೧. ವಿವಾಹಿತ ಮಹಿಳೆಯರ ಮೇಲಾಗುವ ಅತ್ಯಾಚಾರಗಳ ವಿರುದ್ಧದ ಕಾನೂನುಗಳು ಮತ್ತು ಶಿಕ್ಷೆ
‘ವಿವಾಹಿತ ಮಹಿಳೆಯೊಂದಿಗೆ, ಆಕೆಯ ಪತಿ ಮತ್ತು ಆತನ ಸಂಬಂಧಿಕರು ಕ್ರೂರವಾಗಿ ವರ್ತಿಸುತ್ತಿದ್ದರೆ ಅಥವಾ ಅವಳನ್ನು ಪೀಡಿಸುತ್ತಿದ್ದರೆ, ಅಂತಹವರ ವಿರುದ್ಧ ಇಂತಹ ಮಹಿಳೆ, ಪತ್ನಿ ಅಥವಾ ಆಕೆಯ ಸಂಬಂಧಿಕರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದರೆ ಆ ದೂರಿನ ವಿಚಾರಣೆ ನಡೆಸಬೇಕು ಮತ್ತು ಸಂತ್ರಸ್ತೆಯ ಪತಿ ಮತ್ತು ಅವನ ಸಂಬಂಧಿಕರ ವಿರುದ್ಧ ಕ್ರಿಮಿನಲ್ ಅಪರಾಧವನ್ನು ದಾಖಲಿಸಿ ಅದರ ವಿಚಾರಣೆ ಪ್ರಾರಂಭಿಸಬೇಕು, ಎಂದು ಭಾರತೀಯ ದಂಡಸಂಹಿತೆಯ ‘ಕಾನೂನಿನ ಕಲಂ ೪೯೮ ಎ’ ಹೇಳಿದೆ. ಈ ಕಲಂನ ಅಡಿಯಲ್ಲಿ ೬ ತಿಂಗಳಿಂದ ೩ ವರ್ಷಗಳ ವರೆಗೆ ಸಶ್ರಮ ಕಾರಾಗೃಹ ಶಿಕ್ಷೆ ಮತ್ತು ಆರ್ಥಿಕ ದಂಡವನ್ನು ವಿಧಿಸಬಹುದಾಗಿದೆ. ಇದರೊಂದಿಗೆ ವರದಕ್ಷಿಣೆ ನಿಷೇಧ ಕಾಯಿದೆಯ ಕಲಂ ೪ ರ ಅಡಿಯಲ್ಲಿ ಸಂತ್ರಸ್ತೆ ತನ್ನ ಪತಿ ಅಥವಾ ಆತನ ಸಂಬಂಧಿಕರ ವಿರುದ್ಧ ದೂರು ದಾಖಲಿಸಿದರೆ ಮತ್ತು ದೂರಿನಲ್ಲಿ ಸತ್ಯಾಂಶವಿದ್ದರೆ, ಆರೋಪಿಗೆ ಎರಡು ವರ್ಷಗಳ ಅವಧಿಯ ಸಶ್ರಮ ಕಾರಾಗೃಹ ಶಿಕ್ಷೆ ವಿಧಿಸಬಹುದು. ಈ ಎರಡೂ ಕಾನೂನುಗಳಲ್ಲಿ ‘ಪತಿ ಮತ್ತು ಆತನ ಸಂಬಂಧಿಕರ ವಿರುದ್ಧ ಅಪರಾಧ’ ದಾಖಲಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
೨. ವಿವಾಹಿತ ಮಹಿಳೆಯರಿಂದ ‘ಭಾರತೀಯ ದಂಡ ವಿಧೇಯಕ ಕಲಂ ೪೯೮ ಎ’ ಮತ್ತು ‘ವರದಕ್ಷಿಣೆ ನಿಷೇಧ ಕಾಯಿದೆ’ಯ ದುರ್ಬಳಕೆ
