ವಿವಿಧ ರಾಜ್ಯಗಳಲ್ಲಿರುವ ಈ ಜಾಗೃತ ಗಣೇಶ ದೇವಸ್ಥಾನಗಳಿಗೆ ನೀವು ಭೇಟಿ ನೀಡಿದ್ದೀರಾ ?

ಆಗಸ್ಟ್ ೨೭ ರ ಗಣೇಶ ಚತುರ್ಥಿಯ ನಿಮಿತ್ತ…

ದೇಶಾದ್ಯಂತ ಶ್ರೀ ಗಣೇಶನ ಅನೇಕ ಪ್ರಾಚೀನ ದೇವಸ್ಥಾನಗಳಿವೆ. ಈ ದೇವಸ್ಥಾನಗಳು ಆಯಾ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿಬಿಂಬಿಸುತ್ತವೆ. ಈ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ, ವಿವಿಧ ರಾಜ್ಯಗಳಲ್ಲಿರುವ ಕೆಲವು ಪ್ರಾಚೀನ ಗಣೇಶ ದೇವಸ್ಥಾನಗಳ ಇತಿಹಾಸವನ್ನು ತಿಳಿದುಕೊಳ್ಳೋಣ. ಪ್ರಸ್ತುತ, ರಾಷ್ಟ್ರ ಮತ್ತು ಧರ್ಮದ ಮೇಲೆ ಅನೇಕ ಆಘಾತಗಳು ನಡೆಯುತ್ತಿವೆ. ಈ ಪರಿಸ್ಥಿತಿಯಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ‘ಎಲ್ಲರಿಗೂ ಅಭಯವನ್ನು ನೀಡುವ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು’. ಶ್ರೀ ಗಣೇಶನು ವಿಘ್ನಹರ್ತ ಮತ್ತು ಕಾರ್ಯಸಿದ್ಧಿದಾತನಾಗಿದ್ದಾನೆ. ‘ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಅಡೆತಡೆಗಳು ದೂರವಾಗಲಿ ಮತ್ತು ರಾಮರಾಜ್ಯದಂತಹ ಹಿಂದೂ ರಾಷ್ಟ್ರವು ಬೇಗನೆ ಸ್ಥಾಪನೆಯಾಗಲಿ’ ಎಂಬುದಕ್ಕಾಗಿ ನಾವು ಶ್ರೀ ಗಣೇಶನ ಚರಣಗಳಲ್ಲಿ ಪ್ರಾರ್ಥಿಸೋಣ !

೧. ಕುಂಭಾಶಿ (ಉಡುಪಿ ಜಿಲ್ಲೆ) ಯಲ್ಲಿರುವ ಶ್ರೀ ಮಹಾಗಣಪತಿ !

ಉಡುಪಿ ಜಿಲ್ಲೆಯ ಕುಂಭಾಶಿಯಲ್ಲಿ ಶ್ರೀ ಆನೆಗುಡ್ಡೆ ಮಹಾಗಣಪತಿ ದೇವಸ್ಥಾನವಿದೆ. ಇಲ್ಲಿರುವ ಶ್ರೀ ಮಹಾಗಣಪತಿಯ ವಿಗ್ರಹವು ಒಂದು ಅಖಂಡ ಶಿಲೆಯಿಂದ ಕೆತ್ತಲ್ಪಟ್ಟು ಅದು ೧೨ ಅಡಿ ಎತ್ತರವಿದೆ. ಶ್ರೀ ಗಣೇಶನಿಗೆ ೫ ಕಿಲೋ ಚಿನ್ನದ ಮುಖವಾಡವಿದೆ. ವಿಗ್ರಹದ ಮೇಲಿನ ಇತರ ಕವಚಗಳನ್ನು ಬೆಳ್ಳಿಯಿಂದ ಮಾಡಲಾಗಿದೆ. ಈ ಗಣಪತಿ ಅತ್ಯಂತ ಜಾಗೃತನಾಗಿದ್ದಾನೆ. ಕುಂಭಾಸುರನನ್ನು ವಧಿಸಲು ಶ್ರೀ ಗಣೇಶನು ಭೀಮನಿಗೆ ಇಲ್ಲಿಯೇ ಖಡ್ಗವನ್ನು ಕೊಟ್ಟನು ಎಂದು ಹೇಳಲಾಗುತ್ತದೆ.

