Sanatan Rashtra Shankhnad Mahotsav : ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಭವ್ಯ ಆಯೋಜನೆ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 83 ನೇ ಜನ್ಮದಿನದ ಅಂಗವಾಗಿ…

ಸಂತ-ಮಹಂತರು, ಸಚಿವರು ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಸಾಧಕರು ಮತ್ತು ಧರ್ಮನಿಷ್ಠರು ಭಾಗವಹಿಸಲಿದ್ದಾರೆ !

ಪಣಜಿ (ಗೋವಾ) – ಸಮಸ್ತ ಮನುಕುಲದ ಪರಮ ಕಲ್ಯಾಣಕ್ಕಾಗಿ, ಹಾಗೆಯೇ ರಾಮರಾಜ್ಯದ ಸ್ಥಾಪನೆಗಾಗಿ ಕಾರ್ಯನಿರತವಾಗಿರುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 83 ನೇ ಜನ್ಮೋತ್ಸವ ಸಮಾರಂಭ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ನಿಮಿತ್ತ ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಭವ್ಯ ಆಯೋಜನೆಯಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಈ ಮಹೋತ್ಸವವು ಮೇ 17 ರಿಂದ 19, 2025 ರವರೆಗೆ 3 ದಿನಗಳ ಕಾಲ ಫೊಂಡಾದ ಫಾರ್ಮಾಗುಡಿಯಲ್ಲಿರುವ ಗೋವಾ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ. ಈ ಭವ್ಯ ಮಹೋತ್ಸವದಲ್ಲಿ ದೇಶದಾದ್ಯಂತ ಅನೇಕ ಸಂತ-ಮಹಂತರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಚಿವರು, ಪ್ರಖರ ಹಿಂದೂತ್ವವಾದಿಗಳು, ಚಿಂತಕರು, ವಕೀಲರು, ಉದ್ಯಮಿಗಳು, ಸಂಪಾದಕರು ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಸಾಧಕರು, ಧರ್ಮಪ್ರೇಮಿ ಹಿಂದೂಗಳು ಭಾಗವಹಿಸಲಿದ್ದಾರೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರು ಮಾರ್ಚ್ 21 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಡದಿಂದ ಶ್ರೀ. ಜಯೇಶ ಥಳಿ, ಶ್ರೀ. ರಮೇಶ್ ಶಿಂದೆ, ಶ್ರೀ. ರಾಜ್ ಶರ್ಮಾ, ಶ್ರೀ. ಸಂತೋಷ ಗೋಢಗೆ, ಶ್ರೀ. ಚೇತನ ರಾಜಹಂಸ, ಶ್ರೀ. ಕಮಲೇಶ ಬಾಂದೇಕರ, ಶ್ರೀ. ಸುಜನ ನಾಯಿಕ್, ಶ್ರೀ. ರಾಘವ ಶೆಟ್ಟಿ, ಶ್ರೀ. ಅನಿಲ್ ನಾಯಿಕ, ಶ್ರೀ. ಮನೋಜ ಗಾವಕರ

ಪಣಜಿಯ ಹೋಟೆಲ್ ಮನೋಶಾಂತಿಯಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ. ಸಂತೋಷ ಘೋಡಗೆ, ಸಾಂಸ್ಕೃತಿಕ ನ್ಯಾಸದ ಶ್ರೀ. ಜಯಂತ ಮಿರಿಂಗಕರ, ಭಾರತ ಸ್ವಾಭಿಮಾನದ ಶ್ರೀ. ಕಮಲೇಶ ಬಾಂದೇಕರ, ಬ್ರಾಹ್ಮಣ ಮಹಾಸಂಘ ಗೋವಾದ ಶ್ರೀ. ರಾಜ ಶರ್ಮಾ, ಗೋಮಂತಕ ಮಂದಿರ ಮಹಾಸಂಘದ ಶ್ರೀ. ಜಯೇಶ ಥಳಿ, ಕುಂಡಯಿ ತಪೋಭೂಮಿಯ ಪದ್ಮನಾಭ ಸಂಪ್ರದಾಯದ ಶ್ರೀ. ಸುಜನ ನಾಯಿಕ, ಜಗದ್ಗುರು ಸ್ವಾಮಿ ನರೇಂದ್ರಾಚಾರ್ಯ ಮಹಾರಾಜರ ಅನುಯಾಯಿಗಳಾದ ಶ್ರೀ. ಅನಿಲ ನಾಯಿಕ, ಉದ್ಯಮಿ ಶ್ರೀ. ರಾಘವ ಶೆಟ್ಟಿ ಮತ್ತು ಕದಂಬದ ಮಾಜಿ ಮಹಾವ್ಯವಸ್ಥಾಪಕರಾದ ಶ್ರೀ. ಸಂಜಯ ಘಾಟೆಯವರು ಉಪಸ್ಥಿತರಿದ್ದರು.

