ಪೂರ್ವಜರಿಗೆ ಮುಕ್ತಿ ನೀಡುವ ಗಯಾ ನಗರ !

‘ಭಾರತದಲ್ಲಿ ಶ್ರಾದ್ಧ, ಪಿಂಡದಾನ ಮತ್ತು ಇತರ ಮೃತ್ಯೋತ್ತರ ವಿಧಿಗಳನ್ನು ನೆರವೇರಿಸಲು ಕೆಲವು ಪ್ರಮುಖ ಸ್ಥಳಗಳಿವೆ. ಗಂಗಾ ಘಾಟ್‌ಗಳು, ಕಾಶಿ ಸಹಿತ ಜ್ಯೋತಿರ್ಲಿಂಗಗಳ ಸ್ಥಳಗಳು, ಹರಿದ್ವಾರ (ಉತ್ತರಾಖಂಡ), ಗಯಾ (ಬಿಹಾರ) ಇತ್ಯಾದಿ ಸ್ಥಳಗಳು. ಅವುಗಳಲ್ಲಿ ಗಯಾ ಕ್ಷೇತ್ರವು ಬಹಳ ಮಹತ್ವ ಪಡೆದಿದೆ. ಬಿಹಾರ ರಾಜ್ಯದಲ್ಲಿರುವ ಈ ಸ್ಥಳವು ಮುಕ್ತಿ ನೀಡುವ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಹಿಂದೂಗಳಿಗೆ ಪವಿತ್ರವಾಗಿರುವ ಈ ಸ್ಥಳದ ಬಗ್ಗೆ ಪಿತೃಪಕ್ಷದ ಸಂದರ್ಭದಲ್ಲಿ ತಿಳಿದುಕೊಳ್ಳೋಣ.’

ಶ್ರೀ ವಿಷ್ಣುಪಾದ ದೇವಾಲಯ

ಶ್ರೀವಿಷ್ಣುವು ಗಯಾಸುರನ ದೇಹದ ಮೇಲೆ, ಅಂದರೆ ಭೂಮಿಯ ಮೇಲೆ ತನ್ನ ಪಾದವನ್ನು ಇರಿಸಿದ ಸ್ಥಳದಲ್ಲಿ ಆತನ ಪಾದಗಳು ಮೂಡಿವೆ. ಈ ಪಾದಗಳನ್ನು ‘ವಿಷ್ಣುಪಾದ’ ಎನ್ನುತ್ತಾರೆ. ಶ್ರಾದ್ಧ ವಿಧಿಗಳು ಹೆಚ್ಚಾಗಿ ೧೨ ಜ್ಯೋತಿರ್ಲಿಂಗಗಳಲ್ಲಿ ನಡೆಯುತ್ತವೆ, ಅಲ್ಲಿ ಸ್ವತಃ ಮಹಾದೇವನೇ ಪಿಂಡ ಸ್ವೀಕರಿಸುತ್ತಾನೆ, ಆದರೆ ಗಯಾದಲ್ಲಿ ಶ್ರೀವಿಷ್ಣುವು ಪಿತೃದೇವತೆಯ ರೂಪದಲ್ಲಿ ನೆಲೆಸಿರುವುದರಿಂದ ಅವನು ಪಿಂಡವನ್ನು ಸ್ವೀಕರಿಸುತ್ತಾನೆ.

ಶ್ರೀ ವಿಷ್ಣುಪಾದ ದೇವಾಲಯದ ನೆಲದ ಮೇಲೆ ಮೂಡಿರುವ ವಿಷ್ಣುಪಾದ (ಶ್ರೀವಿಷ್ಣುವಿನ ಪಾದಗಳು)

ಗಯಾದ ಇತಿಹಾಸ

ಗಯಾ ಮೊಘಲರ ಆಳ್ವಿಕೆಯಲ್ಲಿತ್ತು. ನಂತರ, ೧೭೨೭ ರಲ್ಲಿ ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್‌ ಅವರು ಇಲ್ಲಿನ ಶ್ರೀ ವಿಷ್ಣುಪಾದ ದೇವಾಲಯವನ್ನು ಪುನರ್ನಿರ್ಮಿಸಿದರು. ಅನಂತರ, ಭಾರತದ ಮೇಲೆ ಬ್ರಿಟಿಷರು ಆಳ್ವಿಕೆ ನಡೆಸಿದಾಗ ಇದು ಅವರ ನಿಯಂತ್ರಣದಲ್ಲಿತ್ತು.