೨. ಶ್ರೀಕೃಷ್ಣನು ಪೂಜಿಸಿದ ಗಣಪತಿಪುರ (ಗುಜರಾತ) ದಲ್ಲಿರುವ ಸ್ವಯಂಭೂ ಶ್ರೀ ಗಣೇಶ !

‘ಗುಜರಾತ ರಾಜ್ಯದ ರಾಜಧಾನಿ ಕರ್ಣಾವತಿಯಿಂದ ೫೦ ಕಿ.ಮೀ. ದೂರದಲ್ಲಿ ‘ಗಣಪತಿಪುರ’ ಎಂಬ ಹಳ್ಳಿಯಿದೆ. ಆ ಸ್ಥಳದಲ್ಲಿ ಗುಜರಾತ ರಾಜ್ಯದ ಅತ್ಯಂತ ಪ್ರಾಚೀನ ಸ್ವಯಂಭೂ ಗಣಪತಿ ದೇವಸ್ಥಾನವಿದೆ. ೫,೫೦೦ ವರ್ಷಗಳ ಹಿಂದೆ ಶ್ರೀಕೃಷ್ಣ ಮತ್ತು ಪಾಂಡವರು ಈ ಗಣಪತಿಯನ್ನು ಪೂಜಿಸಿದ್ದರು. ‘ಈ ಗಣಪತಿಯನ್ನು ಪೂಜಿಸಿದ ನಂತರ ಶ್ರೀಕೃಷ್ಣನು ದ್ವಾರಕೆಯಲ್ಲಿದ್ದು ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಿದನು’ ಎಂದು ಹೇಳಲಾಗುತ್ತದೆ. ಈ ಗಣಪತಿಯ ಹೆಸರು ‘ಸಿದ್ಧಿವಿನಾಯಕ’ ಎಂದಿದೆ. ಭಗವಾನ ಶ್ರೀಕೃಷ್ಣನು ಈ ಗಣೇಶನನ್ನು ಪೂಜಿಸುತ್ತಿದ್ದನು. ಅದಕ್ಕಾಗಿಯೇ ಈ ಸ್ಥಳವನ್ನು ಹಿಂದೆ ‘ಗಣೇಶದ್ವಾರಕಾ’ ಎಂದು ಕರೆಯಲಾಗುತ್ತಿತ್ತು. ‘ಪಾಂಡವರು ಶ್ರೀಕೃಷ್ಣನನ್ನು ಭೇಟಿಯಾಗಲು ದ್ವಾರಕೆಗೆ ಹೋದಾಗ, ಪ್ರತಿ ಬಾರಿ ಈ ಗಣಪತಿಯ ದರ್ಶನ ಪಡೆದೇ ಮುಂದೆ ಹೋಗುತ್ತಿದ್ದರು’, ಎಂಬ ದಂತಕಥೆಯಿದೆ.

೩. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸ್ವಯಂಭೂ ತ್ರಿನೇತ್ರ ಶ್ರೀ ಗಣೇಶ !

