ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಟ್ಯಾರಿಫ್ (ಆಮದು ತೆರಿಗೆ) ಮತ್ತು ಚಿನ್ನ !

ಕಳೆದ ೩ ದಶಕಗಳಲ್ಲಿನ ಘಟನೆಗಳನ್ನು ಗಮನಿಸಿದರೆ, ಜಾಗತಿಕ ವ್ಯಾಪಾರದಲ್ಲಿ ಅಡಚಣೆ ಉಂಟಾದಾಗಲೆಲ್ಲಾ, ಸುರಕ್ಷಿತ ಹೂಡಿಕೆಯ ಪರ್ಯಾಯವೆಂದು ಚಿನ್ನವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸ ಲಾಗುತ್ತದೆ. ಇದೇ ರೀತಿಯ ನಡವಳಿಕೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಅಥವಾ ಹಣ ದುಬ್ಬರದ ಸಮಯದಲ್ಲಿ ಕಂಡುಬಂದಿದೆ. ೨೦೦೮ ರ ಜಾಗತಿಕ ಹಣದುಬ್ಬರದ ಸಮಯದಲ್ಲಿ ಚಿನ್ನದ ಮೇಲಿನ ಹೂಡಿಕೆ ಗಣನೀಯವಾಗಿ ಹೆಚ್ಚಾಯಿತು. ಅಮೇರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಗಳು ಜಾಗತಿಕ ವ್ಯಾಪಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿವೆ. ವ್ಯಾಪಾರ ಮಂದಗತಿಯಲ್ಲಿ ಆಗುವ ಸಾಧ್ಯತೆ ಇದೆ. ಇದರಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತಿದೆ. ವಾಸ್ತವದಲ್ಲಿ, ಕೊರೊನಾ ಸಾಂಕ್ರಾಮಿಕ ರೋಗದ ನಂತರದ ಅವಧಿಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಇದಕ್ಕೆ ಒಂದು ಕಾರಣವೆಂದರೆ ಅನೇಕ ರಾಷ್ಟ್ರಗಳು ಮತ್ತು ವ್ಯಕ್ತಿಗಳು ಚಿನ್ನದಲ್ಲಿ ಗಣನೀಯ ಹೂಡಿಕೆ ಮಾಡುತ್ತಿರುವುದು. ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಚಾರ ನಿಷೇಧಗಳಿಂದ ಜಾಗತಿಕ ವ್ಯಾಪಾರ ಪ್ರಕ್ರಿಯೆಯು ತೀವ್ರವಾಗಿ ಅಸ್ತವ್ಯಸ್ತಗೊಂಡಿತು. ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಪ್ರತಿ ಔನ್ಸ (೨೮ ಗ್ರಾಮಗಿಂತ ಹೆಚ್ಚು) ೩ ಸಾವಿರ ಡಾಲರ್ (ರೂ. ೨ ಲಕ್ಷ ೫೮ ಸಾವಿರ) ತಲುಪಿದೆ. ಇದೇ ಬೆಲೆ ಜನವರಿ ೨೦೨೪ ರಲ್ಲಿ ೨೦೪೫ ಡಾಲರ್ (ರೂ. ೧ ಲಕ್ಷ ೬೯ ಸಾವಿರ ೭೩೫) ಆಗಿತ್ತು. ಭಾರತದಲ್ಲಿ ಚಿನ್ನದ ಬೆಲೆ ಪ್ರತಿ ತೊಲಕ್ಕೆ ರೂಪಾಯಿ ೯೧ ಸಾವಿರ ವರೆಗೆ ಏರಿದೆ. ಕೇವಲ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. ೨೪ ರಷ್ಟು ಹೆಚ್ಚಾಗಿದೆ. ಪ್ರಸ್ತುತ ಚಿನ್ನದ ಬೆಲೆ ಏರಿಕೆಯನ್ನು ನೋಡಿದರೆ, ಜನವರಿ ೨೦೨೪ ರಿಂದ ಜನವರಿ ೨೦೨೫ ರ ವರೆಗಿನ ಒಂದು ವರ್ಷದ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಈ ಅಮೂಲ್ಯ ಲೋಹದ ಬೆಲೆ ಶೇಕಡಾ ೪೨ ರಷ್ಟು ಹೆಚ್ಚಾಗಿದೆ. ಈ ಅಚ್ಚರಿಯ ಬೆಲೆ ಏರಿಕೆ ಇಡೀ ಜಗತ್ತನ್ನು ಆಘಾತಕ್ಕೆ ದೂಡಿದೆ.

ಡಾ. ಶೈಲೇಂದ್ರ ದೇವಳಾಣಕರ್‌

೧. ದೇಶಗಳು ಚಿನ್ನವನ್ನು ಏಕೆ ಖರೀದಿಸುತ್ತಿವೆ ?

ಕಳೆದ ಒಂದು ವರ್ಷದಲ್ಲಿ ಅನೇಕ ರಾಷ್ಟ್ರಗಳ ಚಿನ್ನದ ಸಂಗ್ರಹ ಗಣನೀಯವಾಗಿ ಹೆಚ್ಚಾಗಿದೆ. ರಾಷ್ಟ್ರಗಳ ವಿದೇಶಿ ವಿನಿಮಯ (ಫಾರೆಕ್ಸ್) ಸಂಗ್ರಹದಲ್ಲಿ ಚಿನ್ನದ ಪಾಲು ಸುಮಾರು ಶೇಕಡಾ ೭ ರಷ್ಟಿತ್ತು, ಈಗ ಅದು ಶೇಕಡಾ ೧೨ ರ ವರೆಗೆ ತಲುಪಿದೆ. ಕಳೆದ ವರ್ಷದಲ್ಲಿ ೫೦ ಕ್ಕೂ ಹೆಚ್ಚು ದೇಶಗಳ ಕೇಂದ್ರೀಯ ಬ್ಯಾಂಕುಗಳು ಚಿನ್ನವನ್ನು ಖರೀದಿಸುವ ಭರದಲ್ಲಿವೆ ಎಂದು ಸ್ಪಷ್ಟವಾಗಿ ಕಂಡುಬರುತ್ತದೆ. ಕಳೆದ ವರ್ಷ ೫೫ ದೇಶಗಳ ಬ್ಯಾಂಕುಗಳು ೧ ಸಾವಿರ ಟನ್ ಚಿನ್ನವನ್ನು ಖರೀದಿಸಿವೆ. ಭಾರತದ ಉದಾಹರಣೆ ಯನ್ನು ತೆಗೆದುಕೊಂಡರೆ, ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಒಂದು ವರ್ಷದಲ್ಲಿ ೯೫ ಟನ್ ಚಿನ್ನವನ್ನು ಖರೀದಿಸಿದೆ. ಚೀನಾದ ವಿಚಾರ ಮಾಡಿದರೆ, ಚೀನಾದ ಮಧ್ಯವರ್ತಿ ಬ್ಯಾಂಕ್ ೩೨೫ ಟನ್ ಚಿನ್ನವನ್ನು ಖರೀದಿಸಿದೆ. ೧೯೭೦ ರ ವರೆಗೆ, ಒಂದು ದೇಶದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನವು ಶೇಕಡಾ ೪೦ ರಷ್ಟಿತ್ತು. ನಂತರದ ಕಾಲದಲ್ಲಿ ಅದು ಕಡಿಮೆಯಾಯಿತು. ಸುಮಾರು ಒಂದೂವರೆಯಿಂದ ಎರಡು ವರ್ಷಗಳ ಹಿಂದಿನ ವರೆಗೂ, ವಿದೇಶಿ ವಿನಿಮಯ ಮೀಸಲುಗಳಲ್ಲಿ ಜಾಗತಿಕ ಸರಾಸರಿ ಚಿನ್ನದ ಮೀಸಲು ಶೇಕಡಾ ೭ ಕ್ಕೆ ಇಳಿದಿತ್ತು; ಆದರೆ ಇಂದು ಈ ಅಂಕಿಅಂಶವು ಶೇಕಡಾ ೧೨ ಕ್ಕೆ ತಲುಪಿದೆ. ಭಾರತವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ನಮ್ಮ ವಿದೇಶಿ ವಿನಿಮಯ ಮೀಸಲು ಸುಮಾರು ೬೦೦ ಅಬ್ಜ ಡಾಲರ್ ಆಗಿದ್ದು, ಅದರಲ್ಲಿ ಶೇಕಡಾ ೬೫ ರಷ್ಟು ಭಾಗ ಡಾಲರ್‌ಗಳಲ್ಲಿ ಮತ್ತು ಉಳಿದ ಸಂಗ್ರಹ ಚಿನ್ನದಲ್ಲಿದೆ.