ಕಳೆದ ೨ ದಶಕಗಳಿಂದ ‘ಭಾರತೀಯ ದಂಡ ವಿಧೇಯಕ ಕಲಂ ೪೯೮ ಎ’ ಮತ್ತು ‘ವರದಕ್ಷಿಣೆ ನಿಷೇಧ ಕಾನೂನಿ’ನ ದುರ್ಬಳಕೆಯಾಗುತ್ತಿದೆ. ಪತಿ-ಪತ್ನಿಯರಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಮೂಡಿದರೆ ಮತ್ತು ಪತ್ನಿ ತವರು ಮನೆಗೆ ವಾಸಿಸಲು ಬಂದರೆ, ನಿರ್ದಿಷ್ಟುವಾಗಿ ಪತಿ, ಪತಿಯ ತಂದೆ-ತಾಯಿ, ಪತಿಗೆ ಎಷ್ಟು ಸಹೋದರರು ಇದ್ದಾರೆಯೋ ಅವರು, ಪತಿಯ ಸಹೋದರರ ಪತ್ನಿಯರು, ಸಹೋದರಿ ಇದ್ದರೆ ಮತ್ತು ಸಹೋದರಿಯ ಅತ್ತೆಯ ಜನರು ಹೀಗೆ ಎಲ್ಲರನ್ನೂ ಆರೋಪಿಗಳೆಂದು ಪರಿಗಣಿಸಲಾಗುತ್ತದೆ. ಪತಿ ಮತ್ತು ಅತ್ತೆ-ಮಾವ ಇವರನ್ನು ಹೊರತುಪಡಿಸಿ ಇತರ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಮಟ್ಟದಲ್ಲಿ ರದ್ದುಗೊಳಿಸಲಾಗುತ್ತದೆ ಎನ್ನುವುದು ನ್ಯಾಯಾಲಯದ ಕಳೆದ ಒಂದು ದಶಕದ ಪದ್ಧತಿಯಾಗಿದೆ. ಕೇವಲ ಪತಿ ಮತ್ತು ಕೆಲವು ಪ್ರಕರಣಗಳಲ್ಲಿ ಅತ್ತೆ-ಮಾವ ಇವರ ವಿರುದ್ಧ ನಿಜವಾದ ಆರೋಪಗಳಿದ್ದರೆ ಅಂತಹ ಪ್ರಕರಣಗಳಲ್ಲಿ ವಿಚಾರಣೆ ನಡೆಸಲಾಗುತ್ತದೆ. ಈ ಎರಡೂ ಕಾನೂನುಗಳನ್ನು ಪತಿ ಮತ್ತು ಅವನ ಸಂಬಂಧಿಕರನ್ನು ಪೀಡಿಸಲು ಮತ್ತು ಬೆದರಿಸಲು (ಬ್ಲ್ಯಾಕ್ ಮೇಲ್) ದುರ್ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ.
೩. ಸರ್ವೋಚ್ಚ ನ್ಯಾಯಾಲಯದಿಂದ ಮಹಿಳೆಯ ತಂದೆಗೆ ೫ ಲಕ್ಷ ರೂಪಾಯಿಗಳ ದಂಡ
ಇದೆಲ್ಲವೂ ಎಲ್ಲಾ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಿಗೆ ತಿಳಿದಿದೆ. ಆದ್ದರಿಂದ, ಏಪ್ರಿಲ್ ೨೦೨೪ ರಲ್ಲಿ, ಸರ್ವೋಚ್ಚ ನ್ಯಾಯಾಲಯವು ‘೪೯೮ ಎ’ ಮತ್ತು ‘ವರದಕ್ಷಿಣೆ ನಿಷೇಧ ಕಾನೂನು ಕಲಂ ೪’ ರ ಪ್ರಕರಣದಲ್ಲಿ ಕ್ರಿಮಿನಲ್’ ದೂರು ದಾಖಲಿಸಿದ ಪತ್ನಿಯ ತಂದೆಗೇ ೫ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ. ಈ ಪ್ರಕರಣವನ್ನು ‘ಪ್ರತೀಕ ಬನ್ಸಲ್ ವಿರುದ್ಧ ರಾಜಸ್ಥಾನ ಸರಕಾರ’ ಈ ಹೆಸರಿನಿಂದ ಜಾಲತಾಣದಲ್ಲಿ ಪರಿಶೀಲಿಸಬಹುದಾಗಿದೆ.
