
‘ಕೆಲವು ದಿನಗಳ ಹಿಂದೆ ಭಾರತೀಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿರೋಧಿ ಪಕ್ಷಗಳು ರಾಜ್ಯಸಭೆಯ ಉಪರಾಷ್ಟ್ರಪತಿ ಜಗದೀಶ ಧನಖಡ್ ಇವರ ವಿರುದ್ಧ ಅವಿಶ್ವಾಸ ಪ್ರಸ್ತಾಪವನ್ನು ಮಂಡಿಸಿದವು. ಆ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಭಾಜಪ ಒಕ್ಕೂಟದ ಮೈತ್ರಿ ಸರಕಾರ ಮತ್ತು ವಿರೋಧಿಪಕ್ಷಗಳ ನಡುವಿನ ಜಗಳವನ್ನು ಸಂಪೂರ್ಣ ದೇಶ ವೀಕ್ಷಿಸಿತು. ಈ ಸಂದರ್ಭದಲ್ಲಿ ೨ ಮಹತ್ವದ ವಿಷಯಗಳು ಎದ್ದು ಕಾಣಿಸಿದವು. ಅದೇನೆಂದು ನೋಡೋಣ.
೧. ವಿರೋಧಿ ಪಕ್ಷಗಳ ದುರ್ವರ್ತನೆ
ವಿರೋಧಿ ಪಕ್ಷಗಳು ಈ ರೀತಿ ವರ್ತಿಸಿ ದೇಶವಾಸಿಗಳ ಹಣ ಮತ್ತು ಸಮಯವನ್ನು ವ್ಯರ್ಥಗೊಳಿಸುತ್ತಿವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಸೋಗು ಹಾಕುತ್ತಾ ವಿರೋಧಕ್ಕಾಗಿ ವಿರೋಧ ಮಾಡುವುದಷ್ಟೇ ವಿರೋಧಪಕ್ಷಗಳ ಕಾರ್ಯವಾಗಿದೆ. ಪರಸ್ಪರರ ವಿರುದ್ಧ ಆರೋಪ-ಪ್ರತ್ಯಾರೋಪ; ದೇಶದ ಪ್ರಧಾನಮಂತ್ರಿ, ಗೃಹಮಂತ್ರಿ ಇವರಂತಹ ಉನ್ನತ ಹುದ್ದೆಯಲ್ಲಿನ ವ್ಯಕ್ತಿಗಳ ಭಾಷಣ ನಡೆಯುತ್ತಿರುವಾಗ ಬೊಬ್ಬೆ ಹೊಡೆಯುವುದನ್ನು ನೋಡಿದಾಗ ‘ರಾಜ್ಯಸಭೆಯ ಸದಸ್ಯರಾಗಿರುವ ಈ ಸಂಸದರು ಯಾವ ಶಾಲೆಯಲ್ಲಿ ಕಲಿತು ಬಂದಿರಬಹುದು?’, ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಉದ್ಭವಿಸಬಹುದು. ಈ ರೀತಿ ಅಶಿಸ್ತಿನಿಂದ ವರ್ತಿಸುವ ಸಂಸದರೇ ಭಾರತೀಯ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದ್ದಾರೆ.
