೧೫ ಆಗಸ್ಟ್ ೧೯೪೭ ರಂದು ಏನಾಯಿತು ?

ಆಗಸ್ಟ್ ೧೫ ರಂದು ಇರುವ ಸ್ವಾತಂತ್ರ್ಯ ದಿನದ ನಿಮಿತ್ತ…

ರಾತ್ರಿಯಿಡೀ ನಗರದಲ್ಲಿ ಸುತ್ತಾಡಿ ಸ್ವಾತಂತ್ರ್ಯದ ಆನಂದವನ್ನು ವ್ಯಕ್ತಪಡಿಸುತ್ತಿದ್ದ ಎಲ್ಲರೂ ತಮ್ಮ ತಮ್ಮ ಮನೆಗೆ ತಲುಪಿದ್ದಾರೆ. ಈಗ ಎಲ್ಲರೂ ದಿನಪತ್ರಿಕೆಗಳಿಗಾಗಿ ಕಾಯುತ್ತಿದ್ದರು !

ಈ ಸ್ವಾತಂತ್ರ್ಯ ಸಮಾರಂಭವನ್ನು ಪತ್ರಿಕೆಗಳು ಹೇಗೆ ವರ್ಣಿಸಿರಬಹುದು ? ಎಂಬ ಕಾತುರತೆ ಇತ್ತು. ಆದರೆ ಇಂದು ಪತ್ರಿಕೆಗಳು ಸ್ವಲ್ಪ ತಡವಾಗಿ ಬಂದವು; ಏಕೆಂದರೆ ಪ್ರತಿಯೊಬ್ಬರೂ ಮಧ್ಯರಾತ್ರಿಯ ಸುದ್ದಿಯನ್ನು ಮುದ್ರಿಸಬೇಕಾಗಿತ್ತು. ಪ್ರತಿಯೊಬ್ಬರೂ ಇಂದು ೮ ‘ಕಾಲಂ’ಗಳ (ಸ್ತಂಭಗಳ) ಶೀರ್ಷಿಕೆಯನ್ನು ನೀಡಿದ್ದರು.

೧. ದೆಹಲಿಯ ‘ಹಿಂದುಸ್ಥಾನ್‌ ಟೈಮ್ಸ್‌’ನ ಶೀರ್ಷಿಕೆ ಹೀಗಿತ್ತು, ‘India Independent : British Rule Ends.’
೨. ಕೋಲಕಾತಾದ ‘ಸ್ಟೇಟ್ಸ್‌ಮನ್’ ಶೀರ್ಷಿಕೆ ನೀಡಿತ್ತು, ‘Two Dominions are Born.’
೩. ಮುಂಬೈನ ‘ಟೈಮ್ಸ್ ಆಫ್‌ ಇಂಡಿಯಾ’ ಶೀರ್ಷಿಕೆ ನೀಡಿತ್ತು, ‘Birth of India’s Freedom.’
೪. ಕರಾಚಿಯಿಂದ ಹೊರಡುತ್ತಿದ್ದ ‘ಡಾನ್’ ಬರೆದಿತ್ತು, ‘Birth of Pakistan – an Event in History’
೫. ದೆಹಲಿಯ ‘ಹಿಂದುಸ್ಥಾನ್’ ಬೃಹತ್‌ ಶೀರ್ಷಿಕೆಯನ್ನು ಮುದ್ರಿಸಿತ್ತು, ‘ಶತಾಬ್ದಿಯೊಂಕಿ ದಾಸತಾ ಕೆ ಬಾದ ಭಾರತ ಮೆ ಸ್ವಾತಂತ್ರತಾ ಕೀ ಮಂಗಲ ಪ್ರಭಾತ.’

ಸ್ವಾತಂತ್ರ್ಯ ದಿನಾಚರಣೆಯ ಮುಂಜಾನೆ ಹೀಗಿತ್ತು !

ಶ್ರೀ. ಪ್ರಶಾಂತ ಪೋಳ

ಶ್ರೀ. ಪ್ರಶಾಂತ ಪೋಳಇಂದು ಭಾರತ ನಿದ್ರಿಸಲೇ ಇಲ್ಲ. ದೆಹಲಿ, ಮುಂಬೈ, ಕೋಲಕಾತಾ, ಮದ್ರಾಸ, ಬೆಂಗಳೂರು, ಲಖನೌ, ಇಂದೋರ್, ಪಾಟ್ನಾ, ಬರೋಡಾ, ನಾಗಪುರ ಎಷ್ಟು ಹೆಸರುಗಳನ್ನು ಹೇಳುವುದು ! ಅಕ್ಷರಶಃ ಹಿಂದಿನ ರಾತ್ರಿಯಿಂದಲೇ ದೇಶದ ಮೂಲೆಮೂಲೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ, ನಿನ್ನೆ ಮತ್ತು ಇಂದಿನ ಪಾಕಿಸ್ತಾನದ ನಿರುತ್ಸಾಹ ಮಾತ್ರ ಎದ್ದು ಕಾಣುತ್ತಿತ್ತು.

ದೆಹಲಿಯ ವೈಸ್‌ ರೀಗಲ್‌ ಪ್ಯಾಲೇಸ್‌ನಲ್ಲಿ ಪ್ರಮಾಣವಚನದ ಕಾರ್ಯಕ್ರಮ !

