ಹಿಂದೂ ರಾಷ್ಟ್ರ ದೂರ ಹೋಗಿಲ್ಲ, ಹಿಂದೂ ರಾಷ್ಟ್ರದ ನಿರ್ಮಾಣ ಪ್ರಾರಂಭವಾಗಿದೆ !

೨೪ ರಿಂದ ೩೦ ಜೂನ್‌ ೨೦೨೪ ಈ ಅವಧಿಯಲ್ಲಿ ಗೋವಾದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗಿತ್ತ್ತು. ಈ ಹಿನ್ನೆಲೆಯಲ್ಲಿ ದೈನಿಕ ‘ಸನಾತನ ಪ್ರಭಾತ’ದ ಪತ್ರಕರ್ತ ಶ್ರೀ. ಅರವಿಂದ ಪಾನಸರೆ ಇವರು ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರ ವಿಶೇಷ ಸಂದರ್ಶನವನ್ನು ತೆಗೆದುಕೊಂಡರು. ಅದನ್ನು ನಮ್ಮ ವಾಚಕರಿಗಾಗಿ ಇಲ್ಲಿ ಕೊಡುತ್ತಿದ್ದೇವೆ.

(ಭಾಗ – ೧)

ಶ್ರೀ.ರಮೇಶ ಶಿಂದೆ

ಪ್ರಶ್ನೆ : ಹಿಂದೂ ರಾಷ್ಟ್ರ ನಿರ್ದಿಷ್ಟವಾಗಿ ಯಾವಾಗ ಬರಲಿದೆ ?

ಉತ್ತರ : ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಯಾವಾಗ ಆಗುವುದು ? ಎನ್ನುವ ಪ್ರಶ್ನೆಯನ್ನು ಸತತವಾಗಿ ಕೇಳಲಾಗುತ್ತಿತ್ತು; ಆದರೆ

೨೨ ಜನವರಿ ೨೦೨೪ ರ ಐತಿಹಾಸಿಕ ದಿನದಂದು ಹೇಗೆ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ (ಶ್ರೀರಾಮರ ಬಾಲಕ ರೂಪ) ವಿರಾಜಮಾನರಾದರೋ, ಹಾಗೆಯೇ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿಕ್ಕಿದೆ. ‘ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರದ ಸ್ಥಾಪನೆಯೆಂದರೆ, ಹಿಂದೂ ರಾಷ್ಟ್ರದ ಆರಂಭ’, ಅಷ್ಟು ಮಾತ್ರವಲ್ಲ, ಶ್ರೀರಾಮರ ಪ್ರಾಣಪ್ರತಿಷ್ಠೆಯ ಸಮಾರಂಭದ ವಿಷಯದಲ್ಲಿ ಅನೇಕ ವಿದೇಶಿ ಹಾಗೂ ಅಂತಾರಾಷ್ಟ್ರೀಯ ವರ್ತಮಾನ ಪತ್ರಿಕೆಗಳೂ ‘ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹೆಜ್ಜೆ !’, ಎಂದು ಹೇಳಿದ್ದವು. ಯಾವಾಗ ಪೃಥ್ವಿಯ ಮೇಲೆ ಭಗವಾನ ಶ್ರೀರಾಮರು ಅವತಾರ ತಾಳುತ್ತಾರೋ, ಆಗ ನಿಜವಾಗಿಯೂ ರಾಮರಾಜ್ಯ, ಅಂದರೆ ಧರ್ಮ ರಾಜ್ಯ ಪ್ರಾರಂಭವಾಗುತ್ತದೆ, ಹಾಗೆಯೇ ಅಯೋಧ್ಯೆಯಲ್ಲಿ ೫೦೦ ವರ್ಷಗಳ ನಂತರ ಶ್ರೀರಾಮಲಲ್ಲಾ ವಿರಾಜಮಾನರಾದಾಗ ಒಂದು ರೀತಿಯಲ್ಲಿ ಹಿಂದೂ ರಾಷ್ಟ್ರ ಪ್ರಾರಂಭವಾಗಿದೆ, ಎಂದು ನಾವು ಭಾವಿಸುತ್ತೇವೆ. ಈಗ ಆ ಹಿಂದೂ ರಾಷ್ಟ್ರ ಪೂರ್ಣಸ್ವರೂಪದಲ್ಲಿ ಸಾಕಾರವಾಗಲು ಪ್ರಯತ್ನ ಮಾಡಬೇಕಾಗಿದೆ. ಅದಕ್ಕಾಗಿ ಹಿಂದೂಗಳು ಕೃತಿಶೀಲರಾಗುವ ಸಂಕಲ್ಪ ಮಾಡಿದ್ದಾರೆ.

