‘ಅಲ್ಪಸಂಖ್ಯಾತರನ್ನು ರಕ್ಷಿಸುವುದು ಯುವಕರ ಕರ್ತವ್ಯವಂತೆ !’ – ಮುಹಮ್ಮದ್ ಯೂನಸ್

  • ಬಾಂಗ್ಲಾದೇಶದ ಹಂಗಾಮಿ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಮನವಿ !

  • ಇದುವರೆಗೆ ಬಾಂಗ್ಲಾದೇಶದ 52 ಜಿಲ್ಲೆಗಳಲ್ಲಿ ಹಿಂದೂಗಳ ಮೇಲೆ 206 ದಾಳಿಗಳು

ಢಾಕಾ (ಬಾಂಗ್ಲಾದೇಶ) – ಅಲ್ಪಸಂಖ್ಯಾತರ ಮೇಲಿನ ದಾಳಿ ಘೋರ ಅಪರಾಧವಾಗಿದೆ. ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂ, ಕ್ರೈಸ್ತ ಮತ್ತು ಬೌದ್ಧ ಸಮುದಾಯದ ಜನರನ್ನು ರಕ್ಷಿಸುವುದು ದೇಶದ ಯುವಕರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಈ ದೇಶವನ್ನು ಉಳಿಸಿದ್ದಾರೆ. ಅವರು ಅಲ್ಪಸಂಖ್ಯಾತರನ್ನು ರಕ್ಷಿಸಲು ಸಾಧ್ಯವಿಲ್ಲವೇ? ಅಲ್ಪಸಂಖ್ಯಾತರೂ ನಮ್ಮ ದೇಶದ ಪ್ರಜೆಗಳಾಗಿದ್ದಾರೆ. ನಾವೆಲ್ಲರೂ ಒಟ್ಟಿಗೆ ಸೇರಿ ಇರಬೇಕಾಗಿದೆ. ಬಾಂಗ್ಲಾದೇಶ ಈಗ ಯುವಕರ ಕೈಯಲ್ಲಿದೆ ಎಂದು ಬಾಂಗ್ಲಾದೇಶದ ಹಂಗಾಮಿ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಮನವಿ ಮಾಡಿದ್ದಾರೆ. ಬೇಗಂ ರೋಕೆಯಾ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಚಿತ್ತಗಾಂಗ್‌ನಲ್ಲಿ ಲಕ್ಷಾಂತರ ಹಿಂದೂಗಳ ಪ್ರತಿಭಟನೆ !

ಬಾಂಗ್ಲಾದೇಶದ 52 ಜಿಲ್ಲೆಗಳಲ್ಲಿ ಇದುವರೆಗೆ 205 ಹಿಂದೂಗಳ ಮೇಲೆ ಹಲ್ಲೆಯ ಘಟನೆಗಳು ನಡೆದಿವೆ. ಈ ಹಿಂಸಾಚಾರದ ವಿರುದ್ಧ ಬಾಂಗ್ಲಾದೇಶದ ವಿವಿಧ ನಗರಗಳಲ್ಲಿ ಈಗ ಹಿಂದೂಗಳು ಮತ್ತು ಆವಾಮಿ ಲೀಗ್ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಆಗಸ್ಟ್ 10 ರಂದು ಚಿತ್ತಗಾಂಗ್‌ನಲ್ಲಿ ಲಕ್ಷಾಂತರ ಜನರು ಸೇರಿ ಪ್ರತಿಭಟನೆಯನ್ನು ನಡೆಸಿದರು. ತಮ್ಮ ಮನೆ, ಅಂಗಡಿ, ದೇವಸ್ಥಾನಗಳ ಮೇಲಿನ ದಾಳಿಯನ್ನು ಖಂಡಿಸಿದರು. ಈ ಪ್ರತಿಭಟನೆಯ ವಿಡಿಯೋಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ‘ಹಿಂದೂಗಳನ್ನು ರಕ್ಷಿಸಿ’, ‘ನಮಗೆ ನ್ಯಾಯ ಬೇಕು’, ‘ದೇಶ ಎಲ್ಲ ನಾಗರಿಕರಿಗೂ ಸೇರಿದ್ದು’ ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ‘ಹಿಂದೂಗಳ ಮನೆ ಮತ್ತು ದೇವಸ್ಥಾನಗಳನ್ನು ಏಕೆ ಲೂಟಿ ಮಾಡಲಾಗುತ್ತಿದೆ?’, ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಹಿಂದೂಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಆಗ್ರಹ

ಆಂದೋಲನ ನಡೆಸುತ್ತಿರುವ ಹಿಂದೂಗಳು ತಮ್ಮ ಮೇಲಿನ ದಾಳಿಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡಲು ಸ್ವತಂತ್ರ ಸಚಿವಾಲಯವನ್ನೂ ಅವರು ಒತ್ತಾಯಿಸಿದರು. ‘ಬಾಂಗ್ಲಾದೇಶದ ಸಂಸತ್ತಿನಲ್ಲಿ ತಮಗೆ ಶೇಕಡಾ 10ರಷ್ಟು ಸ್ಥಾನಗಳನ್ನು ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹ ಮಾಡಿದ್ದಾರೆ.

