ಕಾಶ್ಮೀರದಲ್ಲಿ ಸೈನ್ಯ ಗೆಲ್ಲುತ್ತಿದ್ದಾಗ ನೆಹರೂ ಏಕಪಕ್ಷೀಯ ಕದನವಿರಾಮ ಘೋಷಿಸಿದರು!

ಭಾರತದ ಸೇನೆ ಉತ್ತಮ ಸ್ಥಿತಿಯಲ್ಲಿದ್ದರೇ ಯುದ್ಧವೇಕೆ ಮಾಡಲಿಲ್ಲ? – ಕಾಂಗ್ರೆಸ್ ಪ್ರಶ್ನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಪ್ರತ್ಯುತ್ತರ

ನವದೆಹಲಿ – ಯುದ್ಧದ ಅನೇಕ ಪರಿಣಾಮಗಳಿರುತ್ತವೆ. ಕೇವಲ ಪರಿಸ್ಥಿತಿ ಉತ್ತಮವಾಗಿದೆ ಎಂದ ಮಾತ್ರಕ್ಕೆ ಯುದ್ಧ ಮಾಡಬೇಕೆಂದಿಲ್ಲ. ಜವಾಬ್ದಾರಿಯುತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. 1948 ರಲ್ಲಿ ಭಾರತೀಯ ಸೇನೆ ಉತ್ತಮ ಸ್ಥಿತಿಯಲ್ಲಿತ್ತು. ಸರ್ದಾರ್ ಪಟೇಲರು ನಿರಂತರ ವಿರೋಧ ವ್ಯಕ್ತಪಡಿಸಿದ್ದರೂ, ನೆಹರೂ ಏಕಪಕ್ಷೀಯ ಕದನವಿರಾಮ ಘೋಷಿಸಿದರು. ಅದಕ್ಕಾಗಿಯೇ ಇಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಸ್ತಿತ್ವದಲ್ಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ‘ಆಪರೇಷನ್ ಸಿಂಧೂರ್’ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಕಾಂಗ್ರೆಸ್ ಆರೋಪಗಳಿಗೆ ಉತ್ತರಿಸುತ್ತಾ ಹೇಳಿದರು. ಕಾಂಗ್ರೆಸ್ ಸಂಸದ ಗೌರವ ಗೊಗೋಯ್ ಅವರು ತಮ್ಮ ಭಾಷಣದಲ್ಲಿ ‘ನಮ್ಮ ಸೇನೆ ಉತ್ತಮ ಸ್ಥಿತಿಯಲ್ಲಿದ್ದಾಗ, ಯುದ್ಧವೇಕೆ ಮಾಡಲಿಲ್ಲ?’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಶಾ ಅವರು ಮೇಲಿನ ಉತ್ತರ ನೀಡಿದರು.

ಕಾಂಗ್ರೆಸನಿಂದಾಗಿಯೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದಲ್ಲಿಲ್ಲ!

ಅಮಿತ್ ಶಾ ಅವರು ಮಾತು ಮುಂದುವರೆಸುತ್ತಾ, ನಾನು ಇತಿಹಾಸದ ವಿದ್ಯಾರ್ಥಿ, ಜವಾಬ್ದಾರಿಯಿಂದ ಹೇಳುತ್ತೇನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಸ್ತಿತ್ವದಲ್ಲಿದ್ದರೆ, ಅದು ನೆಹರೂರಿಂದ ಮಾತ್ರ. ನೆಹರೂ ಅದಕ್ಕೆ ಜವಾಬ್ದಾರರು. 1950 ರಲ್ಲಿ ಪಟೇಲ್ ಕೂಡ ವಿರೋಧಿಸಿದ್ದರು. 1971 ರ ಯುದ್ಧದಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನವನ್ನು 2 ಭಾಗಗಳಾಗಿ ವಿಭಜಿಸಿದರು. ಇದು ಭಾರತದ ದೊಡ್ಡ ವಿಜಯವಾಗಿತ್ತು. ಶತಮಾನಗಳ ಕಾಲ ನಾವು ಅದನ್ನು ಸ್ಮರಿಸುತ್ತೇವೆ. 93 ಸಾವಿರ ಯುದ್ಧ ಕೈದಿಗಳಿದ್ದರು. 15 ಸಾವಿರ ಚದರ ಕಿಲೋಮೀಟರ್ ಪ್ರದೇಶ ಭಾರತದ ನಿಯಂತ್ರಣದಲ್ಲಿತ್ತು. ಶಿಮ್ಲಾ ಒಪ್ಪಂದವಾಯಿತು; ಆದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಕೇಳಲು ಮರೆತರು. ಆಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಕೇಳಿದ್ದರೆ, ಇಂದು ಉದ್ಭವಿಸಿರುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ನಾವು 15 ಸಾವಿರ ಕಿಲೋಮೀಟರ್‌ನಷ್ಟು ಗೆದ್ದ ಭೂಮಿಯನ್ನು ಸಹ ಹಿಂದಿರುಗಿಸಿದೆವು. 150 ಪಾಕಿಸ್ತಾನಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಮಾಡಲಿಲ್ಲ. ಕಾಂಗ್ರೆಸ್ ಇಂದು ಕೇಳುತ್ತದೆ, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುತ್ತೀರಾ ಇಲ್ಲವಾ?’ ಎಂದು. ಅದಕ್ಕೆ ಉತ್ತರವೆಂದರೆ, 1948 ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ತೆಗೆದುಕೊಂಡಿದ್ದರೆ, ಇಂದು ಭಯೋತ್ಪಾದಕ ನೆಲಗಳ ಮೇಲೆ ದಾಳಿ ಮಾಡಬೇಕಾಗಿರುತ್ತಿರಲಿಲ್ಲ.

