ಕೂದಲು ತುಂಬಾ ಉದುರುತ್ತಿದ್ದರೆ ಏನು ಮಾಡಬೇಕು?

ಸದ್ಯ ಕೂದಲು ಉದುರುವಿಕೆಯು ಎಲ್ಲ ಕಡೆಗೆ ಕಂಡು ಬರುವಂತಹ ಸಮಸ್ಯೆಯಾಗಿದೆ. ನಿತ್ಯ ಕೂದಲು ಉದುರುತ್ತಿದ್ದರೆ, ‘ಈ ಎಣ್ಣೆಯನ್ನು ಹಚ್ಚಿಕೊಂಡು ನೋಡಿರಿ, ಈ  ಔಷಧಿಯನ್ನು ತೆಗೆದುಕೊಂಡು ನೋಡಿರಿ’ ಎಂದು ಸಲಹೆಗಳನ್ನು ನೀಡಲಾಗುತ್ತದೆ; ಆದರೆ ನಿರೀಕ್ಷಿತ ಪರಿಣಾಮ ಕಂಡು ಬರದಿದ್ದರೆ ನಿರಾಶೆ ಬರುತ್ತದೆ. ಇಂದಿನ ಲೇಖನದಲ್ಲಿ ನಾವು ‘ಕೂದಲಿನ ಸಮಸ್ಯೆ ಏಕೆ ಉದ್ಭವಿಸುತ್ತದೆ ? ಎನ್ನುವುದನ್ನು ತಿಳಿದುಕೊಳ್ಳೋಣ. ಈ ಸಮಸ್ಯೆಯ ಹಿಂದಿನ ಕಾರಣಗಳನ್ನು ಪರಿಹರಿಸಲು ಮೊದಲು ಪ್ರಯತ್ನಿಸಿದರೆ ಶೇ. ೫೦ ರಷ್ಟು ಸಮಸ್ಯೆ ದೂರವಾಗುತ್ತದೆ. ಈ ಸಮಸ್ಯೆಗೆ ಔಧೋಪಚಾರವನ್ನು ಮಾತ್ರ ವೈದ್ಯರಿಂದಲೇ ಪಡೆಯಬೇಕು.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

 ೧. ಕೂದಲು ಉದುರುವುದರ ಕಾರಣಗಳು

ಇದಕ್ಕೆ ಅನೇಕ ರೀತಿಯ ಕಾರಣಗಳಿರುತ್ತವೆ. ಅದರಲ್ಲಿನ ಯಾವ ಕಾರಣಗಳಿಂದ ನಿಮ್ಮ ಕೂದಲು ಉದುರುತ್ತಿವೆ ಎಂಬುದನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡಬೇಕು.

ಅ. ತಲೆಯ ಮೇಲಿನ ತ್ವಚೆಗೆ ಏನಾದರು ರೋಗವಾಗಿದೆಯೇ ? ಎಂದು  ನೋಡಬೇಕು. ತಲೆಗೆ ಬಹಳ ಬೆವರು ಬರುತ್ತಿದ್ದರೆ, ನಿಯಮಿತವಾಗಿ ತಲೆಯನ್ನು ತೊಳೆಯದಿದ್ದರೆ, ತಲೆಯ ತ್ವಚೆ ಅಸ್ವಚ್ಛವಾಗಿದ್ದರೂ ಕೂದಲು ಉದುರಲು ಪ್ರಾರಂಭವಾಗುತ್ತವೆ.

ಆ. ಕೂದಲನ್ನು ಬಣ್ಣ ಮಾಡಲು ಕೃತಕ ಬಣ್ಣಗಳ ಉಪಯೋಗ, ತಲೆಯ ಕೂದಲನ್ನು ತೊಳೆಯಲು ವಿವಿಧ ಶಾಂಪೂಗಳನ್ನು ಉಪಯೋಗಿಸುವುದು ಇತ್ಯಾದಿ. ಸದ್ಯ ವಿವಿಧ ಜಾಹೀರಾತುಗಳಿಗೆ ಮೋಸ ಹೋಗಿ ವಿವಿಧ ಪ್ರಕಾರದ ದುಬಾರಿ ಬೆಲೆಯ ಶ್ಯಾಂಪೂ ಖರೀದಿಸುವ ಪದ್ಧತಿ ಹೆಚ್ಚಾಗಿದೆ.