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ರಣಥಂಬೋರ್‌ ಕೋಟೆಯಲ್ಲಿ ಸ್ವಯಂಭೂ ಗಣಪತಿಯ ದೇವಸ್ಥಾನವಿದೆ. ಸಮುದ್ರಮಟ್ಟದಿಂದ ೨ ಸಾವಿರ ಅಡಿ ಎತ್ತರದಲ್ಲಿರುವ ರಣಥಂಬೋರ್‌ ಕಾಡಿನ ಒಂದು ಬೆಟ್ಟದ ತುದಿಯಲ್ಲಿ ಈ ಸ್ವಯಂಭೂ ತ್ರಿನೇತ್ರ ಗಣಪತಿಯು ಪ್ರಕಟಗೊಂಡಿದ್ದಾನೆ. ದ್ವಾಪರಯುಗದಲ್ಲಿ ಭಗವಾನ ಶ್ರೀಕೃಷ್ಣನ ಕಾಲದಲ್ಲಿ ಈ ತ್ರಿನೇತ್ರ ಗಣೇಶನು ಮೊದಲು ಪ್ರಕಟಗೊಂಡನು ಎಂದು ಅಲ್ಲಿನ ಪುರೋಹಿತರು ಹೇಳುತ್ತಾರೆ.
ತ್ರಿನೇತ್ರ ಗಣಪತಿಯ ಇದು ಮೊದಲ ದೇವಸ್ಥಾನ ವಾಗಿದೆ. ಇಲ್ಲಿನ ಸುತ್ತಮುತ್ತಲಿನ ಭಕ್ತರು ಯಾವುದೇ ಕಾರ್ಯದ ಮೊದಲ ಆಮಂತ್ರಣವನ್ನು ಶ್ರೀ ಗಣೇಶನಿಗೆ ನೀಡುತ್ತಾರೆ. ಭಗವಾನ ಶ್ರೀಕೃಷ್ಣನು ತನ್ನ ವಿವಾಹದ ಮೊದಲ ಆಮಂತ್ರಣವನ್ನು ಈ ಗಣಪತಿಗೆ ನೀಡಿದ್ದನು ಎಂದು ಹೇಳಲಾಗುತ್ತದೆ. ಅದರ ನಂತರವೇ ವಿವಾಹ ಮತ್ತು ಇತರ ಶುಭ ಕಾರ್ಯಗಳಲ್ಲಿ ಶ್ರೀ ಗಣೇಶನಿಗೆ ಆಮಂತ್ರಣ ನೀಡುವ ಸಂಪ್ರದಾಯ ಪ್ರಾರಂಭವಾಯಿತು.

೪. ಇಡಗುಂಜಿಯ ಶ್ರೀ ಮಹಾಗಣಪತಿ !

ಇಡಗುಂಜಿಯ ಶ್ರೀ ಮಹಾಗಣಪತಿ

ಇಡಗುಂಜಿ ದೇವಸ್ಥಾನದ ಮುಖ್ಯ ವಿಗ್ರಹವು ೪ ಅಥವಾ ೫ ನೆಯ ಶತಮಾನದ ಇತಿಹಾಸವನ್ನು ಹೊಂದಿದೆ. ಈ ದ್ವಿಭುಜ ಶ್ರೀ ಗಣೇಶ ವಿಗ್ರಹವು ಒಂದು ಶಿಲೆಯ ಮೇಲೆ ನಿಂತಿದೆ. ಶ್ರೀ ಗಣೇಶನ ವಿಗ್ರಹವು ೩೩ ಇಂಚು ಎತ್ತರ ಮತ್ತು ೨೩ ಇಂಚು ಅಗಲವಾಗಿದೆ. ಬಲಗೈಯಲ್ಲಿ ಕಮಲವಿದೆ ಮತ್ತು ಇನ್ನೊಂದು ಕೈಯಲ್ಲಿ ಮೋದಕವಿದೆ. ಶ್ರೀ ಗಣೇಶನ ಬಲಗೈಯಲ್ಲಿ ಕಮಲ ಎಡಗೈಯಲ್ಲಿ ಮೋದಕವಿದೆ. ಸಾಮಾನ್ಯವಾಗಿ ಶ್ರೀ ಗಣೇಶನ ವಾಹನ ಮೂಷಕ (ಇಲಿ) ಪ್ರತಿಯೊಂದು ವಿಗ್ರಹ ಮತ್ತು ಪ್ರತಿಮೆಯಲ್ಲಿ ಕಂಡುಬರುತ್ತದೆ. ಆದರೆ ಈ ಸ್ಥಳದಲ್ಲಿ ಮೂಷಕನ ವಿಗ್ರಹವಿಲ್ಲ.

