ಪ್ರಾಚೀನ ಭಾರತೀಯ ಮಂದಿರಗಳು : ಮಾನವೀ ಜೀವನದ ಕೇಂದ್ರಬಿಂದು !

‘ದೇವಸ್ಯ ದೇವಾನಾಂ ಆಲಯಃ |’ ಇದರ ಅರ್ಥ ದೇವಾಲಯಗಳೆಂದರೆ ದೇವಸ್ಥಾನ ಅಥವಾ ಮಂದಿರ. ಇವು ಭಗವಂತನ ನಿವಾಸಸ್ಥಾನಗಳಲ್ಲ, ಅವು ಅವನ ಶರೀರವೇ ಆಗಿವೆ. ಆ ದೇವಾಲಯದಲ್ಲಿ ‘ಸಾಕ್ಷಾತ್‌ ಶ್ರೀಹರಿಯ ಅಸ್ತಿತ್ವವಿದೆ’, ಎಂದು ತಿಳಿದುಕೊಳ್ಳಬೇಕು. ಧರ್ಮಶಾಸ್ತ್ರಕ್ಕನುಸಾರ ರಚಿಸಿದ ದೇವಸ್ಥಾನಗಳ ಅಭ್ಯಾಸ ಮಾಡಿದರೆ ಅಲ್ಲಿನ ಸ್ಪಂದನಗಳಿಂದ ಭಕ್ತರ ಮೇಲೆ ಬಹಳ ಪರಿಣಾಮವಾಗುತ್ತಿರುವುದರ ಅರಿವಾಗುತ್ತದೆ. ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಚೈತನ್ಯದ ಲಾಭವನ್ನು ಪಡೆದು ಕೊಳ್ಳಬಹುದು. ವೈದಿಕ ಮಂದಿರಗಳು ಮತ್ತು ಮೂರ್ತಿಯ ಸ್ಥಾಪನೆಯಲ್ಲಿಯೂ ಆಧ್ಯಾತ್ಮಿಕ ದೃಷ್ಟಿಯಿಂದ ಬಹಳಷ್ಟು ರಹಸ್ಯ ಅಡಗಿದೆ. ದೇವಾಲಯದಲ್ಲಿನ ಎಲ್ಲಕ್ಕಿಂತ ಮಹತ್ವದ ಭಾಗವಾಗಿರುವ ಗರ್ಭಗುಡಿಯಿಂದ ಭಕ್ತರ ಮೇಲೆ ಸಾತ್ತ್ವಿಕ ಶಕ್ತಿಯ ಪ್ರಕ್ಷೇಪಣೆ ಯಾಗುತ್ತದೆ. ದೇವಸ್ಥಾನದಲ್ಲಿ ಕೊಡುವ ತೀರ್ಥವೆಂದರೆ ಒಂದು ರೀತಿಯ ಪಾವಿತ್ರ್ಯವನ್ನು ಗ್ರಹಿಸುವ ಅವಕಾಶವಾಗಿರುತ್ತದೆ. ದೇವಸ್ಥಾನಕ್ಕೆ ಹೋಗುವುದು, ಮನುಷ್ಯನಿಗೆ ಆರೋಗ್ಯದ ದೃಷ್ಟಿಯಲ್ಲಿ ಹಾಗೂ ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿಯೂ ಆವಶ್ಯಕವಾಗಿರುತ್ತದೆ. ದ್ವಾಪರಯುಗದಲ್ಲಿ ಮೂರ್ತಿಪೂಜೆಯು ಆರಂಭವಾಯಿತು; ಆಗಲೇ ದೇವಾಲಯಗಳ ಸ್ಥಾಪನೆಯೂ ಆರಂಭವಾಯಿತು; ಆದರೆ ವೇದಕಾಲದಿಂದಲೇ ವಾಸ್ತುಶಾಸ್ತ್ರ ವಿಕಾಸವಾಗಿರು ವುದರ ಸಾಕ್ಷಿಯೆಂದು ಭಾರತದ ದೇವಾಲಯ ನೋಡಬಹುದು.

