೧. ‘ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ ಭಾರತವು ಪಾಲ್ಗೊಳ್ಳಲು ಅಂದಿನ ಕಾಂಗ್ರೆಸ್ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಹಠ !
‘ಸುಮಾರು ೫೬ ವರ್ಷಗಳ ಹಿಂದೆ, ೧೯೬೯ ರ ಸೆಪ್ಟೆಂಬರ್ ೨೫ ರಂದು, ಸುದೂರ ಉತ್ತರ ಆಫ್ರಿಕಾದ ಮೊರಾಕ್ಕೊ ರಾಜಧಾನಿಯಾದ ರಬಾತನಲ್ಲಿ ಒಂದು ನಾಟಕ ನಡೆಯುತ್ತಿತ್ತು. ನಾಟಕದ ಮುಖ್ಯ ಪಾತ್ರಗಳು ಭಾರತ, ಪಾಕಿಸ್ತಾನ ಮತ್ತು ಉಳಿದ ೨೩ ಮುಸಲ್ಮಾನ ರಾಷ್ಟ್ರಗಳು. ಇದೇ ದಿನ, ೨೪ ಮುಸಲ್ಮಾನ ರಾಷ್ಟ್ರಗಳು ‘ಇಸ್ಲಾಮಿಕ್ ಸಹಕಾರ ಸಂಘಟನೆಯನ್ನು (ಒಐಸಿಯ) ಸ್ಥಾಪಿಸುತ್ತಿದ್ದವು. ಇದಕ್ಕಾಗಿ ರಬಾತನಲ್ಲಿ ಒಂದು ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಈ ಸಂಘಟನೆಯ ಸದಸ್ಯತ್ವ ಪಡೆಯಲು ಭಾರತವೂ ಪಟ್ಟು ಹಿಡಿದಿತ್ತು. ಪಾಕಿಸ್ತಾನ ಸೇರಿ ಈ ಎಲ್ಲ ಮುಸಲ್ಮಾನ ದೇಶಗಳು, ‘ಭಾರತವು ಮುಸಲ್ಮಾನ ಬಹುಸಂಖ್ಯಾತ ದೇಶವಲ್ಲ. ಭಾರತದ ರಾಷ್ಟ್ರದ ಮುಖ್ಯಸ್ಥರೂ ಮುಸಲ್ಮಾನ ಅಲ್ಲ. ಹಾಗಾಗಿ ಭಾರತಕ್ಕೆ ಮುಸಲ್ಮಾನ ದೇಶಗಳ ಸಂಘಟನೆಯಲ್ಲಿ ಪ್ರವೇಶವನ್ನು ಹೇಗೆ ನೀಡಲು ಸಾಧ್ಯ ? ಎಂದು ವಾದಿಸಿದವು. ಇದರ ನಂತರವೂ ಪ್ರಧಾನಮಂತ್ರಿ ಇಂದಿರಾ ಗಾಂಧಿ ಈ ವಿಷಯದಲ್ಲಿ ದೃಢವಾಗಿದ್ದರು.

ಅದೇ ಸಮಯದಲ್ಲಿ ರಬಾತ್‌ನಲ್ಲಿನ ಭಾರತೀಯ ರಾಯಭಾರಿ ಗುರುಬಚನ್ ಸಿಂಗ್ ಅವರು ‘ಭಾರತೀಯ ನಿಯೋಗವು ಈ ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ, ಎಂಬ ಸಂತೋಷದ ಸುದ್ದಿಯನ್ನು ದೆಹಲಿಗೆ ನೀಡಿದರು. ಇಂದಿರಾ ಗಾಂಧಿ ಅವರು ತಮ್ಮ ಕೈಗಾರಿಕಾ ಮಂತ್ರಿ ಫಕ್ರುದ್ದೀನ್ ಅಲಿ ಅಹಮ್ಮದ್ ಅವರಿಗೆ ಈಗಾಗಲೇ ರಬಾತ್‌ಗೆ ಹೋಗಲು ಸಿದ್ಧರಾಗಿರುವಂತೆ ನಿರ್ದೇಶನ ನೀಡಿದ್ದರು. ತಕ್ಷಣವೇ, ಫಕ್ರುದ್ದೀನ್ ಅಲಿ ಅಹಮ್ಮದ್ ಅವರ ನೇತೃತ್ವದಲ್ಲಿ ಭಾರತದ ಮುಸಲ್ಮಾನ ಅಧಿಕಾರಿಗಳ ಅಧಿಕೃತ ನಿಯೋಗವು ನವ ದೆಹಲಿಯಿಂದ ರಬಾತ್‌ಗೆ ಹೊರಟಿತು.
