ಪ.ಪೂ. ಡಾಕ್ಟರರ ಆಧ್ಯಾತ್ಮಿಕ ಪಯಣ ಮತ್ತು ಪ.ಪೂ. ಧಾಂಡೇಶಾಸ್ತ್ರಿ ಅವರ ದರ್ಶನ ! – ಭಾಗ 2

ಡಾ. (ಸೌ.) ಕುಂದಾ ಆಠವಲೆಯವರ ಶಬ್ದಗಳಲ್ಲಿ….

ಉಚ್ಚಶಿಕ್ಷಿತರಿದ್ದರೂ ಅಧ್ಯಾತ್ಮದ ಪ್ರಸಾರಕ್ಕಾಗಿ ತಮ್ಮನ್ನು ಸಮರ್ಪಿಸಿದ ದಂಪತಿಗಳು : ಪ.ಪೂ. ಡಾ. ಆಠವಲೆ ಮತ್ತು ಡಾ. (ಸೌ.) ಕುಂದಾ ಆಠವಲೆ (ವರ್ಷ ೧೯೯೬)

‘ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಪಯಣ’ ಈ ಲೇಖನದ ಮೊದಲ ಭಾಗ ೨೬/೪೦ ರ ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟವಾಗಿತ್ತು. ಈಗ ಅದರ ಮುಂದಿನ ಭಾಗವನ್ನು ನೋಡೋಣ.

೫. ಪ.ಪೂ. ಅಣ್ಣಾ ಕರಂದಿಕರರ ಜೊತೆಗೆ ಇಂದೂರ ಪ್ರಯಾಣ !

