ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಉಪಯುಕ್ತ ದೃಷ್ಟಿಕೋನ’ಗಳು ಈ ಗ್ರಂಥದ ಬಗ್ಗೆ ೨೬/೮ ನೇ ಸಂಚಿಕೆಯಲ್ಲಿ ನೋಡಿದೆವು. ಈಗ ಮುಂದಿನ ಭಾಗ ನೋಡೋಣ.
ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/129358.html |
೭. ಆಧ್ಯಾತ್ಮಿಕ ಉಪಾಯಗಳ ಬಗ್ಗೆ ಉಪಯುಕ್ತ ದೃಷ್ಟಿಕೋನ
೭ ಅ. ತೊಂದರೆಗಳ ಲಕ್ಷಣಗಳ ಬಗ್ಗೆ ಜಾಗರೂಕರಾಗಿದ್ದು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು : ನಿಯಮಿತವಾಗಿ ಕುಳಿತು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವ ಸಾಧಕರ ಪೈಕಿ ಕೆಲವರು ‘ತುಂಬಾ ಸೇವೆಯಿದೆ’ ಎಂಬ ಕಾರಣವನ್ನು ಮುಂದಿಟ್ಟು ಅಥವಾ ‘ಸೇವೆಯಿಂದಲೇ ಉಪಾಯವಾಗುತ್ತದೆ’ ಎಂದು ತಿಳಿದು ಉಪಾಯಗಳನ್ನು ಒಮ್ಮೆಲೇ ಕಡಿಮೆ ಮಾಡುತ್ತಾರೆ ಅಥವಾ ನಿಲ್ಲಿಸಿಯೇ ಬಿಡುತ್ತಾರೆ. ‘ಸೇವೆಯಿಂದ ಉಪಾಯಗಳಾಗುತ್ತವೆ’ ಎಂಬುದು ಯೋಗ್ಯವಾಗಿದ್ದರೂ ತೊಂದರೆಯಿರುವ ಪ್ರತಿಯೊಬ್ಬನ ವಿಷಯದಲ್ಲೂ ಹೀಗಾಗುವುದಿಲ್ಲ, ಏಕೆಂದರೆ ಅದು ಸಾಧಕನ ತೊಂದರೆಯ ತೀವ್ರತೆ, ತೊಂದರೆಯ ಸ್ವರೂಪ, ತೊಂದರೆಯೊಂದಿಗೆ ಹೋರಾಡುವ ಸಾಧಕನ ಕ್ಷಮತೆ, ಸಾಧಕನ ಆಧ್ಯಾತ್ಮಿಕ ಮಟ್ಟ ಇಂತಹ ವಿವಿಧ ಘಟಕಗಳ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಸಲ ಸಾಧಕರು ಉಪಾಯವನ್ನು ಒಮ್ಮೆಲೇ ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದರಿಂದ ಅವರ ತೊಂದರೆಗಳಲ್ಲಿ ಹೆಚ್ಚಳವಾಗಿ ಅದರ ಪರಿಣಾಮ ಅವರ ದೇಹ, ಮನಸ್ಸು, ಬುದ್ಧಿ ಅಥವಾ ಅಹಂನ ಮೇಲಾಗುತ್ತದೆ. ಇದರಿಂದ ಅವರ ಸೇವೆ ಸರಿಯಾಗುವುದಿಲ್ಲ ಮತ್ತು ಅವರಿಗೆ ಸೇವೆಯಿಂದ ಅಷ್ಟು ಚೈತನ್ಯವನ್ನು ಗ್ರಹಿಸಲು ಆಗುವುದಿಲ್ಲ. ಆದುದರಿಂದ ಸಾಧಕರು ಉಪಾಯಗಳನ್ನು ಕಡಿಮೆ ಮಾಡಿದ ಮೇಲೆ ಅಥವಾ ನಿಲ್ಲಿಸಿದ ಮೇಲೆ ೨-೩ ದಿನ ‘ತೊಂದರೆಯ ಲಕ್ಷಣಗಳು ಹೆಚ್ಚುತ್ತಿದೆಯೇ ?’ ಎಂದು ಜಾಗರೂಕರಾಗಿ ನೋಡಬೇಕು. ತೊಂದರೆಯ ಲಕ್ಷಣಗಳು ಹೆಚ್ಚುತ್ತಿದ್ದಲ್ಲಿ ಪುನಃ ಮೊದಲಿನಂತೆಯೇ ಉಪಾಯಗಳನ್ನು ಮಾಡಬೇಕು.