೨. ಮುಸಲ್ಮಾನ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾರತವನ್ನು ಸೇರಿಸಿಕೊಳ್ಳಲು ಮುಸಲ್ಮಾನ ರಾಷ್ಟ್ರಗಳ ವಿರೋಧ
೧೯೬೯ ರ ಸೆಪ್ಟೆಂಬರ್ ೨೪ ರಂದು ಬೆಳಗ್ಗೆ, ಗುರುಬಚನ್ ಸಿಂಗ್ ಅವರಿಗೆ ರಬಾತ್‌ನ ವಿದೇಶಾಂಗ ಸಚಿವ ಲರಾಕಿ ಅವರ ಕಚೇರಿಯಿಂದ ಮತ್ತೊಂದು ದೂರವಾಣಿ ಕರೆ ಬಂತು. ಅದರಲ್ಲಿ ಅವರು ಅಧಿವೇಶನ ಪ್ರಾರಂಭವಾಗುವ ಮೊದಲು ಲರಾಕಿ ಅವರನ್ನು ಭೇಟಿಯಾಗಲು ವಿನಂತಿಸಿದರು. ಈ ವೈಯಕ್ತಿಕ ಭೇಟಿಯ ಸಮಯದಲ್ಲಿ ಲರಾಕಿ ಅವರು ಗುರುಬಚನ್ ಸಿಂಗ್ ಅವರಿಗೆ ‘ಶೃಂಗಸಭೆಯಲ್ಲಿನ ಸದಸ್ಯ ರಾಷ್ಟ್ರಗಳು ಭಾರತದ ಬಗ್ಗೆ ಸ್ವಲ್ಪ ಅಸಮಾಧಾನಗೊಂಡಿವೆ. ಹಾಗಾಗಿ ಅವರು ಬೆಳಗಿನ ಅಧಿವೇಶನದಲ್ಲಿ ಭಾಗವಹಿಸಬಾರದು ಎಂದು ಹೇಳಿದರು. ಅದಕ್ಕೆ ಗುರುಬಚನ್ ಸಿಂಗ್ ಅಸಮಾಧಾನದ ಕಾರಣವನ್ನು ಕೇಳಿದರು. ಲರಾಕಿ ‘ಭಾರತದ ಕರ್ಣಾವತಿ (ಅಹಮದಾಬಾದ್) ಯಲ್ಲಿ ಗಲಭೆಗಳು ನಡೆದಿವೆ. ಹಾಗಾಗಿ ಕೆಲವು ರಾಷ್ಟ್ರಗಳು ಸ್ವಲ್ಪ ಅಸಮಾಧಾನಗೊಂಡಿವೆ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಗುರುಬಚನ್ ಸಿಂಗ್ ಅವರು ಲರಾಕಿ ಅವರೊಂದಿಗೆ ಹೆಚ್ಚಿನ ವಾದ ಮಾಡಲಿಲ್ಲ. ಅವರಿಗೆ ಭಾರತೀಯ ನಿಯೋಗವನ್ನು ಕರೆದುಕೊಂಡು ಹೋಗಬೇಕಾಗಿತ್ತು ಹಾಗೂ ಇತರ ವ್ಯವಸ್ಥೆಗಳನ್ನೂ ನೋಡಬೇಕಾಗಿತ್ತು. ಅದೇ ಸಮಯದಲ್ಲಿ, ಬೆಳಗಿನ ಅಧಿವೇಶನವನ್ನು ಮುಂದೂಡಲಾಯಿತು; ಆದರೆ ಈ ವಿಳಂಬಕ್ಕೆ ಯಾವುದೇ ಕಾರಣವನ್ನು ನೀಡಲಾಗಿರಲಿಲ್ಲ. ಕೊನೆಗೆ ಮಧ್ಯಾಹ್ನ ೧ ಗಂಟೆಗೆ ‘ಬೆಳಗಿನ ಅಧಿವೇಶನ ನಡೆಯುವುದಿಲ್ಲ ಎಂದು ಘೋಷಿಸಲಾಯಿತು.