೨. ‘ರೆಸಿಪ್ರೊಕಲ್ ಟ್ಯಾರಿಫ್’ (ಬೇರೆ ದೇಶದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ವಿಧಿಸಲಾಗುವ ತೆರಿಗೆಗಳು) ನೀತಿ ಮತ್ತು ಚಿನ್ನ

ಟ್ರಂಪ್ ಅವರಿಂದ ‘ರೆಸಿಪ್ರೊಕಲ್ ಟ್ಯಾರಿಫ್’ ನೀತಿಯು ಏಪ್ರಿಲ್ ನಿಂದ ಜಾರಿಗೆ ಬರಲಿದೆ. (ಈಗ ಅದು ಜಾರಿಯಾಗಿದೆ) ಇದರಲ್ಲಿ ವಿವಿಧ ದೇಶಗಳಿಂದ ಅಮೇರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗುವುದು. ಆಮದು ತೆರಿಗೆ ಹೆಚ್ಚಳವು ವ್ಯಾಪಾರದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರರ್ಥ ಅಮೇರಿಕಕ್ಕೆ ರಫ್ತು ಮಾಡುವ ದೇಶಗಳ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತದೆ. ಆದ್ದರಿಂದ ಟ್ರಂಪ್ ಅವರ ತೆರಿಗೆ ಕಾರ್ಡ ಪ್ರಭಾವದಿಂದಾಗಿ ಚಿನ್ನದ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

೩. ಚಿನ್ನ ಮತ್ತು ಡಾಲರ್ ಇವುಗಳ ನಡುವಿನ ಸಂಬಂಧವೇನು ?

ವಿಶ್ವ ವ್ಯಾಪಾರದಲ್ಲಿ ಅಮೇರಿಕದ ಪಾಲು ಕೇವಲ ಶೇ. ೧೧ ರಷ್ಟಿದೆ. ಆದಾಗ್ಯೂ, ಜಾಗತಿಕ ಆರ್ಥಿಕತೆಯಲ್ಲಿ ಅಮೇರಿಕನ ಡಾಲರ್ ಪ್ರಾಬಲ್ಯ ಹೊಂದಿದೆ. ಇಂದಿಗೂ ಡಾಲರ್‌ನ್ನು ಮುಖ್ಯವಾಗಿ ವಿದೇಶಿ ವ್ಯಾಪಾರಕ್ಕಾಗಿ ಬಳಸಲಾಗುತ್ತದೆ. ದೇಶಗಳ ವಿದೇಶಿ ವಿನಿಮಯ ಸಂಗ್ರಹದಲ್ಲಿ ಡಾಲರ್ ಇನ್ನೂ ಶೇಕಡಾ ೬೫ ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಡಾಲರ್ ಮೌಲ್ಯ ಏರಿಕೆ ಅಥವಾ ಅಪಮೌಲ್ಯವು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಚಿನ್ನದ ಬೆಲೆಯಲ್ಲಿನ ಇತ್ತೀಚಿನ ಏರಿಕೆಯು ಡಾಲರ್ ಆರ್ಥಿಕತೆಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಡಾಲರ್ ಮೌಲ್ಯ ಮತ್ತು ಅದರ ಸಾಲದ ಅರ್ಹತೆಯು ಅಮೇರಿಕದ ರಾಜಕೀಯ ಮತ್ತು ಮಿಲಿಟರಿ ಶಕ್ತಿಗೆ ಸಂಬಂಧಿಸಿದೆ. ‘ಡಾಲರ್ ಬಲಿಷ್ಠವಾಗಿದ್ದಷ್ಟೂ ಅಮೇರಿಕ ಬಲಿಷ್ಠವಾಗಿರುವುದು’ ಎಂಬ ಸಮೀಕರಣವಿದೆ.