೪. ಸುಳ್ಳು ಪ್ರಕರಣದಲ್ಲಿ ಸಿಲುಕಿದ ನಿರಪರಾಧಿ ವ್ಯಕ್ತಿಗೆ ಶಿಕ್ಷೆ !
ಈ ವಿಷಯಗಳಲ್ಲಿ ಸೇರ್ಪಡೆಯಾಗಿರುವ ಮತ್ತೊಂದು ವಿಚಿತ್ರ ಪ್ರಕರಣ ‘ಬಿಹಾರ ಸರಕಾರ ಮತ್ತು ಇತರರು’ ಈ ಹೆಸರಿನಿಂದ ಬಿಹಾರದ ಉಚ್ಚ ನ್ಯಾಯಾಲಯದಲ್ಲಿ ದಾಖಲಾಯಿತು. ಈ ಸಂದರ್ಭದ ಅರ್ಜಿಯನ್ನು ಸುನೀಲ ಪಂಡಿತ ಇವರು ಸಲ್ಲಿಸಿದ್ದರು.
ಅರ್ಜಿದಾರರು ಸಂತ್ರಸ್ತ ಮಹಿಳೆ ಅಥವಾ ಅವರ ಪತಿಯ ಸಂಬಂಧಿಕರಾಗಿರಲಿಲ್ಲ. ಆದಾಗ್ಯೂ ಕ್ರಿಮಿನಲ್ ಪ್ರಕರಣದಲ್ಲಿ ಅವರನ್ನು ಆರೋಪಿ ಕ್ರಮಾಂಕ ೪ ಮಾಡಿದ್ದರು. ಈ ಪ್ರಕರಣದಲ್ಲಿ ೨೦೦೪ ರಲ್ಲಿ ಅಪರಾಧವು ದಾಖಲಾಗಿತ್ತು. ಅದಕ್ಕೆ ತಾಲೂಕು ಕ್ರಿಮಿನಲ್ ದಂಡಾಧಿಕಾರಿ ಇವರು ೨೦೧೬ ರಲ್ಲಿ ತೀರ್ಪು ನೀಡಿದ್ದರು. ಇದರ ಪ್ರಕಾರ ಸುನೀಲ ಪಂಡಿತ ಅವರಿಗೆ ೩ ವರ್ಷಗಳ ಸಶ್ರಮ ಕಠಿಣ ಕಾರಾಗೃಹ ಶಿಕ್ಷೆ ಮತ್ತು ೧೦೦೦ ರೂಪಾಯಿ ದಂಡವನ್ನು ವಿಧಿಸಿತ್ತು, ಇದರಿಂದ ದಲಸಿಂಗ ಸರಾಯ ಇಲ್ಲಿನ ನ್ಯಾಯದಂಡಾಧಿಕಾರಿಯವರು ಪ್ರಥಮ ವರ್ಗ(ಜೆ.ಎಂ.ಎಸ್.ಸಿ) ನ್ಯಾಯಾಲಯದ ತೀರ್ಪಿನ ವಿರುದ್ಧ ಅವರು ಸಮಸ್ತಿಪುರದ ಸತ್ರ(ಸೆಷನ) ನ್ಯಾಯಾಧೀಶರ ನ್ಯಾಯಾಲಯಕ್ಕೆ ಮೊರೆ ಹೋದರು. ಅಲ್ಲಿಯೂ ಅವರಿಗೆ ಸೋಲಾಯಿತು. ಇದರಿಂದ ಕೆಳ ನ್ಯಾಯಾಲಯ ನೀಡಿದ ೩ ವರ್ಷಗಳ ಸಶ್ರಮ ಕಠಿಣ ಕಾರಾಗೃಹ ಶಿಕ್ಷೆ ತೀರ್ಪು ಮುಂದುವರೆಯಿತು.