ಶೃಂಗಸಭೆಯಲ್ಲಿ ಮುಸಲ್ಮಾನ ದೇಶಗಳ ನಡುವೆ ಅನೌಪಚಾರಿಕ ಸಭೆಗಳು ನಡೆಯುತ್ತಿದ್ದವು. ಪಾಕಿಸ್ತಾನದ ಅಂದಿನ ಅಧ್ಯಕ್ಷ ಜನರಲ್ ಯಾಹ್ಯಾ ಖಾನ್ ಅವರ ನೇತೃತ್ವದಲ್ಲಿ ಒಂದು ದೊಡ್ಡ ಪಾಕಿಸ್ತಾನಿ ನಿಯೋಗವು ಭಾಗವಹಿಸಲು ಬಂದಿತ್ತು. ಅವರನ್ನು ಒಂದು ಐಷಾರಾಮಿ ವಿಲ್ಲಾದಲ್ಲಿ ಇರಿಸಲಾಗಿತ್ತು; ಆದರೆ ಜನರಲ್ ಯಾಹ್ಯಾ ಖಾನ್ ಅವರು ವಿಲ್ಲಾ ಬಿಟ್ಟು ಹೋಗಲು ನಿರಾಕರಿಸಿದರು. ಅವರು, ‘ಈ ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ಹಕ್ಕಿಲ್ಲ. ಅದು ಮುಸಲ್ಮಾನ ರಾಷ್ಟ್ರವೂ ಅಲ್ಲ, ಮುಸಲ್ಮಾನ ಬಹುಸಂಖ್ಯಾತ ದೇಶವೂ ಅಲ್ಲ. ಭಾರತದ ಕರ್ಣಾವತಿಯಲ್ಲಿ ಇತ್ತೀಚೆಗೆ ಹಿಂದೂ-ಮುಸಲ್ಮಾನ ಗಲಭೆಗಳು ನಡೆದಿವೆ. ಅದರಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ನಿಯೋಗವು ಈ ಸಮ್ಮೇಳನದಲ್ಲಿ ಹಾಜರಿದ್ದರೆ, ಪಾಕಿಸ್ತಾನವು ಅದರ ಮೇಲೆ ಸಂಪೂರ್ಣವಾಗಿ ಬಹಿಷ್ಕಾರ ಹಾಕುವುದು ಎಂದು ಹೇಳಿದರು
೩. ಕರ್ಣಾವತಿ ಗಲಭೆ : ಯಾವ ಪ್ರಕರಣ ?
೧೯೬೦ ರಿಂದ ಕರ್ಣಾವತಿ ನಗರವು ಮಹಾನಗರವಾಗಿ ರೂಪುಗೊಳ್ಳಲು ಪ್ರಾರಂಭಿಸಿತ್ತು. ಈ ಪ್ರಕ್ರಿಯೆಯಲ್ಲಿ ಜನಸಂಖ್ಯೆಯ ಅಸಮತೋಲನವೂ ಹೆಚ್ಚಿತು. ಈ ಅಸಮತೋಲನದಿಂದ ಗಲಭೆಗಳು ಹುಟ್ಟಿಕೊಂಡವು. ಇದರ ನಂತರ, ಹಿಂದೂ-ಮುಸಲ್ಮಾನ ಗಲಭೆಗಳು ಬಹುತೇಕ ಪ್ರತಿ ವರ್ಷವೂ ನಡೆಯುತ್ತಿದ್ದವು. ವಿಶೇಷವಾಗಿ ಭವ್ಯ ಹಿಂದೂ ರಥಯಾತ್ರೆ ಹೊರಟಾಗ, ಕರ್ಣಾವತಿಯ ದರ್ಯಾಪುರ ಮತ್ತು ಕಾಲುಪುರದಂತಹ ಪ್ರದೇಶಗಳಲ್ಲಿ ರಥಯಾತ್ರೆಯ ಮೇಲೆ ಆಕ್ರಮಣಗಳು ನಡೆಯುತ್ತಿದ್ದವು. ಇದರಿಂದ ಗಲಭೆಗಳು ಭುಗಿಲೆದ್ದವು. ೧೯೬೯ ರಲ್ಲಿ ಅಲ್-ಅಕ್ಸಾ ಮಸೀದಿಯನ್ನು ಸುಟ್ಟುಹಾಕಿದ್ದರ ವಿರುದ್ಧ ಕರ್ಣಾವತಿಯ ಮುಸಲ್ಮಾನರು ಪ್ರತಿಭಟಿಸಿ ಆಗಸ್ಟ್ ೩೦ ರಂದು ಒಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಇಲ್ಲಿಂದಲೇ ಗಲಭೆಗಳು ಪ್ರಾರಂಭವಾದವು. ಗುಜರಾತಿನಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದಲ್ಲಿತ್ತು ಮತ್ತು ಹಿತೇಂದ್ರ ದೇಸಾಯಿ ಮುಖ್ಯಮಂತ್ರಿಯಾಗಿದ್ದರು. ಅವರು ಪರಿಸ್ಥಿತಿಯನ್ನು ಅರಿತುಕೊಳ್ಳಲು ವಿಫಲರಾದರು. ಮೊರಾಕ್ಕೊದ ರಬಾತನಲ್ಲಿ ಮುಸಲ್ಮಾನ ರಾಷ್ಟ್ರಗಳ ಸಮ್ಮೇಳನ ನಡೆಯುತ್ತಿದ್ದಾಗಲೂ ಕರ್ಣಾವತಿಯಲ್ಲಿ ಗಲಭೆಗಳು ನಡೆಯುತ್ತಿದ್ದವು. ಈ ಗಲಭೆಗಳು ೩೨ ವರ್ಷಗಳ ಕಾಲ ಮುಂದುವರಿದವು. ಅವು ಕರ್ಣಾವತಿಯ ಒಂದು ಪ್ರಮುಖ ಭಾಗವಾಗಿದ್ದವು. ಹಾಗಾಗಿ ಪಾಕಿಸ್ತಾನವು ಇಂತಹ ಗಲಭೆಗಳ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಬಹಿಷ್ಕರಿಸುವುದು ಖಂಡಿತವಾಗಿಯೂ ತಾರ್ಕಿಕವಾಗಿರಲಿಲ್ಲ. ಬದಲಾಗಿ, ಆ ಸಮಯದಲ್ಲಿ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಹಿಂದೂಗಳ ಮೇಲೆ ಗಂಭೀರ ದೌರ್ಜನ್ಯಗಳು ನಡೆಯುತ್ತಿದ್ದವು ಮತ್ತು ಅವರನ್ನು ಪಲಾಯನ ಮಾಡಲು ಒತ್ತಾಯಿಸಲಾಗುತ್ತಿತ್ತು. ಹಿಂದೂಗಳು ಸೇಡು ತೀರಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಅದನ್ನು ಗಲಭೆ ಎಂದು ಕರೆಯುತ್ತಿರಲಿಲ್ಲ ಅಷ್ಟೆ.
೪. ಶೃಂಗಸಭೆಯ ಬಾಗಿಲಿನಿಂದಲೇ ಭಾರತದ ನಿಯೋಗದ ಉಚ್ಚಾಟನೆ
ಸಂಕ್ಷಿಪ್ತವಾಗಿ, ಭಾರತವನ್ನು ಸಮ್ಮೇಳನದಿಂದ ಹೊರಹಾಕಲು ಪಾಕಿಸ್ತಾನಕ್ಕೆ ಒಂದು ನೆಪ ಬೇಕಾಗಿತ್ತು. ಆ ಸಮಯದಲ್ಲಿ, ೨೪ ಸೆಪ್ಟೆಂಬರ್ ೧೯೬೯ ರಂದು ಮಧ್ಯಾಹ್ನ ೩.೩೦ ಕ್ಕೆ ಫಕ್ರುದ್ದೀನ್ ಅಲಿ ಅಹಮ್ಮದ್ ಅವರ ನೇತೃತ್ವದ ಭಾರತೀಯ ನಿಯೋಗವು ರಬಾತವನ್ನು ತಲುಪಿತು. ಗುರುಬಚನ್ ಸಿಂಗ್ ಅವರು ಅವರನ್ನು ಸ್ವಾಗತಿಸಿ ಒಂದು ವಿಲ್ಲಾ ರೀತಿಯ ಹೋಟೆಲ್‌ಗೆ ಕರೆದುಕೊಂಡು ಹೋದರು. ಸ್ವಲ್ಪ ಸಮಯದ ನಂತರ ಮೊರಾಕೊ ವಿದೇಶಾಂಗ ಸಚಿವಾಲಯದ ಒಬ್ಬ ಅಧಿಕಾರಿ ಫಕ್ರುದ್ದೀನ್ ಅಲಿ ಅಹಮ್ಮದ್ ಅವರನ್ನು