‘ಸೇವೆಯಿಂದಲೇ ಉಪಾಯವಾಗುವುದರಿಂದ ಪ್ರತ್ಯೇಕವಾಗಿ ಕುಳಿತು ಉಪಾಯ ಮಾಡುವ ಆವಶ್ಯಕತೆಯಿಲ್ಲ’ ಎಂದು ಸಂತರು ಹೇಳಿದ್ದರೆ ಅದರ ಬಗ್ಗೆ ಸಾಧಕರು ಮನಸ್ಸಿನಲ್ಲಿ ಸಂದೇಹವನ್ನಿಟ್ಟುಕೊಳ್ಳದೇ ಅವರು ಹೇಳಿದಂತೆ ಶ್ರದ್ಧೆಯಿಂದ ಸೇವೆಯನ್ನು ಮಾಡಬೇಕು. ಆದರೆ ಹೀಗೆ ಮಾಡಿದ ನಂತರ ತೊಂದರೆಯ ಲಕ್ಷಣಗಳು ಹೆಚ್ಚಾದಲ್ಲಿ ಅದರ ಬಗ್ಗೆ ಸಂತರ ಬಳಿ ನಮ್ರತೆಯಿಂದ ಹೇಳಬೇಕು.
೭ ಆ. ಆಧ್ಯಾತ್ಮಿಕ ಉಪಾಯಗಳ ಹಾಗೂ ಸೇವೆಯ ಫಲನಿಷ್ಪತ್ತಿಯನ್ನು ಹೆಚ್ಚಿಸುವುದು
೧. ‘ಉಪಾಯವನ್ನು ಒಂದು ‘ಕರ್ಮಕಾಂಡ’ವೆಂದು ಮುಗಿಸಿಬಿಡದೇ ‘ನಾಮಜಪದ ಮಾಧ್ಯಮದಿಂದ ಭಕ್ತಿಭಾವವನ್ನು ಹೆಚ್ಚಿಸುವುದು ಮತ್ತು ದೇವರ ಚರಣಗಳಲ್ಲಿ ಹೋಗುವುದನ್ನು ಸಾಧ್ಯಗೊಳಿಸಬೇಕಾಗಿದೆ’ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.
೨. ಉಪಾಯಗಳ ಸಮಯದಲ್ಲಿ ನಾಮಜಪವನ್ನು ಮಾಡುವಾಗ ಖಾಲಿ ಪೆಟ್ಟಿಗೆಗಳ ಉಪಾಯವನ್ನೂ ಮಾಡಿದರೆ ಉಪಾಯಗಳ ಫಲನಿಷ್ಪತ್ತಿ ಹೆಚ್ಚುತ್ತದೆ. ಸೇವೆಗಳನ್ನು ಮಾಡುವಾಗ ಮತ್ತು ಮಲಗುವಾಗಲೂ ಸುತ್ತಲೂ ಪೆಟ್ಟಿಗೆಗಳನ್ನಿಟ್ಟು ಉಪಾಯವನ್ನು ಮಾಡಬಹುದು. ಕುರ್ಚಿಯಲ್ಲಿ ಕುಳಿತುಕೊಂಡು ‘ಸೇವೆಯನ್ನು ಮಾಡುವಾಗ ಎರಡು ತೊಡೆಗಳ ನಡುವೆ ಒಂದರ ಮೇಲೆ ಒಂದು ಪೆಟ್ಟಿಗೆಗಳನ್ನು ಸಹಜವಾಗಿ ಇಡಬಹುದು. ಇದರಿಂದ ಸ್ವಾಧಿಷ್ಠಾನ ಮತ್ತು ಮಣಿಪುರ ಇವೆರಡು ಮಹತ್ವದ ಕುಂಡಲಿನಿಚಕ್ರಗಳ ಮೇಲೆ ಉಪಾಯವಾಗುತ್ತಿರುತ್ತದೆ. ಬಹಳಷ್ಟು ಸಾಧಕರಿಗೆ ಸ್ವಾಧಿಷ್ಠಾನ ಮತ್ತು ಮಣಿಪುರ ಚಕ್ರಗಳಿಗೆ ಸಂಬಂಧಿತ ತೊಂದರೆಗಳು ಹೆಚ್ಚಿರುತ್ತವೆ. ಹೀಗೆ ಉಪಾಯ ಮಾಡುವುದರಿಂದ ಅವರಿಗೆ ತುಂಬಾ ಲಾಭವಾಗುತ್ತದೆ. (ಖಾಲಿ ಪೆಟ್ಟಿಗೆಗಳ ಉಪಾಯಗಳ ಬಗೆಗಿನ ವಿವೇಚನೆಯನ್ನು ಸನಾತನದ ಗ್ರಂಥ ‘ಖಾಲಿ ಪೆಟ್ಟಿಗೆಗಳ ಉಪಾಯ (೨ ಖಂಡ)’ ಇದರಲ್ಲಿ ಕೊಡಲಾಗಿದೆ.)
೩. ಶಾರೀರಿಕ ತೊಂದರೆಗಳಿಂದ ಮನಸ್ಸಿನ ಮೇಲೆಯೂ ಪರಿಣಾಮವಾಗುತ್ತದೆ. ಶಾರೀರಿಕ ತೊಂದರೆಗಳಿಂದ ಮನಸ್ಸು ಅಸ್ಥಿರವಾಗಿದ್ದರೆ, ಆಗ ಪ್ರಾಧಾನ್ಯತೆಯಿಂದ ಸೇವೆಯನ್ನೇ ಮಾಡಬೇಕು. ಸೇವೆಯಲ್ಲಿ ಗಮನ ಹೋದರೆ ಶಾರೀರಿಕ ತೊಂದರೆಗಳ ಕಡೆ ಕಡಿಮೆ ಗಮನ ಹೋಗುವುದರಿಂದ ಶಾರೀರಿಕ ತೊಂದರೆಗಳಿಂದ ಮನಸ್ಸಿನ ಮೇಲಾಗುವ ಪರಿಣಾಮ ಕಡಿಮೆಯಾಗುತ್ತದೆ. ಗ್ರಂಥಗಳ ಅನುವಾದದಂತಹ ಸೇವೆಯಲ್ಲಿ ಮನಸ್ಸಿನ ಏಕಾಗ್ರತೆಯ ಆವಶ್ಯಕತೆ ಇರುತ್ತದೆ. ಇಂತಹ ಸೇವೆಯಲ್ಲಿ ಮನಸ್ಸು ಏಕಾಗ್ರವಾಗದಿದ್ದಲ್ಲಿ, ಪ್ರಾಧಾನ್ಯತೆಯಿಂದ ಕಡಿಮೆ ಏಕಾಗ್ರತೆಯ ಸೇವೆಗಳನ್ನು (ಉದಾ. ಗಣಕಯಂತ್ರದಲ್ಲಿನ ಅನಾವಶ್ಯಕ ಕಡತಗಳನ್ನು ಅಳಿಸುವುದು) ಮಾಡಬೇಕು. ತೊಂದರೆಯಿಂದ ಮನಸ್ಸು ಅಸ್ಥಿರವಾಗಿರುವಾಗ ಅಥವಾ ನಿದ್ರೆ ಬರುತ್ತಿರುವಾಗ ಹಠದಿಂದ ಏಕಾಗ್ರತೆಯ ಆವಶ್ಯಕತೆಯಿರುವ ಸೇವೆಯನ್ನು ಮಾಡುವುದೆಂದರೆ ಆ ಸೇವೆಯ ಫಲನಿಷ್ಪತ್ತಿಯನ್ನು ನಾವೇ ಕಡಿಮೆ ಮಾಡಿಕೊಂಡಂತಾಗಿದೆ.
