ರಾಷ್ಟ್ರೀಯ ಭದ್ರತೆಯನ್ನು ಬಲಿಷ್ಠಗೊಳಿಸುವ ಅರುಣಾಚಲ ಪ್ರದೇಶದ ‘ಸೆಲಾ ಸುರಂಗ’ !

‘ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾರ್ಚ್ ೯ ರಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ‘ವಿಕಸಿತ ಭಾರತ ವಿಕಸಿತ ಈಶಾನ್ಯ ಪ್ರದೇಶ’, ಈ ಕಾರ್ಯಕ್ರಮದ ಸಮಯದಲ್ಲಿ ದೂರದೃಶ್ಯ (ಲೈವ್‌ ವಿಡಿಯೋ) ತಂತ್ರಾಂಶದ ಮೂಲಕ ‘ಸೆಲಾ’ ಸುರಂಗವನ್ನು ಲೋಕಾರ್ಪಣೆ ಮಾಡಿದರು. ಈ ಸುರಂಗವನ್ನು ‘ಗಡಿ ರಸ್ತೆ ಸಂಸ್ಥೆ’ಯು (ಬಿ.ಆರ್‌.ಒ.) ಅರುಣಾಚಲ ಪ್ರದೇಶದಲ್ಲಿನ ಪಶ್ಚಿಮ ಕಾಮೇಂಗ ಜಿಲ್ಲೆಯ ತವಾಂಗವನ್ನು ಆಸಾಮಿನ ತೇಜಪುರದೊಂದಿಗೆ ಜೋಡಿಸುವ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಈ ಲೇಖನದಲ್ಲಿ ಸುರಂಗವನ್ನು ನಿರ್ಮಿಸುವ ಉದ್ದೇಶ ಹಾಗೂ ಯುದ್ಧಕ್ಕೆ ಸಂಬಂಧಿಸಿದ ಅದರ ಮಹತ್ವವನ್ನು ನೋಡೋಣ.

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ಸೆಲಾ ಸುರಂಗದ ಮಹತ್ವ ಹಾಗೂ ಅದನ್ನು ನಿರ್ಮಿಸುವ ಉದ್ದೇಶ

ಅರುಣಾಚಲ ಪ್ರದೇಶದಲ್ಲಿ ವಿವಿಧ ನದಿಗಳ ಕಣಿವೆಗಳಿವೆ. ಈ ಪ್ರದೇಶಗಳಲ್ಲಿ ಯುದ್ಧ ಮಾಡಬೇಕಾದರೆ, ಅದನ್ನು ಬೇರೆ ಬೇರೆ ಮಾಡಬೇಕಾಗುತ್ತದೆ, ಏಕೆಂದರೆ ಒಂದು ಕಣಿವೆಯಿಂದ ಇನ್ನೊಂದು ಕಣಿವೆಗೆ ಹೋಗಲು ರಸ್ತೆಯಿಲ್ಲ. ಇದರಲ್ಲಿ ತವಾಂಗವು ಎಲ್ಲಕ್ಕಿಂತ ಮಹತ್ವದ ಸ್ಥಳವಾಗಿದೆ. ಅದು ಈ ರಾಜ್ಯದ ದೊಡ್ಡ ಪ್ರದೇಶವಾಗಿದೆ; ಅಲ್ಲಿ ಬೌದ್ಧ ಧರ್ಮದವರ ಎರಡನೇ ಕ್ರಮಾಂಕದ ದೊಡ್ಡ ಮಂದಿರವಿದೆ. ಇದರಿಂದಲೂ ಅದಕ್ಕೊಂದು ಪ್ರತ್ಯೇಕ ಮಹತ್ವವಿದೆ. ೧೯೬೨ ರಲ್ಲಿ ಭಾರತ-ಚೀನಾ ಯುದ್ಧ ನಡೆದಿತ್ತು, ಆಗ ಚೀನಾದ ಸೈನ್ಯ ತವಾಂಗದ ಮೊದಲು ಸೈಲಾ ಎಂಬ ಖಿಂಡಿಯವರೆಗೆ ಬಂದು ತಲುಪಿತ್ತು ಮತ್ತು ಅವರು ಅಲ್ಲಿಂದ ಹಿಂತಿರುಗಿ ಹೋಗಿದ್ದರು. ಪುನಃ ಯುದ್ಧವಾದರೆ ಭಾರತದ ರಕ್ಷಣಾ ಸಿದ್ಧತೆಯು ಚೆನ್ನಾಗಿರಬೇಕು. ಈ ಹಿಂದೆ ಇಲ್ಲಿನ ರಸ್ತೆಗಳನ್ನು ೫-೬ ತಿಂಗಳು ಮುಚ್ಚಲಾಗುತ್ತಿತ್ತು. ಆದ್ದರಿಂದ ಚಳಿಗಾಲದಲ್ಲಿ ೪-೫ ತಿಂಗಳು ಈ ಪ್ರದೇಶದಲ್ಲಿ ಸೈನ್ಯವನ್ನಿಡಲು ಕಷ್ಟವಾಗುತ್ತಿತ್ತು. ಅವರಿಗೆ ಆಹಾರವನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಈ ಸುರಂಗವನ್ನು ನಿರ್ಮಿಸಲಾಗಿದೆ.

