ಕಂಚಿನ ಸಣ್ಣ ಪಾತ್ರೆಯಿಂದ ಅಥವಾ ಬಟ್ಟಲಿನಿಂದ ಅಂಗಾಲುಗಳಿಗೆ ಏಕೆ ಮರ್ದನ ಮಾಡಬೇಕು ?

ನಮ್ಮಲ್ಲಿ ಆರ್ಯುವೇದದ ಗ್ರಂಥಗಳಲ್ಲಿ ‘ಪಾದಾಭ್ಯಂಗ’ವನ್ನು ಹೇಳಲಾಗಿದೆ. ಅದರಲ್ಲಿ ಹಸುವಿನ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಕಂಚಿನ ಬಟ್ಟಲಿನಿಂದ ಪಾದಗಳಿಗೆ ಉಜ್ಜುವುದನ್ನು ಮುಖ್ಯ ಚಿಕಿತ್ಸೆಯಾಗಿ ಉಲ್ಲೇಖಿಸಲಾಗಿದೆ. ಅದರಿಂದ ಮುಂದಿನ ಲಾಭಗಳಾಗುತ್ತವೆ –

೧. ದೇಹದಲ್ಲಿರುವ ವಾತದ ಪ್ರಮಾಣವನ್ನು ಕಡಿಮೆ ಮಾಡಲು

೨. ದೇಹದಲ್ಲಿ ಏರಿದ ಹೆಚ್ಚುವರಿ ಉಷ್ಣತೆಯನ್ನು ಕಡಿಮೆ ಮಾಡಲು

೩. ಕಣ್ಣುಗಳ ಸ್ನಾಯುಗಳನ್ನು ಉತ್ತೇಜಿಸಲು

೪. ದೇಹದ ದಣಿವು ಕಡಿಮೆ ಮಾಡಿ ತಂಪಾಗುವಿಕೆಯನ್ನು ಹೆಚ್ಚಿಸಲು

೫. ಮಧುಮೇಹದಿಂದ ಉಂಟಾಗುವ ಕಾಲುಗಳ ಸಂವೇದನೆ ಕಡಿಮೆಯಾಗಲು

೬. ನಿದ್ರಾಹೀನತೆಯ ಸಮಸ್ಯೆಯನ್ನು ನಿಯಂತ್ರಿಸಲು

೭. ಪಿತ್ತದ ತೊಂದರೆಯನ್ನು ಕಡಿಮೆ ಮಾಡಲು

೮. ಮೊಣಕಾಲು ನೋವು, ಹಿಮ್ಮಡಿ ನೋವು, ಸೊಂಟ ನೋವು ಇಂತಹ ನೋವುಗಳ ಪ್ರಮಾಣವನ್ನು ಕಡಿಮೆ ಮಾಡಲು

೯. ಕಾಲುಗಳ ಊತವನ್ನು ಕಡಿಮೆ ಮಾಡಲು

೧೦. ಒಡೆದ ಅಂಗಾಲುಗಳು, ಹಾಗೆಯೇ ಅಂಗಾಲುಗಳ ಉರಿಯುವಿಕೆ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು

೧೧. ಉಬ್ಬಿರುವ ರಕ್ತನಾಳಗಳಲ್ಲಿ (‘ವೆರಿಕೊಸ್‌ ವೆನ್ಸ್‌’ಗೆ) ಉಪಯುಕ್ತ

೧೨. ಕಣ್ಣುಗಳ ಕೆಳಗಿನ ಕಪ್ಪುಗೋಲ ಕಡಿಮೆ ಮಾಡಲು

೧೩. ಮುಖದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಲು

ಡಾ. ಪ್ರಮೋದ ಢೆರೆ

ವಾತವನ್ನು ನಿಯಂತ್ರಣದಲ್ಲಿಡಲು ಕಂಚಿನ ಪಾತ್ರೆಯ ಮರ್ದನ(ಮಾಲೀಶ) ಉಪಯುಕ್ತ !