ಈ ಪತ್ರಿಕಾಗೋಷ್ಠಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಲಾಂಛನ (ಲೋಗೋ) ಮತ್ತು ‘ಧರ್ಮೇಣ ಜಯತಿ ರಾಷ್ಟ್ರಮ್ । (ಧರ್ಮದಿಂದ ರಾಷ್ಟ್ರವು ವಿಜಯಿಯಾಗುತ್ತದೆ)’ ಎಂಬ ಘೋಷವಾಕ್ಯವನ್ನು (ಟ್ಯಾಗ್‌ಲೈನ್) ಬಿಡುಗಡೆ ಮಾಡಲಾಯಿತು.

ಮಹೋತ್ಸವಕ್ಕೆ ಆಹ್ವಾನಿತ ಸಂತ-ಮಹಂತರು ಮತ್ತು ವಿಶೇಷ ಗಣ್ಯರು

‘’ಆರ್ಟ್ ಆಫ್ ಲಿವಿಂಗ್’ನ ಸಂಸ್ಥಾಪಕರಾದ ಗುರುದೇವ ಶ್ರೀ ಶ್ರೀ ರವಿಶಂಕರ, ಪತಂಜಲಿ ಯೋಗಪೀಠದ ಸಂಸ್ಥಾಪಕರಾದ ಪ.ಪೂ. ಯೋಗಋಷಿ ಸ್ವಾಮಿ ರಾಮದೇವ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಶಾಧ್ಯಕ್ಷರಾದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮತ್ತು ನ್ಯಾಸದ ಮಹಾಸಚಿವರಾದ ಶ್ರೀ. ಚಂಪತ ರಾಯ, ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷರಾದ ಪೂ. ಮಹಂತ ರವೀಂದ್ರ ಪುರಿ ಮಹಾರಾಜ, ಅಯೋಧ್ಯಾ ಹನುಮಾನಗಢಿಯ ಪೂ. ಮಹಂತ ರಾಜು ದಾಸ, ಶ್ರೀ ಕ್ಷೇತ್ರ ತಪೋಭೂಮಿ (ಕುಂಡಯಿ, ಗೋವಾ) ಪೀಠಾಧೀಶ್ವರ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದಾಚಾರ್ಯ ಸ್ವಾಮಿ, ‘ಸನಾತನ ಬೋರ್ಡ್’ ಸಿದ್ಧಹಸ್ತರಾದ ಪೂಜ್ಯಶ್ರೀ ದೇವಕೀನಂದನ ಠಾಕೂರ ಮಹಾರಾಜರು, ಕೇಂದ್ರ ವಿದ್ಯುತ್ ರಾಜ್ಯಸಚಿವರಾದ ಶ್ರೀಪಾದ ನಾಯಿಕ, ಗೋವಾದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ ಸಾವಂತ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ. ದೇವೇಂದ್ರ ಪಡಣವೀಸ, ಉಪಮುಖ್ಯಮಂತ್ರಿಗಳಾದ ಶ್ರೀ. ಏಕನಾಥ ಶಿಂದೆ, ತೆಲಂಗಾಣದ ಭಾಜಪದ ಶಾಸಕರಾದ ಟಿ. ರಾಜಾಸಿಂಹ, ಮಾಜಿ ಕೇಂದ್ರ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹುರಕರ, ಹಾಗೆಯೇ ಕಾಶಿ-ಮಥುರಾದಲ್ಲಿನ ದೇವಸ್ಥಾನಗಳ ಮೊಕದ್ದಮೆಗಳನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯವಾದಿಗಳಾದ ವಿಷ್ಣು ಶಂಕರ ಜೈನ ಸೇರಿದಂತೆ ಅನೇಕ ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಮಹೋತ್ಸವದ ಬಗ್ಗೆ ಮಾಹಿತಿ ನೀಡುತ್ತಿರುವಾಗ ಶ್ರೀ. ಚೇತನ ರಾಜಹಂಸರವರು ಮುಂದುವರಿದು,

