ದೇವಿಗೆ ಆರತಿಯನ್ನು ಬೆಳಗುವಾಗಿನ ಕೃತಿಯಲ್ಲಿನ ಯೋಗ್ಯ ಪದ್ಧತಿ
೧. ಆರತಿ ಹಾಡುವ ಯೋಗ್ಯ ಪದ್ಧತಿ
ದೇವಿತತ್ತ್ವ, ಅಂದರೆ ಶಕ್ತಿತತ್ತ್ವವು ತಾರಕ-ಮಾರಕ ಶಕ್ತಿಗಳ ಸಂಯೋಗವಾಗಿದೆ. ಆದುದರಿಂದ ದೇವಿಯ ಆರತಿಯಲ್ಲಿನ ಶಬ್ದಗಳನ್ನು ಕಡಿಮೆ ಆಘಾತ ಮಾಡುವ, ಮಧ್ಯಮ ವೇಗದಲ್ಲಿ, ಆರ್ತತೆಯಿಂದ ಹಾಗೂ ಉತ್ಕಟ ಭಾವದಿಂದ ಹಾಡಬೇಕು.
೨. ಆರತಿಯ ಸಮಯದಲ್ಲಿ ಬಾರಿಸಬೇಕಾದ ವಾದ್ಯ
ದೇವಿಯ ತತ್ತ್ವವು ಶಕ್ತಿತತ್ತ್ವದ ಪ್ರತೀಕವಾಗಿರುವುದರಿಂದ ಆರತಿಯ ಸಮಯದಲ್ಲಿ ಶಕ್ತಿಯುಕ್ತ ಲಹರಿಗಳನ್ನು ನಿರ್ಮಿಸುವ ಚರ್ಮದ ವಾದ್ಯಗಳನ್ನು ನಿಧಾನವಾಗಿ ಬಾರಿಸಬೇಕು.
೩. ದೇವಿಗೆ ಏಕಾರತಿಯಿಂದ ಬೆಳಗಬೇಕೋ ಅಥವಾ ಪಂಚಾರತಿಯಿಂದ ಬೆಳಗಬೇಕೋ ?
ಇದು ದೇವಿಗೆ ಆರತಿ ಮಾಡುವವರ ಭಾವ ಹಾಗೂ ಅವರ ಆಧ್ಯಾತ್ಮಿಕ ಮಟ್ಟದ ಮೇಲೆ ಅವಲಂಬಿಸಿರುತ್ತದೆ.
ಅ. ಪಂಚಾರತಿಯಿಂದ ಬೆಳಗುವುದು : ಪಂಚಾರತಿಯು ಅನೇಕತೆಯ, ಅಂದರೆ ಚಂಚಲ ಮಾಯೆಯ ಪ್ರತೀಕವಾಗಿದೆ. ಆರತಿಯನ್ನು ಮಾಡುವವನು ಇತ್ತೀಚೆಗಷ್ಟೇ ಸಾಧನೆಯನ್ನು ಪ್ರಾರಂಭಿಸಿದ ಪ್ರಾಥಮಿಕ ಅವಸ್ಥೆಯ ಸಾಧಕನಾಗಿದ್ದರೆ (ಶೇ. ೫೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವವರು) ಅವನು ದೇವಿಗೆ ಪಂಚಾರತಿಯಿಂದ ಬೆಳಗಬೇಕು.
ಆ. ಏಕಾರತಿಯಿಂದ ಬೆಳಗುವುದು : ಏಕಾರತಿಯು ಏಕತೆಯ ಪ್ರತೀಕವಾಗಿದೆ. ಭಾವವಿರುವ ಮತ್ತು ಶೇ. ೫೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕರು ದೇವಿಗೆ ಏಕಾರತಿಯಿಂದ ಬೆಳಗಬೇಕು.
ಇ. ಆತ್ಮಜ್ಯೋತಿಯಿಂದ ಬೆಳಗುವುದು : ಶೇ. ೭೦ ಕ್ಕಿಂತ ಹೆಚ್ಚು ಮಟ್ಟವಿರುವ ಮತ್ತು ಅವ್ಯಕ್ತಭಾವದಲ್ಲಿರುವ ಉನ್ನತರು ತಮ್ಮ ಆತ್ಮಜ್ಯೋತಿಯಿಂದಲೇ ದೇವಿಗೆ ಆಂತರಿಕವಾಗಿ ಆರತಿ ಬೆಳಗುತ್ತಾರೆ. ಇದು ಆತ್ಮಜ್ಯೋತಿಯಿಂದ ಬೆಳಗುವ ಏಕತೆಯ ಸ್ಥಿರಭಾವದ ಪ್ರತೀಕವಾಗಿದೆ.
೪. ಆರತಿಯನ್ನು ಬೆಳಗುವ ಯೋಗ್ಯ ಪದ್ಧತಿ
ದೇವಿಗೆ ಆರತಿ ಬೆಳಗುವಾಗ ಅದನ್ನು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಪೂರ್ಣ ವರ್ತುಲಾಕಾರದಲ್ಲಿ ಬೆಳಗಬೇಕು.