ದೆಹಲಿಯ ‘ವೈಸ್‌ ರೀಗಲ್‌ ಪ್ಯಾಲೇಸ್’ ಹಿಂದಿನ ‘ವೈಸರಾಯ್‌’ಗಳ ನಿವಾಸ ವಾಗಿತ್ತು; ಆದರೆ ಇಂದು ಅದು ‘ಗವರ್ನಮೆಂಟ್‌ ಹೌಸ್’ ಆಗಿದೆ. ಭಾರತದ ಮೊದಲ ಗವರ್ನರ್‌ ಜನರಲ್‌ ಲಾರ್ಡ್ ಮೌಂಟ್‌ ಬ್ಯಾಟನ್‌ ಅಲ್ಲಿಯೇ ಪ್ರಮಾಣ ವಚನ ಸ್ವೀಕರಿಸಲಿದ್ದರು. ಈ ‘ಗವರ್ನಮೆಂಟ್‌ ಹೌಸ್‌’ನ ಭವ್ಯ ಸಭಾಂಗಣ ಇಂದಿನ ಸಂದರ್ಭಕ್ಕಾಗಿ ಸಿದ್ಧವಾಗಿತ್ತು. ೯ ಗಂಟೆಗೆ ಔಪಚಾರಿಕ ಕಾರ್ಯಕ್ರಮ ಪ್ರಾರಂಭವಾಯಿತು. ಬೆಳ್ಳಿಯ ತುತ್ತೂರಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಶಂಖಧ್ವನಿ ಮೊಳಗಿತು. ಹೊಸ ಮುಖ್ಯ ನ್ಯಾಯಾಧೀಶರಾದ ಸರ್‌ ಹರಿಲಾಲ್‌ ಜೈಕಿಶನ್‌ದಾಸ್‌ ಕನಿಯಾ ಅವರ ಎದುರು ಕಟ್ಟುನಿಟ್ಟಾದ ಸಮವಸ್ತ್ರದಲ್ಲಿದ್ದ ಮೌಂಟ್‌ ಬ್ಯಾಟನ್‌ ನಿಂತರು. ಅವರು ‘ಬೈಬಲ್‌’ಗೆ ಮುತ್ತಿಟ್ಟು ಪ್ರಮಾಣ ವಚನ ಉಚ್ಚರಿಸಿದರು. ಈ ಸಮಯದಲ್ಲಿ ವಿವಿಧ ಮಂತ್ರಿಗಳು, ಕಾನ್‌ಸ್ಟಿಟ್ಯೂಯೆಂಟ್‌ (ಮತದಾರ) ಅಸೆಂಬ್ಲಿಯ ಸದಸ್ಯರು ಮತ್ತು ಅಧಿಕಾರಿಗಳಿಂದ ದರ್ಬಾರ್‌ ತುಂಬಿ ಹೋಗಿತ್ತು.

ರಾಷ್ಟ್ರಧ್ವಜದೊಂದಿಗೆ ಭಗವಾ ಧ್ವಜವನ್ನು ಹಾರಿಸಿದ ಕ್ರಾಂತಿವೀರ ವಿನಾಯಕ ದಾಮೋದರ ಸಾವರಕರ !

ಬೆಳಗ್ಗಿನಿಂದ ತಾತ್ಯಾರಾವ್‌ (ವಿನಾಯಕ ದಾಮೋದರ ಸಾವರಕರ್) ಕೊಂಚ ಖಿನ್ನರಾಗಿದ್ದರು. ಅವರು ಏನನ್ನೂ ತಿಂದಿರಲಿಲ್ಲ. ಈ ವಿಭಜಿತ ಭಾರತದ ಭಾವನೆ ಅವರನ್ನು ಆಳವಾಗಿ ನೋಯಿಸಿತ್ತು. ‘ಅತ್ಯಂತ ದುರ್ಬಲ ಜನರ ಕೈಗೆ ನಾವು ದೇಶವನ್ನು ಒಪ್ಪಿಸುತ್ತಿದ್ದೇವೆ’ ಎಂದು ಅವರಿಗೆ ಮನಸಾರೆ ಅನಿಸಿತ್ತು. ಆದರೂ ಸ್ವಾತಂತ್ರ್ಯದ ಆನಂದವಿತ್ತು. ಆ ಸ್ವಾತಂತ್ರ್ಯಕ್ಕಾಗಿ ಎರಡು-ಎರಡು ‘ಕರಿನೀರಿನ’ ಶಿಕ್ಷೆಗಳನ್ನು ಅನುಭವಿಸಿದ್ದರು. ೧೫ ವರ್ಷಗಳ ಕಾಲ ಗೃಹಬಂಧನ ದಲ್ಲಿದ್ದರು. ಸಮುದ್ರದ ಅಗಾಧ ನೀರಿನಲ್ಲಿ ಧುಮುಕಿದ್ದರು. ಅಂಡಮಾನ್‌ನ ಆ ಕತ್ತಲ ಕೋಣೆಯನ್ನು ಸಹಿಸಿದ್ದರು. ಗಾಣ ದಲ್ಲಿ ಎಣ್ಣೆಯನ್ನು ತೆಗೆದಿದ್ದರು… ಹೌದು… ಆ ಸ್ವಾತಂತ್ರ್ಯ… !

ಹಿಂದೂ ಮಹಾಸಭೆಯ ಅನೇಕ ಕಾರ್ಯಕರ್ತರು ತಾತ್ಯಾರಾವ್‌ ಅವರನ್ನು ಭೇಟಿಯಾಗಲು ಬಂದಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಕ್ರಾಂತಿವೀರ ವಿನಾಯಕ ಸಾವರಕರರು ಎರಡು ಧ್ವಜಗಳನ್ನು ಹಾರಿಸಿದರು. ಒಂದು ಭಗವಾ ಧ್ವಜ, ಅಖಂಡ ಹಿಂದುಸ್ಥಾನದ ಪ್ರತೀಕವಾಗಿ ಮತ್ತು ಇನ್ನೊಂದು ಭಾರತದ ರಾಷ್ಟ್ರಧ್ವಜ ತ್ರಿವರ್ಣ ಧ್ವಜ! ಎರಡೂ ಧ್ವಜಗಳಿಗೆ ಪುಷ್ಪಗಳನ್ನು ಅರ್ಪಿಸಿ ತಾತ್ಯಾರಾವ್‌ ಸ್ವಲ್ಪ ಸಮಯ ಸ್ತಬ್ಧವಾಗಿ ನಿಂತರು.

ದೆಹಲಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಮನೋಹರ ದೃಶ್ಯ !

೧೯೪೭ ರ ಆಗಸ್ಟ್ ೧೫ ರಂದು ತೆಗೆದ ಈ ಚಿತ್ರದಲ್ಲಿ ನವ ದೆಹಲಿಯ ‘ರಸೀನಾ ಹಿಲ್’ ಸುತ್ತಲೂ ಭಾರತದ ಸ್ವಾತಂತ್ರ್ಯವನ್ನು ಆಚರಿಸಲು ಜನಸಮೂಹ ಸೇರಿತ್ತು.