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಲಾಂಛನ (ಲೋಗೋ) ಮತ್ತು ‘ಧರ್ಮೇಣ ಜಯತೇ ರಾಷ್ಟ್ರಮ್ ।’ ಎಂಬ ಘೋಷವಾಕ್ಯ (ಟ್ಯಾಗ್‌ಲೈನ್)ವನ್ನು ಬಿಡುಗಡೆ ಮಾಡುತ್ತಿರುವಾಗ, ಎಡದಿಂದ ಸರ್ವಶ್ರೀ ದಾಮೋದರ ಧೊಂಡ, ಕಮಲೇಶ ಬಾಂದೇಕರ, ರಮೇಶ ಶಿಂದೆ, ಜಯೇಶ ಥಳಿ, ಸಂತೋಷ ಘೋಡಗೆ, ಚೇತನ ರಾಜಹಂಸ, ಜಯಂತ ಮಿರಿಂಗಕರ, ಸುಜನ ನಾಯಿಕ, ರಾಜ ಶರ್ಮಾ, ಸಂಜಯ ಘಾಟೆ, ಅನಿಲ ನಾಯಿಕ, ಮನೋಜ ಗಾವಕರ ಹಾಗೂ ರಾಘವ ಶೆಟ್ಟಿ.

೧. ಸನಾತನ ಸಂಸ್ಥೆಯು ಕಳೆದ 25 ವರ್ಷಗಳಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಗೋಮಂತಕದ ಪವಿತ್ರ ಭೂಮಿಯಿಂದ ಆದರ್ಶ ಮತ್ತು ಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸಲು ಅವಿರತವಾಗಿ ಶ್ರಮಿಸುತ್ತಿದೆ. ಈ ರಜತ ಮಹೋತ್ಸವ ವರ್ಷದ ನಿಮಿತ್ತ ರಾಮರಾಜ್ಯ ಸ್ವರೂಪದ ಆದರ್ಶ ರಾಷ್ಟ್ರದ ನಿರ್ಮಾಣಕ್ಕಾಗಿ ಸಾಮೂಹಿಕ ಸಂಕಲ್ಪ ಮಾಡಲಾಗುವುದು. ಇದರಿಂದ ಎಲ್ಲ ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಹಿಂದೂ ಸಂಘಟನೆಗಳ ನಡುವಿನ ಧರ್ಮಬಂಧುತ್ವ ಸುದೃಢವಾಗುತ್ತದೆ.

೨. ಭಾರತದ ಮುಂದಿರುವ ಸವಾಲುಗಳನ್ನು ಗಮನಿಸಿದರೆ, ಸನಾತನ ಧರ್ಮೀಯರ ಅಸ್ತಿತ್ವ ಮತ್ತು ಸನಾತನ ಧರ್ಮದ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದಲೇ ರಾಷ್ಟ್ರದ ಸನಾತನತ್ವವನ್ನು ಉಳಿಸಿಕೊಳ್ಳುವುದು ಮತ್ತು ಸನಾತನ ಗೌರವಶಿಖರಗಳಾದ ಗೋವು, ಗಂಗೆ, ಗಾಯತ್ರಿ, ದೇವಾಲಯಗಳು, ವೇದಾದಿ ಧರ್ಮಗ್ರಂಥಗಳಿಗೆ ಪುನರ್ವೈಭವ ತಂದುಕೊಡಲು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ.

೩. ಗೋವಾದಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ 3 ದಿನಗಳ ಕಾಲ ಸಂತ-ಮಹಂತರು, ಹಿಂದೂತ್ವವಾದಿಗಳು, ಗಣ್ಯರು ಮತ್ತು ಪ್ರತಿಷ್ಠಿತರು ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಸಾಧಕರು ಮತ್ತು ಧರ್ಮನಿಷ್ಠರು ಒಟ್ಟಿಗೆ ಸೇರುತ್ತಿದ್ದಾರೆ. ಇದು ಗೋಮಂತಕ ಭೂಮಿಯಲ್ಲಿ ಸನಾತನ ಧರ್ಮೀಯರ ಭವ್ಯ ಕುಂಭಮೇಳದಂತಿದ್ದು, ಇಲ್ಲಿ ಧರ್ಮ ಮತ್ತು ಆಧ್ಯಾತ್ಮದ ದಿವ್ಯ ಜ್ಞಾನಗಂಗೆ ಹರಿಯಲಿದೆ.

