ಸಂವಿಧಾನ ಮತ್ತು ಮನುಸ್ಮೃತಿ ಇವುಗಳ ನಡುವಿನ ನಿರರ್ಥಕ ವಾದ-ವಿವಾದ !

೧. ಮನುಸ್ಮೃತಿಯ ಬಗ್ಗೆ ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ಸಂಸದ ರಾಹುಲ ಗಾಂಧಿ !

”ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಶ್ರೀ. ದತ್ತಾತ್ರೇಯ ಹೊಸಬಾಳೆ ಇವರ ಭಾಷಣದ ಆಯ್ದ ಭಾಗವೊಂದರ ಬಗ್ಗೆ ವಿವಾದ ಸೃಷ್ಟಿಯಾಗಿರುವ ರೀತಿ ರಾಜಕೀಯ ಪ್ರೇರಿತವಾಗಿದೆ. ೧೯೭೬ ರಲ್ಲಿ, ತುರ್ತು ಪರಿಸ್ಥಿತಿಯ ಸಮಯದಲ್ಲಿ, ಕಾಂಗ್ರೆಸ್‌ ನೇತಾರ ಮತ್ತು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇವರು ಸಂವಿಧಾನದ ಪೀಠಿಕೆಯಲ್ಲಿ ‘ಸೆಕ್ಯುಲರ್’ (ಜಾತ್ಯತೀತ) ಮತ್ತು ‘ಸೊಶಾಲಿಸ್ಟ್‌’ (ಸಮಾಜವಾದ) ಈ ಪದಗಳನ್ನು ಸೇರಿಸುವ ಮೂಲಕ ಭಾರತದ ಸಂವಿಧಾನಕ್ಕೆ ೪೨ ನೇ ತಿದ್ದುಪಡಿಯನ್ನು ಪರಿಚಯಿಸಿದರು. ಸಂವಿಧಾನದ ಪೀಠಿಕೆಯಲ್ಲಿ ಈ ಎರಡು ಪದಗಳನ್ನು ಸೇರಿಸಿರುವ ಪರಿಸ್ಥಿತಿಯೇ ವಿವಾದಾತ್ಮಕವಾಗಿದೆ. ಸಂವಿಧಾನದ ನಿಬಂಧನೆಗಳ ಪ್ರಕಾರ ಈ ಪದಗಳನ್ನು ಸೇರಿಸುವುದು ಸ್ವತಃ ಅಸಂವಿಧಾನಿಕವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು; ಏಕೆಂದರೆ ಈ ೨ ಪದಗಳನ್ನು ಸೇರಿಸಿದ ಸಮಯದಲ್ಲಿ, ವಿರೋಧ ಪಕ್ಷದ ಹೆಚ್ಚಿನ ನಾಯಕರು ಜೈಲಿನಲ್ಲಿದ್ದರು ಮತ್ತು ಸಂಸತ್ತಿನಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸಂಸದರು ಮಾತ್ರ ಇರುತ್ತಿದ್ದರು. ೧೯೭೭ ರಲ್ಲಿ ಕೇಂದ್ರದಲ್ಲಿ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಾಗ, ಅದೇ ಸಮಯದಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಈ ಪದಗಳನ್ನು