ದೆಹಲಿಯ ಇಂಡಿಯಾ ಗೇಟ್‌ ಬಳಿಯ ಮೈದಾನದಲ್ಲಿ ಸಾರ್ವಜನಿಕವಾಗಿ ತ್ರಿವರ್ಣ ಧ್ವಜವನ್ನು ಹಾರಿಸುವ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮೈದಾನ ಕಿಕ್ಕಿರಿದು ತುಂಬಿತ್ತು. ಮಳೆಯಿಂದಾಗಿ ಕೆಲವೆಡೆ ಕೆಸರಿತ್ತು; ಆದರೆ ಜನರಿಗೆ ಏನೂ ಅನಿಸುತ್ತಿರಲಿಲ್ಲ. ಉತ್ಸಾಹ ಉತ್ತುಂಗಕ್ಕೇರಿತ್ತು. ಮಧ್ಯಾಹ್ನ ನಾಲ್ಕುವರೆಗೆ ಜವಾಹರಲಾಲ್‌ ನೆಹರು ತ್ರಿವರ್ಣ ಧ್ವಜ ಹಾರಿಸಿದರು. ಆಗಷ್ಟೇ ಮಳೆ ಬಂದು ಹೋಗಿತ್ತು ಮತ್ತು ತ್ರಿವರ್ಣ ಧ್ವಜವು ಆಕಾಶದಲ್ಲಿ ಮೇಲೆ ಮೇಲೆ ಏರುತ್ತಿದ್ದಂತೆಯೇ ತ್ರಿವರ್ಣ ಧ್ವಜದ ಹಿಂದೆ ಸುಂದರ ಕಾಮನಬಿಲ್ಲು ಕಾಣಿಸಿತು. ಮೌಂಟ್‌ ಬ್ಯಾಟನ್‌ ಈ ದೃಶ್ಯವನ್ನು ದಿಟ್ಟಿಸಿ ನೋಡುತ್ತಲೇ ಇದ್ದರು.

೧. ಹಿಂದೂ-ಮುಸಲ್ಮಾನ ಉದ್ವಿಗ್ನತೆ ಇಲ್ಲದಿರುವುದು

ಕೋಲಕಾತಾ ನಗರವೂ ರಾತ್ರಿಯಿಡೀ ಎಚ್ಚರವಾಗಿತ್ತು. ಜನರು ಸ್ವಾತಂತ್ರ್ಯವನ್ನು ಪೂರ್ಣವಾಗಿ ಅನುಭವಿಸಬೇಕೆಂದು ಬಯಸಿದ್ದರು; ಆದರೆ ನಗರದಲ್ಲಿ ದೊಡ್ಡದಾದ ವಿಚಿತ್ರ ಬದಲಾವಣೆ ಕಂಡುಬರುತ್ತಿತ್ತು. ಎಲ್ಲೆಲ್ಲೂ ‘ಹಿಂದೂ-ಮುಸಲ್ಮಾನ’ ಉದ್ವಿಗ್ನತೆಯ ಸುಳಿವೇ ಇರಲಿಲ್ಲ. ಕೇವಲ ೨-೩ ದಿನಗಳ ಹಿಂದೆ ಪರಸ್ಪರ ಕತ್ತು ಕೊಯ್ಯಲು ಮುಂದಾಗಿದ್ದ ಹಿಂದೂ ಮತ್ತು ಮುಸಲ್ಮಾನರು ಈಗ ಪರಸ್ಪರ ಅಪ್ಪಿಕೊಂಡು ತಿರುಗುತ್ತಿದ್ದರು.

೨. ಸಿಂಗಾಪುರದಲ್ಲಿ ಸ್ವಾತಂತ್ರ್ಯಾನಂತರದ ಮೊದಲ ದಿನ !

ಭಾರತದಲ್ಲಿ ಬೆಳಗ್ಗೆ ೮.೩೦ ಆಗಿದ್ದರೆ, ಸಿಂಗಾಪುರದಲ್ಲಿ ಬೆಳಿಗ್ಗೆ ೧೧ ಆಗಿತ್ತು. ಆರ್ಚರ್‌ ರೋಡ್, ವಾಟರ್‌ ಲೂ ಸ್ಟ್ರೀಟ್, ಸೆರಂಗೂನ್‌ ರೋಡ್‌ಗಳಲ್ಲಿ ಭಾರತೀಯ ಸಮುದಾಯವು ಭಾರತದ ಸ್ವಾತಂತ್ರ್ಯದ ನಿಮಿತ್ತ ಧ್ವಜವಂದನ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಈ ವೇಳೆ ರಾಷ್ಟ್ರಗೀತೆ ಯಾವುದು ಎಂಬ ಗೊಂದಲವಿತ್ತು; ಆದ್ದರಿಂದ ಸಿಂಗಾಪುರದ ಭಾರತೀಯರು ಈ ಮುಂದಿನ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡಲು ಪ್ರಾರಂಭಿಸಿದರು.

ಸುಧಾ, ಸುಖ ಚೈನ್‌ ಕೀ ಬರಖಾ ಬರ್ಸೇ ಭಾರತ ಭಾಗ್‌ ಹೇ ಜಾಗಾ |
ಪಂಜಾಬ್, ಅವಧ, ಗುಜರಾತ, ಮರಾಠಾ ದ್ರವಿಡ್, ಉತ್ಕಲ್, ಬಂಗಾ |
ಚಂಚಲ ಸಾಗರ, ವಿಂಧ ಹಿಮಾಲಾ |
ನೀಲಾ ಜಮುನಾ ಗಂಗಾ ತೇರೆ ನಿತ್‌ ಗುಣ ಗಾಯೆ |
ತುಝಸೆ ಜೀವನ ಪಾಯೇ ಸಬ್‌ ತನ್‌ ಪಾಯೇ ಆಶಾ |
ಸೂರಾಜ್‌ ಬನಕರ್‌ ಜಗ್‌ ಪರ್‌ ಚಮಕೇ ಭಾರತ ಭಾಗ್‌ ಹೇ ಜಾಗಾ ||
ಜಯ ಹೋ, ಜಯ ಹೋ, ಜಯ ಹೋ, ಜಯ ಜಯ ಜಯ ಜಯ ಹೋ ||

