ನಾವು 1971ರ ಘಟನೆಯನ್ನು ಇನ್ನೂ ಮರೆತಿಲ್ಲ, ಪಾಕಿಸ್ತಾನವು ಮೊದಲು ಬಾಂಗ್ಲಾದೇಶದ ಕ್ಷಮೆ ಕೇಳಲಿ ! – ಪಾಕಿಸ್ತಾನದ ಚಳಿ ಬಿಡಿಸಿದ ಬಾಂಗ್ಲಾದೇಶ;

1971ರ ಘಟನೆಯನ್ನು ನಾವು ಇನ್ನೂ ಮರೆತಿಲ್ಲ, ಪಾಕಿಸ್ತಾನವು ಬಾಂಗ್ಲಾದೇಶದ ಕ್ಷಮೆ ಕೋರಿದ ಬಳಿಕವೇ ಉತ್ತಮ ಸಂಬಂಧವನ್ನು ಸ್ಥಾಪಿಸಬಹುದು

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶಕ್ಕೆ ಪಾಕಿಸ್ತಾನದೊಂದಿಗೆ ನಿಜವಾಗಿಯೂ ಉತ್ತಮ ಸಂಬಂಧ ಬೇಕಾಗಿದೆ; ಆದರೆ 1971 ರಲ್ಲಿ ನಡೆದಿರುವುದನ್ನು ನಾವು ಇನ್ನೂ ಮರೆತಿಲ್ಲ. ಪಾಕಿಸ್ತಾನ ಸರಕಾರವು 1971ರಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸುವ ಧೈರ್ಯವನ್ನು ತೋರಿಸಿ, ಆ ಘಟನೆಯ ಬಗ್ಗೆ ಮಾತನಾಡಿದರೆ, ಆಗ ಉಭಯ ದೇಶಗಳ ನಡುವಿನ ಉತ್ತಮ ಬಾಂಧವ್ಯದ ಹಾದಿ ಸುಗಮವಾಗುವುದು. ವಿಶೇಷವಾಗಿ ಪಾಕಿಸ್ತಾನವು 1971 ರ ಮಧ್ಯದಲ್ಲಿ ಸಂಭವಿಸಿದ ಘಟನೆಗಳಿಗೆ ಕ್ಷಮೆಯಾಚಿಸುವ ಧೈರ್ಯ ತೋರಿಸಿದರೆ ಇದು ಸಾಧ್ಯವಾಗಬಹುದು ಎನ್ನುವ ಸ್ಪಷ್ಟ ನಿಲುವನ್ನು ಬಾಂಗ್ಲಾದೇಶದ ಮಧ್ಯಂತರ ಸರಕಾರದ ವಿದೇಶಾಂಗ ವ್ಯವಹಾರ ಸಲಹೆಗಾರ ಮಹಮ್ಮದ ಗೌಹೀದ ಹುಸೇನ ಮಂಡಿಸಿದರು.

ಹುಸೇನ ಮುಂದೆ ಮಾತನಾಡಿ, ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ ಯುನೂಸ ಅವರು ಸೆಪ್ಟೆಂಬರ್ 25 ರಂದು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ಸಭೆ ನಡೆಸಿದ್ದರು. ಅದೊಂದು ಸೌಜನ್ಯಯುತವಾದ ಸಭೆಯಾಗಿತ್ತು ಆದರೆ ಅದರರ್ಥ ಎಲ್ಲವನ್ನೂ (ಅಂದರೆ 1971ರ ಘಟನೆ) ನಾವು ಮರೆತಿದ್ದೇವೆ ಎಂದಲ್ಲ. ಸೌಜನ್ಯದ ಭೇಟಿಯ ಹೊರತಾಗಿ ಪಾಕಿಸ್ತಾನದೊಂದಿಗೆ ಚರ್ಚೆಗೆ ಕುಳಿತಾಗ ನಾವು ಕಠಿಣ ಅಂಶಗಳನ್ನು ಪ್ರಸ್ತುತಪಡಿಸುತ್ತೇವೆ. ಬಾಂಗ್ಲಾದೇಶವು 1971 ಅನ್ನು ಪಕ್ಕಕ್ಕಿಟ್ಟು, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ಆಸಕ್ತಿ ಹೊಂದಿದೆಯೆಂದು ನಮ್ಮ ಸರಕಾರವು ಯಾವುದೇ ರೀತಿಯಲ್ಲಿ ಸೂಚನೆ ನೀಡಿಲ್ಲ. 1971 ರಲ್ಲಿ ನಡೆದಿರುವುದು ಯಾವಾಗಲೂ ನಮ್ಮ ಹೃದಯದಲ್ಲಿ ಉಳಿಯಲಿದೆ.

1971ರಲ್ಲಿ ನಡೆದಿದ್ದೇನು?

ಬಾಂಗ್ಲಾದೇಶದ ಸ್ಥಾಪನೆಯ ಮೊದಲು ಅದು ಸಂಪೂರ್ಣ ಪಾಕಿಸ್ತಾನದ ಪೂರ್ವದ ಭಾಗವಾಗಿತ್ತು. ಪಾಕಿಸ್ತಾನಿಗಳ ಭಾಷೆ ಉರ್ದು, ಪಂಜಾಬಿ ಮುಂತಾದವು ಆಗಿದ್ದವು, ಆದರೆ ಪೂರ್ವ ಪಾಕಿಸ್ತಾನಿಗರದ್ದು ಬಂಗಾಲಿ ಭಾಷೆಯಾಗಿತ್ತು. ಆಗ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ ಮುಜಿಬುರ ರಹಮಾನ ಅವರ ಪಕ್ಷಕ್ಕೆ ಬಹುಮತ ಸಿಕ್ಕಿತ್ತು; ಆದರೆ ಅವರು ಬಂಗಾಲಿಯಾಗಿದ್ದರಿಂದ ಪಂಜಾಬಿ ಮುಸಲ್ಮಾನರು ಅವರನ್ನು ಪ್ರಧಾನಿ ಮಾಡಲು ವಿರೋಧಿಸಿದರು ಮತ್ತು ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆಯು ಬಂಗಾಲಿ ಮುಸಲ್ಮಾನರ ಮೇಲೆ ಹಾಗೆಯೇ ಅಲ್ಲಿನ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿತು. ಈ ಘಟನೆಯಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಲಕ್ಷಾಂತರ ಮಹಿಳೆಯರ ಮೇಲೆ ಬಲಾತ್ಕಾರ ಮಾಡಲಾಯಿತು. ಬಳಿಕ ಭಾರತವು ಮಧ್ಯಪ್ರವೇಶಿಸಿ ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿ, ಪೂರ್ವ ಪಾಕಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿತು ಮತ್ತು ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರವನ್ನು ಸ್ಥಾಪಿಸಿತು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಮಧ್ಯಂತರ ಸರಕಾರವು ಈ ನಿಲುವಿಗೆ ಬದ್ಧವಾಗಿರುವುದೋ ಅಥವಾ ಭಾರತದ್ವೇಷದಿಂದ ಪಾಕಿಸ್ಥಾನದೊಂದಿಗೆ ಸೇರಿ 1971 ರ ಘಟನೆಯನ್ನ ಮರೆತು ಸಾಮೀಪ್ಯ ಸಾಧಿಸುವುದೋ ಎಂಬುದು ಮುಂಬರುವ ಕಾಲವೇ ಹೇಳಬೇಕು.