ಹೊರತೆಗೆದಿದ್ದರೆ ಬಹಳ ಚೆನ್ನಾಗಿರುತ್ತಿತ್ತು; ಆದರೆ ಅದು ಹಾಗೆ ಆಗಲಿಲ್ಲ. ಆದ್ದರಿಂದ ಇಂದಿಗೂ, ಈ ಪದಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಿದ ೫೦ ವರ್ಷಗಳ ನಂತರ ವಾದ (ಹೊಸಬಾಳೆ) ಮತ್ತು ವಿವಾದ (ರಾಹುಲ್‌ ಗಾಂಧಿ) ಮುಂದುವರೆದಿದೆ. ಭಾಜಪ ಸಂವಿಧಾನವನ್ನು ನಾಶಪಡಿಸಿ ಮನುಸ್ಮೃತಿಯನ್ನು ಜಾರಿಗೆ ತರಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ ಗಾಂಧಿ ಹೇಳಿದ್ದಾರೆ. ಅವರು ಇಂತಹ ಕೃತ್ಯಗಳನ್ನು ನಡೆಸುತ್ತಿರುವುದು ಖಂಡಿತವಾಗಿಯೂ ದುರದೃಷ್ಟಕರ. ರಾಹುಲ ಗಾಂಧಿಯವರ ಅನೇಕ ಹೇಳಿಕೆಗಳಿಗೆ ಯಾವುದೇ ತಲೆಬುಡ ಇರುವುದಿಲ್ಲ; ಆದರೆ ಅವರು ವಿರೋಧ ಪಕ್ಷದ ನಾಯಕರಾಗಿರುವುದರಿಂದ, ಅವರ ಮಾತುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಶ್ರೀ. ಹೊಸಬಾಳೆ ಇವರು ಸಂವಿಧಾನ (ಕಾನಸ್ಟೀಟ್ಯೂಶನ್) ಮನುಸ್ಮೃತಿಯೊಂದಿಗೆ ಸಂಬಂಧವಿದೆ ಎಂಬ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಭಾರತದ ಮೊದಲ ಪ್ರಧಾನಿಯಾಗಿದ್ದ ನೆಹರೂರವರೇ ಸಂವಿಧಾನದ ಪ್ರಸ್ತುತ ಪೀಠಿಕೆಯ ಪ್ರತಿರೂಪ ಕರಡನ್ನು ಸಂವಿಧಾನ ಸಭೆಯಲ್ಲಿ ಮಂಡಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. ಇದನ್ನು ಸಂವಿಧಾನ ಸಭೆಯು ಅನುಮೋದಿಸಿತ್ತು. ಅನಂತರ ಡಾ. ಅಂಬೇಡ್ಕರ್‌ ಮತ್ತು ಸಂವಿಧಾನ ಕರಡು ಸಮಿತಿಯ ಇತರ ಸದಸ್ಯರು ಇದನ್ನು ಸಂವಿಧಾನದಲ್ಲಿ ಸೇರಿಸಿದ್ದರು. ರಾಹುಲ ಗಾಂಧಿಯವರ ಅಜ್ಜ ಸ್ವತಃ ರೂಪಿಸಿದ ಕರಡಿನ ಬಗ್ಗೆಯೇ ಪ್ರಶ್ನಿಸುವುದು ಅವರ ವಿವೇಚನೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುತ್ತದೆ.