ಭೇಟಿಯಾದರು. ಅವರು ಸ್ಪಷ್ಟಪಡಿಸಿದ್ದು, ‘ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಕೆಲವು ಸದಸ್ಯ ರಾಷ್ಟ್ರಗಳು ಭಾರತವನ್ನು ಸದಸ್ಯರನ್ನಾಗಿ ಶೃಂಗಸಭೆಗೆ ಪ್ರವೇಶ ನೀಡಲು ಬಯಸುವುದಿಲ್ಲ ಎಂದು ಕೇಳಿ ಅವರಿಗೆ ದುಃಖವಾಗಿದೆ. ಹಾಗಾಗಿ ಅವರು ಫಕ್ರುದ್ದೀನ್ ಅಲಿ ಅಹಮ್ಮದ್ ಅವರಿಗೆ ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಲು ವಿನಂತಿಸಿದರು. ಅವುಗಳಲ್ಲಿ ಒಂದು ‘ನಾವು ನಿಮಗೆ ವೀಕ್ಷಕರಾಗಿ ಕುಳಿತುಕೊಳ್ಳಲು ಅನುಮತಿ ನೀಡಬಹುದು ಮತ್ತು ಇನ್ನೊಂದು ಆಯ್ಕೆ ‘ಇದು ಒಪ್ಪಿಗೆಯಿಲ್ಲದಿದ್ದರೆ, ದಯವಿಟ್ಟು ಶೃಂಗಸಭೆಯಿಂದ ದೂರವಿರಿ ಎಂಬುದಾಗಿತ್ತು. ಇದನ್ನು ಕೇಳಿ ಫಕ್ರುದ್ದೀನ್ ಅಲಿ ಅಹಮ್ಮದ್ ಕೋಪಗೊಂಡು, ತಮಗೆ ಈ ಶೃಂಗಸಭೆಯಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ಸಿಕ್ಕಿದೆ. ಹಾಗಾಗಿ ಈ ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು. ಘಟನೆಗಳು ವೇಗವಾಗಿ ನಡೆಯುತ್ತಿದ್ದವು. ಮುಸಲ್ಮಾನ ದೇಶಗಳಿಗೆ ಭಾರತದ ಉಪಸ್ಥಿತಿ ಬೇಕಾಗಿಲ್ಲ ಮತ್ತು ಭಾರತವು ‘ಮಾನ-ನ-ಮಾನ, ಮೈ ತೇರಾ ಮೆಹಮಾನ್ (‘ಒಪ್ಪಲಿ ಒಪ್ಪದೇ ಇರಲಿ, ನಾನು ನಿನ್ನ ಅತಿಥಿ) ಎಂಬ ಸ್ಥಿತಿಯಲ್ಲಿತ್ತು. ರಾತ್ರಿಯಿಡೀ ಅತ್ತಿಂದಿತ್ತ ರಾಯಭಾರಿಗಳ ಓಡಾಟ ಮುಂದುವರಿಯುತ್ತಿತ್ತು.
ಸಂಧಾನದ ಈ ಅಧಿವೇಶನವು ಮರುದಿನವೂ ಮುಂದುವರಿಯಿತು. ೨೫ ಸೆಪ್ಟೆಂಬರ್ ೧೯೬೯ ರಂದು ಭಾರತೀಯ ನಿಯೋಗದ ಸದಸ್ಯರು ಶೃಂಗ ಸಮ್ಮೇಳನಕ್ಕೆ ಹಾಜರಾಗಲು ಪ್ರಯತ್ನಿಸಿದಾಗ, ಅವರನ್ನು ಬಾಗಿಲಿನಲ್ಲಿಯೇ ಅವಮಾನಿಸಿ ಹಿಂದಿರುಗುವಂತೆ ಹೇಳಲಾಯಿತು. ಇಬ್ಬರ ಬಳಿಯೂ ಸಮ್ಮೇಳನಕ್ಕೆ ಹಾಜರಾಗಲು ಅಗತ್ಯವಿರುವ ಎಲ್ಲ ದಾಖಲೆಗಳಿವೆ; ಆದರೆ ಅವರಿಗೆ ‘ಯಾವುದೇ ಭಾರತೀಯ ಪ್ರತಿನಿಧಿಗೆ ಪ್ರವೇಶ ನಿಷಿದ್ಧ ಎಂದು ಹೇಳಲಾಗುತ್ತದೆ.