ಪ್ರಶ್ನೆ : ಭಾಜಪಕ್ಕೆ ಪೂರ್ಣ ಬಹುಮತ ಸಿಗದ ಕಾರಣ ಹಿಂದೂ ರಾಷ್ಟ್ರದ ಬೇಡಿಕೆ ಹಾಗೂ ಇತರ ಬೇಡಿಕೆಗಳು ಪೂರ್ಣ ವಾಗಲು ಅಡ್ಡಿಯಾಗಿದೆಯೆಂದು ನಿಮಗೆ ಅನಿಸುತ್ತದೆಯೆ ? ಅಥವಾ ಹಿಂದೂ ರಾಷ್ಟ್ರ ದೂರವಾಗಿದೆ, ಎಂದೆನಿಸುತ್ತದೆಯೆ ?

ಉತ್ತರ : ‘ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಹಿಂದೂ ರಾಷ್ಟ್ರ ಬರುವುದು’, ಎನ್ನುವ ನಿಲುವು ಯಾವತ್ತೂ ನಮ್ಮಲ್ಲಿ ಇರಲಿಲ್ಲ ಅಥವಾ ‘ರಾಜಕೀಯ ಮಾರ್ಗದಲ್ಲಿ ಅಧಿಕಾರವನ್ನು ಸ್ಥಾಪಿಸಿ ಹಿಂದೂ ರಾಷ್ಟ್ರ ಬರುವುದು’, ಎಂದು ನಾವು ಯಾವತ್ತೂ ಹೇಳಿಲ್ಲ. ಹಿಂದೂ ರಾಷ್ಟ್ರವು ಹಿಂದೂ ರಾಷ್ಟ್ರಕ್ಕಾಗಿ ತನು, ಮನ, ಧನ ಅರ್ಪಣೆ ಮಾಡಿ ನಿರಪೇಕ್ಷೆಯಿಂದ ಕಾರ್ಯವನ್ನು ಮಾಡುವವರ ಸಂಘಟನೆಯಿಂದ ಸಾಕಾರವಾಗಲಿಕ್ಕಿದೆ. ಇಂದು ಭಾರತದಲ್ಲಿ ೧೦೦ ಕೋಟಿ ಹಿಂದೂಗಳು ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆಯನ್ನಿಟ್ಟರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದಲೇ ಕಾಂಗ್ರೆಸ್ಸಿನ ರಾಹುಲ್‌ ಗಾಂಧಿ ಮಂದಿರಗಳಿಗೆ ಹೋಗಲು, ಪೂಜಾರ್ಚನೆ ಮಾಡಲು ಆರಂಭಿಸಿದ್ದಾರೆ. ಹಿಂದೂಗಳಲ್ಲಿ ತಾವು ಬಹುಸಂಖ್ಯೆಯಲ್ಲಿದ್ದೇವೆ ಎಂಬ ರಾಜಕೀಯ ಅರಿವು ಮೂಡಿದರೆ ಹಾಗೂ ಜಾತಿಪಂಗಡಗಳಲ್ಲಿ ರಾಜಕಾರಣಿಗಳು ಹುಟ್ಟುಹಾಕಿದ ಭೇದಭಾವ ದೂರವಾದರೆ ಹಿಂದೂ ರಾಷ್ಟ್ರ ದೂರವಿಲ್ಲ. ೫೦೦ ವರ್ಷಗಳ ನಿರಂತರ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ಸಾಕ್ಷಾತ್‌ ಪ್ರಭು ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯು ಹಿಂದೂ ರಾಷ್ಟ್ರದ ದಿಕ್ಕಿನಲ್ಲಿ ಆರಂಭವಾಗಿರುವ ಪ್ರಯಾಣವೇ ಆಗಿದೆ, ಎಂಬುದು ನಮ್ಮ ನಂಬಿಕೆಯಾಗಿದೆ. ಆದ್ದರಿಂದ ಹಿಂದೂ ರಾಷ್ಟ್ರ ದೂರ ಹೋಗಿಲ್ಲ; ಅದರ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಅದರಲ್ಲಿ ನಾವು ಪ್ರಭು ಶ್ರೀರಾಮಚಂದ್ರರ ಕೃಪಾಶೀರ್ವಾದದಿಂದ ಮುಂದೆ ಮುಂದೆ ಹೋಗುವೆವು ಎಂಬುದರಲ್ಲಿ ಸಂಶಯವಿಲ್ಲ, ಹಾಗೂ ಕಾರ್ಯವನ್ನು ಯಾರಾದರೂ ವಿರೋಧಿಸಿದರೂ ನಾವು ಹಿಂಜರಿಯುವುದಿಲ್ಲ, ತದ್ವಿರುದ್ಧ ಇನ್ನೂ ಹೆಚ್ಚಿನ ಉತ್ಸಾಹದಿಂದ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮುಂದಕ್ಕೊಯ್ಯುವೆವು !

ಶ್ರೀ ಅರವಿಂದ ಪಾನಸೆರೆ

ಪ್ರಶ್ನೆ : ಭಾರತ ದೇಶ ‘ಸೆಕ್ಯುಲರ್’ (ಜಾತ್ಯತೀತ) ಆಗಿರುವಾಗ ‘ಹಿಂದೂ ರಾಷ್ಟ್ರ’ದ ಬೇಡಿಕೆಯು, ಸಂವಿಧಾನಬಾಹಿರವಾಗಿದೆ ಎಂಬ ಬಗ್ಗೆ ನೀವೇನು ಹೇಳುವಿರಿ ?

ಉತ್ತರ : ‘ಹಿಂದೂ ರಾಷ್ಟ್ರ’ ಈ ಶಬ್ದವನ್ನು ಸಂವಿಧಾನಬಾಹಿರವೆಂದು ಹೇಳುವ ‘ಸೆಕ್ಯುಲರ್‌ವಾದಿಗಳು ಇಂದು ವೈಭವೀಕರಿಸುತ್ತಿರುವ ಆ ‘ಸೆಕ್ಯುಲರ್’ ಶಬ್ದವು ಡಾ. ಬಾಬಾಸಾಹೇಬ ಆಂಬೇಡ್ಕರರ ನೇತೃತ್ವದಲ್ಲಿ ರಚಿಸಿದ ಹಾಗೂ ೨೬ ಜನವರಿ ೧೯೫೦ ರಂದು ಭಾರತದಲ್ಲಿ ಅನ್ವಯಗೊಳಿಸಿದ ಮೂಲ ಸಂವಿಧಾನದಲ್ಲಿ ಇತ್ತೇ ?’, ಆ ಸಮಯದಲ್ಲಿ ಈ ಶಬ್ದವು ಸಂವಿಧಾನದಲ್ಲಿರಲಿಲ್ಲ. ಭಾರತದ ‘ಸಂವಿಧಾನ ನಿರ್ಮಾಣ ಸಭೆ’ಯು ಸಂವಿಧಾನದ ಪ್ರಸ್ತಾವನೆಯಲ್ಲಿ ‘ಸೆಕ್ಯುಲರ್’ ಶಬ್ದವನ್ನು ಸೇರಿಸುವ ವಿಷಯದಲ್ಲಿ ತುಂಬಾ ಸವಿಸ್ತಾರವಾಗಿ ಚರ್ಚೆ ಮಾಡಿತ್ತು. ಆಶ್ಚರ್ಯವೆಂದರೆ ಸ್ವತಃ ಡಾ. ಬಾಬಾಸಾಹೇಬ ಆಂಬೇಡ್ಕರ್‌ ಮತ್ತು ಜವಾಹರಲಾಲ ನೆಹರು ಇವರು ಸಂವಿಧಾನದಲ್ಲಿ ‘ಸೆಕ್ಯುಲರ್’ ಶಬ್ದವನ್ನು ಸೇರಿಸಲು ವಿರೋಧಿಸಿದ್ದರು; ಏಕೆಂದರೆ ಭವಿಷ್ಯದಲ್ಲಿ ‘ಸೆಕ್ಯುಲರ್’ ಶಬ್ದದ ಅರ್ಥ ಪಾಶ್ಚಾತ್ಯ ದೇಶಗಳ ಸಂಲ್ಪನೆಗನುಸಾರ ಅಧಾರ್ಮಿಕ ಅಥವಾ ಧರ್ಮವಿರೋಧಿ ಎಂದು ಪರಿಗಣಿಸುವ ಸಾಧ್ಯತೆಯಿತ್ತು. ದುರದೃಷ್ಟವಶಾತ್‌ ಅದೇ ಕಾಂಗ್ರೆಸ್ಸಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ೧೯೭೬ ರಲ್ಲಿ ಸಂವಿಧಾನದ ೪೨ ನೇ ಸುಧಾರಣೆಯೆಂದು ‘ಸೆಕ್ಯುಲರ್’ ಶಬ್ದವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿದರು; ಆದರೆ ಈ ಪ್ರಕ್ರಿಯೆಯೇ ಸಂವಿಧಾನಬಾಹಿರವಾಗಿದ್ದು ಆ ವಿಷಯದಲ್ಲಿ ದೇಶದ ಒಬ್ಬ ‘ಸೆಕ್ಯುಲರ್‌’ವಾದಿಯೂ ಮಾತನಾಡುವುದಿಲ್ಲ. ಇಂದಿರಾ ಗಾಂಧಿಯವರು ೧೯೭೫ ರಿಂದ ೧೯೭೭ ರ ಅವಧಿಯಲ್ಲಿ ದೇಶದಲ್ಲಿ ೨೧ ತಿಂಗಳು ತುರ್ತುಪರಿಸ್ಥಿತಿಯನ್ನು ಹೇರಿ ದೇಶದ ವಿರೋಧಿ ಪಕ್ಷದ ಎಲ್ಲ ನಾಯಕರನ್ನು ಸೆರೆಮನೆಯಲ್ಲಿಟ್ಟಿದ್ದರು.

ಸರ್ವೋಚ್ಚ ನ್ಯಾಯಾಲಯದಲ್ಲಿ ‘ಕೇಶವಾನಂದ ಭಾರತಿ ವಿರುದ್ಧ ಕೇರಳ ರಾಜ್ಯ’ ಎಂಬ ಎಲ್ಲೆಡೆ ಸದ್ದು ಮಾಡಿದ ಖಟ್ಲೆಯಲ್ಲಿ ೧೯೭೩ ರಲ್ಲಿ ಸರ್ವೋಚ್ಚ ನ್ಯಾಯಾಲಯದ ೧೩ ನ್ಯಾಯಾಧೀಶರ ವಿಭಾಗೀಯ ಪೀಠವು ‘ಯಾವುದೇ ಸರಕಾರಕ್ಕೆ ಸಂವಿಧಾನದಲ್ಲಿ ಸುಧಾರಣೆ ಮಾಡಲು ಅಧಿಕಾರವಿದ್ದರೂ, ಆ ಸರಕಾರ ಸಂವಿಧಾನದ ಮೂಲಭೂತ ನಕಾಶೆಗೆ ಅಥವಾ ಚೌಕಟ್ಟಿಗೆ ಆಘಾತವಾಗುವಂತಹ ಬದಲಾವಣೆ ಮಾಡಲು ಸಾಧ್ಯವಿಲ್ಲ’, ಎಂಬ ಆದೇಶ ನೀಡಿತ್ತು. ಈ ಆದೇಶ ನೀಡಿದ ನಂತರ ೩ ವರ್ಷಗಳಲ್ಲಿಯೇ ಅಂದರೆ ವರ್ಷ ೧೯೭೬ ರಲ್ಲಿ ಅಂದಿನ ಕಾಂಗ್ರೆಸ್‌ ಸರಕಾರ ಸಂವಿಧಾನದ ಪ್ರಸ್ತಾವನೆಯಲ್ಲಿ ಬದಲಾವಣೆ ಮಾಡಿ ೪೨ ನೇ ಸುಧಾರಣೆ ಎಂದು ಅದರಲ್ಲಿ ‘ಸೆಕ್ಯುಲರ್’ ಮತ್ತು ‘ಸೋಶಲಿಸ್ಟ್‌’ (ಸಮಾಜವಾದಿ) ಈ ಶಬ್ದವನ್ನು ಹಾಕಿತು. ಈ ಬದಲಾವಣೆ ಎಂದರೆ, ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧವಾಗಿದೆ. ಇಂದು ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಖಟ್ಲೆ ನಡೆಯುತ್ತಿದೆ ಹಾಗೂ ಶೀಘ್ರದಲ್ಲಿಯೇ ಸಂವಿಧಾನ ದಲ್ಲಿನ ಈ ‘ಸೆಕ್ಯುಲರ್’ ಶಬ್ದದ ಬಗ್ಗೆ ನಿರ್ಣಯ ಬರುವುದು !

ಆದ್ದರಿಂದ ‘ಹಿಂದೂ ರಾಷ್ಟ್ರ’ ಕಾನೂನುಬಾಹಿರವಲ್ಲ’, ಎಂಬುದರ ವಿಶ್ಲೇಷಣೆ ಮಾಡುವ ಬದಲು ‘ಸಂವಿಧಾನದಲ್ಲಿ ‘ಸೆಕ್ಯುಲರ್’ ಶಬ್ದವನ್ನು ಹೇಗೆ ಸೇರಿಸಲಾಯಿತು, ಎಂಬುದರ ಸ್ಪಷ್ಟೀಕರಣ ನೀಡುವ ಅವಶ್ಯಕತೆಯಿದೆ ಹಾಗೂ ಕಾನೂನುಬಾಹಿರ ಶಬ್ದವನ್ನು ಸಂವಿಧಾನದಿಂದ ಅಳಿಸಬೇಕು.

ಪ್ರಶ್ನೆ : ಇಂದು ದೇಶದಲ್ಲಿ ನಿರುದ್ಯೋಗ, ಬಡತನ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸಾಚಾರ ಇತ್ಯಾದಿ ಸಮಸ್ಯೆಗಳ ನಿವಾರಣೆಗಾಗಿ ಪ್ರಯತ್ನಿಸುವ ಬದಲು ‘ಹಿಂದೂ ರಾಷ್ಟ್ರ ಸ್ಥಾಪನೆ’ಗಾಗಿ ಏಕೆ ಪ್ರಯತ್ನ ಮಾಡುತ್ತಿದ್ದೀರಿ ?

ಉತ್ತರ : ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೬ ವರ್ಷಗಳು ಕಳೆದರೂ ಇಂದು ದೇಶದಲ್ಲಿ ನಿರುದ್ಯೋಗ, ಬಡತನ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸಾಚಾರ ಇತ್ಯಾದಿ ಅನೇಕ ಸಮಸ್ಯೆಗಳ ನಿವಾರಣೆಯಾಗದಿರುವುದು ನಮ್ಮ ಪ್ರಜಾಪ್ರಭುತ್ವ ಹಾಗೂ ೭೬ ವರ್ಷಗಳ ವರೆಗಿನ ಆಡಳಿತ ವ್ಯವಸ್ಥೆಯ ವೈಫಲ್ಯವಲ್ಲವೇ ?

ಇನ್ನು ಕೂಡ ಈ ಸಮಸ್ಯೆಗಳು ಮುಂಬರುವ ಕಾಲದಲ್ಲಿ ಕಡಿಮೆಯಾಗಬಹುದೆಂದು ಯಾವ ರಾಜಕಾರಣಿಗಳಾದರೂ ಹೇಳಬಲ್ಲರೇ ? ಇದಕ್ಕೆ ಉತ್ತರ ‘ಇಲ್ಲ’ ಎಂದೇ ಬರಬಹುದು. ಪಾಕಿಸ್ತಾನ ಇಂದು ಕಂಗಾಲಾಗಿ ಭಿಕ್ಷೆ ಬೇಡುತ್ತಿದೆ; ಆದ್ದರಿಂದ ಅಲ್ಲಿನ ಇಸ್ಲಾಮಿಕ್‌ ರಾಜ್ಯವನ್ನು ನಷ್ಟಗೊಳಿಸಬೇಕೆಂದು ಯಾರಾದರೂ ಹೇಳುತ್ತಿದ್ದಾರೆಯೇ ? ಇಂದು ಯುರೋಪ್‌ನಲ್ಲಿನ ಬಹಳಷ್ಟು ಶ್ರೀಮಂತ ದೇಶಗಳು ತಮ್ಮನ್ನು ‘ಕ್ರೈಸ್ತ ದೇಶ’ವೆಂದು ಹೇಳಿಕೊಳ್ಳುತ್ತವೆ, ಅವುಗಳು ಬಡವರ ಬಗ್ಗೆ ಚಿಂತಿಸುತ್ತಿಲ್ಲವೆಂದು ಹೇಳಬಹುದೇ ? ಹೀಗಿರುವಾಗ ಈ ದೇಶವನ್ನು ಎಲ್ಲ ಸಮಸ್ಯೆಗಳಿಂದ ಮುಕ್ತಗೊಳಿಸಿ ಒಂದು ಆದರ್ಶ ರಾಷ್ಟ್ರವನ್ನಾಗಿ ಮಾಡಲು ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಿಸುತ್ತಿದ್ದರೆ ಅದರಲ್ಲಿ ತಪ್ಪೇನಿದೆ ? ಅದೇ ರೀತಿ ಕಾಶ್ಮೀರ, ಕೇರಳ, ಪಂಜಾಬ್, ಬಂಗಾಲ ಮತ್ತು ಈಶಾನ್ಯದಲ್ಲಿನ ರಾಜ್ಯಗಳು ಅಲ್ಲಿನ ಸಮಸ್ಯೆಗಳಿಗೆ ಪ್ರಸ್ತುತ ಪ್ರಜಾಪ್ರಭುತ್ವದಲ್ಲಿ ಪರ್ಯಾಯ ಸಿಗದಿರುವಾಗ ಇಂತಹ ವಿಚಾರ ಮಾಡಬೇಕಾಗುತ್ತದೆ. ಮೊಗಲರು ಮತ್ತು ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಭಾರತವು ಅತ್ಯಂತ ವಿಕಸಿತ ದೇಶವಾಗಿತ್ತು, ಎಂಬುದನ್ನು ಈಗ ಪಾಶ್ಚಾತ್ಯ ಇತಿಹಾಸಕಾರರೂ ಒಪ್ಪುತ್ತಿದ್ದಾರೆ. ‘ಅಂಗಸ್‌ ಮೆಡಿಸನ್’ ಎಂಬ ಪಾಶ್ಚಾತ್ಯ ಅರ್ಥಶಾಸ್ತ್ರಜ್ಞನು  ೨೦೦೧ ರಲ್ಲಿ ಪ್ರಕಾಶನ ಮಾಡಿದ ‘ವರ್ಲ್ಡ್‌ ಇಕಾನೋಮಿ ಎ ಮಿಲೆನಿಯಲ್‌ ಪರ್ಸ್ಪೆಕ್ಟಿವ್’ ಈ ಗ್ರಂಥದಲ್ಲಿ ‘ಇಸವಿ ೧’ ರಲ್ಲಿ ಭಾರತದ ಜಿಡಿಪಿ (ಸಂಪೂರ್ಣ ರಾಷ್ಟ್ರದ ಉತ್ಪನ್ನ) ಜಗತ್ತಿನ ಶೇ. ೩೪ ರಷ್ಟಿತ್ತು ಹಾಗೂ ಆ ಕ್ರಮಾಂಕ ೧ ರಲ್ಲಿತ್ತು’, ಎಂಬುದನ್ನು ಆಳವಾದ ಅಭ್ಯಾಸದ ಜೊತೆಗೆ ಮಂಡಿಸಲಾಗಿದೆ, ಅಂದರೆ ಭಾರತವು ಮೊಗಲರು ಮತ್ತು ಆಂಗ್ಲರ ಆಕ್ರಮಣದ ಮೊದಲು ಹೆಚ್ಚು ಪ್ರಗತಿ ಹಾಗೂ ವಿಕಾಸ ಹೊಂದಿತ್ತು; ಏಕೆಂದರೆ ಆಗ ಅದು ಹಿಂದೂ ರಾಷ್ಟ್ರ ಆಗಿತ್ತು.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ.

(ಮುಂದುವರಿಯುವುದು)