೨. ಮನುಸ್ಮೃತಿ ಮತ್ತು ಸಂವಿಧಾನದ

(ಕಾನಸ್ಟೀಟ್ಯೂಶನ್) ನಡುವಿನ ಮೂಲಭೂತ ವ್ಯತ್ಯಾಸ

ಅ. ಈ ವಿಷಯವನ್ನು ಸೈದ್ಧಾಂತಿಕವಾಗಿ ನೋಡಿದರೂ, ಅದನ್ನು ಎಲ್ಲಿಯೂ ‘ಮನುಸ್ಮೃತಿ ವರ್ಸಸ್‌ ಸಂವಿಧಾನ’ ಎಂದು ಆಗುವುದಿಲ್ಲ. ಇವೆರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮನುಸ್ಮೃತಿಯು ಒಂದು ಮಾರ್ಗದರ್ಶಿ ಅಥವಾ ನೀತಿಬೋಧಕ ಗ್ರಂಥವಾಗಿದೆ. ಇದನ್ನು ಭಾರತೀಯ ಸಂವಿಧಾನದಲ್ಲಿ ‘ರಾಜ್ಯ ನೀತಿ ನಿರ್ದೇಶಕ ತತ್ತ್ವಗಳು’ ಅಥವಾ ‘ಸಂವಿಧಾನದ ನೀತಿ ನಿರ್ದೇಶಕ ತತ್ತ್ವಗಳು’ ಎಂಬುದಕ್ಕೆ ಸಮಾನಾಂತರವಾಗಿ ಎಲ್ಲಿಯಾದರೂ ಪರಿಗಣಿಸಬಹುದು. ಮುಖ್ಯವಾಗಿ, ನೀತಿ ನಿರ್ದೇಶಕ ತತ್ತ್ವಗಳನ್ನು ನ್ಯಾಯಾಲಯದ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ಮನುಸ್ಮೃತಿಯನ್ನು ಸಹ ಎಂದಿಗೂ ಜಾರಿಗೊಳಿಸಲಾಗಿಲ್ಲ. ಮನುಸ್ಮೃತಿಯನ್ನು ಭಗವಾನ ಬ್ರಹ್ಮನ ಮಗ ಮನು ಋಷಿ ಯವರು ಬರೆದಿದ್ದಾರೆ.
ವಾಸ್ತವದಲ್ಲಿ ಮನುಸ್ಮೃತಿಯನ್ನು ಯಾವುದೇ ರಾಜನು ಎಂದಿಗೂ ಸಂಪೂರ್ಣ ಜಾರಿಗೊಳಿಸಲಿಲ್ಲ ಮತ್ತು ಪ್ರಾಚೀನ ಮತ್ತು ಐತಿಹಾಸಿಕ ಕಾಲಗಳೆರಡರಲ್ಲೂ, ಮನುಸ್ಮೃತಿಯನ್ನು ಮಾರ್ಗದರ್ಶಿ ತತ್ತ್ವವಾಗಿ ಹೆಚ್ಚು ಮೌಲ್ಯೀಕರಿಸಲಾಗಿದೆ. ಪ್ರಸ್ತುತ, ಭಾರತೀಯ ಸನಾತನ ಸಮಾಜವು ಮಾತ್ರವಲ್ಲ, ಅನೇಕ ಶಕ್ತಿಗಳು ಪ್ರಜಾಪ್ರಭುತ್ವವನ್ನು ಅವಹೇಳನ ಮಾಡಲು ಕೆಲಸವನ್ನು ಮಾಡುತ್ತಿವೆ. ಸಂವಿಧಾನಕ್ಕೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿಗಳನ್ನು ಮಾಡುವ ವಿಷಯ ಬಂದಾಗಲೆಲ್ಲ, ಒಂದು ದೊಡ್ಡ ಗೊಂದಲ ಅಥವಾ ಪೆಡಂಭೂತವನ್ನು ಸೃಷ್ಟಿಸಲಾಗುತ್ತದೆ.

ಆ. ಮನುಸ್ಮೃತಿಯು ಭಾರತದ ಅನೇಕ ಸ್ಮೃತಿಗಳಲ್ಲಿ ಒಂದು ಸ್ಮೃತಿ ಆಗಿದೆ. ಆದ್ದರಿಂದ ‘ಮನುಸ್ಮೃತಿ ವರ್ಸಸ್‌ ಸಂವಿಧಾನ’ ಇಂತಹ ಯಾವುದೇ ವಾದದ ವಿಷಯ ಆಗುವುದಿಲ್ಲ. ಇದು ಉದ್ದೇಶಪೂರ್ವಕವಾಗಿ ಮತ್ತೆ ಮತ್ತೆ ಸೃಷ್ಟಿಸಲಾಗುತ್ತಿರುವ ರಾಜಕೀಯ ವಿವಾದವಾಗಿದೆ. ಪ್ರಸ್ತುತ ಸಂವಿಧಾನದ ರಚನೆಯ ಮುಂಚೆಯೇ, ಇಡೀ ಸಮಾಜವು ಮನುಸ್ಮೃತಿಯಿಂದ ಆಳಲ್ಪಡುತ್ತಿತ್ತು
ಎಂದು ತೋರಿಸಲಾಗಿದೆ. ಇದಕ್ಕಿಂತ ದೊಡ್ಡ ಸುಳ್ಳು ಇನ್ನೊಂದಿಲ್ಲ.

೩. ಸಮಾಜ ಮತ್ತು ರಾಷ್ಟ್ರ ಬದುಕುಳಿಯಲು, ಸಂವಿಧಾನವು ಪರಿವರ್ತನೆಗೊಳ್ಳುವ ಗುಣವನ್ನು ಹೊಂದಿರಬೇಕು !

