ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ

ಮೂಲ ಧರ್ಮಕ್ಕೆ ಮರಳಿ ಬರಲು ಆಯ್ಕೆ ನೀಡಲಾಗಿತ್ತು!

ನಾರಾಯಣಪುರ (ಛತ್ತೀಸಗಢ) – ನಾರಾಯಣಪುರ ಜಿಲ್ಲೆಯ ಭರಂಡಾ ಗ್ರಾಮದಲ್ಲಿ ಸ್ಥಳೀಯ ಆದಿವಾಸಿ ಸಮಾಜವು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದ 26 ಕುಟುಂಬಗಳಿಗೆ ಗ್ರಾಮವನ್ನು ತೊರೆಯುವಂತೆ ಆದೇಶಿಸಿದೆ. ಈ ಕುಟುಂಬಗಳಿಗೆ ಮೂಲ ಧರ್ಮಕ್ಕೆ ಮರಳಿ ಬರುವ ಆಯ್ಕೆಯನ್ನು ನೀಡಲಾಗಿತ್ತು. ಆದಾಗ್ಯೂ ಈ ಕುಟುಂಬಗಳು ಗ್ರಾಮವನ್ನು ತೊರೆದಿವೆ. ಅವು ಗ್ರಾಮದ ಗಡಿಯ ಹೊರಗಿನ ಸ್ಮಶಾನದ ಬಳಿ ಮತ್ತು ಮರಗಳ ಕೆಳಗೆ ಪೊಲೀಸರ ರಕ್ಷಣೆಯಲ್ಲಿ ಆಶ್ರಯ ಪಡೆದು ವಾಸಿಸುತ್ತಿವೆ. ಗ್ರಾಮದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟು ಸಂಪೂರ್ಣ ಪ್ರದೇಶವು ಪೊಲೀಸ್ ಶಿಬಿರದ ಸ್ವರೂಪ ಪಡೆದುಕೊಂಡಿದೆ.

ಗ್ರಾಮದಲ್ಲಿ ಬಹಳ ಸಮಯದಿಂದ ಮೂಲ ಆದಿವಾಸಿ ಧರ್ಮವನ್ನು ಪಾಲಿಸುವ ಗ್ರಾಮಸ್ಥರು ಮತ್ತು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ ಕುಟುಂಬಗಳ ನಡುವೆ ಒತ್ತಡವಿತ್ತು. ಜೂನ್ 9, 2026 ರಂದು ಎರಡೂ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಇದರಲ್ಲಿ ಕೆಲವು ಮಹಿಳೆಯರು ಗಾಯಗೊಂಡಿದ್ದರು. ಇದರ ನಂತರ ಆದಿವಾಸಿ ಗ್ರಾಮಸ್ಥರು ಮತ್ತು ಗ್ರಾಮದ ಸಾಂಪ್ರದಾಯಿಕ ಮುಖ್ಯಸ್ಥರು ಕಠಿಣ ಹೆಜ್ಜೆ ಇಡುತ್ತಾ ಈ 26 ಕ್ರೈಸ್ತ ಕುಟುಂಬಗಳಿಗೆ ತಕ್ಷಣ ಗ್ರಾಮವನ್ನು ತೊರೆಯುವಂತೆ ಆದೇಶಿಸಿದರು.

ನಾರಾಯಣಪುರದ ಉಪ ಪೊಲೀಸ್ ಅಧೀಕ್ಷಕ ಆಶಿಷ ನೇತಾಮರವರು ನೀಡಿದ ಮಾಹಿತಿಯ ಅನುಸಾರ, ಜನಜಾತೀಯ (ಆದಿವಾಸಿ) ಸಮಾಜದ ದೂರಿನ ಮೇರೆಗೆ ಮತ್ತು ಪ್ರಾಥಮಿಕ ತನಿಖೆಯ ನಂತರ ಈ ವಿವಾದದಲ್ಲಿ ಭಾಗಿಯಾಗಿದ್ದ 2 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.