೨. ಸೆಲಾ ಸುರಂಗದ ವೈಶಿಷ್ಟ್ಯಗಳು

ಸೆಲಾ ಸುರಂಗ ೧೩ ಸಾವಿರ ಅಡಿ ಎತ್ತರದಲ್ಲಿದೆ. ಅದನ್ನು ನಿರ್ಮಿಸಲು ಸರಕಾರಕ್ಕೆ ೮೨೫ ಕೋಟಿ ರೂಪಾಯಿ ಖರ್ಚಾಗಿದೆ. ಈ ಸುರಂಗವನ್ನು ‘ಗಡಿ ರಸ್ತೆ ಸಂಸ್ಥೆ’ಯು ಹೊಸತಾದ ‘ಆಸ್ಟ್ರಿಯನ್‌ ಟನೆಲಿಂಗ್’ ಪದ್ಧತಿಯನ್ನು ಉಪಯೋಗಿಸಿ ನಿರ್ಮಿಸಿದೆ. ಅದರಲ್ಲಿ ಸರ್ವೋಚ್ಚ ಮಟ್ಟದ ಭದ್ರತೆಯ ವೈಶಿಷ್ಟ್ಯಗಳಿವೆ. ಇದು ೩ ಸಾಲುಗಳ ಸುರಂಗವಾಗಿದೆ. ಇದರಲ್ಲಿ ಹೋಗಲು ಒಂದು ಮಾರ್ಗ, ಬರಲು ಇನ್ನೊಂದು ಮಾರ್ಗ ಮತ್ತು ಆಪತ್ಕಾಲ ಸಂಭವಿಸಿದರೆ ಮೂರನೇ ಮಾರ್ಗವಿದೆ. ಈ ರಸ್ತೆಯನ್ನು ಕೆಳಗೆ ನಿರ್ಮಿಸಿರುವುದರಿಂದ ವಾಹನಗಳಿಗೆ ಮೇಲೆ ಹತ್ತುವ ಅವಶ್ಯಕತೆಯಿಲ್ಲ. ಕಠಿಣ ಭೂಪ್ರದೇಶ ಹಾಗೂ ಪ್ರತಿಕೂಲ ಹವಾಮಾನಗಳಂತಹ ಸವಾಲುಗಳನ್ನು ಎದುರಿಸಿ ಈ ಸುರಂಗವನ್ನು ೫ ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಈ ಸುರಂಗ ಬಲಿಪಾರಾ-ಚರಿದುಆರ-ತವಾಂಗ ರಸ್ತೆಯಲ್ಲಿನ ಸೆಲಾ ಖಿಂಡಿಯನ್ನು ದಾಟಿ ತವಾಂಗಕ್ಕೆ ಎಲ್ಲ ಋತುಗಳಲ್ಲಿ ಸಂಪರ್ಕವನ್ನು (ಕನೆಕ್ಟಿವಿಟಿ) ನೀಡುವುದು. ಈ ಯೋಜನೆಯು ಈ ಪ್ರದೇಶದಲ್ಲಿನ ಕೇವಲ ಶೀಘ್ರ ಹಾಗೂ ಹೆಚ್ಚು ಕಾರ್ಯಕ್ಷಮತೆಯ ಮಾರ್ಗ ಆಗಿರುವುದು ಮಾತ್ರವಲ್ಲ, ದೇಶಕ್ಕೆ ಯುದ್ಧದ ದೃಷ್ಟಿಯಲ್ಲಿಯೂ ಅತ್ಯಂತ ಮಹತ್ವದ್ದಾಗಿದೆ.