ಭಾರತೀಯ ಸಮಾಜದಲ್ಲಿ ಮನುಸ್ಮೃತಿಯನ್ನು ಎಂದಿಗೂ ಒಂದು ಸಾಂವಿಧಾನಿಕ, ಕಾನೂನುಬದ್ಧ ಅಥವಾ ಆಡಳಿತಾತ್ಮಕ ಕಾನೂನಾಗಿ ಜಾರಿಗೆ ತರಲಾಗಿಲ್ಲ ಎಂಬುದು ನಿಜ. ಭಾರತದಲ್ಲಿ ಈಗ ಭಾರತೀಯ ಸಂವಿಧಾನಕ್ಕೆ ಇರುವ ಸ್ಥಾನ, ಮನುಸ್ಮೃತಿಗೆ ಈಗ ಭಾರತದ ಯಾವುದೇ ಭಾಗದಲ್ಲಿ ಉಳಿದಿಲ್ಲ. ಇದಕ್ಕೆ ಕಾರಣವನ್ನು ಮೇಲೆ ವಿವರಿಸಲಾಗಿದೆ ಮತ್ತು ಮನುಸ್ಮೃತಿಯಲ್ಲಿ ಬರೆಯಲಾಗಿರುವುದನ್ನು ಪ್ರಸ್ತುತ ಸಂವಿಧಾನದ ‘ನೀತಿ ನಿರ್ದೇಶನದ ತತ್ತ್ವಗಳೊಂದಿಗೆ’ ಹೆಚ್ಚಚ್ಚು ಹೋಲಿಸಬಹುದು ಎಂದು ಮತ್ತೊಮ್ಮೆ ಇಲ್ಲಿ ವಿವರಿಸಲಾಗುತ್ತಿದೆ. ಅದಕ್ಕಿಂತ ಹೆಚ್ಚೇನಿಲ್ಲ. ಪ್ರಸ್ತುತ ಸಂವಿಧಾನದಲ್ಲಿ ನಿರ್ದೇಶಕ ತತ್ತ್ವಗಳು ಬದ್ಧವಾಗಿಲ್ಲ ಎಂಬುದನ್ನು ಸಹ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದರರ್ಥ ಸಂವಿಧಾನದ ಯಾವುದೇ ಘಟಕವು ಅವುಗಳನ್ನು ಕಾರ್ಯಗತಗೊಳಿಸಲು ಸಹ ಒತ್ತಡವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಇಲ್ಲಿ ಇನ್ನೊಂದು ಸ್ಪಷ್ಟೀಕರಣ ಅಗತ್ಯವಿದೆ, ಯಾವುದೇ ದೇಶದ ಸಂವಿಧಾನವು ಯಾವುದೇ ಕಾಲದಲ್ಲಿಯೂ ಚಿರಕಾಲಿಕ, ಶಾಶ್ವತ ಅಥವಾ ಸ್ಥಿರವಾಗಿರುವುದಿಲ್ಲ. ಒಂದು ವೇಳೆ ಹಾಗಿದ್ದರೆ, ಆ ಸಮಾಜವು ಸತ್ತು ಹೋಗುತ್ತದೆ. ಯಾವುದೇ ಸಮಾಜ ಮತ್ತು ರಾಷ್ಟ್ರವು ಬದುಕುಳಿಯಬೇಕಾದರೆ, ಆ ರಾಷ್ಟ್ರದ ಮೇಲೆ ಯಾವುದೇ ಸಂವಿಧಾನವನ್ನು ಶಾಶ್ವತವಾಗಿ ಹೇರಬಾರದು.

೪. ಸಂಸತ್ತು ಶ್ರೇಷ್ಠ !

