ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!

  • ಎನ್‌ಸಿಇಆರ್‌ಟಿ (NCERT) ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದಲ್ಲಿ ಬದಲಾವಣೆ

  • ವರ್ಣವ್ಯವಸ್ಥೆಯ ಕುರಿತೂ ಉಲ್ಲೇಖ

(ಎನ್‌ಸಿಇಆರ್‌ಟಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ)

ನವದೆಹಲಿ – ಎನ್‌ಸಿಇಆರ್‌ಟಿಯ 9ನೇ ತರಗತಿಯ ಸಾಮಾಜಿಕ ವಿಜ್ಞಾನದ ಹೊಸ ಪಠ್ಯಪುಸ್ತಕದಲ್ಲಿ ‘ಮನುಸ್ಮೃತಿ’ಯ ಒಂದು ಶ್ಲೋಕವನ್ನು ಉಲ್ಲೇಖಿಸಲಾಗಿದೆ. ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವಾನ್ವಿತ ಸ್ಥಾನವಿತ್ತು; ಆದರೆ ಕಾಲಾನಂತರದಲ್ಲಿ ಅವರ ಸಾಮಾಜಿಕ ಸ್ಥಿತಿಯಲ್ಲಿ ವಿವಿಧ ಬದಲಾವಣೆಗಳಾದವು ಮತ್ತು ಕೆಲವು ಕಾಲಘಟ್ಟಗಳಲ್ಲಿ ಕುಸಿತವೂ ಕಂಡುಬಂದಿತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಪುಸ್ತಕದ ಯಾವ ಅಧ್ಯಾಯದಲ್ಲಿ ಮನುಸ್ಮೃತಿಯ ಉಲ್ಲೇಖವಿದೆ?

ಪಠ್ಯಪುಸ್ತಕದ ‘ಕ್ರಿ.ಶ. 1000 ರವರೆಗಿನ ರಾಜ್ಯ ಮತ್ತು ಸಮಾಜ’ ಎಂಬ ಅಧ್ಯಾಯದಲ್ಲಿ, ವೈದಿಕ ಕಾಲವು ಮಹಿಳೆಯರು ಸಮಾಜದಲ್ಲಿ ಉನ್ನತ ಮತ್ತು ಗೌರವಾನ್ವಿತ ಸ್ಥಾನ ಹೊಂದಿದ್ದ ಕಾಲ ಎಂದು ವರ್ಣಿಸಲಾಗಿದೆ.

ಮಹಿಳಾ ಋಷಿಗಳ ಉಲ್ಲೇಖ ಕೂಡ ಇದೆ!

ಈ ಅಧ್ಯಾಯದಲ್ಲಿ, ಮಹಿಳೆಯರು ಪಾಂಡಿತ್ಯಪೂರ್ಣ ಶಿಕ್ಷಣದಲ್ಲಿ ಭಾಗವಹಿಸುತ್ತಿದ್ದರು. ಕೆಲವು ವಿಶೇಷ ಸಂದರ್ಭಗಳಲ್ಲಿ ಮಹಿಳೆಯರು ಪುರುಷರೊಂದಿಗೆ ಸಮಾನವಾಗಿ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುತ್ತಿದ್ದರು ಮತ್ತು ಸಾರ್ವಜನಿಕ ಸಮಾರಂಭಗಳಲ್ಲೂ ಭಾಗವಹಿಸುತ್ತಿದ್ದರು. ಋಗ್ವೇದದ ಅನೇಕ ಋಚೆಗಳ (ಶ್ಲೋಕಗಳ) ಶ್ರೇಯಸ್ಸನ್ನು ಸಾಂಪ್ರದಾಯಿಕವಾಗಿ ಅಪಾಲಾ, ವಿಶ್ವವಾರಾ, ಘೋಷಾ ಮತ್ತು ಲೋಪಾಮುದ್ರಾ ಅವರಂತಹ ವಿದುಷಿಯರಿಗೆ ನೀಡಲಾಗುತ್ತದೆ.

ಅಲ್ಲದೇ ಮನುಸ್ಮೃತಿ 3.56 ರ ಉಲ್ಲೇಖ ನೀಡಲಾಗಿದ್ದು, ಅದರ ಪ್ರಕಾರ ‘ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ; ಎಲ್ಲಿ ಅವರಿಗೆ ಗೌರವ ಸಿಗುವುದಿಲ್ಲವೋ, ಅಲ್ಲಿ ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳು ನಿಷ್ಫಲವಾಗುತ್ತವೆ.’ ಎಂದು ಬರೆಯಲಾಗಿದೆ.

ಪಠ್ಯಪುಸ್ತಕದಲ್ಲಿನ ಇತರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

1. ಮನುಸ್ಮೃತಿಯು ಒಂದು ಪ್ರಾಚೀನ ಸಂಸ್ಕೃತ ಗ್ರಂಥವಾಗಿದ್ದು, ಅದರಲ್ಲಿ ಸಮಾಜ ಮತ್ತು ಕಾನೂನಿಗೆ ಸಂಬಂಧಿಸಿದ ನಿಯಮಗಳನ್ನು ವಿವರಿಸಲಾಗಿದೆ. ಜಾತಿ ಮತ್ತು ಮಹಿಳೆಯರ ಸ್ಥಾನದ ಬಗ್ಗೆ ಈ ಗ್ರಂಥ ದೀರ್ಘಕಾಲದಿಂದ ಚರ್ಚೆ ಮತ್ತು ವಿವಾದಗಳಿಗೆ ಒಳಗಾಗಿದೆ.