ಈ ದೇವಾಲಯಗಳ ಇತಿಹಾಸವನ್ನು ಕೂಲಂಕುಷವಾಗಿ ಪರಿಶೀಲಿಸಿದರೆ ಕಂಡು ಬರುವುದೇನೆಂದರೆ, ಈ ದೇವಾಲಯಗಳ ನಿರ್ಮಾಣದಲ್ಲಿ ವೇದಾಂತ, ಯೋಗಶಾಸ್ತ್ರಗಳ ಜೊತೆಗೆ ಭೂಗೋಳ, ಭೌತ, ಗಣಿತ, ಭೂಮಿತಿ ಇತ್ಯಾದಿ ಶಾಸ್ತ್ರಗಳ ಹಾಗೂ ಗುರುತ್ವಾಕರ್ಷಣಾದಿ ನಿಯಮಗಳನ್ನು ಉಪಯೋಗಿಸಲಾಗಿದೆ. ವೈಜ್ಞಾನಿಕ ತತ್ತ್ವಗಳನ್ನು ಕಲಾಪೂರ್ಣವಾಗಿ ಉಪಯೋಗಿಸುವ ಈ ದೇವಾಲಯಗಳು ಬ್ರಹ್ಮಜ್ಞಾನಪ್ರಾಪ್ತಿ ಸಹಿತ ಸಮಾಜಧಾರಣೆ ಯನ್ನೂ ಮಾಡುತ್ತಿದ್ದವು ಅಥವಾ ‘ಆ ಕಾಲದಲ್ಲಿ ‘ದೇವಾಲಯಗಳು’ ಸಮಾಜ ಜೀವನದ ಕೇಂದ್ರಬಿಂದುಗಳಾಗಿದ್ದವು ಎನ್ನಬಹುದು !

ಅಧ್ಯಾತ್ಮ ಹಾಗೂ ವಿಜ್ಞಾನದ ಸಮನ್ವಯವನ್ನು ಸಾಧಿಸುವ ಈ ದೇವಾಲಯಗಳು ವೇದಕಾಲದಿಂದಲೂ ಮಾನವನಿಗೆ ಬ್ರಹ್ಮಜ್ಞಾನ ವನ್ನು ಪ್ರಾಪ್ತ ಮಾಡಿಕೊಡುವುದರೊಂದಿಗೆ ಸಾಮಾಜಿಕ ಬಾಧ್ಯತೆಯನ್ನು ಜೋಪಾಸನೆ ಮಾಡಿದವು. ದಾಸಬೋಧದಲ್ಲಿನ ಭಕ್ತಿಯ ದಶಕದಲ್ಲಿ ಸಮರ್ಥ ರಾಮದಾಸಸ್ವಾಮಿಗಳು ದೇವಸ್ಥಾನಗಳಿಗೆ ಏನೇನು ದಾನ ಕೊಡ ಬೇಕು, ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅದರಿಂದ ದೇವಾಲಯಗಳಲ್ಲಿ ಆಯಾ ವಿಭಾಗಗಳಿರಬೇಕು, ಎಂಬುದು ಗಮನಕ್ಕೆ ಬರುತ್ತದೆ. ಶ್ರವಣ-ಭಕ್ತಿಯ ವಿವೇಚನೆ ಮಾಡುವಾಗ ಇತಿಹಾಸ, ಭೂಗೋಳ, ರಸಾಯನಶಾಸ್ತ್ರ, ವನಸ್ಪತಿಶಾಸ್ತ್ರ, ಸಂಗೀತ, ತಾಳ-ಜ್ಞಾನದಂತಹ ಅನೇಕ ವಿಷಯಗಳನ್ನು ಅವರು ಭಕ್ತಿಯಲ್ಲಿ ಸೇರಿಸಿದ್ದಾರೆ. ದೇವಾಲಯಗಳಿಗೆ ಹಸು, ಜಿಂಕೆ, ವಾನರ, ಆನೆ ಮುಂತಾದ ಪಶುಗಳನ್ನು ಮತ್ತು ನವಿಲು, ಗಿಳಿ, ಹಂಸ ಇತ್ಯಾದಿ ಪಕ್ಷಿಗಳನ್ನು ದಾನ ಮಾಡಬೇಕು. ಭೂದಾನ ಮಾಡಬೇಕು.  ಅಂದರೆ ದೇವಾಲಯಗಳಲ್ಲಿ ಪಶು-ಪಕ್ಷಿಗಳ ಸಂಗ್ರಹಾಲಯ ಇರಬೇಕು.