೫ ಅ. ಇಂದೂರ ಪ್ರಯಾಣದಲ್ಲಿ ಧುಳೆಯಲ್ಲಿ ಪ.ಪೂ. ಅಣ್ಣಾ ಅವರು ಪ.ಪೂ. ಭಕ್ತರಾಜ ಮಹಾರಾಜರ ಗಾದಿ (ಪೀಠ) ಇರುವ ಶ್ರೀ. ರಾವಸಾಹೇಬ ನಾಯಕ ಮತ್ತು ಶ್ರೀ. ರಾಜಾಭಾವು ಗರುಡ ಎಂಬ ಇಬ್ಬರು ಭಕ್ತರ ಮನೆಗೆ ಕರೆದುಕೊಂಡು ಹೋಗುವುದು; ಆದರೆ ಅವರು ಇಬ್ಬರೂ ಮನೆಯಲ್ಲಿ ಸಿಗದಿರುವುದು : ಪ.ಪೂ. ಅಣ್ಣಾ ಕರಂದಿಕರ ಅವರು ‘ಇಂದೂರಿಗೆ ಬರುತ್ತೀರಾ ?’ ಎಂದು ಕೇಳಿದಾಗ ಡಾಕ್ಟರರು ತಕ್ಷಣ ಒಪ್ಪಿದರು. ಅವರಿಂದ ಜ್ಞಾನವನ್ನು ಪಡೆಯಲು ಅದು ಸುವರ್ಣಾವಕಾಶವಾಗಿತ್ತು. ಅವರು ಹೇಳಿದಂತೆ ೨೦ ಜುಲೈ ೧೯೮೭ ರಂದು ನಾವು ಅವರನ್ನು ನಾಸಿಕನಲ್ಲಿ ಭೇಟಿಯಾದೆವು ಮತ್ತು ನಮ್ಮ ಮುಂದಿನ ಪ್ರಯಾಣ ಪ್ರಾರಂಭವಾಯಿತು. ‘ಇಂದೂರನಲ್ಲಿ ಎಲ್ಲಿಗೆ ಹೋಗುತ್ತಿದ್ದೇವೆ ? ಯಾರ ಬಳಿಗೆ ಹೋಗುತ್ತಿದ್ದೇವೆ ?’ ಎಂಬುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ದಾರಿ ಯಲ್ಲಿ ಧುಳೆಯಲ್ಲಿ ನಾವು ಊರೊಳಗೆ ಪ್ರವೇಶಿಸಿದೆವು. ಪ.ಪೂ. ಅಣ್ಣಾ ಕರಂದೀಕರ ಮಾತನಾಡುತ್ತಾ, ”ಇಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಭಕ್ತರು ವಾಸಿಸುತ್ತಾರೆ. ಅಲ್ಲಿ ಅವರ ಗಾದಿ (ಪೀಠ) ಇದೆ. ಅದರ ದರ್ಶನ ಪಡೆಯೋಣ’, ಎಂದು ಹೇಳಿದರು. ನಾವು ಅವರ ಹಿಂದೆ ಮೊದಲು ಶ್ರೀ. ರಾವಸಾಹೇಬ ನಾಯಕ ಅವರ ಮನೆಗೆ ಹೋದೆವು; ಆದರೆ ಅಲ್ಲಿ ಅವರು ಹೊರಗೆ ಹೋಗಿದ್ದಾರೆ ಎಂದು ತಿಳಿಯಿತು; ಆದ್ದರಿಂದ ಅವರ ಪೀಠದ ದರ್ಶನ ಮಾಡಿ ಇನ್ನೊಂದು ಸ್ಥಳಕ್ಕೆ ಬಂದೆವು. ಆ ಮನೆಯ ಯಜಮಾನ ಮತ್ತು ಅವರ ಪತ್ನಿ ಕೂಡ ಕೆಲವು ಕೆಲಸಗಳ ನಿಮಿತ್ತ ಹೊಲಕ್ಕೆ ಹೋಗಿದ್ದರು; ಆದರೆ ಅವರ ಇಬ್ಬರು ಪುತ್ರಿಯರು ಮನೆಯಲ್ಲಿದ್ದರು. ಅವರು ನಮ್ಮನ್ನು ಒಳಗೆ ಕರೆದರು. ಅವರ ಮನೆಯಲ್ಲಿದ್ದ ಪ.ಪೂ. ಭಕ್ತರಾಜ ಮಹಾರಾಜರ ಪೀಠದ ದರ್ಶನ ಮಾಡಿ, ಚಹಾ-ತಿಂಡಿ ಸೇವಿಸಿ ನಾವು ಅಲ್ಲಿಂದ ಹೊರಟೆವು. ಈ ಮನೆ ಪ.ಪೂ. ಭಕ್ತರಾಜ ಮಹಾರಾಜರ ಭಕ್ತರಾದ ಶ್ರೀ. ರಾಜಾಭಾವು ಗರುಡ ಅವರದ್ದಾಗಿತ್ತು ಮತ್ತು ಆ ಇಬ್ಬರು ಹೆಣ್ಣುಮಕ್ಕಳು ಕು. ಸೀಮಾ ಗರುಡ ಮತ್ತು ಪದ್ಮಾ ಗರುಡ ಆಗಿದ್ದರು. ಮುಂದೆ ಇಂದೂರ ವಾಸ್ತವ್ಯದಲ್ಲಿ ನಮಗೆ ಅವರೊಂದಿಗೆ ಸಾಕಷ್ಟು ಒಡನಾಟ ದೊರೆಯಿತು.

