ಆಶ್ವಯುಜ ಕೃಷ್ಣ ದ್ವಾದಶಿ ಎಂದರೆ ಗೋವತ್ಸದ್ವಾದಶಿ ! (ಅಕ್ಟೋಬರ್ ೧೭)

ಗೋವತ್ಸದ್ವಾದಶಿ ಅಥವಾ ವಸುಬಾರಸ್. ವಸು ಎಂದರೆ ಧನ. ಬಾರಸ್ ಎಂದರೆ ದ್ವಾದಶಿ. ಭಾರತೀಯ ಸಂಸ್ಕೃತಿ ಕೃಷಿ ಪ್ರಧಾನವಾಗಿರುವುದರಿಂದ ಈ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಸಂಜೆ ಕರುವಿನೊಂದಿಗೆ ಇರುವ ಗೋವನ್ನು ಪೂಜಿಸುತ್ತಾರೆ. ಅದರಿಂದ ಮನೆಯಲ್ಲಿ ಲಕ್ಷ್ಮಿಯ ಆಗಮನವಾಗುತ್ತದೆ ಎಂದು ನಂಬಲಾಗುತ್ತದೆ. ಈ ದಿನ ದಿನವಿಡೀ ಉಪವಾಸವಿದ್ದು, ಮಹಿಳೆಯರು ಸಂಜೆ ಗೋಪೂಜೆಯನ್ನು ಮಾಡುತ್ತಾರೆ. ಗೋವಿನ ಕಾಲುಗಳಿಗೆ ನೀರು ಹಾಕಿ, ಅರಿಶಿನ-ಕುಂಕುಮ ಮತ್ತು ಹೂವುಗಳನ್ನು ಅರ್ಪಿಸಿ, ಗೋವು-ಕರುವಿಗೆ ಆರತಿ ಮಾಡುತ್ತಾರೆ. ಅವುಗಳಿಗೆ ನೈವೇದ್ಯವೆಂದು ಹೋಳಿಗೆಯನ್ನು ತಿನ್ನಿಸುತ್ತಾರೆ. ಈ ದಿನದಿಂದ ಮನೆಯ ಅಂಗಳದಲ್ಲಿ ರಂಗೋಲಿ ಬಿಡಿಸಲು ಪ್ರಾರಂಭಿಸುತ್ತಾರೆ. ಈ ದಿನ ಗೋಧಿ ಮತ್ತು ಹೆಸರುಕಾಳನ್ನು ಅಡುಗೆಯಲ್ಲಿ ಬಳಸುವುದಿಲ್ಲ. ಮಹಿಳೆಯರು ಸಜ್ಜೆ ರೊಟ್ಟಿ, ಚವಳೀಕಾಯಿಯ ಪಲ್ಯವನ್ನು ತಿಂದು ಉಪವಾಸ ಮುರಿಯುತ್ತಾರೆ. ಅನೇಕ ಮನೆಗಳಲ್ಲಿ ದೀಪಾವಳಿಯಂದು ತಯಾರಿಸುವ ಖರ್ಜಿಕಾಯಿಗಳನ್ನು ಈ ದಿನದಂದು ತಯಾರಿಸಿ ಗೋವಿಗೆ ನೈವೇದ್ಯ ತೋರಿಸುತ್ತಾರೆ. ತಮ್ಮ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಸುಖ ಸಿಗಬೇಕೆಂದು ಈ ಪೂಜೆಯನ್ನು ಮಾಡುತ್ತಾರೆ. ಈ ದಿನದಿಂದ ಆಕಾಶಬುಟ್ಟಿಯನ್ನು ತೂಗಾಡಿಸುತ್ತಾರೆ. ಅದನ್ನು ಹಾಕುವ ಮೊದಲು ಅದನ್ನು ಪೂಜಿಸುತ್ತಾರೆ. ಸಮುದ್ರ ಮಂಥನದಿಂದ ೫ ಕಾಮಧೇನುಗಳು ಉತ್ಪನ್ನವಾಗಿದ್ದವು, ಅವುಗಳಲ್ಲಿ ‘ನಂದಾ’ ಹೆಸರಿನ ಧೇನುವನ್ನು ಉದ್ದೇಶಿಸಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಈ ವ್ರತವನ್ನು ‘ಬಛವಾಂಛ’ ಎಂದು ಕರೆಯುತ್ತಾರೆ.