೩. ಗಾಂಧಿಯವರು, ‘ನನ್ನ ಬಳಿ ಯಾವುದೇ ಸಂದೇಶವಿಲ್ಲ’ ಎಂದು ಮಾಧ್ಯಮಗಳಿಗೆ ಹೇಳುವುದು

ಬೆಳಿಗ್ಗೆ ೯ ಗಂಟೆಗೆ ಭಾರತ ಸರಕಾರದ ‘ಮಾಹಿತಿ ಮತ್ತು ಪ್ರಸಾರ ಸಚಿವಾಲಯ’ದ ಅಧಿಕಾರಿಗಳು ತಮ್ಮ ಉಪಕರಣಗಳೊಂದಿಗೆ ಗಾಂಧೀಜಿಯವರ ಪ್ರತಿಕ್ರಿಯೆ ಪಡೆಯಲು ಬಂದಿದ್ದರು; ಆದರೆ ಅವರ ಉತ್ತರ ನಿರಾಸಕ್ತಿಯದ್ದಾಗಿತ್ತು.ಅವರು ಹೇಳಿದರು, ‘ನನ್ನ ಬಳಿ ಹೇಳಲು ಏನೂ ಇಲ್ಲ.’ ಪುನಃ ಅವರಿಗೆ ಒತ್ತಾಯಿಸಿದಾಗಲೂ ಅವರ ಉತ್ತರ ಅದೇ, ‘ನನ್ನ ಬಳಿ ಯಾವುದೇ ಸಂದೇಶವಿಲ್ಲ. ಇದು ಸರಿ ಅನಿಸದಿದ್ದರೂ ಅದು ಹಾಗೆ !’ ಸ್ವಲ್ಪ ಸಮಯದ ನಂತರ ಬಿಬಿಸಿಯ ಪ್ರತಿನಿಧಿಗಳಿಗೂ ಅವರು ಅದೇ ಉತ್ತರವನ್ನು ನೀಡಿದರು. ವಾಸ್ತವವಾಗಿ, ಅವರ ಪ್ರಸಾರಣ ಜಗತ್ತಿನಾದ್ಯಂತ ಕೇಳಲಿಕ್ಕಿತ್ತು.

೪. ಗಾಂಧೀಜಿ ಬರೆದ ಪತ್ರಗಳು !

ಬೆಳಿಗ್ಗೆ ೮ ಗಂಟೆಗೆ ಗಾಂಧೀಜಿಯವರು ತಮ್ಮ ಬ್ರಿಟಿಷ್‌ ಸ್ನೇಹಿತೆ ಮಿಸ್‌ ಅಗಾಥಾ ಹ್ಯಾರಿಸನ್‌ಗೆ ನೂಲಿನ ಚರಕ ತಿರುಗಿಸುತ್ತಾ ಪತ್ರ ಬರೆದರು. ಅದರಲ್ಲಿ ಅವರು ತಮಾಷೆಯಾಗಿ ಬರೆದಿದ್ದರು, ರಾಜಾಜಿ (ರಾಜಪಾಲ ರಾಜಗೋಪಾಲಾಚಾರಿ) ಮೂಲಕ ಕಳುಹಿಸಿದ ಪತ್ರ ನನಗೆ ಸಿಕ್ಕಿತು. ರಾಜಾಜಿಯವರಿಗೆ ಅದನ್ನು ಸ್ವತಃ ಬಂದು ಕೊಡಲು ಖಂಡಿತ ಸಾಧ್ಯವಿರಲಿಲ್ಲ; ಏಕೆಂದರೆ ನಿನ್ನೆಯಿಂದಲೇ ಅವರ ಗವರ್ನರ್‌ ಹೌಸ್‌ಗೆ ಜನಸಾಮಾನ್ಯರು ಬ್ರಿಟಿಷರ ಮನೆಯನ್ನು ನೋಡಲು ಬಂದಿದ್ದಾರೆ. ಅನಂತರ ಗಾಂಧೀಜಿಯವರು ಬಂಗಾಲದ ನೂತನ ಮಂತ್ರಿಗಳಿಗೆ ಪತ್ರ ಬರೆದರು. ಇದರಲ್ಲಿ ಪ್ರಮುಖವಾಗಿ ಅವರು ತಮ್ಮ ನೆಚ್ಚಿನ ತತ್ತ್ವಗಳಾದ ‘ಸತ್ಯ, ಅಹಿಂಸೆ ಮತ್ತು ನಮ್ರತೆ’ಯನ್ನು ಪಾಲಿಸುವಂತೆ ಒತ್ತಾಯಿಸಿದರು. ಅಧಿಕಾರದ ಬಗ್ಗೆ ಗಾಂಧೀಜಿ ಯವರು ಎಚ್ಚರಿಕೆ ನೀಡುತ್ತಾ ಹೇಳಿದರು, ‘ನೆನಪಿಡಿ, ಅಧಿಕಾರ ಭ್ರಷ್ಟಗೊಳಿಸುತ್ತದೆ. ಮರೆಯಬೇಡಿ, ನೀವು ಬಡವರಿಗೆ ಸೇವೆ ಮಾಡಲು ಇಲ್ಲಿಗೆ ಬಂದಿದ್ದೀರಿ.’

