೃಷ್ಟಿಕೋನದಿಂದ ತಿಳಿದುಕೊಳ್ಳಬೇಕು ಮತ್ತು ಅದಕ್ಕನುಸಾರ ಆಚರಣೆ ಮಾಡಬೇಕು, ಅಂದರೆ ಮಾತ್ರ ಜೀವನವು ನಿಜವಾದ ಅರ್ಥದಲ್ಲಿ ಸಾರ್ಥಕವಾಗುವುದು.

೫. ಅವಿಭಕ್ತ ಕುಟುಂಬದಲ್ಲಿ ಸಾಧನೆ ಹೇಗಾಗುತ್ತದೆ ?

ಅವಿಭಕ್ತ ಕುಟುಂಬದಲ್ಲಿ ಸತತವಾಗಿ ಪರೇಚ್ಛೆಯಿಂದ ನಡೆದುಕೊಳ್ಳಬೇಕಾಗುವುದರಿಂದ ಮನೋಲಯವಾಗಿ ಸ್ವೇಚ್ಛೆ ಯಿಂದ ಈಶ್ವರೇಚ್ಛೆಯ ಕಡೆಗೆ ಪ್ರವಾಸ ಶೀಘ್ರವಾಗಿ ಆಗುತ್ತದೆ. ಕುಟುಂಬಗಳೊಂದಿಗೆ ಇರುವ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಪೂರ್ಣಗೊಳ್ಳುತ್ತದೆ. ಒಟ್ಟುಗೂಡಿ ವಾಸಿಸುವುದರಿಂದ ಪರಸ್ಪರರ ಸಹಾಯ ಸಿಗುವುದರಿಂದ ಪರಸ್ಪರರಲ್ಲಿ ಪ್ರೇಮಭಾವ ಹೆಚ್ಚಾಗುತ್ತದೆ. ಕಾಲಾಂತರದಲ್ಲಿ ಈ ಪ್ರೇಮಭಾವದ ರೂಪಾಂತರ ನಿರಪೇಕ್ಷ ಪ್ರೀತಿಯಲ್ಲಿ ಪರಿವರ್ತಿಸುವುದು ಸುಲಭವಾಗುತ್ತದೆ. ಮನೆಯಲ್ಲಿ ಅಜ್ಜ-ಅಜ್ಜಿಯರು ಇರುವುದರಿಂದ ಚಿಕ್ಕ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುವುದಿಲ್ಲ ಮತ್ತು ಯುವಕರು ಇದ್ದರೆ ವೃದ್ಧರು ನಿರ್ಲಕ್ಷ್ಯಕ್ಕೆ ಒಳಗಾಗುವುದಿಲ್ಲ. ಒಟ್ಟುಗೂಡಿ ಇರುವುದರಿಂದ ಪರಸ್ಪರರ ಸ್ವಭಾವದೋಷಗಳು ಗಮನಕ್ಕೆ ಬಂದು ಅವುಗಳನ್ನು ದೂರ ಮಾಡಲು ಪ್ರಯತ್ನಿಸಬಹುದು. ತುರ್ತು ಪರಿಸ್ಥಿತಿಯಲ್ಲಿ ಎಲ್ಲರೂ ಜೊತೆಗಿರುವುದರಿಂದ ಪರಸ್ಪರರ ಆಧಾರವೆನಿಸುತ್ತದೆ. ಜೀವನದಲ್ಲಿ ವ್ಯಕ್ತಿಗೆ ಪಿತೃಋಣ, ಸಮಾಜಋಣ, ಋಷಿಋಣ ಮತ್ತು ದೇವರಋಣ ಹೀಗೆ ೪ ಪ್ರಕಾರದ ಋಣಗಳನ್ನೂ ತೀರಿಸಬೇಕಾಗುತ್ತದೆ. ಅವಿಭಕ್ತ ಕುಟುಂಬದಲ್ಲಿ ಅದು ಸಹಜವಾಗಿ ಸಾಧ್ಯವಾಗುತ್ತದೆ. ಮನೆಯಲ್ಲಿ ಎಲ್ಲರೂ ಸಾಧನೆ ಮಾಡುವವರಿದ್ದರೆ ಮತ್ತು ಪರಸ್ಪರರು ಗೌರವಕೊಟ್ಟು ಕಾಳಜಿ ವಹಿಸುವವರಿದ್ದರೆ ಮುಂದಿನ ಪೀಳಿಗೆಯ ಮೇಲೆಯೂ ಸಾಧನೆಯ ಒಳ್ಳೆಯ ಸಂಸ್ಕಾರವಾಗುತ್ತದೆ. ಇದರಿಂದ ಕುಟುಂಬದವರ ಸಮಷ್ಟಿ ಸಾಧನೆಯೂ ಆಗುತ್ತದೆ.

ಹೀಗೆ ಅನೇಕ ಲಾಭಗಳಾಗುವುದರಿಂದ ಪ್ರವೃತ್ತಿಮಾರ್ಗದಿಂದ ಜೀವನವನ್ನು ವ್ಯಾಪಕಗೊಳಿಸುವ ಎಲ್ಲರೂ ಅವಿಭಕ್ತ ಕುಟುಂಬದಲ್ಲಿರುವುದು ನಿಶ್ಚಿತವಾಗಿಯೂ ಲಾಭದಾಯಕವಾಗಿದೆ. ಈ ಮಹತ್ವವು ಗಮನಕ್ಕೆ ಬರಬೇಕೆಂದರೆ ಎಲ್ಲರೂ ಕೇವಲ ಜೀವನೋಪಾಯಕ್ಕಾಗಿ ಶಿಕ್ಷಣ ಪಡೆಯದೇ ಧರ್ಮಶಿಕ್ಷಣ ಪಡೆಯುವುದು ಆವಶ್ಯಕವಾಗಿದೆ. ಧರ್ಮಶಿಕ್ಷಣ ಪಡೆದು ಅದಕ್ಕನುಸಾರ ಆಚರಣೆ ಮಾಡುವುದರಿಂದ ಮನುಷ್ಯಜನ್ಮವು ನಿಜವಾಗಿ ಸಾರ್ಥಕವಾಗುವುದು. (೧೬.೬.೨೦೨೫)

– ಶ್ರೀ. ಯೋಗೇಶ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ ಪ್ರಸಾರಮಾಧ್ಯಮ.