ಜೀವನವನ್ನು ದುಃಖಮಯಗೊಳಿಸುವ ಮಹಾಭಯಂಕರ ರೋಗ ‘ಅಹಂಕಾರ’ !

ಶ್ರೀ. ಮಧುಸೂದನ ಕುಲಕರ್ಣಿ

‘ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲೊಂದು ತೊಂದರೆ ಇರುತ್ತದೆ. ಕೆಲವರಿಗೆ ಶಾರೀರಿಕ, ಕೆಲವರಿಗೆ ಮಾನಸಿಕ ಮತ್ತು ಇನ್ನು ಕೆಲವರಿಗೆ ಆಧ್ಯಾತ್ಮಿಕ ತೊಂದರೆ ಇರುತ್ತದೆ. ಶಾರೀರಿಕ ತೊಂದರೆಯ ನಿವಾರಣೆಗೆ ವೈದ್ಯರಿಂದ ಔಷಧಿ ತೆಗೆದುಕೊಳ್ಳಬಹುದು, ಮಾನಸಿಕ ರೋಗವು ಔಷಧಿ ಮತ್ತು ಆಧ್ಯಾತ್ಮಿಕ ಉಪಾಯಗಳಿಂದ ಗುಣಮುಖವಾಗಬಹುದು. ಆಧ್ಯಾತ್ಮಿಕ ತೊಂದರೆಗಳು ಸಂತರ ಮಾರ್ಗದರ್ಶನಕ್ಕನುಸಾರ ಉಪಾಯ ಮಾಡಿದರೆ ಮಾತ್ರ ದೂರವಾಗುತ್ತವೆ; ಆದರೆ ಈ ಮೂರೂ ತೊಂದರೆಗಳ ಹೊರತು ಇನ್ನೂ ಒಂದು ದೊಡ್ಡ ರೋಗ ಮಾನವನಲ್ಲಿದೆ. ಅದೇ ಅಹಂಕಾರ !

‘ಅಹಂಕಾರ ಹೇಗೆ ಬೆಳೆಯುತ್ತದೆ ?’, ‘ಅದರಿಂದ ಸಾಮಾನ್ಯ ಜೀವನದ ಮೇಲೆ, ಸಾಧನೆಯ ಮೇಲೆ ಹೇಗೆ ದುಷ್ಪರಿಣಾಮವಾಗುತ್ತದೆ ?’, ‘ಅಹಂಕಾರವನ್ನು ಜಯಿಸುವ ಅವಶ್ಯಕತೆ ಮತ್ತು ಜಯಿಸುವ ಉಪಾಯ’, ಈ ಎಲ್ಲ ವಿಷಯಗಳ ಬಗ್ಗೆ ಈ ಲೇಖನದಲ್ಲಿ ಹೇಳಲಾಗಿದೆ.

೧. ಅಹಂಕಾರ ಹೇಗೆ ನಿರ್ಮಾಣವಾಗುತ್ತದೆ ?

೧ ಅ. ಪ್ರತಿಯೊಬ್ಬ ವ್ಯಕ್ತಿಗೆ ತನ್ನ ವಿಚಾರಗಳೇ ಯೋಗ್ಯವೆಂದು ಅನಿಸುವುದರಿಂದ ‘ನಾನು ಮಾಡುವುದೇ ಯೋಗ್ಯ, ಎಂದು ಅನಿಸಿ ‘ನಾನು’ ಎಂಬುದನ್ನು ಕಾಪಾಡುತ್ತಾನೆ : ಜೀವನ ನಡೆಸುವಾಗ ಸುತ್ತಮುತ್ತಲಿನ ಪರಿಸ್ಥಿತಿಗನುಸಾರ ನಮ್ಮ ಮನಸ್ಸಿನಲ್ಲಿ ಯೋಗ್ಯ-ಅಯೋಗ್ಯ ವಿಚಾರಗಳು ಬರುತ್ತವೆ. ಈ ವಿಷಯದಲ್ಲಿ ನಾವು ಯಾರಿಂದಲೂ ಮಾರ್ಗದರ್ಶನ ಪಡೆಯುವುದಿಲ್ಲ. ನಾವು ನಮ್ಮ ಮನಸ್ಸಿಗೆ ಯೋಗ್ಯವೆನಿಸಿದಂತೆ ವರ್ತಿಸುತ್ತೇವೆ. ಯಾವುದೇ ಯೋಗ್ಯ ಕೃತಿ ಮಾಡಿದಾಗ ‘ಇದು ನನ್ನಿಂದಲೇ ಆಯಿತು’, ಎಂದು ಅನಿಸಿ ‘ನಾನೇ ಮಾಡುತ್ತೇನೆ’, ‘ನನಗೆ ಅನಿಸುವುದು ಯೋಗ್ಯವೇ ಆಗಿದೆ’, ‘ನನಗೆ ತಿಳಿಯುತ್ತದೆ’, ಎನ್ನುವ ಭ್ರಮೆಯಲ್ಲಿದ್ದು ನಾವು ‘ನಾನು’ ಎಂಬುದನ್ನು ಕಾಪಾಡುತ್ತೇವೆ ಮತ್ತು ನಾವೇ ನಮ್ಮ ಮನಸ್ಸಿಗೆ ‘ನಾನು’ ಎಂಬ ಸಂಸ್ಕಾರವನ್ನು ಮಾಡಿಕೊಳ್ಳುತ್ತೇವೆ. ಈ ‘ನಾನು’ ಅಂದರೇ ‘ಅಹಂಕಾರ’ !

೧ ಆ. ಬಹಳಷ್ಟು ಜನರು ಸಾಧನೆ ಮಾಡದಿರುವುದರಿಂದ ಅವರ ಮನಸ್ಸಿನಲ್ಲಿ ‘ನಾನು ಈಶ್ವರನ ಅಂಶ ಆಗಿದ್ದೇನೆ’, ಎನ್ನುವ ವಿಚಾರ ಬರುವುದೇ ಇಲ್ಲ; ಮನಸ್ಸಿನಲ್ಲಿ ಬರುವ ‘ನಾನು’ ಎಂಬ ವಿಚಾರವೇ ಅಹಂಕಾರ ಆಗಿರುವುದು : ಬಹಳಷ್ಟು ಜನರು ಸಾಧನೆ ಮಾಡದಿರುವುದರಿಂದ ಅವರ ಮನಸ್ಸಿನಲ್ಲಿ ‘ನಾನು ಈಶ್ವರನ ಅಂಶ ಆಗಿದ್ದೇನೆ’, ಎನ್ನುವ ವಿಚಾರ ಬರುವುದೇ ಇಲ್ಲ; ತದ್ವಿರುದ್ಧ ‘ನಾನು ಪರಮಾತ್ಮನಿಂದ ಬೇರೆಯೇ ಆಗಿದ್ದೇನೆ’, ಎನ್ನುವ ಕಲ್ಪನೆ ಅವರ ಮನಸ್ಸಿನಲ್ಲಿರುತ್ತದೆ, ಇದೇ ಅಹಂಕಾರ !

೨. ನಮ್ಮ ಮನಸ್ಸಿನಂತೆ ಆಗದಿದ್ದರೆ ಅಹಂಕಾರ ಪ್ರಕಟವಾಗುತ್ತದೆ

ನಮ್ಮ ಮನಸ್ಸಿನಂತೆ ಆದಾಗ ನಮ್ಮ ಮನಸ್ಸು, ಅಂದರೆ ಅಹಂಕಾರ ಸುಖಪಡುತ್ತದೆ; ತದ್ವಿರುದ್ಧ ಎದುರಿನ ವ್ಯಕ್ತಿಯಿಂದಾಗಿ ನಮ್ಮ ಅಪೇಕ್ಷೆ, ಇಚ್ಛೆ ಪೂರ್ಣವಾಗದಿದ್ದಾಗ ನಾವು ಅವನನ್ನು ಬೈಯ್ಯುತ್ತೇವೆ, ಅವನ ಬಗ್ಗೆ ಸಿಟ್ಟಿಗೇಳುತ್ತವೆ ಅಥವಾ ಅವನಿಗೆ ಹೆಸರಿಡುತ್ತೇವೆ. ಇದೇ ಅಹಂಕಾರದ ಪ್ರಕಟೀಕರಣವಾಗಿದೆ. ನಮ್ಮ ಜೀವನದಲ್ಲಿ ನಮ್ಮ ಮನಸ್ಸಿನ ವಿರುದ್ಧ ಆಗುವ ಬಹಳಷ್ಟು ಪ್ರಸಂಗಗಳು ನಮ್ಮ ಅಹಂಕಾರದಿಂದ ಆಗುತ್ತವೆ.

ನಾವು ಇಷ್ಟರವರೆಗೆ ಪಡೆದಿರುವ ಅನೇಕ ಜನ್ಮಗಳಲ್ಲಿ ನಮ್ಮ ಅಹಂಕಾರ ಹೆಚ್ಚುತ್ತಾ ಹೋಗಿದೆ; ಏಕೆಂದರೆ ಅಹಂಕಾರವನ್ನು ನಷ್ಟಗೊಳಿಸಲು ನಾವು ಪ್ರಯತ್ನವನ್ನೇ ಮಾಡಿಲ್ಲ ಅಥವಾ ಪ್ರಯತ್ನ ಕಡಿಮೆಯಾಯಿತು.

೩. ಅಹಂಕಾರದ ದುಷ್ಪರಿಣಾಮಗಳು !

೩ ಅ. ಕರ್ತೃತ್ವ ಹೆಚ್ಚಾಗುವುದು : ಅಹಂಕಾರದಿಂದ ನಾವು ಮಾಡುತ್ತಿರುವ ‘ಪ್ರತಿಯೊಂದು ಕೃತಿಯ ಕರ್ತಾ ನಾನೇ ಆಗಿದ್ದೇನೆ’, ಎಂದು ಅನಿಸುತ್ತದೆ. ಆದ್ದರಿಂದ ‘ನಾನೇ ಮಾಡುತ್ತೇನೆ’, ‘ನನಗೆ ತಿಳಿಯುತ್ತದೆ’ ಮತ್ತು ‘ನಾನು ಹೇಳುವುದೇ ಯೋಗ್ಯವಾಗಿದೆ’, ಈ ರೀತಿ ಅಹಂಕಾರದ ಅಂಗಗಳು ದೃಢವಾಗುತ್ತವೆ.

೩ ಆ. ಅಹಂಕಾರದಿಂದ ಪರಿಸ್ಥಿತಿಯನ್ನು ಸ್ವೀಕರಿಸಲು ಸಾಧ್ಯವಾಗದಿದ್ದಾಗ ಪ್ರತಿಕ್ರಿಯೆ ನೀಡುತ್ತೇವೆ. ಇದರಿಂದ ವ್ಯಕ್ತಿಯಿಂದ ತಪ್ಪುಗಳು ಹೆಚ್ಚಾಗುತ್ತವೆ : ನಮ್ಮ ಅಹಂಕಾರದಿಂದ ನಾವು ಎದುರಿನ ವ್ಯಕ್ತಿಯ ಯಾವುದೇ ವಿಷಯವನ್ನು ಸ್ವೀಕರಿಸುವುದಿಲ್ಲ. ಅವನ ಮಾತನ್ನು ಕೇಳಿಸಿಕೊಳ್ಳುವುದಿಲ್ಲ ಅಥವಾ ಅವನು ಮಾತನಾಡುತ್ತಿರುವಾಗ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ. ಅವನ ಮಾತನ್ನು ತಳ್ಳಿ ಹಾಕುತ್ತೇವೆ ಮತ್ತು ‘ನಾನು ಹೇಗೆ ಸರಿಯಿದ್ದೇನೆ ?’, ಎಂಬುದನ್ನು ಹೇಳುತ್ತೇವೆ. ಎದುರಿನ ವ್ಯಕ್ತಿ ಸುಮ್ಮನಾದಾಗ ನಮಗೆ ‘ನಾನು ಗೆದ್ದೆನು, ನಾನು ಅವನ ಬಾಯಿ ಮುಚ್ಚಿಸಿದೆನು’ ಎಂದು ಅನಿಸುತ್ತದೆ; ಆದರೆ ಪ್ರತ್ಯಕ್ಷ ನಾವೇ ಸೋತಿರುತ್ತೇವೆ’, ಎಂಬುದು ನಮಗೆ ತಿಳಿಯುವುದಿಲ್ಲ. ಈ ಅಹಂನ ಕವಚದಿಂದ ಮುಂದೆ ಪ್ರತಿಯೊಂದು ವಿಷಯದಲ್ಲಿಯೂ ನಾವು ತಪ್ಪು ವಿಚಾರ ಮಾಡುತ್ತೇವೆ. ಇದರಿಂದ ನಮ್ಮ ತಪ್ಪುಗಳು ಹೆಚ್ಚಾಗಿ ನಮ್ಮ ಕೊಡು-ಕೊಳ್ಳುವ ಲೆಕ್ಕಾಚಾರ ಮತ್ತು ಪಾಪಕರ್ಮ ಹೆಚ್ಚಾಗುತ್ತದೆ.

೩ ಇ. ಅಹಂಕಾರಿ ವ್ಯಕ್ತಿಯ ವರ್ತನೆ ಮತ್ತು ಮಾತುಗಳಿಂದ ಅವನಲ್ಲಿನ ಇತರ ಗುಣಗಳ ವಜಾಬಾಕಿ ಆಗಿ ಕೊನೆಗೆ ಆ ವ್ಯಕ್ತಿ ದುಃಖಿಯಾಗುತ್ತಾನೆ : ಅಹಂಕಾರದಿಂದ ವ್ಯಕ್ತಿ ಆತ್ಮಕೇಂದ್ರಿತನಾಗಿ ಪ್ರತಿಯೊಂದು ಕೃತಿಯನ್ನು ತನ್ನದೇ ದೃಷ್ಟಿಕೋನದಿಂದ ಮತ್ತು ತನಗಾಗಿಯೆ ಮಾಡುತ್ತಾನೆ. ಅದರಿಂದ ಸ್ವಾರ್ಥ ಹೆಚ್ಚಾಗುತ್ತದೆ. ಅಹಂಕಾರಿ ವ್ಯಕ್ತಿ ಯಾರಿಂದಲೂ ಏನನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಅದೇ ರೀತಿ ಇತರ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಅವನಲ್ಲಿ ಎದುರಿನ ವ್ಯಕ್ತಿಯ ವಿಷಯದಲ್ಲಿ ಪ್ರೀತಿ ಅಥವಾ ಗೌರವಭಾವನೆ ಇರುವುದಿಲ್ಲ; ತದ್ವಿರುದ್ಧ ಅವನ ಮಾತುಗಳು ಇತರರಿಗೆ ಕ್ಲೇಶವನ್ನುಂಟು ಮಾಡುತ್ತವೆ. ಆದ್ದರಿಂದ ಸಮಾಜ ಅವನಿಂದ ದೂರವಿರುತ್ತದೆ. ಅಹಂಕಾರಿ ವ್ಯಕ್ತಿಯಲ್ಲಿ ಕೆಲವು ಒಳ್ಳೆಯ ಗುಣಗಳಿದ್ದರೂ, ಅಹಂಕಾರದಿಂದ ಆ ಗುಣಗಳ ಉಪಯೋಗವಾಗುವುದಿಲ್ಲ. ಅಹಂಕಾರದ ವರ್ತನೆಯಿಂದ ಅವನಿಂದ ಅನೇಕ ತಪ್ಪುಗಳಾಗಿ ಕೊನೆಗೆ ಆ ವ್ಯಕ್ತಿ ದುಃಖಿಯಾಗುತ್ತಾನೆ; ಆದರೆ ‘ಅಹಂಕಾರದಿಂದ ದುಃಖವಾಗುತ್ತದೆ’, ಎಂಬುದು ಅವನಿಗೆ ಅನೇಕ ಜನ್ಮಗಳ ಸಾಧನೆಯ ನಂತರ ತಿಳಿಯುತ್ತದೆ.

೩ ಈ. ಮನಸ್ಸಿನ ವಿರುದ್ಧ ನಡೆಯುವ ಪ್ರಸಂಗಗಳಲ್ಲಿ ದುಃಖವುಂಟಾಗಿ ಮನೋರೋಗಗಳು ಹೆಚ್ಚಾಗುತ್ತವೆ ಮತ್ತು ಕೆಟ್ಟ ಕೃತ್ಯಗಳೂ ಆಗುತ್ತವೆ : ಮನಸ್ಸಿನ ವಿರುದ್ಧ ನಡೆಯುವ ಪ್ರಸಂಗಗಳಿಂದಾಗಿ ವ್ಯಕ್ತಿ ದುಃಖಿಯಾಗುತ್ತಾನೆ ಮತ್ತು ಕೆಲವೊಮ್ಮೆ ಮಾನಸಿಕ ರೋಗಿಯೂ ಆಗುತ್ತಾನೆ. ಈ ದುಃಖ ಸಹಿಸಲು ಸಾಧ್ಯವಾಗದ ಕಾರಣ ಇಂತಹ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣವೂ ಹೆಚ್ಚಾಗುತ್ತದೆ. ಅಹಂಕಾರ ಇದೊಂದು ದೊಡ್ಡ ವಿಷವಾಗಿದೆ. ಒಮ್ಮೆ ಇದು ಮನುಷ್ಯನಲ್ಲಿ ಸೇರಿಕೊಂಡರೆ, ಕ್ರಮೇಣ ಈ ವಿಷ ಆ ವ್ಯಕ್ತಿಯ ಸಂಪೂರ್ಣ ಮನಸ್ಸು ಮತ್ತು ಬುದ್ಧಿಯನ್ನು ಆವರಿಸಿಕೊಳ್ಳುತ್ತದೆ ಮತ್ತು ವ್ಯಕ್ತಿಯ ಮನಸ್ಸು ವಿಷಯುಕ್ತ ಕಲುಷಿತವಾಗುತ್ತದೆ. ಆ ವ್ಯಕ್ತಿಯ ವರ್ತನೆಯೂ ಕೈಮೀರಿ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆ ವ್ಯಕ್ತಿಯ ಮಾತುಗಳಿಂದ ವರ್ತನೆಯಿಂದ ಹೊರಬೀಳುವ ಸ್ಪಂದನಗಳು ಅತ್ಯಂತ ಕೆಟ್ಟದಾಗಿರುತ್ತವೆ. ಇಂತಹ ವ್ಯಕ್ತಿಗಳು ಕೆಟ್ಟ ಕೃತ್ಯಗಳನ್ನು ಮಾಡಲು ಕೂಡ ಹಿಂಜರಿಯುವುದಿಲ್ಲ.

೪. ಅಹಂಕಾರವನ್ನು ಜಯಿಸುವುದು ಆವಶ್ಯಕವಾಗಿದೆ !

೪ ಅ. ಅಹಂಕಾರ ಕಡಿಮೆಯಾದರೆ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ : ಅಹಂಕಾರ ಕಡಿಮೆಯಾದರೆ, ನಮ್ಮ ಜೀವನ ದಲ್ಲಿನ ಒತ್ತಡ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಮೆದುಳಿನ ಮೇಲೆ, ಮನಸ್ಸಿನ ಮೇಲೆ ಇರುವ ಒತ್ತಡ ಕಡಿಮೆ ಯಾದಾಗ ನಮ್ಮ ವಿಚಾರಪ್ರಕ್ರಿಯೆ ಸಕಾರಾತ್ಮಕವಾಗುತ್ತದೆ.

೪ ಆ. ಅಹಂಕಾರದಿಂದ ದುಃಖವಾಗುತ್ತದೆ ಮತ್ತು ಇತರರಿಗೂ ದುಃಖವನ್ನು ನೀಡುತ್ತೇವೆ ಆದ್ದರಿಂದ ಅಹಂಕಾರವನ್ನು ದೂರ ಗೊಳಿಸಲು ಮನಸ್ಸಿಗೆ ಕಠೋರ ಶಿಕ್ಷೆಯನ್ನು ನೀಡಬೇಕಾಗುತ್ತದೆ :

ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅಹಂಕಾರ ಇದ್ದೇ ಇರುತ್ತದೆ. ಅಹಂಕಾರದಿಂದ ಇತರರಿಗೆ ನೋವಾಗಿ ತನ್ನ ಮತ್ತು ಎದುರಿನವರ ಜೀವನ ಹಾಳಾಗುತ್ತದೆ, ದುಃಖಮಯವಾಗುತ್ತದೆ ಮತ್ತು ಕೆಲವೊಮ್ಮೆ ನಾಶವಾಗುತ್ತದೆ. ಅಹಂಕಾರ ಸಹಜವಾಗಿ ಹೋಗುವುದಿಲ್ಲ. ಅದಕ್ಕಾಗಿ ತುಂಬಾ ಕಷ್ಟಪಡಬೇಕಾಗುತ್ತದೆ. ನಮ್ಮ ಮನಸ್ಸಿಗೆ ಶಿಕ್ಷೆ ನೀಡಬೇಕಾಗುತ್ತದೆ, ಏಟು ಕೊಡಬೇಕಾಗುತ್ತದೆ, ಆಗ ಮಾತ್ರ ಅದು ಕೇಳಲು ಸಿದ್ಧವಾಗುತ್ತದೆ.

೪ ಇ. ‘ಸಾಧನೆಯಲ್ಲಿ ಅಹಂಕಾರವನ್ನು ನಾಶ ಮಾಡಲಿಕ್ಕಿರುತ್ತದೆ’, ಈ ವಿಷಯದ ಬಗ್ಗೆ ಸಮಾಜ ಅಜ್ಞಾನಿಯಾಗಿದೆ : ಸಮಾಜದಲ್ಲಿನ ಹೆಚ್ಚಿನ ಜನರು ಸಾಧನೆಯ ವಿಷಯದಲ್ಲಿ ಅಜ್ಞಾನಿಯಾಗಿರುತ್ತಾರೆ. ಅದ್ದರಿಂದ ಅವರಲ್ಲಿ ಅಹಂಕಾರ ವೃದ್ಧಿಯಾಗುತ್ತದೆ. ಅವರ ಜೀವನದಲ್ಲಿ ‘ಸನಾತನ ಸಂಸ್ಥೆ’ಯಂತಹ ಆಧ್ಯಾತ್ಮಿಕ ಸಂಸ್ಥೆ ಮತ್ತು ಪರಾತ್ಪರ ಗುರು ಡಾ. ಆಠವಲೆಯವರಂತಹ ಉಚ್ಚಮಟ್ಟದ ಗುರು ಬಂದಿರುವುದಿಲ್ಲ. ಆದ್ದರಿಂದ ಸಾಮಾನ್ಯ ಜನರು ಸಾಧನೆ ಮಾಡಿದಾಗ ‘ಅವರಿಗೆ ತಮ್ಮಲ್ಲಿನ ಅಹಂಕಾರವನ್ನು ನಾಶ ಮಾಡಬೇಕು’, ಎಂಬ ಅರಿವು ಇರುವುದಿಲ್ಲ. ಆದ್ದರಿಂದ ಸಾಧನೆ ಮಾಡಿಯೂ ಅವರು ಆನಂದದ ಸ್ತರವನ್ನು ತಲಪುವುದಿಲ್ಲ. ಶಾರೀರಿಕ ಮತ್ತು ಮಾನಸಿಕ ರೋಗಗಳಿಗೆ ಆಯಾ ವಿಷಯದಲ್ಲಿನ ತಜ್ಞರಿಂದ ನಾವು ಔಷಧೋಪಚಾರ ಮಾಡುತ್ತೇವೆ, ಹಾಗೆ ಅಹಂಕಾರವನ್ನು ನಷ್ಟಗೊಳಿಸಲು ಯಾವುದೇ ಮಾತ್ರೆ ಅಥವಾ ಚುಚ್ಚುಮದ್ದು ಇಲ್ಲ.

೫. ಅಹಂಕಾರವನ್ನು ಕಡಿಮೆ ಮಾಡುವ ಪ್ರಭಾವೀ ಉಪಾಯ !

೫ ಅ. ಮನಮುಕ್ತವಾಗಿ ಮಾತನಾಡುವುದು : ಅಹಂಕಾರವನ್ನು ಕಡಿಮೆ ಮಾಡಲು ಮನಮುಕ್ತತೆಯಿಂದ ಮಾತನಾಡುವುದು ಬಹಳ ಲಾಭದಾಯಕವಾಗಿದೆ. ನಾವು ಎಷ್ಟು ಮನಮುಕ್ತತೆಯಿಂದ ಮಾತನಾಡುತ್ತೇವೆಯೊ, ಅಷ್ಟು ತ್ವರಿತಗತಿಯಲ್ಲಿ ಮನಸ್ಸಿನಲ್ಲಿರುವ ವಿಚಾರಗಳು ಕಡಿಮೆಯಾಗುತ್ತವೆ. ಮನಸ್ಸಿನಲ್ಲಿರುವ ಅನೇಕ ವಿಚಾರಗಳ ಒತ್ತಡ ಕಡಿಮೆಯಾಗುತ್ತದೆ ಮತ್ತು ಮನಸ್ಸಿನ ಆ ಸ್ಥಾನ ಖಾಲಿಯಾಗುತ್ತದೆ. ಅದರಿಂದ ನಮಗೆ ಹಗುರವೆನಿಸುತ್ತದೆ.

೫ ಆ. ಶಾಂತರೀತಿಯಿಂದ ಸಮಸ್ಯೆಗಳನ್ನು ನಿರ್ವಹಿಸುವುದು : ವಾದ, ಜಗಳ ಅಥವಾ ದೂರು ಹೇಳಿದರೆ ಸಮಸ್ಯೆ ನಿವಾರಣೆ ಯಾಗುವುದಿಲ್ಲ. ‘ಶಾಂತ ರೀತಿಯಿಂದ ಮತ್ತು ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸುವುದು’, ಇದು ಅಹಂಕಾರವನ್ನು ಜಯಿಸುವ ಒಂದು ಮಾರ್ಗವಾಗಿದೆ. ನಮ್ಮ ಮನಸ್ಸಿನ ಮೇಲೆ ಇದರ ಸಂಸ್ಕಾರವಾದರೆ ಯಾವುದೇ ಕಠಿಣ ಸಮಸ್ಯೆಯನ್ನು ನಾವು ಶಾಂತವಾಗಿ ಬಗೆಹರಿಸಬಹುದು ಮತ್ತು ಅದರಿಂದ ನಮ್ಮ ಸಾಧನೆಯಾಗಬಹುದು.

೫ ಇ. ಕೇಳುವುದು, ವಿಚಾರಿಸಿಕೊಳ್ಳುವುದು, ಸ್ವೀಕರಿಸುವುದು, ಮತ್ತು ಕೃತಿ ಮಾಡುವುದು ಈ ನಾಲ್ಕು ಅಂಶಗಳ ಪಾಲನೆ ಮಾಡುವುದು : ಎದುರಿನ ವ್ಯಕ್ತಿ ಏನಾದರೂ ಹೇಳುತ್ತಿರುವಾಗ ಅದನ್ನು ಸಂಪೂರ್ಣ ಕೇಳಿಕೊಳ್ಳಬೇಕು, ಅದನ್ನು ಮನಃಪೂರ್ವಕ ಸ್ವೀಕರಿಸಬೇಕು, ಅದರ ಬಗ್ಗೆ ವಿಚಾರಿಸಿಕೊಳ್ಳುವುದು ಮತ್ತು ಅದಕ್ಕನುಸಾರ ಕೃತಿ ಮಾಡುವುದು’, ಈ ನಾಲ್ಕು ಅಂಶಗಳ ಪಾಲನೆ ಮಾಡಿದರೆ ನಮಗೆ ನಮ್ಮ ಮನಸ್ಸಿನಲ್ಲಿರುವ ಅಹಂಕಾರದ ದೃಢಸಂಸ್ಕಾರ ಕ್ರಮೇಣ ಕಡಿಮೆಯಾಗಬಹುದು. ನಮಗೆ ಎಲ್ಲ ವಿಷಯಗಳನ್ನು ಪರೇಚ್ಛೆ ಯಿಂದ ಮಾಡಲು ಸಾಧ್ಯವಾಗಬಹುದು. ‘ಸತತವಾಗಿ ಸ್ವೀಕರಿಸುವ ಸ್ಥಿತಿಯಲ್ಲಿದ್ದರೆ ನಮ್ಮ ಮನಸ್ಸಿನಲ್ಲಿ ‘ನಾನು’ ಎಂಬುದು ಉಳಿಯುವುದಿಲ್ಲ.

೫ ಈ. ‘ಈಶ್ವರನ ಇಚ್ಛೆಯ ಹೊರತು ಒಂದು ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ, ಇದನ್ನು ಗಮನದಲ್ಲಿಟ್ಟರೆ ಅಹಂಕಾರ ಕಡಿಮೆ ಆಗುತ್ತದೆ : ಈಶ್ವರನ ಇಚ್ಛೆಯ ಹೊರತು ಒಂದು ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ, ಹೀಗಿರುವಾಗ ‘ನಾನು ಮಾಡುತ್ತೇನೆ’ ಎಂದು ಹೇಳುವುದು ವ್ಯರ್ಥವಾಗಿದೆ, ಇದು ಸಾಧ್ಯವೇ ಇಲ್ಲ. ನಮಗೆ ನಾವು ಕೈಗೊಂಬೆಯಾಗಿದ್ದೇವೆ’, ಎಂಬುದರ ಅನುಭವ ಬರುತ್ತದೆ. ಕೊನೆಗೆ ಎಲ್ಲವೂ ದೇವರ ಕೃಪೆಯಿಂದಲೇ ಆಗುತ್ತದೆ’, ಎಂಬುದು ಅರಿವಾಗುತ್ತದೆ. ಆದ್ದರಿಂದ ಕ್ರಮೇಣ ಈಶ್ವರೀ ಇಚ್ಛೆಯೆಂದು ತಿಳಿದು ಪರಮಾತ್ಮನ ಕಡೆಗೆ ಅಂದರೆ ಸಾಧನೆಯ ದೃಷ್ಟಿಯಲ್ಲಿ ಮುಂದಿನ ಸಕಾರಾತ್ಮಕ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ‘ಪ್ರತಿಯೊಂದು ವಿಷಯವನ್ನೂ ಭಗವಂತನೇ ಮಾಡಿಸಿಕೊಳ್ಳುತ್ತಾನೆ’, ಎನ್ನುವ ಸಂಸ್ಕಾರ ಮನಸ್ಸಿಗೆ ಆದನಂತರ ಅಹಂ ಕಡಿಮೆಯಾಗಲು ಸಮಯ ತಗಲಲಾರದು.

೫ ಉ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಅಂತರ್ಗತ ಕೋಷ್ಟಕವನ್ನು ತುಂಬಿಸುವುದು ಮತ್ತು ಸೂಚನಾಸತ್ರಗಳನ್ನು ಮಾಡುವುದು : ಜೀವನದಲ್ಲಿ ಪ್ರತಿದಿನ ಅನೇಕ ಪ್ರಸಂಗಗಳು ಮನಸ್ಸಿನ ವಿರುದ್ಧ ಘಟಿಸುತ್ತವೆ. ಆ ಪ್ರಸಂಗಗಳನ್ನು ಸ್ವೀಕರಿಸುವ ಸಂಸ್ಕಾರವನ್ನು ಮನಸ್ಸಿನ ಮೇಲೆ ಮೂಡಿಸಲು ಅಂತರ್ಮುಖರಾಗಿದ್ದು ಘಟಿಸಿದ ಪ್ರಸಂಗಗಳಲ್ಲಿ ತಮ್ಮ ತಪ್ಪುಗಳ ನಿರೀಕ್ಷಣೆ ಮತ್ತು ಚಿಂತನೆ ಮಾಡಿದರೆ ತನ್ನಲ್ಲಿನ ಸ್ವಭಾವದೋಷ ಮತ್ತು ಅಹಂನ ಅಂಗಗಳ ಅರಿವಾಗುವುದು. ಈ ಪ್ರಸಂಗಗಳನ್ನು ಪ್ರತಿದಿನ ಕೋಷ್ಟಕದಲ್ಲಿ ಬರೆಯಬೇಕು. ತನ್ನಲ್ಲಿನ ಯಾವ ಸ್ವಭಾವದೋಷದಿಂದ ಆ ಪ್ರಸಂಗ ಘಟಿಸಿತು, ಆ ಸ್ವಭಾವದೋಷವನ್ನು ಬರೆದು ಅದರ ಮುಂದೆ ಯೋಗ್ಯ ದೃಷ್ಟಿಕೋನದ ಸೂಚನೆಯನ್ನು ಬರೆಯಬೇಕು. ಆ ಸೂಚನೆಯನ್ನು ದಿನದಲ್ಲಿ ೧೦ – ೧೨ ಸಲ ಮನಸ್ಸಿಗೆ ಕೊಡುವುದರಿಂದ ಅಂತರ್ಮನಸ್ಸಿನ ಮೇಲಿನ ಆ ಸ್ವಭಾವದೋಷ ದೂರವಾಗಲು ಸಹಾಯವಾಗುವುದು. ‘ಮನಸ್ಸಿನ ವಿರುದ್ಧ ಘಟಿಸುವ ಪ್ರಸಂಗ ಎಷ್ಟು ಹೊತ್ತು ನಮ್ಮ ಮನಸ್ಸಿಗೆ ತೊಂದರೆ ಕೊಡುತ್ತದೆ’, ಎಂಬುದು ಗಮನಕ್ಕೆ ಬಂದರೆ, ಹಾಗೆ ಮನಸ್ಸಿಗೆ ಸೂಚನೆ ಕೊಡಬಹುದು. ಅದರಿಂದ ಅಂತರ್ಮನಸ್ಸಿನ ಪ್ರಕ್ರಿಯೆ ಶೀಘ್ರ ಗತಿಯಲ್ಲಿ ಆಗುತ್ತದೆ. ಅನಂತರ ಅಂತಹ ಬೇರೆ ಬೇರೆ ಪ್ರಸಂಗಗಳಲ್ಲಿ ನಾವು ಜಾಗೃತರಾಗಿ ವರ್ತಿಸುತ್ತೇವೆ. ಇದರಿಂದ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.

೫ ಊ. ಗುರುಗಳ ಸಂಕಲ್ಪದಿಂದ ಅಹಂ-ನಿರ್ಮೂಲನೆಯಾಗುತ್ತದೆ : ಅಹಂಕಾರವನ್ನು ದೂರಗೊಳಿಸಲು ಯೋಗ್ಯ ಸಮಯದಲ್ಲಿ ಯೋಗ್ಯ ಮಾರ್ಗದರ್ಶನ ಸಿಕ್ಕಿದರೆ, ಮಾತ್ರ ಅದನ್ನು ಜಯಿಸಲು ಸಾಧ್ಯವಾಗುತ್ತದೆ. ‘ಸ್ಥೂಲದಿಂದ ನಾವು ಎಷ್ಟೇ ಪ್ರಯತ್ನ ಮಾಡಿದರೂ, ಗುರುಗಳ ಸಂಕಲ್ಪವಿದ್ದರೆ, ಮಾತ್ರ ಅಹಂಕಾರ ಕಡಿಮೆಯಾಗುತ್ತದೆ; ಆದ್ದರಿಂದ ‘ಗುರುಗಳ ಮನಸ್ಸನ್ನು ಗೆಲ್ಲುವುದೆ ಅದರ ಏಕೈಕ ಮಾರ್ಗವಾಗಿದೆ. ಇಲ್ಲದಿದ್ದರೆ ನಾವು ಎಷ್ಟೇ ಪ್ರಯತ್ನ ಮಾಡಿದರೂ ಅಹಂಕಾರ ಹೋಗುವುದಿಲ್ಲ.’ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಹಿಂದೆ ಪ.ಪೂ.ಡಾಕ್ಟರರ (ಪರಾತ್ಪರ ಗುರು ಡಾ. ಆಠವಲೆಯವರ) ಸಂಕಲ್ಪವಿದೆ. ಆದ್ದರಿಂದ ಅವರೆ ಪ್ರಯತ್ನ ಮಾಡಿಸಿಕೊಳ್ಳುತ್ತಾರೆ ಮತ್ತು ಅದರಲ್ಲಿ ಯಶಸ್ಸನ್ನೂ ನೀಡುತ್ತಾರೆ.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯಿಂದಸಿಗುವ ಆನಂದವು ಬೇರೆಯೇ ಆಗಿದೆ.

ಪ.ಪೂ.ಡಾಕ್ಟರರ ಕೃಪೆಯಿಂದ ಅನುಭವಿಸಲು ಸಿಕ್ಕಿದ ವಿಷಯವನ್ನು ಅವರೆ ಬರೆಯಿಸಿಕೊಂಡರು, ಅದನ್ನು ಅವರ ಕೋಮಲ ಚರಣಗಳಿಗೆ ಸಮರ್ಪಿಸುತ್ತೇನೆ ! -ಚರಣಸೇವಕ

– ಶ್ರೀ. ಮಧುಸೂದನ ಕುಲಕರ್ಣಿ (ಆಧ್ಯಾತ್ಮಿಕ ಮಟ್ಟ ಶೇ. ೬೬, ವಯಸ್ಸು ೬೧ ವರ್ಷ), ಫೋಂಡಾ ಗೋವಾ (೨೨.೪.೨೦೨೨)