ಆಶ್ವಯುಜ ಕೃಷ್ಣ ತ್ರಯೋದಶಿ ಎಂದರೆ ಧನತ್ರಯೋದಶಿ ! (ಅಕ್ಟೋಬರ್ ೧೮)
ಈ ದಿನದಂದು ಮುಖ್ಯವಾಗಿ ಧನ ಮತ್ತು ಧನದ ರಕ್ಷಕನಾದ ಕುಬೇರನ ಪೂಜೆಯನ್ನು ಮಾಡುತ್ತಾರೆ. ಈ ದಿನ ಯಮರಾಜನನ್ನು ಪ್ರಸನ್ನಗೊಳಿಸಲು ದೀಪದಾನ ಮಾಡುತ್ತಾರೆ. ಈ ದಿನ ಅಖಂಡ ದೀಪವನ್ನು ಹಚ್ಚಿಡಬೇಕು. ಪಾಯಸದ (ಅನ್ನದ ಖೀರು) ನೈವೇದ್ಯವನ್ನು ತೋರಿಸಿ, ಯಥಾಶಕ್ತಿ ಪರೋಪಕಾರ ಮಾಡಬೇಕು. ಈ ವ್ರತದ ಕಥೆ ಹೀಗಿದೆ, ಯಮರಾಜನು ತನ್ನ ದೂತರಿಗೆ, ‘ಪ್ರಾಣಿಗಳ ಪ್ರಾಣವನ್ನು ತೆಗೆಯುವಾಗ ನಿಮಗೆ ದುಃಖವಾಗುವುದಿಲ್ಲವೇ ?’ ಎಂದು ಕೇಳಿದನು. ಅದಕ್ಕೆ ಯಮದೂತರು, ‘ಹೇಮರಾಜನೆಂಬ ರಾಜನ ಮಗನ ಪ್ರಾಣವನ್ನು ಅವನ ೧೬ ನೇ ವಯಸ್ಸಿನಲ್ಲಿ ತೆಗೆದುಕೊಳ್ಳುವಾಗ ದುಃಖವಾಯಿತು. ಆದುದರಿಂದ ಅಪಮೃತ್ಯುವನ್ನು (ಅಕಾಲ ಮರಣ) ತಪ್ಪಿಸಲು ನೀವೇ ಉಪಾಯ ಹೇಳಿ’ ಎಂದು ಹೇಳಿದರು. ಅದಕ್ಕೆ ಯಮರಾಜನು, ‘ಧನತ್ರಯೋದಶಿಯ ದಿನ ಈ ವ್ರತವನ್ನು ಮಾಡಿ ದೀಪದಾನವನ್ನು ಮಾಡುವವರಿಗೆ ಅಪಮೃತ್ಯು ಬರುವುದಿಲ್ಲ’, ಎಂದು ಹೇಳಿದನು.
ಈ ದಿನ ಮನೆಯಲ್ಲಿರುವ ಚಿನ್ನದ ನಾಣ್ಯಗಳು, ಆಭರಣ ಗಳನ್ನು ಸ್ವಚ್ಛಗೊಳಿಸುತ್ತಾರೆ. ಉಪವಾಸವಿದ್ದು ವಿಷ್ಣು, ಲಕ್ಷ್ಮಿ, ಕುಬೇರ, ಯೋಗಿನಿ, ಗಣೇಶ, ನಾಗ ಮತ್ತು ದ್ರವ್ಯನಿಧಿ ಎಂಬ ದೇವತೆಗಳನ್ನು ಪೂಜಿಸುತ್ತಾರೆ. ಕೊತ್ತಂಬರಿ ಕಾಳು ಮತ್ತು ಬೆಲ್ಲದ ನೈವೇದ್ಯ ತೋರಿಸುತ್ತಾರೆ. ಸಮುದ್ರ ಮಂಥನದಿಂದ ಇದೇ ದಿನ ಲಕ್ಷ್ಮೀ ದೇವಿಯು ಪ್ರಕಟಳಾದಳು ಎಂದು ನಂಬಲಾಗಿದೆ.