ಈ ನಿಟ್ಟಿನಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಯಿ ಇವರು ಕೆಲವು ದಿನಗಳ ಹಿಂದೆ ಮಾಡಿದ ಭಾಷಣದಲ್ಲಿ ”ಸಂಸತ್ತು ಮತ್ತು ಸಂವಿಧಾನದ ನಡುವೆ ಸಂವಿಧಾನವು ಸರ್ವೋಚ್ಚವಾಗಿದೆ” ಎಂದು ಹೇಳಿದ್ದರು. ಅವರು ಇದನ್ನು ತಮ್ಮ ಯಾವುದೇ ತೀರ್ಪುಗಳಲ್ಲಿ ಹೇಳಲಿಲ್ಲ, ಆದರೆ ಭಾಷಣದ ಸಮಯದಲ್ಲಿ ಮಾತ್ರ ಹೇಳಿದ್ದರು. ಆದ್ದರಿಂದ ಇದು ಅವರ ಕಡೆಯಿಂದ ಕೇವಲ ಒಂದು ಆಲೋಚನೆ (ವಿಚಾರ) ಎಂಬುದು ಸ್ಪಷ್ಟವಾಗುತ್ತದೆ. ಹೆಚ್ಚಿನ ಕಾನೂನುತಜ್ಞರು ಈ ದೃಷ್ಟಿಕೋನವನ್ನು ಒಪ್ಪುವುದಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಯೂ ನಡೆದಿತ್ತು. ಸಂವಿಧಾನವು ಎಂದಿಗೂ ಸಂಸತ್ತಿಗಿಂತ ಶ್ರೇಷ್ಠವಾಗಿರಲು ಸಾಧ್ಯವಿಲ್ಲ. ಏಕೆಂದರೆ ಸಂವಿಧಾನವು ಯಾವುದೇ ದೇಶ ಮತ್ತು ಕಾಲಕ್ಕೆ ಪ್ರಸ್ತುತವಾಗಿರಬಹುದು. ಆದರೆ, ಸಂಸತ್ತು ದೇಶದ ಎಲ್ಲ ಜನರನ್ನು ಪ್ರತಿನಿಧಿಸುತ್ತದೆ. ಜನರ ಇಚ್ಛೆಗೆ ಅನುಗುಣವಾಗಿ ವ್ಯವಸ್ಥೆಯನ್ನು ಬದಲಾಯಿಸುವ ಹಕ್ಕು ಸಂಸತ್ತಿಗೆ ಯಾವಾಗಲೂ ಇರುತ್ತದೆ. ಇದರ ಅರ್ಥವೇನೆಂದರೆ, ನಮ್ಮ ಭಾರತದ ಸಾರ್ವಭೌಮತ್ವವು ‘ಗಣ'(ಜನರಲ್ಲಿ)ದಲ್ಲಿ ನೆಲೆಸಿದೆ ಮತ್ತು ಸಂಸತ್ತು ಭಾರತದ ಗಣವನ್ನು ಅಂದರೆ ಭಾರತದ ಜನತೆಯನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿಯೇ ಸಂಸತ್ತು ಸರ್ವೋಚ್ಚವಾಗಿದೆ. ಸಂಸತ್ತು ಯಾವಾಗಲೂ ಇದೇ ಸ್ವರೂಪದಲ್ಲಿರಬೇಕು ಎಂಬುದೇನೂ ಅನಿವಾರ್ಯವಲ್ಲ. ತಾತ್ತ್ವಿಕವಾಗಿ, ಯಾವುದೇ ಸಭೆ, ಸಂಸ್ಥೆ, ಇಡೀ ರಾಷ್ಟ್ರದ ಬಹುಮತವನ್ನು ಪ್ರತಿನಿಧಿಸುವ ಯಾವುದೇ ವೇದಿಕೆ ಹೊಸ ಸಂವಿಧಾನವನ್ನು ತರಬಹುದು.

೫. ಕಾಲಕ್ಕನುಸಾರ ಹೊಸ ಸಂವಿಧಾನವನ್ನು ರಚಿಸಬೇಕು !