೫. ಕಾಶಿಕ್ಷೇತ್ರದಲ್ಲಿ ವಿರಾಜಮಾನನಾದ ಶ್ರೀ ಧುಂಡಿರಾಜ ವಿನಾಯಕ !

ಕಾಶಿ (ಉತ್ತರಪ್ರದೇಶ)ಯಲ್ಲಿ ಸಾವಿರಾರು ದೇವಸ್ಥಾನಗಳಿವೆ. ಅವುಗಳಲ್ಲಿ ಗಣೇಶನ ೫೬ ದೇವಸ್ಥಾನಗಳಿವೆ. ಈ ೫೬ ಗಣೇಶರಲ್ಲಿ ಶ್ರೀ ಧುಂಡಿರಾಜ ವಿನಾಯಕನು ವಿಶೇಷವಾಗಿದ್ದಾನೆ. ಕಾಶಿಯ ಪ್ರದಕ್ಷಿಣೆ ಮಾಡಿದ ನಂತರ ಶ್ರೀ ಧುಂಡಿರಾಜ ವಿನಾಯಕನ ದರ್ಶನ ಪಡೆಯಬೇಕು ಎಂದು ಹೇಳಲಾಗುತ್ತದೆ. ಈ ಶ್ರೀ ಗಣೇಶನು ಕಾಶಿ ವಿಶ್ವನಾಥನ ಪ್ರವೇಶದ್ವಾರದಲ್ಲಿಯೇ ನೆಲೆಸಿದ್ದಾನೆ. ಸ್ಕಂದ ಪುರಾಣದ ಕಾಶಿಖಂಡದಲ್ಲಿ ಕಾಶಿ ಕ್ಷೇತ್ರದ ಮಹಾತ್ಮೆಯನ್ನು ವರ್ಣಿಸಲಾಗಿದೆ. ಶ್ರೀ ಗಣೇಶನು ೫೬ ರೂಪಗಳಲ್ಲಿ ಕಾಶಿಕ್ಷೇತ್ರದಲ್ಲಿ ವಿರಾಜಮಾನನಾದನು. ಶ್ರೀ ಧುಂಡಿರಾಜ ವಿನಾಯಕನು ಭಗವಾನ ವಿಶ್ವನಾಥರ ಪ್ರವೇಶದ್ವಾರದಲ್ಲಿಯೇ ಸ್ಥಾಪಿತನಾದನು. ಕಾಶಿ ವಿಶ್ವನಾಥನು ಭಕ್ತರನ್ನು ಸಲಹುವವನಾಗಿ ದ್ದಾನೆ ಮತ್ತು ಅವರ ಕಾಶಿಕ್ಷೇತ್ರಕ್ಕೆ ಆಗಮನವಾಗಲೆಂದು ಕಾರ್ಯ ನಿರ್ವಹಿಸಿದ ಶ್ರೀ ಧುಂಡಿರಾಜ ಗಣೇಶನೂ ಭಕ್ತವತ್ಸಲನಾಗಿದ್ದಾನೆ. ‘ಶ್ರೀ ಧುಂಡಿರಾಜ ಗಣೇಶನ ದರ್ಶನವಿಲ್ಲದೆ ಕಾಶಿಯಾತ್ರೆಯು ಪೂರ್ಣವಾಗುವುದಿಲ್ಲ’ ಹೀಗಿದೆ ಈ ಗಣೇಶನ ಮಹಾತ್ಮೆ.

೬. ಸಿಕ್ಕಿಂನಲ್ಲಿರುವ ಜಾಗೃತ ದೇವಸ್ಥಾನ ಶ್ರೀ ಗಣೇಶ ಟೋಕ್‌ !