೫. ಬಂಗಾಲದ ನೂತನ ಗವರ್ನರ್‌ ಮತ್ತು ಗಾಂಧಿಯವರ ಭೇಟಿ

ಬೆಳಿಗ್ಗೆ ೧೦ ಗಂಟೆಗೆ ಬಂಗಾಲದ ನೂತನ ಗವರ್ನರ್‌ ಚಕ್ರವರ್ತಿ ರಾಜಗೋಪಾಲಾಚಾರಿ ಗಾಂಧೀಜಿಯವರನ್ನು ಭೇಟಿಯಾಗಲು ಬಂದರು. ಭೇಟಿಯಾದ ತಕ್ಷಣ ರಾಜಾಜಿಯವರು, ‘ಬಾಪು, ಅಭಿನಂದನೆಗಳು ! ನೀವು ಕೋಲಕಾತಾದಲ್ಲಿ ಅಕ್ಷರಶಃ ಜಾದೂ ಮಾಡಿದ್ದೀರಿ’ ಎಂದರು. ಇದಕ್ಕೆ ಗಾಂಧೀಜಿ, ”ನನಗೆ ತೃಪ್ತಿಯಿಲ್ಲ. ಆ ಗಲಭೆಗಳಿಂದ ನೊಂದವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವವರೆಗೂ ‘ಏನೋ ಆಗಿದೆ’ ಎಂದೆಸುವುದಿಲ್ಲ” ಎಂದರು.

೬. ಸ್ವಾತಂತ್ರ್ಯದ ನಂತರದ ಮೊದಲ ದಿನ ದೆಹಲಿಯಲ್ಲಿ ಆನಂದ, ಕುತೂಹಲ ಮಿಶ್ರ ಭಾವನೆ ಇರುವುದು

ಬೆಳಗ್ಗೆ ೧೦.೩೦ ಕ್ಕೆ ಭಾರತದ ರಾಷ್ಟ್ರಧ್ವಜವಾಗಿ ‘ಅಶೋಕ ಚಕ್ರಾಂಕಿತ ತ್ರಿವರ್ಣ ಧ್ವಜ’ವನ್ನು ಹಾರಿಸುವ ಅಧಿಕೃತ ಸರಕಾರಿ ಕಾರ್ಯಕ್ರಮವಿತ್ತು. ‘ವೈಸ್‌ ರೀಗಲ್‌ ಪ್ಯಾಲೇಸ್‌’ನಿಂದ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಮಂತ್ರಿಗಳು, ಹಿರಿಯ ಅಧಿಕಾರಿಗಳು ಮತ್ತು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಕೌನ್ಸಿಲ್‌ ಹೌಸ್‌ ಕಡೆಗೆ ಬರುತ್ತಿದ್ದರು. ಕಾರ್ಯಕ್ರಮ ಸರಳವಾಗಿತ್ತು. ಗುಡ್ಡದ ಮೇಲೆ ಇರುವ ಗೋಲಾಕಾರದ ಕೌನ್ಸಿಲ್‌ ಹೌಸ್‌ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅವರೆಲ್ಲರೂ ಸ್ವತಂತ್ರ ಭಾರತದ ನಾಗರಿಕರಾಗಿದ್ದರು ! ಬ್ರಿಟಿಷರ ಕಾಲದಲ್ಲಿ ಸಾಮಾನ್ಯ ಭಾರತೀಯರಿಗೆ ಇಲ್ಲಿ ಪ್ರವೇಶವಿರಲಿಲ್ಲ. ಆದರೆ ಈಗ ಹಾಗಲ್ಲ; ಆದ್ದರಿಂದ ಆನಂದ, ಕುತೂಹಲ, ಉತ್ಸಾಹ, ಸಂಭ್ರಮ ಈ ಎಲ್ಲ ಭಾವನೆಗಳ ಮಿಶ್ರ ಗೊಂದಲದಲ್ಲಿ ಈ ಜನರು ‘ವಂದೇ ಮಾತರಂ’ ಘೋಷಣೆಗಳನ್ನು ಕೂಗುತ್ತಿದ್ದರು. ಏನು ಮಾಡಲಿ, ಏನು ಬೇಡ ಎಂದು ಅವರಿಗೆ ತೋರುತ್ತಿರಲಿಲ್ಲ. ಅಷ್ಟರಲ್ಲಿ ಜವಾಹರಲಾಲ್‌ ನೆಹರು ಬಂದರು. ಅವರೊಂದಿಗೆ ಮಂತ್ರಿಮಂಡಲದ ಸಹೋದ್ಯೋಗಿಗಳೂ ಇದ್ದರು. ಎಡ್ವಿನ್‌ ಲೂಟಿಯನ್ಸ್ ಮತ್ತು ಹರ್ಬರ್ಟ್ ಬೇಕರ್‌ ನಿರ್ಮಿಸಿದ ಗುಡ್ಡದ ಮೇಲಿನ ಈ ಕೌನ್ಸಿಲ್‌ ಸಭಾಂಗಣದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿತ್ತು. ರಾಷ್ಟ್ರಗೀತೆ ಇನ್ನೂ ನಿರ್ಧಾರವಾಗಿರದ ಕಾರಣ ಜನರ ‘ವಂದೇ ಮಾತರಂ’ ಘೋಷಣೆಯು ಮುಗಿಲು ಮುಟ್ಟಿತು.

೭. ಪಂಜಾಬ್‌ನಲ್ಲಿ ಹಿಂದೂ-ಸಿಕ್ಖ್‌ರು ಮುಸಲ್ಮಾನರ ದಾಳಿಗಳಿಗೆ ಹೆದರಿ ಮನೆಮಠ ತೊರೆದು ಪಲಾಯನ ಮಾಡುವುದು !

