‘ಪಬ್ಲಿಕ್ ಐ’ ಮತ್ತು ಇಂಟರ್ನ್ಯಾಶನಲ್ ಬೇಬಿ ಫುಡ್ ಆಕ್ಷನ್ ನೆಟ್‌ವರ್ಕ್’ ಎಂಬ ಸ್ವಿಸ್ ಸಂಸ್ಥೆಯು, ಭಾರತದಲ್ಲಿ ನೆಸ್ಲೆ ಕಂಪನಿಯು ಶಿಶುಗಳಿಗಾಗಿ ಮಾರಾಟ ಮಾಡುವ ಉತ್ಪನ್ನವಾದ ‘ಸೆರೆಲಾಕ್’ ಮತ್ತು ‘ದೂದ್’ ಎರಡರಲ್ಲೂ ಸಕ್ಕರೆ ಇದೆ ಎಂದು ಹೇಳಿದೆ. ಯುರೋಪ್, ಬ್ರಿಟನ್, ಜರ್ಮನಿ, ಸ್ವಿಟ್ಜರ್ಲ್ಯಾಂಡ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾರಾಟವಾಗುವ ತನ್ನ ‘ಬೇಬಿ ಫುಡ್’ ಉತ್ಪನ್ನಗಳಲ್ಲಿ ನೆಸ್ಲೆಯು ಸಕ್ಕರೆಯನ್ನು ಸೇರಿಸುವುದಿಲ್ಲ. ಈ ಹೇಳಿಕೆಯ ನಂತರ, ಭಾರತದಲ್ಲಿ ಕೋಲಾಹಲ ಉಂಟಾಗಿದೆ ಮತ್ತು ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ವು (‘ಎಫ್.ಎಸ್.ಎಸ್.ಐ.’) ಪರೀಕ್ಷೆಗಾಗಿ ‘ಸೆರೆಲಾಕ್’ ಮಾದರಿಗಳನ್ನು ಸಂಗ್ರಹಿಸಿದೆ. ಇದರ ವಿಶೇಷವೇನೆಂದರೆ, ‘ಸೆರೆಲಾಕ್’ ತಯಾರಿಸುವ ಮೂಲ ಸಂಸ್ಥೆಯಾದ ‘ನೆಸ್ಲೆ’ ಸ್ವಿಟ್ಜರ್ಲೆಂಡ್‌ನಲ್ಲಿರುವುದರಿಂದ ಈ ಆರೋಪಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ ಮತ್ತು ಅದಕ್ಕೆ ತನ್ನ ಬುಡಕ್ಕೇ ಬೆಂಕಿ ಬಿದ್ದಂತೆ ಆಗಿದೆ. ಅನಂತರ ಎಂದಿನಂತೆ, ನಮ್ಮ ಉತ್ಪನ್ನಗಳಲ್ಲಿನ ಸಕ್ಕರೆ ಅಂಶವು ನಿಯಂತ್ರಿತಮಿತಿಯಲ್ಲಿದೆ ಎಂದು ‘ಸೆರೆಲಾಕ್’ ಸಂಸ್ಥೆ ಹೇಳಿದೆ ! ಅದು ‘ನೆಸ್ಲೆ’ ಅಥವಾ ‘ಜಾನ್ಸನ್ ಅಂಡ್ ಜಾನ್ಸನ್’ ಅಥವಾ ‘ಆಮ್ವೇ’ ಅಥವಾ ಇತರ ಯಾವುದೇ ವಿದೇಶಿ ಸಂಸ್ಥೆಯಾಗಿರಲಿ, ಭಾರತವನ್ನು ಹೊರತುಪಡಿಸಿ, ಅವು ಇತರ ದೇಶಗಳ ನಿಯಮ-ಷರತ್ತುಗಳನ್ನು ಅನುಸರಿಸುತ್ತವೆ ಮತ್ತು ಈ ಸಂಸ್ಥೆಗಳು ಭಾರತಕ್ಕೆ ಬಂದಾಗ ಮಾತ್ರ ಅದನ್ನು ಪಾಲಿಸುವ ಆವಶ್ಯಕತೆ ಅನಿಸುವುದಿಲ್ಲ. ಇದು ಎಲ್ಲಕ್ಕಿಂತ ಮಹತ್ವದ ಸಮಸ್ಯೆಯಾಗಿದೆ ! ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲ ವಯೋಮಾನದವರ ಆರೋಗ್ಯ ಸಮಸ್ಯೆಗಳು ಈ ಸಂಸ್ಥೆಗಳಿಂದ ಉಂಟಾದರೆ, ಭಾರತ ಸರಕಾರವು ಈಗ ಅಂತಹ ಪ್ರತಿಯೊಂದು ಸಂಸ್ಥೆಗಳ ಮೇಲೆ ‘ನಿಷೇಧ’ದಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ !
ವಿದೇಶಿ ಸಂಸ್ಥೆಗಳಿಂದ ನಿಯಮಗಳ ಉಲ್ಲಂಘನೆ !
ವಿದೇಶಿ ಮೂಲದ ‘ನೆಸ್ಲೆ’ ವಿರುದ್ಧದ ಆರೋಪಗಳು ಇದೇ ಮೊದಲಲ್ಲ. ಈ ಹಿಂದೆ ವಿದೇಶಮೂಲದ ಆದರೆ ಭಾರತದ ಹೆಸರನ್ನಿಟ್ಟು ಭಾರತದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಮೇಲೆ ಆರೋಗ್ಯ ಮಾನದಂಡಗಳು ಮತ್ತು ನಿಬಂಧನೆಗಳನ್ನು ಅನುಸರಿಸದ ಹಾಗೂ ಇತರ ಹಲವು ಗಂಭೀರ ಆರೋಪಗಳಿವೆ. ಜರ್ಮನಿ ಮತ್ತು ಬ್ರಿಟನ್‌ದಲ್ಲಿ ಸಕ್ಕರೆ ಸೇರಿಸದೆ ಮಾರಾಟವಾಗುವ ‘ಸೆರೆಲಾಕ್’ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಿದರೆ, ಅವುಗಳನ್ನು ೩ ಗ್ರಾಂ ಸಕ್ಕರೆಯೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಸಂಸ್ಥೆಗಳ ದುರಹಂಕಾರಕ್ಕೆ ಕಾರಣವೇನು ? ನಿಯಮಗಳು ಮತ್ತು ಮಾನದಂಡಗಳನ್ನು ಅನುಸರಿಸದ ಕಾರಣ ‘ಜಾನ್ಸನ್ ಮತ್ತು ಜಾನ್ಸನ್’ ಇದರ ‘ಬೇಬಿ ಪೌಡರ್’ ತಯಾರಿಕೆಯ ಅನುಮತಿಯನ್ನು ಮಹಾರಾಷ್ಟ್ರ ಸರಕಾರದ ಆಹಾರ ಮತ್ತು ಔಷಧ ಮಂಡಳಿಯು ೨೦೨೩ ರಲ್ಲಿ ಹಿಂಪಡೆದಿದೆ. ಈ ‘ಬೇಬಿ ಪೌಡರ್’ ಬಳಕೆಯಿಂದ ಅಮೇರಿಕಾದಲ್ಲಿ ಜನರು ‘ಅರ್ಬುದ’ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂಬ ಗಂಭೀರ ಆರೋಪವಿದೆ. ಅನಂತರ ಉಚ್ಚ ನ್ಯಾಯಾಲಯದಿಂದ ನಿಷೇಧ ವನ್ನು ಹಿಂಪಡೆದರೂ, ಮಕ್ಕಳಿಗೆ ಸಂಬಂಧಿಸಿದಂತೆ ‘ಅರ್ಬುದ ರೋಗ’ದಂತಹ ಆರೋಪಗಳಿದ್ದರೂ ಸಂಸ್ಥೆಯ ಉತ್ಪನ್ನಗಳನ್ನು ನಿಲ್ಲಿಸುವುದು ಗಂಭೀರ ವಿಷಯವಾಗಿದೆ.
ಎಫ್.ಎಸ್.ಎಸ್.ಐ. ನಿರ್ದೇಶನದ ನಂತರ ಆಮ್ವೇ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ಗೆ ತನ್ನ ೬ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಡೆಯಲು ಆದೇಶಿಸಲಾಯಿತು. ‘ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್’ ಪ್ರಕಾರ, ಈ ಉತ್ಪನ್ನಗಳಲ್ಲಿ ಖನಿಜಗಳು ಮತ್ತು ವಿಟಮಿನ್‌ಗಳ ಪ್ರಮಾಣವು ಅನುಮತಿಗಿಂತ ಹೆಚ್ಚಿರುವುದು ಕಂಡುಬಂದಿದೆ. ಆಮ್ವೇ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ೨೦೧೫ ರಲ್ಲಿ ಭಾರತದಲ್ಲಿ ೨ ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿದ್ದು, ಅದರಲ್ಲಿ ಗಂಭೀರ ಆರೋಪವಿರುವ ‘ನ್ಯೂಟ್ರಿಲೈಟ್’ನ ಉತ್ಪನ್ನಗಳು ಶೇಕಡಾ ೫೫ ರಷ್ಟು ಪಾಲನ್ನು ಹೊಂದಿದೆ. ೨೦೨೨ ರಲ್ಲಿ, ‘ನೆಸ್ಲೆ’ ಭಾರತದಲ್ಲಿ ೨೦ ಸಾವಿರ ಕೋಟಿ ಮೌಲ್ಯದ ‘ಸೆರೆಲಾಕ್’ಅನ್ನು ಮಾರಾಟ ಮಾಡಿತು. ಇದರಿಂದ ಈ ಸಂಸ್ಥೆಗಳು ಎಷ್ಟರಮಟ್ಟಿಗೆ ಲಾಭ ಪಡೆಯುತ್ತಿವೆ ಎಂಬುದು ತಿಳಿಯುತ್ತದೆ. ಜನಸಾಮಾನ್ಯರ ಬದುಕಿನ ಅವಿಭಾಜ್ಯ ಅಂಗವಾಗಿರುವ ಆಮ್ವೇ, ‘ಸೆರೆಲಾಕ್’, ಡಯಾಪರ್ ಕಂಪನಿಗಳು ಕೋಟ್ಯಂತರ ರೂಪಾಯಿ ಜಾಹೀರಾತು ನೀಡಿ ತಮ್ಮ ಉತ್ಪನ್ನಗಳನ್ನು ಭಾರತೀಯರಿಗೆ ಮಾರಾಟ ಮಾಡಲು ಯತ್ನಿಸುತ್ತಿವೆ. ‘ಈ ಎಲ್ಲಾ ವಿದೇಶಿ ಸಂಸ್ಥೆಗಳ ದುರಹಂಕಾರ ಯಾವಾಗ ನಿಲ್ಲುತ್ತದೆ ?’, ಇದು ಪ್ರಮುಖ ಪ್ರಶ್ನೆಯಾಗಿದೆ. ‘ಭಾರತದಲ್ಲಿ ಏನೇ ಮಾಡಿದರೂ, ಎಷ್ಟೇ ನಿಯಮ ಉಲ್ಲಂಘಿಸಿದರೂ ನಡೆದೀತು’ ಎಂಬ ಭಾವನೆ ಈ ಸಂಸ್ಥೆಗಳಿಗೆ ಬಂದಿದೆ. ಇದನ್ನು ಹೋಗಲಾಡಿಸಲು ಇಲ್ಲಿನ ವ್ಯವಸ್ಥೆಯಿಂದ ಮೊದಲ ಪ್ರಯತ್ನ ನಡೆಯಬೇಕು. ಇಂತಹ ಸಂಸ್ಥೆಗಳಿಗೆ ‘ಭಾರತೀಯ ನಿಯಮಗಳನ್ನು ಪಾಲಿಸದಿದ್ದರೆ ಹೊರಗಿನ ದಾರಿ ತೋರಿಸಲಾಗುತ್ತದೆ’ ಎಂಬುದನ್ನು ಕೃತಿಯ ಮೂಲಕ ಈ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡಬೇಕು. ಇದರಿಂದಲೇ ಈ ಸಂಸ್ಥೆಗಳು ಹದ್ದುಬಸ್ತಿನಲ್ಲಿರುವವು.
ಭಾರತೀಯ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವುದು ಆವಶ್ಯಕ !
ನಾವು ತಿನ್ನುವ ಆಹಾರದಿಂದ ಮನಸ್ಸು ರೂಪುಗೊಳ್ಳುತ್ತದೆ. ಆದ್ದರಿಂದ, ಈ ಆಹಾರವು ಎಷ್ಟು ಸಾತ್ವಿಕವಾಗಿದೆಯೋ, ಮುಂದಿನ ಪೀಳಿಗೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಹಿಂದೆ ‘ಸೆರೆಲಾಕ್’ ಎಂಬುದೇ ಇರಲಿಲ್ಲ, ಆದರೆ ಮಕ್ಕಳಿಗೆ ಸಹ ದ್ವಿದಳಧಾನ್ಯಗಳು, ತಾಯಿಯ ಹಾಲು ಮುಂತಾದ ಭಾರತೀಯ ಸಂಸ್ಕೃತಿಯ ಅಗತ್ಯ ಮತ್ತು ನಿರೀಕ್ಷಿತ ಅಂಶಗಳನ್ನು ಮಾತ್ರ ನೀಡಲಾಗುತ್ತಿತ್ತು. ಋತುಮಾನಕ್ಕನುಗುಣವಾಗಿ ಮಕ್ಕಳ ಆಹಾರದಲ್ಲಿ ಅಂಟಿನುಂಡೆ, ವಿವಿಧ ಪ್ರಸಾದಗಳಲ್ಲಿ ಕಲ್ಲುಸಕ್ಕರೆ, ಬಾದಾಮಿ ಸೇರಿದ್ದವು. ಆದ್ದರಿಂದ, ಈ ಮಕ್ಕಳು ಒಳ್ಳೆಯ ಸ್ವಭಾವದವ ರಾಗಿರುವುದಷ್ಟೇ ಅಲ್ಲ ಬುದ್ಧಿವಂತರಾಗುತ್ತಿದ್ದರು. ತದ್ವಿರುದ್ದ ಇಂದು ಹೆಚ್ಚಿನ ಮಕ್ಕಳು ‘ಸೆರೆಲಾಕ್’ ಸಕ್ಕರೆ ಆಹಾರಗಳ ಸೇವನೆ ಮತ್ತು ಪ್ಯಾಕ್ ಮಾಡಿದ ಆಹಾರಗಳ ಆಸಕ್ತಿಯಿಂದಾಗಿ ಬಾಲ್ಯದಿಂದಲೇ ಬೊಜ್ಜು, ಸೋಮಾರಿತನ, ಸಿಡುಕುತನ ಮತ್ತು ಅಸಹನೆಯುಳ್ಳವ ರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬ್ರೆಜಿಲ್‌ನ ‘ಫೆಡರಲ್ ಯೂನಿವರ್ಸಿಟಿ ಆಫ್ ಪರಬಾ’ದಲ್ಲಿ ಪೌಷ್ಟಿಕಾಂಶ ವಿಭಾಗದ ಪ್ರೊ. ರೋಡಿಯೊ ವಿಯಾನಾ ಮಾತನಾಡುತ್ತಾ, ”ಮಕ್ಕಳಿಗೆ ನೀಡುವ ಆಹಾರಕ್ಕೆ ಸಕ್ಕರೆ ಹಾಕುವುದು ಚಟ ಇದ್ದಂತೆ. ಮಕ್ಕಳು ಸಿಹಿ ರುಚಿಗೆ ವ್ಯಸನಿಯಾಗುತ್ತಾರೆ ಮತ್ತು ಹೆಚ್ಚು ಸಿಹಿ ಆಹಾರವನ್ನು ತಿನ್ನಲು ಬಯಸುತ್ತಾರೆ. ಇದು ಬಾಲ್ಯದ ಸ್ಥೂಲಕಾಯದ ಜೊತೆಗೆ ಅನೇಕ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೂ ಕಾರಣವಾಗುತ್ತದೆ’’, ಎಂದಿದ್ದಾರೆ. ಮಕ್ಕಳು ಸಕ್ಕರೆಗೆ ಒಡ್ಡಿಕೊಂಡರೆ ಸ್ಥೂಲಕಾಯವನ್ನು ಹೆಚ್ಚಿಸುವ ಸಕ್ಕರೆ ಪದಾರ್ಥಗಳನ್ನು ಸೇವಿಸುವ ಅಭ್ಯಾಸವನ್ನು ಜೀವನಪರ್ಯಂತ ಬೆಳೆಸಿಕೊಳ್ಳುತ್ತಾರೆ’ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದ್ದರಿಂದ, ೨೦೨೨ ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಮಕ್ಕಳ ಆಹಾರದಲ್ಲಿ ಸಕ್ಕರೆ ಮತ್ತು ಸಿಹಿತಿಂಡಿಗಳನ್ನು ಸೇರಿಸುವುದನ್ನು ನಿಷೇಧಿಸಿತು. ನೆಸ್ಲೆ ಮತ್ತು ಅಂತಹುದೇ ಸಂಸ್ಥೆಗಳು ಇಂತಹ ಸ್ಪಷ್ಟವಾದ ಎಚ್ಚರಿಕೆಗಳ ಹೊರತಾಗಿಯೂ ಭಾರತದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಉತ್ಪನ್ನಗಳನ್ನು ತಯಾರಿಸುವುದನ್ನು ಮುಂದುವರೆಸಿದರೆ, ಭಾರತೀಯ ಆರೋಗ್ಯ ಇಲಾಖೆಯು ಅವುಗಳನ್ನು ಹದ್ದುಬಸ್ತಿನಲ್ಲಿಡಬೇಕು ಇದರೊಂದಿಗೆ, ಭಾರತದಲ್ಲಿನ ಮಕ್ಕಳು ‘ಸೆರೆಲಾಕ್’, ‘ಜಾನ್ಸನ್ ಬೇಬಿ ಪೌಡರ್ ಮತ್ತು ಆಯಿಲ್’, ಗಾಳಿಯಾಡದ ಪ್ಯಾಕ್‌ನಲ್ಲಿರುವ ಉತ್ಪನ್ನಗಳನ್ನು ಅವಲಂಬಿಸುವ ಬದಲು ಆಯುರ್ವೇದ ಆಹಾರವನ್ನು ಅಳವಡಿಸಿಕೊಳ್ಳಬೇಕು. ಹೀಗೆ ಮಾಡಿದರೆ ಮಕ್ಕಳ ಆರೋಗ್ಯ ಗಟ್ಟಿಯಾಗುತ್ತದೆ, ಕೋಟ್ಯಂತರ ರೂಪಾಯಿ ವಿದೇಶಿ ಕರೆನ್ಸಿಯೂ ಉಳಿತಾಯವಾಗುತ್ತದೆ !