೫ ಆ. ‘ಗುಜರಿ’ಯ ಸರಕಾರಿ ವಿಶ್ರಾಂತಿಗೃಹದಲ್ಲಿ ರಾತ್ರಿ ತಂಗುವುದು ಮತ್ತು ಪ.ಪೂ. ಅಣ್ಣಾ ಅವರು ಅಧ್ಯಾತ್ಮದ ಬಗ್ಗೆ ಸಂದೇಹ ನಿವಾರಣೆ ಮಾಡುವಾಗ ಎಲ್ಲರ ಹಿಂದಿನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ನಿಖರವಾಗಿ ಹೇಳುವುದು : ಧುಳೆಯಿಂದ ಹೊರಟ ನಂತರ ಧಾಮನೋದ (ಮಧ್ಯಪ್ರದೇಶ) ನಲ್ಲಿ ಚಹಾ-ತಿಂಡಿಗಾಗಿ ಸ್ವಲ್ಪ ಸಮಯ ವಿರಮಿಸಿದೆವು. ಧಾಮನೋದದಲ್ಲಿ ನರ್ಮದಾ ನದಿಯ ದರ್ಶನವಾಯಿತು. ಸಂಜೆಯಾಗುತ್ತಾ ಬಂದಿತ್ತು; ಆದ್ದರಿಂದ ದಾರಿಯಲ್ಲಿ ‘ಗುಜರಿ’ ಎಂಬ ಗ್ರಾಮದಲ್ಲಿ ಸರಕಾರಿ ವಿಶ್ರಾಂತಿಗೃಹವಿತ್ತು, ಅಲ್ಲಿ ತಂಗಿದೆವು. ಆಗ ರಾತ್ರಿ ೮ ಗಂಟೆಯಾಗಿತ್ತು. ಅಡುಗೆಯವನಿಗೆ ಅಡುಗೆ ಸಿದ್ಧಪಡಿಸುವಂತೆ ಹೇಳಿ ನಾವು ಮಾತನಾಡುತ್ತಾ ಕುಳಿತೆವು. ನಾವು ಅಧ್ಯಾತ್ಮದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಪ.ಪೂ. ಅಣ್ಣಾ ಕರಂದಿಕರ ಅವರು ಉತ್ತರಗಳನ್ನು ನೀಡಿದರು; ಆದರೆ ಒಂದು ವಿಶೇಷ ಘಟನೆ ನಡೆಯಿತು. ಪ.ಪೂ. ಕರಂದಿಕರ ಅವರು ನಮ್ಮೆಲ್ಲರ ಹಿಂದಿನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಹೇಳಿದರು. ಅವು ಸಂಪೂರ್ಣ ಸರಿಯಾಗಿದ್ದವು. ಅದು ನಮಗೆ ಬಹಳ ಆಶ್ಚರ್ಯವನ್ನುಂಟುಮಾಡಿತು.

೫ ಇ. ರಾತ್ರಿ ೧೦-೧೦.೩೦ ಗಂಟೆಗೆ ಇಂದೂರ ತಲುಪುವುದು : ಬೆಳಗ್ಗೆ ಎದ್ದು ನಾವು ಮುಂದಿನ ಪ್ರಯಾಣ ಪ್ರಾರಂಭಿಸಿದೆವು. ರಾತ್ರಿ ೧೦ – ೧೦.೩೦ ಗಂಟೆ ಸುಮಾರಿಗೆ ನಾವು ಇಂದೂರ ತಲುಪಿದೆವು. ಪ.ಪೂ. ಕರಂದಿಕರ ಅವರ ಸೋದರತ್ತೆಯ ಮಗ ಡಾ. ಗೋಖಲೆ ಅವರ ಬಳಿಗೆ ಹೋದೆವು; ಏಕೆಂದರೆ ಅವರು ನಮಗೆ ಹೋಟೆಲ್‌ನಲ್ಲಿ ಕೊಠಡಿ ಬುಕಿಂಗ್‌ ಮಾಡಿಸಿದ್ದರು. ಅದರಂತೆ ಅವರು ‘ಹೋಟೆಲ್‌ ಶ್ರೀಮಾಯಾ’ನಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದ್ದರು. ನಂತರ ಒಬ್ಬ ರಿಕ್ಷಾದವನನ್ನು ಜೊತೆ ಮಾಡಿಕೊಂಡು ನಾವು ಆ ಹೋಟೆಲ್‌ ಗೆ ಹೋದೆವು.

