ಭಾರತದ ತಲೆನೋವು !

ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಭಾರತದ ಇತಿಹಾಸದಲ್ಲಿ ಅನೇಕ ಅರ್ಥಗಳಲ್ಲಿ ನೆನಪಿನಲ್ಲಿಟ್ಟುಕೊಳ್ಳಲಾಗುವುದು. ಈ ನಿಮಿತ್ತ ಭಾರತವು ಮತ್ತಷ್ಟು ಬಲಗೊಳ್ಳುವ ಹಂತಕ್ಕೆ ವೇಗ ದೊರೆತಿದೆ. ಭಾರತ ಸರಕಾರ ಮತ್ತು ಸೈನ್ಯವು ಪಾಕಿಸ್ತಾನಕ್ಕೆ ಕಠಿಣ ಪಾಠ ಖಂಡಿತ ಕಲಿಸುತ್ತದೆ; ಆದರೆ ಈ ನೆಪದಲ್ಲಿ ದೇಶವು ಅಲ್ಲೋಲಕಲ್ಲೋಲವಾಗಿದೆ ಎಂಬುದು ಮುಖ್ಯ. ಜಾಗೃತಗೊಂಡ ಹಿಂದೂಗಳು ಹೆಚ್ಚು ಕೋಪಗೊಂಡಿದ್ದಾರೆ. ಎಂದಿಗೂ ದೇಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ, ಪಾಶ್ಚಿಮಾತ್ಯ ಸಂಸ್ಕ್ರತಿಗೆ ಮಾರುಹೋಗಿದ್ದ ಯುವ ಪೀಳಿಗೆಯಿಂದಲೂ ಈ ದಾಳಿಯ ಬಗ್ಗೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಹಿಂದೆಂದೂ ಕಾಣದಂತೆ ಚಿತ್ರರಂಗದ ಕಲಾವಿದರು ಸಹ ಖಂಡಿಸುತ್ತಿದ್ದಾರೆ. ಪ್ರಧಾನಮಂತ್ರಿಯವರು, ‘ಭಯೋತ್ಪಾದಕರಿಗೆ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ನೀಡಲಾಗುವುದು’ ಎಂದು ಹೇಳಿದ್ದಾರೆ; ಅದನ್ನು ಅವರು ನೀಡಬೇಕೆಂಬುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿಯ ಆಶಯವಾಗಿದೆ; ಆದರೆ ಈ ಘಟನೆಯಿಂದ ಪಾಕಿಸ್ತಾನವು ಕಳೆದ ಹಲವು ವರ್ಷಗಳಿಂದ ಭಾರತದೊಂದಿಗೆ ನಡೆಸುತ್ತಿರುವ ತೆರೆಮರೆಯ ಯುದ್ದದಲ್ಲಿ ಏನೆಲ್ಲಾ ‘ಕೃತ್ಯ’ಗಳನ್ನು ಮಾಡಿದೆ ಎಂಬ ‘ಕಲ್ಪನೆಗೂ ಮೀರಿದ’ ಸಂಗತಿಗಳು ಈಗ ಬೆಳಕಿಗೆ ಬರುತ್ತಿವೆ. ಪಾಕಿಸ್ತಾನಿ ನಾಗರಿಕರಿಗೆ ಭಾರತವನ್ನು ತೊರೆಯುವ ಆದೇಶ ಹೊರಡಿಸಿದ ನಂತರ ೫೩೭ ಪಾಕಿಸ್ತಾನಿ ನಾಗರಿಕರು ಭಾರತವನ್ನು ತೊರೆದಿದ್ದಾರೆ ಮತ್ತು ಪಾಕಿಸ್ತಾನಕ್ಕೆ ಹೋಗಿದ್ದ ೮೫೦ ಭಾರತೀಯರು ಮರಳಿದ್ದಾರೆ. ಏಪ್ರಿಲ್‌ ೨೯ ರಂದು ನೀಡಲಾಗಿದ್ದ ಗಡುವು ಈಗ ಮುಗಿದಿದೆ. ಕೆಲವರು ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದರು, ಮತ್ತೆ ಕೆಲವರು ವೈದ್ಯಕೀಯ ಚಿಕಿತ್ಸೆಗಾಗಿ ಬಂದಿದ್ದರು, ಅಂತಹ ಪಾಕಿಸ್ತಾನಿಗಳು ಇದ್ದಕ್ಕಿದ್ದಂತೆ ಹಿಂದಿರುಗಬೇಕಾಗಿ ಬಂದ ದುಃಖದ ಸುದ್ದಿಗಳು ಪ್ರಸಾರವಾಗುತ್ತಿವೆ; ಆದರೆ ಇದಕ್ಕೆ ಕಾರಣವಾದ ಭಯೋತ್ಪಾದಕ ದಾಳಿಯನ್ನು ಮಾತ್ರ ಇವರಲ್ಲಿ ಯಾರೂ ಖಂಡಿಸುತ್ತಿಲ್ಲ.