2. ಆದಾಗ್ಯೂ, ಕಾಲಾನಂತರದಲ್ಲಿ ಮಹಿಳೆಯರ ಸ್ಥಾನಮಾನವು ಸ್ಥಿರವಾಗಿರಲಿಲ್ಲ ಎಂಬುದನ್ನು ಸಹ ಗಮನಿಸಬೇಕು. ವಿವಿಧ ಯುಗಗಳ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳಿಂದಾಗಿ ಮಹಿಳೆಯರ ಸ್ಥಿತಿಯಲ್ಲಿ ಕೆಲವೊಮ್ಮೆ ಸುಧಾರಣೆ ಕಂಡುಬಂದರೆ, ಕೆಲವೊಮ್ಮೆ ಕುಸಿತ ಉಂಟಾಯಿತು. ಆದರೂ ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಮನೆಗೆಲಸ, ಕೃಷಿ, ಹಸ್ತಕಲೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಅವರು ನಿರಂತರವಾಗಿ ಕೊಡುಗೆ ನೀಡಿದ್ದಾರೆ.

3. ಗುಪ್ತ-ವಾಕಾಟಕ ಕಾಲದ ಸಾಹಿತ್ಯದಲ್ಲಿ ಸುಶಿಕ್ಷಿತ ಮತ್ತು ಕಲೆಗಳಲ್ಲಿ ನಿಪುಣರಾಗಿದ್ದ ಮಹಿಳೆಯರ ವರ್ಣನೆ ಕಂಡುಬರುತ್ತದೆ. ಅನೇಕ ರಾಣಿಯರು ಆಡಳಿತ ಮತ್ತು ಧಾರ್ಮಿಕ ಕಾರ್ಯಗಳ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ.

4. ಈ ಸಂದರ್ಭದಲ್ಲಿ ವಾಕಾಟಕ ರಾಜವಂಶದ ಆಡಳಿತಗಾರ್ತಿ ಪ್ರಭಾವತಿ ಗುಪ್ತ ಅವರ ಉದಾಹರಣೆಯನ್ನು ನೀಡಲಾಗಿದೆ. ಅಲ್ಲದೇ, ಸಂಗಮ್ ಸಾಹಿತ್ಯದಲ್ಲಿ ಮಹಿಳೆಯರನ್ನು ಸಮಾಜ ಮತ್ತು ಆರ್ಥಿಕತೆಯಲ್ಲಿ ಸಕ್ರಿಯವಾಗಿ ಭಾಗವಹಿಸುವವರೆಂದು ಚಿತ್ರಿಸಲಾಗಿದೆ.

ಸಾಮಾಜಿಕ ಪಾತ್ರಗಳ ಆಧಾರದ ಮೇಲೆ ನಿರ್ಮಿಸಲಾದ ವರ್ಣವ್ಯವಸ್ಥೆ!

ಆರಂಭಿಕ ವೈದಿಕ ಸಮಾಜದಲ್ಲಿ ವ್ಯಕ್ತಿಯ ಸಾಮಾಜಿಕ ಗುರುತು ಕೇವಲ ಜನ್ಮದ ಮೇಲೆ ಮಾತ್ರ ಅವಲಂಬಿತವಾಗಿರಲಿಲ್ಲ; ಇತರ ಅಂಶಗಳೂ ಪ್ರಮುಖವಾಗಿದ್ದವು ಎಂಬುದನ್ನು ಈ ಅಧ್ಯಾಯದಲ್ಲಿ ಸ್ಪಷ್ಟಪಡಿಸಲಾಗಿದೆ. ಆರಂಭಿಕ ವೈದಿಕ ಗ್ರಂಥಗಳಲ್ಲಿ ಜನ್ಮ ಆಧಾರಿತ ನಿರ್ದಿಷ್ಟ ಸಾಮಾಜಿಕ ಸ್ಥಾನಮಾನದ ಉಲ್ಲೇಖ ಕಂಡುಬರುವುದಿಲ್ಲ. ಬದಲಾಗಿ, ಸಾಮಾಜಿಕ ಗುರುತು ಎಂಬುದು ಜನಾಂಗೀಯ ಗುಂಪು, ಉಪ-ಗುಂಪು, ಪ್ರದೇಶ, ಹಳ್ಳಿ, ಭಾಷೆ, ವೃತ್ತಿ ಮತ್ತು ವಿಶೇಷವಾಗಿ ಸಾಂಸ್ಕೃತಿಕ ಸಂಬಂಧಗಳಂತಹ ಅಂಶಗಳ ಸಂಕೀರ್ಣ ಪರಸ್ಪರ ಸಂಬಂಧದಿಂದ ರೂಪುಗೊಳ್ಳುತ್ತಿತ್ತು ಎಂದು ನಂಬಲಾಗಿದೆ. ಋಗ್ವೇದದಲ್ಲಿನ ಪುರಾವೆಗಳು ಒಂದೇ ಕುಟುಂಬದಲ್ಲೂ ವೃತ್ತಿಪರ ವೈವಿಧ್ಯತೆ ಇರುವುದನ್ನು ತೋರಿಸುತ್ತವೆ ಮತ್ತು ಒಂದು ಸೂಕ್ತದ ಉಲ್ಲೇಖವನ್ನು ನೀಡಲಾಗಿದ್ದು, ಅದರಲ್ಲಿ ಹೀಗೆ ಹೇಳಲಾಗಿದೆ:
‘ನಾನು ಕವಿ; ನನ್ನ ತಂದೆ ವೈದ್ಯರು; ನನ್ನ ತಾಯಿ ಧಾನ್ಯ ಬೀಸುವ ಕೆಲಸ ಮಾಡುತ್ತಾರೆ.’