ಕಾಂಚನಗಂಗಾ ಪರ್ವತಗಳ ಭವ್ಯ ನೋಟದೊಂದಿಗೆ, ಇದು ಗ್ಯಾಂಗ್ಟೊಕ್‌ನ ಬೆಟ್ಟದ ತುದಿಯಲ್ಲಿರುವ ಒಂದು ಸುಂದರ ದೇವಸ್ಥಾನವಾಗಿದೆ. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಗಣೇಶ ಟೋಕ್ನ್ನು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ. ೧೯೫೨ ರಲ್ಲಿ ಭಾರತ ಸರಕಾರದ ಓರ್ವ ಹಿರಿಯ ಅಧಿಕಾರಿಯಾಗಿದ್ದ ಶ್ರೀ. ಅಪ್ಪಾಜಿ ಪಂತ್‌ ಇವರು, ಮೂಲತಃ ಮಹಾರಾಷ್ಟ್ರದವರಾಗಿದ್ದು, ಸಿಕ್ಕಿಂ ರಾಜ್ಯದಲ್ಲಿ ನೇಮಕಗೊಂಡಿದ್ದರು. ಶ್ರೀ. ಅಪ್ಪಾಜಿ ಪಂತ್‌ ಇವರು ಧಾರ್ಮಿಕ ಪ್ರವೃತ್ತಿಯ ಮತ್ತು ದೇವಭಕ್ತರಾಗಿದ್ದರು. ೧೯೫೩ ರಲ್ಲಿ ಅವರಿಗೆ ಒಂದು ಸ್ವಪ್ನದೃಷ್ಟಾಂತವಾಯಿತು. ಕನಸಿನಲ್ಲಿ ಅವರಿಗೆ ಗುಹೆಯಲ್ಲಿರುವ ಶ್ರೀ ಗಣೇಶನ ದರ್ಶನವಾಯಿತು. ಅವರು ಆ ಸ್ಥಳವನ್ನು ಹುಡುಕಿದಾಗ, ಈಗಿನ ‘ಗಣೇಶ ಟೋಕ್’ ಇರುವ ಸ್ಥಳದ ಗುಹೆಯಲ್ಲಿ ಅವರಿಗೆ ಶ್ರೀ ಗಣೇಶನ ಸಾಕ್ಷಾತ್‌ ದರ್ಶನವಾಯಿತು. ಆ ಗುಹೆಯ ಸ್ಥಳದಲ್ಲಿ ಅವರು ಸ್ಥಳೀಯರಿಗೆ ಶ್ರೀ ಗಣೇಶನ ಪೂಜೆಯ ಸಂಪ್ರದಾಯವನ್ನು ಪ್ರಾರಂಭಿಸಿದರು. ಗುಹೆಗೆ ಹೋಗಲು ಬಹಳ ಕಡಿಮೆ ಜಾಗವಿತ್ತು. ೨೦೦೭ ರಲ್ಲಿ, ಭಾರತೀಯ ಸೇನೆಯು ಗುಹೆಯ ಸ್ಥಳದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಿ, ಅದರಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿತು. ಇಲ್ಲಿ ದರ್ಶನಕ್ಕೆ ಹೋಗಲು ೫೦ ಮೆಟ್ಟಿಲುಗಳನ್ನು ಹತ್ತಬೇಕು.