ಕೇವಲ ಬಾಂಗ್ಲಾದೇಶಿಗಳಲ್ಲ, ಪಾಕಿಸ್ತಾನಿಯರಿಗೂ ಆಶ್ರಯ ಭಾರತದಲ್ಲಿ ೫ ಲಕ್ಷ ಪಾಕಿಸ್ತಾನಿ ನಾಗರಿಕರು ವಾಸಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಗುಪ್ತಚರ ಇಲಾಖೆ (‘ಇಂಟೆಲಿಜೆನ್ಸ್ ಬ್ಯೂರೋ’) ಈ ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿಲ್ಲದ ಅಕ್ರಮ ಪಾಕಿಸ್ತಾನಿಗಳು ಎಷ್ಟುಇರಬಹುದು ಎಂದು ಊಹಿಸಬಹುದು. ಆದ್ದರಿಂದ ಕೇವಲ ಬಾಂಗ್ಲಾದೇಶಿಗಳಿಗಷ್ಟು  ಅಲ್ಲ, ಪಾಕಿಸ್ತಾನಿಗಳಿಗೂ ಭಾರತ ದೇಶವು ‘ಸರ್ವಸಮಾವೇಶಕ’ ಉದ್ಯಾನದಂತೆ ಮಾರ್ಪಟ್ಟಿದೆ ಎಂಬುದು ಈಗ ಬಹಿರಂಗವಾಗುತ್ತಿದೆ. ೨೦೦೭ ರಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ನೋಡಲು ಬಂದ ೩೨ ಜನರಲ್ಲಿ ೨೮ ನಾಗರಿಕರು ಭಾರತದಲ್ಲೇ ಉಳಿದುಕೊಂಡರು; ಏಕೆಂದರೆ ಅವರು ಯಾವುದೇ ಜಿಲ್ಲೆಯಲ್ಲಿ ಬೇಕಾದರೂ ತಿರುಗಾಡಲು ಅನುಮತಿಸುವಂತಹ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು.

ಭಾರತ-ಪಾಕ್‌ ಸಂಬಂಧದ ದುರ್ವರ್ತನೆ !