ಲಾಹೋರ್‌ನ ಡಿ.ಎ.ವಿ. ಕಾಲೇಜು ಆವರಣ ಮತ್ತು ಹಾಸ್ಟೆಲ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ನಡೆಸುತ್ತಿದ್ದ ‘ಪಂಜಾಬ್‌ ಸಹಾಯತಾ ಸಮಿತಿ’ಯ ನಿರಾಶ್ರಿತರ ಶಿಬಿರವಿತ್ತು. ‘ಲಾಹೋರ್‌ ಮೆಡಿಕಲ್‌ ಕಾಲೇಜ್‌’ನ ಸ್ವಯಂಸೇವಕ ವೈದ್ಯರು, ವಿದ್ಯಾರ್ಥಿಗಳು, ಮಹಿಳಾ ವೈದ್ಯರು ಮತ್ತು ದಾದಿಯರು ೨೦ ಹಾಸಿಗೆಗಳ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಪಶ್ಚಿಮ ಪಂಜಾಬ್‌ನಿಂದ ಹಿಂದೂ ಮತ್ತು ಸಿಕ್ಖ್‌ರು ತಮ್ಮ ಮನೆ, ಸಂಸಾರ, ಕೃಷಿ ಭೂಮಿ, ಅಂಗಡಿಗಳು, ಕಾರ್ಖಾನೆಗಳನ್ನು ಬಿಟ್ಟು, ಎಲ್ಲವನ್ನೂ ಕಳೆದುಕೊಂಡ ಸ್ಥಿತಿಯಲ್ಲಿ ಶಿಬಿರಗಳನ್ನು ತಲುಪುತ್ತಿದ್ದರು. ರಾತ್ರಿಯಿಂದ ಇಡೀ ಹಿಂದುಸ್ಥಾನ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದರೂ, ಪಶ್ಚಿಮ ಪಂಜಾಬ್‌ನಲ್ಲಿ ಪರಿಸ್ಥಿತಿ ಬಹಳ ಭಯಾನಕವಾಗಿತ್ತು. ಹಿಂದೂ-ಸಿಕ್ಖ್‌ರ ಅನೇಕ ತಂಡಗಳು ಹೇಗೋ ತಮ್ಮ ಜೀವ ಉಳಿಸಿಕೊಂಡು ಶಿಬಿರಗಳನ್ನು ತಲುಪುತ್ತಿದ್ದವು. ಅವರೆಲ್ಲರ ಕಥೆಗಳು ಅಕ್ಷರಶಃ ಮನಸ್ಸನ್ನು ಕಲಕುವ ಮತ್ತು ಭಾರಿ ಆಕ್ರೋಶ ಮೂಡಿಸುವಂತಿದ್ದವು. ಅನೇಕರ ಸಹೋದರಿಯರು-ಹೆಂಡತಿಯರನ್ನು ಮುಸಲ್ಮಾನ ಗೂಂಡಾಗಳು ಎತ್ತಿಕೊಂಡು ಹೋಗಿದ್ದರು, ಇನ್ನು ಕೆಲವರ ಹೆಂಡತಿಯರು ಬಾವಿಗಳಿಗೆ ಹಾರಿದ್ದರು.

೮. ಮುಸಲ್ಮಾನರನ್ನು ಸುರಕ್ಷಿತವಾಗಿಡಲು ಗಾಂಧಿಯವರು ಮಂತ್ರಿಮಂಡಲಕ್ಕೆ ಪತ್ರ ಬರೆಯುತ್ತಿರುವಾಗಲೇ, ಮುಸಲ್ಮಾನ ಗೂಂಡಾಗಳು ಸಂಘದ ಸ್ವಯಂಸೇವಕನನ್ನು ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಕೊಲ್ಲುವುದು

ಪ್ರತಿದಿನ ಮಧ್ಯಾಹ್ನ ೧.೩೦ ಕ್ಕೆ ಕುಲವಂತ್‌ ಸಿಂಗ್‌ ಲಾಹೋರ್‌ನ ಈ ಆಸ್ಪತ್ರೆಯಲ್ಲಿರುವ ರೋಗಿಗಳು, ಆಧುನಿಕ ವೈದ್ಯರು, ದಾದಿಯರಿಗಾಗಿ ಊಟದ ಡಬ್ಬಿ ತರುತ್ತಿದ್ದರು. ಈ ಊಟವನ್ನು ಲಾಹೋರ್‌ನ ‘ಭಾಟಿ ಗೇಟ್’ ಎಂಬ ಹಿಂದೂ ಪ್ರದೇಶದಲ್ಲಿ ಸಂಘದ ಕೆಲವು ಸ್ವಯಂಸೇವಕರು ತಯಾರಿಸುತ್ತಿದ್ದರು; ಆದರೆ ೩-೪ ದಿನಗಳಿಂದ ಅದು ಸಹ ಕಷ್ಟಕರವಾಗಿತ್ತು. ಒಮ್ಮೆ ‘೨.೩೦ ಆದರೂ ಕುಲವಂತ್‌ ಸಿಂಗ್‌ ಏಕೆ ಬಂದಿಲ್ಲ ?’ ಎಂದು ಅವನನ್ನು ನೋಡಲು ದೀನದಯಾಳ ಎಂಬ ಸ್ವಯಂಸೇವಕ ಹೋದನು. ದೀನದಯಾಳ ಸಂಘದ ಒಂದು ಭಾಗದ ಕಾರ್ಯವಾಹಕರಾಗಿದ್ದರು. ಅರ್ಧ ದಾರಿಯಲ್ಲಿ ಹೋಗುತ್ತಿದ್ದಂತೆ, ಸಾರ್ವಜನಿಕ ರಸ್ತೆಯಲ್ಲಿ ಕುಲವಂತ್‌ ಸಿಂಗ್‌ ರಕ್ತದ ಮಡುವಿನಲ್ಲಿ ಬಿದ್ದಿರುವುದು ಅವನಿಗೆ ಕಾಣಿಸಿತು. ಪಕ್ಕದಲ್ಲಿಯೇ ಅವನ ದ್ವಿಚಕ್ರ ವಾಹನ ಅಡ್ಡವಾಗಿ ಬಿದ್ದಿತ್ತು ಮತ್ತು ಅದಕ್ಕೆ ಕಟ್ಟಿದ ಡಬ್ಬಿಗಳಿಂದ ತರಕಾರಿ ಸಾರು ಅವನ ಹರಡಿದ ರಕ್ತದಲ್ಲಿ ಬೆರೆಯುತ್ತಿತ್ತು.

