‘ಒಂದು ದೇಶ ಒಂದು ಚುನಾವಣೆ’ಯ ಚರ್ಚೆ ಆವಶ್ಯಕ ಏಕೆ ?

ಮೂರನೆ ಬಾರಿ ಪ್ರಧಾನಮಂತ್ರಿ ಆಗಿ ಪ್ರಮಾಣವಚನ ತೆಗೆದುಕೊಂಡ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಒಂದು ದೊಡ್ಡ ರಾಜಕೀಯ ನಿರ್ಣಯವನ್ನು ತೆಗೆದುಕೊಂಡಿತು. ಅದೆಂದರೆ, ‘ಒಂದು ದೇಶ ಒಂದು ಚುನಾವಣೆ’ ಎಂಬ ಸಂಕಲ್ಪನೆಗೆ ಕೇಂದ್ರೀಯ ಕ್ಯಾಬಿನೆಟ್‌ನಿಂದ ಮನ್ನಣೆ. ಕ್ಯಾಬಿನೆಟ್‌ನ ಮನ್ನಣೆಯ ನಂತರ ಈ ವಿಷಯದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಈಗಾಗಲೇ ಲೋಕಸಭೆಯಲ್ಲಿ ಇದನ್ನು ಮಂಡಿಸಲಾಗಿದೆ. ಕೇಂದ್ರ ಸರಕಾರದ ಈ ನಿರ್ಣಯವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಇವರ ನೇತೃತ್ವದಲ್ಲಿನ ಸಮಿತಿಯ ಶಿಫಾರಸನ್ನು ಆಧರಿಸಿದೆ. ಕಳೆದ ವರ್ಷ ಸಪ್ಟೆಂಬರ ತಿಂಗಳಲ್ಲಿ ಈ ಸಮಿತಿಯನ್ನು ಸ್ಥಾಪಿಸಲಾಯಿತು. ಸಮಿತಿ ೨೦೨೪ ರಲ್ಲಿ ಸಲ್ಲಿಸಿದ ಅವರ ವರದಿಯಲ್ಲಿ ಈ ಸಂಕಲ್ಪನೆಯನ್ನು ಭಾರತದಲ್ಲಿ ಹಮ್ಮಿಕೊಳ್ಳಲು ಅನುಕೂಲವಿದೆಯೆಂದು ತೋರಿಸಿತ್ತು. ಇದು ಕಾನೂನಾದರೆ ೨ ಹಂತಗಳಲ್ಲಿ ಈ ಸಂಕಲ್ಪನೆಯ ಅನುಷ್ಠಾನವಾಗುವುದು. ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ, ಎರಡನೆ ಹಂತದಲ್ಲಿ ಸ್ಥಳೀಯ ಸಂಸ್ಥೆಗಳು. ಈ ಎಲ್ಲ ಪ್ರಕ್ರಿಯೆಗಳು ೧೦೦ ದಿನಗಳಲ್ಲಿ ಪೂರ್ಣಗೊಳ್ಳುವವು. ಆದ್ದರಿಂದ ಇನ್ನು ಮುಂದೆ ಈ ವಿಷಯದಲ್ಲಿ ಹೆಚ್ಚಿನ ಚರ್ಚೆಗಳಾಗಬಹುದು, ಎಂಬುದು ನಿಜ. ನಿಜವಾಗಿ ನೋಡಿದರೆ, ೨೦೧೪ ರ ನಂತರ ಮೋದಿಯವರು ಈ ಸಂಕಲ್ಪನೆಗೆ ಆದ್ಯತೆಯನ್ನು ನೀಡುತ್ತಾ ಬಂದಿದ್ದರು ಹಾಗೂ ೨೦೧೯ ರಲ್ಲಿ ಸಾರ್ವಜನಿಕ ಚುನಾವಣೆಯ ಮೊದಲು ಈ ಚರ್ಚೆಗೆ ಮಹತ್ವ ಹೆಚ್ಚಾಗಿತ್ತು. ಆದರೂ ಚುನಾವಣಾ ಆಯೋಗವು ೨೦೧೯ ರಲ್ಲಿ ‘ಒಂದು ದೇಶ ಒಂದು ಚುನಾವಣೆ’ ಈ ಸಂಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಅಸಾಧ್ಯವೆಂದು ಹೇಳಿತ್ತು. (ಪೂರ್ವಾರ್ಧ)

