ಹಿಂದೂ ರಾಷ್ಟ್ರ-ಸ್ಥಾಪನೆಯ ಕಾಲ ಸಮೀಪಿಸುತ್ತಿರುವುದರಿಂದ ಕೆಟ್ಟ ಶಕ್ತಿಗಳ ಪ್ರಾಬಲ್ಯ ಹೆಚ್ಚಾಗಿದೆ. ಇಂದು ಸರಿಸುಮಾರು ಪ್ರತಿಯೊಬ್ಬನಿಗೂ ಹೆಚ್ಚುಕಡಿಮೆ ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಇದ್ದೇ ಇರುತ್ತದೆ. ಕೆಲವು ಜನರ ರೋಗಗಳು ಬಹಳಷ್ಟು ಔಷಧೋಪಚಾರಗಳನ್ನು ಮಾಡಿಯೂ ಗುಣವಾಗುವುದಿಲ್ಲ. ಕೆಲವು ಜನರು ಸಾಂಸಾರಿಕ ಅಡಚಣೆಗಳಿಂದ ಅತಿಯಾಗಿ ಕಷ್ಟಕ್ಕೊಳಗಾಗುತ್ತಾರೆ. ಕೆಲವರಿಗೆ ಆಗಾಗ ಕಾರಣವಿಲ್ಲದೇ ನಕಾರಾತ್ಮಕತೆ ಅಥವಾ ನಿರಾಶೆ ಬರುತ್ತದೆ ಮತ್ತು ಅತಿಯಾದ ನಿರಾಶೆಯಿಂದಾಗಿ ಕೆಲವರ ಮನಸ್ಸಿನಲ್ಲಿ ಕೊನೆಗೆ ‘ಇನ್ನು ಜೀವಂತವಿರುವುದು ಸಾಕು’ ಎಂಬ ವಿಚಾರಗಳೂ ಬರುತ್ತವೆ. ಬಹಳಷ್ಟು ಸಾಧಕರು ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ನಾಮಜಪ ಇತ್ಯಾದಿ ‘ಆಧ್ಯಾತ್ಮಿಕ ಉಪಾಯ’ಗಳನ್ನು ಮಾಡುತ್ತಾರೆ; ಆದರೆ ಕೆಟ್ಟ ಶಕ್ತಿಗಳು ‘ಸಾಧಕರಿಂದ ಆಧ್ಯಾತ್ಮಿಕ ಉಪಾಯ ಪರಿಣಾಮಕಾರಿಯಾಗಬಾರದು’ ಎಂಬುದಕ್ಕಾಗಿಯೂ ಪ್ರಯತ್ನಗಳನ್ನು ಮಾಡುತ್ತವೆ. ಇದರಿಂದ ಸಾಧಕರ ತೊಂದರೆಗಳು ಬೇಗನೇ ಕಡಿಮೆಯಾಗದಿರುವುದರಿಂದ ನಿಧಾನವಾಗಿ ಅವರಿಗೆ ಉಪಾಯಗಳ ಬಗ್ಗೆ ಸ್ವಾರಸ್ಯ ಉಳಿಯುವುದಿಲ್ಲ. ‘ಆಧ್ಯಾತ್ಮಿಕ ತೊಂದರೆಗಳಾಗುವುದು’ ನಮ್ಮ ಕೈಯಲ್ಲಿ ಇಲ್ಲದಿದ್ದರೂ, ‘ಆಧ್ಯಾತ್ಮಿಕ ಉಪಾಯಗಳಿಂದ ತೊಂದರೆಗಳನ್ನು ನಿಯಂತ್ರಣದಲ್ಲಿಡುವುದು ಮತ್ತು ನಿಧಾನವಾಗಿ ಅವುಗಳನ್ನು ನಾಶ ಮಾಡುವುದು’ ನಮ್ಮ ಕೈಯಲ್ಲಿದೆ. ಆದುದರಿಂದ ತೊಂದರೆಗಳ ಕಡೆಗೆ ನೋಡುವ ನಮ್ಮ ದೃಷ್ಟಿಯನ್ನು ಬದಲಾಯಿಸಬೇಕಾಗುತ್ತದೆ. ‘ಆಧ್ಯಾತ್ಮಿಕ ಉಪಾಯಗಳಿಂದ ನಾವು ಖಂಡಿತವಾಗಿಯೂ ತೊಂದರೆಗಳನ್ನು ದೂರಗೊಳಿಸಬಹುದು’ ಎಂಬ ವಿಶ್ವಾಸವನ್ನು ನಮ್ಮಲ್ಲಿ ನಿರ್ಮಾಣ ಮಾಡಬೇಕಾಗುತ್ತದೆ. ಪ್ರಸ್ತುತ ಲೇಖನಮಾಲೆಯಲ್ಲಿ ನೀಡಿದ ಹೆಚ್ಚಿನ ದೃಷ್ಟಿಕೋನಗಳು ಎಲ್ಲರಿಗೂ ಉಪಯುಕ್ತವಾಗಿವೆ. ‘ಅದರ ಅಧ್ಯಯನದಿಂದ ಆಧ್ಯಾತ್ಮಿಕ ತೊಂದರೆಗಳಿರುವವರಿಗೆ ತೊಂದರೆಗಳನ್ನು ದೂರಗೊಳಿಸಲು ಪ್ರೇರಣೆ ಮತ್ತು ದಿಶೆ ಸಿಗಲಿ ಹಾಗೂ ಅವರಿಂದ ಒಳ್ಳೆಯ ಸಾಧನೆಯಾಗಿ ಅವರ ಜೀವನವು ಆನಂದಮಯವಾಗಲಿ’ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !’ – ಸಂಕಲನಕಾರರು |
೧. ‘ಆಧ್ಯಾತ್ಮಿಕ ತೊಂದರೆ’ ಎಂದರೇನು ?
ಅಧ್ಯಾತ್ಮಕ್ಕನುಸಾರ ವ್ಯಕ್ತಿಯ ಪ್ರಕೃತಿಯು ಸತ್ತ್ವ, ರಜ ಮತ್ತು ತಮ ಎಂಬ ತ್ರಿಗುಣಗಳಿಂದ ತಯಾರಾಗಿರುತ್ತದೆ. ಸತ್ತ್ವಗುಣವು ಮನಸ್ಸಿಗೆ ಸ್ಥಿರತೆಯನ್ನು ಕೊಡುವ, ಆನಂದದಾಯಕ ಹಾಗೂ ಈಶ್ವರತತ್ತ್ವದೆಡೆಗೆ ವ್ಯಕ್ತಿಯ ಪ್ರಯಾಣವಾಗಲು ಪೂರಕವಾಗಿರುತ್ತದೆ. ರಜ ಮತ್ತು ತಮ ಗುಣಗಳು ಸತ್ತ್ವಗುಣದ ವಿರುದ್ಧವಾಗಿರುತ್ತವೆ. ವ್ಯಕ್ತಿಯಲ್ಲಿ ರಜ ಮತ್ತು ತಮ ಗುಣಗಳ ಹೆಚ್ಚಳವಾದರೆ, ಅದರಿಂದ ವ್ಯಕ್ತಿಯ ಮೇಲೆ ಅನಿಷ್ಟ ಪರಿಣಾಮವಾಗುತ್ತದೆ. ಇದಕ್ಕೇ ‘ವ್ಯಕ್ತಿಗೆ ಆಧ್ಯಾತ್ಮಿಕ ತೊಂದರೆಯಿದೆ’ ಎನ್ನುತ್ತಾರೆ. ಮುಖ್ಯವಾಗಿ ಭುವರ್ಲೋಕ ಮತ್ತು ಸಪ್ತಪಾತಾಳಗಳಲ್ಲಿ ವಾಸಿಸುವ ಕೆಟ್ಟ ಶಕ್ತಿಗಳು, ಭುವರ್ಲೋಕದಲ್ಲಿರುವ ಪೂರ್ವಜರ ಅತೃಪ್ತ ಲಿಂಗದೇಹಗಳು (ತ್ರಾಸದಾಯಕ ಸೂಕ್ಷ್ಮದೇಹಗಳೆಂದರೆ ಲಿಂಗದೇಹಗಳು) ಮತ್ತು ಗ್ರಹಗಳ ಅಶುಭ ಯೋಗಗಳಿಂದ ವ್ಯಕ್ತಿಗೆ ಆಧ್ಯಾತ್ಮಿಕ ತೊಂದರೆಗಳಾಗುತ್ತವೆ.
ಸದ್ಯದ ಕಲಿಯುಗದಲ್ಲಿ ಮನುಷ್ಯನ ಜೀವನದಲ್ಲಿನ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ ಇವುಗಳಂತಹ ಶೇ. ೮೦ ರಷ್ಟು ಸಮಸ್ಯೆಗಳ ಮೂಲದಲ್ಲಿ ಏನಾದರೊಂದು ಆಧ್ಯಾತ್ಮಿಕ ಕಾರಣ (ಉದಾ. ಕೆಟ್ಟ ಶಕ್ತಿಗಳ ತೊಂದರೆ, ಅತೃಪ್ತ ಪೂರ್ವಜರ ತೊಂದರೆ, ಪ್ರಾರಬ್ಧ) ಇದ್ದೇ ಇರುತ್ತದೆ. ಸದ್ಯದ ಕಾಲದಲ್ಲಂತೂ ಕೆಟ್ಟ ಶಕ್ತಿಗಳ ಪ್ರಕೋಪವೇ ಹೆಚ್ಚಾಗಿದೆ. ಇದರಿಂದ ಹೆಚ್ಚುಕಮ್ಮಿ ಪ್ರತಿಯೊಬ್ಬರಿಗೂ ಹೆಚ್ಚುಕಡಿಮೆ ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಇದ್ದೇ ಇದೆ ಅಥವಾ ಇಂದು ಇರದಿದ್ದರೂ ಮುಂದೆ ಆಗುವ ಸಾಧ್ಯತೆ ಇದೆ.
೨. ಸದ್ಯದ ಕಾಲದಲ್ಲಿ ಸಾಧಕರಿಗೆ ಕೆಟ್ಟ ಶಕ್ತಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯಾಗುವ ಕಾರಣಗಳು
ಸದ್ಯದ ಕಲಿಯುಗದಲ್ಲಿ ಅಧರ್ಮಿ ಕೆಟ್ಟ ಶಕ್ತಿಗಳು ಭೂತಲದಲ್ಲಿ ‘ಆಸುರೀ ರಾಜ್ಯ’ವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ ಮತ್ತು ಸನಾತನದ ಸಾಧಕರು ಸಮಷ್ಟಿ ಸಾಧನೆಯ ಮೂಲಕ, ಅಂದರೆ ಸಮಾಜದಲ್ಲಿ ಹೆಚ್ಚೆಚ್ಚು ಧರ್ಮದ ಪ್ರಸಾರ ಮಾಡಿ ಎಲ್ಲರಿಗೂ ಕಲ್ಯಾಣಕಾರಿಯಾದ ‘ಹಿಂದೂ ರಾಷ್ಟ್ರ (ಕಲಿಯುಗಾಂತರ್ಗತ ಸತ್ಯಯುಗ, ಅಂದರೆ ಈಶ್ವರೀ ರಾಜ್ಯ)’ವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಸಾಧಕರು ತಮ್ಮ ಈ ಧ್ಯೇಯದಿಂದ ವಿಮುಖರಾಗಬೇಕೆಂದು ಕೆಟ್ಟ ಶಕ್ತಿಗಳು ಸಾಧಕರಿಗೆ ಶಾರೀರಿಕ, ಮಾನಸಿಕ, ಕೌಟುಂಬಿಕದಂತಹ ವಿವಿಧ ಸ್ತರಗಳಲ್ಲಿ ತೊಂದರೆಗಳನ್ನು ಕೊಡುತ್ತಿವೆ, ಹಾಗೆಯೇ ಅವರ ಧರ್ಮಪ್ರಸಾರದ ಸೇವೆಯಲ್ಲೂ ಅಡಚಣೆಗಳನ್ನು ತರುತ್ತಿವೆ. ಈ ದೃಷ್ಟಿಯಿಂದ ಸಾಧಕರಿಗೆ ಇದು ಸೂಕ್ಷ್ಮದಲ್ಲಿನ ಆಪತ್ಕಾಲವೇ ಆಗಿದೆ. ಸೂಕ್ಷ್ಮದಿಂದ ಕೆಟ್ಟ ಶಕ್ತಿಗಳನ್ನು ಸೋಲಿಸದೇ ಸ್ಥೂಲದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ಸಾಧ್ಯವೇ ಇಲ್ಲ. ಇದಕ್ಕಾಗಿ ಸನಾತನದ ಸಾಧಕರು ಗುರುಕೃಪೆಯ ಬಲದಲ್ಲಿ, ಸಂತರು ಹಾಗೂ ದೇವತೆಗಳ ಆಶೀರ್ವಾದದಿಂದ ಮತ್ತು ನಾಮಜಪ ಇತ್ಯಾದಿ ಸಾಧನೆಗಳಿಂದ ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮದಲ್ಲಿ ಹೋರಾಡುತ್ತಿದ್ದಾರೆ.
೩. ಆಧ್ಯಾತ್ಮಿಕ ತೊಂದರೆಗಳ ಕೆಲವು ಲಕ್ಷಣಗಳು
ಆಧ್ಯಾತ್ಮಿಕ ತೊಂದರೆಗಳು ಸೂಕ್ಷ್ಮದಿಂದಾಗುತ್ತವೆ, ‘ಆಧ್ಯಾತ್ಮಿಕ ತೊಂದರೆಯಿದೆಯೇ ಇಲ್ಲವೇ’ ಎಂದು ಗುರುತಿಸುವ ಲಕ್ಷಣಗಳೂ ಇರುತ್ತವೆ. ಇಂತಹ ಕೆಲವು ಲಕ್ಷಣಗಳನ್ನು ಮುಂದೆ ಕೊಡಲಾಗಿದೆ.
೩ ಅ. ಶಾರೀರಿಕ ಲಕ್ಷಣಗಳು : ಯಾವುದೇ ಕಾರಣವಿಲ್ಲದೇ ‘ಆಯಾಸವಾಗುವುದು, ತಲೆ ಭಾರವಾಗುವುದು, ತಲೆ ತಿರುಗುವುದು, ಹಸಿವಾಗದಿರುವುದು’, ಹಾಗೆಯೇ ಯೋಗ್ಯ ಔಷಧೋಪಚಾರಗಳನ್ನು ಮತ್ತು ಪಥ್ಯವನ್ನು ಅನೇಕ ತಿಂಗಳು ಅಥವಾ ವರ್ಷಗಳ ಕಾಲ ಮಾಡಿಯೂ ರೋಗಗಳು ಗುಣವಾಗದಿರುವುದು ಇತ್ಯಾದಿ.
೩ ಆ. ಮಾನಸಿಕ ಲಕ್ಷಣಗಳು : ಯಾವುದೇ ಕಾರಣವಿಲ್ಲದೇ ‘ಕಿರಿಕಿರಿಯಾಗುವುದು, ನಕಾರಾತ್ಮಕತೆ ಅಥವಾ ನಿರಾಶೆ ಬರುವುದು, ನಿರುತ್ಸಾಹವೆನಿಸುವುದು, ಹಾಗೆಯೇ ಸಾಧನೆಯಲ್ಲಿನ ಮಾರ್ಗದರ್ಶಕರು, ದೇವತೆಗಳು ಅಥವಾ ಸಾಧನೆಯ ಬಗ್ಗೆ ವಿಕಲ್ಪಗಳು ನಿರ್ಮಾಣವಾಗುವುದು’ ಇತ್ಯಾದಿ.
೩ ಇ. ಬೌದ್ಧಿಕ ಲಕ್ಷಣಗಳು : ವಿನಾಕಾರಣ ಗೊಂದಲವಾಗುವುದು, ಎದುರಿನ ವ್ಯಕ್ತಿ ಮಾತು ಅರ್ಥವಾಗದಿರುವುದು ಇತ್ಯಾದಿ.
೩ ಈ. ಕೌಟುಂಬಿಕ ಲಕ್ಷಣಗಳು : ಸತತವಾಗಿ ಸಣ್ಣಪುಟ್ಟ ಪ್ರಸಂಗಗಳಲ್ಲೂ ಕುಟುಂಬದವರಲ್ಲಿ ಭಿನ್ನಾಭಿಪ್ರಾಯ ಅಥವಾ ತಪ್ಪು ತಿಳುವಳಿಕೆಯಾಗಿ ಪರಸ್ಪರ ಅಂತರ, ಸಂಶಯ ಅಥವಾ ವೈರತ್ವ ನಿರ್ಮಾಣವಾಗುವುದು; ಕುಟುಂಬದ ಕೆಲವು ಸದಸ್ಯರಿಗೆ ವ್ಯಸನ ತಗಲುವುದು; ಕುಟುಂಬದಲ್ಲಿ ಸತತವಾಗಿ ಒಬ್ಬರಲ್ಲ ಒಬ್ಬರು ರೋಗಗ್ರಸ್ತರಾಗಿರುವುದು ಇತ್ಯಾದಿ.
೩ ಉ. ಇತರ ಲಕ್ಷಣಗಳು : ಪದೇ ಪದೇ ಕೆಟ್ಟ ಕನಸುಗಳು ಬೀಳುವುದು, ಯಾವುದಾದರೊಂದು ಸ್ತೋತ್ರವನ್ನು ಪಠಿಸುವಾಗ ಕಾರಣಗಳಿಲ್ಲದೇ ಆಕಳಿಕೆಗಳು ಬರುವುದು, ನಾಮಜಪ ಆಗದಿರುವುದು, ಒಮ್ಮೆಲೇ ಸಾಧನೆಯನ್ನು ಬಿಡಬೇಕೆಂದು ಅನಿಸುವುದು ಇತ್ಯಾದಿ.
ಮೇಲಿನವುಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ತೊಂದರೆಗಳಾಗುತ್ತಿದ್ದಲ್ಲಿ ‘ನಮಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ’ ಎಂದು ತಿಳಿದುಕೊಳ್ಳಬೇಕು. ‘ನಮಗೆ ಕೆಟ್ಟ ಶಕ್ತಿಗಳಿಂದ ಯಾವುದಾದರೊಂದು ತೊಂದರೆ ಆಗುತ್ತಿದೆಯೇ ?’ ಎಂಬುದು ತಿಳಿಯದಿದ್ದರೆ ಒಳ್ಳೆಯ ಸಾಧನೆಯಿರುವ ಮತ್ತು ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿಯಬಲ್ಲ ಸಾಧಕರಿಗೆ ಅಥವಾ ಸಂತರಿಗೆ ಇದರ ಬಗ್ಗೆ ಕೇಳಬಹುದು.
೪. ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸುವುದರ ಆವಶ್ಯಕತೆ
ಆಧ್ಯಾತ್ಮಿಕ ತೊಂದರೆಗಳಿಂದ ವ್ಯಕ್ತಿಯ ಜೀವನವು ದುಃಖಮಯವಾಗುತ್ತದೆ. ಆಧ್ಯಾತ್ಮಿಕ ತೊಂದರೆಗಳಿಂದಾಗಿ ವ್ಯಕ್ತಿಯಿಂದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ನಾಮಜಪ ಮತ್ತು ಇತರ ಸಾಧನೆಯೂ ಸರಿಯಾಗಿ ಆಗುವುದಿಲ್ಲ. ಹೆಚ್ಚಾಗಿ ವ್ಯಕ್ತಿಯು ಮಾಡುತ್ತಿರುವ ಸಾಧನೆಯ ಶಕ್ತಿಯು ತೊಂದರೆಗಳೊಂದಿಗೆ ಹೋರಾಡಲು ವ್ಯಯವಾಗುತ್ತದೆ. ಸಾಧನೆಯು ವ್ಯಯವಾಗುವುದರಿಂದ ಇಂತಹ ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿ ಬೇಗನೇ ಆಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ಆಧ್ಯಾತ್ಮಿಕ ತೊಂದರೆ ದೂರವಾದ ನಂತರ ವ್ಯಕ್ತಿಯ ಜೀವನ ಆನಂದಮಯವಾಗುತ್ತದೆ, ಹಾಗೆಯೇ ಅವನ ಸಾಧನೆಯೂ ಚೆನ್ನಾಗಿ ಆಗುತ್ತದೆ. ಆದುದರಿಂದ ಎಲ್ಲರೂ ಪ್ರಾಮುಖ್ಯತೆಯಿಂದ ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ನಾಮಜಪ ಇತ್ಯಾದಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು ಅತ್ಯಾವಶ್ಯಕವಾಗಿದೆ.
೫. ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸುವ ಪ್ರಭಾವಿ ಅಸ್ತ್ರ : ಆಧ್ಯಾತ್ಮಿಕ ಉಪಾಯಗಳು !
ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಯೋಜಿಸುವ ಉಪಾಯಗಳಿಗೆ ‘ಆಧ್ಯಾತ್ಮಿಕ ಉಪಾಯ’ಗಳು ಎನ್ನುತ್ತಾರೆ. ಆಧ್ಯಾತ್ಮಿಕ ಉಪಾಯಗಳಲ್ಲಿ ನಾಮಜಪ ಮಾಡುವುದು, ಮಂತ್ರಪಠಣ ಮಾಡುವುದು, ಖಾಲಿ ಪೆಟ್ಟಿಗೆಗಳ ಉಪಾಯ ಮಾಡುವುದು ಇತ್ಯಾದಿ ವಿವಿಧ ವಿಧಗಳಿವೆ. (ಮುಂದುವರಿಯುವುದು)
(ಓದಿ : ಸನಾತನದ ಕಿರುಗ್ರಂಥ ‘ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ’) ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು – SanatanShop.com
ಸಂಪರ್ಕ : ೯೩೪೨೫೯೯೨೯೯