೫. ನಿರಪರಾಧಿ ಅರ್ಜಿದಾರನನ್ನು ದೋಷಮುಕ್ತಗೊಳಿಸಿದ ಉಚ್ಚ ನ್ಯಾಯಾಲಯ !
ಈ ಎರಡೂ ಆದೇಶಗಳ ವಿರುದ್ಧ ಸುನೀಲ ಪಂಡಿತ ಇವರು ಬಿಹಾರ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಹೇಳಿಕೆಯೇನೆಂದರೆ, ತಾನು ಸಂತ್ರಸ್ತೆಯ ಪತಿಯ ಸಂಬಂಧಿಕನಲ್ಲ. ಅವರು ಈ ಪ್ರಕರಣದಲ್ಲಿ ಅಥವಾ ಕಥಿತ ಪೀಡಿಸಿರುವ ಪ್ರಕರಣದಲ್ಲಿ ಪತಿಗೆ ಕೇವಲ ಸಲಹೆ ನೀಡಿದ್ದರು. ಸಲಹೆಗಾರನ ಪಾತ್ರ ಅವರದ್ದಾಗಿತ್ತು. ಹೀಗಿರುವಾಗ ಅವರಿಗೆ ಶಿಕ್ಷೆಯನ್ನು ವಿಧಿಸಲಾಗಿದೆ.
ಅದೃಷ್ಟವಶಾತ್ ಬಿಹಾರ ಉಚ್ಚ ನ್ಯಾಯಾಲಯಕ್ಕೆ ಕಲಂ ‘೪೯೮ ಎ’ ಮತ್ತು ‘ವರದಕ್ಷಿಣೆ ನಿಷೇಧ ಕಾನೂನು ಕಲಂ ೪’ ದುರ್ಬಳಕೆ ಯಾಗುತ್ತಿರುವುದರ ಕಲ್ಪನೆಯಿತ್ತು. ಇದರಿಂದ ಅವರು ಅರ್ಜಿದಾರ ಸುನೀಲ ಪಂಡಿತರನ್ನು ನಿರಪರಾಧಿಯೆಂದು ಖುಲಾಸೆಗೊಳಿಸಿದರು. ಅಲ್ಲದೇ ಅವರ ವಿರುದ್ಧದ ೩ ವರ್ಷಗಳ ಸಶ್ರಮ ಕಠಿಣ ಕಾರಾಗೃಹ ಶಿಕ್ಷೆಯನ್ನು ರದ್ದುಗೊಳಿಸಿದರು.
೬. ‘ಟ್ರಯಲ್’ (ಕನಿಷ್ಠ) ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಿಗೆ ದಂಡ ವಿಧಿಸಿದ ಬಿಹಾರ ಉಚ್ಚನ್ಯಾಯಾಲಯ
ಇದರಲ್ಲಿ ಎಲ್ಲಕ್ಕಿಂತ ಒಳ್ಳೆಯ ಕೆಲಸವನ್ನು ಬಿಹಾರ ಉಚ್ಚ ನ್ಯಾಯಾಲಯವು ಮಾಡಿತು. ‘ಸುನೀಲ ಪಂಡಿತ ಇವರಿಗೆ ಕಾರಾಗೃಹ ಶಿಕ್ಷೆಯಾಯಿತು. ಅವರ ವಿರುದ್ಧ ಕ್ರಿಮಿನಲ ಅಪರಾಧ ದಾಖಲಿಸಿದ್ದರಿಂದ ಅವರಿಗೆ ಮಾನಸಿಕ ಹಿಂಸೆಯಾಯಿತು, ಸಮಾಜದಲ್ಲಿ ಅವರಿಗೆ ಮಾನಹಾನಿಯಾಯಿತು’ ಎನ್ನುವುದನ್ನು ಗಮನಿಸಿ ‘ನ್ಯಾಯದಂಡಾಧಿಕಾರಿ ಪ್ರಥಮದರ್ಜೆ(ಜೆ.ಎಂ.ಎಫ್.ಸಿ) ದಲಸಿಂಗ ಸರಾಯ, ‘ಟ್ರಾಯಲ್’ ನ್ಯಾಯಾಲಯದ ನ್ಯಾಯಾಧೀಶ ರಾಮಾನಂದ ರಾಮ ಮತ್ತು ಸೆಷನ ನ್ಯಾಯಾಧೀಶ ಹನುಮಾನ ಪ್ರಸಾದ ತಿವಾರಿ ಇವರು ತಲಾ ೧೦೦ ರೂಪಾಯಿಗಳನ್ನು ಸುನೀಲ ಪಂಡಿತರಿಗೆ ನೀಡಬೇಕು’, ಎಂದು ಉಚ್ಚ ನ್ಯಾಯಾಲಯವು ಆದೇಶಿಸಿತು ಹಾಗೂ ಅದನ್ನು ೩ ವಾರದೊಳಗೆ ಜಮೆ ಮಾಡುವಂತೆ ತಿಳಿಸಿತು.
ಈ ಸಮಯದಲ್ಲಿ ಉಚ್ಚ ನ್ಯಾಯಾಲಯ ಹೇಳಿರುವುದೇನೆಂದರೆ, ‘ಕೆಳ ನ್ಯಾಯಾಲಯವು ಜವಾಬ್ದಾರಿಯುತವಾಗಿ ಪ್ರಕರಣವನ್ನು ನಿರ್ವಹಿಸುವುದು ಅಗತ್ಯವಾಗಿತ್ತು. ಯಾರಾದರೂ ಪ್ರಕರಣವನ್ನು ತೆಗೆದುಕೊಂಡು ಬಂದರೆ, ಅದರಲ್ಲಿ ಶಿಕ್ಷೆಯನ್ನು ವಿಧಿಸುವುದು ಅಯೋಗ್ಯವಾಗಿದೆ. ಯಾರನ್ನು ಆರೋಪಿಗಳನ್ನಾಗಿ ಮಾಡಲಾಗಿದೆಯೋ, ಅವರು ಅಪರಾಧದಲ್ಲಿ ಭಾಗಿಯಾಗಿದ್ದಾರೆಯೇ ? ಹಾಗೆಯೇ ಅವರ ವಿರುದ್ಧ ಏನು ಆರೋಪ ಮಾಡಲಾಗಿದೆ ? ಎನ್ನುವುದನ್ನು ವಿವರವಾಗಿ ಪರಿಶೀಲನೆ ಮಾಡಿಯೇ ಪ್ರಕರಣದಲ್ಲಿ ತೀರ್ಪು ನೀಡಬೇಕು’
೭. ಭಾರತದಾದ್ಯಂತ ನ್ಯಾಯಾಧೀಶರಿಗೆ ಬೋಧಪ್ರದವಾದ ಬಿಹಾರ ಉಚ್ಚ ನ್ಯಾಯಾಲಯದ ತೀರ್ಪು