೪. ಈ ಮಹೋತ್ಸವದಲ್ಲಿ ದೇಶದಾದ್ಯಂತ ಆಗಮಿಸುವ ಸಂತರು, ಮಹಂತರು ಹಾಗೂ ಧರ್ಮಗುರುಗಳ ಸಂತ ಸಭೆ ಆಯೋಜಿಸಲಾಗಿದೆ. ರಾಷ್ಟ್ರ, ಧರ್ಮ, ಸಂಸ್ಕೃತಿ ಮತ್ತು ಹಿಂದೂ ಸಮಾಜಕ್ಕೆ ಪುನರ್ವೈಭವ ತಂದುಕೊಡಲು ಅವರು ತಮ್ಮ ಓಜಸ್ಸಿನ ಮಾತುಗಳಿಂದ ಮಾರ್ಗದರ್ಶನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಗಣ್ಯ ವಾಗ್ಮಿಗಳ ಮಾರ್ಗದರ್ಶನವೂ ಇರಲಿದೆ.

ಈ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ. ಸಂತೋಷ ಘೋಡಗೆ, ಭಾರತ ಸ್ವಾಭಿಮಾನದ ಶ್ರೀ. ಕಮಲೇಶ ಬಾಂದೇಕರ ಮತ್ತು ಪದ್ಮನಾಭ ಸಂಪ್ರದಾಯದ ಶ್ರೀ. ಸುಜನ ನಾಯಿಕ ರವರು ಈ ಕಾರ್ಯಕ್ರಮವು ಒಂದು ಕುಂಭಮೇಳದಂತಿದ್ದು, ಕಾರ್ಯಕ್ರಮದಲ್ಲಿ ನಮ್ಮ ಸಹಭಾಗಿತ್ವ ಇರುತ್ತದೆ ಎಂದು ಹೇಳಿ ಎಲ್ಲರೂ ಈ ಕಾರ್ಯಕ್ರಮದ ಲಾಭವನ್ನು ಪಡೆಯಬೇಕು ಎಂದು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿನ ಪ್ರಶ್ನೋತ್ತರಗಳು

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ದೊರೆಯಲಿದೆ ವೈಶ್ವಿಕ ಸ್ವರೂಪ! – ಚೇತನ್ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಪತ್ರಕರ್ತರು – ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ರಾಷ್ಟ್ರೀಯ ಮಟ್ಟದ ಆಯೋಜನೆಯು ಹೇಗಿರಲಿದೆ ?

ಶ್ರೀ. ಚೇತನ ರಾಜಹಂಸ – ಮಹೋತ್ಸವದಲ್ಲಿ ಬ್ರಿಟನ, ನೇಪಾಳ, ಇಂಡೋನೇಶಿಯಾ, ಬಾಂಗ್ಲಾದೇಶ ಮುಂತಾದ ವಿದೇಶಗಳ ಹಿಂದೂತ್ವನಿಷ್ಠರು ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವುದರಿಂದ ಮಹೋತ್ಸವಕ್ಕೆ ವೈಶ್ವಿಕ ಸ್ವರೂಪ ದೊರೆಯಲಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳಿಗಾಗಿ ಅಲ್ಲಿನ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ನ್ಯಾಯವಾದಿ ರವೀಂದ್ರ ಘೋಷರವರೂ ಉಪಸ್ಥಿತರಿರಲಿದ್ದಾರೆ. ಮಹೋತ್ಸವಕ್ಕೆ ಆಗಮಿಸುವ ಧರ್ಮನಿಷ್ಠರು ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಪ್ರತಿನಿಧಿಗಳ ವಸತಿಗಾಗಿ ಗೋವಾದ ದೇವಸ್ಥಾನ ಸಮಿತಿಗಳು ದೇವಸ್ಥಾನದ ಧರ್ಮಶಾಲೆಯನ್ನು ಒದಗಿಸುವುದಾಗಿ ತಿಳಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ವಕ್ತಾರರ ಮಾರ್ಗದರ್ಶನ

ಮಹೋತ್ಸವದ ಆಯೋಜನೆ ಎಂದರೆ ಕುಂಭಮೇಳದಂತೆ ಗೋಮಂತಕೀಯರಿಗೆ ಇದೊಂದು ಪರ್ವಕಾಲ! – ಶ್ರೀ. ಕಮಲೇಶ ಬಾಂದೇಕರ, ಭಾರತ ಸ್ವಾಭಿಮಾನ

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಯಶಸ್ವಿಗೊಳಿಸಲು ಪತಂಜಲಿ ಪರಿವಾರವು ಸೇವೆಯ ರೂಪದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಿದೆ. ಕುಂಭಮೇಳದಂತೆ ಗೋಮಂತಕೀಯರಿಗಾಗಿ ಇದೊಂದು ಪರ್ವಕಾಲವಾಗಿದೆ. ಗೋವಾದ ಪ್ರತಿ ಮನೆಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯಾದರೂ ಮಹೋತ್ಸವದ ಮೂರು ದಿನವೂ ಹಾಜರಿರಬೇಕು. ಮುಂಬರುವ ಕಾಲ ಸನಾತನ ಧರ್ಮಕ್ಕೆ ಅನುಕೂಲಕರ ಕಾಲವಾಗಿದೆ ಮತ್ತು ಇಡೀ ಜಗತ್ತು ಸನಾತನ ಧರ್ಮದ ಕಡೆಗೆ ಆಸೆಯಿಂದ ನೋಡುತ್ತಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕೇವಲ ಸನಾತನ ಧರ್ಮದಿಂದ ಮಾತ್ರ ಉತ್ತರ ದೊರೆಯಬಲ್ಲದು.

