Gujarat Students Injured In Blade Dare Game : ಗುಜರಾತ್‌ನಲ್ಲಿ ಆನ್‌ಲೈನ್ ಆಟದ ಹೆಸರಿನಲ್ಲಿ 40 ವಿದ್ಯಾರ್ಥಿಗಳು ತಮ್ಮ ಕೈಗಳ ಮೇಲೆ ಗಾಯಗಳನ್ನು ಮಾಡಿಕೊಂಡರು !

ನಿಷೇಧಿತ ‘ಬ್ಲೂ ವೇಲ್’ ಆಟದಿಂದ ವಿದ್ಯಾರ್ಥಿಗೆ ಮಾರಣಾಂತಿಕ ಕಲ್ಪನೆ ಹೊಳೆಯಿತು

ಕರ್ಣಾವತಿ (ಗುಜರಾತ್) – ರಾಜ್ಯದ ಅಮ್ರೇಲಿ ಜಿಲ್ಲೆಯ ಮೊಟಾ ಮುಂಜಿಯಾಸರ್ ಗ್ರಾಮದ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬನು ತನ್ನ ತರಗತಿಯ ಇತರ ವಿದ್ಯಾರ್ಥಿಗಳಿಗೆ ಬ್ಲೇಡ್‌ನಿಂದ ಕೈ ಕತ್ತರಿಸುವ ಕಾರ್ಯವನ್ನು ನೀಡಿದ್ದನು. ಆರಂಭದಲ್ಲಿ, ಅವನ ತರಗತಿಯ ಸುಮಾರು 10 ಮಕ್ಕಳು ಅದರಲ್ಲಿ ಭಾಗವಹಿಸಿದರು ನಂತರ 5 ರಿಂದ 8 ನೇ ತರಗತಿಯ 40 ಮಕ್ಕಳು ಅದರಲ್ಲಿ ಭಾಗವಹಿಸಿದರು. 40 ಮಕ್ಕಳು ವಿವಿಧ ವಸ್ತುಗಳನ್ನು ಬಳಸಿ ತಮ್ಮ ಕೈಗಳ ಮೇಲೆ ಗಾಯಗಳನ್ನು ಮಾಡಿಕೊಂಡರು. ಈ ಎಲ್ಲಾ ವಿದ್ಯಾರ್ಥಿಗಳು 5 ರಿಂದ 8 ನೇ ತರಗತಿಯಲ್ಲಿ ಓದುತ್ತಿದ್ದಾರೆ. ‘ಬ್ಲೂ ವೇಲ್’ ಎಂಬ ವೀಡಿಯೊ ಆಟವನ್ನು ಆಡುವ ಮೂಲಕ ವಿದ್ಯಾರ್ಥಿಗೆ ಈ ರೀತಿಯ ಕೆಲಸವನ್ನು ನೀಡುವ ಕಲ್ಪನೆ ಹೊಳೆಯಿತು.

1. ‘ಯಾರ ಕೈಯಲ್ಲಿ ಹೆಚ್ಚು ಗಾಯಗಳಿರುತ್ತವೆಯೋ ಅವರಿಗೆ 10 ರೂಪಾಯಿ ಬಹುಮಾನ ನೀಡಲಾಗುವುದು ಮತ್ತು ಅವರೇ ನಿಗದಿತ ಕೆಲಸವನ್ನು ಪೂರ್ಣಗೊಳಿಸಿದ್ದಾರೆ ಎಂದು ಪರಿಗಣಿಸಲಾಗುವುದು’ ಎಂದು ಆ ವಿದ್ಯಾರ್ಥಿ ಇತರ ಮಕ್ಕಳಿಗೆ ಹೇಳಿದನು.

2. ಕೆಲಸವನ್ನು ಪೂರ್ಣಗೊಳಿಸಿದ ಮಗುವಿಗೆ 10 ರೂಪಾಯಿ ಬಹುಮಾನ ನೀಡಲಾಗುವುದು. ಯಾವುದೇ ವಿದ್ಯಾರ್ಥಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಅವನು ಇತರರಿಗೆ 5 ರೂಪಾಯಿ ನೀಡಬೇಕಾಗುತ್ತದೆ.

3. ಪೊಲೀಸರ ತನಿಖೆಯಲ್ಲಿ, ವಿದ್ಯಾರ್ಥಿಗಳಿಗೆ ಕೆಲಸವನ್ನು ನೀಡುವ ವಿದ್ಯಾರ್ಥಿಯು ಶಾಲೆಯಲ್ಲಿ ಮೊಬೈಲ್ ಫೋನ್ ತರುತ್ತಾನೆ ಮತ್ತು ಆಗಾಗ್ಗೆ ಮನೆಯಲ್ಲಿ ಆನ್‌ಲೈನ್ ಆಟಗಳನ್ನು ಆಡುತ್ತಾನೆ ಎಂದು ತಿಳಿದುಬಂದಿದೆ.