ಇ. ದೇಹದಲ್ಲಿನ ‘ಹಾರ್ಮೋನ್ಸಗಳ ಅಸಮತೋಲನ’

ಈ. ವಿವಿಧ ರೋಗಗಳಿರುವುದು, ಉದಾಹರಣೆಗೆ ಹಳೆಯ ಜ್ವರ, ಬೊಜ್ಜು, ಮಧುಮೇಹ, ರಕ್ತಹೀನತೆ (ಎನಿಮಿಯಾ), ಅಪೌಷ್ಟಿಕತೆ ಇತ್ಯಾದಿಗಳಿಂದಲೂ ಕೂದಲು ಉದುರುತ್ತವೆ.

ಉ. ಆಹಾರದಲ್ಲಿ ಹೆಚ್ಚು ಮಸಾಲೆಯುಕ್ತ ಪದಾರ್ಥಗಳ ಉಪಯೋಗ, ಆಹಾರದಲ್ಲಿ ಜೀವಸತ್ವ ಎ ಮತ್ತು ಬಿ ಹಾಗೂ ಪ್ರೋಟೀನ್‌ ಮತ್ತು ಕ್ಯಾಲ್ಸಿಯಂಗಳ ಕೊರತೆ.

ಊ. ಬಹಳಷ್ಟು ಉಪ್ಪು, ಹುಳಿ, ಒಗರು ಪದಾರ್ಥಗಳ ಸೇವನೆ. ಇದಕ್ಕೆ ಉದಾಹರಣೆಗಳನ್ನು ನೀಡುವುದಾದರೆ, ಉಪ್ಪಿನಕಾಯಿ ಮತ್ತು ಹಪ್ಪಳಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು, ಮಾರಾಟಕ್ಕೆ ಸಿಗುವ ಚಿಪ್ಸ್‌, ಕುರಕುರೆ ಬಹಳ ಹುಳಿ ಮತ್ತು ಖಾರ ಇರುತ್ತವೆ. ಯುವಕರು ಈ ಪದಾರ್ಥಗಳನ್ನು ಇಷ್ಟಪಟ್ಟು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ.

ಎ. ಆಹಾರದಲ್ಲಿ ಹೆಚ್ಚು ಪ್ರಮಾಣದಲ್ಲಿ ಉಪ್ಪು ಸೇವಿಸುವುದು, ಹುಳಿ ಬರಿಸಿದ ಪದಾರ್ಥಗಳಿರುವುದು, ಉದಾಹರಣೆಗೆ ಇಡ್ಲಿ, ದೋಸೆ, ಢೋಕ್ಲಾ, ಪಾವ್, ಬಿಸ್ಕತ್ತು ಇತ್ಯಾದಿ.

ಏ. ನಿದ್ದೆಗೆಡುವುದು, ಮಾನಸಿಕ ಒತ್ತಡ, ಅತಿ ವ್ಯಾಯಾಮ, ಅತಿಯಾದ ಶ್ರಮ, ಬಿಸಿಲಿನಲ್ಲಿ ಹೆಚ್ಚು ಸುತ್ತಾಟ ಇತ್ಯಾದಿಗಳಿಂದ ಕೂದಲು ಉದುರುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಓ. ಕೂದಲುಗಳಿಗೆ ಎಣ್ಣೆಯನ್ನು ಹಚ್ಚದಿರುವುದು, ವಿವಿಧ ಬಣ್ಣವನ್ನು ಹಚ್ಚುವುದು, ಬಿಗಿಯಾಗಿ ಕಟ್ಟುವುದು ಮುಂತಾದ ಅಯೋಗ್ಯ ರೂಢಿಗಳಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.

ಪ್ರತಿಯೊಬ್ಬ ರೋಗಿಯಲ್ಲಿ ಕೂದಲು ಉದುರುವುದರ ಕಾರಣ ಬೇರೆ ಬೇರೆ ಇರುತ್ತದೆ. ಇದರಿಂದ ಒಂದೇ ಔಷಧಿ ಎಲ್ಲರಿಗೂ ಅನ್ವಯಿಸುವುದಿಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಆದುದರಿಂದ ಇನ್ನು ಮುಂದೆಯಾದರೂ ನಾವು ದುಬಾರಿ ಬೆಲೆಯ ಶ್ಯಾಂಪೂ ಮತ್ತು ಕೂದಲುಗಳಿಗೆ ಹಚ್ಚುವ ವಿವಿಧ ರಾಸಾಯನಿಕಯುಕ್ತ ಪದಾರ್ಥಗಳಿಗೆ ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು.