ಮಾನಸಿಕ ಕಾರಣಗಳಿಂದ (ಉದಾ. ಸ್ವಭಾವದೋಷಗಳಿಂದ) ಮನಸ್ಸು ಅಸ್ಥಿರವಾಗಿದ್ದಲ್ಲಿ ಪ್ರಾಧಾನ್ಯತೆಯಿಂದ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು.
೭ ಇ. ಉಪಾಯಗಳ ಸಮಯದಲ್ಲಿ ನಾಮಜಪವನ್ನು ಮಾಡುವಾಗ ಕೈಗಳಿಂದ ಮುದ್ರೆ ಮತ್ತು ನ್ಯಾಸ ಮಾಡಬೇಕು : ಬಹಳಷ್ಟು ಸಾಧಕರು ಉಪಾಯದ ಸಮಯದಲ್ಲಿ ನಾಮಜಪ ಮಾಡುವಾಗ ಕೈಗಳಿಂದ ಮುದ್ರೆ ಮತ್ತು ನ್ಯಾಸವನ್ನು ಮಾಡುವುದಿಲ್ಲ. ಇದರ ಬಗ್ಗೆ ಸಾಧಕರು ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಬೇಕು.
೧. ನಾಮಜಪವು ಹೇಗೆ ಒಂದು ಉಪಾಯ ಪದ್ಧತಿಯಾಗಿದೆಯೋ, ಹಾಗೆಯೇ ‘ಮುದ್ರೆ ಮತ್ತು ನ್ಯಾಸ ಮಾಡುವುದು’ ಇನ್ನೊಂದು ಉಪಾಯಪದ್ಧತಿಯಾಗಿದೆ. ಒಂದೇ ಸಮಯದಲ್ಲಿ ಎರಡು ಉಪಾಯಪದ್ಧತಿಗಳ ಲಾಭ ಪಡೆಯುವ ಅವಕಾಶವಿರುವಾಗ ನಾವು ಅದನ್ನು ಏಕೆ ಕಳೆದುಕೊಳ್ಳಬೇಕು ?
೨. ಕೆಲವೊಮ್ಮೆ ಸಾಧಕರಿಗೆ ತೊಂದರೆಯಿಂದಾಗಿ ಮುದ್ರೆ ಮತ್ತು ನ್ಯಾಸವನ್ನು ಮಾಡಬೇಕು ಎಂಬುದು ನೆನಪಿನಲ್ಲಿ ಉಳಿಯುವುದಿಲ್ಲ. ಇಂತಹ ಸಾಧಕರು ಇದರ ಬಗ್ಗೆ ನೆನಪಿಸಲು ಸಹಸಾಧಕರಿಗೆ ಹೇಳಬೇಕು ಅಥವಾ ಸಂಚಾರ ವಾಣಿಯಲ್ಲಿ ಅಲರಾಂ ಇಡಬೇಕು.
೩. ಒಂದು ಕೈಯಿಂದ ನ್ಯಾಸ ಮತ್ತು ಇನ್ನೊಂದು ಕೈಯಿಂದ ಮುದ್ರೆಯನ್ನು ಮಾಡಿ ಕೆಲವು ಸಮಯದ ನಂತರ ಕೈ ಅಥವಾ ಬೆರಳುಗಳು ಸೋತಂತಾದರೆ ಅಥವಾ ನೋಯುತ್ತಿದ್ದರೆ ಕೈಗಳನ್ನು ಬದಲಾಯಿಸಬೇಕು. ನ್ಯಾಸವನ್ನು ಮಾಡಲು ಸಾಧ್ಯವೇ ಇಲ್ಲದಿದ್ದಲ್ಲಿ ಮುದ್ರೆಗಳನ್ನಾದರೂ ಮಾಡಬೇಕು.
