ಇಲ್ಲಿಯವರೆಗೆ 92 ಮದರಸಗಳನ್ನು ಮುಚ್ಚಲಾಗಿದೆ
ಉಧಮಸಿಂಗ ನಗರ (ಉತ್ತರಾಖಂಡ) – ಉತ್ತರಾಖಂಡದ ಭಾಜಪ ಸರಕಾರವು ಕಾನೂನುಬಾಹಿರ ಮದರಸಗಳ ವಿರುದ್ಧ ನಡೆಸುತ್ತಿರುವ ಅಭಿಯಾನದಲ್ಲಿ ಇದುವರೆಗೆ ರಾಜ್ಯಾದ್ಯಂತ 92 ಮದರಸಗಳಿಗೆ ಬೀಗ ಜಡಿಯಲಾಗಿದೆ. ರಾಜಧಾನಿ ಡೆಹ್ರಾಡೂನ್‌ನಲ್ಲಿ 52 ಮದರಸಗಳನ್ನು ಮುಚ್ಚಲಾಗಿದೆ. ಇತ್ತೀಚೆಗೆ, ಉಧಮಸಿಂಗ್ ನಗರ ಜಿಲ್ಲೆಯ ಜಸಪುರ ಪ್ರದೇಶದಲ್ಲಿ 5, ಗದರಪುರದಲ್ಲಿ 3 ಮತ್ತು ರುದ್ರಪುರದಲ್ಲಿ 2 ಕಾನೂನುಬಾಹಿರ ಮದರಸಗಳನ್ನು ಮುಚ್ಚಲಾಗಿದೆ. ಪೊಲೀಸರು ನಡೆಸಿದ ಪರಿಶೀಲನಾ ಕಾರ್ಯಾಚರಣೆಯಲ್ಲಿ ಈ ಮದರಸಗಳು ಕಾನೂನುಬಾಹಿರವೆಂದು ಕಂಡುಬಂದಿದೆ. ಈ ಹಿಂದೆ ಉಧಮಸಿಂಗ್ ನಗರದ ಖತಿಮಾ ಪ್ರದೇಶದಲ್ಲಿ 9 ಮದರಸಗಳನ್ನು ಮುಚ್ಚಲಾಗಿತ್ತು. ಸರಕಾರದ ಹೇಳಿಕೆಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 500 ಕಾನೂನುಬಾಹಿರ ಮದರಸಗಳು ಇರಬಹುದು. ಕಳೆದ 15 ದಿನಗಳಲ್ಲಿ 52 ಕಾನೂನುಬಾಹಿರ ಮದರಸಗಳನ್ನು ಮುಚ್ಚಲಾಗಿದೆ.
ಆಡಳಿತದ ಈ ನಡೆಯನ್ನು ಮುಸ್ಲಿಮರು ವಿರೋಧಿಸಿದ್ದಾರೆ. ಯಾವುದೇ ಸೂಚನೆ ಅಥವಾ ಉತ್ತರವಿಲ್ಲದೆ ಈ ಮದರಸಗಳನ್ನು ಇದ್ದಕ್ಕಿದ್ದಂತೆ ಮುಚ್ಚುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಈ ಮದರಸಗಳಲ್ಲಿ ಕಲಿಯುತ್ತಿರುವ ಸಾವಿರಾರು ಮಕ್ಕಳ ಭವಿಷ್ಯ ಈಗ ಕತ್ತಲೆಯಾಗಬಹುದು. ರಂಜಾನ್ ಸಮಯದಲ್ಲಿ ಮದರಸಗಳನ್ನು ಮುಚ್ಚುವುದು ಸರಿಯಲ್ಲ ಎಂದು ಅನೇಕ ಜನರು ಭಾವಿಸುತ್ತಾರೆ. ಆದಾಗ್ಯೂ, ಈ ಕ್ರಮವನ್ನು ಸಂಪೂರ್ಣವಾಗಿ ಕಾನೂನಿನ ಚೌಕಟ್ಟಿನೊಳಗೆ ಮತ್ತು ಸರಕಾರದ ಆದೇಶಗಳ ಪ್ರಕಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಆಡಳಿತ ಹೇಳಿದೆ.
ಸಂಪಾದಕೀಯ ನಿಲುವು
|