೨. ಉಪರಾಷ್ಟ್ರಪತಿಗಳನ್ನು ಏಕವಚನದಲ್ಲಿ ಉಲ್ಲೇಖಿಸುವ ವಾರ್ತಾವಾಹಿನಿಗಳು
ರಾಜ್ಯಸಭೆಯ ಸಭಾಪತಿಗಳ ವಿರುದ್ಧ ಮಂಡಿಸಿದ ಅವಿಶ್ವಾಸ ಪ್ರಸ್ತಾಪದ ಚರ್ಚೆಯನ್ನು ನೇರವಾಗಿ ವಾರ್ತಾವಾಹಿನಿಗಳಲ್ಲಿ ಪ್ರಸಾರ ಮಾಡಲಾಗಿತ್ತು. ಆ ವಾಹಿನಿಗಳಲ್ಲಿನ ವಾರ್ತೆಯನ್ನು ಸಂಗ್ರಹಿಸುವಾಗ ರಾಜ್ಯಸಭೆಯ ಸಭಾಪತಿ ಅಂದರೆ ದೇಶದ ‘ಉಪರಾಷ್ಟ್ರಪತಿ’ಯವರನ್ನು ಏಕವಚನದಲ್ಲಿ ಉಲ್ಲೇಖಿಸಲಾಗು ತ್ತಿತ್ತು. ಯಾವ ಸಂವಿಧಾನ ರಕ್ಷಣೆಯ (ಪವಿತ್ರ) ಕಾರ್ಯ (?) ರಾಹುಲ ಗಾಂಧಿ ಮಾಡುತ್ತಿದ್ದಾರೆಯೋ, ಅದೇ ಸಂವಿಧಾನದಲ್ಲಿ ನಮೂದಿಸಿದ ದೇಶದ ದ್ವಿತೀಯ ಸ್ಥಾನದ ಸರ್ವೋಚ್ಚ ಹುದ್ದೆ ಯಲ್ಲಿನ ವ್ಯಕ್ತಿಯನ್ನು ಏಕವಚನದಲ್ಲಿ ಉಲ್ಲೇಖಿಸಿ ಆ ಹುದ್ದೆಗೆ ಅವಮಾನಿಸಲಾಗುತ್ತಿತ್ತು. ಈ ಜನರು ಉಪರಾಷ್ಟ್ರಪತಿ ಎಂಬ ಪದವಿಯನ್ನು ಸಹ ಉಲ್ಲೇಖಿಸದಿರುವುದು ಎಂದರೆ, ದೇಶದ ಉಪರಾಷ್ಟ್ರಪತಿಯವರನ್ನೂ ತಥಾಕಥಿತ (ನಾಮಧಾರಿ) (ಸೆಲೆಬ್ರಿಟಿ) ಕ್ರಿಕೆಟ್‌ಪಟು, ಕಲಾವಿದರ ಸಾಲಿಗೇ ಸೇರಿಸಿದ್ದಾರೆ ಎಂದಾಯಿತು. ಉಪರಾಷ್ಟ್ರಪತಿ ಜಗದೀಶ ಧನಖಡ್ ಇವರನ್ನು ಕಳೆದ ಒಂದುವರೆ ವರ್ಷದಿಂದ ವಿರೋಧಪಕ್ಷಗಳು ನಡೆಸುತ್ತಿರುವ ಅವಮಾನವನ್ನೇ ಈ ವಾರ್ತಾವಾಹಿನಿಗಳು ಅನುಸರಿಸುತ್ತಿರುವ ದೃಶ್ಯ ಕಾಣಿಸುತ್ತಿದೆ.
ಪ್ರಜಾಪ್ರಭುತ್ವದ ಆಧಾರಸ್ತಂಭವೆಂದು ಹೇಳಲ್ಪಡುವ ಪತ್ರಿಕೋದ್ಯಮ ಮತ್ತು ಸಂಸದರೇ ಸಂವಿಧಾನ ಮತ್ತು ದೇಶದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡುತ್ತಿದ್ದಾರೆ ಇದಕ್ಕಿಂತ ದೊಡ್ಡ ದುಃಖದಾಯಕ ವಿಷಯ ಇನ್ನೇನಿರಬಹುದು ? ಇಂತಹ ಶಿಸ್ತೇ ಇಲ್ಲದ ಸಂಸದರು ಮತ್ತು ವಾರ್ತಾವಾಹಿನಿಗಳ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳಬೇಕು, ಎಂಬುದು ಸಾಮಾನ್ಯ ನಾಗರಿಕರ ಭಾವನೆಯಾಗಿದೆ.’
– ಓರ್ವ ದೇಶಾಭಿಮಾನಿ ನಾಗರಿಕ (೧೭.೧೨.೨೦೨೪)