೫. ಇಸ್ಲಾಮಿಕ್ ದೇಶಗಳ ಸಂಘಟನೆಯಲ್ಲಿ ಭಾಗವಹಿಸಬೇಕೆಂದು ಭಾರತದ ವಿನಂತಿ
ಇಂತಹ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಅವರು ಫಕ್ರುದ್ದೀನ್ ಅಲಿ ಅಹಮ್ಮದ್ ಅವರಿಗೆ ಏನಾದರೂ ಆಗಲಿ, ಈ ಸಮ್ಮೇಳನಕ್ಕೆ ಹಾಜರಾಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದರು, ಹಾಗಾಗಿಯೇ ನವ ದೆಹಲಿಯಲ್ಲಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ವಿದೇಶಾಂಗ ಸಚಿವ ದಿನೇಶ ಸಿಂಗ್ ಮತ್ತು ರಬಾತ್‌ನಲ್ಲಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಹೊಸದಾಗಿ ಸ್ಥಾಪಿಸಲಾದ ಇಸ್ಲಾಮಿಕ್ ದೇಶಗಳ ಸಂಘಟನೆಯಲ್ಲಿ ಸದಸ್ಯತ್ವ ಪಡೆಯಲು ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದರು. – ಶ್ರೀ. ಪ್ರಶಾಂತ ಪೋಳ
ಆ ಸಮಯದಲ್ಲಿ ಭಾರತವು ಒಟ್ಟು ೨೩-೨೪ ಮುಸಲ್ಮಾನ ರಾಷ್ಟ್ರಗಳ ಮುಂದೆ ದಯವಿಟ್ಟು ಭಾರತವನ್ನು ನಿಮ್ಮ ಸಂಘಟನೆಯ ಸದಸ್ಯರನ್ನಾಗಿ ಮಾಡಿಕೊಳ್ಳುವಂತೆ ಕೈಜೋಡಿಸಿ ವಿನಂತಿಸುತ್ತಿತ್ತು. ಈ ಮುಸಲ್ಮಾನ ರಾಷ್ಟ್ರಗಳು ಭಾರತದ ಸದಸ್ಯತ್ವವನ್ನು ವಿರೋಧಿಸುತ್ತಿದ್ದವು. ಅವುಗಳಲ್ಲಿ ಅತಿ ಹೆಚ್ಚು ವಿರೋಧ ಮಾಡಿದ ರಾಷ್ಟ್ರಗಳಲ್ಲಿ ಪಾಕಿಸ್ತಾನ, ಇರಾನ್, ಜೋರ್ಡಾನ್ ಮತ್ತು ಟರ್ಕಿ ಸೇರಿವೆ.
೬. ಭಾರತದ ನಿಯೋಗವು ಮೊರಾಕ್ಕೊದಿಂದ ಬರಿಗೈಯಲ್ಲಿ ಮರಳಿತು
ಈ ಒತ್ತಡದಲ್ಲಿ ೨೫ ಸೆಪ್ಟೆಂಬರ್ ೧೯೬೯ ರಂದು ದಿನವು ಮುಗಿಯಿತು. ‘ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಒಂದು ಹೊಸ ಮುಸಲ್ಮಾನ ಸಂಘಟನೆ ಎಂದು ಘೋಷಿಸಲಾಗುತ್ತದೆ. ಸಂಜೆ ಈ ಶೃಂಗಸಭೆಯ ಘೋಷಣಾಪತ್ರ ವನ್ನು ಸಾರ್ವಜನಿಕಗೊಳಿಸಲಾಗುತ್ತದೆ. ಒಂದು ಹಂತದಲ್ಲಿ, ಅದರಲ್ಲಿ ಹೀಗೆ ಹೇಳಲಾಗಿದೆ, ‘ಭಾರತದ ಮುಸಲ್ಮಾನ ಸಮುದಾಯವು ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿತು. ಇದು ಒಂದು ಅವಮಾನಕರ ಟಿಪ್ಪಣಿಯಾಗಿತ್ತು. ರಾಯಭಾರಿ ಗುರುಬಚನ್ ಸಿಂಗ್ ಮತ್ತು ಅಲಿಗಢ ಮುಸಲ್ಮಾನ ವಿಶ್ವವಿದ್ಯಾಲಯದ ಉಪಕುಲಪತಿಗಳು ಸೆಪ್ಟೆಂಬರ್ ೨೨ ರಂದು ಮೊದಲ ಅಧಿವೇಶನದಲ್ಲಿ ‘ಭಾರತದ ಮುಸಲ್ಮಾನ ಸಮುದಾಯದ ಪ್ರತಿನಿಧಿಗಳಾಗಿ ಅಲ್ಲ, ಬದಲಿಗೆ ‘ಭಾರತ ರಾಷ್ಟ್ರದ ಪ್ರತಿನಿಧಿಗಳಾಗಿ ಹಾಜರಿದ್ದರು. ಇಂದಿರಾ ಗಾಂಧಿಯವರ ಸೂಚನೆಯಂತೆ ಫಕ್ರುದ್ದೀನ್ ಅಲಿ ಅಹ್ಮದ್ ರಬಾತನಲ್ಲಿಯೇ ಉಳಿದರು. ಮರುದಿನ, ೧೯೬೯ ರ ಸೆಪ್ಟೆಂಬರ್ ೨೬ ರಂದು ಬೆಳಗ್ಗೆ, ಮೊರಾಕ್ಕೊದ ವಿದೇಶಾಂಗ ಮಂತ್ರಿಗಳು ಸೇರಿದಂತೆ ಒಂದು ನಿಯೋಗವು ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ಭೇಟಿಯಾಯಿತು. ಅವರು ತಮ್ಮ ಅಸಹಾಯಕತೆಯನ್ನು ಸ್ಪಷ್ಟಪಡಿಸಿದರು. ಈ ಮೂಲಕ ಅವರಿಗೆ ಹೊರಟು ಹೋಗುವ ಸೂಚನೆ ನೀಡಿದರು. ಕೊನೆಗೆ, ೨೬ ಸೆಪ್ಟೆಂಬರ್ ೧೯೬೯ ರಂದು ಮಧ್ಯಾಹ್ನ ಫಕ್ರುದ್ದೀನ್ ಅಲಿ ಅಹಮ್ಮದ್ ಅವರ ನೇತೃತ್ವದ ಭಾರತೀಯ ನಿಯೋಗವು ರಬಾತನ ಹೋಟೆಲ್‌ನಲ್ಲಿ ಸಂಪೂರ್ಣ ಸಮಯವನ್ನು ಕಳೆದು ಬರಿಗೈಯಲ್ಲಿ ಭಾರತಕ್ಕೆ ಮರಳಿತು.