ಧನ್ವಂತರಿ ಜಯಂತಿ (ಅಕ್ಟೋಬರ್ ೧೮)
ಆಶ್ವಯುಜ ಕೃಷ್ಣ ತ್ರಯೋದಶಿಯ ದಿನ ಪ್ರದೋಷ ಕಾಲದಲ್ಲಿ ವೈದ್ಯರು ಧನ್ವಂತರಿಯ ಪೂಜೆಯನ್ನು ಮಾಡುತ್ತಾರೆ. ಈ ದಿನದಂದೇ ಭಗವಾನ ಧನ್ವಂತರಿಯ ಜನನವಾಯಿತು ಎಂದು ನಂಬಲಾಗಿದೆ. ಧನ್ವಂತರಿಯು ವೈದ್ಯಕೀಯ ಶಾಸ್ತ್ರದ ದೇವರು ಮತ್ತು ದೇವತೆಗಳ ವೈದ್ಯರಾಗಿದ್ದಾರೆ.
ಆಶ್ವಯುಜ ಶುಕ್ಲ ಚತುರ್ದಶಿ ಎಂದರೆ ನರಕಚತುರ್ದಶಿ ! (ಅಕ್ಟೋಬರ್ ೨೦)
ಈ ದಿನವನ್ನು ನರಕ ಚತುರ್ದಶಿ ಎಂದೂ ಕರೆಯಲಾಗುತ್ತದೆ. ನರಕದ ಭಯದಿಂದ ಮುಕ್ತರಾಗಲು ಮುಂಜಾನೆ ಎಳ್ಳೆಣ್ಣೆಯ ಅಭ್ಯಂಗ ಸ್ನಾನ ಮಾಡಬೇಕು. ರಾತ್ರಿಯ ಕೊನೆಯ ಪ್ರಹರದಿಂದ ಚಂದ್ರೋದಯದ ವರೆಗಿನ ಕಾಲವು ಶ್ರೇಷ್ಠವಾಗಿದೆ. ಸ್ನಾನ ಮಾಡುವಾಗ ಉತ್ರಾಣಿ ಎಂಬ ವಿಶೇಷ ಸಸ್ಯದಿಂದ ಪ್ರೋಕ್ಷಣೆ, ಸ್ನಾನದ ನಂತರ ಯಮತರ್ಪಣ ಮತ್ತು ಮಧ್ಯಾಹ್ನ ಬ್ರಾಹ್ಮಣ ಭೋಜನ ಮಾಡಬೇಕು. ಪ್ರದೋಷ ಕಾಲದಲ್ಲಿ ಮನೆಯ ಹೊರಗೆ ಎಲ್ಲೆಡೆ ದೀಪಗಳನ್ನು ಹಚ್ಚಬೇಕು. ಶಿವಪೂಜೆ, ಮಹಾಶಿವರಾತ್ರಿ ಪೂಜೆ ಮತ್ತು ನಕ್ತಭೋಜನ (ಹಗಲು ಪೂರ್ತಿ ಊಟ ಮಾಡದೇ ಕೇವಲ ರಾತ್ರಿಯಲ್ಲಿ ಮಾತ್ರ ಊಟ ಮಾಡುವುದು) ಈ ವ್ರತದ ವಿಧಿಯಾಗಿದೆ. ಈ ದಿನ ಮಹಾಲಿಂಗನ ಬಳ್ಳಿಯ ಕಾಯಿಯ ಹಣ್ಣನ್ನು ಸ್ನಾನದ ಮೊದಲು ಕಾಲಿನಿಂದ ಒಡೆಯುತ್ತಾರೆ. ಆ ಹತ್ಯೆಯ ಪಾಪಕ್ಷಾಲನೆಗಾಗಿ ಅಭ್ಯಂಗಸ್ನಾನ ಮಾಡುತ್ತಾರೆ. ಸ್ನಾನದ ನಂತರ ಹೊಸ ಬಟ್ಟೆಗಳನ್ನು ಧರಿಸಿ ಹಿರಿಯರಿಗೆ ನಮಸ್ಕರಿಸುತ್ತಾರೆ. ದೇವರಿಗೆ ನೈವೇದ್ಯವನ್ನು ತೋರಿಸಿ ತಿಂಡಿ-ತಿನಿಸುಗಳನ್ನು ಸೇವಿಸುತ್ತಾರೆ. ಉತ್ತರ ಭಾರತದಲ್ಲಿ ಈ ದಿನ ಹನುಮಾನ ಜಯಂತಿಯನ್ನು ಆಚರಿಸುತ್ತಾರೆ. ತುಲಾ ರಾಶಿಯಲ್ಲಿ ಸೂರ್ಯನು ಪ್ರವೇಶಿಸಿದ ನಂತರ ಚತುರ್ದಶಿ ಮತ್ತು ಅಮಾವಾಸ್ಯೆಯಂದು ಪ್ರದೋಷ ಕಾಲದಲ್ಲಿ ಪುರುಷರು ಕೈಯಲ್ಲಿ ಉರಿಯುವ ದೀವಟಿಗೆ ಹಿಡಿದು ಪಿತೃಗಳಿಗೆ ದಾರಿ ತೋರಿಸಬೇಕು ಎಂದು ಧರ್ಮಶಾಸ್ತ್ರವು ಹೇಳುತ್ತದೆ.