೬. ಪ.ಪೂ. ಧಾಂಡೇಶಾಸ್ತ್ರಿ ಅವರ ದರ್ಶನ

೬ ಅ. ಒಬ್ಬ ಶಿಷ್ಯನ ಮನೆಯಲ್ಲಿ ಪ್ರಭಾವಿ ವ್ಯಕ್ತಿತ್ವದ ಪ.ಪೂ. ಧಾಂಡೇಶಾಸ್ತ್ರಿಗಳ ದರ್ಶನವಾಗುವುದು : ಮರುದಿನ ಬೆಳಗ್ಗೆ ಪ.ಪೂ. ಅಣ್ಣಾ ಅವರ ಸೋದರತ್ತೆಯ ಮಗನೊಂದಿಗೆ ನಾವು ಅವರ ಪತ್ನಿಯ ಗುರುಗಳಾದ ಪ.ಪೂ. ಧಾಂಡೇಶಾಸ್ತ್ರಿಗಳನ್ನು ಭೇಟಿಯಾಗಲು ಹೋಗಬೇಕಿತ್ತು. ಪ.ಪೂ. ರಾಮಾನಂದ ಮಹಾರಾಜರು ವಾಸಿಸುತ್ತಿದ್ದ ವಾಡಾದಲ್ಲಿ ಅವರ ಪತ್ನಿ ಪ.ಪೂ. ಕರಂದಿಕರರಿಂದ ಔಷಧಿ ತೆಗೆದುಕೊಳ್ಳುತ್ತಿದ್ದುದರಿಂದ ಅವರನ್ನು ಭೇಟಿಯಾಗಲು ಹೋದೆವು. ಅವರನ್ನು ಭೇಟಿಯಾಗಿ ಪ.ಪೂ. ಧಾಂಡೇಶಾಸ್ತ್ರಿಗಳ ರಾಮಬಾಗ್‌ನಲ್ಲಿರುವ ಮನೆಗೆ ಬಂದೆವು; ಆದರೆ ಅವರು ತಮ್ಮ ಶಿಷ್ಯನ ಮನೆಗೆ ಹೋಗಿದ್ದಾರೆ ಎಂದು ತಿಳಿಯಿತು. ಅವರ ಪುತ್ರ ಅಲ್ಲಿಗೆ ಬಂದರು. ಅವರು ನಮ್ಮನ್ನು ಶಿಷ್ಯನ ಮನೆಗೆ ಕರೆದುಕೊಂಡು ಹೋದರು. ಪ.ಪೂ. ಅಣ್ಣಾ ಅವರನ್ನು ನೋಡಿ ಪ.ಪೂ. ಧಾಂಡೇಶಾಸ್ತ್ರಿಗಳಿಗೆ ಆನಂದವಾಯಿತು. ಅವರ ವ್ಯಕ್ತಿತ್ವ ಪ್ರಭಾವಶಾಲಿಯಾಗಿತ್ತು.