ಡಾ. ಶೈಲೇಂದ್ರ ದೇವಳಾಣಕರ್‌

೧. ದೇಶದಲ್ಲಿ ಸುಶಾಸನ (ಉತ್ತಮ ಆಡಳಿತ) ಅಳವಡಿಸುವ ದೃಷ್ಟಿಕೋನದಿಂದ ‘ಒಂದು ದೇಶ ಒಂದು ಚುನಾವಣೆ’ಯತ್ತ ನೋಡುವುದು ಆವಶ್ಯಕ !

ಭಾರತೀಯ ಪ್ರಜಾಪ್ರಭುತ್ವವನ್ನು ಸಕ್ಷಮೀಕರಣದ ದೃಷ್ಟಿಯಿಂದ ವಿಚಾರ ಮಾಡಿದಾಗ ಭಾರತದಲ್ಲಿ ಸುಶಾಸನವನ್ನು ಹಮ್ಮಿಕೊಳ್ಳಲು, ದೀರ್ಘಕಾಲದ ವಿಕಾಸ ಯೋಜನೆಗಳನ್ನು ಹಮ್ಮಿಕೊಳ್ಳಲು ಹಾಗೂ ಚುನಾವಣೆಗಳ ಆಚೆಗೆ ಹೋಗಿ ದೇಶದ ಪ್ರಜಾಪ್ರಭುತ್ವವನ್ನು ಹೇಗೆ ನೋಡಬಹುದು, ಎಂಬ ದೃಷ್ಟಿಕೋನದಿಂದ ನೋಡಿದರೆ, ಈ ವಿಷಯದಲ್ಲಿ ಚರ್ಚಿಸುವುದು ಅತ್ಯಂತ ಆವಶ್ಯಕವಾಗಿದೆ; ಏಕೆಂದರೆ ಭಾರತದಲ್ಲಿ ಸ್ವಾತಂತ್ರ್ಯದ ನಂತರ ನಡೆಯುವ ಅತೀ ದೊಡ್ಡ ಚುನಾವಣೆಯ ಸುಧಾರಣೆ ಆಗಿರುವುದು; ಆದ್ದರಿಂದಲೆ ಅದಕ್ಕಾಗಿ ‘ರಾಷ್ಟ್ರೀಯ ಒಮ್ಮತ’ವನ್ನು ಸಿದ್ಧಪಡಿಸುವುದು ಅತ್ಯಂತ ಆವಶ್ಯಕವಾಗಿದೆ. ಈ ಒಮ್ಮತದ ಹೊರತು ಸಂಸತ್ತಿನಲ್ಲಿ ಈ ಮಸೂದೆ ಸಮ್ಮತವಾಗಲಿಕ್ಕಿಲ್ಲ. ಈ ಸಂಪೂರ್ಣ ಪ್ರಸ್ತಾಪಕ್ಕೆ ಕೆಲವು ರಾಜಕೀಯ ಪಕ್ಷಗಳ ವಿರೋಧವಿದೆ, ಕೆಲವರ ಒಪ್ಪಿಗೆಯಿದೆ. ಆದರೂ ಈ ಸಂಪೂರ್ಣ ಪ್ರಕ್ರಿಯೆಯನ್ನು ಪಕ್ಷಗಳ ರಾಜಕಾರಣದ ಆಚೆಗೆ ಹೋಗಿ ಭಾರತೀಯ ಪ್ರಜಾಪ್ರಭುತ್ವದ ಸಬಲೀಕರಣ (ಸಶಕ್ತೀಕರಣ), ದೇಶದಲ್ಲಿ ಸುಶಾಸನವನ್ನು ನಿರ್ಮಾಣ ಮಾಡುವ ದೃಷ್ಟಿಕೋನದಿಂದ ನೋಡುವ ಅವಶ್ಯಕತೆಯಿದೆ. ಅದೇ ರೀತಿ ಈ ವ್ಯವಸ್ಥೆಯನ್ನು ಪ್ರತ್ಯಕ್ಷ ತರಲು ಆವಶ್ಯಕವಿರುವ ತಾಂತ್ರಿಕ ವಿಷಯಗಳನ್ನೂ ತಿಳಿದುಕೊಳ್ಳಬೇಕಾಗುತ್ತದೆ.