೭. ಕಲಾಮಸ್ಸೆರಿ ಮಹಾಗಣಪತಿ ದೇವಸ್ಥಾನ, ಕೇರಳ

ಈ ದೇವಸ್ಥಾನವು ಕೇರಳದಲ್ಲಿದೆ. ಈ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಮತ್ತು ನವಗ್ರಹಗಳಂತಹ ವಿಗ್ರಹಗಳಿವೆ. ಈ ದೇವಸ್ಥಾನದಲ್ಲಿ ಭಗವಾನ ಶಿವ, ದೇವಿ ಪಾರ್ವತಿ ಮತ್ತು ಪ್ರಭು ಶ್ರೀರಾಮನ ವಿಗ್ರಹವೂ ಕಾಣಸಿಗುತ್ತದೆ. ಈ ದೇವಸ್ಥಾನವನ್ನು ೧೯೮೦ ರ ದಶಕದಲ್ಲಿ ನಿರ್ಮಿಸಲಾಗಿದೆ. ರಘುನಾಥ ಮೆನನ್‌ ಅವರು ಈ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಅಷ್ಟದ್ರವ್ಯ ಮಹಾಗಣಪತಿ ಹವನದಲ್ಲಿ ಭಾಗವಹಿಸಲು ಅನೇಕ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಮಲ್ಯಾಳಂ ಕ್ಯಾಲೆಂಡರ್‌ನ ಪ್ರತಿ ತಿಂಗಳ ಮೊದಲ ದಿನದಂದು ದೇವಸ್ಥಾನದಲ್ಲಿ ಆನಯೂಟ್ಟು (ದೇವಸ್ಥಾನಗಳಲ್ಲಿ ಆನೆಗಳಿಗೆ ತಿನ್ನಲು ಕೊಡುವ ಒಂದು ವಿಶೇಷ ಭೋಜನ ಅಥವಾ ನೈವೇದ್ಯಕ್ಕೆ ಆನಯೂಟ್ಟು ಎಂದು ಹೇಳಲಾಗುತ್ತದೆ) ಎಂಬ ಆಚರಣೆಯನ್ನು ಸಹ ಆಯೋಜಿಸಲಾಗುತ್ತದೆ. ಇಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಗಜಪೂಜೆಯು ನಡೆಯುತ್ತದೆ.

೮. ಇಂದೂರ (ಮಧ್ಯಪ್ರದೇಶ)ನಲ್ಲಿರುವ ಶ್ರೀ ಖಜರಾನಾ ಗಣೇಶ ದೇವಸ್ಥಾನ !

ಮಧ್ಯಪ್ರದೇಶದ ಇಂದೂರನಲ್ಲಿರುವ ಖಜರಾನಾ ದೇವಸ್ಥಾನಕ್ಕೆ ವಿಶೇಷ ಮಹತ್ವವಿದೆ. ಈ ದೇವಸ್ಥಾನವನ್ನು ರಾಣಿ ಅಹಿಲ್ಯಾಬಾಯಿ ಹೋಳ್ಕರ್‌ ಇವರು ಕಟ್ಟಿಸಿದರು. ಖಜರಾನಾ ದೇವಸ್ಥಾನದಲ್ಲಿ ಶ್ರೀ ಗಣೇಶನ ೩ ಅಡಿ ಎತ್ತರದ ವಿಗ್ರಹವಿದೆ. ಸರಕಾರವು ಈ ದೇವಸ್ಥಾನವನ್ನು ಸ್ವಾಧೀನಪಡಿಸಿಕೊಂಡಿದೆ. ಈ ದೇವಸ್ಥಾನದ ನಿರ್ವಹಣೆಯನ್ನು ಭಟ್ಟ ಕುಟುಂಬವು ಮಾಡುತ್ತದೆ. ಔರಂಗಜೇಬ್‌ನಿಂದ ರಕ್ಷಿಸಲು ವಿಗ್ರಹವನ್ನು ಬಾವಿಯಲ್ಲಿ ಅಡಗಿಸಿಡಲಾಗಿತ್ತು ಮತ್ತು ೧೭೩೫ ರಲ್ಲಿ ಅದನ್ನು ಬಾವಿಯಿಂದ ಹೊರತೆಗೆಯಲಾಯಿತು ಎಂದು ನಂಬಲಾಗಿದೆ. ೧೭೩೫ ರಲ್ಲಿ, ಮರಾಠರ ಹೋಳ್ಕರ್‌ ರಾಜವಂಶದ ಅಹಿಲ್ಯಾಬಾಯಿ ಹೋಳ್ಕರ್‌ ಇವರು ಈ ದೇವಸ್ಥಾನವನ್ನು ಸ್ಥಾಪಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಈ ದೇವಸ್ಥಾನವು ಬಹಳಷ್ಟು ಅಭಿವೃದ್ಧಿ ಹೊಂದಿದೆ. ಒಂದು ಸಣ್ಣ ಗುಡಿಸಲಿನಿಂದ ಈಗ ಇದು ಒಂದು ದೊಡ್ಡ ದೇವಸ್ಥಾನವಾಗಿ ಬೆಳೆದಿದೆ. ಚಿನ್ನ, ವಜ್ರಗಳು ಮತ್ತು ಇತರ ಅಮೂಲ್ಯ ರತ್ನಗಳನ್ನು ದೇವಸ್ಥಾನಕ್ಕೆ ನಿಯಮಿತವಾಗಿ ದಾನ ಮಾಡಲಾಗುತ್ತದೆ. ಗರ್ಭಗುಡಿಯ ಹೊರಗೋಡೆ ಮತ್ತು ಇತರ ಗೋಡೆಗಳನ್ನು ಬೆಳ್ಳಿಯಿಂದ ಹೊದಿಸಲಾಗಿದ್ದು, ಅವುಗಳ ಮೇಲೆ ವಿವಿಧ ಹಬ್ಬಗಳನ್ನು ಕೆತ್ತಲಾಗಿದೆ.