೨. ಕೂದಲು ಉದುರದಂತೆ ಮಾಡಬೇಕಾದ ಉಪಾಯ

ಕೂದಲು ಉದುರುತ್ತಿದ್ದರೆ ಮೊಟ್ಟಮೊದಲು ನಿಮ್ಮ ದಿನ ಚರ್ಯೆ ಮತ್ತು ಆಹಾರದಲ್ಲಿ ಬದಲಾವಣೆ ಮಾಡಬೇಕು. ಉದಾ,

ಅ. ಊಟದ ಸಮಯವನ್ನು ಪಾಲಿಸಬೇಕು, ಊಟದಲ್ಲಿ ವಾರಕ್ಕೊಮ್ಮೆ ಯಾವುದಾದರೊಂದು ದ್ವಿದಳ ಧಾನ್ಯವನ್ನು ನೆನೆಸಿ ಬೇಯಿಸಿ ತಿನ್ನಬೇಕು. ಪ್ರತಿದಿನ ೧ ಬಟ್ಟಲು ಬೇಳೆಯ ತೊವ್ವೆ ಇರಲೇ ಬೇಕು. ಇದರಿಂದ ಶರೀರಕ್ಕೆ ಪ್ರೊಟೀನ್‌ ಸಿಗುತ್ತದೆ. ತೊಪ್ಪಲ ಪಲ್ಯವನ್ನು ವಾರದಲ್ಲಿ ೧-೨ ಸಲ ತಿನ್ನಬೇಕು; ಆದರೆ ಅದನ್ನು ಬೇಯಿಸಿಯೇ ತಿನ್ನಬೇಕು, ಸಲಾಡ್‌ ರೂಪದಲ್ಲಿ ತಿನ್ನಬಾರದು. ಊಟದಲ್ಲಿ ಸೌತೆಕಾಯಿ, ಈರುಳ್ಳಿ, ಗಜ್ಜರಿಗಳ ೨-೩ ತುಂಡುಗಳು ಇರಬೇಕು.

ಆ. ನೆಲ್ಲಿಕಾಯಿ, ತೆಂಗಿನಕಾಯಿ, ಖರ್ಜೂರ, ಎಳ್ಳು ಇತ್ಯಾದಿಗಳು ಆಹಾರದಲ್ಲಿರಬೇಕು. ಚಳಿಗಾಲದಲ್ಲಿ ತಪ್ಪದೇ ನೆಲ್ಲಿಕಾಯಿ, ನೆಲ್ಲಿಕಾಯಿ ಮೊರಬ್ಬಾ, ಚ್ಯವನಪ್ರಾಶ ತಿನ್ನಬೇಕು.

ಇ. ರಾತ್ರಿ ಜಾಗರಣೆ ಮಾಡಬಾರದು. ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗನೆ ಏಳಬೇಕು.

ಈ. ಪ್ರತಿದಿನ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ.

ಉ. ವಾರದಲ್ಲಿ ಕನಿಷ್ಠ ೨ ಬಾರಿ ಉಗುರುಬೆಚ್ಚಗಿನ ಎಣ್ಣೆಯಿಂದ ತಲೆಗೆ ಮಾಲಿಶ ಮಾಡಬೇಕು. ‘ಯಾವ ಎಣ್ಣೆಯನ್ನು  ಹಚ್ಚಿ ಕೊಳ್ಳಬೇಕು ?, ಎನ್ನುವ ಪ್ರಶ್ನೆ ಎಲ್ಲರಿಗೂ ಎದುರಾಗುತ್ತದೆ. ನೆಲ್ಲಿಕಾಯಿಎಣ್ಣೆ, ಕೊಬ್ಬರಿಎಣ್ಣೆ ಮತ್ತು ಭೃಂಗರಾಜ ಇವುಗಳನ್ನು ಉಪಯೋಗಿಸಬಹುದು. ಎಣ್ಣೆ ಹಚ್ಚಿಕೊಳ್ಳುವಾಗ ಕೂದಲಿನ ಮೂಲಕ್ಕೆ ಯೋಗ್ಯ ಪದ್ಧತಿಯಲ್ಲಿ ತಗಲುವಂತೆ ಮಾಲಿಶ ಮಾಡಬೇಕು. ಇದರಿಂದ ರಕ್ತಪ್ರವಾಹ ಯೋಗ್ಯ ಪದ್ಧತಿಯಲ್ಲಿ ಆಗಿ, ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ. ಮಸಾಜ ಮಾಡುವಾಗ ತಲೆಯ ತ್ವಚೆಯನ್ನು ಬಲವಾಗಿ ಉಜ್ಜಬಾರದು. ಇದರಿಂದ ಕೂದಲಿನ ಬುಡ ನಾಜೂಕಾಗಿ ಕೂದಲು ಉದುರುತ್ತವೆ.