ಮೌಲ್ಯವ್ಯವಸ್ಥೆಯ ಆಧಾರದಡಿ ನಿರ್ಮಾಣವಾದ ವರ್ಣ!

ಅಧ್ಯಾಯದಲ್ಲಿ ಮುಂದೆ, ಕಾಲಾನಂತರದಲ್ಲಿ ಸಮಾಜದಲ್ಲಿ ನಾಲ್ಕು ವರ್ಣಗಳ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ) ನಿರ್ದಿಷ್ಟ ಪಾತ್ರಗಳು ಅಭಿವೃದ್ಧಿಗೊಂಡವು. ಆದಾಗ್ಯೂ, ಆರಂಭಿಕ ದಿನಗಳಲ್ಲಿ ಈ ವರ್ಣಗಳನ್ನು ಕಠಿಣ ಸಾಮಾಜಿಕ ಗುಂಪುಗಳಾಗಿ ನೋಡುತ್ತಿರಲಿಲ್ಲ, ಜನರ ಕೆಲಸ ಮತ್ತು ಜವಾಬ್ದಾರಿಗಳ ಆಧಾರದ ಮೇಲೆ ಅವರ ಗುರುತನ್ನು ನಿರ್ಧರಿಸಲಾಗುತ್ತಿತ್ತು.

ಇನ್ನೊಂದು ಮಾತುಗಳಲ್ಲಿ ಹೇಳುವುದಾದರೆ, ವರ್ಣವ್ಯವಸ್ಥೆಯ ಆರಂಭಿಕ ಉದ್ದೇಶ ಜನರನ್ನು ನಿರ್ದಿಷ್ಟ ವರ್ಗಗಳಾಗಿ ಕಠಿಣವಾಗಿ ವಿಭಜಿಸುವುದಾಗಿರದೆ, ಸಮಾಜದಲ್ಲಿನ ಕೆಲಸಗಳ ವಿಭಜನೆಯಾಗಿತ್ತು. ಈ ರೀತಿಯಾಗಿ, ವರ್ಣ ಎಂಬ ಪರಿಕಲ್ಪನೆಯು ಜ್ಞಾನಕ್ಕೆ ಅತ್ಯುನ್ನತ ಸ್ಥಾನ ನೀಡುವ ಮೌಲ್ಯವ್ಯವಸ್ಥೆಯ ಮೇಲೆ ಆಧಾರಿತವಾಗಿತ್ತು ಮತ್ತು ಅದರ ನಂತರ ರಾಜಕೀಯ ಅಧಿಕಾರ ಹಾಗೂ ಸಂಪತ್ತಿಗೆ ಸ್ಥಾನವಿತ್ತು. ‘ಸುತ್ತ ನಿಪಾತ’ ಎಂಬ ಬೌದ್ಧ ಗ್ರಂಥದ ಉಲ್ಲೇಖ ಮಾಡಲಾಗಿದ್ದು, ಸಾಮಾಜಿಕ ಪ್ರತಿಷ್ಠೆ ವ್ಯಕ್ತಿಯ ಜನ್ಮದ ಮೇಲಲ್ಲ, ವ್ಯಕ್ತಿಯ ಕರ್ಮದ (ಕೆಲಸದ) ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಈ ಅಧ್ಯಾಯದಲ್ಲಿ ಒತ್ತಿಹೇಳಲಾಗಿದೆ.

ಸಂಪಾದಕೀಯ ನಿಲುವು

ಭಾರತದ ಇತಿಹಾಸವನ್ನು ಹಿಂದೂ ಪದ್ಧತಿಯಂತೆ, ಅಂದರೆ ಅದು ಹೇಗೆ ನಡೆದಿತ್ತೋ ಹಾಗೆಯೇ ಹೇಳಬೇಕು. ಇದರಿಂದ ಭಾರತೀಯರಲ್ಲಿ ಅಭಿಮಾನ ಜಾಗೃತವಾಗುತ್ತದೆ. ಶಿಕ್ಷಣ ಸಚಿವಾಲಯದ ಈ ಕ್ರಮ ಅಭಿನಂದನೀಯವಾಗಿದೆ!