೨. ‘ಒಂದು ದೇಶ ಒಂದು ಚುನಾವಣೆ’ಯ ವಿಷಯದಲ್ಲಿ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಆಗಿರುವ ಪ್ರಕ್ರಿಯೆಗಳು ಮತ್ತು ಬಂದಿರುವ ಸಂವಿಧಾನಾತ್ಮಕ ಅಡಚಣೆಗಳು 

ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ‘ಒಂದು ದೇಶ ಒಂದು ಚುನಾವಣೆ’ ಇದು ಮೊದಲ ಬಾರಿಗೆ ಚರ್ಚೆಗೆ ಬಂದಿರುವ ವಿಷಯವಲ್ಲ. ಕಾಂಗ್ರೆಸ್ಸಿನ ಇಂದಿರಾ ಗಾಂಧಿ ಪ್ರಧಾನಮಂತ್ರಿ ಆಗಿರುವಾಗ ಸಹ ಈ ವಿಷಯದಲ್ಲಿ ಅನೇಕ ಬಾರಿ ಚರ್ಚೆ ನಡೆದಿತ್ತು. ಅದರ ಜೊತೆಗೆ ೧೯೯೯ ರಲ್ಲಿ ನ್ಯಾಯಾಧೀಶ ಬಿ.ಪಿ. ಜೀವನ ಇವರ ಅಧ್ಯಕ್ಷತೆಯಲ್ಲಿ ನೇಮಕವಾಗಿರುವ ವಿಧಿ (ನೀತಿ) ಆಯೋಗದ ೧೭೦ ರ ವರದಿಯಲ್ಲಿ ‘ಒಂದು ದೇಶ ಒಂದು ಚುನಾವಣೆ’ ಈ ವ್ಯವಸ್ಥೆಯನ್ನು ಶಿಫಾರಸ್ಸು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಸಂಸತ್‌ ಸಮಿತಿಯನ್ನೂ ನೇಮಕ ಮಾಡಲಾಗಿತ್ತು. ೨೦೦೨ ರಲ್ಲಿ ಅಂದಿನ ಉಪಪ್ರಧಾನಮಂತ್ರಿ ಮತ್ತು ಭಾಜಪದ ನಾಯಕ ಲಾಲಕೃಷ್ಣ ಅಡವಾನಿ ಇವರು ಕೂಡ ಈ ವಿಷಯದಲ್ಲಿ ಕೆಲವು ಮಹತ್ವದ ವಿಚಾರಗಳನ್ನು ವ್ಯಕ್ತಪಡಿಸಿದ್ದರು. ೨೦೧೫ ರಲ್ಲಿ ಕಾಂಗ್ರೆಸ್ಸಿನ ಸಂಸದ ಸುದರ್ಶನ ನಾಚಿಯಪ್ಪನ್‌ ಇವರ ನೇತೃತ್ವದಲ್ಲಿ ಈ ವಿಷಯವನ್ನು ಅಭ್ಯಾಸ ಮಾಡಲು ಸಂಸತ್‌ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಈ ಸಮಿತಿಯ ವರದಿಯಲ್ಲಿ ”ಒಂದು ದೇಶ ಒಂದು ಚುನಾವಣೆ’ಯ ಸಂಕಲ್ಪನೆಯನ್ನು ವಾಸ್ತವದಲ್ಲಿ ಮನ್ನಿಸಲಾಗಿದೆ; ಆದರೆ ಈ ವಿಷಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ, ಸಹಮತಿ ಸಿದ್ಧಪಡಿಸುವುದು ಅತ್ಯಂತ ಆವಶ್ಯಕವಾಗಿದೆ ಹಾಗೂ ಅದರ ಬಗ್ಗೆ ಚರ್ಚೆಯಾಗಬೇಕು’, ಎಂದು ಹೇಳಲಾಗಿದೆ.