ಸೇನೆಯ ವಾಹನದ ಮೇಲೆ ದಾಳಿ: 5 ಯೋಧರಿಗೆ ಗಾಯ

ಆಗಸ್ಟ್ 10 ರಂದು ಗೋಪಾಲಗಂಜನಲ್ಲಿ ಪ್ರತಿಭಟನಾಕಾರರ ಆಂದೋಲನ ನಡೆಸುತ್ತಿರುವಾಗ ಸೇನೆಯು ಲಾಠಿ ಚಾರ್ಜ್ ಮಾಡಲು ಯತ್ನಿಸಿತು. ಈ ವೇಳೆ ಪ್ರತಿಭಟನಾಕಾರರು ಸೇನಾ ವಾಹನದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದರು. ಇದರಲ್ಲಿ 5 ಸೈನಿಕರು ಮತ್ತು 10 ನಾಗರಿಕರಿಗೆ ಗಾಯಗಳಾದವು. ಈ ವೇಳೆ ಇಬ್ಬರು ಪತ್ರಕರ್ತರು ಥಳಿತಕ್ಕೆ ಒಳಗಾದರು. ಪ್ರತಿಭಟನಾಕಾರರು ಸೈನಿಕರಿಂದ ಶಸ್ತ್ರಾಸ್ತ್ರಗಳನ್ನು ಸಹ ಕಿತ್ತುಕೊಂಡರು.

ಬ್ರಿಟನ್ ಸಂಸತ್ತಿನ ಹೊರಗೆ ಕೂಡ ಪ್ರತಿಭಟನೆಗಳು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ನಿಷೇಧಿಸಲು ಬ್ರಿಟನ್‌ನ ಸಂಸತ್ ಭವನದ ಹೊರಗೆ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ‘ಹಿಂದೂ ಲೈಫ್ ಮ್ಯಾಟರ್ಸ್’ (ಹಿಂದುಗಳ ಜೀವವೂ ಮುಖ್ಯ) ಎಂಬ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಮಾನವ ಹಕ್ಕು ಸಂಘಟನೆಗಳ ಸದಸ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಹಿಂಸಾಚಾರದಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅಲ್ಲದೇ ಶಿಥಿಲಗೊಂಡಿರುವ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಬೇಕೆಂಬ ಆಗ್ರಹವೂ ವ್ಯಕ್ತವಾಗಿತ್ತು.

‘ಶೇಖ್ ಹಸೀನಾ ಅವರ ಮಾಜಿ ಸಚಿವರನ್ನು ನಿಷೇಧಿಸಬೇಕಂತೆ !’- ಅಮೇರಿಕಾ ಸಂಸದರ ಆಗ್ರಹ

ಶೇಖ್ ಹಸೀನಾ ಅವರ ಅಧಿಕಾರಾವಧಿಯಲ್ಲಿ ಕೆಲಸ ಮಾಡಿದ ಬಾಂಗ್ಲಾದೇಶದ ಅಧಿಕಾರಿಗಳನ್ನು ನಿಷೇಧಿಸಬೇಕೆಂದು ಅಮೇರಿಕಾದ ಕೆಲವು ಸಂಸದರು ಒತ್ತಾಯಿಸಿದ್ದಾರೆ. ಹಸೀನಾ ಸರಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಒಬೆದುಲ್ ಕಾದರ್ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಡೆಮಾಕ್ರಟಿಕ್ ಪಕ್ಷದ ಸಂಸದ ವ್ಯಾನ್ ಹೊಲೆನ್ ಕರೆ ನೀಡಿದ್ದಾರೆ. ಇದಕ್ಕಾಗಿ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಅವರಿಗೆ ಪತ್ರವನ್ನು ಕೂಡ ಬರೆದಿದ್ದಾರೆ. (ಬಾಂಗ್ಲಾದೇಶದ ಸರಕಾರವನ್ನು ಉರುಳಿಸುವ ಹಿಂದೆ ಅಮೇರಿಕಾದ ಕೈವಾಡವಿದೆ ಎಂಬುದು ಇದರಿಂದ ಇನ್ನಷ್ಟು ಸ್ಪಷ್ಟವಾಗುತ್ತದೆ ! – ಸಂಪಾದಕರು).

ಸಂಪಾದಕೀಯ ನಿಲುವು

ಯುವಕರಿಗೆ ಕೇವಲ ಮನವಿ ಮಾಡುವ ಮೂಲಕ ಮಹಮ್ಮದ್ ಯೂನಸ್ ಹಿಂದೂಗಳ ಪರವಾಗಿದ್ದಾರೆ ಎಂದು ನಟಿಸುತ್ತಿದ್ದಾರೆ. ಇಂತಹ ಮನವಿ ಮಾಡುವ ಬದಲು ಹಿಂದೂಗಳ ಮೇಲಿ ದಾಳಿ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಲು ಯೂನಸ್ ಪ್ರಯತ್ನಿಸಬೇಕು. ಹಿಂದೂಗಳ ರಕ್ಷಣೆಗೆ ಕಠಿಣ ಕ್ರಮ ಕೈಗೊಂಡು ಅವರಿಗೆ ನಷ್ಟ ಪರಿಹಾರ ನೀಡಬೇಕು !