ಸನಾತನದ ಕಿರುಗ್ರಂಥ : ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ

(ಪೂ.) ಶ್ರೀ. ಸಂದೀಪ ಆಳಶಿ

‘ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಉಪಯುಕ್ತ ದೃಷ್ಟಿಕೋನ’ಗಳು ಈ ಗ್ರಂಥದ ಬಗ್ಗೆ ೨೬/೫ ನೇ ಸಂಚಿಕೆಯಲ್ಲಿ ನೋಡಿದೆವು. ಈಗ ಮುಂದಿನ ಭಾಗ ನೋಡೋಣ

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/127737.html

೬. ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಉಪಯುಕ್ತ ದೃಷ್ಟಿಕೋನಗಳು

೬ ಅ. ತೊಂದರೆಗಳಿಂದ ನಿರಾಶೆ ಅಥವಾ ದುಃಖಿಯಾಗದೇ ಅವುಗಳ ಹಿಂದಿನ ಕಾರಣಗಳನ್ನು ಅರಿತುಕೊಳ್ಳುವುದು : ‘ಸದ್ಯ ಸೂಕ್ಷ್ಮದಲ್ಲಿನ ಆಪತ್ಕಾಲ ನಡೆದಿರುವುದರಿಂದ ಅದರ ಕಾವು ಎಲ್ಲ ಸಾಧಕರಿಗೂ ಹೆಚ್ಚುಕಡಿಮೆ ಪ್ರಮಾಣದಲ್ಲಿ ತಾಗುತ್ತಿದೆ. ಕೆಲವು ಸಾಧಕರಿಗೆ ಎಲ್ಲಕ್ಕಿಂತ ಹೆಚ್ಚು ತಾಗುತ್ತದೆ, ಅಂದರೆ ಅವರಿಗೆ ಹೆಚ್ಚು ತೊಂದರೆಯಾಗುತ್ತದೆ. ಇಂತಹವರಲ್ಲಿನ ಶೇ. ೯೦ ರಷ್ಟು ಸಾಧಕರಿಗೆ ‘ನನ್ನ ಸಾಧನೆ ಸರಿಯಾಗಿ ಆಗುತ್ತಿಲ್ಲ, ಆದ್ದರಿಂದ ನನಗೆ ಹೆಚ್ಚು ತೊಂದರೆಯಾಗುತ್ತಿದೆ’ ಎಂದು ಅನಿಸುತ್ತದೆ. ಇಂತಹ ಸಾಧಕರು ‘ನನಗೆ ಸಾಧನೆ ಮಾಡಲು ಆಗುತ್ತಿಲ್ಲ’, ‘ನನ್ನ ಸೇವೆ ಚೆನ್ನಾಗಿ ಆಗುವುದಿಲ್ಲ’ ಎಂಬಂತಹ ವಿಚಾರಗಳಲ್ಲಿ ಸಿಲುಕಿ ದುಃಖಿತ ಮತ್ತು ನಿರಾಶರಾಗುತ್ತಾರೆ. ಇಂತಹ ಸಾಧಕರು ತೊಂದರೆಗಳ ಹಿಂದಿರುವ ಮುಂದಿನ ಕಾರಣಗಳನ್ನು ಗಮನದಲ್ಲಿಡಬೇಕು.

೬ ಅ ೧. ಕಾಲಗತಿ (ಕಾಲಮಹಾತ್ಮೆ) : ಸನಾತನ ಸಂಸ್ಥೆಯ ಶ್ರದ್ಧಾಸ್ಥಾನರಾದ ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ತಮ್ಮ ಒಂದು ಭಜನೆಯಲ್ಲಿ ‘ಕಾಲಗತಿಯ ಮುಂದೆ ಬುದ್ಧಿ ಏನು ಮಾಡುವುದು !’ ಎಂದು ಬರೆದಿದ್ದಾರೆ. ಯುಧಿಷ್ಠಿರನು ದೊಡ್ಡ ಧುರಂಧರ, ಬುದ್ಧಿವಂತ ಮತ್ತು ಧರ್ಮಾತ್ಮನಾಗಿದ್ದರೂ ಕೌರವರೊಂದಿಗಿನ ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದರೂ ಅವನಿಗೆ ತನ್ನ ಪತ್ನಿಯನ್ನು ‘ಪಣ’ಕ್ಕಿಡುವ ಬುದ್ಧಿಯಾಯಿತು, ಇದು ಕಾಲಗತಿಯಿಂದಲೇ ! ಸದ್ಯ ಸೂಕ್ಷ್ಮದಲ್ಲಿನ ಆಪತ್ಕಾಲ ನಡೆಯುತ್ತಿದೆ. ಇದು ಕಾಲಗತಿಯೇ ಆಗಿದೆ. ಸಾಧಕರೂ ಈ ಕಾಲಗತಿಯ ಮಹಾತ್ಮೆಯನ್ನು ಗಮನದಲ್ಲಿಟ್ಟುಕೊಂಡರೆ, ‘ಈ ಕಾಲಗತಿಯ ಮುಂದೆ ನಮಗೆ ಏನೂ ಮಾಡಲು ಆಗುವುದಿಲ್ಲ, ಕಾಲಗತಿಯಿಂದಾಗಿ ಆಧ್ಯಾತ್ಮಿಕ ತೊಂದರೆಗಳನ್ನು ನಮಗೆ ಭೋಗಿಸಲೇಬೇಕಾಗುವುದು’ ಎಂಬ ಸತ್ಯವು ಮನವರಿಕೆಯಾಗಿ ಅವರ ದುಃಖ ಮತ್ತು ನಿರಾಶೆ ಕಡಿಮೆಯಾಗುವುದು. ಯುಧಿಷ್ಠಿರ ಮತ್ತು ಇತರ ಪಾಂಡವರು ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡಿರುವಾಗಲೂ ಅವರಿಗೆ ಶ್ರೀಕೃಷ್ಣನ ಮೇಲೆ ದೃಢ ಶ್ರದ್ಧೆಯಿತ್ತು; ಆದ್ದರಿಂದಲೇ ಅವರು ಪಾರಾದರು. ಅದರಂತೆಯೇ ತೊಂದರೆಯಿರುವ ಸಾಧಕರೂ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮೇಲೆ ದೃಢ ಶ್ರದ್ಧೆಯನ್ನಿಟ್ಟರೆ ಅವರೂ ಖಂಡಿತವಾಗಿಯೂ ಪಾರಾಗುವರು !’ – (ಪೂ.) ಶ್ರೀ. ಸಂದೀಪ ಆಳಶಿ (೨೦.೩.೨೦೧೫)

೬ ಅ ೨. ಪ್ರಾರಬ್ಧ : ಕೆಲವು ಸಾಧಕರಿಗೆ ಹಿಂದಿನ ಅಥವಾ ಈ ಜನ್ಮದಲ್ಲಿನ ಪಾಪಕರ್ಮಗಳ ಫಲಗಳನ್ನು ತೊಂದರೆಗಳ ಸ್ವರೂಪದಲ್ಲಿ ಭೋಗಿಸಬೇಕಾಗುತ್ತದೆ. ಸಂತ ಏಕನಾಥ ಮಹಾರಾಜರ  ಉಕ್ತಿಗನುಸಾರ ನಮ್ಮ ಸಂಚಿತವನ್ನು ನಾವೇ ಹೊಗಳಿಕೊಳ್ಳಬೇಕು, ಅಂದರೆ ನಮ್ಮ ಪ್ರಾರಬ್ಧವನ್ನು ನಾವೇ ಭೋಗಿಸಬೇಕಾಗುತ್ತದೆ ! ಅವುಗಳನ್ನು ನಾವು ಎಷ್ಟು ಆನಂದದಿಂದ ಭೋಗಿಸುತ್ತೇವೆಯೋ, ಅಷ್ಟು ನಮಗೆ ತೊಂದರೆಗಳು ಸಹನೀಯವಾಗುತ್ತವೆ. ಇದಕ್ಕಾಗಿ ಸಾಧಕರು ದೇವರಿಗೆ ಪ್ರಾರ್ಥಿಸಬೇಕು, ನನ್ನ ‘ಹಿಂದಿನ ಪಾಪಕರ್ಮಗಳ ಫಲವೆಂದು ನಾನು ತೊಂದರೆಗಳನ್ನು ಅನುಭವಿಸುತ್ತಿದ್ದೇನೆ, ಆದರೆ ದೇವರೇ ಇನ್ನು ಮುಂದೆ ನನ್ನಿಂದ ಒಂದೂ ಪಾಪಕರ್ಮವಾಗದಂತೆ ನೋಡಿಕೋ.’

೬ ಆ. ತೊಂದರೆಗಳನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡುವುದು

೬ ಆ ೧. ‘ತೊಂದರೆಗಳನ್ನು ಭೋಗಿಸುವುದೂ ಸಾಧನೆಯಾಗಿದೆ’ ಎಂಬ ವಿಚಾರವನ್ನು ಮನಸ್ಸಿನಲ್ಲಿ ಬಿಂಬಿಸುವುದು : ಈಶ್ವರಪ್ರಾಪ್ತಿಗಾಗಿ ಸಾಧನೆ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಕಾರ್ಯವನ್ನು ಮಾಡುವಾಗ ಸಾಧಕರಿಂದಾಗುವ ಮನಸ್ಸಿನ ತ್ಯಾಗವು ಎಷ್ಟು ಮಹತ್ವದ್ದಾಗಿದೆಯೋ, ಅಷ್ಟೇ ಸದ್ಯದ ಸೂಕ್ಷ್ಮದಲ್ಲಿನ ಆಪತ್ಕಾಲದಲ್ಲಿ ಕೆಟ್ಟ ಶಕ್ತಿಗಳ ತೊಂದರೆಗಳನ್ನು ಧೀರೋದಾತ್ತವಾಗಿ ಅನುಭವಿಸುವಾಗ ಸಾಧಕರಿಂದಾಗುವ ಮನಸ್ಸಿನ ತ್ಯಾಗವೂ ಮಹತ್ವದ್ದಾಗಿದೆ. ಇಂತಹ ತೊಂದರೆಗಳನ್ನು ಭೋಗಿಸುವ ಸಾಧಕರ ಈ ತ್ಯಾಗದ ಫಲವನ್ನು ದೇವರು ಅವರಿಗೆ ಕೊಡುತ್ತಲೇ ಇದ್ದಾನೆ, ಆದರೆ ಸದ್ಯ ತೊಂದರೆಗಳೊಂದಿಗೆ ಹೋರಾಡಲು ಅವರ ಸಾಧನೆ ವ್ಯಯವಾಗುವುದರಿಂದ ಆ ಫಲವು ನಮಗೆ ಪ್ರತ್ಯಕ್ಷ ಕಾಣಿಸುವುದಿಲ್ಲ. ಮುಂದೆ ತೊಂದರೆಗಳನ್ನು ಭೋಗಿಸಿ ಮುಗಿಸಿದಾಗ ಇಂತಹ ಸಾಧಕರ ಪ್ರಗತಿಯು ಅವರ ಸಾಧನೆಯ ಪ್ರಮಾಣಕ್ಕನುಸಾರ ಬೇಗನೇ ಆಗಲಿದೆ. ಇದಕ್ಕಾಗಿ  ಶ್ರೀ ಸಾಯಿಬಾಬಾರವರ ವಚನವನ್ನು ಆಗಾಗ ಸ್ಮರಿಸಬೇಕು – ‘ಶ್ರದ್ಧಾ ಔರ ಸಬುರಿ |’ (ಶ್ರದ್ಧೆ ಮತ್ತು ತಾಳ್ಮೆ)

೬ ಆ ೨. ‘ತೊಂದರೆಗಳನ್ನು ಭೋಗಿಸುವುದು ಸಾಧನೆಯ ಪರೀಕ್ಷೆಯಾಗಿದೆ’ ಎಂದು ತಿಳಿಯುವುದು : ಸಾಧನಾಮಾರ್ಗದಲ್ಲಿ ಸಾಗುವಾಗ ಈಶ್ವರನು ಸಾಧಕರ ಪರೀಕ್ಷೆಯನ್ನು ಮಾಡುತ್ತಿರುತ್ತಾನೆ. ಹಿರಣ್ಯಕಶ್ಯಪುವು ಭಕ್ತ ಪ್ರಹ್ಲಾದನಿಗೆ ಅಪಾರ ಚಿತ್ರಹಿಂಸೆ ನೀಡಿದರೂ ಪ್ರಹ್ಲಾದನು ಎಂದಿಗೂ ಎದೆಗುಂದಲಿಲ್ಲ. ಭಕ್ತಿಯ ಬಲದಲ್ಲಿ ಅವನು ಪ್ರತಿಯೊಂದು ಸಂಕಟದಿಂದ ಪಾರಾದನು. ದೇವರು ಅವನ ಪರೀಕ್ಷೆಯನ್ನೇ ತೆಗೆದುಕೊಂಡಂತಾಗಿತ್ತು ! ಎಲ್ಲ ಪರಿಸ್ಥಿತಿ ಅನುಕೂಲವಾಗಿರುವಾಗ ಸಾಧನೆಯನ್ನು ಯಾರು ಬೇಕಾದರೂ ಮಾಡಬಲ್ಲರು, ಆದರೆ ‘ಪ್ರತಿಕೂಲ ಪರಿಸ್ಥಿತಿಯಿರುವಾಗ ಸಾಧನೆ ಮಾಡುವುದು’ ನಿಜವಾದ ಸಾಧನೆಯಾಗಿದೆ. ಸದ್ಯ ಆಗುತ್ತಿರುವ ತೊಂದರೆಗಳ ಬಗ್ಗೆ ಸಾಧಕರು ‘ದೇವರು ಇದರಲ್ಲೂ ನಮ್ಮ ಪರೀಕ್ಷೆಯನ್ನೇ ತೆಗೆದುಕೊಳ್ಳುತ್ತಿದ್ದಾನೆ; ಏಕೆಂದರೆ ದೇವರಿಗೆ ನಮ್ಮನ್ನು ಎಲ್ಲ ಸುಖದುಃಖಗಳ ಆಚೆಗೆ ಕರೆದೊಯ್ಯಬೇಕಾಗಿದೆ’ ಎಂಬ ದೃಷ್ಟಿಕೋನವನ್ನಿಟ್ಟುಕೊಂಡರೆ ಅವರಿಗೆ ತೊಂದರೆಗಳ ಕಡೆಗೆ ಸಕಾರಾತ್ಮಕತೆಯಿಂದ ನೋಡಲು ಸಾಧ್ಯವಾಗುವುದು.

೬ ಆ ೩. ತೊಂದರೆಗಳಿಂದ ಸಂಘರ್ಷದ ಬಲ ಮೈಗೂಡುವುದು :

‘ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಈಗ ಮನಸ್ಸಿನ ಯಾವ ಸಂಘರ್ಷವನ್ನು ಮಾಡಬೇಕಾಗಿದೆಯೋ, ಅದನ್ನು ಮಾಡಲು ಕಲಿತರೆ ಮುಂದೆ ಜೀವನದಲ್ಲಿ ಬರುವ ಯಾವುದೇ ಸಂಘರ್ಷದಲ್ಲಿ ಸಾಧಕರು ಜಯಗಳಿಸಬಲ್ಲರು’ ಎಂಬ ಖಾತರಿಯನ್ನಿಟ್ಟುಕೊಳ್ಳಬೇಕು. ಶರಣಾಗತಿಯಿಂದ ಪರಾತ್ಪರ ಗುರು ಡಾಕ್ಟರರಲ್ಲಿ ಮೊರೆಯಿಟ್ಟರೆ ಈ ಸಂಘರ್ಷದ ಬಲವೂ ಸಾಧಕರಲ್ಲಿ ಬರುವುದು.

೬ ಆ ೪. ‘ಸಾಧನೆಯನ್ನು ಮಾಡುವುದು’ ಹೇಗೆ ಕರ್ತವ್ಯವಾಗಿದೆಯೋ, ಹಾಗೆಯೇ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತೊಂದರೆಗಳನ್ನು ಭೋಗಿಸುವುದು’ ಕೂಡ ನಮ್ಮ ಕರ್ತವ್ಯವೇ ಆಗಿದೆ !

ಸದ್ಯ ಸನಾತನದ ಅನೇಕ ಸಾಧಕರು ಸೂಕ್ಷ್ಮದಲ್ಲಿನ ಸಮಷ್ಟಿ ಆಧ್ಯಾತ್ಮಿಕ ತೊಂದರೆಗಳನ್ನು ಭೋಗಿಸುತ್ತಿದ್ದಾರೆ. ಇದು ಸರ್ವಾಂಗ ಸುಂದರ ಮತ್ತು ಆದರ್ಶ ಹಿಂದೂ ರಾಷ್ಟ್ರದ ಸ್ಥಾಪನೆಯ ಹೋರಾಟದ ಒಂದು ಭಾಗವೇ ಆಗಿದೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ವೀರ ಸಾವರಕರರು ಮತ್ತು ಅನೇಕ ದೇಶಭಕ್ತರು ಎತ್ತಿನಂತೆ ಎಣ್ಣೆಯ ಗಾಣವನ್ನು ತಿರುಗಿಸುವುದು, ಸಿಪ್ಪೆಗಳನ್ನು ಕುಟ್ಟುವುದು, ಎರಡೂ ಕೈಗಳನ್ನು ಮೇಲೆತ್ತಿ ಬೇಡಿ ಹಾಕಿ ಗಂಟೆಗಟ್ಟಲೆ ನೇತಾಡುವ ಸ್ಥಿತಿಯಲ್ಲಿ ನಿಂತುಕೊಳ್ಳುವುದು ಇವುಗಳಂತಹ ಚಿತ್ರಹಿಂಸೆ ಅನುಭವಿಸಿದರು. ಅದರ ಕಲ್ಪನೆಯನ್ನು ಸಹ ನಾವು ಮಾಡಲಾರೆವು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಇಷ್ಟು ಅನುಭವಿಸಿರುವಾಗ, ನಾವು ಧರ್ಮಕ್ಕಾಗಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅವರ ತುಲನೆಯಲ್ಲಿ ತೀರಾ ನಗಣ್ಯವಾಗಿರುವ ಚಿತ್ರಹಿಂಸೆಯನ್ನು ‘ಸಾಧನೆ’ಯೆಂದು ಏಕೆ ಅನುಭವಿಸಬಾರದು ?

೬ ಆ ೫. ತೊಂದರೆಗಳೆದರು ಸೋಲೊಪ್ಪದೇ ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ಯೇಯವನ್ನು ಸತತವಾಗಿ ಕಣ್ಣೆದುರು ಇಟ್ಟುಕೊಳ್ಳುವುದು :

‘೨೦೧೫ ರಲ್ಲಿ ಒಂದು ಸಲ ವಿವಿಧ ತೊಂದರೆಗಳಿಂದ ನಾನು ಅತ್ಯಂತ ಹತಾಶನಾದಾಗ ೨-೩ ಸಲ ನನ್ನ ಮನಸ್ಸಿನಲ್ಲಿ ‘ಈ ಶರೀರವನ್ನು ತ್ಯಜಿಸಿದರೆ ಒಳ್ಳೆಯದಿತ್ತು, ಏಕೆಂದರೆ ಸೂಕ್ಷ್ಮದಿಂದ ಸಾಧನೆಯನ್ನು ಮಾಡಬಹುದು’ ಎಂಬ ವಿಚಾರ ಬಂದು ಹೋಯಿತು. ಒಂದು ಸಲ ನಾನು ಪರಾತ್ಪರ ಗುರು ಡಾಕ್ಟರರ ಬಳಿ ಹೋದಾಗ ಅವರು ಆಕಸ್ಮಿಕವಾಗಿ ನನಗೆ ”ಸದ್ಯ ನನಗೆ ಬಹಳಷ್ಟು ಶಾರೀರಿಕ ತೊಂದರೆಗಳನ್ನು ಭೋಗಿಸಬೇಕಾಗುತ್ತಿದೆ. ನಿಜ ನೋಡಿದರೆ ನಾನು ಯಾವಾಗಲೋ ಮೇಲೆ ಹೋಗಬಹುದಾಗಿತ್ತು; ಆದರೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಇನ್ನೂ ಬಾಕಿ ಇದೆ, ಆದ್ದರಿಂದ ನಾನು ನಿಂತಿದ್ದೇನೆ’’ ಎಂದು ಹೇಳಿದರು. ‘ಕೇವಲ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪರಾತ್ಪರ ಗುರು ಡಾಕ್ಟರರು ಸಮಷ್ಟಿ ಆಧ್ಯಾತ್ಮಿಕ ತೊಂದರೆಗಳ ವ್ಯಥೆಯನ್ನು ಸಹಿಸುತ್ತಿದ್ದಾರೆ ಮತ್ತು ಅದರ ತುಲನೆಯಲ್ಲಿ ನನ್ನ ತೊಂದರೆಗಳು ಏನೂ ಅಲ್ಲ’ ಎಂಬ ವಿಚಾರದಿಂದ ನನಗೆ ನನ್ನ ತಪ್ಪು ವಿಚಾರಗಳ ಅರಿವಾಯಿತು. ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಅಂತಹ ತಪ್ಪು ವಿಚಾರ ಪುನಃ ನನ್ನ ಮನಸ್ಸಿನಲ್ಲಿ ಎಂದಿಗೂ ಬರಲಿಲ್ಲ.’

೬ ಆ ೬. ಹಿಂದೂ ರಾಷ್ಟ್ರದ ಸ್ಥಾಪನೆಯ ಉಜ್ವಲ ಭವಿಷ್ಯ ಎದುರಿಗೆ ಕಾಣಿಸುತ್ತಿರುವಾಗ ತೊಂದರೆಗಳ ದುಃಖವನ್ನೇಕೆ ಇಟ್ಟುಕೊಳ್ಳಬೇಕು ? : ‘ಹಿಂದೂ ರಾಷ್ಟ್ರ’ದ ಸ್ಥಾಪನೆಯಾಗುವುದು, ಅನಂತರ ಸಾಧಕರ ಆಧ್ಯಾತ್ಮಿಕ ತೊಂದರೆಯು ಶೀಘ್ರವಾಗಿ ಕಡಿಮೆಯಾಗುವುದು ಮತ್ತು ಸಾಧಕರ ಆಧ್ಯಾತ್ಮಿಕ ಪ್ರಗತಿಯೂ ಬೇಗನೇ ಆಗುವುದು’ ಎಂದು ಪರಾತ್ಪರ ಗುರು ಡಾಕ್ಟರರು ಭರವಸೆ ನೀಡಿದ್ದಾರೆ ! ಆದುದರಿಂದ ತೊಂದರೆಗಳಿರುವ ಸಾಧಕರು ಸದ್ಯದ ತೊಂದರೆಗಳ ನೀರಸ ದಿನಗಳನ್ನು ಬೇಸರಿಸದೇ ಆನಂದದಿಂದ ಭೋಗಿಸಬೇಕು.’ (ಮುಂದುವರಿಯುವುದು)

– (ಪೂ.) ಶ್ರೀ. ಸಂದೀಪ ಆಳಶಿ (೧೯.೯.೨೦೧೭)