‘ಪಾಕಿಸ್ತಾನವು ತವರುಮನೆಯಾಗಿರುವ ೫ ಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾರತದಲ್ಲಿದ್ದಾರೆ’ ಎಂದು ಭಾಜಪ ನಾಯಕ ಶಶಿಕಾಂತ ದುಬೆ ಹೇಳಿದ್ದಾರೆ. ‘ಯಾವ ಉದ್ದೇಶದಿಂದ ಪುರುಷರು ಈ ಮಹಿಳೆಯರನ್ನು ಮದುವೆಯಾಗಿದ್ದಾರೆ ?’ ಎಂಬುದನ್ನು ಪತ್ತೆಹಚ್ಚುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಅದೇ ರೀತಿ ‘ಪಾಕಿಸ್ತಾನವು ಗಂಡನ ಮನೆಯಾಗಿರುವ ಅನೇಕ ಮಹಿಳೆಯರು ಭಾರತದಲ್ಲಿದ್ದಾರೆ’ ಎಂಬ ಸುದ್ದಿಗಳು ಸಹ ಬರುತ್ತಿವೆ. ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿಯರನ್ನು ಹಿಂದಿರುಗಿ ಕಳುಹಿಸುವ ಆದೇಶ ಹೊರಬಿದ್ದ ನಂತರ ಈ ವಿಷ ಯ ಬೆಳಕಿಗೆ ಬಂದಿದೆ. ಪಾಕಿಸ್ತಾನಿಗಳು ಇಲ್ಲಿನ ಹುಡುಗಿಯರನ್ನು ಮದುವೆಯಾಗಿರುವುದು ಕೆಲವೆಡೆ ಮೋಸದಿಂದ ನಡೆದಿದ್ದರೆ, ಮತ್ತೆ ಕೆಲವೆಡೆ ತಿಳಿದು ಮಾಡಿದ್ದಾರೆ. ಗಡಿ ಭಾಗದಲ್ಲಿ, ವಿಶೇಷವಾಗಿ ಪಂಜಾಬಿನಲ್ಲಿ, ಇಂತಹ ಪಾಕಿಸ್ತಾನಿ ಗಂಡಂದಿರು ಇರುವ ಮುಸಲ್ಮಾನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಕ್ಕೆ ಬಂದಿದೆ. ಈ ಮಹಿಳೆಯರು ಮತ್ತು ಅವರ ಮಕ್ಕಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಹಾಗೂ ಗಂಡಂದಿರು ಮಾತ್ರ ಪಾಕಿಸ್ತಾನದಲ್ಲಿ. ಇಂತಹ ಬರಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿರುವ ಅತಿಶಯೋಕ್ತಿಯನ್ನು ಬಿಟ್ಟರೆ, ಅದರಲ್ಲಿನ ಸತ್ಯಾಂಶವನ್ನು ನಿರ್ಲಕ್ಷಿಸುವಂತಿಲ್ಲ. ಸೀಮಾ ಹೈದರ್‌ ಪ್ರಕರಣವು ಚರ್ಚೆಯಲ್ಲಿರುವಾಗಲೇ, ಈಗ ಪಂಜಾಬಿನಲ್ಲಿ ಮತ್ತೊಬ್ಬ ಮರಿಯಾ ಎಂಬ ಪಾಕಿಸ್ತಾನಿ ಯುವತಿ ಭಾರತದ ಯುವಕನೊಂದಿಗೆ ‘ಫೇಸ್ಬುಕ್‌ ಮೂಲಕ ಪ್ರೀತಿ’ ಮಾಡಿ ಮದುವೆಯಾಗಿ ಬಂದಿದ್ದಾಳೆ ಮತ್ತು ಅವಳು ತನ್ನ ಮಗುವಿಗೆ ಭಾರತೀಯ ಪೌರತ್ವ ಸಿಗಲೆಂದು ಇಲ್ಲೇ ಜನ್ಮ ನೀಡಲು ಬಯಸಿದ್ದಾಳೆ. ಆದ್ದರಿಂದ ಪಾಕಿಸ್ತಾನಿಗಳು ಭಾರತವನ್ನು ತೊರೆಯುವ ಆದೇಶ ಬಂದ ನಂತರ ಅವಳು ನಾಪತ್ತೆಯಾಗಿದ್ದಾಳೆ. ಪಾಕಿಸ್ತಾನ ಮತ್ತು ಭಾರತದ ಮುಸಲ್ಮಾನರ ನಡುವೆ ಅಪಾರ ಪ್ರಮಾಣದ ವೈವಾಹಿಕ ಸಂಬಂಧಗಳಿವೆ ಎಂದು ಇದರಿಂದ ತಿಳಿದುಬರುತ್ತದೆ. ಪಾಕಿಸ್ತಾನಿಗಳನ್ನು ಮದುವೆಯಾದ ಭಾರತೀಯ ಮಹಿಳೆಯರಿಗೆ ಪಾಕಿಸ್ತಾನವು ಪೌರತ್ವ ನೀಡಿಲ್ಲ; ಆದರೆ ಕೆಲವರ ಮಕ್ಕಳು ಅಲ್ಲಿ ಜನಿಸಿದ್ದರಿಂದ ಅವರಿಗೆ ಪೌರತ್ವ ನೀಡಲಾಗಿದೆ. ಸುದ್ದಿ ವಾಹಿನಿಗಳ ಪ್ರತಿನಿಧಿಗಳು ಅಂತಹ ಮಹಿಳೆಯರ ಸಂದರ್ಶನಗಳನ್ನು ನಡೆಸುತ್ತಿದ್ದಾರೆ. ಅದರಿಂದ ಅವರಿಗೆ ಸಹಾನುಭೂತಿ ಸಿಗಬಹುದು. ಒಟ್ಟಾರೆಯಾಗಿ, ‘ಪಾಕಿಸ್ತಾನದೊಂದಿಗೆ ಭಾರತಕ್ಕೆ ದೊಡ್ಡ ಪ್ರಮಾಣದ ಇಂತಹ ಸಂಬಂಧವಿರುವ ಸತ್ಯವು ಈಗ ಹೊಸದಾಗಿ ಬೆಳಕಿಗೆ ಬಂದಿದೆ. ಭಾರತದ ಮೊದಲ ಶತ್ರುದೇಶದೊಂದಿಗೆ ಇಷ್ಟೆಲ್ಲ ಸಂಬಂಧವಿರುವುದು ಶತ್ರುಗಳಿಗೆ ಮುಕ್ತ ಅವಕಾಶ ನೀಡಿದಂತೆಯೇ ಸರಿ. ಶತ್ರು ದೇಶದವರನ್ನು  ಮದುವೆಯಾಗುವವರಿಗೆ ‘ಈ ದೇಶದಲ್ಲಿ ಹುಡುಗಿಯರು-ಹುಡುಗರೇ ಇಲ್ಲವೇ ?’ ಎಂದೂ ಸಹ ದುಬೆಯವರು ಪ್ರಶ್ನಿಸಿದ್ದಾರೆ. ಇದನ್ನು ‘ಜನಸಂಖ್ಯಾ ಜಿಹಾದ್’ ಎಂದೂ ಕರೆಯಲಾಗುತ್ತಿದೆ. ಈ ಸಂಖ್ಯೆ ನಿಜವಾಗಿಯೂ ಸಾವಿರಾರು ಸಂಖ್ಯೆಯಲ್ಲಿದ್ದರೆ, ಈ ಅನುಮಾನಕ್ಕೆ ಅವಕಾಶವಿರುತ್ತದೆ. ಇಲ್ಲಿಯವರೆಗಿನ ಎಲ್ಲಾ ಭಯೋತ್ಪಾದಕ ದಾಳಿಗಳಲ್ಲಿ ಭಾರತೀಯ ಸ್ಥಳೀಯರ ಕೈವಾಡವಿರುವ ಪುರಾವೆಗಳು ಲಭ್ಯವಾಗಿವೆ. ಇಂತಹ ಶತ್ರು ದೇಶದೊಂದಿಗೆ ಸಂಬಂಧ ಹೊಂದಿರುವ ಜನರು ಇದ್ದರೆ ಮತ್ತು ಅವರ ಇಷ್ಟು ದೊಡ್ಡ ಪ್ರಮಾಣದ ಓಡಾಟ ನಡೆಯುತ್ತಿದ್ದರೆ, ಅದರಿಂದ ಎಷ್ಟು ‘ಸ್ಲೀಪರ್‌ ಸೆಲ್‌’ಗಳು ಹುಟ್ಟಿಕೊಳ್ಳಬಹುದು ಎಂದು ಊಹಿಸಬಹುದು. ಭಾರತದ ಎಲ್ಲಾ ಭಾಗಗಳಲ್ಲಿ ಪಾಕಿಸ್ತಾನಿ ಗಂಡಂದಿರು ಇರುವ ಮಹಿಳೆಯರು ಕಂಡುಬರುತ್ತಿರುವುದರಿಂದ, ಪಾಕಿಸ್ತಾನಿ ಪುರುಷರ ಮೂಲಕ ಭಯೋತ್ಪಾದಕರಿಗೆ ಇಲ್ಲಿಯವರೆಗೆ ದೊಡ್ಡ ಸಹಾಯ ಸಿಕ್ಕಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಭಾರತಕ್ಕೆ ಸವಾಲು !

ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪಾಕಿಸ್ತಾನಿಯರೆಲ್ಲರೂ ಭಯೋತ್ಪಾದಕರಾಗಿರುತ್ತಾರೆ ಎಂದು ಯಾರೂ ಹೇಳುವುದಿಲ್ಲ; ಆದರೆ ಗುರುತು ಮರೆಮಾಚಿ ಅಥವಾ ವೀಸಾ ಇಲ್ಲದೆಯೇ ಅನೇಕರು ಭಾರತದಲ್ಲಿ ವಾಸಿಸುತ್ತಿರುವಾಗ, ಅವರು ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ‘ಸ್ಲೀಪರ್‌ ಸೆಲ್‌’ಗಳಾಗಿರುವ ಅನುಮಾನ ಹೆಚ್ಚಾಗುತ್ತದೆ. ಕಾಂಗ್ರೆಸ್‌ ಆಡಳಿತದಲ್ಲಿ ಬಾಂಗ್ಲಾದೇಶಿ ನುಸುಳುಕೋರರನ್ನು ತಂದು ನೆಲೆಗೊಳಿಸಲಾಯಿತು. ಈಗ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೆ ಹರಸಾಹಸ ಪಡಬೇಕಾಗಿದೆ. ಎಷ್ಟು ಕ್ರಮ ಕೈಗೊಂಡರೂ, ಅವರು ಪತ್ತೆಯಾಗುವುದು ನಿಲ್ಲುತ್ತಿಲ್ಲ. ಇದರಿಂದ ಈ ಸಮಸ್ಯೆಯ ಗಂಭೀರತೆ ಅರಿವಾಗುತ್ತದೆ. ಅದರೊಂದಿಗೆ ಈಗ ದೊಡ್ಡ ಸಂಖ್ಯೆಯಲ್ಲಿ ಪಾಕಿಸ್ತಾನಿ ನಾಗರಿಕರ ವಾಸ್ತವ್ಯ ಬೆಳಕಿಗೆ ಬಂದಿದೆ. ಅವರಲ್ಲಿ ಭಯೋತ್ಪಾದಕ ಕೃತ್ಯಗಳೊಂದಿಗೆ ಒಂದಲ್ಲ ಒಂದು ಸಂಬಂಧವಿರುವವರನ್ನು ಪತ್ತೆಹಚ್ಚಿ ಶಿಕ್ಷಿಸುವುದು ಅಷ್ಟು ಮುಖ್ಯ. ಒಟ್ಟಾರೆಯಾಗಿ ಗಮನಕ್ಕೆ ಬರುವ ಅಂಶವೆಂದರೆ, ಭಾರತೀಯರ ‘ಸರ್ವಸಮಾವೇಶಕ’ ಎಂಬ ಸದ್ಗುಣದ ದುರುಪಯೋಗವನ್ನು ಭಾರತದ ಅರಿವಿಲ್ಲದೆಯೇ ಶತ್ರುವು ಪಡೆದಿದ್ದಾನೆ. ಇನ್ನೂ ಭಾರತ ದಲ್ಲಿರುವ ಅಕ್ರಮ ನಾಗರಿಕರನ್ನು ದೇಶದಿಂದ ಹೊರಹಾಕುವುದು ಮತ್ತೊಂದು ದೊಡ್ಡ ಸವಾಲಾಗಿದೆ.