ಜಾಗತಿಕ ರಾಜಕೀಯದಲ್ಲಿ ಅಮೇರಿಕದ ಹಸ್ತಕ್ಷೇಪ ಮತ್ತು ಪ್ರಭಾವ ಹೆಚ್ಚಾದಂತೆ, ಡಾಲರ್ ಹೆಚ್ಚು ಪ್ರಭಾವಶಾಲಿಯಾಯಿತು. ಇಂದು ಡಾಲರ್ ಬೆಲೆ ಏರಿಕೆಯಾಗಿದೆ. ಕಳೆದ ೨೫ ವರ್ಷಗಳಲ್ಲಿ ಡಾಲರ್ ಸೂಚ್ಯಾಂಕವು ಅತ್ಯುನ್ನತ ಮಟ್ಟದಲ್ಲಿದೆ, ಅಂದರೆ ಡಾಲರ್ ಒಂದು ನಿರ್ದಿಷ್ಟ ಮಿತಿಗಿಂತ ಅಥವಾ ಇತರ ಜಾಗತಿಕ ಕರೆನ್ಸಿಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಏರಿದೆ. ಡಾಲರ್ ಮೌಲ್ಯ ಏರಿಕೆಯು ಅಮೇರಿಕದ ವ್ಯಾಪಾರ, ಕೈಗಾರಿಕೆಗಳು ಮತ್ತು ರಫ್ತುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮೇರಿಕದ ಸರಕುಗಳು ದುಬಾರಿಯಾಗುತ್ತವೆ. ಇದರಿಂದ ಅಮೇರಿಕಾದ ಕೈಗಾರಿಕೆಗಳ ಉತ್ಪಾದನಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತಿದೆ.

ಟ್ರಂಪ್ ಡಾಲರ್ ಮೌಲ್ಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪರಿಣಾಮವಾಗಿ, ಮುಂಬರುವ ಅವಧಿಯಲ್ಲಿ ಡಾಲರ್ ಮೌಲ್ಯ ಕುಸಿಯಬಹುದು. ಅದು ಸಂಭವಿಸಿದಲ್ಲಿ, ಅದು ಡಾಲರ್‌ನ ಭವಿಷ್ಯದ ಬಗ್ಗೆ ಪ್ರಶ್ನೆಚಿಹ್ನೆಗಳು ನಿರ್ಮಾಣವಾಗಿ ರಾಷ್ಟ್ರದ ಇತರ ಪರ್ಯಾಯಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ಕಾರಣವಾಗಬಹುದು. ಇದರಲ್ಲಿ ಚಿನ್ನವು ಪ್ರಮುಖ ಆಯ್ಕೆಯಾಗಿದೆ. ಪರಿಣಾಮವಾಗಿ, ಮುಂಬರುವ ಅವಧಿಯಲ್ಲಿ ಡಾಲರ್ ದುರ್ಬಲಗೊಳ್ಳಬಹುದು, ಇದು ಚಿನ್ನದ ಬೆಲೆ ಏರಿಕೆಗೆ ಮತ್ತಷ್ಟು ಕಾರಣವಾಗಬಹುದು.

೪. ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಲಿದೆಯೇ ?

ಹೆಚ್ಚುತ್ತಿರುವ ಅಭದ್ರತೆಯು ಚಿನ್ನಕ್ಕೆ ನಿತ್ಯ ಹೊಸ ಉತ್ತೇಜನ ನೀಡುತ್ತಿದೆ. ಈ ಅಭದ್ರತೆಯಿಂದಾಗಿ, ರಾಷ್ಟ್ರಗಳು ಮಾತ್ರವಲ್ಲ; ವ್ಯಕ್ತಿಗಳು ಸಹ ಚಿನ್ನದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅರ್ಥಶಾಸ್ತ್ರದ ನಿಯಮಗಳ ಪ್ರಕಾರ, ಒಂದು ವಸ್ತುವಿನ ಬೇಡಿಕೆ ಹೆಚ್ಚಾದಾಗ, ಅದರ ಬೆಲೆ ಹೆಚ್ಚಾಗುತ್ತದೆ. ಆದ್ದರಿಂದ ಮುಂಬರುವ ಭವಿಷ್ಯದಲ್ಲಿ ಚಿನ್ನದ ‘ಹೊಳಪು ಹೆಚ್ಚಿಸಲಿದೆಯೆಂದು ಅನಿಸುತ್ತದೆ.

೫. ಭಾರತದಲ್ಲಿ ಚಿನ್ನದ ದರಗಳು ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಬಹುದು ?

ಮುಂದಿನ ತಿಂಗಳಿನಲ್ಲಿ ಟ್ರಂಪ್ ಅವರ ತೆರಿಗೆನೀತಿಗಳು ಜಾರಿಗೆ (ಈಗಾಗಲೇ ಜಾರಿಗೆ ಬಂದಿದೆ) ಬಂದಾಗ ಮತ್ತು ಜಾಗತಿಕ ವ್ಯಾಪಾರದ ಮೇಲೆ ನಕಾರಾತ್ಮಕ ಪರಿಣಾಮ ಗೋಚರಿಸಲು ಪ್ರಾರಂಭಿಸಿದಾಗ, ಚಿನ್ನವು ಹೊಸ ದಾಖಲೆಯ ಮಟ್ಟವನ್ನು ತಲುಪಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಜನವರಿ ೧ ರಿಂದ ಮಾರ್ಚ್ ೧೩ ಈ ೪೫ ದಿನಗಳ ಕಾಲಾವಧಿಯಲ್ಲಿ ೧೦೦ ಗ್ರಾಮ ೨೪ ಕ್ಯಾರೆಟ್ ಚಿನ್ನದ ಬೆಲೆಯು ೧೧ ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ. ಶೇಕಡಾವಾರು ಪ್ರಮಾಣದಲ್ಲಿ ನೋಡಿದರೆ, ಈ ದರ ಸುಮಾರು ಶೇ. ೧೩ ರಷ್ಟಿದೆ. ಈಗ ಚಿನ್ನದ ಬೆಲೆ ೧ ಲಕ್ಷ ರೂಪಾಯಿಗಳನ್ನು ತಲುಪಲು ಕೇವಲ ಶೇ. ೧೪ ರಷ್ಟು ಹೆಚ್ಚಳವಾಗುವ ಅಗತ್ಯವಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ವರ್ಷದ ಕೊನೆಯಲ್ಲಿ ಚಿನ್ನದ ಬೆಲೆ ಸಹಜವಾಗಿ ೧ ಲಕ್ಷ ರೂಪಾಯಿಗಳನ್ನು ತಲುಪಿದರೆ ಆಶ್ಚರ್ಯ ಪಡಬೇಕಾಗಿಲ್ಲ.

(ಆಧಾರ: ಡಾ. ಶೈಲೇಂದ್ರ ದೇವಳಾಣಕರ ಅವರ ಫೇಸಬುಕ್ ಮತ್ತು ‘ಲೋಕಮತ ದಿನಪತ್ರಿಕೆ)

(೧೬.೦೩.೨೦೨೫)