ಇನ್ನೊಂದು ವಿಷಯವೆಂದರೆ, ಈ ಪ್ರಕ್ರಿಯೆ ಮೊದಲ ಬಾರಿ ಮುಂದೆ ಬಂದಿರುವುದಲ್ಲ, ಸ್ವಾತಂತ್ರ್ಯ ಸಿಕ್ಕಿದನಂತರ ಭಾರತದಲ್ಲಿ ೧೯೫೨ ರಲ್ಲಿ ಮೊದಲ ಸಾರ್ವಜನಿಕ ಚುನಾವಣೆ ನಡೆಯಿತು. ಅಂದಿನಿಂದ ೧೯೬೭ ರ ವರೆಗೆ ಭಾರತದಲ್ಲಿ ೧೯೫೨, ೧೯೫೭, ೧೯೬೨ ಮತ್ತು ೧೯೬೭ ಹೀಗೆ ೪ ಸಾರ್ವಜನಿಕ ಚುನಾವಣೆಗಳು ನಡೆದವು. ಇದರಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆ ಒಂದೇ ಬಾರಿ ಆಗಿತ್ತು; ಏಕೆಂದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಆಡಳಿತವಿತ್ತು. ಎರಡೂ ಕಡೆಯ ಸರಕಾರಗಳ ನಿರ್ಧಿಷ್ಟ ೫ ವರ್ಷಗಳ ಅವಧಿ ಮುಗಿದಿತ್ತು. ಆದರೂ ೧೯೬೭ ರ ನಂತರ ಮಾತ್ರ ಪರಿಸ್ಥಿತಿ ಬದಲಾಯಿತು. ಇದೇ ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ಸಿಗೆ ಗೆಲುವಾಯಿತು; ಆದರೆ ಸುಮಾರು ೬ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಸೋಲಾಯಿತು. ಆದ್ದರಿಂದ ಲೋಕಸಭೆಯ ಅವಧಿ ಮುಗಿಯಿತು; ಆದರೆ ಕೆಲವು ರಾಜ್ಯಗಳಿಂದ ಅವಧಿಯ ಮೊದಲೆ ವಿಧಾನಸಭೆಯನ್ನು ವಿಸರ್ಜಿಸಲಾಯಿತು. ಹಲವಾರು ಬಾರಿ ವಿರೋಧಿ ಪಕ್ಷಗಳ ಸರಕಾರವನ್ನು ಬೀಳಿಸಲು ರಾಷ್ಟ್ರಪತಿ ಆಡಳಿತ ಅನ್ವಯಿಸುವ ಪರಂಪರೆಯೂ ಆರಂಭವಾಯಿತು. ಆದ್ದರಿಂದ ರಾಜ್ಯಗಳಲ್ಲಿ ಅವಧಿಯ ಮೊದಲೆ ಮಧ್ಯಂತರ ಚುನಾವಣೆಗಳು ನಡೆಯಲು ಆರಂಭವಾಯಿತು. ಸಂವಿಧಾನದಲ್ಲಿ ವಿಧಾನಸಭೆ ಅಥವಾ ಲೋಕಸಭೆಗಾಗಿ ನಿರ್ಧರಿಸಲ್ಪಟ್ಟ ಅವಧಿಯ ಮೊದಲೆ ಚುನಾವಣೆ ನಡೆಯಲು ಆರಂಭವಾಗಿರುವುದರಿಂದ ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆ ನಡೆಸುವುದು ಕಷ್ಟವೆನಿಸಲು ಆರಂಭವಾಯಿತು. ಇದಕ್ಕೆ ಇನ್ನೂ ಒಂದು ಕಾರಣವೆಂದರೆ, ಅಂಗ (ಘಟಕ) ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವ ಪ್ರಕ್ರಿಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಯಿತು. ಅದರಿಂದಲೂ ಚುನಾವಣೆ ಒಟ್ಟಿಗೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಕಾಲಕ್ರಮೇಣ ಈ ಪರಂಪರೆ ಸಹಜವಾಗಿಯೆ ಭಂಗವಾಯಿತು.

೩.’ಒಂದು ದೇಶ ಒಂದು ಚುನಾವಣೆ’ಯ ಅವಶ್ಯಕತೆ

ಇತ್ತೀಚೆಗೆ ಒಂದೇ ಚುನಾವಣೆಯ ಪ್ರಸ್ತಾಪ ಮುಂದೆ ಬರಲು ಮುಖ್ಯ ಕಾರಣವೆಂದರೆ, ಭಾರತೀಯ ಸಂವಿಧಾನದಿಂದ ಏನು ಅಪೇಕ್ಷೆಯಿದೆಯೊ, ಅದನ್ನು ಪೂರ್ಣಗೊಳಿಸಲು ಅಡಚಣೆಗಳು ಬರುತ್ತಿವೆ. ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಚುನಾವಣೆಯ ದೃಷ್ಟಿಕೋನದಿಂದ ನೋಡಲಾಗುತ್ತದೆ. ನಿರಂತರ ನಡೆಯುವ ಚುನಾವಣೆಗಳನ್ನು ಭಾರತೀಯ ಪ್ರಜಾಪ್ರಭುತ್ವದ ಪ್ರತೀಕವೆಂದು ತಿಳಿಯಲಾಗುತ್ತದೆ. ಭಾರತದಲ್ಲಿ ಸಂಸತ್ತು, ರಾಜ್ಯ ವಿಧಿಮಂಡಳ ಮತ್ತು ಸ್ಥಳೀಯ ಸ್ವರಾಜ್ಯ ಸಂಸ್ಥೆಗಳು ಹೀಗೆ ೩ ಹಂತಗಳಲ್ಲಿ ಚುನಾವಣೆಗಳು ನಡೆಯುತ್ತವೆ. ಭಾರತದಲ್ಲಿ ಒಟ್ಟು ಎಲ್ಲ ಘಟಕಗಳು ರಾಜ್ಯಗಳು ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯ್ಕೆಯಾಗಿರುವ ಕಾನೂನು ಸಂಸ್ಥೆಗಳಿವೆ. ಭಾರತದಲ್ಲಿ ಪ್ರತಿ ೩ ತಿಂಗಳಿಗೊಮ್ಮೆ ಒಂದು ಚುನಾವಣೆ ನಡೆಯುತ್ತದೆ. ಆದ್ದರಿಂದ ಭಾರತವನ್ನು ‘ನಿರಂತರ ಚುನಾವಣೆಯ ವಾತಾವರಣದಲ್ಲಿರುವ ದೇಶ’ವೆಂದು ಸಂಬೋಧಿಸಲಾಗುತ್ತದೆ. ಪಂಚಾಯತು ಸಮಿತಿಗಳು, ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಚುನಾವಣೆಗಳು ನಿಯಮಿತವಾಗಿ ನಡೆಯುತ್ತವೆ. ಇದರ ಅರ್ಥ ಭಾರತದಲ್ಲಿ ಪ್ರಜಾಪ್ರಭುತ್ವ ಕಾರ್ಯ ಯೋಗ್ಯ ರೀತಿಯಲ್ಲಿ ನಡೆಯುತ್ತದೆ, ಎನ್ನುವಂತಿಲ್ಲ. ರಾಮಚಂದ್ರ ಗುಹಾ ಇವರಂತಹ ಇತಿಹಾಸಕಾರರೂ, ಪ್ರಜಾಪ್ರಭುತ್ವದ ಮೌಲ್ಯವನ್ನು ಅಳೆಯಲು ಚುನಾವಣೆಯ ನಂತರ ಅಧಿಕಾರಕ್ಕೆ ಬರುವ ಸರಕಾರ ಮತ್ತು ಅದರ ಆಡಳಿತದ ಬಗ್ಗೆ ವಿಚಾರ ಮಾಡಬೇಕು ಎಂದು ಹೇಳಿದ್ದಾರೆ. ಭಾರತದಲ್ಲಿ ಮಾತ್ರ ಹಾಗೆ ನಡೆಯುವುದು ಕಾಣಿಸುವುದಿಲ್ಲ. ಪದೇ ಪದೇ ಚುನಾವಣೆ ನಡೆಯುವುದರಿಂದ ಸರಕಾರಕ್ಕೆ ಜನಹಿತಕ್ಕಾಗಿ ದೀರ್ಘಕಾಲದ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿರಂತರ ನಡೆಯುವ ಚುನಾವಣೆ ಗಳನ್ನು ಊಹಿಸಿಯೆ ನಮಗೆ ಯೋಜನೆಗಳನ್ನು ಆಯ್ದುಕೊಳ್ಳ ಬೇಕಾಗುತ್ತದೆ. ಆದ್ದರಿಂದ ಅನೇಕ ಬಾರಿ ಇಂತಹ ಯೋಜನೆಗಳು ಅಲ್ಪಾವಧಿಯಲ್ಲಿ ಜನರಿಗೆ ತೊಂದರೆ ದಾಯಕವಾಗಬಹುದು; ಆದರೆ ದೀರ್ಘಾವಧಿಯಲ್ಲಿ ಜನರಿಗೆ ಲಾಭ ವಾಗುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವಾಗ ಅನೇಕ ಬಾರಿ ತೊಂದರೆಯಾಗುತ್ತದೆ.