ಗೋವಾ ಈಗ ಯೋಗಭೂಮಿಯಾಗುವ ಹಾದಿಯಲ್ಲಿದೆ ! – ಸುಜನ ನಾಯಿಕ, ಪದ್ಮನಾಭ ಸಂಪ್ರದಾಯ, ತಪೋಭೂಮಿ, ಕುಂಡಯಿ

ಆಧ್ಯಾತ್ಮಿಕ ಧರ್ಮಗುರುಗಳಾದ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಗೋವಾದಲ್ಲಿ ಇತ್ತೀಚೆಗೆ ‘ಸ್ಪಿರಿಚುಯಲ್ ಫೆಸ್ಟಿವಲ್’ ಆಯೋಜಿಸಲಾಗಿತ್ತು. ಗೋವಾ ಈಗ ಯೋಗಭೂಮಿಯಾಗುವ ಹಾದಿಯಲ್ಲಿದೆ. ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಂತಹ ಮಹೋತ್ಸವದ ಆವಶ್ಯಕತೆಯಿದೆ. ಗೋಮಂತಕೀಯರು ಈ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕು.

ಇಂದು ಇಡೀ ಜಗತ್ತಿಗೆ ಸನಾತನ ಸಂಸ್ಕೃತಿಯ ಅವಶ್ಯಕತೆಯಿದೆ! – ಶ್ರೀ. ಸಂತೋಷ ಘೋಡಗೆ, ಆರ್ಟ್ ಆಫ್ ಲಿವಿಂಗ್

ಭಾರತೀಯ ಸಂಸ್ಕೃತಿ ಮತ್ತು ಸನಾತನ ಸಂಸ್ಕೃತಿಯು ಶ್ರೇಷ್ಠವಾಗಿದ್ದು, ಇಂದು ಸಂಪೂರ್ಣ ಜಗತ್ತಿಗೆ ಅದರ ಅವಶ್ಯಕತೆಯಿದೆ. ಈ ದೃಷ್ಟಿಯಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಯೋಜನೆಯು ಮಹತ್ವದ್ದಾಗಿದೆ. ‘ಆರ್ಟ್ ಆಫ್ ಲಿವಿಂಗ್’ ಈ ಆಯೋಜನೆಗೆ ಸಂಪೂರ್ಣ ಬೆಂಬಲ ನೀಡಲಿದೆ. ಎಲ್ಲರೂ ಈ ಕಾರ್ಯಕ್ರಮದ ಲಾಭ ಪಡೆಯಬೇಕು.

ಮಹೋತ್ಸವದ ಮೂಲಕ ಗೋವಾದ ಪ್ರಾಚೀನ ಮತ್ತು ಐತಿಹಾಸಿಕ ಸಂಸ್ಕೃತಿಯನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸುವ ಪ್ರಯತ್ನ ನಡೆಯಲಿದೆ ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಗೋವಾ ಸರಕಾರವು ಗೋವಾದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದೆ. ಈ ದೃಷ್ಟಿಯಿಂದ ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಯೋಜನೆ ಒಂದು ಅಮೂಲ್ಯವಾದ ಪರ್ವಕಾಲವಾಗಿದೆ. ಸನಾತನ ಧರ್ಮದಲ್ಲಿ ನಂಬಿಕೆ ಇರುವವರು ಇಲ್ಲಿಗೆ ಆಗಮಿಸಲಿದ್ದಾರೆ. ಗೋವಾ ಎಂದರೆ ಕೇವಲ ಕಡಲತೀರಗಳಲ್ಲ, ಗೋವಾದ ಪ್ರಾಚೀನ ಮತ್ತು ಐತಿಹಾಸಿಕ ಸಂಸ್ಕೃತಿಯನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸುವ ಪ್ರಯತ್ನವು ಈ ಮಹೋತ್ಸವದ ಮೂಲಕ ನಡೆಯಲಿದೆ.