ಹೂವಿನ ಗಿಡಗಳು, ಹಣ್ಣುಹಂಪಲುಗಳ ಗಿಡಗಳು ಹಾಗೂ ಔಷಧ  ವನಸ್ಪತಿಗಳಿರಬೇಕು. ಇದರಿಂದ ಅರಿವಾಗುವ ಅಂಶವೇನೆಂದರೆ, ದೇವಾಲಯ ಗಳಲ್ಲಿ ವಾಸ್ತುಕಲೆ, ಶಿಲ್ಪಕಲೆ, ಚಿತ್ರಕಲೆ, ಸಂಗೀತಕಲೆ, ನೃತ್ಯಕಲೆ, ಧರ್ಮವಿವೇಚನೆ (ಕೀರ್ತನ ಕಲೆ, ಪ್ರವಚನ), ಧರ್ಮ-ಸಭೆ (ನ್ಯಾಯ), ಔಷಧ ವನಸ್ಪತಿ, ಗೋಶಾಲೆ, ಪಶು-ಪಕ್ಷಿ ಸಂಗ್ರಹ, ಧರ್ಮಕಾರ್ಯಗಳು (ಮಂಗಲಕಾರ್ಯಗಳು, ಯಜ್ಞ, ಉತ್ಸವ  ಇತ್ಯಾದಿ), ಗ್ರಂಥಾಲಯ,  ಪಾಠಶಾಲೆ (ಗುರುಕುಲ),  ಧ್ಯಾನಮಂದಿರ, ಅತಿಥಿಗೃಹ, ಅನಾಥ ಮಕ್ಕಳ ಪಾಲನೆಪೋಷಣೆ, ಯುದ್ಧಕಲೆಯ ತರಬೇತಿ, ಪಾಕಶಾಲೆ ಹೀಗೆ ವಿವಿಧ ಪ್ರಕಾರದ ವಿಭಾಗಗಳು ಕಾರ್ಯ ಮಾಡುತ್ತಿದ್ದವು. ಕೆಲವು ದೇವಾಲಯಗಳಲ್ಲಿ ಬೆಲೆಬಾಳುವ ಖಜಾನೆಗಳಿರುತ್ತಿದ್ದವು, ಕೆಲವೆಡೆ ಗುಪ್ತಮಾರ್ಗಗಳಿರುತ್ತಿದ್ದವು.

ಸಂತ ತುಳಸೀದಾಸರನ್ನು ಬಾಲ್ಯಾವಸ್ಥೆಯಲ್ಲಿ ಮಾರುತಿಯ ಚರಣಗಳಲ್ಲಿ ಸಮರ್ಪಿಸಲಾಗಿತ್ತು, ಸಂತ ಜನಾಬಾಯಿಯವರನ್ನು ದೇವಸ್ಥಾನದ ಮೆಟ್ಟಿಲುಗಳ ಮೇಲೆ ತಂದಿಡಲಾಗಿತ್ತು; ಏಕೆಂದರೆ ದೇವಾಲಯಗಳು ಮಕ್ಕಳ ಪಾಲನೆ ಪೋಷಣೆ ಮಾಡುತ್ತಿದ್ದವು. ಕಾಯಿಲೆಯಲ್ಲಿರುವ ಮಕ್ಕಳನ್ನು ದೇವರಚರಣಗಳಿಗೆ ತರಲಾಗುತ್ತಿತ್ತು; ಏಕೆಂದರೆ ದೇವಾಲಯಗಳು ಔಷಧೋಪಚಾರ ಮಾಡುತ್ತಿದ್ದವು. ಭಾರತದಲ್ಲಿ ಯಾರು ಎಲ್ಲಿ ಹೋದರೂ ಅವನ ನಿವಾಸ ಮತ್ತು ಭೋಜನದ ವ್ಯವಸ್ಥೆ ದೇವಾಲಯಗಳು ಮಾಡುತ್ತಿದ್ದವು. ಆದ್ದರಿಂದ ಭಾರತೀಯ ಐಕ್ಯತೆಯ ಅನುಭವ ಸಹಜವಾಗಿ ಬರುತ್ತಿತ್ತು. ಬ್ರಾಹ್ಮಣರ ಪಾಠಶಾಲೆಗಳು ದೇವಾಲಯಗಳ ಆಶ್ರಯದಿಂದಲೇ ನಡೆಯುತ್ತಿದ್ದವು.

ಸಾವಿರಾರು ವರ್ಷಗಳಿಂದ ಹಿಂದೂ ಸಂಸ್ಕೃತಿ ಹಾಗೂ ವಿಜ್ಞಾನ, ಅಧ್ಯಾತ್ಮ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ದೇವಾಲಯಗಳ ವಾಸ್ತುಶಾಸ್ತ್ರದ ಸೂಕ್ಷ್ಮ ಅಭ್ಯಾಸ ಮಾಡಿ ಸಾಮಾಜಿಕ ಜೀವನದಲ್ಲಿ ಅಳವಡಿಸುವುದೇ ಇಂದಿನ ವಿಜ್ಞಾನಿ ಗಳಿಗೆ ಸವಾಲಾಗಿದೆ !

– ಶ್ರೀ. ಸಂಜಯ ಮುಳ್ಯೆ.