ಭಾರತ ‘ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ’ವಾಗಿದೆ, ಆದರೆ ಅಮೇರಿಕಾ ಅತ್ಯಂತ ಹಳೆಯ ಪ್ರಜಾಪ್ರಭುತ್ವವಾಗಿದೆ. ಅಲ್ಲಿನ ಪ್ರಜಾಪ್ರಭುತ್ವ ೨೦೦ ವರ್ಷಕ್ಕಿಂತಲೂ ಹಳೆಯದಾಗಿದೆ. ಅಲ್ಲಿ ಪ್ರತಿ ೪ ವರ್ಷಗಳಿಗೊಮ್ಮೆ ಅಧ್ಯಕ್ಷರ ಹುದ್ದೆಯ ಚುನಾವಣೆ ನಡೆಯುತ್ತದೆ. ೪ ವರ್ಷಗಳ ನಂತರ ನವಂಬರದಲ್ಲಿನ ಮೊದಲ ಮಂಗಳವಾರ ಈ ಚುನಾವಣೆಯ ವಾರವೆಂದು ನಿರ್ಧರಿಸಲಾಗಿದೆ. ಆಫ್ರಿಕಾ ಖಂಡದ ಕೆನಿಯಾದಂತಹ ಹಿಂದುಳಿದ ದೇಶದಲ್ಲಿಯೂ ಮತದಾರರು ಒಂದೇ ಬಾರಿ ೮ ಹಂತಗಳಲ್ಲಿನ ಚುನಾವಣೆಗಾಗಿ ಮತದಾನ ಮಾಡುತ್ತಾರೆ. ಭಾರತದಲ್ಲಿ ಮಾತ್ರ ಇಂದು ಕೂಡ ಲೋಕಸಭೆ ಮತ್ತು ವಿಧಾನಸಭೆಗಾಗಿ ಬೇರೆ ಬೇರೆ ಚುನಾವಣೆ ನಡೆಸಲಾಗುತ್ತದೆ. ಇದರ ಹೊರತು ನಗರ ಪರಿಷತ್ತು, ನಗರಪಾಲಿಕೆ, ಮಹಾನಗರಪಾಲಿಕೆ, ಗ್ರಾಮ ಪಂಚಾಯತು, ವಿಧಾನಸಭೆ ಇತ್ಯಾದಿ ಚುನಾವಣೆಗಳ ಸುಗ್ಗಿ ನಿರಂತರ ನಡೆಯುತ್ತದೆ. ಅದರ ಪರಿಣಾಮವೆಂದು ದೇಶ ಸತತ ಚುನಾವಣೆಗಳ ವಾತಾವರಣ ದಲ್ಲಿಯೆ ಇರುತ್ತದೆ.