ಆಶ್ವಯುಜ ಅಮಾವಾಸ್ಯೆ (ಅಕ್ಟೋಬರ್ ೨೧)
ಲಕ್ಷ್ಮೀ ಪೂಜೆ : ಈ ದಿನ ಬೆಳಗ್ಗೆ ಮಂಗಳಸ್ನಾನ ಮಾಡಿ ದೇವರಪೂಜೆ, ಮಧ್ಯಾಹ್ನ ಪಾರ್ವಣ ಶ್ರಾದ್ಧ ಮತ್ತು ಬ್ರಾಹ್ಮಣ ಭೋಜನ ಮತ್ತು ಸಾಯಂಕಾಲ ಸುಂದರವಾಗಿ ಅಲಂಕರಿಸಿದ ಮಂಟಪದಲ್ಲಿ ಲಕ್ಷ್ಮೀ, ವಿಷ್ಣು ಇತ್ಯಾದಿ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಈ ದಿನ ವಿಷ್ಣುವು ಲಕ್ಷ್ಮೀಯೊಂದಿಗೆ ಎಲ್ಲಾ ದೇವತೆಗಳನ್ನು ಬಲಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅವರ ಸಂತೋಷಕ್ಕಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಎಲ್ಲಾ ಸುಖೋಪಭೋಗಗಳ ವ್ಯವಸ್ಥೆ ಮಾಡಬೇಕು ಮತ್ತು ಎಲ್ಲೆಡೆ ದೀಪಗಳನ್ನು ಹಚ್ಚಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಲ ಕಮಲ ಅಥವಾ ಸ್ವಸ್ತಿಕವನ್ನು ರಚಿಸಿ ಅದರ ಮೇಲೆ ಲಕ್ಷ್ಮೀಯ ವಿಗ್ರಹವನ್ನು ಸ್ಥಾಪಿಸಬೇಕು. ಅದರ ಪಕ್ಕದಲ್ಲಿ ಕಲಶದ ಮೇಲೆ ಕುಬೇರನ ಪ್ರತಿಮೆ ಇಟ್ಟು ಪೂಜಿಸುತ್ತಾರೆ. ಈ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆ ಬೆರೆಸಿ ತಯಾರಿಸಿದ ಗೋವಿನ ಹಾಲಿನ ಖೋವಾದ ನೈವೇದ್ಯವನ್ನು ತೋರಿಸುತ್ತಾರೆ. ಕೊತ್ತಂಬರಿ ಕಾಳು, ಬೆಲ್ಲ, ಭತ್ತದರಳು, ಬತ್ತಾಸು ಇತ್ಯಾದಿ ಪದಾರ್ಥಗಳನ್ನು ಲಕ್ಷ್ಮೀಗೆ ಅರ್ಪಿಸಿ ಆಪ್ತರೆಷ್ಟರಿಗೆ ಹಂಚುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಮಧ್ಯರಾತ್ರಿಯ ನಂತರ ಮೊರಕ್ಕೆ ಕೋಲಿನಿಂದ ಬಾರಿಸಿ ಸದ್ದು ಮಾಡುತ್ತಾ ಅಲಕ್ಷ್ಮಿಯನ್ನು ಓಡಿಸುತ್ತಾರೆ. ಪುರಾಣಗಳು ಹೇಳುವಂತೆ, ಈ ಅಮಾವಾಸ್ಯೆಯ ರಾತ್ರಿ ಲಕ್ಷ್ಮೀಯು ಎಲ್ಲೆಡೆ ಸಂಚರಿಸುತ್ತಾಳೆ ಮತ್ತು ತನ್ನ ನಿವಾಸಕ್ಕಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಾಳೆ. ಎಲ್ಲಿ ಸ್ವಚ್ಛತೆ, ಶೋಭೆ, ಚಾರಿತ್ರ್ಯ ಮತ್ತು ಗುಣಗಳು ಇರುತ್ತವೆಯೋ ಅಲ್ಲಿ ವಾಸಿಸಲು ಅವಳು ಇಷ್ಟಪಡುತ್ತಾಳೆ. ಈ ದಿನ ಹೊಸ ಪೊರಕೆ, ಕಸಬರಿಗೆಯನ್ನು ತಂದು ಅದನ್ನು ಪೂಜಿಸುತ್ತಾರೆ. ಇದನ್ನು ಅಲಕ್ಷ್ಮೀ ನಿಃಸಾರಣ ಎಂದು ಕರೆಯುತ್ತಾರೆ. ಈ ದಿನ ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯನ್ನು ಪೂಜಿಸುತ್ತಾರೆ. ದೌತಿ (ಮಸಿಕುಡಿಕೆ) ರೂಪಾಯಿ ಮತ್ತು ವಹಿ (ಲೆಕ್ಕದ ಪುಸ್ತಕ) ಇವುಗಳನ್ನು ಅವರ ಪ್ರತೀಕಗಳೆಂದು ನಂಬುತ್ತಾರೆ. ಈ ದಿನ ವ್ಯಾಪಾರಿಗಳು ವಹಿ ಮತ್ತು ಲಕ್ಷ್ಮೀಯ ಕಾಗದವನ್ನು ತರುತ್ತಾರೆ.
ಸದ್ಯದ ಮುಖ್ಯ ದೀಪಾವಳಿಯ ಮೊದಲ ಎರಡು ದಿನಗಳು ಆಶ್ವಯುಜ ಮಾಸದಲ್ಲಿ, ನಂತರದ ಎರಡು ಕಾರ್ತಿಕ ಮಾಸದಲ್ಲಿ ಬರುತ್ತವೆ; ಆದರೆ ಹಿಂದೆ ದೀಪಾವಳಿ ಧನತ್ರಯೋದಶಿ, ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆ ಎಂದು ಆಚರಿಸಲಾಗುತ್ತಿತ್ತು. ಈ ಮೂರು ದಿನಗಳನ್ನು ಮಾತ್ರ ದೀಪಾವಳಿ ಎಂದು ಪರಿಗಣಿಸ ಲಾಗುತ್ತಿತ್ತು. ಹೀಗೆ ಆಶ್ವಯುಜ ಮಾಸವು ಅತಿ ಹೆಚ್ಚು ವ್ರತ ಮತ್ತು ಹಬ್ಬಗಳನ್ನು ಹೊಂದಿದೆ. ಸುಗ್ಗಿಯೊಂದಿಗೆ ಬರುವ ಸಮೃದ್ಧಿಗೆ ಕಾರಣರಾದ ಪ್ರಾಣಿಮಾತ್ರರಿಂದ ಹಿಡಿದು ದೇವರುಗಳ ವರೆಗೆ ಎಲ್ಲರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಲು ಕಲಿಸುವ ತಿಂಗಳು ಇದು.
– ಡಾ. ಜ್ಯೋತ್ಸ್ನಾ ಖರೆ
(ಆಧಾರ : ಮಾಸಿಕ : ‘ಪ್ರಸಾದ’, ಅಕ್ಟೋಬರ್ ೨೦೨೪)

ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !