ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಅಡೆತಡೆಗಳನ್ನು ಒಡ್ಡದಂತೆಯೂ ಆದೇಶ
ಅಮರಾವತಿ(ಆಂಧ್ರಪ್ರದೇಶ) – ‘ಆಂಧ್ರಪ್ರದೇಶ ದತ್ತಿ ಇಲಾಖೆ ಮತ್ತು ಹಿಂದೂ ಧಾರ್ಮಿಕ ಸಂಸ್ಥೆ ಕಾಯ್ದೆ 1987 ರ ಕಲಂ 13(ಅ) ಅಡಿಯಲ್ಲಿ ‘ವೈದಿಕ ಪರಂಪರೆಯ ಪ್ರಕರಣಗಳಲ್ಲಿ ದೇವಸ್ಥಾನಗಳಿಗೆ ಸ್ವಾಯತ್ತತೆಯನ್ನು ನೀಡಬೇಕು ಮತ್ತು ದೇವಸ್ಥಾನಗಳ ಪದ್ಧತಿ ಹಾಗೂ ಸಂಪ್ರದಾಯಗಳ ಪಾವಿತ್ರ್ಯವನ್ನು ಕಾಪಾಡಲು ಯಾವುದೇ ಅಡೆತಡೆಗಳನ್ನು ಒಡ್ಡಬಾರದೆಂದೂ ಆಂಧ್ರಪ್ರದೇಶ ಸರಕಾರವು ಎಲ್ಲ ಇಲಾಖೆಯ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ. ಈ ಆದೇಶವನ್ನು ಜಾರಿಗೊಳಿಸಿ, ಅದರ ಪಾಲನೆಯ ವರದಿಯನ್ನು ಸಲ್ಲಿಸುವಂತೆ ಸರಕಾರ ತಿಳಿಸಿದೆ.
1. ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಆಯುಕ್ತರು, ವಿಭಾಗದ ಸಹಾಯಕ ಆಯುಕ್ತರು, ಉಪಾಯುಕ್ತರು ಅಥವಾ ಸಹಾಯಕ ಆಯುಕ್ತರು ಇವರಲ್ಲಿ ಯಾವುದೇ ಆಡಳಿತಾಧಿಕಾರಿಗಳು ದೇವಸ್ಥಾನದ ವೈದಿಕ ಪರಂಪರೆ ಮತ್ತು ಸಂಪ್ರದಾಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು.
2. ದೇವಸ್ಥಾನದ ಧಾರ್ಮಿಕ ವಿಧಿ, ಸೇವೆ, ಕುಂಭಾಭಿಷೇಕ ಹಾಗೂ ಇತರೆ ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ನಿರ್ಣಯವನ್ನು ತೆಗೆದು ಕೊಳ್ಳುವಾಗ ದೇವಸ್ಥಾನದ ಮುಖ್ಯ ಅರ್ಚಕರು ಮತ್ತು ಧಾರ್ಮಿಕ ಸೇವಕರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ಆವಶ್ಯಕತೆಯಿದ್ದರೆ ಕಾರ್ಯನಿರ್ವಾಹಕ ಅಧಿಕಾರಿಗಳು ಮುಖ್ಯ ಅರ್ಚಕರು ಮತ್ತು ಧಾರ್ಮಿಕ ಸೇವಕರ ಒಂದು ವೈದಿಕ ಸಮಿತಿಯನ್ನು ಸ್ಥಾಪಿಸಬಹುದು. ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಭೇದಗಳಿದ್ದರೆ ಪೀಠಾಧೀಶರ ಅಭಿಪ್ರಾಯವನ್ನು ಪಡೆದು ಕೊಳ್ಳಬಹುದು.
3. ದೇವತೆಗಳ ಸೇವೆ ಮತ್ತು ಧಾರ್ಮಿಕ ವಿಧಿಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಸ್ತಕ್ಷೇಪ ಮಾಡಬಾರದು. ಈ ಪ್ರಕರಣದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.