ಜವಾಬ್ದಾರಿ ಕೈಚೆಲ್ಲಿದ ಶಾಲಾ ಶಿಕ್ಷಕರು !

ಮಕ್ಕಳ ಕೈಗಳ ಮೇಲಿನ ಗಾಯಗಳನ್ನು ನೋಡಿ ಗೊಂದಲ ಉಂಟಾದಾಗ, ಪ್ರಾಥಮಿಕ ಶಾಲಾ ಶಿಕ್ಷಕರು ಇದು ಪೋಷಕರ ತಪ್ಪು ಎಂದು ಹೇಳಿದರು. ಶಿಕ್ಷಕರ ಪ್ರಕಾರ, ‘ಪೋಷಕರು ಮಕ್ಕಳಿಗೆ ಮೊಬೈಲ್ ಫೋನ್ ಬಳಸಲು ಅನುಮತಿ ನೀಡುತ್ತಾರೆ. ಮಕ್ಕಳು ಅದರಲ್ಲಿ ಯಾವ ಆಟಗಳನ್ನು ಆಡುತ್ತಿದ್ದಾರೆ ಅಥವಾ ಏನು ನೋಡುತ್ತಿದ್ದಾರೆ ಎಂಬುದನ್ನು ಅವರು ಗಮನಿಸುವುದಿಲ್ಲ. ಮಕ್ಕಳನ್ನು ಮೊಬೈಲ್‌ನ ವ್ಯಸನದಿಂದ ಮುಕ್ತಗೊಳಿಸುವ ಜವಾಬ್ದಾರಿ ಶಿಕ್ಷಕರದ್ದಲ್ಲ, ಪೋಷಕರದ್ದಾಗಿದೆ, ಎಂದು ಹೇಳಿದರು.

ಭಾರತದಲ್ಲಿ ಬ್ಲೂ ವೇಲ್ ಆಟದ ಮೇಲೆ ನಿಷೇಧ !

ಭಾರತದಲ್ಲಿ ‘ಬ್ಲೂ ವೇಲ್’ ಆನ್‌ಲೈನ್ ಆಟವನ್ನು ಸರಕಾರವು 2017 ರಲ್ಲಿ ನಿಷೇಧಿಸಿತು. ಈ ಆಟವನ್ನು ‘ಆತ್ಮಹತ್ಯೆಗೆ ಪ್ರೇರೇಪಿಸುವ ಆಟ’ ಎಂದು ಕರೆಯಲಾಗುತ್ತದೆ. 2015 ರಿಂದ 2017 ರ ಅವಧಿಯಲ್ಲಿ, ಈ ಆಟವನ್ನು ಆಡಿದ ಅನೇಕರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ದಾಖಲಾಗಿವೆ. ಈ ಆಟವು 50 ಹಂತಗಳನ್ನು ಹೊಂದಿದೆ, ಅದು ಕ್ರಮೇಣ ಹೆಚ್ಚು ಕಷ್ಟಕರವಾಗುತ್ತದೆ. ಈ ಆಟವನ್ನು ಆಡುವವರಿಗೆ 50 ದಿನಗಳ ಅವಧಿಯಲ್ಲಿ ಪ್ರತಿದಿನ ಹೊಸ ಕೆಲಸಗಳನ್ನು ನೀಡಲಾಗುತ್ತದೆ. ಆರಂಭದಲ್ಲಿ ನೀಡಲಾದ ಕೆಲಸಗಳು ಸುಲಭವಾಗಿರುತ್ತವೆ, ಆದರೆ ಕೊನೆಯ ಹಂತದಲ್ಲಿ, ಅವು ಹೆಚ್ಚು ಕಷ್ಟಕರವಾಗುತ್ತವೆ, ಇದರಲ್ಲಿ ತಮ್ಮನ್ನು ತಾವು ನೋಯಿಸಿಕೊಳ್ಳುವುದು ಮತ್ತು ಭಾಗವಹಿಸಿದವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವುದು ಸಹ ಒಳಗೊಂಡಿರುತ್ತದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ನಿಷೇಧಿಸಲಾದ ಆನ್‌ಲೈನ್ ಆಟಗಳನ್ನು ಮಕ್ಕಳು ಹೇಗೆ ನೋಡುತ್ತಾರೆ ? ಇದು ಮಕ್ಕಳ ಜೀವದೊಂದಿಗೆ ಆಟವಾಡುವಂತಹ ವಿಷಯವಾಗಿದೆ !