೯. ತಮಿಳುನಾಡಿನ ಗಜಾನನನ ಪ್ರಮುಖ ೩ ದೇವಸ್ಥಾನಗಳಲ್ಲಿ ಮೊದಲ ಸ್ವಯಂಭೂ ಶ್ರೀ ಗಜಾನನ ದೇವಸ್ಥಾನ !

‘ಪಿಳ್ಳೈಯಾರಪಟ್ಟಿ (ಪಿಳ್ಳೈಯಾರ್‌ ಎಂದರೆ ತಮಿಳು ಭಾಷೆಯಲ್ಲಿ ಶ್ರೀ ಗಜಾನನ) ಯಲ್ಲಿರುವ ಸ್ವಯಂಭೂ ಗಜಾನನ ದೇವಸ್ಥಾನವು ತಮಿಳುನಾಡಿನಲ್ಲಿ ಗಜಾನನನ ಪ್ರಮುಖ ೩ ದೇವಸ್ಥಾನಗಳಲ್ಲಿ ಮೊದಲನೆಯದು. ಈ ದೇವಸ್ಥಾನವನ್ನು ೧ ಸಾವಿರ ವರ್ಷಗಳ ಹಿಂದೆ ಪಲ್ಲವ ರಾಜರ ಕಾಲದಲ್ಲಿ ನಿರ್ಮಿಸಲಾಗಿತ್ತು. ಗಜಾನನನ ಆಕಾರವು ಬೆಟ್ಟದಿಂದಲೇ ಸೃಷ್ಟಿಯಾಗಿದೆ. ದೇವಸ್ಥಾನದ ಹಿಂದೆ ಹೋದರೆ ಈ ಬೆಟ್ಟದ ದರ್ಶನವಾಗುತ್ತದೆ. ಗಜಾನನನ ಸ್ವಯಂಭೂ ಆಕಾರದ ರಹಸ್ಯದ ಕಾಲಾವಧಿಯು ಯಾರಿಗೂ ತಿಳಿದಿಲ್ಲ. ಈ ಗಜಾನನ ತನ್ನ ಬಲಗೈಯಲ್ಲಿ ಶಿವಲಿಂಗವನ್ನು ಹಿಡಿದಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಶ್ರೀ ಗಣೇಶನಿಗೆ ೪ ಕೈಗಳಿರುತ್ತವೆ. ಆದರೆ ಈ ಸ್ವಯಂಭೂ ವಿಗ್ರಹಕ್ಕೆ ೨ ಕೈಗಳಿವೆ. ವಿಗ್ರಹದ ಹಿಂದೆ ಬೆಟ್ಟದಲ್ಲಿಯೇ ಒಂದು ಶಿವಲಿಂಗವೂ ಸ್ವಯಂ ಸಿದ್ಧವಾಗಿದೆ; ಆದರೆ ಈ ಶಿವಲಿಂಗದ ದರ್ಶನವನ್ನು ನಮಗೆ ಪಡೆಯಲು ಸಾಧ್ಯವಿಲ್ಲ.

(ಆಧಾರ : ವಿವಿಧ ಜಾಲತಾಣಗಳು)