ಈ ಪ್ರಕರಣದಲ್ಲಿ ತೀರ್ಪು ನೀಡುವಾಗ ನ್ಯಾಯಮೂರ್ತಿ ವಿವೇಕ ಚೌಧರಿ ಅವರು ಮಾತನಾಡುತ್ತಾ, ”ನಾನು ನ್ಯಾಯದಂಡಾಧಿಕಾರಿ ಪ್ರಥಮವರ್ಗ ಮತ್ತು ಸೆಷನ ನ್ಯಾಯಾಧೀಶರಿಗೆ ಮುಂದೆ ಅವರಿಂದ ಇಂತಹ ತಪ್ಪುಗಳಾಗಬಾರದು ಎಂದು ಉದ್ದೇಶಪೂರ್ವಕವಾಗಿ ಶಿಕ್ಷೆ ವಿಧಿಸುತ್ತಿದ್ದೇನೆ; ಅನೇಕ ಸಲ ‘ಟ್ರಾಯಲ್ ಕೋರ್ಟ್’ ಅಥವಾ ಸೆಷನ ನ್ಯಾಯಾಧೀಶರು ಎಷ್ಟು ‘ಕ್ಯಾಜ್ಯುವಲಿ’ (ಮೇಲುಮೇಲಿಂದ) ಕೆಲಸ ಮಾಡುತ್ತಾರೆನ್ನುವ ಅನುಭವ ಈ ಹಿಂದೆಯೂ ಅನೇಕ ಗಣ್ಯರಿಗೆ ಆಗಿದೆ. ಈ ವಿಷಯ ಸಂಸತ್ತಿನಲ್ಲಿಯೂ ಪ್ರಸ್ತಾಪವಾಗಿತ್ತು. ಒಟ್ಟಾರೆ ಈ ತೀರ್ಪು ಭಾರತಾದ್ಯಂತದ ಪ್ರಥಮದರ್ಜೆ ನ್ಯಾಯ ದಂಡಾಧಿಕಾರಿ ಮತ್ತು ಸೆಷನ ನ್ಯಾಯಾಧೀಶರಿಗೆ ತಿಳುವಳಿಕೆ ನೀಡುವಂತಹದ್ದಾಗಿದೆ. ಇವರೆಲ್ಲರೂ ಆರೋಪಿಗಳ ವಿರುದ್ಧ ವಾರಂಟ್ ಹೊರಡಿಸುವಾಗ ಅವರ ವಿರುದ್ಧ ನಿಜವಾಗಿಯೂ ಏನೇನು ಆರೋಪಗಳಿವೆ ಎನ್ನುವುದನ್ನು ಪರಿಶೀಲಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಇದು ಬರುತ್ತದೆಯೇ ? ಎನ್ನುವುದನ್ನೂ ಗಂಭೀರವಾಗಿ ವಿಚಾರ ಮಾಡಬೇಕು. ತದನಂತರವೇ ಪ್ರಕರಣದ ತೀರ್ಪು ನೀಡಬೇಕು’’, ಎಂದರು.
ಉಚ್ಚ ನ್ಯಾಯಾಲಯವು ಸುನೀಲ ಪಂಡಿತರ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ, ‘ಭಾರತೀಯ ದಂಡ ಸಂಹಿತೆ ಕಲಂ ೪೯೮ ಎ’ ಮತ್ತು ‘ವರದಕ್ಷಿಣೆ ನಿಷೇಧ ಕಾನೂನು’ ಇದರಲ್ಲಿ ಆರೋಪಿಯೆಂದು ಕೇವಲ ಪತಿ ಮತ್ತು ಅವನ ಸಂಬಂಧಿಕರು ಮಾತ್ರ ಬರುತ್ತಾರೆ. ಆದುದರಿಂದ ಸುನೀಲ ಪಂಡಿತ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ. ಹೀಗಿರುವಾಗಲೂ ಅವರಿಗೆ ಅನೇಕ ವರ್ಷಗಳ ಕಾಲ ಕ್ರಿಮಿನಲ್ ಪ್ರಕರಣವನ್ನು ಅನುಭವಿಸಬೇಕಾಯಿತು ಮತ್ತು ಅವರಿಗೆ ಜಾಮೀನು ನೀಡದೇ ಇದ್ದ ಕಾರಣ ಕಾರಾಗೃಹದಲ್ಲಿ ಇರಬೇಕಾಯಿತು.
| | ಶ್ರೀಕೃಷ್ಣಾರ್ಪಣಮಸ್ತು | |
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೭.೪.೨೦೨೪)