1. 1960 ರಲ್ಲಿ ನೆಹರೂ ಸಿಂಧೂ ನದಿಯ ಶೇ.80 ನೀರನ್ನು ಪಾಕಿಸ್ತಾನಕ್ಕೆ ನೀಡಿದರು. 1971 ರಲ್ಲಿ ಶಿಮ್ಲಾ ಒಪ್ಪಂದದ ಸಮಯದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ. ಈ ಎಲ್ಲಾ ಅವಕಾಶಗಳನ್ನು ಕಾಂಗ್ರೆಸ್ ಕಳೆದುಕೊಂಡಿತು.

2. ಅಮಿತ್ ಶಾ, ಪಾಕಿಸ್ತಾನವು ಕಾಂಗ್ರೆಸ್ಸಿನ ತಪ್ಪುಗಳು ಮತ್ತು ಒಪ್ಪಿಗೆಯಿಂದಾಗಿ ನಿರ್ಮಾಣವಾದ ವಾಸ್ತವವಾಗಿದೆ. ಗಾಂಧಿ ಕುಟುಂಬಕ್ಕೆ ಚೀನಾ ಪ್ರೀತಿ ಇದೆ. ಚೀನಾದೊಂದಿಗೆ ಕಾಂಗ್ರೆಸ್ ಯಾವ ಒಪ್ಪಂದ ಮಾಡಿಕೊಂಡಿದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಅವರು ಗೆದ್ದ ಭಾಗಗಳನ್ನು ಸಹ ಪಾಕಿಸ್ತಾನಕ್ಕೆ ಹಿಂದಿರುಗಿಸಿದರು, ಎಂದು ಹೇಳಿದರು.

3. ಅಮಿತ್ ಶಾ ಅವರು ಕಾಂಗ್ರೆಸ್ ಅನ್ನು ಟೀಕಿಸುತ್ತಾ, ಕಾಂಗ್ರೆಸ್ ಪೋಟಾ ಕಾಯ್ದೆಯನ್ನು (‘ಪ್ರಿವೆನ್ಷನ್ ಆಫ್ ಟೆರರಿಸಂ ಆಕ್ಟ್’ ಅನ್ನು) ವಿರೋಧಿಸಿತು ಎಂದು ಹೇಳಿದರು. ಬಟ್ಲಾ ಹೌಸನಲ್ಲಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಂಡಾಗ ಸೋನಿಯಾ ಗಾಂಧಿ ಅತ್ತರು. ಕಾಂಗ್ರೆಸ್ ಭಯೋತ್ಪಾದನೆ ಕುರಿತು ಯಾವುದೇ ಕಠಿಣ ಕೆಲಸ ಮಾಡಿಲ್ಲ.

4. ನಿನ್ನೆ ಕಾಂಗ್ರೆಸ್ ಕೇಳುತ್ತಿತ್ತು, ‘ಪಹಲ್ಗಾಮ್ ಅಪರಾಧಿಗಳಿಗೇನಾಯಿತು?’ ನಾನು 10 ಹೆಸರುಗಳನ್ನು ಓದುತ್ತೇನೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಿಡುಗಡೆಯಾಗಿದ್ದ 8 ಭಯೋತ್ಪಾದಕರನ್ನು ಮೋದಿ ಸರಕಾರದ ಅವಧಿಯಲ್ಲಿ ಹತ್ಯೆ ಮಾಡಲಾಗಿದೆ.
ನಮ್ಮ ಸೇನೆ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಇದರ ಬಗ್ಗೆ ಹೆಮ್ಮೆ ಪಡಬಾರದೇ?, ಎಂದು ಅಮಿತ್ ಶಾ ಪ್ರಶ್ನಿಸಿದರು.

5. ಅಮಿತ್ ಶಾ ಅವರು, ನಿನ್ನೆ ದೇಶದ ಮಾಜಿ ಗೃಹ ಸಚಿವ ಚಿದಂಬರಂ ಅವರು ‘ಈ ಭಯೋತ್ಪಾದಕರು ಪಾಕಿಸ್ತಾನದಿಂದ ಬಂದಿರುವ ಬಗ್ಗೆ, ಪುರಾವೆಗಳೇನು?’ ಎಂದು ಕೇಳಿದರು. ಅದಕ್ಕೆ ನಾನು, ನೀವು ಪಾಕಿಸ್ತಾನವನ್ನು ಉಳಿಸಲು ಪ್ರಯತ್ನಿಸುತ್ತೀರಾ? ನಿಮಗೆ ಅವರ ಬಗ್ಗೆ ಸಹಾನುಭೂತಿ ಏಕೆ?, ಎಂದು ಪ್ರಶ್ನಿಸುತ್ತೇನೆ.