೪. ಒಂದೆ ಸಮಯದಲ್ಲಿ ದೇಶದ ಎಲ್ಲ ಚುನಾವಣೆಗಳನ್ನು ನಡೆಸಿದರೆ ಆಗುವ ಮಹತ್ವದ ಲಾಭ

ಈ ಹಿನ್ನೆಲೆಯಲ್ಲಿ ಒಟ್ಟಿಗೆ ನಡೆಸುವ ಚುನಾವಣೆಗಳ ವಿಷಯ ಮುಂದೆ ಬಂದಿದೆ. ಇದಕ್ಕಾಗಿ ಸ್ಥಾಪಿಸಿರುವ ‘ರಾಮನಾಥ ಕೋವಿಂದ ಸಮಿತಿ’ಯು ೨ ಮಹತ್ವದ ಕಾರ್ಯ ಮಾಡಿದೆ.

ಅ. ಭಾರತದಲ್ಲಿ ಒಂದೇ ಸಮಯದಲ್ಲಿ ಈ ಚುನಾವಣೆಯಾಗಲು ಸಾಧ್ಯವಿದೆಯೆ ?

ಆ. ಭಾರತದಲ್ಲಿ ಒಟ್ಟಿಗೆ ಚುನಾವಣೆ ಮಾಡುವ ಅವಶ್ಯಕತೆ ಏಕಿದೆ ?

ಒಂದೇ ಸಮಯದಲ್ಲಿ ಚುನಾವಣೆ ಮಾಡಿದರೆ ಅದರಿಂದ ಅನೇಕ ಲಾಭಗಳಾಗುತ್ತವೆ. ಕೇಂದ್ರ ಮತ್ತು ರಾಜ್ಯ ಸ್ತರದ ಚುನಾವಣೆಗಳನ್ನು ಒಂದೇ ಬಾರಿ ಮಾಡಿದರೆ ಖರ್ಚಿನ ದೃಷ್ಟಿಯಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗಲಿಕ್ಕಿದೆ. ಈ ವಿಷಯದಲ್ಲಿ ನಾವು ಚುನಾವಣೆಯ ಖರ್ಚಿನ ಅಂಕಿ ಅಂಶಗಳನ್ನು ನೋಡೋಣ. ಭಾರತದಲ್ಲಿನ ಸಾರ್ವಜನಿಕ ಚುನಾವಣೆಗಾಗಿ ಸರಕಾರದ ಕೋಷದಿಂದ ಸುಮಾರು ೧೦ ಸಾವಿರ ಕೋಟಿ ರೂಪಾಯಿಗಳಷ್ಟು ಖರ್ಚಾಗುತ್ತದೆ. ಇದಲ್ಲದೆ ಪರೋಕ್ಷ ಖರ್ಚು ಬೇರೆಯೆ ಇರುತ್ತದೆ. ನೀತಿ ಆಯೋಗ ರಾಜಕೀಯ ಪಕ್ಷಗಳ ಹೊರತು ಆಗುವ ಖರ್ಚಿನ ಬಗ್ಗೆ ಹೇಳಿರುವ ಮೊತ್ತ ೮ ಸಾವಿರ ಕೋಟಿ ರೂಪಾಯಿಗಳು. ಇದಲ್ಲದೆ ರಾಜಕೀಯ ಪಕ್ಷಗಳಿಂದ ಪ್ರಚಾರಕ್ಕಾಗಿ ಆಗುವ ಖರ್ಚು ಸುಮಾರು ೪೦ ಸಾವಿರ ಕೋಟಿ ರೂಪಾಯಿಗಳಿಂತಲೂ ಹೆಚ್ಚಾಗುತ್ತದೆ. ಸುಮಾರು ಒಂದೂಕಾಲು ಕೋಟಿ ಜನರು ಸಾರ್ವಜನಿಕ ಚುನಾವಣೆಯಲ್ಲಿ ಕೆಲಸ ಮಾಡುತ್ತಾರೆ. ಒಂದೇ ಬಾರಿ ಚುನಾವಣೆ ನಡೆಸಿದರೆ ಆಗ ಒಬ್ಬನೆ ಮತದಾರ, ಒಂದೇ ಕೇಂದ್ರ, ಒಂದೇ ಯಂತ್ರ ಇರುತ್ತದೆ. ಭದ್ರತೆಯ ವ್ಯವಸ್ಥೆ ಕೂಡ ಅಷ್ಟೇ ಇರುತ್ತದೆ. ಆದ್ದರಿಂದ ಸಮಯ, ಹಣ ಮತ್ತು ಮಾನವ ಶ್ರಮ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗಬಹುದು.