ಗಯಾ ಕ್ಷೇತ್ರದ ಉಗಮ

ಶ್ರೀ. ಯಜ್ಞೇಶ್ ಸಾವಂತ

‘ಸಾವಿರಾರು ವರ್ಷಗಳ ಹಿಂದೆ ಗಯಾಸುರನೆಂಬ ಒಬ್ಬ ವಿಷ್ಣುಭಕ್ತ ಅಸುರನಿದ್ದನು. ಅವನು ತೀವ್ರ ತಪಸ್ಸು ಮಾಡಿ ಬ್ರಹ್ಮದೇವನನ್ನು ಸಂತುಷ್ಟಗೊಳಿಸಿ, ತನ್ನ ದೇಹವು ದೇವತೆಗಳಂತೆ ಪವಿತ್ರವಾಗುವ ವರವನ್ನು ಕೇಳಿಕೊಂಡನು. ಅಲ್ಲದೆ, ತನ್ನನ್ನು ನೋಡಿದ ಕೂಡಲೇ ಜನರು ಪಾಪಗಳಿಂದ ಮುಕ್ತರಾಗಬೇಕೆಂದು ಕೇಳಿದನು. ಬ್ರಹ್ಮದೇವ ವರ ನೀಡಿದ ನಂತರ, ಜನರು ಪಾಪಗಳನ್ನು ಮಾಡಿ ಗಯಾಸುರನನ್ನು ನೋಡಿ ಪಾಪಮುಕ್ತರಾಗುತ್ತಿದ್ದರು. ಇದರಿಂದ ಪಾಪ ಹೆಚ್ಚಾಗುತ್ತಿತ್ತು ಮತ್ತು ದೇವತೆಗಳಿಗೂ ತೊಂದರೆಯಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದೇವತೆಗಳು ಒಂದು ಉಪಾಯ ಮಾಡಿದರು. ಅವರು ಗಯಾಸುರನ ಬಳಿ ಯಜ್ಞಕ್ಕಾಗಿ ಪವಿತ್ರ ಸ್ಥಳವನ್ನು ಕೇಳಿದರು. ಆಗ ಗಯಾಸುರನು ತನ್ನ ಬೆನ್ನಿನ ಮೇಲೆ ಯಜ್ಞ ಮಾಡಲು ಅನುಮತಿ ನೀಡಿದನು. ಯಜ್ಞಕ್ಕಾಗಿ ಸ್ಥಳ ಒದಗಿಸಲು ಅವನು ಭೂಮಿಯ ಮೇಲೆ ಅಡ್ಡ ಮಲಗಿದನು. ಆಗ ಅವನ ದೇಹ ೫ ಕೋಸು ದೂರದ ವರೆಗೆ ಹರಡಿತು ಮತ್ತು ದೇವತೆಗಳು ಯಜ್ಞವನ್ನು ಆರಂಭಿಸಿದರು. ದೇವತೆಗಳು ಸಂತುಷ್ಟರಾಗಿ ಗಯಾಸುರನಿಗೆ ಮುಂದಿನ ವರ ನೀಡಿದರು; ಯಾರು ಈ ಸ್ಥಳದಲ್ಲಿ ತಮ್ಮ ಪೂರ್ವಜರಿಗಾಗಿ ಶ್ರಾದ್ಧ ಮತ್ತು ತರ್ಪಣ ವಿಧಿಗಳನ್ನು ನೆರವೇರಿಸುತ್ತಾರೋ, ಅವರ ಆತ್ಮಕ್ಕೆ ಮೋಕ್ಷ ಸಿಗುತ್ತದೆ. ಯಜ್ಞ ಮುಗಿದ ನಂತರ, ಭಗವಾನ್‌ ಶ್ರೀವಿಷ್ಣುವು ಅವನ ಬೆನ್ನಿನ ಮೇಲೆ ಒಂದು ಶಿಲೆಯನ್ನು ಇಟ್ಟು ತಾನು ಸ್ವತಃ ಅಲ್ಲಿ ನಿಂತನು. ೫ ಕೋಸು ದೂರ ಹರಡಿದ್ದ ಈ ಕ್ಷೇತ್ರವನ್ನು ‘ಗಯಾ ಕ್ಷೇತ್ರ’ ಎಂದು ಕರೆಯಲಾಗುತ್ತದೆ.

