ನೀತಿಗಳ ಉಲ್ಲಂಘನೆಯಿಂದಾಗಿ ಕ್ರಮ
ನವ ದೆಹಲಿ – ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಈ ಸಾಮಾಜಿಕ ಮಾಧ್ಯಮಗಳ ಸಂಸ್ಥೆ ‘ಮೆಟಾ’ವು ಭಾಗ್ಯನಗರ (ತೆಲಂಗಾಣ) ದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್‌ಗೆ ಸಂಬಂಧಿಸಿದ 2 ಫೇಸ್‌ಬುಕ್ ಖಾತೆಗಳು ಮತ್ತು 3 ಇನ್‌ಸ್ಟಾಗ್ರಾಂ ಖಾತೆಗಳನ್ನು ತೆಗೆದುಹಾಕಿದೆ. ‘ಇಂಡಿಯಾ ಹೇಟ್ ಲ್ಯಾಬ್’ (ಐ.ಎಚ್.ಎಲ್.) ಇದರ ವರದಿಯಲ್ಲಿ ಅಧಿಕೃತ ನಿಷೇಧವಿದ್ದರೂ ಟಿ. ರಾಜಾ ಸಿಂಗ್ ಮತ್ತು ಅವರ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಮುಸಲ್ಮಾನರ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ ಎಂದು ಬಹಿರಂಗವಾದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ತೆಗೆದುಹಾಕಲಾದ ಫೇಸ್‌ಬುಕ್ ‘ಪುಟ’ವು 10 ಲಕ್ಷಕ್ಕಿಂತಲೂ ಹೆಚ್ಚು ಅನುಯಾಯಿಗಳನ್ನು (ಬೆಂಬಲಿಗರು) ಹೊಂದಿತ್ತು, ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ಒಟ್ಟು 1 ಲಕ್ಷ 55 ಸಾವಿರಕ್ಕಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದವು.
ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣ ! – ಟಿ. ರಾಜಾ ಸಿಂಗ್
ಮೆಟಾದ ಕ್ರಮದ ಬಗ್ಗೆ ಟಿ. ರಾಜಾ ಸಿಂಗ್‌ರವರು ಪ್ರಸಿದ್ಧಿಗೆ ನೀಡಿದ ಹೇಳಿಕೆಯಲ್ಲಿ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ನನ್ನ ಕುಟುಂಬ, ಸ್ನೇಹಿತರು, ಕಾರ್ಯಕರ್ತರು ಮತ್ತು ಬೆಂಬಲಿಗರ ಖಾತೆಗಳನ್ನು ಮುಚ್ಚಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಹಿಂದೂಗಳನ್ನು ಗುರಿಯಾಗಿಸುವ ಈ ‘ಆಯ್ದ ಸೆನ್ಸಾರ್‌ಶಿಪ್’ ಆಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಅವರ ದೂರಿನಿಂದ ನನ್ನ ಅಧಿಕೃತ ಖಾತೆಯನ್ನು ತಪ್ಪಾದ ರೀತಿಯಲ್ಲಿ ಗುರಿಯಾಗಿಸಲಾಗಿತ್ತು. ಈಗ ನನ್ನ ವಿಡಿಯೋಗಳನ್ನು ಹಂಚಿಕೊಳ್ಳುವವರನ್ನು ಕೂಡಾ ಮೌನವಾಗಿಸಲಾಗುತ್ತಿದೆ’, ಎಂದು ಹೇಳಿದರು.