ಇನ್ನೊಂದು ಲಾಭವೆಂದರೆ ಚುನಾವಣೆಗಳ ಅವಧಿಯಲ್ಲಿ ‘ಮಾಡಲ್‌ ಕೋಡ್‌ ಆಫ್‌ ಕಂಡಕ್ಟ್‌’ ಅಥವಾ ‘ಆಚಾರಸಂಹಿತೆ’ ಅನ್ವಯಗೊಳಿಸಲಾಗುತ್ತದೆ. ಇದರಿಂದ ಅನೇಕ ವಿಕಾಸ ಕಾರ್ಯಗಳು ನಿಂತು ಹೋಗುತ್ತವೆ. ಅದೇ ರೀತಿ ಸರಕಾರದಲ್ಲಿನ ಮಂತ್ರಿಗಳು, ಇನ್ನಿತರ ಮುಖಂಡರು ಪ್ರಚಾರದಲ್ಲಿ ತೊಡಗುತ್ತಾರೆ. ಅದರ ಪರಿಣಾಮದಿಂದ ಯಾವುದೇ ನಿರ್ಣಯದಲ್ಲಿ ವಿಳಂಬವಾಗಬಹುದು. ಸರಕಾರಿ ಅಧಿಕಾರಿಗಳಿಗೂ ಬೇರೆ ರಾಜ್ಯಗಳಲ್ಲಿ ಚುನಾವಣಾ ಅಧಿಕಾರಿಯೆಂದು ಕಾರ್ಯನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಒಂದು ರಾಜ್ಯದ ಚುನಾವಣೆಯ ಪರಿಣಾಮ ಇನ್ನೊಂದು ರಾಜ್ಯಕ್ಕೂ ಆಗುತ್ತದೆ. ಇದರ ನೇರ ಪರಿಣಾಮ ದೇಶದ ವಿಕಾಸದ ಮೇಲಾಗುತ್ತದೆ. ಒಂದೇ ಚುನಾವಣೆಯಿಂದ ಈ ಎಲ್ಲ ಅಸೌಲಭ್ಯಗಳು ದೂರವಾಗಲಿಕ್ಕಿವೆ.

– ಡಾ. ಶೈಲೇಂದ್ರ ದೇವಳಾಣಕರ್, ವಿದೇಶ ಧೋರಣೆ ಮತ್ತು ರಾಜಕೀಯ ಚಟುವಟಿಕೆಗಳ ಅಭ್ಯಾಸಕರು (೨೩.೯.೨೦೨೪)

(ಮುಂದುವರಿಯುವುದು)