ಊ. ಕೂದಲುಗಳನ್ನು ಸೀಗೆಕಾಯಿ, ಅಂಟುವಾಳಕಾಯಿ ಮತ್ತು ತ್ರಿಫಳ ಇವುಗಳ ಕಾಡಾ(ಕಷಾಯ)ದಿಂದ ತೊಳೆಯಬೇಕು. ಕೂದಲು ಬಹಳ ಎಣ್ಣೆಯುಕ್ತವೆನಿಸುತ್ತಿದ್ದರೆ, ೧೫ ದಿನಗಳಲ್ಲಿ ಒಮ್ಮೆ ಶಾಂಪೂ ಹಚ್ಚಿಕೊಳ್ಳಬಹುದು. ಅದನ್ನು ಹಚ್ಚಿಕೊಳ್ಳುವಾಗ ನೀರಿನಲ್ಲಿ ಮಿಶ್ರಣ ಮಾಡಿ ಹಚ್ಚಿಕೊಳ್ಳಬೇಕು.

ಎ. ಕೂದಲನ್ನು ಉಗುರು ಬೆಚ್ಚಗಿನ ಅಥವಾ ತಣ್ಣೀರಿನಿಂದ ತೊಳೆಯಬೇಕು. ಬಿಸಿನೀರಿನಿಂದ ಕೂದಲು ತೊಳೆಯಬಾರದು.

ಏ. ನಮ್ಮ ಶರೀರದಲ್ಲಿ ಯಾವ ಜೀವಸತ್ವ (ವಿಟಾಮಿನ್) ಅಥವಾ ಖನಿಜಗಳ (ಮಿನರಲ್ಸ) ಕೊರತೆಯಿದೆ ಎನ್ನುವುದನ್ನು ವೈದ್ಯರಿಂದ ತಿಳಿದುಕೊಂಡು ಅದರಂತೆ ಔಷಧಿಯನ್ನು ತೆಗೆದುಕೊಳ್ಳಬೇಕು.

ಒ. ಆಯುರ್ವೇದದ ಪ್ರಕಾರ, ಕೂದಲು ಮತ್ತು ಎಲುಬುಗಳಿಗೆ ಸಮೀಪದ ಸಂಬಂಧವಿದೆ. ಎಲುಬುಗಳು ಒಳ್ಳೆಯದಿದ್ದಷ್ಟು ಕೂದಲು ಒಳ್ಳೆಯದಾಗಿರುತ್ತದೆ. ‘ಕೂದಲಿನ ತೊಂದರೆ ಯಾವ ದೋಷದಿಂದ ಆಗಿದೆ’, ಎಂದು  ಅಭ್ಯಾಸ ಮಾಡಿ, ಶಿರೋಧಾರಾ (ಹಣೆಯ ಮೇಲೆ ಎಣ್ಣೆ ಮತ್ತು ಕಾಡಾ ಇತ್ಯಾದಿ ಪದಾರ್ಥಗಳ ಧಾರೆಯನ್ನು ಬಿಡುವುದು), ಶಿರೋಬಸ್ತಿ (ತಲೆಯ ಮೇಲೆ ಸ್ವಲ್ಪ ಹೊತ್ತು ಎಣ್ಣೆಯನ್ನು ಹಿಡಿದಿಟ್ಟುಕೊಳ್ಳುವುದು), ಬಸ್ತಿ, ರಕ್ತಮೋಕ್ಷಣ (ಕಲುಷಿತ ರಕ್ತವನ್ನು ಹೊರಗೆ ತೆಗೆಯುವುದು) ಮುಂತಾದ ವಿವಿಧ ಚಿಕಿತ್ಸೆಗಳನ್ನು ರೋಗಿಯ ಪ್ರಕೃತಿಗನುಸಾರ ಮಾಡಿದರೆ ಅದರಿಂದ ಲಾಭವಾಗುತ್ತದೆ.

ಔ. ಕೂದಲಿಗಾಗಿ ಆಯುರ್ವೇದದ ಔಷಧಿಯನ್ನು ತೆಗೆದು ಕೊಳ್ಳುವಾಗ ‘ನಿಮ್ಮ ಪ್ರಕೃತಿ ಯಾವುದು ?, ‘ ನಿಮಗೆ ಇತರ ಅನಾರೋಗ್ಯವಿದೆಯೇ ?, ‘ವಯಸ್ಸು ಮತ್ತು ‘ಎಷ್ಟು ದಿನ ಔಷಧಿ ತೆಗೆದುಕೊಳ್ಳಬೇಕು?, ಎನ್ನುವ ವಿಚಾರವನ್ನು ಮಾಡಬೇಕು.

– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ (೧೨.೧೨.೨೦೨೩)