‘ಭಾವಪ್ರಕಾಶ’ ಈ ಗ್ರಂಥದಲ್ಲಿ, ‘ಕಾಂಸ್ಯಮ್‌ ಬುದ್ಧಿವರ್ಧಕಮ್‌ |’ ಎಂಬ ಉಲ್ಲೇಖವಿದೆ. ಮರಾಠಿಯಲ್ಲಿ ಒಂದು ನಾಣ್ಣುಡಿ ಇದೆ, (‘ತಳಪಾಯಾಚಿ ಆಗ ಮಸ್ತಕಾತ ಜಾಣೆ’) ‘ಅಂಗಾಲಿನ ಉರಿ ನೆತ್ತಿಗೆ ಹೋಗುವುದು’ ಮತ್ತು ಅದು ಅಕ್ಷರಶಃ ಸತ್ಯವಾಗಿದೆ. ಅಂಗಾಲುಗಳಿಗೆ ಕಂಚಿನ ಪಾತ್ರೆಯಿಂದ ಮರ್ದನ ಮಾಡಿದರೆ ತಲೆ ಶಾಂತವಾಗುತ್ತದೆ ಏಕೆ ? ಎಂಬುದರ ಉತ್ತರ ಈ ನಾಣ್ಣುಡಿಯಲ್ಲಿ ಇದೆ.

ವಾತವು ಅನೇಕ ರೋಗಗಳ ಮೂಲವಾಗಿದೆ, ಕಂಚಿನ ಪಾತ್ರೆಯಿಂದ ಮರ್ದನ(ಮಾಲೀಶ) ಮಾಡುವ ಚಿಕಿತ್ಸೆಯು ವಾತವನ್ನು ನಿವಾರಿಸಿ ಅದನ್ನು ಸಿಮೀತಗೊಳಿಸಲು ಬಹಳ ಪರಿಣಾಮಕಾರಿಯಾಗಿದೆ. ಅನೇಕರಿಗೆ ಇದರ ಅನುಭವವಾಗಿರುವುದರಿಂದ ಯುರೋಪ್‌ ಮತ್ತು ಅಮೇರಿಕದ ಜನರು ಅಪಾರ ಹಣವನ್ನು ಪಾವತಿಸಿ ಇದರ ಚಿಕಿತ್ಸೆಯನ್ನು ಪಡೆಯುತ್ತಾರೆ. ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ ಅದರಲ್ಲಿ, ‘ಯಾವ ವ್ಯಕ್ತಿಯು ಮಲಗುವ ಮೊದಲು ಅಂಗಾಲುಗಳಿಗೆ ಮರ್ದನ ಮಾಡುವನೋ ಅವನಿಂದ, ‘ಗರುಡವನ್ನು ಕಂಡು ಹೇಗೆ ಹಾವು ದೂರ ಹೋಗುವುದೋ ಹಾಗೆಯೇ ರೋಗಗಳೂ ದೂರವಾಗುತ್ತವೆ !’ ಎಂದು ಹೇಳಲಾಗಿದೆ.

ನಮ್ಮ ಶರೀರದಲ್ಲಿ ೭೨ ಸಾವಿರ ನಾಡಿಗಳಿವೆ. ಅವುಗಳಲ್ಲಿನ ಹೆಚ್ಚಿನ ನಾಡಿಗಳು ಅಂಗೈ ಮತ್ತು ಅಂಗಾಲುಗಳಲ್ಲಿ ಕೊನೆಗೊಳ್ಳುತ್ತವೆ. ಆದುದರಿಂದ ಅಂಗಾಲುಗಳ ಮರ್ದನ(ಮಾಲೀಶ) ಇದು ಅನೇಕ ನೋವುಗಳಿಗೆ ಒಂದು ಗುಣಕಾರಿ ಮತ್ತು ಅಗ್ಗದ ಪರಿಹಾರವಾಗಿದೆ.

ಐತಿಹಾಸಿಕ ಪರಂಪರೆ

ಕಂಚು ಈ ಲೋಹ ನಮಗೆ ಬಂಗಾರ ಮತ್ತು ಬೆಳ್ಳಿ ಪದಕಗಳೊಂದಿಗೆ ಕಂಚಿನ ಪದಕವನ್ನು ನೀಡುತ್ತದೆ ಎಂಬ ಮಾಹಿತಿ ಇದೆ. ಭಾರತದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಮದುವೆಯಲ್ಲಿ ಮದುಮಗಳಿಗೆ ಕಂಚಿನ ಬಟ್ಟಲನ್ನು ನೀಡುವ ಪದ್ಧತಿ ಕಂಡು ಬರುತ್ತದೆ; ಆದರೆ ಅದನ್ನು ಅತ್ಯಲ್ಪ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ. ಕಂಚು ಇದು ತಾಮ್ರ ಮತ್ತು ಸತುವು(ಝಿಂಕ್) ಇವುಗಳ ಸಂಯೋಜಿತ ಲೋಹವಾಗಿದ್ದು ದೇಹದಲ್ಲಿರುವ ಶಾಖವನ್ನು ಕಡಿಮೆ ಮಾಡಲು ಅದನ್ನು ಉಪಯೋಗಿಸುವಂತೆ ಆಯುರ್ವೇದವು ೫ ಸಾವಿರ ವರ್ಷಗಳ ಹಿಂದೆಯೇ ಹೇಳಿದೆ.