ಗಯಾ ಕ್ಷೇತ್ರದ ಮಹತ್ವ

ವಾಯು ಪುರಾಣ, ಗರುಡ ಪುರಾಣ ಮತ್ತು ವಿಷ್ಣು ಪುರಾಣಗಳಲ್ಲಿ ಗಯಾ ತೀರ್ಥದ ಮಹತ್ವವನ್ನು ವಿವರಿಸಲಾಗಿದೆ. ಈ ತೀರ್ಥಕ್ಷೇತ್ರವನ್ನು ‘ಮೋಕ್ಷಸ್ಥಾನ’ ಅಥವಾ ‘ಮೋಕ್ಷಭೂಮಿ’ ಎಂದೂ ಕರೆಯುತ್ತಾರೆ. ಇಲ್ಲಿ ಪೂರ್ವಜರಿಗಾಗಿ ಪಿಂಡದಾನ ಮತ್ತು ಶ್ರಾದ್ಧ ಮಾಡುವುದರಿಂದ ಅವರಿಗೆ ಉತ್ತಮ ಗತಿ ಸಿಗುತ್ತದೆ. ಇಲ್ಲಿ ಪಿತೃಪಕ್ಷದ ಅವಧಿಯಲ್ಲಿ ವರ್ಷಕ್ಕೊಮ್ಮೆ ಮಾತ್ರ ಜಾತ್ರೆ ನಡೆಯುತ್ತದೆ, ಇದನ್ನು ‘ಪಿತೃಪಕ್ಷ ಮೇಳ’ ಎಂದು ಕರೆಯುತ್ತಾರೆ.

ಫಲ್ಗು ನದಿ

ಇಲ್ಲಿ ಫಲ್ಗು ನದಿಯ ದಡದಲ್ಲಿ ಪಿಂಡದಾನವನ್ನು ಮಾಡಲಾಗುತ್ತದೆ. ಈ ನದಿಗೆ ಶಾಪವಿದೆ. ಸೀತಾ ಮಾತೆಯ ಶಾಪದಿಂದಾಗಿ ನದಿಯು ಮೇಲ್ನೋಟಕ್ಕೆ ಜಲರಹಿತವಾಗಿ ಕಂಡರೂ, ಅದು ಭೂಗರ್ಭದಲ್ಲಿ ಹರಿಯುತ್ತಿದೆ ಎಂದು ನಂಬಲಾಗಿದೆ. ಈ ನದಿಯ ನೀರು ಮುಂದೆ ಗಂಗಾ ನದಿಯನ್ನು ಸೇರುತ್ತದೆ. ಈ ನದಿಯ ದಡಕ್ಕೆ ಮೊದಲು ಬ್ರಹ್ಮದೇವನು ಬಂದಾಗ, ಅವನು ಇದನ್ನು ಅತ್ಯುತ್ತಮ ತೀರ್ಥವೆಂದು ಪರಿಗಣಿಸಿದ್ದನು. ಆ ನಂತರವೇ ಗಯಾದಲ್ಲಿ ಶ್ರಾದ್ಧ ಮತ್ತು ಪಿಂಡದಾನದ ಸಂಪ್ರದಾಯ ಆರಂಭವಾಯಿತು. ಗಯಾದಲ್ಲಿ ಒಮ್ಮೆ ಶ್ರಾದ್ಧ ಮಾಡಿದರೆ ಮತ್ತೆ ಮಾಡುವ ಅಗತ್ಯವಿರುವುದಿಲ್ಲ.