ಒಂದು ವೇಳೆ ಯಾವುದೇ ಸಮಾಜ ಅಥವಾ ರಾಷ್ಟ್ರದಲ್ಲಿ ಸಂವಿಧಾನ ‘ಶಾಶ್ವತ ಸರ್ವೋಚ್ಚ’ವಾದರೆ, ಆ ಸಮಾಜವು ನಿಶ್ಚಲವಾಗುತ್ತದೆ ಮತ್ತು ಕಾಲಕ್ರಮೇಣ ನಶಿಸಿ ಹೋಗುತ್ತದೆ. ಅಂತಹ ಸಮಾಜವು ಒಂದು ಮೂಲಭೂತವಾದಿ ರಾಷ್ಟ್ರವನ್ನು ಹುಟ್ಟುಹಾಕುತ್ತದೆ. ಹೀಗಾಗಿ, ”ಸಂವಿಧಾನವು ಸರ್ವೋಚ್ಚವಾಗಿದೆ” ಎಂಬ ಕಲ್ಪನೆಯು ಒಬ್ಬರ ವೈಯಕ್ತಿಕ ಅಭಿಪ್ರಾಯವಾಗಿರಬಹುದು. ಈ ಚಿಂತನೆಯು ದೀರ್ಘಾವಧಿಗಾಗಿ ರಾಷ್ಟ್ರದ ಹಿತಾಸಕ್ತಿಯಲ್ಲಿಲ್ಲ ಅಥವಾ ಮಾನವೀಯತೆಯ ಶಾಶ್ವತ ಮೌಲ್ಯಗಳೊಂದಿಗೆ ಎಂದಿಗೂ ಹೊಂದಿಕೆಯಾಗುವುದಿಲ್ಲ. ಈ ಅರ್ಥದಲ್ಲಿ ಮನುಸ್ಮೃತಿ ಮತ್ತು ಭಾರತದ ಸಂವಿಧಾನ ಇವೆರಡೂ ಒಂದೇ ಶ್ರೇಣಿಯ ಗ್ರಂಥಗಳಾಗಿವೆ. ಮನುಸ್ಮೃತಿಯು ಇಂದು ಅಪ್ರಸ್ತುತವಾಗಿದೆ ಎಂದು ಹೇಳಲಾಗುತ್ತಿದ್ದರೆ, ಅದೇ ರೀತಿಯಲ್ಲಿ ಪ್ರಸ್ತುತ ಸಂವಿಧಾನವು ಕೆಲವು ವರ್ಷಗಳಲ್ಲಿ ಅಪ್ರಸ್ತುತವಾಗುತ್ತದೆ ಅಥವಾ ಆಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಆ ಕಾಲದ ಜನರಿಗೆ ತಮ್ಮ ಸಮಯಕ್ಕೆ ಅನುಗುಣವಾಗಿ ಹೊಸ ಸಂವಿಧಾನವನ್ನು ರಚಿಸುವ ಮತ್ತು ಹೊಸ ಸಾಂವಿಧಾನಿಕ ವ್ಯವಸ್ಥೆಯ ಅಡಿಯಲ್ಲಿ ತಮ್ಮ ರಾಷ್ಟ್ರವನ್ನು ಆಳುವ ಸಂಪೂರ್ಣ ಹಕ್ಕಿದೆ. ಯಾವುದೇ ರಾಷ್ಟ್ರದ ಸಂವಿಧಾನವು ಶಾಶ್ವತವಲ್ಲ ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ. ಕಾಲಾಂತರದಲ್ಲಿ, ಸಮಾಜವು ತನ್ನ ಸಂವಿಧಾನ ವನ್ನು ಬದಲಾಯಿಸುತ್ತಾ ಹೋಗುತ್ತದೆ ಮತ್ತು ಅದರಲ್ಲಿಯೇ ರಾಷ್ಟ್ರದ ಶಾಶ್ವತ ಶಕ್ತಿ ಜೀವಂತವಾಗಿರುತ್ತದೆ.

– ಮೇಜರ್‌ ಸರಸ್‌ ತ್ರಿಪಾಠಿ (ನಿವೃತ್ತ), ಲೇಖಕರು ಮತ್ತು ಪ್ರಕಾಶಕರು, ‘ಪ್ರಜ್ಞಾ ಮಠ ಪಬ್ಲಿಕೇಶನ್‌’, ಉತ್ತರಪ್ರದೇಶ.