೭ ಊ. ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯಿಂದ ಉಪಾಯಗಳನ್ನು ಹುಡುಕುವುದು : ‘ಒಂದು ಸಲ ಉಪಾಯದ ಸಮಯದಲ್ಲಿ ನಾನು ೨-೩ ದಿನಗಳಿಂದ ‘ಓಂ’ ನ ನಾಮಜಪ ಮಾಡುತ್ತಿದ್ದೆ. ತುಂಬಾ ಸಮಯ ನಾಮಜಪ ಮಾಡಿಯೂ ಉಪಾಯಗಳಿಂದ ಪರಿಣಾಮವಾಗುತ್ತಿರಲಿಲ್ಲ. ನಂತರ ನಾನು ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯಿಂದ ಉಪಾಯ ಹುಡುಕಿ ಶ್ರೀ ಅಗ್ನಿದೇವತೆಯ ನಾಮಜಪ ಮಾಡತೊಡಗಿದೆ. ಈ ನಾಮಜಪ ಮಾಡಲು ಆರಂಭಿಸಿದ ಮರುಕ್ಷಣವೇ ನನಗೆ ಉಪಾಯದ ಪರಿಣಾಮ ಅರಿವಾಗತೊಡಗಿತು. ಪರಾತ್ಪರ ಗುರು ಡಾಕ್ಟರರು ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯಂತಹ ಸುಲಭ ಉಪಾಯ ಪದ್ಧತಿಯನ್ನು ಹುಡುಕಿ ಸಾಧಕರ ಮೇಲೆ ಎಷ್ಟೊಂದು ಕೃಪೆ ಮಾಡಿದ್ದಾರೆ ! ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯಿಂದ ಉಪಾಯ ಹುಡುಕಿ ಅದನ್ನು ಮಾಡುವುದರ ಮಹತ್ವ ಮುಂದಿನಂತಿದೆ.
೧. ವ್ಯಕ್ತಿಗೆ ತೊಂದರೆಗಳನ್ನು ಕೊಡುವ ಕೆಟ್ಟ ಶಕ್ತಿಗಳು ವ್ಯಕ್ತಿಯಲ್ಲಿನ ರೋಗಗಳ ಅಥವಾ ತೊಂದರೆಗಳ ಮೂಲ ಸ್ಥಾನವನ್ನು ಪದೇ ಪದೇ ಬದಲಾಯಿಸುತ್ತಿರುತ್ತವೆ. ‘ಪ್ರಾಣಶಕ್ತಿವಹನ ಉಪಾಯ ಪದ್ಧತಿ’ಯಿಂದ ನ್ಯಾಸ ಮಾಡುವ ಸ್ಥಾನವನ್ನು ನಾವೇ ಹುಡುಕಬೇಕಾಗಿರುವುದರಿಂದ ಪ್ರತಿ ಸಲ ರೋಗದ ಅಥವಾ ತೊಂದರೆಯ ಸ್ಥಾನವನ್ನು ಹುಡುಕುತ್ತೇವೆ. ಇದರಿಂದ ಉಪಾಯವನ್ನು ತಪ್ಪಿಲ್ಲದೇ ಮಾಡಲು ಸಾಧ್ಯವಾಗುತ್ತದೆ.
೨. ಕೆಟ್ಟ ಶಕ್ತಿಗಳು ಪಂಚಮಹಾಭೂತಗಳ ಸ್ತರದಲ್ಲಿ ವ್ಯಕ್ತಿಯ ಮೇಲೆ ಆಕ್ರಮಣಗಳನ್ನು ಮಾಡುತ್ತಿರುತ್ತವೆ. ಹೆಚ್ಚಿನ ಸಲ ವ್ಯಕ್ತಿಯ ರೋಗ ಅಥವಾ ತೊಂದರೆ ಅದೇ ಆಗಿದ್ದರೂ ಕೆಟ್ಟ ಶಕ್ತಿಗಳು ಯಾವ ಮಹಾಭೂತದ ಸ್ತರದಲ್ಲಿ ಆಕ್ರಮಣ ಮಾಡುತ್ತವೆಯೋ, ಆ ಮಹಾಭೂತ ಬೇರೆಬೇರೆಯಾಗಿರಬಹುದು. ಇದಕ್ಕಾಗಿಯೇ ಆಯಾ ಆಕ್ರಮಣವನ್ನು ಹಿಮ್ಮೆಟ್ಟಿಸಲು ಆಯಾ ಮಹಾಭೂತಕ್ಕೆ ಸಂಬಂಧಿಸಿದ ಮುದ್ರೆ ಮತ್ತು ನಾಮಜಪ ಹುಡುಕಿ ಉಪಾಯ ಮಾಡುವುದು ಮಹತ್ವದ್ದಾಗಿದೆ.
ಮೇಲಿನ ಎರಡೂ ಕಾರಣಗಳಿಂದ ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯಿಂದ ಉಪಾಯ ಹುಡುಕುವುದರ ಮಹತ್ವ ಗಮನಕ್ಕೆ ಬರುತ್ತದೆ. ಹೀಗಿದ್ದರೂ ಕೆಲವು ಸಾಧಕರು ಆತ್ಮವಿಶ್ವಾಸದ ಅಭಾವದಿಂದ ಉಪಾಯವನ್ನು ಹುಡುಕುವುದಿಲ್ಲ. ಹೇಗೆ ಈಜು ಕಲಿಯಲು ನೀರಿನಲ್ಲಿ ಇಳಿಯಲೇ ಬೇಕಾಗುತ್ತದೆಯೋ, ಹಾಗೆಯೇ ಉಪಾಯಪದ್ಧತಿಯನ್ನು ಕಲಿಯಲು ಪ್ರಯತ್ನ ಮಾಡಿ ನೋಡಲೇಬೇಕಾಗುತ್ತದೆ. ಗುರುಗಳ ಮೇಲೆ ಶ್ರದ್ಧೆಯನ್ನಿಟ್ಟು ಪ್ರಯತ್ನ ಮಾಡಿದರೆ ಸ್ವಲ್ಪ ಸ್ವಲ್ಪ ಸಾಧ್ಯವಾಗತೊಡಗಿದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆ ಆತ್ಮವಿಶ್ವಾಸದ ಬಲದಲ್ಲಿ ಮುಂದೆ ಇನ್ನೂ ಚೆನ್ನಾಗಿ ಸಾಧ್ಯವಾಗುತ್ತದೆ. ಈ ಉಪಾಯಪದ್ಧತಿಯ ಹಿಂದೆ ಪರಾತ್ಪರ ಗುರು ಡಾಕ್ಟರರ ಸಂಕಲ್ಪವೂ ಇರುವುದರಿಂದ ಸಾಧಕರಿಗೆ ಈ ಪದ್ಧತಿಗನುಸಾರ ಉಪಾಯ ಹುಡುಕಲು ಖಂಡಿತವಾಗಿಯೂ ಸಾಧ್ಯವಾಗುತ್ತದೆ (ಈ ಉಪಾಯಪದ್ಧತಿಯ ಬಗ್ಗೆ ಸನಾತನದ ಗ್ರಂಥ ‘ಪ್ರಾಣಶಕ್ತಿವಹನ ಉಪಾಯ (೨ ಖಂಡ)’ ಇದರಲ್ಲಿ ವಿವೇಚನೆಯನ್ನು ಮಾಡಲಾಗಿದೆ.)’
– (ಪೂ.) ಶ್ರೀ. ಸಂದೀಪ ಆಳಶಿ (೨೮.೧೦.೨೦೧೬)