ದೆಹಲಿಯಲ್ಲಿ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿದ್ದಾಗ, ಕೋಲಕಾತಾದ ಬೇಲಿಯಾಘಾಟ್‌ನಲ್ಲಿ ಗಾಂಧೀಜಿಯವರು ‘ಮುಸಲ್ಮಾನರನ್ನು ಸುರಕ್ಷಿತವಾಗಿ ಇಡಿ’ ಎಂದು ಮಂತ್ರಿಮಂಡಲಕ್ಕೆ ಪತ್ರ ಬರೆಯುತ್ತಿದ್ದರು; ಆದರೆ ಅದೇ ಸಮಯದಲ್ಲಿ ಲಾಹೋರ್‌ನಲ್ಲಿ ಗಾಯಗೊಂಡ ಹಿಂದೂ-ಸಿಕ್ಖ್ ರೋಗಿಗಳಿಗೆ ಊಟ ತಲುಪಿಸುತ್ತಿದ್ದ ಸಂಘ ಸ್ವಯಂಸೇವಕನನ್ನು ಮುಸಲ್ಮಾನ ಗೂಂಡಾಗಳು ಚಾಕುವಿನಿಂದ ಇರಿದು ಕೊಂದಿದ್ದರು.

೯. ಸ್ವಾತಂತ್ರ್ಯದ ಸಮಯದಲ್ಲಿ ಅನೇಕ ಕಡೆ ಹಿಂದೂಗಳ ಮೇಲೆ ದಾಳಿಗಳಾಗಿದ್ದರೂ ಮುಸಲ್ಮಾನರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ ಮುಸಲ್ಮಾನಪ್ರೇಮಿ ಗಾಂಧಿ !

ಕೋಲಕಾತಾದ (ಬೇಲಿಯಾಘಾಟ್) ರಾಶ್‌ ಬಾಗಾನ್‌ ಮೈದಾನದಲ್ಲಿ ಸಂಜೆ ೫.೩೦ ಕ್ಕೆ ಗಾಂಧಿಯವರ ಅಂದಿನ ಸಂಜೆಯ ಪ್ರಾರ್ಥನೆಯನ್ನು ಆಯೋಜಿಸಲಾಗಿತ್ತು. ಇದು ಸ್ವತಂತ್ರ ಭಾರತದಲ್ಲಿ ಗಾಂಧಿಯವರ ಮೊದಲ ಸಂಜೆ ಪ್ರಾರ್ಥನೆಯಾಗಿತ್ತು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆಯಿತ್ತು. ‘ಕಾಲ್ನಡಿಗೆಯಲ್ಲಿ ಮೈದಾನಕ್ಕೆ ಹೋಗುವೆ’ ಎಂದು ಗಾಂಧಿಯವರ ಹಠವಿತ್ತು. ೩೦ ಸಾವಿರ ಜನರು ಮೈದಾನವನ್ನು ಕಿಕ್ಕಿರಿದು ತುಂಬಿದ್ದರು. ಆದ್ದರಿಂದ ಗಾಂಧಿಯವರಿಗೆ ಮೈದಾನದಲ್ಲಿನ ವೇದಿಕೆಯನ್ನು ತಲುಪಲು ೨೦ ನಿಮಿಷ ಬೇಕಾಯಿತು.

ಪ್ರಾರ್ಥನೆ ಮತ್ತು ಸ್ವಲ್ಪ ನೂಲು ಚರಕದ ನಂತರ ಗಾಂಧಿಯವರು ಮಾತನಾಡಲು ಪ್ರಾರಂಭಿಸಿದರು, ‘ನಿನ್ನೆ ನಾನು ಏನು ಹೇಳಿದೆನೋ ಅದನ್ನೇ ಮತ್ತೆ ಹೇಳುತ್ತೇನೆ. ನಿಮಗೆ, ಕೋಲಕಾತಾ ನಿವಾಸಿ ಹಿಂದೂ-ಮುಸಲ್ಮಾನರಿಗೆ ಅಭಿನಂದನೆಗಳು ! ನೀವು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದೀರಿ. ಈಗ ಮುಸಲ್ಮಾನರಿಗೆ ದೇವಾಲಯಗಳಲ್ಲಿ ಪ್ರವೇಶ ನೀಡಿ ಮತ್ತು ಹಿಂದೂಗಳಿಗೆ ಮಸೀದಿಗಳಲ್ಲಿ ಪ್ರವೇಶ ನೀಡಿ ಅಂದರೆ ಈ ಐಕ್ಯತೆ ಇನ್ನಷ್ಟು ಬಲಗೊಳ್ಳುತ್ತದೆ. ನಾನು ಕೆಲವು ಕಡೆ ಮುಸಲ್ಮಾನರಿಗೆ ತೊಂದರೆ ಯಾಗಿರುವ ಸುದ್ದಿಗಳನ್ನು ಕೇಳುತ್ತಿದ್ದೇನೆ. ನೆನಪಿಡಿ, ಕೋಲಕಾತಾ ಮತ್ತು ಹೌರಾದಲ್ಲಿ ಒಬ್ಬ ಮುಸಲ್ಮಾನನಿಗೂ ತೊಂದರೆಯಾಗಬಾರದು.’

ಗಾಂಧೀಜಿಯವರು ಹಿಂದಿನ ಮಧ್ಯರಾತ್ರಿ ರಾಜಭವನದಲ್ಲಿ ನಡೆದ ಒಂದು ಪ್ರಸಂಗವನ್ನು ಉಲ್ಲೇಖಿಸಿದರು. ಅವರು ಹೇಳಿದರು, ”ಕೆಲವು ಜನರಿಗೆ ಅನಿಸುತ್ತದೆ, ಸ್ವಾತಂತ್ರ್ಯ ದೊರೆತರೆ ನಮ್ಮ ಮೇಲಿನ ಎಲ್ಲ ನಿರ್ಬಂಧಗಳು ಮುಗಿದವು. ನಾವು ಹೇಗೆ ಬೇಕಾದರೂ ವರ್ತಿಸಬಹುದು; ಆದರೆ ಇದು ಸರಿಯಲ್ಲ. ಮುಂಜಾನೆ ರಾಜಭವನದಲ್ಲಿ ನಡೆದದ್ದು ಬಹಳ ದುರದೃಷ್ಟಕರವಾಗಿತ್ತು. ನಾವೆಲ್ಲರೂ ಈ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಭಾರತದಲ್ಲಿಯೇ ಉಳಿಯುವ ಯುರೋಪಿಯನ್ನರೊಂದಿಗೆ, ನಾವು ಅವರಿಂದ ಏನನ್ನು ನಿರೀಕ್ಷಿಸುತ್ತಿದ್ದೆವೋ ಅದೇ ರೀತಿಯಲ್ಲಿ ವರ್ತಿಸಬೇಕು.”
೧೦. ಸ್ವಾತಂತ್ರ್ಯದ ನಂತರ ದೊಡ್ಡ ಸವಾಲುಗಳನ್ನು ಎದುರಿಸಲು ದೂರದೃಷ್ಟಿಯ ನಾಯಕತ್ವದ ಅವಶ್ಯಕತೆ ಇತ್ತು !