೩. ಸೆಲಾ ಸುರಂಗದಿಂದ ದೇಶಕ್ಕಾಗುವ ಲಾಭ !

ಅ. ಇದರಿಂದ ಗಡಿಪ್ರದೇಶದಲ್ಲಿ ಸೈನಿಕರ ಚಲವಲನ ನಿರಂತರವಾಗಿ ಇರುವುದು. ರಸ್ತೆ ಚೆನ್ನಾಗಿದ್ದರೆ ನಾವು ಗಡಿಯ ರಕ್ಷಣೆಯನ್ನು ಮಾಡಬಹುದು.

ಆ. ಈ ರಸ್ತೆ ೧೨ ತಿಂಗಳು ತೆರೆದಿರುವುದರಿಂದ ಯುದ್ಧ ಸಂಭವಿಸಿದರೆ ಚೀನಾವನ್ನು ಉತ್ತಮವಾಗಿ  ಎದುರಿಸಬಹುದು, ಅದೇ ರೀತಿ ಚೀನಾದ ನುಸುಳುವಿಕೆಯನ್ನೂ ತಡೆಯಬಹುದು.

ಇ. ಕಳೆದ ವರ್ಷ ತವಾಂಗದ ಸಮೀಪ ಯಾಂಗತ್ಸೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಸಂಘರ್ಷವಾಗಿತ್ತು. ಆಗ ಭಾರತದ ಸೈನಿಕರು ಅವರನ್ನು ಚೆನ್ನಾಗಿ ಥಳಿಸಿದ್ದರು.

ಈ. ಸೆಲಾ ಸುರಂಗದಿಂದಾಗಿ ಭಾರತದ ರಕ್ಷಣೆಯ ಸಿದ್ಧತೆ ಹೆಚ್ಚಾಗುವುದು ಹಾಗೂ ಗಡಿಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ವಿಕಾಸಕ್ಕೆ ಚಾಲನೆ ಸಿಗುವುದು.

ಉ. ಅರುಣಾಚಲ ಪ್ರದೇಶಕ್ಕೆ ಎಲ್ಲಕ್ಕಿಂತ ಹೆಚ್ಚು ಪ್ರವಾಸಿಗರು ತವಾಂಗದಿಂದ ಬರುತ್ತಾರೆ. ಅಲ್ಲಿ ಜನಸಂಖ್ಯೆಯೂ ಹೆಚ್ಚಿದೆ. ಅಲ್ಲಿ ಹಿಮ ಬೀಳುವುದರಿಂದ ಅವರಿಗೆ ತೊಂದರೆಯಾಗುತ್ತಿತ್ತು. ಇದರಿಂದ ಈಗ ಅಲ್ಲಿನ ಜನರ ಜೀವನ ಸುಖಕರವಾಗಬಹುದು.

ಊ. ಈಗ ಭಾರತೀಯ ಪ್ರವಾಸಿಗರು ಕೂಡ ಗಡಿಪ್ರದೇಶಕ್ಕೆ ಹೋಗಬಹುದು. ಇದರಿಂದ ಸ್ಥಳೀಯ ಅರ್ಥವ್ಯವಸ್ಥೆಗೆ ಲಾಭವಾಗಬಹುದು. ಈ ಹಿಂದೆ ಭಾರತ ಗಡಿಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿರಲಿಲ್ಲ; ಏಕೆಂದರೆ ಚೀನಾ ಅವುಗಳನ್ನು ದುರುಪಯೋಗಿಸಿಕೊಳ್ಳಬಹುದು ಎಂಬ ಭಯವಿತ್ತು. ಈಗ ಭಾರತ ಆಕ್ರಮಕವಾಗಿದೆ. ಆದ್ದರಿಂದ ಭಾರತ ಗಡಿಪ್ರದೇಶವನ್ನು ಇನ್ನೂ ಚೆನ್ನಾಗಿ ರಕ್ಷಿಸಬಹುದು.’

– ಬ್ರಿಗೇಡಿಯರ್‌ ಹೇಮಂತ ಮಹಾಜನ (ನಿವೃತ್ತ), ಪುಣೆ.