೬ ಆ. ಪ.ಪೂ. ಧಾಂಡೇಶಾಸ್ತ್ರಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಅವರು, ‘ನನಗೆ ಕೇವಲ ‘ರಾಮನಾಮ’ ಮಾತ್ರ ಗೊತ್ತು. ನೀವೂ ರಾಮನಾಮ ಜಪಿಸಿ, ನಿಮಗೂ ರಾಮ ಸಿಗುತ್ತಾನೆ’ ಎಂದು ಹೇಳುವುದು : ಪ.ಪೂ. ಅಣ್ಣಾ ಅವರ ಸೋದರತ್ತೆಯ ಮಗನ ಮೂಲಕ ಪ.ಪೂ. ಧಾಂಡೇಶಾಸ್ತ್ರಿಗಳ ಪರಿಚಯವಾಯಿತು. ಆಗ ಪ.ಪೂ. ಧಾಂಡೇ ಶಾಸ್ತ್ರಿಗಳು, ”ನಾನು ಅವರನ್ನು ಗುರುತಿಸುತ್ತೇನೆ. ಪ್ರತಿದಿನ ರಾತ್ರಿ ಅವರು ನನ್ನನ್ನು ಭೇಟಿಯಾಗುತ್ತಾರೆ’’ ಎಂದರು. ಡಾಕ್ಟರ ಮತ್ತು ಶ್ರೀ. ಕಮಲಾಕರ ದೇಸಾಯಿ ಅವರು ಪ.ಪೂ. ಧಾಂಡೇಶಾಸ್ತ್ರಿಗಳ ಬಳಿ ಅಧ್ಯಾತ್ಮದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ‘ಬ್ರಹ್ಮ’ನ ಬಗ್ಗೆ ಏನಾದರೂ ಕೇಳಿದಾಗ ಅವರು, ”ನನಗೆ ‘ಬ್ರಹ್ಮ’ ಇತ್ಯಾದಿ ಏನೂ ಗೊತ್ತಿಲ್ಲ. ನನಗೆ ‘ರಾಮ ನಾಮ’ ಮಾತ್ರ ಗೊತ್ತು. ನರ್ಮದಾನದಿಯ ದಂಡೆಯಲ್ಲಿ ಒಬ್ಬ ಮಹಿಳೆಯಿದ್ದಾಳೆ. ಅವಳು ೧೩ ಕೋಟಿ ರಾಮನಾಮ ಜಪ ಮಾಡಿದಳು ಮತ್ತು ಅವಳಿಗೆ ರಾಮನ ದರ್ಶನವಾಯಿತು. ನೀವೂ ರಾಮ ನಾಮ ಜಪಿಸಿ, ನಿಮಗೂ ರಾಮ ಸಿಗುತ್ತಾನೆ !’’ ಎಂದರು.

೬ ಇ. ಡಾಕ್ಟರರು ಪ.ಪೂ. ಧಾಂಡೇಶಾಸ್ತ್ರಿಗಳಿಗೆ ವಿದಾಯ ಹೇಳುವಾಗ ಅವರಿಗೆ ದಕ್ಷಿಣೆ ನೀಡಿದಾಗ ಪ.ಪೂ ಧಾಂಡೇಶಾಸ್ತ್ರಿಗಳು ವಿನೋದದಿಂದ ನುಡಿದ ಮಾತುಗಳು ! : ವಿದಾಯ ಹೇಳುವಾಗ ಡಾಕ್ಟರರು ಪ.ಪೂ. ಧಾಂಡೇಶಾಸ್ತ್ರಿಗಳ ಚರಣಗಳ ಮೇಲೆ ತಲೆ ಇಟ್ಟು ಅವರ ಪಕ್ಕದಲ್ಲಿ ಸ್ವಲ್ಪ ದಕ್ಷಿಣೆಯನ್ನು ಇಟ್ಟರು. ಅವರು ಅದನ್ನು ಕೈಯಲ್ಲಿ ತೆಗೆದುಕೊಂಡು ಪರಿಶೀಲಿಸಿ, ‘ಇದರಿಂದ ಏನಾಗುತ್ತದೆ ? ನನಗಂತು ಅಹಲ್ಯಾಬಾಯಿ ಹೋಳಕರರಂತಹ ಅರಮನೆಯನ್ನು ಕಟ್ಟುವುದಿದೆ’’ ಎಂದರು. ಆಗ ಪ.ಪೂ. ಕರಂದಿಕರರು, ”ಸದ್ಯಕ್ಕೆ ಇದನ್ನು ಇಟ್ಟುಕೊಳ್ಳಿ. ಮುಂದೆ ಅವನು (ಡಾಕ್ಟರ್) ಅರಮನೆ ಕಟ್ಟುತ್ತಾನೆ’’ ಎಂದರು. ನಂತರ ಅವರು ಆ ಹಣವನ್ನು ತಮ್ಮ ಜೇಬಿನಲ್ಲಿ ಹಾಕಿಕೊಂಡರು.

(ಮುಂದುವರಿಯುವುದು)

ಈ ಲೇಖನದ ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ – https://sanatanprabhat.org/kannada/148171.html