ಗುಜರಾತ್‌ನಲ್ಲಿ ಭೋಜನಕ್ಕಾಗಿ ಕಂಚಿನ ಪಾತ್ರೆಗಳನ್ನೇ ಬಳಸುತ್ತಾರೆ. ಪೂಜೆಗೆ ಕಂಚಿನ ಹರಿವಾಣವನ್ನು ಬಳಸುತ್ತಾರೆ. ದೇವಸ್ಥಾನಗಳಲ್ಲಿ ಮಂಜುಳ ಧ್ವನಿಗಾಗಿ ಕಂಚಿನ ಗಂಟೆಗಳನ್ನೇ ಬಳಸುತ್ತಾರೆ, ಹಾಗೆಯೇ ಗಟ್ಟಿ ಮತ್ತು ‘ಆಕ್ಸಿಡೇಶನ್’ (ಪದಾರ್ಥದ ಪ್ರಾಣವಾಯುವಿನ ಸಂಯೋಗ) ಆಗದಿರುವ ಗುಣಲಕ್ಷಣಗಳಿಂದಾಗಿ ತೋಪುಗಳನ್ನು ತಯಾರಿಸಲು ಈ ಲೋಹವನ್ನು ಬಳಸಲಾಗುತ್ತದೆ. ಹಿಂದಕ್ಕೆ ರಷ್ಯಾದಲ್ಲಿ ಚರ್ಚ್‌ಗಳಲ್ಲಿ ಘಂಟೆಗಳನ್ನು ಮತ್ತು ಸ್ಪೇನ್‌ನಲ್ಲಿ ಮತ್ತು ಪೋರ್ಚುಗಿಸ್‌ನಲ್ಲಿ ಈ ಲೋಹದಿಂದ ತೋಪುಗಳನ್ನು ತಯಾರಿಸುತ್ತಿದ್ದರು.

‘ವಾತವ್ಯಾಧಿಹರಮ್, ಕಫಪ್ರಶನಮ್‌ ಕಾಂತಿಪ್ರಸಾದವಹಮ್‌ ತ್ವಗವೇವರ್ಣ್ಯ ವಿನಾಶನಮ್‌ ರುಚಿಕರಮಮ್‌ ಸರ್ವಾಂಗ ದಾಢರ್ಯಾಪ್ರದಮ್‌ ಆಗ್ನೇರದೀಪ್ತೀಕರ್ಮಮ್‌ ಬಲೋಪಮನನಂ ಪ್ರಸ್ವೇದ ಮೆದೋಪ ಮಹಂ ಪದಭ್ಯಾಮ್‌ ಮರ್ದನಮುದಿಶನತಿ ಮೂನಯಾಃ ಶ್ರೇಷ್ಠಮ್‌ ಸದಾ ಪ್ರಾಣಾಯಾಮ್’ – ಅಂದರೆ, ‘ಕಾಲಿಗೆ ಎಣ್ಣೆ ಅಥವಾ ತುಪ್ಪದಿಂದ ಮಾಡಿದ ಮರ್ದನವು ಕಫನಿವಾರಕ, ಚಿನ್ನದ ಹೊಳಪನ್ನು ಪ್ರದಾನಿಸುತ್ತದೆ, ಚರ್ಮವನ್ನು ಬೆಳ್ಳಗಾಗಿಸುವ, ಅಗ್ನಿಯನ್ನು ಹೊತ್ತಿಸುವ, ಬಲವನ್ನು ನೀಡುವ, ಕೊಬ್ಬು-ಬೆವರು ಕಡಿಮೆ ಮಾಡುವಂತಹದ್ದಾಗಿದೆ’, ಎಂದು ಋಷಿಮುನಿಗಳು ಹೇಳುತ್ತಾರೆ.

– ಡಾ. ಪ್ರಮೋದ ಢೆರೆ, ಪ್ರಕೃತಿ ಚಿಕಿತ್ಸಕರು, ಆರೋಗ್ಯ ಉಪನ್ಯಾಸಕರು ಮತ್ತು ಲೇಖಕರು, ಪಿಂಪರಿ-ಚಿಂಚವಡ, ಜಿಲ್ಲೆ ಪುಣೆ, ಮಹಾರಾಷ್ಟ್ರ.