ಜಾಗತಿಕ ರಾಜತಾಂತ್ರಿಕ ಇತಿಹಾಸದಲ್ಲಿ ಮೊದಲ ಬಾರಿಗೆ, ಒಂದು ದೇಶದ ನಿಯೋಗವನ್ನು ಆಹ್ವಾನಿಸಲಾಗಿತ್ತು; ಆದರೆ ಅವರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿ, ಬರಿಗೈಯಲ್ಲಿ ಹಿಂತಿರುಗಿಸಲಾಯಿತು. ಇದರ ನಂತರ ಗುರುಬಚನ್ ಸಿಂಗ್ ಹೇಳಿದರು, ‘ರಬಾತ್ ಘಟನೆಯು ನಮಗೆ ಅರಬ್ ರಾಷ್ಟ್ರಗಳೊಂದಿಗೆ ಭಾರತದ (ಅಥವಾ ಇನ್ನೊಂದು ರೀತಿಯಲ್ಲಿ, ಎಲ್ಲಾ ಮುಸಲ್ಮಾನ ರಾಷ್ಟ್ರಗಳೊಂದಿಗೆ) ಒಮ್ಮುಖ ಸ್ನೇಹವನ್ನು ಹೊಂದಿದೆ ಎಂದು ಕಲಿಸಿತು. ಈ ಎಲ್ಲಾ ಮುಸಲ್ಮಾನ ರಾಷ್ಟ್ರಗಳು ಭಾರತವು ಪ್ಯಾಲೆಸ್ಟೈನ್ ಸೇರಿದಂತೆ ಅವರ ಎಲ್ಲಾ ವಿಷಯಗಳಲ್ಲಿ ಬೆಂಬಲ ನೀಡಬೇಕೆಂದು ನಿರೀಕ್ಷಿಸುತ್ತವೆ; ಆದರೆ ಅವುಗಳಲ್ಲಿ ಯಾರೂ ಕಾಶ್ಮೀರ ಆಗಲಿ ಅಥವಾ ಚೀನಾ ಆಗಲಿ ಭಾರತದ ಜೊತೆ ಅದರ ಯಾವುದೇ ವಿಚಾರದಲ್ಲಿ ಬೆಂಬಲಿಸುವುದಿಲ್ಲ.
೭. ಗುರುಬಚನ್ ಸಿಂಗ್ ಮೇಲೆ ಕ್ರಮ
ಈ ಪ್ರಕರಣ ಇಷ್ಟಕ್ಕೇ ನಿಲ್ಲಲಿಲ್ಲ. ಈ ಸಂಪೂರ್ಣ ಪ್ರಕರಣದಲ್ಲಿ ಯಾರನ್ನಾದರೂ ಖಳನಾಯಕನನ್ನಾಗಿ ಮಾಡಬೇಕಾಗಿತ್ತು. ವಿದೇಶಾಂಗ ಸಚಿವಾಲಯದ ಆದೇಶವನ್ನು ಪಾಲಿಸುವಲ್ಲಿ ದಣಿವರಿಯದೆ ಕೆಲಸ ಮಾಡಿದ ಭಾರತೀಯ ರಾಯಭಾರಿ ಗುರುಬಚನ್ ಸಿಂಗ್ ಅವರನ್ನು ಮೊರಾಕ್ಕೊ ‘ಅನಪೇಕ್ಷಿತ ವ್ಯಕ್ತಿ (ಇಚ್ಛಿತರಲ್ಲದ) ಎಂದು ಘೋಷಿಸಿತು. ಕೊನೆಗೆ ಭಾರತವು ಅವರನ್ನು ನವ ದೆಹಲಿಗೆ ಮರಳಿ ಕರೆಯಿಸಿಕೊಳ್ಳಬೇಕಾಯಿತು. ಅವರು ೨೭ ಸೆಪ್ಟೆಂಬರ್ ೧೯೭೦ ರ ವರೆಗೆ ವಿದೇಶಾಂಗ ಸಚಿವಾಲಯದಲ್ಲಿ ಮೊರಾಕ್ಕೊದ ರಾಯಭಾರಿಯಾಗಿ ಕೆಲಸ ಮಾಡಿದರು. ನಂತರ ಅವರನ್ನು ಕೀನ್ಯಾಗೆ ರಾಯಭಾರಿಯಾಗಿ ಕಳುಹಿಸಲಾಯಿತು.