ನಮ್ಮ ನೀತಿಗಳನ್ನು ಉಲ್ಲಂಘಿಸಿದ್ದಾರೆ ! – ಫೇಸ್‌ಬುಕ್
ಫೇಸ್‌ಬುಕ್‌ನ ವಕ್ತಾರರು ಒಂದು ಹೇಳಿಕೆಯಲ್ಲಿ, ಟಿ. ರಾಜಾ ಸಿಂಗ್‌ರವರನ್ನು ಫೇಸ್‌ಬುಕ್‌ನಲ್ಲಿ ನಿಷೇಧಿಸಿದ್ದೇವೆ, ಏಕೆಂದರೆ ಅವರು ನಮ್ಮ ನೀತಿಗಳನ್ನು ಉಲ್ಲಂಘಿಸಿದ್ದಾರೆ. ಹಿಂಸಾಚಾರ ಮತ್ತು ದ್ವೇಷವನ್ನು ಪ್ರೋತ್ಸಾಹಿಸುವ ಅಥವಾ ಅದರಲ್ಲಿ ಪಾಲ್ಗೊಳ್ಳುವವರನ್ನು ನಮ್ಮ ವೇದಿಕೆಯಲ್ಲಿ ನಿಷೇಧಿಸಲಾಗಿದೆ. ಸಂಭಾವ್ಯ ಉಲ್ಲಂಘನೆ ಮಾಡುವವರನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆ ವಿಸ್ತಾರವಾಗಿದೆ ಮತ್ತು ಅದಕ್ಕಾಗಿಯೇ ನಾವು ಅವರ ಖಾತೆಯನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ’, ಎಂದು ಹೇಳಿದೆ.
ಮುಸಲ್ಮಾನ ವಿರೋಧಿ ಹೇಳಿಕೆಗಳ ಪರಿಣಾಮ
ಟಿ. ರಾಜಾ ಸಿಂಗ್‌ರವರ ಪ್ರಚೋದನಕಾರಿ ಮತ್ತು ಮುಸಲ್ಮಾನ ವಿರೋಧಿ ಹೇಳಿಕೆಗಳ ಇತಿಹಾಸದಿಂದಾಗಿ ಮೆಟಾದ ‘ಅಪಾಯಕಾರಿ ವ್ಯಕ್ತಿಗಳು ಮತ್ತು ಸಂಘಟನೆಗಳು’ ನೀತಿಗಳ ಅಡಿಯಲ್ಲಿ ಅವರ ಮೇಲೆ ನಿಷೇಧ ಹೇರಲಾಗಿದೆ. ಈ ನಿಷೇಧದಿಂದಾಗಿ ಸಿಂಗ್‌ರವರನ್ನು ಈ ವೇದಿಕೆಗಳಲ್ಲಿ ಯಾವುದೇ ಅಧಿಕೃತ ಉಪಸ್ಥಿತಿಯಿಂದ ನಿಷೇಧಿಸಲಾಗಿದೆ ಮತ್ತು ಅವರನ್ನು ಪ್ರತಿನಿಧಿಸುವ ಯಾವುದೇ ಹೊಸ ಪುಟಗಳು, ಗುಂಪುಗಳು ಅಥವಾ ಖಾತೆಗಳನ್ನು ಕೂಡಾ ತೆಗೆದುಹಾಕಲಾಗಿದೆ.
ಸಂಪಾದಕೀಯ ನಿಲುವುಇಂತಹ ನೀತಿಗಳು ಕೇವಲ ಹಿಂದುತ್ವನಿಷ್ಠರಿಗೆ ಮಾತ್ರ ಅನ್ವಯಿಸುತ್ತವೆ ಮತ್ತು ಅವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ, ಆದರೆ ಜಿಹಾದಿ ಭಯೋತ್ಪಾದಕರು, ಅವರ ಬೆಂಬಲಿಗರು, ಹಾಗೆಯೇ ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟ್‌ಗಳಾಗಿರುವ ಹಿಂದೂ ವಿರೋಧಿಗಳ ವಿರುದ್ಧ ದೂರು ನೀಡಿದರೂ ಇಂತಹ ಕ್ರಮವನ್ನು ತೆಗೆದುಕೊಳ್ಳುವುದು ಕಂಡುಬರುವುದಿಲ್ಲ. ಆದ್ದರಿಂದ ಭಾರತ ಸರಕಾರವು ಇದರಲ್ಲಿ ಮಧ್ಯಪ್ರವೇಶಿಸುವುದು ಅವಶ್ಯಕವಾಗಿದೆ ! |