Medicines Import Tariff : ಡೊನಾಲ್ಡ ಟ್ರಂಪ್ ಅವರಿಂದ ಔಷಧಿಗಳ ಮೇಲೂ ಆಮದು ಸುಂಕ ಹೇರಿಕೆ!

ವಾಷಿಂಗ್ಟನ (ಅಮೇರಿಕಾ) – ಡೊನಾಲ್ಡ ಟ್ರಂಪ್ ಅವರು ಆಮದು ಸುಂಕದ ನೀತಿಯನ್ನು ಘೋಷಿಸಿದ ನಂತರ ಅದರಲ್ಲಿ ಔಷಧಿಗಳನ್ನು ಹೊರಗಿಡಲಾಗಿತ್ತು; ಆದರೆ ಟ್ರಂಪ್ ಈಗ ಶೀಘ್ರದಲ್ಲೇ ಔಷಧಿಗಳ ಮೇಲೂ ದೊಡ್ಡ ಪ್ರಮಾಣದ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ.

ಟ್ರಂಪ್ ಅವರು ಮಾತನಾಡಿ, ಇತರ ದೇಶಗಳು ಔಷಧಿಗಳ ಬೆಲೆಯನ್ನು ಕಡಿಮೆ ಇಡಲು ಬಹಳ ಒತ್ತಡ ಹೇರುತ್ತವೆ. ಅಲ್ಲಿ ಈ ಸಂಸ್ಥೆಗಳು ಅಗ್ಗದ ದರದಲ್ಲಿ ಔಷಧಿಗಳನ್ನು ಮಾರಾಟ ಮಾಡುತ್ತವೆ; ಆದರೆ ಅಮೇರಿಕದಲ್ಲಿ ಹಾಗಾಗುವುದಿಲ್ಲ ಎಂದು ಹೇಳಿದರು ಲಂಡನ್‌ನಲ್ಲಿ 88 ಡಾಲರ್ಸ್‌ಗಳಿಗೆ (7 ಸಾವಿರದ 628 ರೂಪಾಯಿಗಳಿಗೆ) ಸಿಗುವ ಔಷಧವು ಅಮೆರಿಕದಲ್ಲಿ 1 ಸಾವಿರ 300 ಡಾಲರ್ಸ್ಗಳಿಗೆ (1 ಲಕ್ಷ 12 ಸಾವಿರ 696 ರೂಪಾಯಿಗಳಿಗೆ) ಮಾರಾಟವಾಗುತ್ತಿದೆ. ಈಗ ಇದೆಲ್ಲವೂ ಕೊನೆಗೊಳ್ಳುತ್ತದೆ. ಒಮ್ಮೆ ಈ ಔಷಧ ಸಂಸ್ಥೆಗಳ ಮೇಲೆ ಆಮದು ಸುಂಕವನ್ನು ವಿಧಿಸಿದರೆ, ಈ ಎಲ್ಲಾ ಸಂಸ್ಥೆಗಳು ಅಮೇರಿಕಕ್ಕೆ ಮರಳುತ್ತವೆ; ಏಕೆಂದರೆ ಅಮೇರಿಕವು ಒಂದು ದೊಡ್ಡ ಮಾರುಕಟ್ಟೆಯಾಗಿದೆ. ಒಂದು ವೇಳೆ ಹಾಗಾಗದಿದ್ದರೆ, ವಿದೇಶಿ ಔಷಧ ಸಂಸ್ಥೆಗಳು ದೊಡ್ಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಭಾರತದಿಂದ ಶೇ 40 ರಷ್ಟು ಜೆನೆರಿಕ್ ಔಷಧಿಗಳು ಅಮೇರಿಕಕ್ಕೆ ರಫ್ತು ಆಗುತ್ತದೆ!

ಅಮೇರಿಕದ ಆಹಾರ ಮತ್ತು ಔಷಧ ಆಡಳಿತದ ಪ್ರಕಾರ, ಅಮೇರಿಕದಲ್ಲಿ ಬಳಸಲಾಗುವ ಎಲ್ಲಾ ಜೆನೆರಿಕ್ ಔಷಧಿಗಳಲ್ಲಿ ಅಂದಾಜು ಶೇ 40 ರಷ್ಟು ಔಷಧಿಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಭಾರತದಿಂದ ರಫ್ತಾಗುವ ಔಷಧಿಗಳಲ್ಲಿ ರೋಗನಿರೋಧಕ, ಖಿನ್ನತೆ-ನಿವಾರಕ ಮತ್ತು ಹೃದಯ ಸಂಬಂಧಿ ಔಷಧಿಗಳು ಸೇರಿವೆ. ಹೆಚ್ಚಿದ ತೆರಿಗೆಗಳಿಂದಾಗಿ ರೋಗಿಗಳು ದುಬಾರಿ ಔಷಧಿಗಳನ್ನು ಖರೀದಿಸಬೇಕಾಗುತ್ತದೆ, ಇದು ಅಮೇರಿಕದ ಜನರ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಅಮೇರಿಕದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಔಷಧಿಗಳ ಮೇಲೆ ಭಾರತವು ಶೇ 10.91 ರಷ್ಟು ಆಮದು ಸುಂಕವನ್ನು ವಿಧಿಸುತ್ತದೆ; ಆದರೆ ಅಮೇರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಔಷಧಿಗಳ ಮೇಲೆ ಯಾವುದೇ ರೀತಿಯ ಆಮದು ಸುಂಕವನ್ನು ವಿಧಿಸುವುದಿಲ್ಲ. ಈ ಹಿಂದೆ ಟ್ರಂಪ್ ಅವರು ಆಮದು ಸುಂಕವನ್ನು ಹೆಚ್ಚಿಸಿದಾಗ, ಅವರು ಔಷಧಿಗಳನ್ನು ಅದರಿಂದ ಹೊರಗಿಟ್ಟಿದ್ದರು.