ಅನೇಕ ವರ್ಷಗಳ ಅಂಧಃಕಾರವನ್ನು ಕೊನೆಗೊಳಿಸಿ ದೇಶ ಮತ್ತೆ ಸ್ವತಂತ್ರವಾಗಿತ್ತು. ಹಿಂದಿನ ಅನೇಕ ತಲೆಮಾರುಗಳ ಗುಲಾಮಗಿರಿಯಿಂದ ಗಟ್ಟಿಯಾಗಿದ್ದ ಮನಸ್ಥಿತಿಯನ್ನು ಬದಲಾಯಿಸುವುದು ದೊಡ್ಡ ಸವಾಲಾಗಿತ್ತು. ವಿಭಜನೆಯಾಗಿದೆ; ಆದರೆ ಅದು ಯಾವುದೇ ಮಾನದಂಡಗಳ ಆಧಾರದ ಮೇಲೆ ಇಲ್ಲ. ‘ಮೊಹಮ್ಮದ್‌ ಅಲಿ ಜಿನ್ನಾ ಮುಸಲ್ಮಾನರಿಗಾಗಿ ಪಾಕಿಸ್ತಾನವನ್ನು ನಿರ್ಮಿಸಿದರು’ ಎಂದರೆ, ಹೊಸದಾಗಿ ನಿರ್ಮಾಣವಾದ ಪಾಕಿಸ್ತಾನಕ್ಕಿಂತ ಹೆಚ್ಚು ಮುಸಲ್ಮಾನರು ಭಾರತದಲ್ಲಿದ್ದಾರೆ. ಅಂಬೇಡ್ಕರ್‌ ಒತ್ತಾಯಿಸಿದ ಜನಸಂಖ್ಯೆಯ ವಿನಿಮಯ ಯೋಜನೆಯನ್ನು ಸಹ ಕಾಂಗ್ರೆಸ್‌ ತಿರಸ್ಕರಿಸಿತು. ದೇಶದ ಅನೇಕ ಭಾಗಗಳಲ್ಲಿ ಕೋಮುದ್ವೇಷದ ಅಕ್ಷರಶಃ ಕಾಡ್ಗಿಚ್ಚು ಹತ್ತಿಕೊಂಡಿತ್ತು.

ಕಾಶ್ಮೀರದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ದೊಡ್ಡ ಭೂಭಾಗವಿರುವ ನಿಜಾಮನ ಸಂಸ್ಥಾನ ಇಂದಿಗೂ ಹಿಂದುಸ್ಥಾನ ದಲ್ಲಿ ಸೇರ್ಪಡೆಯಾಗಿಲ್ಲ ಮತ್ತು ಅದು ಹಿಂದೂಗಳನ್ನು ಹಿಂಸಿಸುತ್ತಿದೆ. ಗೋವಾ ಪೋರ್ಚುಗೀಸರ ಪಾರತಂತ್ರದಲ್ಲಿತ್ತು. ಪಾಂಡಿಚೇರಿ, ಚಂದನಗರ ಹಿಂದುಸ್ಥಾನಕ್ಕೆ ಸೇರಿಲ್ಲ. ನೆಹರು ಅವರ ಹಠದಿಂದಾಗಿ ‘ನಾರ್ತ್ ವೆಸ್ಟ್ ಫ್ರಾಂಟಿಯರ್‌ ಪ್ರಾವಿನ್ಸ್‌’ ಅನ್ನು ನಾವು ಕಳೆದುಕೊಂಡಿದ್ದೇವೆ. ಇಂದು ಸ್ವಾತಂತ್ರ್ಯವನ್ನು ಸ್ವಾಗತಿಸುತ್ತಿರುವಾಗ ಈ ಚಿತ್ರಣವನ್ನು ನೋಡಿದರೆ ಎದೆ ನಡುಗುತ್ತದೆ. ಇವೆಲ್ಲದರಿಂದ ರಕ್ಷಣಾ ದೃಷ್ಟಿಯಿಂದ, ಯುದ್ಧದ ದೃಷ್ಟಿಯಿಂದ ನಾವು ಬಹಳ ದುರ್ಬಲರಾಗಿದ್ದೇವೆ. ನಾಯಕತ್ವದ ದೌರ್ಬಲ್ಯ ಮತ್ತು ದೂರದೃಷ್ಟಿಯ ಕೊರತೆಯಿಂದ ದೇಶದ ಭವಿಷ್ಯದ ಮುಂದೆ ಪ್ರಶ್ನಾರ್ಥಕ ಚಿಹ್ನೆ ನಿಂತಿದೆ. ಬಲಿಷ್ಠ, ಸಮರ್ಥ ಮತ್ತು ದೂರದೃಷ್ಟಿಯ ನಾಯಕತ್ವದ ಕೈಗೆ ದೇಶವನ್ನು ಒಪ್ಪಿಸಿದರೆ ಮಾತ್ರ ಈ ದೇಶದ ಭವಿಷ್ಯ ಉಜ್ವಲವಾಗುತ್ತದೆ, ಇದು ಖಂಡಿತ !

– ಶ್ರೀ. ಪ್ರಶಾಂತ ಪೋಳ, ರಾಷ್ಟ್ರಚಿಂತಕ, ಇಂಜಿನಿಯರ್‌ ಮತ್ತು ಲೇಖಕ, ಜಬಲಪುರ, ಮಧ್ಯಪ್ರದೇಶ.

(ಸೌಜನ್ಯ: ‘ತೆ ಪಂಧ್ರಾ ದಿವಸ (ಮರಾಠಿ)’ ಪುಸ್ತಕದಿಂದ)