ಒಮ್ಮೆ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾ ಮಾತೆ ಫಲ್ಗು ನದಿಯ ದಡದಲ್ಲಿ ರಾಜ ದಶರಥನ ಪಿಂಡದಾನಕ್ಕಾಗಿ ಬರುತ್ತಾರೆ. ಶ್ರೀರಾಮ ಮತ್ತು ಲಕ್ಷ್ಮಣರು ಅಗತ್ಯ ಸಾಮಗ್ರಿಗಳನ್ನು ತರಲು ನಗರಕ್ಕೆ ಹೋಗುತ್ತಾರೆ, ಆದರೆ ಸೀತಾ ಮಾತೆ ಅಲ್ಲೇ ಇರುತ್ತಾಳೆ. ಬಹಳ ಹೊತ್ತಾದರೂ ಶ್ರೀರಾಮ ಮತ್ತು ಲಕ್ಷ್ಮಣರು ಬರುವುದಿಲ್ಲ. ರಾಜ ದಶರಥನ ಆತ್ಮ ಪಿಂಡದಾನಕ್ಕಾಗಿ ಕಾಯುತ್ತಿರುವುದರಿಂದ, ಸೀತಾ ಮಾತೆಯೇ ರಾಜ ದಶರಥನಿಗಾಗಿ ಪಿಂಡದಾನ ಮಾಡುತ್ತಾಳೆ. ಈ ವೇಳೆ ಅವಳು ಫಲ್ಗು ನದಿ, ಹಸು, ಆಲದ ಮರ, ಕೇದಿಗೆ ಮರ ಮತ್ತು ಬ್ರಾಹ್ಮಣರನ್ನು ಸಾಕ್ಷಿಯಾಗಿಟ್ಟು ಪಿಂಡದಾನ ಮಾಡುತ್ತಾಳೆ. ಶ್ರೀರಾಮ ಮತ್ತು ಲಕ್ಷ್ಮಣರು ಬಂದಾಗ, ಸೀತಾ ಮಾತೆ ತಾನು ದಶರಥನ ಪಿಂಡದಾನ ಮಾಡಿದ್ದಾಗಿ ಹೇಳಿದರೂ ಅವರು ಅದನ್ನು ನಂಬುವುದಿಲ್ಲ. ಆಗ ಅವರು ಸಾಕ್ಷಿ ಕೇಳುತ್ತಾರೆ. ಆಗ ಸೀತಾ ಮಾತೆ ಸಾಕ್ಷಿಗಳನ್ನು ಕೇಳಿದಾಗ, ಆಲದ ಮರ ಹೊರತುಪಡಿಸಿ ಉಳಿದ ಯಾರೂ ಏನನ್ನೂ ಹೇಳುವುದಿಲ್ಲ. ಇದರಿಂದ ಸೀತಾ ಮಾತೆ ಫಲ್ಗು ನದಿ, ಹಸು, ಕೇದಿಗೆ ಮರ ಮತ್ತು ಬ್ರಾಹ್ಮಣರಿಗೆ ಶಾಪ ಕೊಡುತ್ತಾಳೆ, ಆದರೆ ಆಲದ ಮರಕ್ಕೆ ಆಶೀರ್ವಾದ ನೀಡುತ್ತಾಳೆ. ಸೀತಾ ಮಾತೆಯ ಶಾಪದಿಂದಾಗಿ ಫಲ್ಗು ನದಿ ಕೇವಲ ಹೆಸರಿಗೆ ಮಾತ್ರ ನದಿಯಾಗಿದ್ದು, ಅದರಲ್ಲಿ ನೀರು ಇರುವುದಿಲ್ಲ. – ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ. (೧೯.೯.೨೦೨೪)


ಗಯಾದಲ್ಲಿ ಶ್ರೀರಾಮ ಮತ್ತು ಸೀತಾ ಮಾತೆಯರಿಂದ ಪಿಂಡದಾನ

ಗಯಾದಲ್ಲಿ ಸ್ವತಃ ಶ್ರೀರಾಮನು ರಾಜ ದಶರಥನ ಪಿಂಡದಾನವನ್ನು ಮಾಡಿದ್ದನು ಮತ್ತು ಅವರಿಗೆ ಮುಕ್ತಿ ದೊರೆತಿತ್ತು. ಸೀತಾಮಾತೆ ಕೂಡ ಮರಳಿನ ಪಿಂಡಗಳನ್ನು ಮಾಡಿ ರಾಜ ದಶರಥನ ಪಿಂಡದಾನ ಮಾಡಿದ್ದಳು. ಆದ್ದರಿಂದ ಇಲ್ಲಿ ಮರಳಿನ ಪಿಂಡಗಳನ್ನು ಮಾಡಲಾಗುತ್ತದೆ. ಹಿಂದೆ ಗಯಾದಲ್ಲಿ ಪಿಂಡದಾನಕ್ಕಾಗಿ ೩೬೦ ವೇದಿಕೆಗಳಿದ್ದವು, ಅವುಗಳಲ್ಲಿ ಈಗ ಕೇವಲ ೪೮ ಉಳಿದಿವೆ. ಭಾರತಾದ್ಯಂತ ಶ್ರಾದ್ಧ ವಿಧಿಗಳನ್ನು ನೆರವೇರಿಸಲು ೫೫ ಸ್ಥಳಗಳು ಪ್ರಮುಖವೆಂದು ಪರಿಗಣಿಸಲಾಗಿದ್ದು, ಅವುಗಳಲ್ಲಿ ಗಯಾ ಅತ್ಯಂತ ಪ್ರಮುಖ ಸ್ಥಳವಾಗಿದೆ. ಮಹಾಭಾರತ ಯುದ್ಧದಲ್ಲಿ ಮರಣ ಹೊಂದಿದವರಿಗಾಗಿ ಯುಧಿಷ್ಠಿರನು ಗಯಾದಲ್ಲಿ ಶ್ರಾದ್ಧವನ್ನು ಮಾಡಿ ಅವರಿಗೂ ಮುಕ್ತಿ ದೊರಕಿಸಿದ್ದನು.