ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?

ವೈಶಾಖ ಶುಕ್ಲ ತೃತೀಯಾ ಅಂದರೆ ಅಕ್ಷಯ ತದಿಗೆ ! ಇದನ್ನು ಹಿಂದೂ ಧರ್ಮದಲ್ಲಿನ ಪವಿತ್ರ ಮತ್ತು ಮಹತ್ವದ ಹಬ್ಬವೆಂದು ಪರಿಗಣಿಸಲಾಗುತ್ತದೆ. ಈ ವರ್ಷ ಏಪ್ರಿಲ್‌ ೧೯ ರಂದು ಅಕ್ಷಯ ತದಿಗೆ ಇದೆ.

೧. ದಾನದ ಮಹತ್ವ

ಈ ದಿನದಂದು ದಾನಕ್ಕೆ ಹೆಚ್ಚಿನ ಮಹತ್ವವಿರುವುದರಿಂದ, ಅನೇಕ ಜನರು ಛತ್ರಿ, ಪಾದರಕ್ಷೆಗಳು, ನೀರಿನ ಮಡಕೆಗಳು, ಬಿಂದಿಗೆಗಳು, ಪಂಚೆ, ಬಟ್ಟೆ ಮುಂತಾದವುಗಳನ್ನು ಅಗತ್ಯವಿರುವವರಿಗೆ, ವೃದ್ಧಾಶ್ರಮಗಳಿಗೆ ಅಥವಾ ಬಡವರ ವಸತಿಗಳಿಗೆ ಹೋಗಿ ದಾನ ಮಾಡುತ್ತಾರೆ. ಅಗಸೆ, ಗೋಧಿ, ಕಡಲೆ, ಹಾಲಿನ ಉತ್ಪನ್ನಗಳು, ಜಲಕುಂಭ (ನೀರಿನ ಕೊಡ), ಎಲ್ಲಾ ರೀತಿಯ ಹಣ್ಣಿನ ರಸಗಳು ಮತ್ತು ಬೇಸಿಗೆಯಲ್ಲಿ ಉಪಯುಕ್ತವಾಗುವ ವಸ್ತುಗಳನ್ನು ದಾನ ಮಾಡಲಾಗುತ್ತದೆ. ಇದರಿಂದ ಅನಂತ ಫಲಪ್ರಾಪ್ತಿಯಾಗುತ್ತದೆ.

೨. ಈ ದಿನದಂದು ಭಗವಾನ ವಿಷ್ಣು ಮತ್ತು ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡುವುದರಿಂದ ಮನೋಕಾಮನೆಗಳು ಪೂರ್ಣವಾಗುತ್ತವೆ.

೩. ಈ ಕಾಲಾವಧಿಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಅನೇಕ ಉದ್ಯೋಗಿಗಳು ಅಥವಾ ಸಂಸ್ಥೆಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಾರೆ. ಪ್ರಾಣಿಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ನಿರ್ಮಿಸುತ್ತಾರೆ.

೪. ನಾಮಜಪ

ಅಕ್ಷಯ ತದಿಗೆಯ ಕಾಲದಲ್ಲಿ ನಾಮಸ್ಮರಣೆಗೂ ಅಷ್ಟೇ ಮಹತ್ವವಿದೆ. ನಮಗೆ ನಮ್ಮ ಪ್ರೀತಿಯ ದೇವತೆಯ ನಾಮ ಸ್ಮರಣೆಯನ್ನು ಸಾಧ್ಯವಾದಷ್ಟು ಮಾಡಬೇಕು. ಅಕ್ಷಯ ತದಿಗೆಯಂದು ಮಾಡಿದ ನಾಮಸ್ಮರಣೆಯಿಂದ ಮನೆಯಲ್ಲಿನ ದೋಷಗಳು ನಿವಾರಣೆಯಾಗುತ್ತವೆ. ಪುಣ್ಯವೂ ಶಾಶ್ವತವಾಗಿ ಉಳಿಯುತ್ತದೆ.

೫. ಸಂಕಲ್ಪ

ಅಕ್ಷಯ ತದಿಗೆಯಂದು ನಾವು ಸಂಕಲ್ಪವನ್ನು ಮಾಡೋಣ. ದೇವರ ಮುಂದೆ ಒಂದು ಧಾನ್ಯದ ಕಲಶ ಮತ್ತು ಇನ್ನೊಂದು ನೀರಿನಿಂದ ತುಂಬಿದ ಕಲಶವನ್ನಿಟ್ಟು ಸಮೃದ್ಧಿಗಾಗಿ ಅಕ್ಷಯ ವರದಾನವನ್ನು ಬೇಡೋಣ. ಸುಖ, ಸಮೃದ್ಧಿ, ಆರೋಗ್ಯಕ್ಕಾಗಿ ಭಗವಾನ ವಿಷ್ಣು, ಅನ್ನಪೂರ್ಣೇಶ್ವರಿ ಮತ್ತು ಲಕ್ಷ್ಮಿದೇವಿಯ ಬಳಿ ಪ್ರಾರ್ಥನೆಯನ್ನು ಮಾಡೋಣ.

– ಶ್ರೀ. ದಿಲೀಪ ದೇಶಪಾಂಡೆ, ಜಾಮನೇರ, ಜಳಗಾವ ಜಿಲ್ಲೆ

ಕಾನ್ಹಾದೇಶದ ಅಕ್ಷಯ ತದಿಗೆ

ಕಾನ್ಹಾದೇಶದಲ್ಲಿ ಅಕ್ಷಯ ತದಿಗೆಯ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಅಲ್ಲಿ ಈ ಹಬ್ಬವನ್ನು ‘ಆಖಾಜಿ’ ಎಂದು ಕರೆಯುತ್ತಾರೆ. ತವರು ಮನೆಗೆ ಬಂದ ಹೆಣ್ಣುಮಕ್ಕಳಿಗೆ ಹೋಳಿಗೆ, ಮಾವಿನಹಣ್ಣಿನ ರಸ, ಕಟ್ಟಿನ ಸಾರು ಮತ್ತು ಕೆಲವು ಕಡೆಗಳಲ್ಲಿ ‘ಮಾಂಡಿಗೆ’ (ಹಂಚಿನ ಮೇಲೆ ಮಾಡುವ ದೊಡ್ಡ ಗಾತ್ರದ ಹೋಳಿಗೆ) ಅಡುಗೆಯನ್ನು ಮಾಡಲಾಗುತ್ತದೆ. ಅನೇಕ ಹಳ್ಳಿಗಳಲ್ಲಿ ಮರಗಳಿಗೆ ಉಯ್ಯಾಲೆಗಳನ್ನು ಕಟ್ಟಲಾಗುತ್ತದೆ ಮತ್ತು ಮಹಿಳೆಯರು ಒಟ್ಟಾಗಿ ಸೇರಿ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾರೆ. ಬಾಲ್ಯದ ಗೆಳತಿಯರನ್ನು ಭೇಟಿಯಾಗಿ ಸಂತೋಷವನ್ನು ಹಂಚಿಕೊಳ್ಳುತ್ತಾರೆ. – ಶ್ರೀ. ದಿಲೀಪ ದೇಶಪಾಂಡೆ, ಜಾಮನೇರ, ಜಳಗಾವ ಜಿಲ್ಲೆ, ಮಹಾರಾಷ್ಟ್ರ.