೮. ರಬಾತ ಘಟನೆಯ ವಾರ್ಷಿಕ ವರದಿಯಲ್ಲಿ ಉಲ್ಲೇಖ
ವಿದೇಶಾಂಗ ಸಚಿವಾಲಯದ ವರದಿಯನ್ನು ಪ್ರತಿ ವರ್ಷ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ೧೯೬೯-೧೯೭೦ ರ ವಾರ್ಷಿಕ ವರದಿಯಲ್ಲಿ, ವಿದೇಶಾಂಗ ಸಚಿವಾಲಯವು ಪುಟ ೫೪ ರಲ್ಲಿ ಈ ಘಟನೆಯ ಸಂದರ್ಭದಲ್ಲಿ ಹೀಗೆ ಬರೆದಿದೆ, ‘ಸೆಪ್ಟೆಂಬರ್ ೧೯೬೯ ರಲ್ಲಿ ರಬಾತನಲ್ಲಿ ನಡೆದ ಇಸ್ಲಾಮಿಕ್ ಶೃಂಗಸಭೆಯ ನಿಮಿತ್ತ ನಡೆದ ಬೆಳವಣಿಗೆಗಳಿಂದಾಗಿ ಮೊರಾಕ್ಕೊದೊಂದಿಗಿನ ಸ್ನೇಹ ಸಂಬಂಧಗಳು ಹದಗೆಟ್ಟವು. ಹಾಗಾಗಿ ಭಾರತ ಸರಕಾರವು ರಬಾತನಿಂದ ತನ್ನ ರಾಯಭಾರಿಯನ್ನು ಮರಳಿ ಕರೆಯಿಸಿಕೊಳ್ಳಲು ನಿರ್ಧರಿಸಿತು. ದುರದೃಷ್ಟವಶಾತ್, ೧೯೬೯ ರಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆ ಉಳಿದಿರಲಿಲ್ಲ. ಮೊರಾಕ್ಕೊದಲ್ಲಿನ ಇದೇ ಘಟನೆಯಲ್ಲಿ, ರಬಾತನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೋರ್ಡಾನ್‌ನ ವಿದೇಶಾಂಗ ಮಂತ್ರಿಗಳು ಭಾರತೀಯ ರಾಯಭಾರಿಯ ವಿರುದ್ಧ ಅವಮಾನಕರ ಪದಗಳನ್ನು ಬಳಸಿದರು; ಆದರೆ ಯಾರೂ ಅದನ್ನು ವಿರೋಧಿಸಲಿಲ್ಲ. ಸ್ವಾತಂತ್ರ್ಯದ ನಂತರದ ಈ ಸಮಯ ನಮ್ಮ ದೇಶಕ್ಕೆ ಅತ್ಯಂತ ನಿರಾಶಾದಾಯಕವಾಗಿತ್ತು. ೧೯೬೯ ರಲ್ಲಿ ಭಾರತ ಈ ರೀತಿ ಇತ್ತು. ತನ್ನ ಸ್ವಾಭಿಮಾನವನ್ನು ಪಣಕ್ಕಿಟ್ಟ ಒಂದು ಹೀನ, ದೀನ ಮತ್ತು ಅಸಹಾಯಕ ಭಾರತ !
– ಶ್ರೀ. ಪ್ರಶಾಂತ ಪೋಳ, ರಾಷ್ಟ್ರಚಿಂತಕ, ಜಬಲಪುರ, ಮಧ್ಯಪ್ರದೇಶ. (‘ಭಾರತ ದಿಂದ ‘ಭಾರತ: ಒಂದು ಪಯಣ ಎಂಬ ಮುಂಬರುವ ಪುಸ್ತಕದ ಒಂದು ಭಾಗ)

‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !