ಅಫ್ಘಾನಿಸ್ತಾನ: ಮಹಿಳೆಯರಿಗೆ ಬುರಖಾ ಹಾಗೂ ಪುರುಷರಿಗೆ ಗಡ್ಡ ಕಡ್ಡಾಯ !

ಆದೇಶ ಪಾಲಿಸದಿದ್ದರೆ ಶಿಕ್ಷೆ !

ಕಾಬೂಲ್ (ಅಫ್ಘಾನಿಸ್ತಾನ) – ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ಷರಿಯಾ ಕಾನೂನನ್ನು ಜಾರಿಗೊಳಿಸಲಾಗಿದೆ. ಮಹಿಳೆಯರಿಗೆ ಬುರಖಾ ಧರಿಸುವಂತೆ ಈಗಾಗಲೇ ಆದೇಶ ನೀಡಲಾಗಿದೆ. ಈಗ ತಾಲಿಬಾನ್ ಸರ್ಕಾರದ ಕಾನೂನು ಸಚಿವಾಲಯವು ಈ ವಾರ ನೈತಿಕತೆಯನ್ನು ನಿಯಂತ್ರಿಸುವ ನಿಯಮಗಳ ದೀರ್ಘ ಪಟ್ಟಿಯನ್ನು ಔಪಚಾರಿಕವಾಗಿ ಪ್ರಸಾರ ಮಾಡಿದೆ. ಮಹಿಳೆಯರು ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು ಮತ್ತು ಪುರುಷರು ಗಡ್ಡವನ್ನು ಬಿಡಿವುದು ಅವಶ್ಯಕವಾಗಿದೆ.

ತಾಲಿಬಾನ್‌ನ ಉನ್ನತ ಆಧ್ಯಾತ್ಮಿಕ ನಾಯಕರು ಈ ನಿಯಮಗಳನ್ನು ಜಾರಿಗೆ ತರುವಂತೆ 2022 ರಲ್ಲಿ ಆದೇಶವನ್ನು ಹೊರಡಿಸಿದ್ದರು ಆದರೆ ಇವುಗಳಿಗೆ ಈಗ ಅಧಿಕೃತವಾಗಿ ಕಾನೂನಿನ ರೂಪ ನೀಡಲಾಗಿದೆ ಎಂದು ನ್ಯಾಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಹೊಸ ನಿಯಮಗಳೇನು?

ನಿಯಮಗಳ ಪ್ರಕಾರ ಮಹಿಳೆಯರು ತಮ್ಮ ದೇಹ ಮತ್ತು ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಬುರಖಾ ಧರಿಸಬೇಕು. ಅಲ್ಲದೆ, ಪುರುಷರು ಗಡ್ಡವನ್ನು ಬೆಳೆಸಬೇಕು ಮತ್ತು ಅವುಗಳನ್ನು ಕತ್ತರಿಸುವಂತಿಲ್ಲ. ಪುರುಷರು ನಮಾಜ್ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಬಿಡುವಂತಿಲ್ಲ. ನಿಯಮಗಳನ್ನು ಪಾಲಿಸದಿದ್ದರೆ ಆಸ್ತಿ ಮುಟ್ಟುಗೋಲು, 1 ಗಂಟೆಯಿಂದ 3 ದಿನಗಳವರೆಗೆ ಸಾರ್ವಜನಿಕ ಜೈಲಿನಲ್ಲಿ ಬಂಧನ ಮತ್ತು ಯೋಗ್ಯವೆಂದು ಪರಿಗಣಿಸಬಹುದಾದ ಯಾವುದೇ ಶಿಕ್ಷೆ ವಿಧಿಸಲಾಗುವುದು. ಶಿಕ್ಷೆಯ ಬಳಿಕವೂ ಆರೋಪಿ ಸುಧಾರಿಸದಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.